ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—30

ಆತ್ಮಾನುಸಂಧಾನ

ನುಡಿಜೇನು ಪತ್ರಿಕೆಯಲ್ಲಿ

ಕೆಲಸ ಮಾಡಿದೆ

Public Interest Litigation Filed Purely On The Basis Of News Paper Report  Is Not Maintainable: Kerala High Court

ನನ್ನ ಕುಟುಂಬದ ಇತಿಮಿತಿಗಳ ನಡುವೆ ನಾನು ಬಿ.ಎ. ಪದವೀಧರನಾಗುವುದಷ್ಟೇ ನನ್ನ ಕೈಗೆಟಕಬಹುದಾದ ಗುರಿಯಾಗಿತ್ತು. ಆದರೆ ಪದವಿ ತರಗತಿಯಲ್ಲಿ ಓದುತ್ತಿರುವಾಗಲೇ ನನ್ನೊಳಗೆ “ನಾನೂ ಕಾಲೇಜು ಅಧ್ಯಾಪಕನಾಗಬೇಕು” ಎಂಬ ಆಸೆಯೊಂದು ಚಿಗುರೊಡೆಯುತ್ತಿತ್ತು. ನಮ್ಮ ಕೆಲವು ಅಧ್ಯಾಪಕರ ನೋಟ ನಿಲುವುಗಳು, ವೇಷಭೂಷಣಗಳು, ದಿನನಿತ್ಯ ನೂರಾರು ವಿದ್ಯಾರ್ಥಿಗಳ ಮುಂದೆ ನಿಂತು ಸ್ಟೈಲ್ ಆಗಿ ಪಾಠ ಮಾಡುವ ಅಧ್ಯಾಪಕರ ಅವಕಾಶಗಳು ಅಧ್ಯಾಪಕ ವೃತ್ತಿಯೆಡೆಗೆ ನನ್ನನ್ನು ತುಂಬಾ ಆಕರ್ಷಿಸಿದ್ದವು.

ಆದರೆ ಅಂದಿನ ಕೌಟುಂಬಿಕ ಪರಿಸ್ಥಿತಿಯಲ್ಲಿ ನಾನು ನನ್ನ ಶಿಕ್ಷಣವನ್ನು ಮುಂದುವರಿಸುವುದಕ್ಕಿಂತ ಯಾವುದಾದರೂ ಉದ್ಯೋಗ ಹಿಡಿದು ತಂದೆಯವರಿಗೆ ಕುಟುಂಬ ನಿರ್ವಹಣೆಯಲ್ಲಿ ನೆರವಾಗುವುದು ತುಂಬಾ ಅಗತ್ಯವೆನ್ನಿಸುತ್ತಿತ್ತು. ತಂದೆಯವರು ಶಿಕ್ಷಕ ವೃತ್ತಿಯಲ್ಲಿದ್ದರೂ ಬರುವ ಅಲ್ಪ ಆದಾಯದಲ್ಲಿ ಕುಟುಂಬ ನಿರ್ವಹಣೆಗೆ ಅವರು ಪಡುತ್ತಿರುವ ಕಷ್ಟ ನನ್ನ ಅರಿವಿಗೆ ಬಂದಿತ್ತು. ನಾವು ೬ ಜನ ಮಕ್ಕಳು ಮುಪ್ಪಿನಲ್ಲಿ ತಂದೆಯವರ ಅಪ್ಪ ಅವರ ದೊಡ್ಡಮ್ಮ ಹಾಗೂ ನಮ್ಮ ತಾಯಿಯ ಚಿಕ್ಕಪ್ಪ ರಾಕಜ್ಜ… ಹೀಗೆ ಕುಟುಂಬ ಸದಸ್ಯರ ಸಂಖ್ಯೆಯೇ ದೊಡ್ಡದಾಗಿತ್ತು. ಅಲ್ಲದೆ ಕೇರಿಯಲ್ಲಿ ನಮ್ಮ ತಂದೆಯವರು ಒಬ್ಬರೇ ಸರಕಾರಿ ನೌಕರಿಯಲ್ಲಿ ಇದ್ದವರು ದಿನಗೂಲಿಯಲ್ಲಿ ಹೊಟ್ಟೆ ಹೊರೆಯುವ ನಮ್ಮ ಜಾತಿ ಬಂಧುಗಳಿಗೆ ದೈನಂದಿನ ಜೀವನ ನಿರ್ವಹಣೆಯೂ ಕಷ್ಟ ಸಾಧ್ಯವಾದ ದಿನಗಳವು. ಆಕಸ್ಮಿಕಗಳು, ಅನಾರೋಗ್ಯ ಇತ್ಯಾದಿ ತೊಂದರೆಗಳು ಬಂದರೆ ನೇರ ನಮ್ಮ ಮನೆಯ ಬಾಗಿಲಿಗೆ ಬಂದು ನಿಲ್ಲುತ್ತಿದ್ದರು. ಇಂಥ ಸಂದರ್ಭಗಳನ್ನೆಲ್ಲ ಎದುರಿಸುತ್ತ ನಮ್ಮ ತಾಯಿ ತಂದೆ ಕಷ್ಟ ಪಡುವುದನ್ನು ಕಂಡೂ ನಾನು ಹೆಚ್ಚಿನ ಶಿಕ್ಷಣಕ್ಕೆ ಆಸೆ ಪಡುವುದೆಂದರೆ ಅವರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸುವುದು ಎಂದೇ ಅರ್ಥ.

ಈ ನಡುವೆಯೂ ನನ್ನ ಎಂ.ಎ.ಓದಿನ ಆಸೆಯನ್ನು ಮತ್ತೆ ಚಿಗುರೊಡೆಯುವಂತೆ ಮಾಡಿದವನು ನನ್ನ ಹಿರಿಯ ಸ್ನೇಹಿತ “ವೀಶಣ್ಣ” ಅಂದರೆ ವಿಶ್ವನಾಥ ನಾಯಕ.

ವಿಶ್ವನಾಥ ನಾಯಕ ನಮ್ಮ ನೆರೆಯ ಅಗ್ಗರಗೋಣ ಗ್ರಾಮದವನು. ನನಗಿಂತ ಹಿರಿಯವನಾದ ವಿಶ್ವನಾಥ ನಾನು ಬಿ.ಎ ದ್ವೀತಿಯ ವರ್ಷದಲ್ಲಿ ಓದುವಾಗ ಆತ ಅಂತಿಮ ವರ್ಷದಲ್ಲಿದ್ದ. ನಿತ್ಯ ನಮ್ಮೊಡನೆಯೇ ಬಸ್ ಪ್ರಯಾಣದಲ್ಲಿ ಕಾಲೇಜಿಗೆ ಬಂದು ಹೋಗುವ ವಿಶ್ವನಾಥ ನಾಯಕ ನನ್ನೊಡನೆ ತುಂಬ ಸಲಿಗೆಯಿಂದ ಆತ್ಮೀಯತೆಯಿಂದ ವರ್ತಿಸುತ್ತಿದ್ದ. ಕಿರಿಯ ಸಹೋದರನೆಂಬಂತೆ ಅಕ್ಕರೆ ತೋರುತ್ತಿದ್ದ. ಅವಕಾಶ ದೊರೆತಾಗ ಅಂಕೋಲೆ ಪೇಟೆಯಲ್ಲಿ ಚಹಾತಿಂಡಿ ಕೊಡಿಸುತ್ತಿದ್ದ. ತಪ್ಪು ಮಾಡಿದರೆ ಬಯ್ದು ಬುದ್ಧಿ ಹೇಳುತ್ತಿದ್ದ. ಎಲ್ಲಕ್ಕಿಂತ ಮಿಗಿಲಾಗಿ ಅವನ ಆಕರ್ಷಕ ವ್ಯಕ್ತಿತ್ವದಿಂದ ಇಡಿಯ ಕಾಲೇಜಿನಲ್ಲಿಯೂ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಎತ್ತರದ ಆಳ್ತನದ ವೀಶಣ್ಣ ಅಂದಿನ ಹಿಂದಿ ಚಿತ್ರರಂಗದ ಹಿರೋ ರಾಜೇಶ ಖನ್ನಾನನ್ನು ಬಹುತೇಕ ಹೋಲುತ್ತಿದ್ದು, ಆತನಂತೆಯೇ ಜುಬ್ಬಾ, ಜೀನ್ಸ್ ತೊಡುತ್ತಿದ್ದ. ಉತ್ತಮ ಕಬಡ್ಡಿ ಆಟಗಾರನೂ ಆದ ವೀಶಣ್ಣ ಅಂದು ‘ಯುನಿವರ್ಸಿಟಿ ಬ್ಲೂ’ ಆಗಿ ಆಯ್ಕೆಗೊಂಡು ಕಾಲೇಜಿಗೂ ಕೀರ್ತಿ ತಂದಿದ್ದ. ಈ ಎಲ್ಲ ಕಾರಣಗಳಿಂದ ವೀರಣ್ಣ ವಿದ್ಯಾರ್ಥಿಗಳ ಅಧ್ಯಾಪಕರೆಲ್ಲರ ಪ್ರೀತಿಪಾತ್ರನಾಗಿ ‘ಹೀರೋ’ ಆಗಿಯೇ ಮಿಂಚುತ್ತಿದ್ದ.

ವಿಶ್ವನಾಥ ನಾಯಕ ಬಿ.ಎ. ಮುಗಿಯುತ್ತಿದ್ದಂತೆ ಎಂ.ಎ. ವ್ಯಾಸಂಗ ಮಾಡಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಅವನ ಮೂಲಕವೇ ನನಗೆ ವಿಶ್ವವಿದ್ಯಾಲಯ ಮತ್ತು ಎಂ.ಎ ವ್ಯಾಸಂಗದ ಕುರಿತು ಅಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ದೊರೆಯುವ ಹಾಸ್ಟೆಲ್ ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳ ಕುರಿತು ಮಾಹಿತಿ ದೊರೆಯಿತು. ಮತ್ತು ನನ್ನ ಎಂ.ಎ ಓದಿನ ಆಸೆಯೂ ಜಾಗೃತವಾಯಿತು.

ಅಂದು ನನ್ನಲ್ಲಿ ಎಂ.ಎ ಓದಿನ ಆಸೆಯನ್ನು ಚಿಗುರಿಸಿ ಬೆಳೆಸಿದ ವಿಶ್ವನಾಥ ನಾಯಕ ತನ್ನ ಸ್ನಾತಕೋತ್ತರ ಪದವಿಯ ಬಳಿಕ ರಾಯಚೂರಿನ ಗಂಗಾವತಿಯಲ್ಲಿರುವ ಪದವಿ ಕಾಲೇಜೊಂದರಲ್ಲಿ ಪ್ರಾಧ್ಯಾಪಕನಾಗಿ ಸೇವೆಯನ್ನು ಆರಂಭಿಸಿ ಅಲ್ಲಿಯೇ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ ಇದೀಗ ನಿವೃತ್ತಿ ಹೊಂದಿ ಅಂಕೋಲೆಯಲ್ಲಿಯೇ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಅವರ ಮಾರ್ಗದರ್ಶನದ ಬಹುದೊಡ್ಡ ಋಣವೊಂದು ನನ್ನ ಮೇಲಿದೆಯಲ್ಲದೆ ಅವರು ನನ್ನ ಬದುಕಿನ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿಯೇ ಉಳಿದುಕೊಂಡಿದ್ದಾರೆ.

ಬಿ.ಎ. ಅಂತಿಮ ವರ್ಷದ ಪರೀಕ್ಷೆ ಮುಗಿದು ಫಲಿತಾಂಶಕ್ಕಾಗಿ ಕಾಯುತ್ತಿದ್ದೆವು. ನನ್ನ ಸಹಪಾಠಿ ಗೆಳೆಯರಲ್ಲಿ ಯಾರೂ ಓದು ಮುಂದುವರಿಸುವ ಆಸೆ ಹೊಂದಿರಲಿಲ್ಲ. ಯಾವುದಾದರೂ ಉದ್ಯೋಗ ಹಿಡಿದು ಬದುಕು ಆರಂಭಿಸಲು ಕುಪ್ಪಯ್ಯ, ರಮೇಶ, ಪ್ರಮೋದ ಮುಂತಾದವರೆಲ್ಲ ತೀರ್ಮಾನಿಸಿದ್ದರು. ರಮೇಶ ಕುಪ್ಪಯ್ಯ ಮೊದಲಾದ ಹಾಲಕ್ಕಿ ಸಮಾಜದ ಹುಡುಗರಿಗೆ ಅಲ್ಪ ಸ್ವಲ್ಪ ಬೇಸಾಯದ ಭೂಮಿಯೂ ಇದ್ದುದರಿಂದ ತಮ್ಮ ಪಾಲಕರಿಗೆ ಕೃಷಿ ಕಾರ್ಯದಲ್ಲಿ ಸಹಾಯ ಮಾಡಲು ಆರಂಭಿಸಿದರು. ನನಗೆ ರಜೆಯ ದೀರ್ಘ ಅವಧಿಯನ್ನು ಕಳೆಯುವುದು ಎಲ್ಲ ಬಗೆಯಿಂದಲೂ ದುಸ್ತರವೆನ್ನಿಸಿತು.

ಕಾಲೇಜಿನಲ್ಲಿ ಓದುತ್ತಿರುವಾಗಲೇ ನಾನು ಒಂದಿಷ್ಟು ಕವಿತೆ, ಪ್ರಬಂಧವನ್ನು ಬರೆಯಲು ಆರಂಭಿಸಿದ್ದೆ. ಆಗ ಅಂಕೋಲೆಯಲ್ಲಿ ಬಿ.ಹೊನ್ನಪ್ಪ ಭಾವಿಕೇರಿಯವರು ‘ನುಡಿಜೇನು’ ಎಂಬ ಪಾಕ್ಷಿಕ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ನಾನು ಒಂದೆರಡು ಕವಿತೆಗಳನ್ನು ಅವರಿಗೆ ನೀಡಿದೆ. ಅವು ಪ್ರಕಟವೂ ಆದವು. ಅದೇ ಪತ್ರಿಕೆಯಲ್ಲಿ ಒಮ್ಮೆ ನಾನು ಬರೆದ “ಯಂಕಪ್ಪ ಅಗ್ನಿಯಾದ” ಎಂಬ ಹಾಸ್ಯ ಪ್ರಬಂಧವೂ ಪ್ರಕಟವಾಯಿತು. ಅದನ್ನು ಓದಿದ ಅಂದು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಕೊಗ್ರೆಯ ಎಂ.ಎಚ್. ನಾಯಕ ಎಂಬ ಮಹನಿಯರು ಶಿಕ್ಷಕರಾಗಿದ್ದ ನಮ್ಮ ತಂದೆಯವರ ಮೂಲಕ ನನ್ನ ಕುರಿತಾಗಿ ಮೆಚ್ಚುಗೆಯ ಸಂದೇಶ ಕಳಿಸಿದರಲ್ಲದೆ ಮತ್ತೆ ಬರೆಯುತ್ತಿರುವಂತೆ ಆಶೀರ್ವಾದ ಮಾಡಿದ್ದರು.

ಇವೆಲ್ಲವೂ ಕೂಡಿ ನಾನು ‘ನುಡಿಜೇನು’ ಪತ್ರಿಕೆಯ ಸಂಪಾದಕರಾದ ಬಿ. ಹೊನ್ನಪ್ಪ ಅವರಿಗೆ ಹತ್ತಿರವಾದೆ. ಮತ್ತು ಅವರು ತಮ್ಮ ಮುದ್ರಣಾಲಯದಲ್ಲಿ ಬರಹಗಳನ್ನು ಆಯ್ಕೆ ಮಾಡುವ ಮತ್ತು ಕರುಡು ತಿದ್ದುವ ಕೆಲಸ ಮಾಡಲು ಬರುವಂತೆ ಆಹ್ವಾನ ನೀಡಿದರು. ‘ಬಿಡುವಿನ ವೇಳೆಯಲ್ಲಿ ಪತ್ರಿಕೆಗೆ ಜಾಹೀರಾತು ಸಂಗ್ರಹಿಸಬೇಕು ಮತ್ತು ಅದರ ಕಮೀಷನ್ ನನಗೆ ದೊರೆಯುವ ಸಂಭಾವನೆ’ ಎಂಬ ಒಪ್ಪಂದದಲ್ಲಿ ನಾನು ‘ನುಡಿಜೇನು’ ಪತ್ರಿಕೆಯಲ್ಲಿ ನನ್ನ ರಜೆಯ ದಿನಗಳಲ್ಲಿ ಕೆಲಸ ಆರಂಭಿಸಿದೆ.

*************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

6 thoughts on “

  1. ಗುರೂಜಿ,
    ನಿಮ್ಮ ಬದುಕು ಹೇಗೆ ಪರಿವರ್ತನೆ ಹೊಂದುತ್ತ ಮುಂದುವರಿದಿದೆ, ನಿಮ್ಮ ಆಗಿನ ಆದರ್ಶ ನಿಮ್ಮನ್ನು ಮುಂದೆ ಬರುವ ಹಾಗೆ ಮಾಡಿದೆ. ಕಷ್ಟದಿಂದ ಸುಖವನ್ನು ಪಡೆದು ಸದ್ಯ ನಿವೃತ್ತಿ ಜೀವನ ಸುಖವಾಗಿ ಅನುಭವಿಸಿ.
    ಮುಂದಿನ ಸಂಚಿಕೆ
    ಎದುರಾಗಿರುವೆ…..

  2. ಅಗ್ರಗೋಣದ ವಿಶುವಿನ ವ್ಯಕ್ತಿತ್ವವನ್ನು ಚಿತ್ರಿಸಿ”ರೋಲ್ ಮಾಡೆಲ್ ”
    ಆಗಿ ಸ್ವೀಕರಿಸಿ ನಿಮ್ಮ ಕಾಲೇಜಿನ ಅಧ್ಯಾಪಕನಾಗುವ ಕನಸನ್ನು ಈಡೇರಿಸಿಕೊಂಡಿರಿ. ನುಡಿಜೇನು ವಿನಲ್ಲಿ ಕೆಲಸ ಮಾಡಿ ಲೇಖಕರಾದಿರಿ.ಖುಲ್ಲಂ ಖುಲ್ಲಾ ಆತ್ಮ ಕತೆಯಲ್ಲಿ ಹಲವಾರು ರಸಮಯ ಸನ್ನಿವೇಶಗಳನ್ನು ಸೇರಿಸಿ ಕಥೆಗೆ ಮೆರಗು ತಂದಿದ್ದೀರಿ. ತುಂಬಾ ಚೆನ್ನಾಗಿದೆ.

  3. ಸರ, ಬಿ.ಎ. ಶಿಕ್ಷಣದ ಮುಕ್ತಾಯದ ಕರ್ನಾಟಕ ವಿಶ್ವವಿದ್ಯಾಲಯ ದ ಮುಂದಿನ ಸ್ನಾಕೊತ್ತರ ಎಂ.ಎ. ಕಲಿಯುವ ಸಮಯದಲ್ಲಿ ತಮ್ಮ ಅನುಭವದ ನಿರೀಕ್ಷೆಯಲ್ಲಿ

  4. ವಿಧ್ಯಾಭ್ಯಾಸದ ಪಯಣದಲ್ಲಿ ಸರಿಯಾದ ನಿರ್ಧಾರವಾಗಿತ್ತು.ಹೆಚ್ಚಿನ ಜ್ಞಾನಾರ್ಜನೆ ಅವಕಾಶವಾಯಿತು ಧನ್ಯವಾದಗಳು ಸರ್

Leave a Reply

Back To Top