ನನ್ನ ಅಪ್ಪ …ಒಂದು ನೆನಪು

ನನ್ನ ಅಪ್ಪ …ಒಂದು ನೆನಪು

(ಭಾಗ–ಒಂದು)

ನಾಗರತ್ನ ಎಂ ಜಿ

Fathers Day ART PRINT Lover of my Soul Gift for Daughter Our | Etsy

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಅಪ್ಪ. ಆದರೆ ಆ ಇಲಾಖೆಗೆ ಬೇಕಾಗಿದ್ದ ದರ್ಪವಾಗಲಿ ಕೋಪವಾಗಲಿ ಬೈಗುಳವನ್ನಾಗಲಿ ಕಡೆಯ ತನಕ ರೂಢಿಸಿಕೊಳ್ಳಲಿಲ್ಲ ಅವರು.ಯಾವಾಗಲೂ ನಗುತ್ತಿದ್ದ ಅಪ್ಪನ ಮುಖದಲ್ಲಿ ನಗು ಮಾಸಿದ್ದು ಕಂಡೆ ಇಲ್ಲ ನಾವು. ಅಮ್ಮನನ್ನು ಕಂಡರೆ ಇನ್ನಿಲ್ಲದ ಪ್ರೀತಿ ಅಪ್ಪನಿಗೆ. ಹೆಸರಿನಿಂದ ಕರೆಯದೆ ಇವಳೇ ಇವಳೇ ಎಂದು ಅವರ ಹಿಂದೆ ಮುಂದೆ ಸುತ್ತುವುದನ್ನು ನೋಡುವುದೇ ನಮಗೊಂದು ಚಂದ.

ಅವರ ಇಲಾಖೆಯಲ್ಲಿ ಡ್ಯೂಟಿ ಮಾಡುವ ಸಮಯದಲ್ಲಿನ ಅನುಭವಗಳನ್ನು ರೋಚಕ ಕಥೆಯನ್ನಾಗಿಸಿ ನಮಗೆ ಹೇಳುವಾಗ ರಾತ್ರಿಯ ನೀರವತೆಯಲ್ಲಿ ಬೆಚ್ಚಿ ಬೀಳುವಂತಾದರು ಉಸಿರು ಬಿಗಿ ಹಿಡಿದು ಅವರ ಅನುಭವಗಳನ್ನು ಕೇಳದೆ ನಮಗೆ ನಿದ್ರೆ ಹತ್ತುತ್ತಿರಲಿಲ್ಲ.

ಯಾವುದೋ ಕೊಲೆಯಾದ ಸಂದರ್ಭದಲ್ಲಿ ಮೇಲಧಿಕಾರಿಯೊಬ್ಬರು ಇವರನ್ನು ಹೆಣ ಕಾಯಲು ಬಿಟ್ಟಾಗ ಇಡೀ ರಾತ್ರಿ ಹೆಣದೊಂದಿಗೆ ಕಳೆದದ್ದು, ಹಳ್ಳಿಯೊಂದರಲ್ಲಿ ಒಳ ಜಗಳ ಬಿಡಿಸಲು ಹೋದಾಗ ಪೊಲೀಸರನ್ನೆಲ್ಲ ಪಾಳು ಮನೆಯೊಂದರಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚುವ ಯತ್ನ ಮಾಡಿದ್ದು..ಇಂತಹದೇ ಹಲವಾರು ಕಥೆಗಳು ಅವರ ಬತ್ತಳಿಕೆಯಲ್ಲಿದ್ದವು.

ಒಮ್ಮೆ ಪೊಲೀಸರಿಗೆ ಬೇಕಾಗಿದ್ದ ಕುಪ್ರಸಿದ್ದ ಕಳ್ಳನೊಬ್ಬ ನಮ್ಮೆ ಮನೆಯಲ್ಲೇ ಅಪ್ಪನ ಹಿತೈಷಿಯಂತೆ ಬಂದು ನಾಲ್ಕು ದಿನ ಇದ್ದು ನಮ್ಮೆಲ್ಲರನ್ನು ಮರಳು ಮಾಡಿ, ಕುಡಿಯುವ ಅಭ್ಯಾಸವಿಲ್ಲದ ಅಪ್ಪನಿಗೆ ಕುಡಿಸಿ ಫಜೀತಿ ಮಾಡಿ ಕಡೆಗೊಮ್ಮೆ ಸಿಕ್ಕಿ ಬಿದ್ದಾಗ ಏನು ತಪ್ಪೇ ಮಾಡದ ಅಪ್ಪನನ್ನು  ಇಲಾಖೆಯ ವಾಹನದಲ್ಲಿ ನೆರೆ ಹೊರೆಯವರ ಅನುಮಾನದ ದೃಷ್ಟಿಯ ಮುಂದೆ ಕರೆದೊಯ್ದದ್ದು ದುರಂತ. ಅಪ್ಪನ ಮುಗ್ಧ ಸ್ವಭಾವದ ಅರಿವಿದ್ದ ಅಧಿಕಾರಿಗಳು 2 ಘಂಟೆಯಲ್ಲೇ ಅವರನ್ನುತಿರುಗಿ ಕಳಿಸಿದಾಗಳೇ ನಾವೆಲ್ಲ ನಿಟ್ಟುಸಿರು ಬಿಟ್ಟಿದ್ದು. ಆ ಕಳ್ಳ ನಮ್ಮ ಜೊತೆಯಲ್ಲೇ ಇದ್ದದ್ದು ನೆನೆಸಿಕೊಂಡರೆ ಈಗಲೂ ಮೈ ನಡುಕ ಬರುತ್ತದೆ.

ಎಡೆ ಬಿಡದೆ ಕಾಡುತ್ತಿದ್ದ ಸಣ್ಣ ಎದೆ ನೋವಿನ ಕಾರಣದಿಂದ ಅಪ್ಪ ಸ್ವಯಂ ನಿವೃತ್ತಿ ಪಡೆದಾಗ ನನಗಿನ್ನು 11 ವರ್ಷ.  ಅಪ್ಪನ ಕೆಲಸವನ್ನು ಅಮ್ಮನಿಗೆ ಕೊಡುವ ಕೃಪೆ ಮಾಡಿದಾಗ ಆಗಿನ ಕಾಲದಲ್ಲಿ ದುಡಿಯುವ ಕೆಲವೇ ಹೆಣ್ಣು ಮಕ್ಕಳಲ್ಲಿ ಅಮ್ಮ ಒಬ್ಬರಾದರು ಮತ್ತೆ ಅಪ್ಪ ಮನೆ ಮತ್ತು ಮೂರು ಮಕ್ಕಳನ್ನು ಸಂಭಾಳಿಸುವ ಗೃಹಿಣಿಯಾದರು. ಅಮ್ಮ ನಾಲ್ಕನೇ ಬಾರಿಗೆ ಗರ್ಭಿಣಿಯಾದಾಗ ಮಾಗಡಿ ರಸ್ತೆಯಿಂದ ರೈಲ್ವೆ ನಿಲ್ದಾಣದವರೆಗೂ ನಡೆದೇ ಹೋಗುತ್ತಿದ್ದ ಗರ್ಭಿಣಿ ಅಮ್ಮನನ್ನು ಬೆಳಗಿನ ಜಾವ 5 ಘಂಟೆಯಲ್ಲಿ ಸೈಕಲ್ ಮೇಲೆ ಕೂರಿಸಿಕೊಂಡು ಬಿಟ್ಟು ಬರುತ್ತಿದ್ದರು.

ಇದೆಲ್ಲ ನಮ್ಮನ್ನು ಸಾಕಲು ನಮ್ಮ ಏಳಿಗೆಗಾಗಿ ಅವರು ಪಡುತ್ತಿದ್ದ ಬವಣೆ ಎಂದು ನಮಗಾಗ ತಿಳಿಯುವ ಪ್ರಬುದ್ಧತೆ ಇರಲಿಲ್ಲ.

ಕೆಲಸಕ್ಕೆ ಸೇರಿದ ಕೂಡಲೇ ದ್ವಿಚಕ್ರ ವಾಹನ, ಮದುವೆಯಾದ ಕೂಡಲೇ ಕಾರಿನಲ್ಲಿ ಓಡಾಡಿದ ನಮಗೆ ಅವರು ಪಟ್ಟ ಬವಣೆಯ ಪರಿವೆಯೇ ಇರಲಿಲ್ಲ. ನಮ್ಮ ಪುಟ್ಟ ಪ್ರಪಂಚದಲ್ಲಿ ನಾವು ಹಾಯಾಗಿದ್ದೆವು. ಯಾವಾಗಲೋ ಒಮ್ಮೆ ಈಗ ನೆನಪಾದರೆ ಅವರ ತ್ಯಾಗಕ್ಕೆ ನಾವೇನು ಕೊಟ್ಟೆವು ಎನಿಸುತ್ತದೆ.

ಸಂಜೆ ಅಮ್ಮ ಬಂದ ಕೂಡಲೇ ಅವಳಿಗೆ ಕಾಫಿ ಕೊಟ್ಟು ಉಪಚರಿಸುತ್ತಿದ್ದರು. ಯಾವಾಗಲಾದರೊಮ್ಮೆ ಅಮ್ಮ ಮನೆಯಲ್ಲಿದ್ದರೆ ಇವಳೇ.. ಇವಳೇ ..ಎಂದು ಅವಳ ಸೆರಗು ಹಿಡಿದು ಮಗುವಿನಂತೆ ಓಡಾಡುತ್ತಿದ್ದರು.

ಬುದ್ಧಿ ತಿಳಿದಾಗಿನಿಂದ ಅಡಿಗೆ ಮನೆಯಲ್ಲಿ ಅಪ್ಪನನ್ನೇ ನೋಡಿದ್ದ ನಮಗೆ ಅವರ ನಳ ಪಾಕದ ರುಚಿ ಇನ್ನು ನಾಲಿಗೆಯಲ್ಲೇ ಇದ್ದಂತಿದೆ. ಅವರಿಂದಲೇ ಪಾಕ ಶಾಸ್ತ್ರ ಕಲಿತ ನಾನು, ನನ್ನಕ್ಕ ಈಗಲೂ ಸಿಹಿ ಕೂಟು, ಹುಳಿ ತೊವ್ವೆ ಮಾಡಿದರೆ ಏನಂದ್ರು ಅಣ್ಣ ಮಾಡಿದಷ್ಟು ಚೆನ್ನಾಗಿಲ್ಲ ಅನ್ನಿಸುವುದು ನಿಜ.

ಮೂರು ಹೆಣ್ಣು ಮಕ್ಕಳ ಮಧ್ಯೆ ಒಬ್ಬನೇ ಗಂಡು ಮಗ ನನ್ನ ಅಣ್ಣ. ಅವನನ್ನು ಎಂದೂ ಹೆಸರಿನಿಂದ ಕರೆದದ್ದೇ ನೆನಪಿಲ್ಲ ನಮಗೆ. ತುಂಬು ಪ್ರೀತಿಯಿಂದ ಲೇ ಹುಡುಗ ಇಲ್ಲಿ ಬಾ ಎಂದರೇನೇ ಸಮಾಧಾನ ಅವರಿಗೆ.

ಹುಟ್ಟುತ್ತಲೇ ಸೂಕ್ಷ್ಮ ಆರೋಗ್ಯ ಹೊತ್ತು ಹುಟ್ಟಿದ

ಹಠಮಾರಿಯಾದ ಕಡೆಯ ತಂಗಿಯನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಅವಳನ್ನು ಅಮ್ಮನ ಬೈಗಳಿಂದ ಕಾಪಾಡಲು ತಪ್ಪನ್ನೆಲ್ಲ ತಮ್ಮ ಮೇಲೆ ಹಾಕಿಕೊಳ್ಳುತ್ತಿದ್ದ ಕರುಣಾಮಯಿ ಅಪ್ಪ

ಮೂರೇ ತಿಂಗಳ ರಜೆಯ ನಂತರ 2 ತಿಂಗಳ ಹಸುಗೂಸನ್ನು ಬಿಟ್ಟು ಅಮ್ಮ ಕೆಲಸಕ್ಕೆ ವಾಪಸ್ ಹೋದಾಗ ಅಮ್ಮನಾಗಿ ಅಪ್ಪನಾಗಿ ಮಗಳನ್ನು ಸಾಕಿದರು. ನನ್ನಕ್ಕ ಅವಳಿಗೆ ಎರಡನೇ ತಾಯಿಯಾದಳು.

ಮೊದಲಿನಿಂದಲೂ ಅಪ್ಪನೊಂದಿಗೆ ನಮಗೆ ಸಲಿಗೆ. ಅಮ್ಮನನ್ನು ಕಂಡರೆ ಭಯ. ಅಮ್ಮ ಕೆಲಸಕ್ಕೆ ಹೋದಾಗ ಬಿಂದಾಸಾಗಿ ಆಚೆ ಕುಣಿಯುತ್ತಿದ್ದ ನಮ್ಮನ್ನು ಅವಳು ಬರುವ 5 ನಿಮಿಷ ಮುಂಚೆ ಕರೆದು ಓದಲು ಕೂರಿಸಿ ಅವಳ ಹಿಟ್ಟಿನ ಕೋಲಿನ ಒದೆಗಳಿಂದ ನಮ್ಮನು ಬಚಾವು ಮಾಡುತ್ತಿದ್ದರು.

ಸಕ್ಕರೆ ಖಾಯಿಲೆ ಬಂದಾಗ “ಹಣ್ಣೆಲೆ ಚಿಗುರಿದಾಗ” ಕಾದಂಬರಿಯ ರಾಯರಂತೆ ತಮಗೇನೋ ಭಾರಿ ರೋಗ ಬಂದಿದೆ ಎಂಬಂತೆ ಎಲ್ಲರಲ್ಲೂ ಹೇಳಿಕೊಳ್ಳುತ್ತಿದ್ದರು.

ಹಬ್ಬದ ದಿನ ಸಿಹಿ ತಿಂಡಿ ಜಾಸ್ತಿ ಮಾಡಿ ಬೇಡ ಬೇಡ ಎಂದರೂ ಹೆಚ್ಚಿಗೆ ಬಡಿಸಿ ಹೆಚ್ಚಾದರೆ ಉಪ್ಪಿನಕಾಯಿ ನೆಂಚಿಕೊಂಡು ತಿನ್ನಿ ಎಂದು ಮುಸಿ ಮುಸಿ ನಕ್ಕರೆ..ಹೆಚ್ಚಿಗೆ ಮಾಡಿ ಮಕ್ಕಳಿಗೇಕೆ ಹಿಂಸೆ ಮಾಡುತ್ತೀರಿ ಎಂದು ಅಮ್ಮನ ಬಳಿ ಬೈಸಿಕೊಳ್ಳುತ್ತಿದ್ದರು.

ಸ್ವಭಾವತಃ ಶಾಂತ ಮೂರ್ತಿಯಾದ ಅಪ್ಪ ಒಮ್ಮೆ ಕೆಂಡಾಮಂಡಲವಾದದ್ದು ಜೀವನದಲ್ಲಿ ಮೊದಲ ಬಾರಿ ಮತ್ತು ಅದೇ ಕೊನೆಯ ಬಾರಿ ಸಹ.  ಅಪ್ಪನ ಆ ರೂಪ ನೆನೆದರೆ ಈಗಲೂ ನಡುಕ ಬರುತ್ತದೆ

ಅಪ್ಪನ ಅಮ್ಮ ಅಂದರೆ ಅಜ್ಜಿಗೂ ಅಮ್ಮನಿಗೂ ಅಷ್ಟಕ್ಕಷ್ಟೇ. ಅತ್ತೆ ಸೊಸೆಯ ಜಗಳ ಹತ್ತುವುದಿಲ್ಲ ಹರಿಯುವುದಿಲ್ಲ ಎಂಬಂತೆ ನಮಗೆಲ್ಲ ಅಭ್ಯಾಸವಾಗಿತ್ತು.

ಎಲ್ಲರೊಂದಿಗೆ ನಗು ನಗುತ್ತಾ ಹಾಸ್ಯ ಮಾಡಿಕೊಂಡೆ ಇರುತ್ತಿದ್ದ ಅಪ್ಪ ಎಂದಿಗೂ ಅವರ ಮಧ್ಯ ಹೋಗುತ್ತಲೇ ಇರಲಿಲ್ಲ. ಒಮ್ಮೆ ಆ ಜಗಳ ತಾರಕ್ಕಕೇರಿ ಅಮ್ಮ ಅಜ್ಜಿ ಮನೆಯಲ್ಲೇ ಇರಬಾರದು ಎಂದು ಪಟ್ಟು ಹಿಡಿದಾಗ ಹೇಳುವಷ್ಟು ಹೇಳಿದ ಅಪ್ಪ ಕಡೆಗೆ ತಾಳ್ಮೆಗೆಟ್ಟು ಧಡ್ ಎಂದು ಎದ್ದು ನೀರೊಲೆಯಲ್ಲಿ ಉರಿಯುತ್ತಿದ್ದ ಕೊಳ್ಳಿ ಹಿಡಿದು ಮೈ ಸುಟ್ಟುಕೊಳ್ಳಲು ಹೋದಾಗ ಅವರನ್ನು ತಡೆಯಲು ಹೋಗಿ ಅಮ್ಮ ಕುಸಿದು ಬಿದ್ದದ್ದನ್ನು ನೋಡಿ ನಾವೆಲ್ಲ ಏನೂ ತೋಚದೆ ನಡುಗುತ್ತ ನಿಂತಿದ್ದು ಮನದಲ್ಲಿ ಇನ್ನು ಹಸಿರು. ಆ ನಂತರ ಅಜ್ಜಿ ಅಮ್ಮನ ಬಳಿ ಕ್ಷಮೆ ಕೇಳಿ ಒಳ ಬಂದಾಗ ನಮಗೆಲ್ಲ ಅಮ್ಮ ಯಾಕೆ ಹೀಗೆ ಮಾಡುತ್ತಾಳೆ ಎನಿಸಿತ್ತು.

ಅಪ್ಪ ಮತ್ತು ಅಜ್ಜಿಯ ಸಂಬಂಧ ಏನೋ ಒಂದು ರೀತಿಯ ವಿಶಿಷ್ಟ ಎಂದು ಈಗ ಅನಿಸುತ್ತದೆ ನಮಗೆ. ಯಾವಾಗಲೂ ಅಪ್ಪನ ಮೇಲೆ ಸಿಡುಕುವ ಅಜ್ಜಿ, ನಗು ನಗುತ್ತಲೇ ಅವರನ್ನು ಯಾವಾಗಲೂ ರೇಗಿಸುವ ಅಪ್ಪ. ಬೆಳಿಗ್ಗೆ 5 ಘಂಟೆಗೆ ಎದ್ದು ಅಡಿಗೆ ಮನೆ ಸೇರಿದ ಅಪ್ಪನಿಗೆ ಅಜ್ಜಿ ಅಸಿಸ್ಟೆಂಟ್ ಕುಕ್. ರುಬ್ಬುವುದು, ಕುಟ್ಟುವುದು, ಹೆಚ್ಚುವುದು ಹೀಗೆ. ರುಬ್ಬಲು ಶುರು ಮಾಡಿದರೆ ಅಣ್ಣನ ಕೀಟಲೆ ಶುರು. ಬೇಗ ಬೇಗ ಕೈ ಆಡಿಸಿ..ಎಷ್ಟು ಹೊತ್ತು, ನುಣ್ಣಗೆ ರುಬ್ಬಿ..ಹೇಗಿರಬೇಕು ಅಂದ್ರೆ ಗ0ಧಾನಾದ್ರು ಸ್ವಲ್ಪ ತರಿ ಅನ್ಬೇಕು ಹಾಗೆ ರುಬ್ಬಿರ್ಬೇಕು..ಎಂದು ರೇಗಿಸಿದರೆ ಅರ್ಧದಲ್ಲೇ ಕೈ ಒದರಿ ನೀನೇ ರುಬ್ಬಿಕೊ ಎಂದು ಎದ್ದು ಹೋಗುವ ಅಜ್ಜಿ ಅವರನ್ನು ಓಲೈಸಿ ಮತ್ತೆ ಕರೆಯುವ ಅಪ್ಪ..ಹೀಗೆ ಅವರಿಬ್ಬರ ಮಧ್ಯೆ ನಡೆಯುವ ಹುಸಿ ಮುನಿಸಿನ ಜಗಳ  ನಮ್ಮೆಲ್ಲರಿಗೂ ಒಂದು ರೀತಿಯ ಮನರಂಜನೆ.

ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸಬೇಕೆಂದು ಓದಿಸಿದ ಅಪ್ಪ ಅಕ್ಕನಿಗೆ ಸರ್ಕಾರಿ ಕೆಲಸ ಸಿಕ್ಕಿದಾಗ ಚಿಕ್ಕ ಹುಡುಗನಂತೆ ಸಂಭ್ರಮಿಸಿದ್ದರು.

SSLC ಯಲ್ಲಿ ಫಸ್ಟ್ ಕ್ಲಾಸ್ ಬಂದ್ರೆ ನಿಂಗೆ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಕೊಡಿಸ್ತಿನಿ ಅಂತ ಇದ್ದ ಅಪ್ಪನ ಜತೆ ಅಂಚೆ ಕಚೇರಿಗೆ ಹೋದರೆ ಬಿಟ್ಟ ಕಣ್ಣು ಬಿಟ್ಟಂತೆ ಅಲ್ಲಿ ಕೆಲಸ ಮಾಡುವವರನ್ನು ನೋಡುತ್ತಾ ನನ್ನನ್ನು ಅವರ ಜಾಗದಲ್ಲಿ ಕಲ್ಪಿಸಿಕೊಳ್ಳುತ್ತಿದ್ದೆ.

ಕಡೆಗೊಮ್ಮೆ ನನಗೆ ಪೋಸ್ಟ್ ಆಫೀಸ್ನಲ್ಲೇ ಕೆಲಸ ಸಿಕ್ಕಿದ್ದಾಗ ಸ್ವರ್ಗ ಮೂರೇ ಗೇಣು ಎಂಬಂತೆ ಖುಷಿ ಪಟ್ಟಿದ್ದರು.

ಅಕ್ಕನೊಂದಿಗೆ ಕೆಲಸ ಮಾಡುತ್ತಿದ್ದ ಮತ್ತು ಅವಳನ್ನೇ ಮದುವೆಯಾಗುವ ಇಚ್ಛೆ ವ್ಯಕ್ತ ಪಡಿಸಿದ ಹುಡುಗನ ಮನೆಯವರನ್ನು ಒಪ್ಪಿಸಲು ಶತ ಪ್ರಯತ್ನ ಮಾಡಿ ಸೋತ ಅಪ್ಪ ಕಡೆಗೆ ಅವರಿಬ್ಬರ ಪ್ರೀತಿಗೆ ಸೋತು ಭಾವನ ಮನೆಯವರ ವಿರುದ್ಧ ಇಬ್ಬರ ಮದುವೆ ಮಾಡಿ ಮುಗಿಸಿದ್ದರು. ಆ ನಂತರದಲ್ಲಿ ಅಕ್ಕ ಗಂಡನ ಮನೆಯವರ ಮನ ಗೆದ್ದು ಒಟ್ಟಿಗೆ ಸಂತೋಷವಾಗಿದ್ದು ಕಂಡು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು.

ಅಪ್ಪನ ಪ್ರೀತಿ ಕಾಳಜಿ ಸೇವೆ ಹೆಂಡತಿ ಮಕ್ಕಳಿಗೆ ಸೀಮಿತವಾಗಲಿಲ್ಲ.

ಮದುವೆಯಾಗಿ ಒಂದು ವರ್ಷಕ್ಕೆ ಅಕ್ಕ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಾಗ ಮೂರೇ ತಿಂಗಳಿಗೆ ಕೆಲಸಕ್ಕೆವಾಪಸ್ ಹೋಗಬೇಕಾದ ಅಕ್ಕ ಮತ್ತು ಉದ್ಯೋಗಸ್ಥ ಅಮ್ಮ, ಹಳ್ಳಿಯಲ್ಲಿ ನೆಲೆಸಿದ್ದ ಅಕ್ಕನ ಅತ್ತೆ ಮಾವ ..ಮಗುವನ್ನು ನೋಡುವವರ್ಯಾರು ಎಂಬ ಚಿಂತೆಗೆ ನಾನಿಲ್ಲವೇ ಮಗಳೇ ಎಂದು ಇತಿಶ್ರೀ ಹಾಡಿದ್ದರು.

 ಬೆಳಿಗ್ಗೆ ತಿಂಡಿ ತಿಂದು ಅಕ್ಕನ ಮನೆಗೆ ಹೋಗಿ ಮೊಮ್ಮಗನ ಬೇಬಿ ಸಿಟ್ಟಿಂಗ್ ಮಾಡಿ ರಾತ್ರಿ ಊಟಕ್ಕೆ ಮನೆಗೆ ಬರುವ ಹೊಸ ಡ್ಯೂಟಿ ಆರಂಭವಾಯ್ತು ಅಪ್ಪನಿಗೆ.

ಅಮ್ಮನಿಗೆ ಕಚೇರಿ ಅಪ್ಪನಿಗೆ baby sitting ನಾನು ಕಾಲೇಜು ಓದಿನ ಮಧ್ಯೆ ಅಡಿಗೆ ಮನೆಯ ಅಧಿಪತ್ಯವನ್ನು ವಹಿಸಿಕೊಂಡೆ. 17 ನೆಯ ವಯಸ್ಸಿಗೆ ಬ್ರಾಹ್ಮಣರ ಮನೆಯಲ್ಲಿ ದಿನ ನಿತ್ಯ ಮಾಡುವ ಅಡಿಗೆಯನ್ನು ತುಂಬಾ ಚೆನ್ನಾಗಿ ಮಾಡ್ತೀಯ ಎಂದು ಹೇಳಿಸಿಕೊಳ್ಳುವ ಮಟ್ಟಿಗೆ ಕಲಿತುಕೊಂಡೆ.

(ಮುಂದುವರೆಯುವುದು)

*********************************

Leave a Reply

Back To Top