“ರಾಕ್ಷಸನ ಹೃದಯ ಕದ್ದ ಮಕ್ಕಳು”.

ಪುಸ್ತಕ ಸಂಗಾತಿ

ರಾಕ್ಷಸನ ಹೃದಯ ಕದ್ದ ಮಕ್ಕಳು”

“ರಾಕ್ಷಸನ ಹೃದಯ ಕದ್ದ ಮಕ್ಕಳು”.
ಲೇಖಕರು:ಮತ್ತೂರು ಸುಬ್ಬಣ್ಣ
ಪ್ರಕಟಷೆ:೨೦೨೧
ಪ್ರಕಾಶನ:ಯುಗಪುರುಷ ಪ್ರಕಟಣಾಲಯ ಕಿನ್ನಿಗೋಳಿ.
ಬೆಲೆ: 125 ರೂ. ಪುಟಗಳು:147

ಮತ್ತೂರು ಸುಬ್ಬಣ್ಣ ಕನ್ನಡದ ಮಕ್ಕಳಿಗೆ ಪರಿಚಿತ ಹೆಸರು. ಅವರು ಕಥೆಗಳ ಕಟ್ಟುಕಟ್ಟುಗಳನ್ನೇ ಸೃಷ್ಟಿಸುತ್ತಾರೆ. ಕಥೆಗಳನ್ನು ಮಕ್ಕಳ ಮುಂದೆ ಹೇಳುತ್ತ ರಂಜಿಸುತ್ತಾರೆ. ಉತ್ತಮ ಶಿಕ್ಷಕರಾಗಿರುವ ಸುಬ್ಬಣ್ಣ ರೇಡಿಯೊ ನಾಟಕ ಕಲಾವಿಧರೂ ಹೌದು.

  ಸುಬ್ಬಣ್ಣ ಈಗ ‘ರಾಕ್ಷಸನ ಹೃದಯ ಕದ್ದ ಮಕ್ಕಳು’ ಎನ್ನುವ ಕಥಾ ಸಂಕಲನವನ್ನು ತಂದಿದ್ದಾರೆ. ಮಕ್ಕಳಿಗೆ ಕಥೆ ಬರೆಯುವುದೆಂದರೆ ಅದೊಂದು ರೀತಿಯ ಧ್ಯಾನ. ಸದಾ ಮಕ್ಕಳ ಕುರಿತಾಗಿ ಪ್ರೀತಿಯ ಆಲೋಚನೆಗೆ ಇಳಿಯುತ್ತಾ, ತನ್ನಲ್ಲಿ ಮಗುತನವನ್ನು ಆಹ್ವಾನಿಸಿಕೊಳ್ಳುತ್ತ… ಹೊಸ ಹೊಸ ಓದಿಗೆ ತೆರೆದುಕೊಳ್ಳುತ್ತ ಮಾಡಬೇಕಾದ ಕ್ರಿಯೆ. ಸುಬ್ಬಣ್ಣ ಇಂತಹ ಕ್ರಿಯೆಯಲ್ಲಿ ನಿರಂತರ ತೊಡಗಿದ್ದಾರೆ. ಅವರ ಈ ಸಂಕಲನದಲ್ಲಿ ಮೂವತ್ತು ಕಥೆಗಳಿವೆ. ಇದರಲ್ಲಿ ಅವರು ಬರೆದ 1984ರಷ್ಟು ಹಿಂದಿನ ಕಥೆಗಳೆಲ್ಲ ಸೇರಿರುವುದರಿಂದ ರಾಜರ ಕಥೆಗಳು, ಜಾನಪದ ಮಾದರಿಗಳು, ವಾಸ್ತವ ಕಥೆಗಳು ಎಲ್ಲವೂ ಸೇರಿಕೊಂಡಿವೆ. ಹಾಗಾಗಿ ಹಿಂದಿನ ಸಾಂಪ್ರದಾಯಕ ಚೌಕಟ್ಟಿನಲ್ಲಿಯೇ ಇರುವ ಹಲವಾರು ಕಥೆಗಳು ಇಲ್ಲಿವೆ. ಸುಬ್ಬಣ್ಣ ಅವರು ಇತ್ತೀಚೆಗೆ ಬರೆದ ಹೊಸಕಾಲದ ಕಥೆಗಳನ್ನೇ ಒಂದಾಗಿಸಿ ಸಂಕಲನ ತಂದಿದ್ದರೆ ಇನ್ನೂ ಹೆಚ್ಚು ಚನ್ನಾಗಿರುತ್ತಿತ್ತು  ಅಂತ ನನಗೆ ಅನಿಸುತ್ತದೆ.

ಇರಲಿ, ಸುಬ್ಬಣ್ಣ ಆಗಲೇ ಹೇಳಿದ ಹಾಗೆ ಕಥೆ ಬರೆಯುವುದರಲ್ಲಿ ನುರಿತವರು. ಈ ಸಂಕಲನದಲ್ಲಿ ಇರುವ ‘ಬಲೂನು ನನ್ನದು’ ಎನ್ನುವ ಕಥೆ ತುಂಬಾ ಆಪ್ತವಾಗುವ ಹಾಗೆ ಇದೆ. ಪುಟ್ಟ ಶಾಲೆಯಿಂದ ಮರಳಿದಾಗ ಮನೆಯ ಗೇಟಿನ ಹತ್ತಿರ ಒಂದು ಬಲೂನು ಸಿಗುತ್ತದೆ. ಬಲೂನು ಯಾವ ಮಕ್ಕಳಿಗೆ ಇಷ್ಟವಲ್ಲ ಹೇಳಿ. ಅದನ್ನು ಮನೆಯ ಒಳಕ್ಕೆ ತಂದು ಆಡಲು ತೊಡಗುತ್ತಾನೆ. ಇದನ್ನು ನೋಡಿದ ಅವನ ಅಮ್ಮ ಯಾರದು ಎಂದು ವಿಚಾರಿಸಿ… ಬೇರೆಯವರ ಬಲೂನು ಅಂದ ಮೇಲೆ ಅಲ್ಲೇ ಇಟ್ಟು ಬಾ ಎಂದು ಹೇಳುತ್ತಾಳೆ. ಅಮ್ಮನ ಒತ್ತಾಯಕ್ಕೆ… ಹಿಂದೆ ಬಂದ ಪುಟ್ಟು ಗೇಟಿನ ಹೊರಗೆ ಬಂದು ಅಲ್ಲಿ ಬರುವವರನ್ನೆಲ್ಲ ಬಲೂನು ನಿಮ್ಮದಾ ಎಂದು ಕೇಳುತ್ತಿರುತ್ತಾನೆ. ಆದರೆ ಯಾರೂ ಬಲೂನು ತಮ್ಮದು ಎಂದು ಹೇಳದಿರಲಿ ಎನ್ನುವ ಆಸೆ ಅವನ ಮನದಲ್ಲಿ ತುಂಬಿಕೊಂಡಿರುತ್ತದೆ. ಕೊನೆಯಲ್ಲಿ ಅಜ್ಜಿಯೊಬ್ಬಳು ತನ್ನ ಮೊಮ್ಮಗನೊಂದಿಗೆ ಬಂದು ಬಲೂನು ತನ್ನ ಮೊಮ್ಮಗನದೂ ಎಂದು ಹೇಳಿ ತೆಗೆದುಕೊಂಡಾಗ… ಆಡುವ ಮನಸ್ಸಿನ ಪುಟ್ಟುವಿಗೆ ಸಂಕಟವಾಗುತ್ತದೆ. ಆದರೆ ಬಲೂನು ಮಾರುವವನೊಬ್ಬ ಅವನ ಮನೆಯ ಹತ್ತಿರ ಪ್ರತ್ಯಕ್ಷ ಆಗುವುದರೊಂದಿಗೆ ಕಥೆ ಸುಖಾಂತ್ಯವಾಗುತ್ತದೆ. ಈ ಕಥೆ ವಾಸ್ತವ ನೆಲೆಯಲ್ಲಿ ಮಕ್ಕಳ ಮನಸ್ಸಿನ ಅನಾವರಣ ಮಾಡಿಸುತ್ತದೆ.

   ‘ಕಾವಲುಗಾರ ಮತ್ತು ಮೋಚಿ’ ಕಥೆಯಲ್ಲಿ ಮೋಚಿಯೊಬ್ಬ ಕಾಲೋನಿಯ ಒಳಗೆ ಹೋಗಿ ಕೆಲಸ ಮಾಡುವುದು ಇದೆ. ಈ ರೀತಿ ಒಳಗೆ ಹೋಗಿ ಕೆಲಸ ಮಾಡಲು ಕಾಲೋನಿಯ ಕಾವಲುಗಾರ ಮೋಚಿಯಿಂದ ಹಣ ಲಂಚವಾಗಿ ಪಡೆಯುತ್ತಾನೆ. ನಂತರ ಮೋಚಿಯಿಂದ ಕೆಲಸ ಮಾಡಿಸುತ್ತ ತಾನೇ ಅಂಗಡಿ ನಡೆಸುತ್ತಾನೆ. ನಂತರ ಮೋಚಿಯಿಂದ ಮತ್ತೆ ಮತ್ತೆ ಹಚ್ಚು ಹಣ ಕಬಳಿಸಲು ತೊಡಗಿದಾಗ ಮೋಚಿ ಅವನನ್ನು ಬಿಟ್ಟು ತಾನೇ ಸ್ವಂತ ಕೆಲ¸ಕ್ಕೆ ತೊಡಗುತ್ತಾನೆ. ದುರಾಸೆಯ ಕಾವಲುಗಾರ ಕಷ್ಟಕ್ಕೆ ಒಳಗಾಗುತ್ತಾನೆ ಎನ್ನುವ ಕಥೆ ಮಕ್ಕಳಿಗೆ ಸಹಜ ಸಂದೇಶ ಮುಟ್ಟಿಸುತ್ತದೆ.

ಸಾವುಕಾರನ ಮನೆಯ ನಾಯಿ, ಆಳಿನ ಮನೆಯ ನಾಯಿಗಳ ಮುಖಾಮುಖಿ ‘ನರ ಬುದ್ಧಿ ನಾಯಿ ಬುದ್ಧಿ’ ಕಥೆಯಲ್ಲಿದೆ. ಸಾವುಕಾರನ ಮನೆಯ ನಾಯಿ ತನ್ನ ಸೌಲಭ್ಯಗಳ ಕುರಿತು ಕೊಚ್ಚಿಕೊಳ್ಳುವುದು ಹಾಗೂ ಆಳಿನ ಮನೆಯ ನಾಯಿಯನ್ನು ಹೀಯಾಳಿಸುವುದು ಇದೆ. ಆದರೆ ಆ ನಾಯಿ ಮುದುಕಾದಾಗ ಕಾಡಿಗೆ ಬಿಡಲು ಸಾವುಕಾರ ಆಲೋಚಿಸುತ್ತಾನೆ. ಆದರೆ ಆಳಿನ ಮನೆಯ ನಾಯಿ ಚನ್ನಾಗಿರುತ್ತದೆ. ಇದರಿಂದ ಶ್ರೀಮಂತಿಕೆಯ ಸೌಲಭ್ಯಕ್ಕಿಂತ ಪ್ರೀತಿಯೇ ಮುಖ್ಯ ಎಂಬ ಅರಿವು ಶೀಮಂತನ ಮನೆಯ ನಾಯಿಗಾಗುತ್ತ ಮಕ್ಕಳಿಗೆ ತಲುಪುತ್ತದೆ. ಸಂಪಾದನೆ ಎನ್ನುವ ಇನ್ನೊಂದು ಕಥೆಯಲ್ಲಿ ಮಣಿ ಎನ್ನುವ ಚಿಂದಿ ಆಯುವ ಹುಡುಗನ ಬಾಲ್ಯದ ಆಸೆ, ಬಡತನ, ಅಪ್ಪನ ಸಿಟ್ಟು ಎಲ್ಲ ವ್ಯಕ್ತವಾಗಿದೆ. ಮಣಿ ಬಣ್ಣದ ಆಟಿಗೆಗಾಗಿ ತಾನೇ ಕೂಲಿಮಾಡಿ ಸಂಗ್ರಹಿಸುವುದುÀ ಕಷ್ಟವಾದರೂ ಆಟಿಕೆ ಪಡೆಯಬೇಕೆಂಬ ಹಂಬಲದಲ್ಲಿ ಅದನ್ನು ಲಕ್ಷಿಸದೇ ಪ್ರಯತ್ನಿಸುವುದೆಲ್ಲ ಮಕ್ಕಳು ಎಂತಹ ಕಷ್ಟದಲ್ಲೂ ಮುನ್ನಡೆಯುವ ಉತ್ಸಾಹ ತೋರುವುದನ್ನು ಎತ್ತಿ ತೋರಿಸುತ್ತದೆ.

ಪುಸ್ತಕದ ಶೀರ್ಷಿಕೆ ಕಥೆ ‘ರಾಕ್ಷಸನ ಹೃದಯ ಕದ್ದ ಮಕ್ಕಳು’ ಒಂದು ರೀತಿಯ ಜಾನಪದ ಮಾದರಿಯ ಕಥೆಯಾಗಿದೆ. ಮಕ್ಕಳನ್ನು ಕದ್ದು ತೊಂದರೆ ಕೊಡುತ್ತಿದ್ದ ರಾಕ್ಷಸನಿಗೆ ನಿನ್ನ ಹೃದಯ ಕಳ್ಳುತ್ತೇನೆ ಎಂದು ಬಾಲಕಿಯೊಬ್ಬಳು ಹೆದರಿಸುವುದು ಕುತೂಹಲ ಮೂಡಿಸುತ್ತದೆ. ನಂತರ ರಾಕ್ಷಸ ತನ್ನ ಗುಹೆಯಲ್ಲಿ ಇಟ್ಟು ಕೊಂಡಿದ್ದ ಮಕ್ಕಳೊಂದಿಗೆ ಸೇರಿಕೊಳ್ಳುವ ಬಾಲಕಿ ಅವರಿಗೆಲ್ಲ ‘ರಾಕ್ಷಸನ ಹೃದಯ ಕಳವುಮಾಡುತ್ತೇವೆ ಎಂದು ಹೇಳಿ’ ಅವನನ್ನು ಹೆದರಿಸುವ ಉಪಾಯ ಹೇಳುವುದು ಇದೆ. ಕೊ£ಂiÀÉಯಲ್ಲಿ ಮಕ್ಕಳು ತನ್ನ ಹೃದಯ ಕದ್ದರೆಂದು ಭಾವಿಸಿ ರಾಕ್ಷಸ ಬಿದ್ದು ಹೋಗುವುದು ಮಕ್ಕಳು ಬಿಡುಗಡೆಯಾಗುವುದು ಇದೆ.

ಸುಬ್ಬಣ್ಣ ಇತ್ತೀಚೆಗೆ ಹೊಸಕಾಲದ ಪಟ್ಟಣದ ಮಕ್ಕಳ ಸುತ್ತಲಿನ ಕಥೆಗಳನ್ನು ಚುರುಕಾಗಿ ಬರೆಯುತ್ತಿದ್ದಾರೆ. ಅದರಲ್ಲಿ ಪಟ್ಟಣದ ಮಕ್ಕಳು ವಿವಿಧ ರೀತಿಯ ಕಷ್ಟಕ್ಕೀಡಾಗುವುದು ಹಾಗೂ ಮಕ್ಕಳು ತಮ್ಮ ಚುರುಕುತನ ಪ್ರದರ್ಶಿಸಿ ಕಷ್ಟದಿಂದ ಹೊರಗೆ ಬರುವುದೆಲ್ಲ ಇರುತ್ತದೆ. ಆಗಲೇ ಹೇಳಿದ ಹಾಗೆ ಹೊಸಕಾಲದ ಕಥೆಗಳದೇ ಸಂಕಲನವಾಗಿದ್ದಿದ್ದರೆ ಇನ್ನಷ್ಟು ಖುಷಿಯಾಗುತ್ತಿತ್ತು ಅನಿಸುತ್ತದೆ. ಆದರೆ ಇದರಲ್ಲಿರುವ ಮೂವತ್ತೂ ಕಥೆಗಳು ಮಕ್ಕಳಿಗೆ ಬೇರೆ ಬೇರೆ ರೀತಿಯಲ್ಲಿ ಕಚಗುಳಿ ಇಡುತ್ತ ಅವರ ಸಂತಸದ ಪರಿಧಿ ವಿಸ್ತರಿಸುವುದರಲ್ಕಿ ಸಂಶಯವಿಲ್ಲ. ಸುಬ್ಬಣ್ಣ ಅವರ ಪುಸ್ತಕ ಮಕ್ಕಳ ಮನಸ್ಸಿಗೆ ಪ್ರೀತಿಯ ಸ್ಪರ್ಶ ನೀಡಲಿ ಎಂದು ಆಶಿಸುತ್ತ ಹಿರಿಯ ಬರಹಗಾರ ಸುಬ್ಬಣ್ಣ ಅವರಿಗೆ ವಂದನೆಗಳು.

*******************************

ತಮ್ಮಣ್ಣ ಬೀಗಾರ.

9 thoughts on ““ರಾಕ್ಷಸನ ಹೃದಯ ಕದ್ದ ಮಕ್ಕಳು”.

  1. ಸಾಹಿತಿ ಮಿತ್ರ ತಮ್ಮಣ್ಣ ಬೀಗಾರರು ನನ್ನ ಇತ್ತೀಚಿನ ಮಕ್ಕಳ ಹೊತ್ತಿಗೆಯಾದ ‘ರಾಕ್ಷಸನ ಹೃದಯ ಕದ್ದ ಮಕ್ಕಳು’ ಕೃತಿಯನ್ನು ಬಹಳ ಸೊಗಸಾಗಿ ವಿಮರ್ಶಿಸಿದ್ದಾರೆ. ಇದು ಒಂದು ರೀತಿಯಲ್ಲಿ ನನ್ನ 35ವರ್ಷಗಳ ಮಕ್ಕಳ ಕಥೆಗಳ ಅವಲೋಕನ. ಬೀಗಾರರು ಅಭಿಪ್ರಾಯಪಟ್ಟಿರುವಂತೆ ಈ ಸಂಕಲನದಲ್ಲಿ ಎಲ್ಲ ರೀತಿಯ ಕಥೆಗಳೂ ಸೇರಿವೆ. ಇಂದಿನ ದಿನದ ಮನಸ್ಥಿತಿಗೆ ಹತ್ತಿರವಿರುವ ಎರಡು ಮಕ್ಕಳ ಕಥಾ ಸಂಕಲನಗಳಲ್ಲಿ ಒಂದು ಇತ್ತೀಚೆಗೆ ಬೆಳಕು ಕಂಡಿದೆ. (ವೆಲ್ ಕಮ್ ಸೂರ್ಯಣ್ಣ ಮತ್ತು ಜಾಲಿ ಹಸು ಮತ್ತು ಮೊಬೈಲು:e-ಕಾಲದ ಮಕ್ಕಳ ಕಥೆಗಳು) ನನ್ನ ಮಕ್ಕಳ ಕೃತಿಯನ್ನು ಪರಿಚಯಿಸಿದ ತಮ್ಮಣ್ಣ ಬೀಗಾರರೂ, ಹಾಗೂ ಪ್ರಕಟಿಸಿದ ಸಂಗಾತಿಯ ಮಿತ್ರರೂ ವಂದನ ಭಾಜನರು. .

Leave a Reply

Back To Top