ಹೈಕುಗಳ ಸುತ್ತ ಒಂದಷ್ಟು ನನ್ನದೇ ಮಾತು ಕಥೆ-….

ಹೈಕುಗಳ ಸುತ್ತ ಒಂದಷ್ಟು

ನನ್ನದೇ ಮಾತು ಕಥೆ-….

(ಹೊನ್ನಗರಿಯ ಹೈಕುಗಳು ಸಂಕಲನದಲ್ಲಿ ಹೈಕು ಎಂದರೆ ಏನು ಎಂಬ ಪುಟ್ಟ ಪರಿಚಯಾತ್ಮಕ ಬರಹ)

ಸಿದ್ಧರಾಮ ಹೊನ್ಕಲ್

ಈ ಹೈಕು ಅನ್ನೋದು ಜಪಾನಿ ಕಾವ್ಯ ಪ್ರಕಾರ.ಜಪಾನಿಗರು ತುಂಬಾ ಕುಳ್ಳರು ಹಾಗೂ ಅಪಾರ ಶ್ರಮ ಜೀವಿ ಚೆಲುವರು. ಅವರಂತೆಯೇ ಅವರ ಕಾವ್ಯ ಪ್ರಕಾರ ಹೈಕು ಸಹ ತುಂಬಾ ಪುಟ್ಟದು.ಹಾಗೇ ಅವರಷ್ಟೇ ಮೌಲ್ಯಯುತವಾದುದೂ. ಒಂದೊಂದು ಹೈಕುಗೆ ಒಂದೊಂದು ಸೆಮಿನಾರ್ ಮಾಡುವಷ್ಟು ಅರ್ಥ ಇರುತ್ತದೆ ಎಂಬುದು ಕೇವಲ ಔಪಚಾರಿಕ ಮಾತಲ್ಲ.ಮೂರು ಸಾಲಿನಲ್ಲಿ ಒಂದು ಮಹಾ ಕಾವ್ಯವನ್ನೇ ಹೇಳಬಹುದು ಅನ್ನುತ್ತಾರೆ.ಅದು ಹೈಕುವಿನ ಶಕ್ತಿ.ಹಾಯ್ಕು-ಹೈಕು ಎಂಬ ಈ ಪ್ರಕಾರವು ಕನ್ನಡಕ್ಕೆ ಬಂದ ಹೊಸ ಹೊಳುಹುಗಳಂತೆ ಸುಳಿದಿವೆ.ಹೈಕು ಕವಿಗಳು  ಇಂಗ್ಲಿಷ್ ನಲ್ಲಿ ಬಂದ ಅನೇಕ ಹಾಯ್ಕುಗಳನ್ನು ಕನ್ನಡಕ್ಕೆ ತಂದಿದ್ದಾರೆ.ಈ ಕೆಲಸ ಹಿರಿಯರಾದ ಎ.ಕೆ.ರಾಮಾನುಜನ್ ಅವರಿಂದ ಹಿಡಿದು ಇತ್ತೀಚಿನ ಬಹು ಭಾಷಾ ಬಲ್ಲ ಎಲ್ಲ ಹೈಕು ಕವಿಗಳ ತನಕವು ಅನುವಾದದ ಕೆಲಸ ನಿರಂತರವಾಗಿ ನಡೆದೆ ಇದೆ.ಹಾಯ್ಕುಗಳ ಮೂಲ ಜಪಾನ್ ದೇಶದ್ದಾದರೂ ಕಾಲ ದೇಶಗಳನ್ನು ದಾಟಿ ಅನೇಕ ಭಾಷೆಗಳಲ್ಲಿ ಈ ಹೈಕು ಮೈ ಚಾಚಿಕೊಂಡು ಹೊಸ ಹೊಸ ರೂಪದಲಿ ಮೈದೆಳೆದಿದೆ.ತಳೆಯುತ್ತ ಬೆಳೆಯುತ್ತಲಿದೆ.ಇದು ಮುಖ್ಯವಾಗಿ ಪ್ರಕೃತಿ ಹಾಗೂ ಆಧ್ಯಾತ್ಮಿಕ ಬೇಸ್ ಹೊಂದಿರುವ ಕಾವ್ಯ ಪ್ರಕಾರ.

     ಇತ್ತೀಚೆಗೆ ನಾನು ಹೈಕು ಸಂಕಲನ ತರುವ ಮನಸು ಮಾಡಿದ್ದರಿಂದ ಈಗಾಗಲೇ ಈ ಹೈಕು ಗುಂಪುಗಳಲ್ಲಿ ಆಗಾಗ ಜುಗಲ್ ಗೆ ಒಂದಷ್ಟು ಹೈಕು ಬರೆದದ್ದು ಬಿಟ್ಟರೆ ಹೈಕು ಬರೆಯಲೇಬೇಕೆಂದು ಧ್ಯಾನಿಸಿ ಬರೆಯಲು ಕುಂತದ್ದು ತೀರಾ ಕಡಿಮೆ ಇತ್ತು.ಆದರೆ ಕಳೆದ ಎರಡು ವರ್ಷಗಳಿಂದ ಈ ಹೈಕುಗಳ ಆಂತರ್ಯದ ಅಧ್ಯಯನ,ಆಸಕ್ತಿ ಒಳಗೊಳಗೆ ನಡೆದೇ ಇತ್ತು.ಗಜಲ್ ವ್ಯಾಮೋಹಕ್ಕೆ ಬಿದ್ದು ಸುಮಾರು‌ ನೂರರ ಸಮೀಪ ಹೈಕು ಬರೆದು ನಿಲ್ಲಿಸಿದ್ದೆ.

   ಹಾಯ್ಕುವಿನ ಪ್ರಖ್ಯಾತ ಲೇಖಕ ಬಾಶೋವಿನ್ ಅವರು ಯಾರು ಐದು ಹೈಕು ಬರೆಯುವರೋ ಅವರು ಕವಿ.ಅವರ ಪ್ರಕಾರ ಯಾರು ಹತ್ತು ಹೈಕು ಬರೆಯುತ್ತಾರೋ ಅವರು  ಮಹಾಕವಿ ಎಂದು ಹೇಳಿದ್ದಾರೆ. ಇದರ ಅರ್ಥ ಹೈಕು ಬರೆಯೋದು ಸುಲಭವಲ್ಲ ಅಂತ ಅರ್ಥ.

 ಸಮುದ್ರವನ್ನು ಬೊಗಸೆಯಲ್ಲಿ ಹಿಡಿಯುವ ಪ್ರಯತ್ನ ಅಂತ ನನಗನಿಸುತ್ತದೆ.ಹಿಂದೆ ಆರಂಭದಲ್ಲಿ ನಾ ಹೈಕು ಗುಂಪಿನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದು ಉಂಟು.

      ನಮ್ಮದೇ ನೆಲದ ಸರ್ವಜ್ಞನ ತ್ರಿಪದಿ, ಶರಣರ ವಚನಗಳು, ಹನಿಗವನ, ಚುಟುಕು ಇರುವಾಗ ನಾವೇಕೆ ಈ ೫/೭/೫ ಅಕ್ಷರಗಳ ಜಪಾನಿಯರ ಈ ವಿದೇಶಿ ಪುಟ್ಟ ಕನ್ಯೆಗೆ ಲೈನು ಹೊಡೆಯಲು, ಅವಳನ್ನು ನಮ್ಮ ಪ್ರೇಮಕ್ಕೆ ಒಲಿಸಲು, ಒಗ್ಗಿಸಲು ಕಷ್ಟ ಪಡಬೇಕು ಅಂತ ಬರೆದಿದ್ದ ನೆನಪು.

     ನಮ್ಮ ಭಾರತೀಯರ  ಹಣೆಬರಹವೇ ಇಷ್ಟು.ಸ್ವದೇಸಿ ಜಾಗರಣದವರು ಎಷ್ಟು ಹೇಳಿದರೂ ಸಹ ನಾವು ವಿದೇಶಿ ಬಿಳೀ ಬಣ್ಣಕ್ಕೆ ಅನುಗಾಲದಿಂದಲೂ ಜೋತು ಬೀಳೋರೆಂದು ಫೇಮಸ್ ಆಗಿದ್ದೇವೆ. ಹ್ಯಾಗೂ ಪರ್ಷಿಯನ್ ದೇಶದ ಉರ್ದು ಗಜಲ್ ಕಾವ್ಯ ಕನ್ನಿಕೆಗೆ ಸೋತು ಗೆದ್ದಾಗಿದೆ. ಈ ಜಪಾನಿ ಕನ್ನಿಕೆಗೂ ಒಂದಷ್ಟು ಮುಟ್ಟಿ ತಟ್ಟಿ ನೋಡೋಣ.ಇದು ಒಂದು ಎಕ್ಸಪಿರಿಮೆಂಟ್ ಆಗಲಿ ಅಂತ ಇದೀಗ ಹೈಕು ಕಡೆಗೆ ಒಂದು ಹೆಜ್ಜೆ ನನ್ನದು. ಒಲಿಯುವಳೋ, ಮುನಿವಳೋ ನೋಡೋಣ.

     ಈ ಹೈಕುಗಳು ಪ್ರಕೃತಿ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯ ಒಂದು ಅಸದ್ರುಶ್ಯ ಕಾವ್ಮಚಿತ್ರಣ ಕೊಡುವ, ಕಿರಿದರಲ್ಲಿ ಹಿರಿದಾದ ಅರ್ಥಕೊಡುವುದುಂಟು.ಕೇವಲ ೫/೭/೫ ಅಕ್ಷರಗಳಿಂದ ಬರೆದುದೆಲ್ಲ ಹೈಕು ಆಗುವ ಹಾಗಿದ್ದರೆ,ಇಲ್ಲಿ ಹೀಗೆ ಹೈಕು ಬರೆದವರೆಲ್ಲ ಮಹಾ ಕವಿಗಳೇ ಆಗಿ ಬಿಟ್ಟಿರೋರು.ಬಹಳ ಜನ ಹೀಗೆ ಬರೆಯಲು ಹೋಗಿ ಸೋತಿದ್ದಾರೆ. ಕೆಲವರು ಗೆದ್ದಿದ್ದಾರೆ.

     ಹನಿಗವನ ಬರೆಯಲಿಕ್ಕೆ ಒಂದು ಕಾಲದಲ್ಲಿ ಫೇಮಸ್ ಇದ್ದ ನಾನು,ಐದಾರು ನೂರು ಹನಿಗವನ ಬರೆದವನು.ನನಗೆ ಇದು ಬೇಗ ಒಗ್ಗಬೇಕು.ಆದರೆ ಧ್ಯಾನಸ್ಥ ಮನಸ್ಥಿತಿಯಲ್ಲಿ ಕೂಡಲೇ ಆಗುತ್ತಿರಲಿಲ್ಲ.ಕುಂತರೆ ಖಂಡಿತಾ ಗೆಲ್ಲಬಲ್ಲೆ.ಇಲ್ಲಿಯ ಕೆಲ ಹೈಕುಗಳು ಅಪಾರ ಮೆಚ್ಚುಗೆ ಪಡೆದದ್ದು ನೋಡಿದಾಗ, ಧ್ಯಾನಸ್ಥ ಮನಸ್ಥಿತಿ ಮೈಗೂಡಿರಬಹುದೇ? ಇದೀಗ ಹೈಕು ಬರೆಯುವ‌ ನಂಬಿಕೆ ಬಂದಿದೆ.ತಾವು ಅದನ್ನು ದೃಡಿಕರಿಸಬೇಕಿದೆ.

ಹೈಕುಗಳನ್ನು ಕನ್ನಡದ ಬಹುಮುಖ್ಯ ಹೈಕು ಲೇಖಕರಾದ ಡಾ.ಕೆ.ಬಿ.ಬ್ಯಾಳಿಯವರು, ಜಂಬಣ್ಣ ಅಮರಚಿಂತ ಅವರು, ಮುಂತಾದ ಕೆಲವರು ಸಾಕಷ್ಟು ಬರೆದು ಒಂದು ಗಟ್ಟಿ ಬುನಾದಿ ಹಾಕಿದ್ದಾರೆ.

    ಇನ್ನೂ ಎಪ್ಪತ್ತರ ದಶಕದಲ್ಲಿ ಹೈಕುಗಳನ್ನು ಮೊಟ್ಟ ಮೊದಲು ಕನ್ನಡದಲ್ಲಿ  ಬರೆದು ಇದಕ್ಕೆ ಬುನಾದಿ ಹಾಕಿದವರು ನಮ್ಮದೇ ಚಂದ್ರಕಾಂತ ಕುಸುನೂರರು ಎಂದು ದಾಖಲಿಸಿರುವ ನಮ್ಮ ಕವಿ  ಜಂಬಣ್ಣ ಅಮರಚಿಂತ ರು ನೆನಪಾಗುತ್ತಾರೆ.ಆದರೆ ಕುಸನೂರರೂ ಸಹ ೧೭ ಸಿಲೆಬಲ್ ಗೆ ಸೀಮಿತ ಆದಂತಿಲ್ಲ.ಇದೇ ಹಾದಿಯಲ್ಲಿ ಯುವ ಲೇಖಕ ರಮಜಾನ್ ಹೆಬಸೂರು ಅವರು,ಡಾ.ಎ.ರವಿಂದ್ರನಾಥ ಅವರು ಹಾಗೂ ಇತರ ಅನೇಕರು ಸಹ ತಮ್ಮದೇ ಆದ ರೀತಿಯಲ್ಲಿ ೧೭ ಸಿಲೆಬಲ್ ಹಾಗೂ ಮೂರು ಸಾಲಿಗೆ ಸೀಮಿತ ಆಗದೇ ಉತ್ಕೃಷ್ಟ ಹಾಯಿಕು ನೀಡಿದ್ದಾರೆ.

 ಸಖಿಯ ಮನ

 ಅರಿತರೆ ಸ್ವರ್ಗವು

 ಕಾಲಡಿಯಲಿ….

  (ಹೊನ್ನು)

 ನಮ್ಮ ಕನ್ನಡದಲ್ಲಿನ ಚುಟುಕು,ತ್ರಿಪದಿ,ಹನಿಗವನಗಳಂತೆ ಈ ಹೈಕು ಸಣ್ಣದರಲ್ಲಿಯೇ ಒಂದು ಹಿರಿದಾದ ಅರ್ಥ ನೀಡುವ ಪುಟ್ಟ ಕಾವ್ಯ.ಜಪಾನಿಗರಂತೆ ಚಿಕ್ಕದು,ಬುದ್ದಿ ಶಾಲಿಯಾದುದೂ, ಕೊನೆಯ ಸಾಲಿನಲ್ಲಿ ಒಂದು ಪಂಚ್ ನೀಡಿ ಇಡೀ ಆ ಪುಟ್ಟ ಕಾವ್ಯಕ್ಕೆ ಅರ್ಥವಂತಿಕೆ ತರುವಂತಹದು.

ವಿಷಯ ಪ್ರಕೃತಿ, ಆಧ್ಯಾತ್ಮಿಕ ಇರಬಹುದಾದರೂ ಬರೆಯುವ‌ ಲೇಖಕನ  ಮನಸ್ಥಿತಿಗೆ ಸಂಬಂಧಿಸಿದ ವಿಷಯ ಅದು.ಆ ಲೇಖಕನ ಭಾವ ಲಹರಿ ಯಾವ ಕಡೆಗಾದರೂ ಚಲಿಸಿತು.ಆದರೆ ಸಾಂಪ್ರದಾಯಿಕ ಹೈಕು‌ ಇಂದಿಗೂ‌ ೫/೭/೫ ಸಿಲೆಬಲ್ ಮೂಲಕವೇ ಹೆಚ್ಚು ಜನಪ್ರಿಯ ಗೊಂಡಿದೆ.ಉದಾಹರಣೆಗೆ ಅನೇಕರು ಮೆಚ್ಚುಗೆ ಹೇಳಿದ ನನ್ನದೇ ಹೈಕು ನೋಡೋದಾದರೆ

 ಬಿತ್ತಿಕೋ ಒಮ್ಮೆ

 ನಿನ್ನೊಳಗೆ ನನ್ನನು

 ಮರವಾಗುವೆ…

ಇಂತಹದರಲ್ಲಿ ಒಂದು ಪಂಚ್ ಲೈನ್ ಇದೆ.ಅದು ಗರ್ಭಾಶಯದಲ್ಲಿ ಬಿತ್ತಿಕೋದೂ ಆಗಿರಬಹುದು. ಈ ಆದಿಗೆ ಅನಂತವಾದ ಭೂಗರ್ಭದಲ್ಲಿ ಬಿತ್ತುವುದೂ ಆಗಿರಬಹುದು. ಈ ಹೈಕು ಗೆ ಒಂದು ಸೆಮಿನಾರೆ ಮಾಡಬಹುದು.

ಹೀಗೆ ಈ ಹೈಕು ಐದು ಏಳು ಐದು ಪದ ಬಳಕೆಯ ಮೂಲಕ ಒಂದು ‌ವಿಶಿಷ್ಟವಾದ ಚಿತ್ರಣವನ್ನು ಓದುಗನಿಗೆ‌ ಕಟ್ಟಿ ಕೊಡಬೇಕಾಗುವುದು.ಮೊದಲ ಎರಡು ಸಾಲು‌ ಹನಿಗವನ,ಮಿನಿಗವನದಂತೆ ಸಾಗಿದ್ದರೂ ಸಹ ಕೊನೆಯ ಸಾಲಿನ ಪದ ಇಡೀ ಆ ಹೈಕು ಕಾವ್ಯದ ಆಶಯವನ್ನು ಓದುಗನ ಮನೋ ಪಟಲದ ಮೇಲೆ ಒಮ್ಮಲೇ ಮೂಡುವ ಒಂದು ಅಸದ್ರಶ್ಯ ಕಾವ್ಯ ಚಿತ್ರಣವಾಗಿ,ಮನೋ ಭೂಮಿಕೆಯ ಮೇಲೆ ಪ್ರತಕ್ಷವಾಗುವಂತಿರಬೇಕು.ಅದಕ್ಕೆ ಅನೇಕರು ಪಂಚ್‌ ಲೈನ್ ಅನ್ನುವದುಂಟು.ಅದಕ್ಕೆ ಪ್ರಾಸದ, ಗೇಯದ ಹಂಗು ಇರಬೇಕಿಲ್ಲ.ಇದ್ದರೂ ತಪ್ಪೇನು ಇಲ್ಲ. ಆದರೆ ಇಡೀ ಮೇಲಿನ ಎರಡು ಸಾಲಿನಲ್ಲಿ ಹೇಳದೇ ಉಳಿದದ್ದು ಇಲ್ಲಿ ಧ್ವನಿಸಿ ಬಿಡಬೇಕು.ಅದರಲ್ಲಿ ಆಳ,ತಿಳಿವು, ಆಧ್ಯಾತ್ಮಿಕತೆ,ನಿಜದ ಪ್ರತಿರೂಪ ಕಣ್ಣಿಗೆ, ಮನಸ್ಸಿಗೆ ಒಂದು ಅನುಭೂತಿಯಾಗಿ ಮೂಡುವಂತಿರಬೇಕು.ಅದು ಸಾರ್ಥಕ ಹೈಕುವಿನ‌ ಒಂದು ಗುಣ ಲಕ್ಷಣವಾಗಿದೆ.

ನಮ್ಮ ನವ್ಯ ಕಾವ್ಯದಂತೆ,ಹನಿಗವನದಂತೆ,ಮನ ಬಂದಷ್ಟು, ಮನ ಬಂದ ಕಡೆ ಸಾಲುಗಳು ಹರಿಯುವಂತಿಲ್ಲ. ಈ ಜಪಾನಿ ಚೆಲುವೆಗೆ ತನ್ನದೇ ಆದ ಒಂದು ಉಡುಪಿನ ಚೌಕಟ್ಟಿದೆ.ಅದು ೫/೭/೫ ರ ಪದ ಪ್ರಯೋಗ.ಒಂದೆರಡು ಸಿಲೆಬಲ್ ಹೆಚ್ಚು ಕಡಿಮೆಯಾದರೆ ಹೊಸ ಹೊಳವು, ಹೊಸ ಅರ್ಥ ಮೂಡಬಹುದಾದರೂ ಆ ಚೌಕಟ್ಟು ದಾಟುವಂತಿಲ್ಲ. ಅದು ದಾಟಿದರೆ ಅದು‌ ನಾನ್ ಸಿಲೆಬಲ್ ಹೈಕು ಆಗಿ ಪರಿಗಣಿಸಲಾಗುವುದು. ಹಾಗೇ ಬರೆಯುವ ಅನೇಕ ಪ್ರಯೋಗಶೀಲ ಲೇಖಕರು ಆ ಜಪಾನಿನಲ್ಲೂ ಇದ್ದಾರೆ, ನಮ್ಮಲ್ಲೂ ಇದ್ದಾರೆ.ನವೋದಯದ ನಂತರ ಬಂದ ನವ್ಯ, ಬಂಡಾಯ,ದಲಿತ ಕಾವ್ಯದಂತೆ ಈ ಜಪಾನಿ ಕಾವ್ಯದ‌ ಸಾಂಪ್ರದಾಯಿಕ ಛಂದಸ್ಸು ದಾಟಿದವರು ಅಲ್ಲೂ ಉಂಟು. ಇಲ್ಲಿಯು ಉಂಟು.ಅದನ್ನು ಯಾವುದೇ ದೇಶದ ಸಾಹಿತ್ಯದ ಸಂದರ್ಭದಲ್ಲಿಯು ನಿರಾಕರಿಸಲಾಗದು.

    ಈ ಹದಿನೇಳು‌ ಸಿಲೆಬಲ್ ಒಂದೇ ಸಾಲಿನಲ್ಲಿ ಬರೆಯುವವರು ಉಂಟು.ಮೊದಲು ಏಳು,ನಂತರ ಐದು ಐದು ಬರೆಯುವವರುಂಟು.ಒಟ್ಟಾರೆ ಹದಿನೇಳು ಸಿಲೆಬಲ್ ಸಾಕು ಅಂತ ನಾಲ್ಕು ಸಾಲು ಮಾಡಿರುವ‌ ಪ್ರಯೋಗ ಶೀಲರು ಉಂಟು.ಈ ಯಾವುವೂ ಈಗ್ಗೆ ಮೊದಲು ಅಲ್ಲ. ಕೊನೆಯವು ಅಲ್ಲ.ಆಯಾ ಲೇಖಕನ ಮನಸ್ಥಿತಿಯ ಮೇಲೆ ಹೋಗಲಿದೆ.ಕೆಲವರು ಸಾಂಪ್ರದಾಯಿಕ ಗಜಲ್ ಬರೆದಂತೆ ನಿಯಮಾವಳಿ ಪ್ರಕಾರ ಬರೆವವರುಂಟು.ಕೆಲವರು ತಾವು ನಡೆದಿದ್ದೆ ದಾರಿ ಅಂತ ಹೋಗುವುದುಂಟು.

ಅಂತಹ ಕೆಲವು ಮುಖ್ಯ ಹೈಕು ಗಮನಿಸಬಹುದು.

ಕುಮಾರಿಗೆ

ಬೆಳಕಿನ ಸೀರೆ ತರುವುದಿದೆ

ಬರುವಿರಾ

( ಚಂದ್ರಕಾಂತ ಕುಸನೂರು )

@

ಹಕ್ಕಿಯ ಎರಡು ರೆಕ್ಕೆಗಳು

ಹೂವಿಗೂ

ದಕ್ಕಲಿ

( ಹೆಬ್ಬಸೂರು ರಂಜಾನ್  )

@

ಆದರೆ ಬಹುತೇಕ ಈ ಜಪಾನಿ ಕಾವ್ಯ ಮೊದಲ ಸಾಲಿನಲ್ಲಿ ಐದು ಅಕ್ಷರ.ಎರಡನೇ ಸಾಲಿನಲ್ಲಿ ಏಳು ಅಕ್ಷರ.ಮತ್ತು ಮೂರನೇ ಕೊನೆಯ ಸಾಲಿನಲ್ಲಿ ಐದು ಅಕ್ಷರಗಳಲ್ಲಿ ರಚಿಸಲ್ಪಡುವ ಒಂದು ವಿಶಿಷ್ಟ ಕಾವ್ಯ ಪ್ರಕಾರವಾಗಿ ಜನಪ್ರಿಯಗೊಂಡಿದೆ.ಜಪಾನಿಗರು ಅದನ್ನು ಕಟ್ಟು ನಿಟ್ಟಾಗಿ ಅನುಸರಿಸುತ್ತಾರೆ.ಬಹುತೇಕರು ಕನ್ನಡದಲ್ಲಿ (ನನ್ನನೂ ಒಳಗೊಂಡು) ಅದೇ ಸಾಂಪ್ರದಾಯಿಕ ಸಿಲೆಬಲ್ ಹಾಗೂ ಮೂರೇ ಸಾಲಿಗೆ ಅಂಟಿಕೊಂಡು ಬರೆದಿದ್ದಾರೆ. ಬರೆಯುತ್ತಲೂ ಇದ್ದಾರೆ.ಇತರ ರೀತಿಯಲ್ಲಿ ಬರೆದು ಸಹ ಹೈಕು ಗೆ ತಮ್ಮದೇ ನ್ಯಾಯ ಒದಗಿಸಿದವರು ಸಹ ಇದ್ದಾರೆ. ಯಾವುದೇ ಒಂದು ಕಾವ್ಯ ಪ್ರಕಾರ ನಿಂತ ನೀರಾಗಿ ಪಾಚಿಗಟ್ಟಬಾರದು.ಪ್ರಯೋಗಕ್ಕೆ ಒಳಪಡಿಸುವುದು ಜೀವಂತಿಕೆಯ ಲಕ್ಷಣ.

ಈ ಕೆಳಗಿನ ಹೈಕು ೧೭ ಸಿಲೆಬಲ್ ಗೆ ಗಮನಿಸಬಹುದು

@

ಬೆತ್ತಲೆ ಮನ

ಹರಿದ ಬಿಸಿರಕ್ತ

ಕೆಂಪು ಕಣ್ಣೀರು

 ( ಡಾ.ಕೆ.ಬಿ.ಬ್ಯಾಳಿ )

@

ಬೆನ್ನು ಸುಟ್ಟರೂ

ರೊಟ್ಟಿ ಅರಳುವುದು

ನಗೆ ಹೆಂಚಲಿ

( ಸಿದ್ಧರಾಮ ಕೂಡ್ಲಿಗಿ )

@

ನಿನ್ನೆದುರಿಗೆ

ಮೌನವೀಣೆಯು ನಾನು

ಸ್ಪರ್ಷವೇ ನಾದ

( ಪ್ರೇಮಾ ಹೂಗಾರ )

@

ನಗಲೇ ಇಲ್ಲ

ಬಾಡುವ ಚಿಂತೆಯಲಿ

ಹೂವು ಅರಳಿ

( ಅರುಣಾ ನರೇಂದ್ರ )

@

ಅಂಗಳದಲ್ಲಿ

ಶಾಂತಿಯ ಬೀಜ ಬಿತ್ತಿ

ಹಕ್ಕಿ ಹಾರಿತು

( ಡಾ.ಜಯದೇವಿ ಗಾಯಕ್ವಾಡ್ )

@

 ಉನ್ಮಾದವಿಲ್ಲ

 ಗಂಧದ ಕೊರಡಿಗೆ

 ಕಣ್ಣೀರಧಾರೆ

 ( ಮಹಿ ಮುನ್ನೂರು )

@

ಮಳೆಯ ಹನಿ

ಮರು ಜೀವ ನೀಡಿತು

ಬಾಳ ಬಳ್ಳಿಗೆ

( ಭಾರತಿ ರವೀಂದ್ರ  )

ಇಂತಹ ಹಲವು ಹೈಕು ನನ್ನವು ಈ ಕೆಳಗಿವೆ.ತಾವು ಅಧ್ಯಯನದ ದೃಷ್ಟಿಯಿಂದ ಗಮನಿಸಬಹುದು.

@

ಪ್ರೀತಿ ಪ್ರೇಮಕೆ

ಏರು ಇಳುವಿಲ್ಲವು

ಸಮುದ್ರವದು

@

ಪೂಜೆಗೆಂದು ನಾ

ಹೂವು ಮುಡಿಸಲೋದೆ

ಆ ದೇವನಕ್ಕ

@

ಬೆಳಗಾಯಿತು

ಹೂವು ಕೀಳಲು ನಾನು

ದುಂಬಿ ರೇಗಿತು

@

ಬಯಕೆ ಬೀಜ

ಹದದಿ ಬಿತ್ತಿಹಳು

ಕಾಯ ! ಬೇಕಿಗ

@

ನಿರ್ಮೋಹಿ ಸಂಗ

ಬಯಸಿದವನಿಗೆ

ನಿಸ್ಸಂಗ ವರ

@

ಹೃದಯ ಭಾಷೆ

ಕಣ್ಣುಗಳಿಗೆ ಬೇಕೆ

ಮನಸ್ಸು ಸಾಕು

@

ಚೆಲುವಿಗಲ್ಲ

ಒಲವಿಗಾಗಿ ಎಲ್ಲ

ಮರೆತು ಹೋದ

@

ನಿರಾಭರಣೆ

ಅತಿ ಸುಂದರವವು

ಜೋಡಿ ಕಂಗಳು

@

ಮೊಡಗಟ್ಟಿದೆ

ಬಾನಲಿ ಮತ್ತೆ ಮತ್ತೆ

ನಿನ್ನ ನೆನಪು

@

ಜಗದೆಲ್ಲೆಡೆ

ಪ್ರೀತಿ ತುಂಬಬೇಕಿದೆ

ಮಾತ್ಸರ್ಯವಲ್ಲ 

@

 ಹಸಿವು ತೃಷೆ

 ನೆಲದೆಡೆಗೆ ನೋಡು 

 ಹಿಂಗಿಸುವನು 

@

ಈ ಹೈಕುಗಳು ಕೇವಲ ಮೂರೇ ಸಾಲಿನವು. ಮೊದಲ ಸಾಲಿನಲ್ಲಿ ೫, ಎರಡನೆಯ ಸಾಲಿನಲ್ಲಿ ೭ ಮತ್ತು ಮೂರನೆಯ ಸಾಲಿನಲ್ಲಿ ೫ ಅಕ್ಷರಗಳು.ಜಪಾನಿಗರು ಈ ನಿಯಮ ಚಾಚು ತಪ್ಪದೆ ಪಾಲಿಸುತ್ತಾರೆ.ಈ ರಚನೆಗಳಲ್ಲಿ ಪ್ರಾಸದ ಬಗ್ಗೆ ಯಾವ ಗೊಂದಲವಿಲ್ಲ.ಪ್ರಾಸ್ ಒಟ್ಟು ಅರ್ಥಕ್ಕೆ ಹೊಸ ಹೊಳಹು ಹಾಗೂ ಪಂಚ್ ಕೊಡುವಂತಿದ್ದರೆ ಬಳಸುವುದಕ್ಕೆ ಯಾರ ಅಭ್ಯಂತರ ಇಲ್ಲ. ಅದು ಆಯಾ ಲೇಖಕನ ಪದ ಸಂಪತ್ತಿನ ಸಾಮರ್ಥ್ಯದ ಮೇಲೆ ಹೋಗುತ್ತದೆ.

ಹೈಕುಗಳ ಪದ ವಿನ್ಯಾಸ ಅಥವಾ ಜನಪ್ರಿಯ ಆಕೃತಿಯ ದೃಷ್ಟಿಯಿಂದ ನೋಡುವುದಾದರೆ ಅದು ಐದು,ಏಳು,ಐದು ಅಕ್ಷರಗಳು ಹೊಂದಿದ ಸಾಲುಗಳು ಆಗಿರಬೇಕು.ಕನ್ನಡದ ಮನೋಧರ್ಮಕ್ಕೂ ಜಪಾನಿ ಭಾಷೆಯ ಮನೋಧರ್ಮ ಕ್ಕೂ ಬಹಳ ವ್ಯತ್ಯಾಸವಿದೆ. ಜಪಾನಿ ಭಾಷೆ ಸ್ವರ ಬದ್ಧವಾದ ಭಾಷೆ ಆಗಿದೆ.ನಾವು ಇಲ್ಲಿ ಕಣ್ಣಿಗೆ ಕಾಣುವ‌ ಅಕ್ಷರ ಎಣಿಸಿದರೆ ಅವರು ಉಚ್ಚಾರದಲ್ಲಿ ಬರುವ ಘಟಕಗಳನ್ನು  ಲೆಕ್ಕ ಹಾಕುತ್ತಾರೆ.ಆ ಹಿನ್ನೆಲೆಯಲ್ಲಿ ಅವರ ಸಿಲೆಬಲ್ ಗ್ರಹಿಕೆ ಕನ್ನಡದ ಜಾಯಮಾನಕ್ಕೆ ಸ್ವಲ್ಪ ಬದಲಾಗೋದು‌ ಸಹಜವಾಗಿದೆ.ಉಚ್ಚಾರಣೆಯಲ್ಲಿ ಬಳಕೆಯಾದ ಅಕ್ಷರಗಳನ್ನು ಅವರು ಗ್ರಹಿಸುತ್ತಾರೆ. ಉದಾಹರಣೆಗೆ

ಕೌ…ಒಂದೇ ಅಕ್ಷರ.ಜಪಾನಿಗರ ದೃಷ್ಟಿಯಿಂದ

ಇಂಗ್ಲಿಷ್ ನಲ್ಲಿ Cow  ಮೂರು ಅಕ್ಷರ.

ಕನ್ನಡದಲ್ಲಿ ಕವ್ ಎರಡು ಅಕ್ಷರ.

ಹೀಗೆ ಒಂದೇ ಉಚ್ಚಾರಣೆಯಲ್ಲಿ ಉಚ್ಚರಿಸಲ್ಪಡುವ ಘಟಕಗಳನ್ನು ಗ್ರಹಿಸುತ್ತಾರೆ.ಹಾಗಾಗಿ ಜಪಾನಿಗರ್ ಸಿಲೆಬಲ್ ಪ್ರಕಾರ ಕೌ ಅನ್ನೋದು ಒಂದೇ‌ ಸಿಲೆಬಲ್.ಹೈಕು ರಚನೆಕಾರರು ಈ ದೃಷ್ಟಿಯಿಂದ ಸಿಲೆಬಲ್ ಗ್ರಹಿಸಿ ಹೈಕು ರಚಿಸಬೇಕು.ಕ.ಕಾ.ಕೀ,ಕೋ ಕ್ರೌ ಸಹ ಒಂದೇ ಸಿಲೆಬಲ್ ಆಗಿರುತ್ತದೆ.

    ಒಟ್ಟಾರೆಯಾಗಿ ಈ ಮೇಲೆ ಚರ್ಚಿಸಿದಂತೆ‌ ಅನೇಕ ಹೈಕು ಲೇಖಕರ,ಭಾಷಾ ಶಾಸ್ತ್ರಜ್ಞರ ಅನಿಸಿಕೆಯಂತೆ ಜಪಾನಿ ಭಾಷೆಯು ಕನ್ನಡದ ಭಾಷೆಗಿಂತ ಹೆಚ್ಚು ಸ್ವರಪೂರ್ಣ, ಧ್ವನಿಪೂರ್ಣವಾಗಿ ಕೇಳುವುದರಿಂದ (PHONETIC) ಅವರು ಆ ನಿಯಮಾವಳಿ ಅನುಸರಿಸುವುದು, ಅವರ ದೃಷ್ಟಿಯಲ್ಲಿ ಸರಿ ಇರಬಹುದು.ಆದರೆ ನಾವು ನಮ್ಮ ಕನ್ನಡದ ಜಾಯಮಾನಕ್ಕೆ ತಕ್ಕಂತೆ ನಮ್ಮ ಗುಣಧರ್ಮ ಕ್ಕೆ ಅನುಗುಣವಾಗಿ ನಾವು ಹೈಕು ರಚನೆಯಲ್ಲಿ ೫/೭/೫ ರ ಮೂರು ಸಾಲಿನಲ್ಲಿ ರಚಿಸಿದರೆ ಸಾಕು ಎಂಬುದು ನನ್ನ ಅಭಿಮತವು ಆಗಿದೆ.ನಾನಂತೂ ಈ ಸಿಲೆಬಲ್ ದಲ್ಲಿಯೇ ನನ್ನ ಈ ಎಲ್ಲಾ ಹೈಕುಗಳನ್ನು ರಚಿಸಲು ತುಂಬಾ ಕಷ್ಟಪಟ್ಟು ಸಾಧ್ಯವಾದಷ್ಟು ಪಂಚ್ ಹಾಗೂ ಹೈಕು ಗುಣಧರ್ಮ ಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇದು ಯಶಸ್ವಿಯಾಗಿದೆಯೋ ಇಲ್ಲವೋ ಎಂಬುದೂ ಪ್ರಾಜ್ಞರಾದ ತಾವು ಹೇಳಲು ಕೋರುತ್ತೇನೆ. ಇಂದು ಕನ್ನಡದಲ್ಲಿ ಸಾಕಷ್ಟು ಜನ ಹೈಕು ಲೇಖಕರು ಬರೀತಾ ಇದ್ದಾರೆ.ಇದು ಈಗ ಗಜಲ್ ದಷ್ಟೆ‌ ಜನಪ್ರಿಯತೆಯೆಡೆಗೆ ಸಾಗುವ ಮುನ್ಸೂಚನೆ ಈಗಾಗಲೇ ದೊರೆತಿದೆ.ಅವರ ಹೆಸರು ಬರೆದರೆ ಇನ್ನೊಂದು ಲೇಖನವೇ ಆಗಲಿದೆ.ಅದನ್ನು ನನ್ನ ಕೃತಿಯ ಲೇಖಕನ ಮಾತಿನಲ್ಲಿ ಬರೆದಿರುವೆ.

**************************************************

ಸಿದ್ಧರಾಮ ಹೊನ್ಕಲ್

3 thoughts on “ಹೈಕುಗಳ ಸುತ್ತ ಒಂದಷ್ಟು ನನ್ನದೇ ಮಾತು ಕಥೆ-….

  1. ಬೈಕುಗಳ ಬಗ್ಗೆ ಅದೆಷ್ಟು ವಿಷಯವನ್ನು ಸೊಗಸಾಗಿ ಬರೆದಿರುವಿರಿ ಸರ್

  2. ಯಾವ ವಿಷಯಗಳ ಬಗ್ಗೆ ಹೈಕು ಬರೆಯಬಾರದು ? ಉದಾಹರಣೆಗೆ: ದುಸ್ಸಾಹಸ, ದುರ್ಜನ ಹೀಗೆ ನಕಾರಾತ್ಮಕ ಅಂಶಗಳ ಬಗ್ಗೆ ಹೈಕು ಬರೆಯಬಹುದೇ ಅಥವಾ ಬಾರದೇ?

Leave a Reply

Back To Top