ನನ್ನ ಅಪ್ಪ …ಒಂದು ನೆನಪು
(ಭಾಗ–ಎರಡು)
ನಾಗರತ್ನ ಎಂ ಜಿ
ಮೂರು ವರ್ಷಗಳು ಯಾವುದೇ ಏರಿಳಿತವಿಲ್ಲದೆ ಸರಿಯಿತು. ನನಗೆ ಅಂಚೆ ಕಚೇರಿಯಲ್ಲಿ ಕೆಲಸ ಸಿಕ್ಕಿ ನನ್ನ ಕಾಲೇಜು ಜೀವನ ಮೊಟಕಾಯಿತು.
ಇದ್ದಕ್ಕಿದ್ದಂತೆ ತನ್ನ ಸ್ನೇಹಿತೆಯ ಕಡೆಯ ಹುಡುಗ ನನ್ನನ್ನು ನೋಡಲು ಬರುತ್ತಿದ್ದಾರೆ ಆಫೀಸಿನಿಂದ ಬೇಗ ಬಾ ಎಂದು ಅಕ್ಕ ಆಫೀಸಿಗೆ ಫೋನ್ ಮಾಡಿ ಹೇಳಿದಾಗ ಏನೂ ಮಾತಾಡದೆ ಸರಿ ಅಂದೆ. ಮನೆಗೆ ಬಂದ ಹತ್ತೇ ನಿಮಿಷಕ್ಕೆ ಅವರೆಲ್ಲ ಬಂದಾಗ ಬೆಳಿಗ್ಗೆ ಉಟ್ಟ ಸೀರೆಯಲ್ಲೇ ಅವರಿಗೆ ಕಾಫಿ ತಿಂಡಿ ಕೊಟ್ಟೆ. ಮೈಸೂರಿನ ಕಾಲೇಜಿನ ಅಧ್ಯಾಪಕರಾಗಿದ್ದ, ಡಾಕ್ಟರೇಟ್ ಪಡೆದ ಗೋಲ್ಡ್ ಮೆಡಲ್ ವಿಜೇತ ಗಂಡು ಎಂದು ತಿಳಿದಮೇಲೆ ಅಪ್ಪನ ಸಂಭ್ರಮ ಹೇಳತೀರದು. ತೆಳ್ಳಗೆ ಬೆಳ್ಳಗೆ ಲಕ್ಷಣವಾಗಿದ್ದ ನನ್ನನ್ನು ಅವರು ಒಪ್ಪುವುದು ತಡವಾಗಲಿಲ್ಲ.
ಮುಂದಿನ ಒಂದು ವಾರದಲ್ಲಿ ನಾವೆಲ್ಲರೂ ಮದುವೆ ಮಾತು ಕಥೆಗೆ ಮೈಸೂರಿಗೆ ಬರುತ್ತೇವೆಂದು ಅಪ್ಪ ಹೇಳಿ ಕಳಿಸಿದರು.
ಆಗೆಲ್ಲ ಟಿ ವಿ ಯಲ್ಲಿ ಬರೀ ದೂರದರ್ಶನ ಬರುತ್ತಿದ್ದ ಕಾಲ. ಅಂದು ನಾನು ಹುಟ್ಟಿದ ದಿನ. ಅದೇ ಸಂಜೆ ಕನ್ನಡ ದೂರದರ್ಶನದಲ್ಲಿ ಪುಟ್ಟಣ್ಣ ಕಣಗಾಲ್ ಅವರ “ಕಾಲೇಜು ರಂಗ” ಪ್ರಸಾರವಾಗುತ್ತಿತ್ತು. ಯಾವುದೇ ಚಿತ್ರ ನೋಡಬೇಕಾದರೂ ಮಗುವಿನಂತೆ ಎಂಜಾಯ್ ಮಾಡುತ್ತಿದ್ದ ಅಪ್ಪ..ಕಾಲೆeಜುಗಳಲ್ಲಿ ನಡೆಯುವ ರಾಜಕಾರಣವನ್ನು ವ್ಯಂಗ್ಯವಾದ ಹಾಸ್ಯದ ಮೂಲಕ ಬಹಳ ಪ್ರಭಾವಶಾಲಿಯಾಗಿ ಚಿತ್ರಿಸಿದ್ದ ಆ ಚಿತ್ರವನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದರು.
ನನ್ನ ಪ್ರಕಾರ ಅಪ್ಪನ ಹಾಗೆ ಚಿಕ್ಕ ಚಿಕ್ಕ ವಿಷ್ಯಕ್ಕೂ ಸಂಭ್ರಮಿಸುವ, ಮಗುವಿನ ಮನಸ್ಸಿರುವ, ಚಿನ್ನದ ಹೃದಯದ , ಯಾರಿಗೂ ಕೇಡು ಬಯಸದ, ಯಾರನ್ನು ದ್ವೇಷಿಸದ ಅಜಾತ ಶತ್ರು ಅಪ್ಪನಂಥವರು ಪ್ರಪಂಚದಲ್ಲಿ ಇನ್ನೊಬ್ಬರು ಇರಲು ಸಾಧ್ಯವೇ ಇಲ್ಲ.
ಬಹುಶಃ ಭಗವಂತನಿಗೂ ಅ0ಥವರನ್ನು ಹೆಚ್ಚು ದಿನ ಅಗಲಿರುವುದು ಅಸಾಧ್ಯವೇನೋ.
ಹಾಗೆ ಅಂದು ಊಟ ಮಾಡಿ ಮಲಗುವುದು ತಡವಾಯಿತು. ಮನೆಯಲ್ಲಿ ಇದ್ದದ್ದು ಒಂದೇ ಕೋಣೆ. ನಾನು ಅಪ್ಪ ಅಮ್ಮ ತಂಗಿ ಒಟ್ಟಿಗೆ ಮಲಗಿ ಅಭ್ಯಾಸ. 5 ಸ್ಟಾರ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಅಂದು ನೈಟ್ ಡ್ಯೂಟಿಗೆ ಹೋಗಿದ್ದ. ಹನ್ನೊಂದು ಘಂಟೆಯವರೆಗೂ ಚಿತ್ರದ ಬಗ್ಗೆ ನಂತರ ಹನ್ನೆರಡವರೆಗೂ ಆಫೀಸಿನ ವಿಷಯ ಮಾತಾಡುತ್ತಿದ್ದ ನನ್ನನ್ನು, ಅಪ್ಪನನ್ನು ಸಾಕು ಮಲಗ್ತೀರಾ ಎಂದು ಅಮ್ಮ ಗದರಿದಾಗ ಮೆಲ್ಲಗೆ ನಿದ್ದೆಗೆ ಜಾರಿದ್ದೆ.
ಇದ್ದಕ್ಕಿದ್ದಂತೆ ಎಚ್ಚರವಾದಾಗ ಯಾರೋ ನರಳುವ ಸದ್ದು ಕೇಳಿದಂತೆನಿಸಿತು. ಕತ್ತಲೆಗೆ ಕಣ್ಣು ಹೊಂದಲು 2 ಕ್ಷಣ ಬೇಕಾಯ್ತು. ಪಕ್ಕ ತಿರುಗಿ ನೋಡಿದಾಗ ತಂಗಿಯ ಪಕ್ಕ ಮಲಗಿದ್ದ ಅಪ್ಪ ಕೈ ಕಾಲು ಆಡಿಸುತ್ತಾ ಬಾಯಿಂದ ಏನೋ ಸದ್ದು ಮಾಡುತ್ತಿದ್ದರು. ತಕ್ಷಣ ಎದ್ದು ಅಮ್ಮನನ್ನು ಎಬ್ಬಿಸಿದೆ. ಅಣ್ಣ ಏನಾಯ್ತು ಎಂದು ದೀಪ ಹಾಕಿದೆ. ಏನೋ ಹೇಳಲು ಪ್ರಯತ್ನಿಸಿದ ಅಪ್ಪ ಹೇಳದೆ ಒದ್ದಾಡುವ ಹಾಗನ್ನಿಸಿತು. ಸ್ವಲ್ಪ ಗಮನಿಸಿದಾಗ ಅವರ ತುಟಿ ಎಡಗಡೆಗೆ ತಿರುಗಿತ್ತು. ಬಲಗೈಯಿಂದ ಎಡಗೈ ತೋರಿಸುತ್ತ ಇಲ್ಲ ಎನ್ನುವಂತೆ ಸನ್ನೆ ಮಾಡಿದರು. ದೇಹದ ಎಡ ಭಾಗ ಸ್ವಾಧೀನ ಕಳೆದುಕೊಂಡಂತೆ ಇತ್ತು. ಏನು ಮಾಡಲು ತೋಚದೆ ಎಲ್ಲರಿಗೂ ಅಳು ಬಂತು. ಮನೆಯಲ್ಲಿ ಅಣ್ಣ ಇರಲಿಲ್ಲ. ಅಳುತ್ತಲೇ ಓಡಿ ಹೋಗಿ ಪಕ್ಕದ ಮನೆಯವರನ್ನು ಕರೆದೆ. ಅವರು ಬಂದಾಗ ಆಸ್ಪತ್ರೆಗೆ ಹೋಗಲು ಸಹಾಯ ಮಾಡಿ ಎಂದೆ. ಅವರು ಏನು ಆಗಿಲ್ಲ ಹೆದರಬೇಡಿ ಚಳಿಗೆ ಸೆಟೆದಿರುವ ಹಾಗಿದೆ. ಸ್ವಲ್ಪ ಕಾಫಿ ಮಾಡಿ ಅಂದರು. 5 ನಿಮಿಷದಲ್ಲಿ ಕಾಫಿ ಮಾಡಿ ಕುಡಿಸಲು ಪ್ರಯತ್ನಿಸಿದೆ. ಆಗಲಿಲ್ಲ.
ಅಪ್ಪ ಏನೋ ಹೇಳಲು ಪ್ರಯತ್ನಿಸುತ್ತಿದ್ದರು. ಅವರ ಬಲಗೈಗೆ ಒಂದು ಪೆನ್ನು ಕೊಟ್ಟು ಕಾಗದ ಹಿಡಿದೆ ನಾನು. ತಡವರಿಸುತ್ತ emergency ಎಂದು ಬರೆದರು. ಅದನ್ನು ನೋಡಿದ ನೆರೆ ಮನೆಯಾತ ನಕ್ಕುಬಿಟ್ಟರು. Emergency ಏನಿಲ್ಲ ಮಲ್ಕೊಳಿ ಬೆಳಿಗ್ಗೆ ಹೊತ್ತಿಗೆ ಸರಿ ಹೋಗುತ್ತೆ ಎನ್ನುತ್ತಾ ಹೊರಟೇಬಿಟ್ಟರು.
ಸಿನೆಮಾದಲ್ಲಿ ದುರಂತವಾದ climax ತೋರಿಸಲು ಇದ್ದ ಬದ್ದ ಕಷ್ಟಗಳೆಲ್ಲ ಒಟ್ಟಿಗೆ ಸೃಷ್ಟಿಸುವಂತೆ ಇತ್ತು ಪರಿಸ್ಥಿತಿ. ಬೆಳಗಿನ ಝಾವದ 3 ಘಂಟೆ, ಕತ್ತಲು,
ಮನೆಯಲ್ಲಿ ಇದ್ದದ್ದು ಮೂರು ಜನ ಹೆಣ್ಣು ಮಕ್ಕಳು.. ನೆರೆಯವರಿಂದ ಸಹಾಯ ಸಿಗುವ ಆಸೆ ಇಲ್ಲ. ಸಾಲದ್ದಕ್ಕೆ ಹೊರಗಡೆ ಧೋ ಎಂದು ಸುರಿಯುತ್ತಿರುವ ಮಳೆ. ಈಗಿನ ಕಾಲದ ಗೆeಟೆಡ್ ಕಮ್ಯುನಿಟಿ ಮಾದರಿಯ ಪೊಲೀಸ್ ಕಾಲೊನಿಯಲ್ಲಿ ನಮ್ಮ ವಾಸ. ಗೇಟು ದಾಟಿ ಮುಖ್ಯ ರಸ್ತೆ ತಲುಪಲು ಕನಿಷ್ಠ ಅರ್ಧ ಕಿಲೋ ಮೀಟರ್ ನಡೆದೇ ಹೋಗಬೇಕು. ಮಳೆಯಲ್ಲಿ ಆಟೋ ಸಿಗುವ ಭರವಸೆ ಇಲ್ಲ. ಇದ್ದರೂ ಆ ಕತ್ತಲೆಯಲ್ಲಿ, ಮಳೆಯಲ್ಲಿ ನನ್ನನ್ನು ಕಳಿಸುವ ಧೈರ್ಯ ಅಮ್ಮನಿಗೆ ಇರಲಿಲ್ಲ.
ಎರಡು ಯುಗ ಕಳೆದಂತೆ ಅಳುತ್ತ ಎರಡು ಘಂಟೆ ಕಳೆಯುವಷ್ಟರಲ್ಲಿ ಅಣ್ಣ ಬಂದ. ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಮೊಪೆಡ್ ತಿರುಗಿಸಿಕೊಂಡು ಹೋಗಿ ಆಟೋ ತಂದ. ಅಣ್ಣ, ಅಮ್ಮ ಅಪ್ಪನನ್ನು ಆಟೋದಲ್ಲಿ ಮಾರ್ತಾಸ್ ಆಸ್ಪತ್ರೆಗೆ ಕರೆದೊಯ್ದರು. ಪೂರ್ತಿ ಬೆಳಕಾದ ಮೇಲೆ ತಂಗಿಯನ್ನು ಕರೆದುಕೊಂಡು ಬಾ ಎಂದು ಅಳುತ್ತಲೇ ತಾಕೀತು ಮಾಡಿದರು ಅಮ್ಮ. ಸುಮಾರು ಆರೂವರೆ ಘಂಟೆಗೆ ನಾನು ಆಟೋ ತಂದು ತಂಗಿಯೊಂದಿಗೆ ಆಸ್ಪತ್ರೆಗೆ ಹೊರಟೆ. ಅಕ್ಕನಿಗೂ ಆಗಲೇ ಸುದ್ದಿ ಮುಟ್ಟಿತ್ತು. ಏಳು ಘಂಟೆಗೆ ಆಸ್ಪತ್ರೆ ತಲುಪಿದಾಗ ವಾರ್ಡಿನ ಬಾಗಿಲಲ್ಲೇ ಅಕ್ಕನ ಎದೆಗೊರಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅಮ್ಮ, ಅಳುತ್ತಲೇ ಅಮ್ಮನನ್ನು ಸಮಾಧಾನ ಪಡಿಸುತ್ತಿದ್ದ ಅಕ್ಕ ನನ್ನನ್ನು ನೋಡಿ ಎಲ್ಲ ಮುಗಿಯಿತು ಎನ್ನುವಂತೆ ಕೈಯಾಡಿಸಿದಳು. ಓಡಿ ಹೋಗಿ ಅವರನ್ನು ತಬ್ಬಿ ನಾವಿಬ್ಬರು ಜೋರಾಗಿ ಅಳಲಾರಂಭಿಸಿದೆವು.
ನನಗಿಂತ ಎರಡೇ ವರ್ಷ ದೊಡ್ಡವನಾದ ಅಣ್ಣ ಅಪ್ಪನ ಕಾಲ ಮೇಲೆ ತಲೆ ಇಟ್ಟು ಬಿಕ್ಕಳಿಸುತ್ತಿದ್ದ.
ಅಕ್ಕನೊಂದಿಗೆ ಬಂದಿದ್ದ ಅಜ್ಜಿ “ನಂಗೆ ಬೆಂಕಿ ಇಡದೇ ನಂಗಿಂತ ಮುಂಚೆ ಹೋಗ್ಬಿಟ್ಯಲ್ಲೋ” ಎಂದು ಆಸ್ಪತ್ರೆ ಎನ್ನುವುದನ್ನು ಮರೆತು ಕರುಳು ಕಿತ್ತು ಬರುವಂತೆ ಅಳುತ್ತಿದ್ದರು.
ಎಷ್ಟೋ ಬಾರಿ ಕೋಪ ಬಂದಾಗ ಅಜ್ಜಿ “ನಾನು ಹೊeದ್ಮೇಲೆ ನಿಂಗೆ ಬುದ್ಧಿ ಬರುತ್ತೆ” ಎಂದಾಗಲೆಲ್ಲ ತಮಾಷೆಗೆಂಬಂತೆ ಅಪ್ಪ” ಅಯ್ಯೋ ನೀವು ಮೊದ್ಲು ಹೋಗ್ಬೇಡಿ ಅಲ್ಲಿ ವೈತರಿಣಿ ನದಿ ಇರುತ್ತಂತೆ ನಿಮ್ಗೆ ದಾಟಕ್ಕೆ ಕಣ್ ಕಾಣಲ್ಲ ನಾನು ಹೋಗಿ ನೋಡಿಕೊಂಡು ಬರ್ತೀನಿ” ಎಂದು ನಗಿಸುತ್ತಿದ್ದರು. ಯಾವ ಘಳಿಗೆಯಲ್ಲಿ ಹೇಳಿದರೋ ..ಆ ಮಾತನ್ನು ನಿಜ ಮಾಡುವಂತೆ 80ರ ಇಳಿ ವಯಸ್ಸಿನ ಅಜ್ಜಿಗೆ ತಮ್ಮ ಆಯಸ್ಸನ್ನು ಧಾರೆ ಎರೆದು ಹೊರಟೇ ಬಿಟ್ಟರು.
12 ಘಂಟೆಯವರೆಗೂ ನಗು ನಗುತ್ತಾ ಮಾತಾಡುತ್ತಿದ್ದ ಅಪ್ಪ ಬೆಳಗಿನ ಝಾವ ಇಲ್ಲವೆಂದರೆ ನಂಬಲಾಗುತ್ತಿಲ್ಲ. ಇಲ್ಲ ಇದು ಸುಳ್ಳು ಎಂದು ಕೂಗುವಂತೆ ಅನ್ನಿಸುತ್ತಿತ್ತು.
ಬ್ರೈನ್ ಹೇಮರೇಜ್ ಆಗಿದೆ brought dead ಎಂದು ವೈದ್ಯರು ಘೋಷಿಸಿದರು. ಹುಟ್ಟಿದಾಗಿನಿಂದ ಹತ್ತಿರದಲ್ಲಿ ಯಾರ ಸಾವನ್ನು ನೋಡಿರದ, ಸಾವಿನ ಬಗ್ಗೆ ಕಲ್ಪನೆಯೇ ಇಲ್ಲದ ನಾವು ಮೊದಲು ನೋಡಿದ್ದು ಅಪ್ಪನ ಸಾವು, ಕಳೆದುಕೊಂಡದ್ದು ಅಮೂಲ್ಯ ಜೀವ.
ಎಂದೂ ಸಾವಿನ ಬಗ್ಗೆ ಮಾತೇ ಆಡದಿದ್ದ ಅಪ್ಪ, ಜೀವನವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅಪ್ಪ,
ಮುಂದಿನ ವಾರದಲ್ಲಿ ಮೈಸೂರಿನಲ್ಲಿ ಮಗಳ ಮದುವೆ ನಿಶ್ಚಯ ಮಾಡುವ ಕನಸು ಕಾಣುತ್ತಿದ್ದ ಅಪ್ಪ , 45ರ ಹರೆಯದ ಅಮ್ಮನನ್ನು ವೈಧವ್ಯಕ್ಕೆ ತಳ್ಳಿ ಕಾಣದ ಊರಿಗೆ ಒಂಟಿ ಪಯಣ ಬೆಳೆಸಿದ್ದರು.
37 ವರ್ಷಗಳಾದರೂ ಪ್ರತಿದಿನ ಕನಸಿನಲ್ಲಿ ಬರುವ ಅಪ್ಪ ಇಂದಿಗೂ ನನ್ನೊಳಗೆ ಜೀವಂತ. 37 ವರ್ಷಗಳಾದರೂ ಇಂದಿಗೂ ಕಾಡುವ ಪಾಪಪ್ರಜ್ಞೆ.. ಆ ದಿನ ನೆರೆಯವರ ಬೇಜವಾಬ್ದಾರಿ ಸಲಹೆ ಕೇಳದೆ ಕಷ್ಟ ಪಟ್ಟಾದರೂ ಸರಿ 2 ಘಂಟೆ ಮುಂಚೆ ಅಪ್ಪನನ್ನು ಆಸ್ಪತ್ರೆ ಸೇರಿಸಿದ್ದಿದ್ದರೆ…ಅಣ್ಣನಿಗಾಗಿ ಕಾಯದೆ ಅಮ್ಮ ಸ್ವಲ್ಪ ಧೈರ್ಯ ಮಾಡಿ ನನ್ನನ್ನು ಕಳಿಸಿದ್ದರೆ…???
.*******************
ಅಪ್ಪ ಇಲ್ಲ ಎನ್ನುವುದು ಎಂಥಾ ನೋವು!
ಕಣ್ಣೆದುರೇ ಏನೂ ಮಾಡದ ಅಸಹಾಯಕ ಸ್ಥಿತಿ ಯಾರಿಗೂ ಬರಬಾರದು
ಅಕ್ಕಪಕ್ಕದ ಮನೆಯವರು ಸ್ವಲ್ಪ ಸಹಾನುಭೂತಿಯಿಂದ ವರ್ತಿಸಿದ್ದರೆ ಜೀವ ಉಳಿಯಬಹುದಿತ್ತೇನೋ
ದುರಂತವೆಂದರೆ ಇದೇ ಇರಬೇಕು
ಛೆ!