ಅಂಕಣ ಬರಹ

ತೊರೆಯ ಹರಿವು

‘ಭೀಷ್ಮ ಪ್ರತಿಜ್ಞೆಯೂ…  

ಸಾಮಾನ್ಯ ತಿಳುವಳಿಕೆಯೂ…’

Abstract art - Wikipedia

ತಂದೆಯ ಮನೋಭಿಲಾಷೆ ಈಡೇರಿಸುವ ಸಲುವಾಗಿ ಆಜನ್ಮಪರ್ಯಂತ ಬ್ರಹ್ಮಚಾರಿಯಾಗಿ  ಉಳಿಯುವ ಪ್ರತಿಜ್ಞೆ ಮಾಡಿ ಅದರಂತೆ ನಡೆದು ಅಜರಾಮರ ಆದವ ಸತ್ಯವ್ರತ ಅಲಿಯಾಸ್ ಗಾಂಗೇಯ ಯಾನೆ ಭೀಷ್ಮ. ಪ್ರತಿಜ್ಞೆ ಮಾಡುವ ಕಾಲಕ್ಕೆ ಆತ ಭೀಷ್ಮ ಎನಿಸಿದನೆ? ಅಥವಾ ನುಡಿದಂತೆ ನಡೆದುದನು ಕಂಡು ಲೋಕ ಮೆಚ್ಚಿ ಭೀಷ್ಮ ಎಂದಿತೆ? ಎನ್ನುವುದನ್ನು ಮಹಾಭಾರತ ಸರಿಯಾಗಿ ಬಲ್ಲವರು ಹೇಳಬೇಕು. ಏಕೆಂದರೆ, ಲಿಪಿಕಾರ ವ್ಯಾಸನಾದರೂ ಪ್ರತಿಲಿಪಿಕಾರರು ಯಾವ ಅಕ್ಷರ, ಪದ, ವಾಕ್ಯ, ಶ್ಲೋಕ, ಕತೆ, ಪ್ರಸಂಗ ತಿದ್ದಿದರೋ, ಸೇರಿಸಿದರೋ ತೆಗೆದರೋ ತಿಳಿಯುವುದು ಹೇಗೆ? ವ್ಯಾಸ ಕೂಡ ವ್ಯಕ್ತಿಯಲ್ಲ, ನಮ್ಮ ಪ್ರಾಂಶುಪಾಲರ ಹಾಗೊಂದು ಪದವಿ. ಅನೇಕ ವ್ಯಾಸರು ಬಂದು ಅಲ್ಲಿ ಕುಳಿತು ಹೋಗಿರುವರು ಎಂದೂ ಪ್ರತಿಪಾದಿಸುತ್ತಾರೆ. ಇರಲಿ, ಮಹಾಭಾರತ ಯಾರು ಬರೆದರು, ಏನನ್ನು ಬರೆದರು, ಯಾವ ಭಾಗ ಸೇರಿಸಿದರು, ಯಾವ ಭಾಗ ಪರಿಷ್ಕರಿಸಿದರು ಎನ್ನುವ ವಿಚಾರಗಳು ಸಧ್ಯಕ್ಕೆ ಬೇಡ. ಈಗ ಪ್ರತಿಜ್ಞೆಯ ಬಗ್ಗೆ ಮಾತ್ರ ತೆಗೆದುಕೊಳ್ಳೋಣ. 

  ಮಹಾಭಾರತದಲ್ಲಿ ಹಾಗೆ ಪ್ರತಿಜ್ಞೆ ಮಾಡಿದವರನ್ನು ಪಟ್ಟಿ ಮಾಡಲು ಹೋದರೆ ಒಂದು ಡಜ಼ನ್ ಮಂದಿ ದೊರೆತಾರು..! ಕೃಷ್ಣ, ಮಾದ್ರಿ, ಅಂಬೆ, ದ್ರೌಪದಿ, ಭೀಮ, ಕರ್ಣ, ಅರ್ಜುನ, ದ್ರೋಣ, ಸುಯೋಧನ, ಶಕುನಿ, ಗಾಂಧಾರಿ….. ಇವರಲ್ಲಿ ಕೆಲವರು ಜಗಕ್ಕೆ ಕೇಳುವಂತೆ ಭೀಷಣ ದನಿಯಲ್ಲಿ ಭಾಷಣ ಹೊಡೆದು ಪ್ರತಿಜ್ಞೆ ಮಾಡಿರಬಹುದು. ಮತ್ತೆ ಕೆಲವರು ಸದ್ದಿಲ್ಲದೆ, ಮೌನವಾಗಿ ಪ್ರತಿಜ್ಞೆ  ಮಾಡಿರುವುದುಂಟು. ಅವರೇನು ಪ್ರತಿಜ್ಞೆ ಮಾಡಿದರು ಅದರಿಂದ ಏನೇನೆಲ್ಲಾ ಘಟಿಸಿತು ಎನ್ನುವುದನ್ನು ಸಾವಿರ ವಿದ್ವಾಂಸರು ವಿಮರ್ಶಿಸಿ, ಸಂಶೋಧನಾ ಗ್ರಂಥಗಳನ್ನೇ ರಚಿಸಿದ್ದಾರೆ. 

       ಕೇವಲ ಪೌರಾಣಿಕರು ಮಾತ್ರ ಪ್ರತಿಜ್ಞೆ ಮಾಡಬಹುದು ಎಂದುಕೊಂಡಿದ್ದ ನನಗೆ ಪಠ್ಯಪುಸ್ತಕಗಳಲ್ಲಿನ ನೀತಿಕತೆಗಳು, ಸಮಾಜಶಾಸ್ತ್ರದ ಸ್ವಾತಂತ್ಯ್ರದ ಪಾಠಗಳು  ಸಾಮಾನ್ಯರೂ ಪ್ರತಿಜ್ಞೆ ಮಾಡಬಹುದು ಎಂಬುದನ್ನು ತಿಳಿಸಿಕೊಟ್ಟು ಅಚ್ಚರಿಯನ್ನುಂಟು ಮಾಡಿದ್ದವು!! ಅದರಲ್ಲೂ ಮೋಹನದಾಸ ಕರಮಚಂದ ಗಾಂಧಿ ಎಂಬ ಪೋರಬಂದರಿನ ಪೋರ ಬಾಲ್ಯದ ಚೇಷ್ಟೆಗಳನ್ನು ಮಾಡುತ್ತಲೇ, ಹರೆಯದ ದುಡುಕುಬುದ್ಧಿಯ ಕೈಗೆ ಕೊಟ್ಟ ಬುದ್ಧಿಯನ್ನು ಹಿಂಪಡೆದು, ಅದು ಹೇಗೆ ಅಖಂಡ ಭಾರತದ ಸಾರ್ವಭೌಮ ಪಿತಾಮಹ ಆಗಿಬಿಟ್ಟರು! ನಿಷ್ಠೆ, ಪ್ರಾಮಾಣಿಕತೆ, ಧರ್ಮ, ಅಹಿಂಸೆ, ಸತ್ಯ   ನುಡಿಯುವ, ನುಡಿದಂತೆ ನಡೆಯುವ ಪ್ರತಿಜ್ಞೆಯಿಂದಲೇ ಇದು ಸಾಧ್ಯವಾದದ್ದು ಎಂಬ ನಂಬಿಕೆ ಮೂಡಿದ ಮೇಲೆಯೇ ನನ್ನಂತಹ ಸಾಮಾನ್ಯರೂ ಪ್ರತಿಜ್ಞೆ ಮಾಡಬಹುದೆಂದು ಅರಿವಾಯ್ತು. 

      ಹಬ್ಬ ಹರಿದಿನಗಳಲ್ಲಿ ಏನಾದರೂ ವ್ರತ ತಪ ನೇಮಾಚರಣೆ ಮಾಡ್ತೀವಿ ಅಂದುಕೊಳ್ಳೋದು ಸಹ ಒಂದು ರೀತಿ ಪ್ರತಿಜ್ಞೆಯೇ ಅಲ್ಲವೇ? ಬಹುಶಃ  ಉಪವಾಸ ಮಾಡೋದು, ಮಾಂಸಾಹಾರ ವರ್ಜ್ಯ,  ತಣ್ಣೀರು ಸ್ನಾನ, ತುಪ್ಪದ ದೀಪ, ಮಂತ್ರ ಪಠಣ, ಹೆಜ್ಜೆ ನಮಸ್ಕಾರ ಉರುಳು ಸೇವೆ, ತುಲಾಭಾರ, ಅನ್ನಸಂತರ್ಪಣೆ, ದಾನ, ತೀರ್ಥಯಾತ್ರೆ, ಯಾಗ-ಹೋಮ-ಹವನ ಮೊದಲಾದವನ್ನು ಕೇವಲ ಧಾರ್ಮಿಕ ಆಚರಣೆಗಳೆನ್ನುವುದೇ ಅಥವಾ ಇವುಗಳನ್ನು ಪಾಲಿಸ್ತೀವಿ ಎನ್ನುವುದನ್ನು ಪ್ರತಿಜ್ಞೆ ಎಂದು ಪರಿಗಣಿಸಬಹುದೇ? ಈ ವಿಚಾರವಾಗಿ ಒಂದಷ್ಟು ಚರ್ಚೆ ಮಾಡಬಹುದೆನ್ನಿ.. 

     ಪ್ರತಿಜ್ಞೆ ಮಾಡುವುದು ದೊಡ್ಡ ವಿಚಾರವಲ್ಲ. ಆದರೆ ಅದನ್ನು ನೆರವೇರಿಸುವುದು ಬಹಳ ವಿಶೇಷವಾದದ್ದು. ಭೀಷ್ಮ ಯೌವನದ ಹೊಸ್ತಿಲಲ್ಲಿ ಅರಿಷಡ್ವರ್ಗ ಕ್ಷೋಭೆಗೆ ಒಳಗಾಗದ ಹೊತ್ತಿನಲ್ಲಿ ಅಜೀವಪರ್ಯಂತ ಬ್ರಹ್ಮಚಾರಿಯಾಗುಳಿಯುವ ಪಣ ತೊಟ್ಟಿದ್ದು ಆ ಕ್ಷಣದ ನಿರ್ಧಾರ ಎಂದೇ ಭಾವಿಸಿದ್ದ ತಂದೆ ಶಂತನೂ ಸಹ ಮಗನ ದೃಢ ನಿರ್ಧಾರಕ್ಕೆ ಶರಣೆಂದು, ತನ್ನ ಪಾಪಪ್ರಜ್ಞೆಯ ಉಪಶಮನಕ್ಕಾಗಿ ‘ಇಚ್ಛಾಮರಣಿ’ಎಂಬ ವರ ನೀಡಿರಬಹುದು. 

      ಪ್ರತಿ ವರ್ಷಾರಂಭವೆಂದು ಪರಿಗಣಿಸುವ ಜನವರಿ ಒಂದನೇ ದಿನದಂದು ಹೊಸವರ್ಷದ ಪ್ರಮಾಣ/ಪ್ರತಿಜ್ಞೆಗಳನ್ನು ಅದೆಷ್ಟು ಬಗೆಯಲ್ಲಿ ಕೈಗೊಳ್ಳುತ್ತೇವೆ! ಅಸಲಿಗೆ ಅವುಗಳು ಕೇವಲ ನಿರ್ಧಾರಗಳಾಗಿರುತ್ತವೆ(ನ್ಯೂ ಇಯರ್ ರೆಸಲ್ಯೂಷನ್). ಪ್ರತಿಜ್ಞೆಗಳ ಭಾರದಲ್ಲಿ ಸಿಲುಕದ ಇಂತಹ ಹಲವು ನಿರ್ಧಾರಗಳನ್ನು ಸುಲಭವಾಗಿ ಕೈ ಬಿಡಬಹುದು. ಈ ವರ್ಷ ಆಗಲಿಲ್ಲ, ಮುಂದಿನ ವರ್ಷ ಖಂಡಿತ ಪಾಲಿಸ್ತೀನಿ ಎಂದು ನಮ್ಮ ತನುಮನಗಳನ್ನು ಸಂತೈಸಿಕೊಳ್ಳಬಹುದು. ಈ ಕಾರಣಕ್ಕೇ ಇವುಗಳನ್ನು ನಿರ್ಧಾರಗಳೆಂದದ್ದು. 

     ಸ್ವಾತಂತ್ಯ್ರ ಹೋರಾಟದಲ್ಲಿ ಬ್ರಿಟೀಷರನ್ನು ಭಾರತದಿಂದ ಓಡಿಸವ ಪಣ ತೊಟ್ಟ ಸ್ವಾತಂತ್ಯ್ರ ಹೋರಾಟಗಾರರದ್ದು, ಓಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ತಂದೇ ತರ್ತೀನಿ, ಜೀವಮಾನ ಪರ್ಯಂತ ಸಸ್ಯಹಾರಿ ಆಗಿರ್ತೀನಿ, ಇಂಥದ್ದೇ ನೌಕರಿ ಹಿಡಿತೀನಿ ಅನ್ನೋದು- ಇವು ದೃಢ ನಿರ್ಧಾರಗಳೇ ಆದರೂ ಅಂದುಕೊಂಡದ್ದನ್ನು ಸಾಧಿಸಿ ತೋರಿಸಿದಾಗ ಈ ಗಟ್ಟಿ ನಿರ್ಧಾರಗಳೇ ಪ್ರತಿಜ್ಞೆ ಎನಿಸುತ್ತವೆ. 

    ನನ್ನ ಸಹೋದ್ಯೋಗಿ ಮಿತ್ರರು ಒಮ್ಮೆ ಇನ್ನು ಮುಂದೆ ರಸ್ತೆಯಲ್ಲಿ ನಡೆಯುವಾಗ ಪಾದಚಾರಿ ಮಾರ್ಗದಲ್ಲಿಯೇ ನಡೆಯಬೇಕು. ಜ಼ೀಬ್ರಾ ಕ್ರಾಸಿಂಗ್ ಇರುವಲ್ಲಿಯೇ ರಸ್ತೆ ದಾಟಬೇಕು ಎಂದು ಪ್ರತಿಜ್ಞೆ ಮಾಡಿರುವುದಾಗಿ ನನ್ನ ಬಳಿ ಹೇಳಿದರು. ಇದು ನನಗೆ ಅನುಕರಿಸಲು ಸುಲಭವಾಗಿಯೂ ಒಂದು ಆದರ್ಶ ಒಳಗೊಂಡಿರುವ ಮಾದರಿ ನಡೆಯಂತೆ ಆಕರ್ಷಣೀಯವಾಗಿಯೂ ಕಾಣಿಸಿತು. ನಾನೂ ಸಹ ಅದೇರೀತಿ ‘ನಡೆಯುವೆ’ ಎಂದು ಪ್ರತಿಜ್ಞೆ ಮಾಡಿಕೊಂಡೆನಾದರೂ ಬೆಂಗಳೂರಿನ ಪಾದಚಾರಿಮಾರ್ಗವೇ ಇರದ, ಇದ್ದರೂ ಕಾರು-ಬೈಕುಗಳ ನಿಲ್ದಾಣವಾಗಿರುವ, ಗುಂಡಿ ಬಿದ್ದಿರುವ, ಅತಿಕ್ರಮಣಕೆ ಒಳಗಾಗಿರುವ, ಕಾಯಕಲ್ಪಕೆ ಕಾಯುತಿರುವ ಪಾದಚಾರಿ ಮಾರ್ಗಗಳಿಂದಾಗಿ ನನ್ನ ಪ್ರತಿಜ್ಞಾ ಭಂಗವಾದ ನಿರಾಸೆಯಲ್ಲಿರುವೆ. ಮುಂದೆ ನನ್ನ ಊರೂ ಸಿಂಗಾಪೂರವಾದಾಗ ನನ್ನ ಪ್ರತಿಜ್ಞೆ ಜಾರಿಯಾಗಬಹುದೆಂಬ ದೂರೂಲೋಚನೆ ಇಟ್ಟುಕೊಂಡು ಆಶಾವಾದಿಯಾಗಿರುವೆ.  

   ಕಾನೂನು ಬೇರೆ ನಿಯಂತ್ರಣ ಬೇರೆ ಎನ್ನುವಂತೆ. ಪ್ರತಿಜ್ಞೆ ಬೇರೆ ವ್ರತ ಬೇರೆ. ವಿಶ್ವಾಮಿತ್ರ ಮುನಿ ಕಾಮಧೇನುವಿನ ಪ್ರಸಂಗದಿಂದಾಗಿ ತಾನೂ ಸಹ ಬ್ರಹ್ಮರ್ಶಿ ಆಗಬೇಕೆಂದು ಪ್ರತಿಜ್ಞೆ ಮಾಡಿದ್ದನಲ್ಲವೇ?   ಅದಕ್ಕಾಗಿ ತಪಸ್ಸಿಗೆ ಕುಳಿತವನು ಮೇನಕೆಯಿಂದ ತಪೋಭಂಗಕ್ಕೆ ಒಳಗಾದರೂ ಬ್ರಹ್ಮರ್ಷಿಯಾದದ್ದು ರೋಚಕ ಕತೆ. ಹರಿಶ್ಚಂದ್ರ ಜಗತ್ತಿನೆಲ್ಲಾ ಕಡುಕಷ್ಟ ಎದುರಿಸಿ, ಮಡದಿ ಮಗನಿಂದ ದೂರಾದರೂ ಸತ್ಯಸಂಧ ಎನಿಸಿದ್ದು ಆತ ಎಂಥಾ ಪ್ರಸಂಗ ಬಂದರೂ ‘ಸತ್ಯ ತೊರೆಯೆ’ ಎಂಬ ಪ್ರತಿಜ್ಞೆ ಮಾಡಿದ್ದರಿಂದಲೇ..  

     ನಾವು ಹುಲು ಮಾನವರು ಸಾಮಾನ್ಯವಾಗಿ ಊಟ-ಉಡುಪಿನ ವಿಚಾರವಾಗಿ ಪ್ರತಿಜ್ಞೆ ಮಾಡುತ್ತೇವೆ. ಆದರೆ ಎಷ್ಟುಪಾಲು ಆಚರಣೆಯಲ್ಲಿ ತರುತ್ತೇವೆ ಎನ್ನುವುದು ಮುಖ್ಯ. ಈ ವರ್ಷ ಹೆಚ್ಚು ಬಟ್ಟೆ ಕೊಳ್ಳುವುದಿಲ್ಲ ಎಂದುಕೊಂಡ ದಿನವೇ ಯಾವುದೋ ಆಕರ್ಷಣೆಗೆ ಒಳಗಾಗಿ, ಡಿಸ್ಕೌಂಟ್ ಸೇಲಿನ ಚಕ್ರಕ್ಕೆ ಸಿಲುಕಿ ನಾಕಾರು ಹೆಚ್ಚುವರಿ ಖರೀದಿ ನಡೆದಿರುತ್ತದೆ. ಈ ಮೋಹಪಾಶ ಎಷ್ಟು ಗಂಭೀರವಾದುದೆಂದರೆ, ಇದು ಗೀಳಾಗಿ ಮಾರ್ಪಟ್ಟು ಮನೋರೋಗದ ಲಕ್ಷಣವಾಗಿ ಬಿಡುವುದುಂಟು! ಇನ್ನು ಏಳುಮಲ್ಲಿಗೆ ತೂಕದ ರಾಜಕುಮಾರಿಯರಾಗಬೇಕೆಂದುಕೊಂಡು, ಜ಼ೀರೋ ಸೈಜ಼ಿನ ವ್ಯಾಮೋಹಿಗಳಾಗಿ, ಬಾಯಿ ಚಪಲ ನಿಯಂತ್ರಿಸುವ ಎಂದು ಪ್ರತಿಜ್ಞೆ ಮಾಡಿಕೊಂಡಾಗಲೇ ಮದುವೆ ಮಹೂರ್ತಹಳೂ, ಹುಟ್ದಬ್ಬದ ಪಾರ್ಟಿಗಳು… ಒಟ್ಟಿನಲ್ಲಿ ಒಂದೇ ಬಾರಿಯ ಊಟದಲ್ಲೇ ಹತ್ತಾರು ವೆರೈಟಿ ಕಂಡು ನಾಲಿಗೆ ನೀರೂರಿ ನಾಳೆಗೆ ಜ಼ೀರೋ ಸೈಜ಼ು ಪಡೆದರಾಯ್ತೆಂದು ಮಾಡಿದ ಪ್ರತಿಜ್ಞೆಯು ಪರಾರಿಯಾಗಿ ಬಿಡುವಂತೆ ಹೊಟ್ಟೆ ಬಿರಿಯುವಂತೆ ಲೊಟ್ಟೆ ಹೊಡೆದು ತಿಂದುಬಿಡುತ್ತೇವೆ. ಇನ್ನೆಲ್ಲಿಯ ಪ್ರತಿಜ್ಞೆ..?! 

     ಅಪ್ಪಟ ಭ್ರಷ್ಟನೊಬ್ಬ ಸತ್ಯದಿಂದ, ನ್ಯಾಯದಿಂದ ಇರುವುದಾಗಿಯೂ, ಪರಮ ನೀಚನೊಬ್ಬ ಕಾನೂನು ಪರಿಪಾಲಕನಾಗಿರುವುದಾಗಿಯೂ, ಶುದ್ಧ ಕಾಮುಕನೊಬ್ಬ ಎದುರಿರುವವರನ್ನು ಸಹೋದರ ಸಹೋದರಿಯರೆಂದು ಕರೆಯುತ್ತಾ ಮಾಡುವ ‘ಪ್ರತಿಜ್ಞಾ ವಿಧಿ ಬೋಧನೆ’ಗಳು ಬಹಳ ಸಲ ಎಂಥವರಿಂದ ಎಂಥಾ ಪ್ರತಿಜ್ಞೆ!? ಎಂದು ಜುಗುಪ್ಸೆ ಮೂಡಿಸುತ್ತದೆ. 

  ಇದು ಹೇಗಿದೆ ನೋಡಿ, ಒಬ್ಬ ಇನ್ನುಮುಂದೆ ತಾನು ರೈಲಿನಲ್ಲಿ ಟಿಕೇಟು ತೆಗೆದುಕೊಂಡೇ ಪ್ರಯಾಣಿಸುವುದಾಗಿ ಪ್ರತಿಜ್ಞೆ ಮಾಡಿದನಂತೆ! ಹಾಗಾದರೆ ಇಷ್ಟು ದಿನ ರೈಲ್ವೇ ಪ್ರಯಾಣ ಟಿಕೇಟಿಲ್ಲದೇ ಹೇಗೆ ಮಾಡಿದ್ದು?! ನನ್ನ ಪರಿಚಯದ ಒಬ್ಬರು ವರ್ಷಕ್ಕೆೊಮ್ಮೆ ಮಗನ ಕೂದಲನ್ನು ಮನೆ ದೇವರಿಗೆ ಮುಡಿಕೊಡುವುದಾಗಿ ಪ್ರತಿಜ್ಞೆ ಮಾಡಿದ್ದಾಗಿ ಹೇಳಿ ಅದರಂತೆಯೇ ಮಾಡುತ್ತಿದ್ದರು. ಆ ಮಗುವಿಗೆ ತಿಳುವಳಿಕೆ ಮೂಡಿ ಸಹಪಾಠಿ- ಸ್ನೇಹಿತರು ವರ್ಷ ವರ್ಷವೂ ಬೋಡಾಗುವ ಆ ಮಗುವಿನ ತಲೆಯನ್ನು ಅಣಕಿಸಲು ಶುರು ಮಾಡಿದ ಮೇಲೆ ಆತ ಪ್ರತಿಭಟನೆ ತೋರಿ ಗಲಾಟೆ, ರಂಪಾಟವೆಲ್ಲಾ ಮುಗಿದ ಮೇಲೆ ಈಗ ತಾವು ಹರಕೆ ಹೊತ್ತಿದ್ದ ಮಗುವಿಗೆ ಹನ್ನೆರಡು ವರ್ಷವಾಗುತ್ತಲೇ ತೀರಿತೆಂದು ಹೇಳಿ ನಿಭಾಯಿಸಿಬಿಟ್ಟರು. ನನಗೋ ಕೆಟ್ಟ ಕುತೂಹಲವಿತ್ತು… ಆತನ ಹೆಂಡತಿಯಾಗಿ ಬರುವ ಹುಡುಗೆ ಗಂಡನಿಗೆ ಮುಡಿ ಕೊಡುವುದು ಇಷ್ಟವಿಲ್ಲದೆ, ಅತ್ತೆ- ಸೊಸೆಯರ ಜಗಳಕ್ಕೆ ಕೂದಲೇ ಮೂಲವಾಗಬಹುದೆಂದು!! ಅಂತೂ ಪ್ರತಿಜ್ಞಾ ಭಂಗದಿಂದ ಆ ಕುತೂಹಲಕ್ಕೆ ತೆರೆ ಬಿದ್ದಿತು.   

   ತಮ್ಮ ಕೈಯಿಂದ ಯಾವುದು ಸಾಧ್ಯವಿಲ್ಲವೋ ಅಂಥದ್ದನ್ನೆಲ್ಲಾ ಮಾಡುವ ಪ್ರತಿಜ್ಞೆ ಮಾಡುವುದು ಹಾಸ್ಯಾಸ್ಪದವೆನಿಸುತ್ತದೆ. ಭಾರತ ಕ್ರಿಕೆಟ್ ಟೀಂ ವರ್ಲ್ಡ್ ಕಪ್ ಗೆದ್ದರೆ ಮೀಸೆ ಬೋಳಿಸುವುದು! ತಮ್ಮ ಪಕ್ಷ ಬಹುಮತ ಗೆದ್ದು ಆಡಳಿತದ ಚುಕ್ಕಾಣಿ ಹಿಡಿದು ಐದು ವರ್ಷ ಪೂರೈಸಿದರೆ ಬರಿಗಾಲಲ್ಲಿ ನಡೆಯುವೆ !! ನೆಚ್ಚಿನ ನಾಯಕ ನಟನ ಸಿನೆಮಾ ಮೊದಲ ದಿನ ಮೊದಲ ಶೋ ನೋಡುವೆ!!..। ಇಂತಹ ಸಾವಿರ ಉದಾಹರಣೆ ನೀಡಬಹುದು ಇವೆಲ್ಲಾ ಅಂಧಾಭಿಮಾನವಷ್ಟೇ ಪ್ರತಿಜ್ಞೆಯಲ್ಲ. 

      ಮಕ್ಕಳನ್ನು ಕೇಳಿ ‘ಪ್ರತಿಜ್ಞೆ’ ಎಂದರೆ – ‘ಕನಸು’ ಎನ್ನುತ್ತಾರೆ! ತಮ್ಮ ಜೀವಮಾನ ಪೂರ ತಾವು ಬಯಸಿವದ್ದನ್ನು ಈಡೇರಿಸಿಕೊಳ್ಳಲು ಶತಪ್ರಯತ್ನ ಪಡುವುದೇ ನಿಜವಾದ ಪ್ರತಿಜ್ಞೆ. ಅದು ಸಫಲವಾದೆ ಹರ್ಷ ವಿಫಲವಾದರೆ ನಷ್ಟವೇನಿಲ್ಲ. ಪ್ರಯತ್ನ ಪಡುವುದು ಮುಖ್ಯ. ಹೊಸ ವರ್ಷಕ್ಕೆ  ಮಾತ್ರವಲ್ಲದೆ, ನಮ್ಮ ಬದುಕನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳಲು, ಆಗಾಗ್ಗೆ ಸಕಾರಾತ್ಮಕ ಪ್ರತಿಜ್ಞೆಗಳನ್ನು ಮಾಡುತ್ತಿರಬೇಕು. ಪ್ರತಿಜ್ಞೆ ಮಾಡುವ ರಭಸದಲ್ಲಿ, ಮತ್ತೊಬ್ಬರೊಡನೆ ಅನಾವಶ್ಯಕ ಎತ್ತಡದ ಅನಾರೋಗ್ಯಕರ ಸ್ಪರ್ಧೆಗೆ ಇಳಿಯಬಾರದ ಎಚ್ಚರಿಕೆಯೂ ಜೊತೆಗಿರಬೇಕು. 

       ಕೊಟ್ಟ ಮಾತು, ವಾಗ್ದಾನ, ವಚನ, ಆಣೆ, ಮಾತುಕೊಡು ಇವೆಲ್ಲಾ ಪ್ರತಿಜ್ಞೆ ಪದದ ಸಮಾನಾರ್ಥಕಗಳು. ಆದರೆ ಎಲ್ಲವೂ ಪ್ರತಿಜ್ಞೆಯೇ ಆಗುವುದಿಲ್ಲ. ಹರಕೆ, ವ್ರತ, ಅಂದುಕೊಳ್ಳುವುದು, ಇಚ್ಛೆ, ಶಪಥ, ಆಸೆ, ಬಯಕೆ ಎಂಬಿತ್ಯಾದಿ ನಾನಾರ್ಥಗಳನ್ನು ಆರೋಪಿಸಬಹುದಾದರೂ ಪ್ರತಿಜ್ಞೆಯ ತೂಕವೇ ಬೇರೆ. ಅಂದುಕೊಂಡಂತೆ ನಡೆದುಕೊಂಡರೆ!! ವಾಗ್ದಾನ ಮುರಿದವರೆಷ್ಟು ಮಂದಿಯಿಲ್ಲ? ಯಾವುದೋ ಆವೇಶ, ಉದ್ವೇಗ, ಚಿತಾವಣೆಗೆ ಒಳಗಾಗಿ ಪ್ರತಿಜ್ಞೆ ಮಾಡಿ ಮುಂದೆ ಪೇಚಿಗೆ ಸಿಲುಕಿ ಪಜೀತಿ ಪಟ್ಟವರು ಹಲವಾರು ಮಂದಿ ಇರುತ್ತಾರೆ.

‘ಸತ್ಯ ವಾಕ್ಯಕೆ ತಪ್ಪಿ ನಡೆಯೆ’ ಎನ್ನುವುದು ಗೋವಿನ ಪ್ರತಿಜ್ಞೆ!! ಇನ್ನು ಪ್ರತಿಜ್ಞೆ ಮಾಡಲು ಹೋಗಿ, ವಿವಾದ ಮೈ ಸುತ್ತಿಕೊಂಡ ಸುದ್ದಿಗಳೂ ಉಂಟು. ಹಾಗಾಗಿ, ಪ್ರತಿಜ್ಞೆ ಸುಮ್ಮನೆ ಎಲುಬಿಲ್ಲದ ನಾಲಗೆಯನ್ನು ಹೊರಳಿಸಿ ಏನೋ ಒಂದು ನುಡಿಸಿದಂತಲ್ಲ. ಅದು ಮನೋಸಂಕಲ್ಪ, ದೃಢಚಿತ್ತದ ನುಡಿ. ‘ಸತ್ಯಸ್ಯ ವಚನಂ ಶ್ರೇಯಃ’ ಎನ್ನುವಲ್ಲಿರುವ ವಚನವೆಂದರೂ ಪ್ರತಿಜ್ಞೆಯೇ… ರಾಮ ಏಕಪತ್ನೀವ್ರತಸ್ಥನಾದ ಮನೋಭಿಲಾಶೆ  ಸಹ ಪ್ರತಿಜ್ಞೆಯೇ…  ಒಂದು ಕ್ಷಣ ಹೀಗೆ ಯೋಚಿಸೋಣ, ದೇವವ್ರತನು  ‘ಭೀಷ್ಮ ಪ್ರತಿಜ್ಞೆ’ಯನ್ನೇ ಮಾಡದಿದ್ದರೆ! ಅಥವಾ ಮಾಡಿದ ಪ್ರತಿಜ್ಞೆಯನ್ನು ಮಧ್ಯದಲ್ಲಿಯೇ ಮುರಿದಿದ್ದರೆ!! ಏನೂ ಆಗುತ್ತಿರಲಿಲ್ಲ; ಮಹಾಭಾರತ ಬೇರೆ ರೀತಿಯಲ್ಲಿರುತ್ತಿತ್ತು.. ಅಷ್ಟೇ.

ವಸುಂಧರಾ ಕದಲೂರು. 

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

2 thoughts on “

  1. ಮನಸ್ಸಿಗೆ ಆಪ್ತವಾಗುವ ರೀತಿಯಲ್ಲಿ ಬರೆದಿರುವಿರಿ

Leave a Reply

Back To Top