ದಾರಾವಾಹಿ
ಆವರ್ತನ
ಅದ್ಯಾಯ-30
ಸುಮಿತ್ರಮ್ಮ, ಗುರೂಜಿಯ ಜ್ಯೋತಿಷ್ಯಾಲಯದಿಂದ ಮನೆಗೆ ಹಿಂದಿರುಗಿದವರು ಅಂದು ಸಂಜೆ ರಾಜೇಶನ ಮೂಲಕ ವಠಾರದವರನ್ನು ಮತ್ತೆ ತಮ್ಮ ಮನೆಯಂಗಳದಲ್ಲಿ ಸೇರಿಸಿದರು ಹಾಗೂ ಗುರೂಜಿ ತಿಳಿಸಿದ ವಿಷಯವನ್ನು ಅವರಷ್ಟೇ ಗಂಭೀರವಾಗಿ ನಾರಾಯಣಣ್ಣ ಮತ್ತು ಸುಂದರಯ್ಯನ ಸಮ್ಮುಖದಲ್ಲಿ ವಿವರಿಸಿದರು. ಆದ್ದರಿಂದ ಒಟ್ಟು ಮೂವತ್ತೊಂದು ಮನೆಗಳವರು ತಲಾ ಏಳೇಳು ಸಾವಿರ ರೂಪಾಯಿಗಳನ್ನು ಪಾಲು ನೀಡಬೇಕು ಮತ್ತು ಅದರಿಂದ ಉಳಿವ ಹಣವನ್ನು ಕೊನೆಯಲ್ಲಿ ಹಿಂದಿರುಗಿಸಲಾಗುವುದು ಎಂದು ಸುಂದರಯ್ಯನ ಸಲಹೆಯಂತೆ ನಿರ್ಧರಿಸಲಾಯಿತು. ಪ್ರತೀ ಮನೆಗಳಿಂದ ಹಣವನ್ನು ಹೊಂದಿಸುವ ಕಾರ್ಯವನ್ನು ರಾಜೇಶನಿಗೇ ಒಪ್ಪಿಸಲಾಯಿತು. ವಿಶೇಷವೆಂದರೆ ಅಂದಿನ ಸಭೆಯಲ್ಲಿ ಡಾ. ನರಹರಿಯೂ ಹಾಜರಿದ್ದ. ಆದರೆ ಅವನು ಮೊದಲ ಸಭೆಗೆ ಬರದಿದ್ದುದರಿಂದ ತಮ್ಮ ವಠಾರದಲ್ಲಿ ಸುತ್ತಾಡುತ್ತಿದ್ದ ನಾಗರಹಾವಿನ ನಿವಾರಣೆಗೂ ಆ ಮೂಲಕ ತಮಗೆಲ್ಲರಿಗೂ ವಕ್ಕರಿಸಿರುವ ವೈಯಕ್ತಿಕ ಕಷ್ಟಕಾರ್ಪಣ್ಯಗಳ ಹೋಗಲಾಡಿಸುವಿಕೆಗೂ ನಾಡಿದ್ದು ನಡೆಯಲಿರುವ ಆಶ್ಲೇಷಬಲಿಯ ಮುಖ್ಯ ಉದ್ದೇಶವೆಂದು ಅವನಿಗೆ ಗೊತ್ತಿರಲಿಲ್ಲ. ಆ ವಿಷಯದ ಕುರಿತು ಇಂದಿನ ಸಭೆಯಲ್ಲೂ ಯಾರೂ ಚಕಾರವೆತ್ತಲಿಲ್ಲ. ಬದಲಿಗೆ ನಾಡಿದ್ದಿನ ಕಾರ್ಯಕ್ರಮಕ್ಕೆ ತಮ್ಮ ವಠಾರವನ್ನು ಸಿಂಗರಿಸುವುದು ಹೇಗೆ, ಶಾಮಿಯಾನ ಎಲ್ಲಿಂದ ಎಲ್ಲಿಯ ತನಕ ಹಾಕಿಸಬೇಕು, ಊಟದ ವ್ಯವಸ್ಥೆಯನ್ನು ಎಲ್ಲಿ ಮಾಡಬೇಕು ಮತ್ತು ಯಾರು, ಯಾರು ಗುರೂಜಿ ಸೂಚಿಸುವ ಕೆಲಸ ಕಾರ್ಯಗಳನ್ನು ವಹಿಸಿಕೊಳ್ಳಬೇಕು ಹಾಗೂ ಪ್ರಸಾದ ಹಂಚುವ ಕಾಯಕ ಯಾರು ಯಾರ ಪಾಲಿಗೆ? ಎಂಬಂಥ ವಿಷಯಗಳ ಬಗ್ಗೆಯೇ ಚರ್ಚೆ, ಸಂವಾದಗಳನ್ನು ನಡೆಸಿದರು. ಹೀಗಾಗಿ ನರಹರಿಯು ತಮ್ಮ ಬಡಾವಣೆಯ ಶ್ರೇಯಸ್ಸಿಗಾಗಿಯೇ ಹೋಮ, ಹವನಗಳಂಥ ಪವಿತ್ರ ಪೂಜಾವಿಧಿಗಳನ್ನು ನಡೆಸಲಾಗುತ್ತದೆ ಎಂದು ಭಾವಿಸಿ ತಾನೂ ಪಾಲು ಕೊಡಲು ಸಂತೋಷದಿಂದ ಒಪ್ಪಿದ. ಅಲ್ಲದೇ ಅವನಿಗೆ ತನ್ನ ವಠಾರದವರ ನೈಜ ಉದ್ದೇಶ ತಿಳಿಯುತ್ತಿದ್ದರೂ ಅವರ ನಂಬಿಕೆ ಆಚರಣೆಗಳ ಕುರಿತು ಅವನೆಂದೂ ಅಗೌರವ ತೋರುವವನಾಗಿರಲಿಲ್ಲ. ಅಂಥ ವಿಷಯಗಳ ಕುರಿತು ಯಾರೊಡನೆಯೂ ಚರ್ಚಿಸುವ, ತರ್ಕಿಸುವಂಥ ತಲೆನೋವನ್ನೂ ಅವನೆಂದೂ ಮೇಲೆಳೆದುಕೊಂಡವನಲ್ಲ. ಅವನ ಸ್ವಭಾವ ಹೇಗೆಂದರೆ, ಲೌಕಿಕದೊಳಗಿದ್ದೂ ಅಲೌಕಿಕವಾಗಿ ಬಾಳಬೇಕು ಎಂಬುವುದಾಗಿತ್ತು.
ಇತ್ತ ವಠಾರದ ಮೂವತ್ತು ಮನೆಗಳವರು ನಕಾರವೆತ್ತದೆ ತಂತಮ್ಮ ಪಾಲು ನೀಡಲು ಒಪ್ಪಿದರಾದರೂ ಏಳು ಸಾವಿರವೆಂದ ಕೂಡಲೇ ರಾಧಾ ಗೋಪಾಲರಿಬ್ಬರೂ ತಬ್ಬಿಬ್ಬಾಗಿಬಿಟ್ಟರು! ಅಯ್ಯಯ್ಯೋ ದೇವರೇ, ಅಷ್ಟೊಂದು ಹಣವನ್ನು ಒಂದು ವಾರದೊಳಗೆ ಹ್ಯಾಗಪ್ಪಾ ಹೊಂದಿಸುವುದೂ…? ಎಂಬ ಚಿಂತೆಯಿಂದ ಒದ್ದಾಡುತ್ತ ವಿಧಿಯಿಲ್ಲದೆ ಒಪ್ಪಿಗೆ ಸೂಚಿಸಿ ಹಿಂದಿರುಗಿದರು. ಗೋಪಾಲ ತಲೆಚಿಟ್ಟು ಹಿಡಿದವನಂತೆ ತನ್ನ ಮನೆಯಂಗಳಕ್ಕೆ ಹೆಜ್ಜೆಯಿಟ್ಟ. ಅಷ್ಟರಲ್ಲಿ ಕೋಳಿಯ ಹಿಂಡು ಮತ್ತು ನಾಯಿ ಮೋತಿಯು ತನ್ನ ಮರಿಗಗಳೊಂದಿಗೆ ಆನಂದದಿಂದ ಕಿರುಚುತ್ತ ಕುಂಯ್ಯಿಗುಟ್ಟುತ್ತ ಯಜಮಾನರನ್ನು ಎದುರುಗೊಳ್ಳಲು ಓಡೋಡಿ ಬಂದವು. ಅವುಗಳನ್ನು ಕಂಡ ಗೋಪಾಲನಿಗೆ ತಟ್ಟನೆ ಕೆಟ್ಟ ಕೋಪ ಬಂದುಬಿಟ್ಟಿತು. ‘ಥತ್! ಈ ದರಿದ್ರ ಪ್ರಾಣಿಗಳಿಂದಲೇ ಇಷ್ಟೆಲ್ಲ ತೊಂದರೆಗಳು ಆಗುತ್ತಿರುವುದು…!’ ಎಂದು ಸಿಡುಕಿದವನು ತನ್ನ ಸಮೀಪ ಬಂದು ಮುದ್ದುಗರೆಯಲಣಿಯಾಗಿದ್ದ ಮೋತಿಗೆ ಬೀಸಿ ಒಂದೇಟು ಒದ್ದುಬಿಟ್ಟ. ಆ ಮೂಕಪ್ರಾಣಿಯು ತನ್ನ ಕಿಬ್ಬೊಟ್ಟೆಗೆ ಬಲವಾಗಿ ಬಿದ್ದ ಒದೆತದ ನೋವಿನಿಂದ ವಿಕಾರವಾಗಿ ಅರಚುತ್ತ, ‘ತಾನೇನು ತಪ್ಪು ಮಾಡಿದೆ…?’ ಎಂಬಂತೆ ಆಘಾತದಿಂದ ಅವನನ್ನು ದಿಟ್ಟಿಸುತ್ತ ಓಡಿಹೋಯಿತು. ತಮ್ಮಮ್ಮನಿಗೆ ಬಿದ್ದ ಒದೆತಕ್ಕೆ ಮರಿಗಳೂ ಹೆದರಿ ದಿಕ್ಕುಗೆಟ್ಟು ಓಡಿ ಹೋಗಿ ಅವಿತುಕೊಂಡವು. ಬಳಿಕ ಕೋಳಿಗಳತ್ತಲೂ ಗೋಪಾಲ ಕೈಕಾಲು ಬೀಸುತ್ತ ಹೋದವನು, ‘ಹಾಳಾದವೆಲ್ಲಿಯಾದರೂ…! ಇನ್ನು ಮುಂದೆ ನನ್ನ ಕಣ್ಣಿಗೆ ಬಿದ್ದರೆ ಕೊಂದು ಹಾಕುತ್ತೇನೆ! ಹ್ಞೂಂ, ತೊಲಗಿ ಇಲ್ಲಿಂದ…!’ ಎಂದು ಅವುಗಳ ಬೆನ್ನಟ್ಟಿದ. ಆದರೆ ಮೋತಿಗೆ ಬಿದ್ದ ಏಟಿನಿಂದಲೇ ತಾವೂ ಜಾಗ್ರತವಾಗಿದ್ದ ಅವುಗಳು ಆಕಾಶದೆತ್ತರಕ್ಕೆ ಕೊರಳೊಡ್ಡಿ ಚೀರುತ್ತ ಓಡಿದವು. ಗಂಡನ ಕೋಪವನ್ನು ಕಂಡ ರಾಧಾ ಅವಕ್ಕಾದಳು. ‘ಅರೆರೇ, ನಿಮಗೇನಾಯ್ತು ಮಾರಾಯ್ರೇ…! ಆ ಪ್ರಾಣಿಗಳಿಗೇಕೆ ಹೊಡೆಯುತ್ತಿದ್ದೀರೀ ಪಾಪ…?’ ಎಂದು ಬೈದಳು.
ಅಷ್ಟಕ್ಕೆ ಗೋಪಾಲನ ಸಿಟ್ಟು ರಾಧಾಳ ಮೇಲೂ ತಿರುಗಿತು. ‘ನೀನೇನೂ ಮಾತಾಡಬೇಡ ನಾಯೀ…! ಎಲ್ಲಾ ನಿನ್ನಿಂದಾನೇ ಆಗಿದ್ದು! ಆವತ್ತು ಕೋಳಿ ಸಾಕುವ, ದನ ಸಾಕುವ, ಬೊಜ್ಜ ಮಾಡುವ ಅಂತೆಲ್ಲ ಮಾತಾಡಿದೆಯಲ್ಲ… ಅವುಗಳ ಮೇಲೆ ಅಷ್ಟೊಂದು ಆಸೆಯಿದ್ದವಳು ಸ್ವಲ್ಪ ಹದ್ದುಬಸ್ತಿನಲ್ಲಿಟ್ಟು ಸಾಕಬೇಕಿತ್ತು? ನೀನು ಅಷ್ಟು ಮಾಡಿದ್ದಿದ್ದರೆ ಇವತ್ತು ಕಣ್ಣಲ್ಲಿ ರಕ್ತವಿಲ್ಲದ ಆ ನೆರೆಕರೆಯವರ ಆಟಕ್ಕೆ ನಾವು ಬಲಿಯಾಗಬೇಕಿತ್ತಾ? ಎಲ್ಲಿಂದ ತರುವುದು ಅಷ್ಟೊಂದು ದುಡ್ಡನ್ನು…? ನಿನ್ನ ಅಪ್ಪ ಕೊಡುತ್ತಾನಾ…? ಕೊಡುವುದಾದರೆ ಹೋಗಿ ತಾ…! ಇಲ್ಲದಿದ್ದರೆ ಸುಮ್ಮನೆ ಬಾಯ್ಮುಚ್ಚಿಕೊಂಡು ಸಾಯಿ ಅತ್ಲಾಗೇ!’ ಎಂದು ಹತಾಶೆಯಿಂದ ಕಂಪಿಸುತ್ತ ಗುಡುಗಿದ. ಗಂಡನ ಸ್ಥಿತಿ ಕಂಡು ರಾಧಾಳಿಗೆ ಕರುಳು ಹಿಂಡಿತು. ಆದರೆ ಅವನು ತನ್ನ ಹೆತ್ತವರ ಹೆಸರೆತ್ತಿದ್ದು ತೀವ್ರ ನೋವನ್ನೂ ತರಿಸಿತು.
‘ನೋಡಿ, ನೀವು ನನಗೇನಾದರೂ ಬೈಯ್ಯಿರಿ, ಹೊಡೆಯಿರಿ. ಆದರೆ ಅಪ್ಪ ಅಮ್ಮನ ಹೆಸರನ್ನು ಯಾವತ್ತೂ ಎತ್ತಬೇಡಿ. ನಮ್ಮ ತಾಪತ್ರಯಗಳಿಗೆ ಅವರು ಯಾಕೆ ಹೊಣೆಯಾಗುತ್ತಾರೆ ಮಾರಾಯ್ರೇ?’ ಎಂದು ಗದರಿಸಿದವಳಿಗೆ ಅಳು ಉಕ್ಕಿ ಬಂತು.
‘ನಾನೇನು ನನ್ನ ಲಾಭಕ್ಕೆ ಆ ಪ್ರಾಣಿಗಳನ್ನು ಸಾಕಿದೆನಾ? ನೀವು ನಮಗಾಗಿ ಎಷ್ಟೊಂದು ಕಷ್ಟಪಡುತ್ತೀರಿ. ಅದಕ್ಕೆ ನನ್ನಿಂದಲೂ ಸ್ವಲ್ಪ ಸಹಾಯವಾಗಲಿ ಅಂತ ಯೋಚಿಸಿದೆ. ಹೀಗಿರುವಾಗ ಇಂಥ ಪರಿಸ್ಥಿತಿಯಲ್ಲಿ ತಾಳ್ಮೆಗೆಟ್ಟರೇನು ಬಂತು…?’ ಎಂದು ಅಳುತ್ತ ಹೇಳಿ ಧುರಧುರನೇ ಒಳಕ್ಕೆ ನಡೆದಳು.
ಹೆಂಡತಿಯ ಅಳುವಿಗೆ ಗೋಪಾಲ ತುಸು ತಣ್ಣಗಾದ. ಸ್ವಲ್ಪಹೊತ್ತಿನಲ್ಲಿ ಕೋಪ ತಗ್ಗಿದ ಕೂಡಲೇ ಅವನಿಗೆ ತನ್ನ ತಪ್ಪಿನರಿವಾಗಿ ಒಳಗೆ ನಡೆದು ಮೂಲೆ ಸೇರಿ ಬೇಸರದಿಂದ ಕುಳಿತವನು, ಪಾಪ ಇವಳೂ ಸಂಸಾರ ತೂಗಿಸಲು ಎಷ್ಟೊಂದು ಕಷ್ಟಪಡುತ್ತಾಳೆ. ಅಂಥದರಲ್ಲಿ ತಾನು ತಾಳ್ಮೆಗೆಟ್ಟು ನೋಯಿಸಬಾರದಿತ್ತು! ಎಂದು ಯೋಚಿಸಿ ನೊಂದುಕೊಂಡ. ಅಷ್ಟರಲ್ಲಿ ಅವನ ಮನಸ್ಸು ಪಕ್ಕನೆ ಮೋತಿಯತ್ತ ಹೊರಳಿತು. ಕಸದ ತೊಟ್ಟಿಯ ಬಳಿ ಬಿದ್ದಿದ್ದ ಆ ಮುದ್ದು ಮರಿಯನ್ನು ಎಷ್ಟೊಂದು ಕನಿಕರದಿಂದ ಎತ್ತಿ ತಂದು ಆಸೆಯಿಂದ ಸಾಕಿ ಬೆಳೆಸಿದ್ದೇನೆ. ಅದೂ ನಮ್ಮನ್ನೆಲ್ಲ ಎಷ್ಟೊಂದು ಹಚ್ಚಿಕೊಂಡಿದೆ. ಮನೆಯ ಕೋಳಿ, ಬೆಕ್ಕು ಮತ್ತು ದನಗಳಿಂದ ಹಿಡಿದು, ಸರಿಯಾದ ಪಾಗಾರವಿಲ್ಲದ ನಮ್ಮ ವಠಾರಕ್ಕೆ ಭದ್ರ ಕಾವಲಿನಂತಿರುವ ಪ್ರಾಣಿಯದು. ಅಂಥ ಮೂಕಜೀವಿಗೆ ತುಳಿದುಬಿಟ್ಟೆನಲ್ಲಾ! ಛೇ! ಒಮ್ಮೊಮ್ಮೆ ತಾನು ಎಂಥ ಕ್ರೂರಿಯಾಗಿ ಬಿಡುತ್ತೇನೆ! ಹಾಳಾದ ಈ ಬಡತನ ಯಾವಾಗ ತೊಲಗುತ್ತದೋ? ಎಲ್ಲರಂತೆ ನಾವೂ ಒಂದಿಷ್ಟು ನೆಮ್ಮದಿಯಿಂದ ಬದುಕುವ ಕಾಲ ಯಾವಾಗ ಬರುತ್ತದೋ ದೇವರೇ…!’ ಎಂದು ಮರುಗಿದವನು ಎದ್ದು ಅಡುಗೆ ಕೋಣೆಗೆ ಹೋದ. ರಾಧಾ ಅಲ್ಲಿ ಮೌನವಾಗಿ ಕಣ್ಣೀರಿಡುತ್ತ ಅಡುಗೆ ಮಾಡುತ್ತಿದ್ದಳು. ಮೆಲ್ಲನೇ ಅವಳ ಹಿಂದಿನಿಂದ ನಡು ಬಳಸಿ, ‘ತಪ್ಪಾಯಿತು ಮಾರಾಯ್ತೀ… ಕೋಪದ ಬರದಲ್ಲಿ ಏನೇನೋ ಅಂದುಬಿಟ್ಟೆ. ಮನಸ್ಸಿಗೆ ಹಚ್ಚಿಕೊಳ್ಳಬೇಡ…!’ ಎನ್ನುತ್ತ ಅಪ್ಪಿಕೊಂಡ. ಗಂಡನ ಪರಿಸ್ಥಿತಿಯ ಅರಿವಿದ್ದ ರಾಧಾಳೂ ಅವನ ಅಪ್ಪುಗೆಯಲ್ಲಿ ನೀರಾಗುತ್ತ, ‘ಇಲ್ಲ ಮಾರಾಯ್ರೇ ನನಗೇನೂ ಬೇಸರವಾಗಿಲ್ಲ. ದುಡ್ಡಿನ ಚಿಂತೆ ನನ್ನನ್ನೂ ಕಾಡುತ್ತಿದೆ. ಆದರೆ ಅದಕ್ಕೆ ತಾಳ್ಮೆ ಕೆಡುವುದರ ಬದಲು ಏನಾದರೊಂದು ದಾರಿ ಹುಡುಕುವ. ದೇವರ ಕೆಲಸವಲ್ಲವಾ, ಎಲ್ಲಾದರೊಂದು ಕಡೆ ಒದಗಿ ಬಂದೇ ಬರುತ್ತದೆ…!’ ಎಂದು ತನಗೇ ಇಲ್ಲದ ವಿಶ್ವಾಸದಿಂದ ಗಂಡನನ್ನು ಸಂತೈಸಿದಳು. ಆಗ ಗೋಪಾಲ ಇನ್ನಷ್ಟು ಸಮಾಧಾನವಾದ. ಆದ್ದರಿಂದ ಆಕ್ಷಣವೇ ಅವನಿಗೆ ದುಡ್ಡು ಹೊಂದಿಸುವ ದಾರಿಯೊಂದು ಹೊಳೆಯಿತು. ‘ಹೌದು ಮಾರಾಯ್ತೀ ಒಂದು ದಾರಿಯಿದೆ. ಪ್ರಯತ್ನಿಸುತ್ತೇನೆ. ನೀನು ಹೇಳಿದ ಹಾಗೆ ನಾಗನ ಕೆಲಸವಲ್ಲವಾ? ಬೇಕಿದ್ದರೆ ಅವನೇ ಅದರ ವ್ಯವಸ್ಥೆ ಮಾಡಿಸುತ್ತಾನೆ!’ ಎಂದು ಗೆಲುವಿನಿಂದ ಹೇಳಿ ಹೊರಗೆ ಹೋಗಿ ಮೋತಿಯನ್ನು ಹುಡುಕತೊಡಗಿದ.
ಮೋತಿಗೆ ಗೋಪಾಲನ ಈ ದಿನದ ವರ್ತನೆ ವಿಪರೀತ ಭಯವನ್ನು ಹುಟ್ಟಿಸಿತ್ತು. ಅದು ಬೇಲಿಯ ಗಿಡಗಳ ನೆರಳಲ್ಲಿ ಮರಿಗಳೊಂದಿಗೆ ಕುಳಿತು ಮನೆಯ ಹೊಸ್ತಿಲನ್ನೇ ಭೀತಿಯಿಂದ ದಿಟ್ಟಿಸುತ್ತಿತ್ತು. ಅಷ್ಟರಲ್ಲಿ ಗೋಪಾಲ ಹೊರಗೆ ಬಂದುದನ್ನು ಕಂಡು ಮತ್ತೊಮ್ಮೆ ಅದರ ಜೀವ ಕಂಪಿಸಿ, ತಟ್ಟನೆ ಎದ್ದು ನಿಂತಿತು. ಯಜಮಾನ ತನ್ನತ್ತ ಬರುವುದನ್ನು ಕಂಡು ಭಯದಿಂದ ಹಿಡಿತ ತಪ್ಪಿದ ಬಾಲವನ್ನು ಹೇಗೇಗೋ ಅಲ್ಲಾಡಿಸುತ್ತ ಚಡಪಡಿಸಿತು. ತಾಯಿಯ ಸ್ಥಿತಿಯನ್ನು ಕಂಡ ಮರಿಗಳೂ ಹೆದರಿ ಮುದುಡಿ ಕುಳಿತವು. ಗೋಪಾಲ ಅವುಗಳ ಸಮೀಪಕ್ಕೆ ಬಂದ. ಮೋತಿಯು ಅವನ ಮುಖದಲ್ಲಿದ್ದ ಪಶ್ಚಾತ್ತಾಪ ಮತ್ತು ಪ್ರೀತಿಯನ್ನು ತಟ್ಟನೆ ಗ್ರಹಿಸಿತು. ಆನಂದಾತಿರೇಕದಿಂದ ಅವನ ಮೇಲೆ ನೆಗೆಯುತ್ತ ತಾನೂ ದುಪ್ಪಟ್ಟು ಪ್ರೀತಿ ತೋರಿಸಿತು. ಆ ಮೂಕ ಪ್ರಾಣಿಯ ಸ್ನೇಹವನ್ನು ಕಂಡ ಗೋಪಾಲನಿಗೆ ತನ್ನ ಮೇಲೆ ಅಸಹ್ಯವೆನಿಸಿತು. ದುಃಖದಿಂದ ಮೋತಿಯೆದುರು ಕುಸಿದು ಅದರ ಕೊರಳು ತಬ್ಬಿ ಮುದ್ದಿಸಿದ. ಅದನ್ನು ಕಂಡು ಮರಿಗಳ ಖುಷಿಗೂ ಪಾರವಿರಲಿಲ್ಲ. ಅವು ಕೂಡಲೇ ತಮ್ಮ ಮೋಟು ಬಾಲಗಳನ್ನು ಕುಣಿಸುತ್ತ ಅವನ ಮೇಲೆ ಹಾರಿ ನೆಗೆದು ಆಡತೊಡಗಿದವು. ಗೋಪಾಲ ಅವುಗಳನ್ನೂ ಮುದ್ದಿಸಿದ. ಬಳಿಕ ಒಳಗೆ ಹೋಗಿ ಒಂದಷ್ಟು ಬ್ರೆಡ್ಡು ಚೂರುಗಳನ್ನು ತಂದು ಅವುಗಳಿಗೆ ತಿನ್ನಿಸಿದ ನಂತರವೇ ಅವನ ಮನಸ್ಸು ಹತೋಟಿಗೆ ಬಂದುದು.
ಇಷ್ಟಾದ ಮೇಲೆ ಮತ್ತೆ ಅವನಿಗೆ ದುಡ್ಡಿನ ಚಿಂತೆ ಶುರುವಾಯಿತು. ‘ರಾಧಾ ಸ್ವಲ್ಪ ಹೊರಗೆ ಹೋಗಿ ಬರುತ್ತೇನೆ ಮಾರಾಯ್ತಿ…’ ಎಂದು ಹೆಂಡತಿಗೆ ತಿಳಿಸಿದ.
‘ಹ್ಞೂಂ ಆಯ್ತು ಮಾರಾಯ್ರೇ…’ ಎಂದ ರಾಧಾಳಿಗೇನೋ ಹೊಳೆದು ಗಡಿಬಿಡಿಯಿಂದ ಹೊರಗ್ಹೋಡಿ ಬಂದವಳು, ‘ಎಲ್ಲಿಗೆ ಹೊರಟ್ರೀ, ಊಟದ ಹೊತ್ತಿಗೆ…?’ ಎಂದಳು ಕಾಳಜಿಯಿಂದ.
‘ಇಲ್ಲೇ ಸ್ವಲ್ಪ ಗರಡಿಗುಡ್ಡೆಯತ್ತ ಹೋಗಿ ಅರ್ಧ ಗಂಟೆಯಲ್ಲಿ ಬಂದುಬಿಡುತ್ತೇನೆ ಮಾರಾಯ್ತೀ. ವಿಷಯ ಆಮೇಲೆ ಹೇಳುತ್ತೇನೆ’ ಎಂದವನು ಸೈಕಲ್ ಹತ್ತಿ ಹೊರಟುಬಿಟ್ಟ.
ಅವನೀಗ ಹೋದುದು ಗರಡಿಗುಡ್ಡೆಯ ಹಳೆಯ ಪರಿಚಯದ ವನಜಕ್ಕನ ಮನೆಗೆ. ಕೆಲವು ವರ್ಷಗಳ ಹಿಂದೊಮ್ಮೆ ಅವಳ ನೆರೆಮನೆಯ ಗಣೇಶ ಕಾಮತರ ಮನೆಯ ಬಾವಿಯ ಕೆಲಸಕ್ಕೆ ಹೋಗಿದ್ದವನಿಗೆ ವನಜಕ್ಕನ ಪರಿಚಯವಾಗಿತ್ತು. ಅವಳ ಅಂಗಳ ಮತ್ತು ವಠಾರದ ತುಂಬೆಲ್ಲ ಓಡಾಡಿಕೊಂಡಿದ್ದ ದಷ್ಟಪುಷ್ಟವಾದ ಊರ ಕೋಳಿಗಳನ್ನು ಕಂಡು ತಾನೇ ಅವಳನ್ನು ಪರಿಚಯಿಸಿಕೊಂಡಿದ್ದ. ಮುಂದೆ ಆ ಕೋಳಿಗಳ ಮಾರಾಟದಲ್ಲಿ ಗಿರಾಕಿಗಳನ್ನು ಹುಡುಕಿ ಕೊಡುವುದರಲ್ಲೂ ಅವಳಿಗೆ ಸಹಾಯ ಮಾಡುತ್ತಿದ್ದ. ಆದ್ದರಿಂದ ಅವಳಿಗೆ ಇವನ ಮೇಲೆ ಒಡಹುಟ್ಟಿದನೆಂಬಷ್ಟು ವಿಶ್ವಾಸ ಬೆಳೆದಿತ್ತು. ಅತ್ತ ಹೋದಾಗಲೆಲ್ಲ ಅವಳ ಮನೆಗೂ ಹೋಗಿ ಕುಳಿತು ಹರಟುತ್ತ, ಅವಳು ಕೊಡುತ್ತಿದ್ದ ಚಹಾ ತಿಂಡಿ ಮುಗಿಸಿ ಹಿಂದಿರುಗುತ್ತಿದ್ದ. ಹಾಗಾಗಿ ಇಂದು ಅವಳಿಂದಲೇ ಸಹಾಯ ಕೇಳಲು ಹೊರಟಿದ್ದ. ಆ ಹೊತ್ತು ವನಜಕ್ಕ ಅಂಗಳದಲ್ಲಿ ಕಾಲು ಚಾಚಿ ಕುಳಿತುಕೊಂಡು ಮಡಲಿನ ಒಲಿಗಳಿಂದ ಹಿಡುಸೂಡಿ ಕಡ್ಡಿ ಸುಲಿಯುತ್ತಿದ್ದವಳು, ‘ಓಹೋ ಗೋಪಾಲ ಬಾ ಬಾ ಮಾರಾಯಾ ಕುಳಿತುಕೋ…ಹೇಗಿದ್ದೀಯಾ…?’ ಎನ್ನುತ್ತ ಪ್ರೀತಿ ತೋರಿಸಿದಳು.
‘ಕುಳಿತುಕೊಳ್ಳಲೆಲ್ಲ ಸಮಯವಿಲ್ಲ ವನಜಕ್ಕಾ. ನನಗೆ ನಿಮ್ಮಿಂದೊಂದು ಉಪಕಾರವಾಗಬೇಕು…!’ ಎಂದು ಗೋಪಾಲ ತನ್ನ ಮತ್ತವಳ ನಡುವೆ ಸಲುಗೆಯಿದ್ದರೂ ಅಳುಕುತ್ತ ಹೇಳಿದ. ‘ಉಪಕಾರವಾ…? ನನ್ನಿಂದೆಂಥ ಉಪಕಾರವಾದೀತು ಮಾರಾಯಾ ನಿಂಗೆ…!’ ಎಂದು ಅವಳೂ ಅವನನ್ನು ನಗುತ್ತ ನೋಡಿದವಳು, ‘ಆಯ್ತು ನೋಡುವ. ಏನು ಮಾಡಬೇಕು ಹೇಳು…?’ ಎಂದು ಕಡ್ಡಿ ಸುಲಿಯುತ್ತಲೇ ಅಂದಳು.
ಆದ್ದರಿಂದ ಗೋಪಾಲ ತನ್ನ ವಠಾರದಲ್ಲಿ ಸುತ್ತುತ್ತಿದ್ದ ನಾಗರಹಾವಿನ ಕಥೆಯನ್ನೂ ಮತ್ತು ನಾಗದೋಷ ಪರಿಹಾರಕ್ಕಾಗಿ ನಾಡಿದ್ದು ನಡೆಯಲಿರುವ ಆಶ್ಲೇಷಾಬಲಿಯ ವಿಚಾರವನ್ನೂ ಅವಳಿಗೆ ಚುಟುಕಾಗಿ ವಿವರಿಸಿದವನು, ‘ವನಜಕ್ಕಾ ನಿಮ್ಮಲ್ಲಿಗೆ ತಮಿಳು ಬಡ್ಡಿ ವ್ಯಾಪಾರಿಗಳು ಬರುತ್ತಾರಲ್ಲ ಅವರಿಂದ ನನಗೊಂದು ಏಳು ಸಾವಿರ ರೂಪಾಯಿ ನಿಮ್ಮ ಜಾಮೀನಿನ ಮೇಲೆ ಸಾಲ ಕೊಡಿಸಲಿಕ್ಕಾಗಬಹುದಾ…?’ ಎಂದು ಕೇಳಿದ. ಆದರೆ ನಾಗನ ಹೆಸರು ಕಿವಿಗೆ ಬೀಳುತ್ತಲೇ ವನಜಕ್ಕನಿಗೂ ಉಪಕಾರ ಮಾಡಲು ಮನಸ್ಸಾಯಿತು. ‘ಓಹೋ ಹಾಗಾ ಮಾರಾಯ…? ಆಯ್ತು, ಆಯ್ತು. ನಾಡಿದ್ದು ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ಬಂದುಬಿಡು. ಮಾತಾಡಿ ಕೊಡಿಸುತ್ತೇನೆ. ಆದರೆ ಒಂದು ಮಾತು ನೋಡು, ಏಳು ಸಾವಿರವೆಂದರೆ ದೊಡ್ಡ ಮೊತ್ತ! ಅಷ್ಟಕ್ಕೆ ವಾರಕ್ಕೆ ಕಟ್ಟಲು ಸುಮಾರು ಏಳು ನೂರು ರೂಪಾಯಿಯಾದರೂ ಬರಬಹುದು. ಅದನ್ನು ಒಂದು ವಾರವೂ ತಪ್ಪದೇ ಕಟ್ಟಲು ಸಾಧ್ಯವಿದೆಯಾ ನಿನಗೆ…?’ ಎಂದಳು ಅನುಮಾನದಿಂದ.
‘ಹೋವ್! ಖಂಡಿತಾ ಆಗುತ್ತದೆ ವನಜಕ್ಕಾ. ನಾನು ವಾರದಲ್ಲಿ ಒಂದೂವರೆ ದಿನ ದುಡಿದ ಹಣವನ್ನು ಅದಕ್ಕೆಂದು ತೆಗಿದಿಟ್ಟರಾಯ್ತು!’ ಎಂದ ಗೋಪಾಲನೂ ಹುರುಪಿನಿಂದ.
‘ಅಷ್ಟು ವಿಶ್ವಾಸವಿದ್ದರೆ ಸರಿ ಮಾರಾಯಾ. ಯಾಕೆಂದರೆ ಒಂದು ಕಂತು ತಪ್ಪಿದರೆ ಆ ದರ್ವೇಶಿಗಳು ಮತ್ತೆ ಬಡ್ಡಿಗೆ ಚಕ್ರಬಡ್ಡಿ ಸೇರಿಸುತ್ತಾರೆ! ಅದೂ ಅಲ್ಲದೇ ನಾನವರೊಡನೆ ಬಹಳ ವರ್ಷಗಳಿಂದ ವ್ಯವಹಾರ ಮಾಡುತ್ತ ಬಂದವಳು ಮತ್ತು ಈವರೆಗೂ ವಿಶ್ವಾಸ ಕಳೆದುಕೊಂಡವಳಲ್ಲ. ನೀನೂ ಹಾಗೆಯೇ ನಡೆದುಕೊಳ್ಳಬೇಕು ನೋಡು!’ ಎಂದು ಖಡಕ್ ತಾಕೀತು ಮಾಡಿದಳು.
‘ಖಂಡಿತಾ ವನಜಕ್ಕಾ, ನನ್ನ ಹೆಂಡತಿ ಮಕ್ಕಳು ಉಪವಾಸ ಬಿದ್ದರೂ ನಿಮ್ಮ ಸಾಲವನ್ನು ಮರೆಯುವುದಿಲ್ಲ!’ ಎಂದು ಗೋಪಾಲನೂ ಅವಳಿಗೆ ಭರವಸೆ ನೀಡಿ ಕೃತಜ್ಞತೆಯನ್ನು ಸಲ್ಲಿಸಿ ಹಿಂದಿರುಗಿದ.
ಮನೆಗೆ ಬಂದವನು ರಾಧಾಳಿಗೆ ವಿಷಯ ತಿಳಿಸಿದ. ಅವಳೂ ನೆಮ್ಮದಿಪಟ್ಟಳು. ಆದರೆ ವಾರಕ್ಕೆ ಏಳು ನೂರು ತಪ್ಪದೆ ಕಟ್ಟಬೇಕೆಂದಾಗ ಮಾತ್ರ ಒಳಗೊಳಗೇ ಕುಸಿದಳು. ಆದರೂ ಏನಾದರಾಗಲೀ. ಜೀವನ ಪರ್ಯಂತ ನಮ್ಮದು ಸಾಲದ ಬದುಕೇ ಅಲ್ಲವಾ. ಹಾಗಾಗಿ ಚಳಿಯೇನು ಮಳೆಯೇನು? ಎಷ್ಟು ಸಾಧ್ಯವೋ ಅಷ್ಟು ಏಗುತ್ತ ಹೋಗುವುದು. ಆಗದಿದ್ದರೆ ದೇವರಿದ್ದಾನೆ! ಎಂದು ಸಮಾಧಾನಿಸಿಕೊಂಡು ಗಂಡನೆದುರು ಗೆಲುವಿನಿಂದ ನಗುತ್ತ ಅವನಿಗೆ ಊಟ ಬಡಿಸಲು ಒಳಗೆ ಹೋದಳು. ಆ ಭಾನುವಾರವೂ ಬಂತು. ಆವತ್ತು ಬೆಳಿಗ್ಗೆ ಗೋಪಾಲ ಅರ್ಧ ಗಂಟೆ ಮುಂಚೆಯೇ ವನಜಕ್ಕನ ಮನೆಗೆ ಹೋಗಿ ಬಡ್ಡಿ ವ್ಯಾಪಾರಿಗಳನ್ನು ಕಾಯುತ್ತ ಕುಳಿತ. ಅವರೂ ಬಂದರು. ವನಜಕ್ಕನ ಮಾತಿನ ಮೇಲೆ ಅವನಿಗೆ ದುಡ್ಡು ಕೊಡಲೂ ಒಪ್ಪಿದರು. ಮೂರೂವರೆ ತಿಂಗಳ ಅವಧಿಗೆ ಸಾಲ ತೀರಿಸಬೇಕೆಂದೂ ನೂರು ರೂಪಾಯಿಗೆ ಮೂವತ್ತು ರೂಪಾಯಿ ಬಡ್ಡಿಯೆಂದೂ ಮತ್ತು ಆರಂಭದಲ್ಲಿ ನಾವು ಹಣ ನೀಡುವಾಗ ಸಾವಿರಕ್ಕೆ ಹತ್ತು ರೂಪಾಯಿಗಳಂತೆ ತಮ್ಮ ಸಾರಿಗೆ ವೆಚ್ಚಕ್ಕೆ ಮುರಿದು ಕೊಳ್ಳುತ್ತೇವೆಂದೂ ಹೇಳಿ ಆರು ಸಾವಿರದ ಒಂಬೈನೂರ ಮೂವತ್ತು ರೂಪಾಯಿಗಳನ್ನು ವನಜಕ್ಕನ ಕೈಗಿತ್ತು ಹೊರಟು ಹೋದರು. ಆಗ ಗೋಪಾಲನಿಗೆ ಅಲ್ಲೂ ಪೀಕಲಾಟಕ್ಕಿಟ್ಟುಕೊಂಡಿತು. ಏಕೆಂದರೆ ಅವರು ನೀಡಿದ ಹಣಕ್ಕೆ ಮತ್ತೆ ಎಪ್ಪತ್ತು ರೂಪಾಯಿಗಳನ್ನು ಅವನು ಹೊಂದಿಸಬೇಕಿತ್ತು. ಆದರೂ ತಲೆಕೆಡಿಸಿಕೊಳ್ಳದೆ, ವನಜಕ್ಕನನ್ನು ಧನ್ಯತೆಯಿಂದ ದಿಟ್ಟಿಸಿ ಮನೆಗೆ ಬಂದ.
ಮನೆಗೆ ಬಂದವನು ರಾಧಾಳಿಂದ ಎಪ್ಪತ್ತು ರೂಪಾಯಿ ಪಡೆದುಕೊಂಡು ಏಳು ಸಾವಿರ ಭರ್ತಿ ಮಾಡಿದ. ಗಂಡ ಹೆಂಡತಿ ಕೂಡಲೇ ಹೋಗಿ ಸುಮಿತ್ರಮ್ಮನಿಗೆ ಹಣವನ್ನು ನೀಡಿದರು. ಆದರೆ ಅವರು, ಅರೆರೇ…! ಈ ಮಂಡೇವು ಇಷ್ಟು ಬೇಗ ಇಷ್ಟೊಂದು ಹಣವನ್ನು ಎಲ್ಲಿಂದ ಹೊಂದಿಸಿದರಪ್ಪಾ…? ಎಂದು ಯೋಚಿಸಿ ಸೋಜಿಗಪಟ್ಟರು. ಆದರೆ ಮರುಕ್ಷಣ, ಸಿಕ್ಕಿ ಸಿಕ್ಕಿದ ನಾಯಿ, ಕೋಳಿಗಳನ್ನೆಲ್ಲಾ ತಂದು ಸಾಕುತ್ತ ಸಾಕಷ್ಟು ದುಡ್ಡು ಮಾಡಿಟ್ಟಿರಬೇಕು ಹಡಬೆಗಳು. ಇಲ್ಲದಿದ್ದರೆ ಹೀಗೆ ಬ್ಯಾಂಕಿನಲ್ಲಿ ತೆಗೆದುಕೊಟ್ಟಂತೆ ಕೊಡಲು ಸಾಧ್ಯವಿತ್ತಾ ಇವರಿಂದ…? ಎಂದುಕೊಳ್ಳುತ್ತ ತಮ್ಮೊಳಗಿನ ಅಸಹನೆಯನ್ನು ಹತ್ತಿಕ್ಕಿಕೊಂಡರು.
‘ಆಯ್ತು ಮಾರಾಯಾ ನಿಮ್ಮ ಪಾಲಿನದ್ದು ಸಂದಾಯವಾಯಿತು. ಇನ್ನು ಚಿಂತೆಯಿಲ್ಲ. ಆದರೆ ನಾಡಿದ್ದು ತುಂಬಾ ಕೆಲಸವಿದೆ. ಮನೆಯಂಗಳ ಮತ್ತು ಬಡಾವಣೆಯನ್ನಿಡೀ ಸ್ವಚ್ಛ ಮಾಡಬೇಕು. ಆ ದಿನ ಇಬ್ಬರೂ ಬೇಗ ಬಂದುಬಿಡಿ. ನಮ್ಮದೇ ಕೆಲಸವಲ್ಲವಾ, ಎಲ್ಲರೂ ಸೇರಿ ನಿಭಾಯಿಸಬೇಕು!’ ಎಂದು ಸುಮಿತ್ರಮ್ಮ ತಮ್ಮ ಮನೆಯಾಳುಗಳಿಗೆ ಆಜ್ಞಾಪಿಸಿದಂತೆಯೇ ಒರಟಾಗಿ ಹೇಳಿದರು. ಅದಕ್ಕೆ ಗೋಪಾಲ ದಂಪತಿಯೂ ‘ಆಯ್ತು ಸುಮಿತ್ರಮ್ಮಾ, ಬರುತ್ತೇವೆ…!’ ಎಂದು ನುಡಿದು ಮೌನವಾಗಿ ಹಿಂದಿರುಗಿದರು.
(ಮುಂದುವರೆಯುವುದು)
*************************
ಗುರುರಾಜ್ ಸನಿಲ್
ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ