ದಾರಾವಾಹಿ

ಆವರ್ತನ

ಅದ್ಯಾಯ-22

A simple mandala... - Rangoli designs by Mahalakshmy Nair | Facebook

ಏಕನಾಥರು, ಶಂಕರನ ಜಾಗದ ಕುರಿತು ವಿಚಿತ್ರ ಕಥೆಯನ್ನು ಅವನಿಗೆ ವಿವರಿಸಿ ಶೌಚಕ್ಕೆ ಎದ್ದು ಹೋದ ನಂತರ ಶಂಕರ ಗಂಭೀರ ಚಿಂತೆಗೆ ಬಿದ್ದ. ಛೇ, ಛೇ! ಈ ಏಕನಾಥ ತನ್ನ ಬಾಲ್ಯದ ಸ್ನೇಹಿತ. ಹಾಗಾಗಿ ನನ್ನ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಡುತ್ತಾನೆ ಅಂತ ತಾನು ಭಾವಿಸಿ ಬಂದಿದ್ದು ದೊಡ್ಡ ತಪ್ಪಾಯಿತು. ಇವನ ಅಂಜನದ ಕಥೆ ಹೇಳಿ ನನ್ನ ಸಮಸ್ಯೆಯನ್ನು ಬಗೆಹರಿಸಲು ಇವನೇ ಬೇಕಿತ್ತಾ…? ಈಶ್ವರಪುರದಿಂದ ಕೇರಳದವರೆಗೆ ಎಂಥೆಂಥ ಕಾರ್ನಿಕದ ಜೋಯಿಸರನ್ನೆಲ್ಲ ನಾನು ನೋಡಿಲ್ಲ! ಒಂದು ಹುಲ್ಲು ಕಡ್ಡಿಯಿಂದ ಆಗುವಂಥ ಕೆಲಸವನ್ನು ಈ ದರ್ವೇಶಿ ಆನೆಯಿಂದ ಮಾಡಿಸಲು ಹೊರಡುತ್ತಾನೆಂದು ನಾನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಥೂ! ಎಂದು ಏಕನಾಥರ ಮೇಲೆ ಅಸಹನೆಗೊಂಡು ಉಗಿದ. ಆದರೆ ಮತ್ತೆ ಯೋಚಿಸಿದ. ಇಂಥ ಕೆಲವು ತಾಂತ್ರಿಕರಿಗೆ ಬಹಳಷ್ಟು ರಹಸ್ಯ ವಿದ್ಯೆಗಳೂ ಗೊತ್ತಿರುತ್ತವಂತೆ. ಅಂಥವರು, ಭೂಮಿಯ ಮೇಲೆ ಯಾವ್ಯಾವ ಶಕ್ತಿಗಳಿವೆ. ಅವುಗಳಲ್ಲಿ ಒಳ್ಳೆಯದು ಯಾವುದು, ಕೆಟ್ಟದು ಯಾವುದು? ಎಂಬುದನ್ನೆಲ್ಲ ತಿಳಿದಿರುತ್ತಾರಂತೆ. ಅವರು ಆ ಶಕ್ತಿಗಳನ್ನು ಹಿಡಿದುಕೊಂಡು ಯಾರಿಗಾದರೂ ಒಳ್ಳೆಯದನ್ನೂ ಮಾಡಬಹುದಂತೆ ಹಾಗೆಯೇ ಸರ್ವನಾಶವನ್ನೂ ಮಾಡಬಲ್ಲರೆಂದು ಕೇಳಿದ್ದೇನೆ. ಹೀಗಿರುವಾಗ ಈ ಮೂರುಕಾಸಿನವನು ಅಷ್ಟು ವರ್ಷಗಳಿಂದ ಬೊಂಬಾಯಿಯಲ್ಲಿದ್ದುಕೊಂಡು ಯಾರ್ಯಾರಿಂದ ಏನೇನು ಕಲಿತು ಬಂದಿದ್ದಾನೋ ಯಾರಿಗೆ ಗೊತ್ತು? ಮೊನ್ನೆ ನನ್ನ ಜಾಗ ನೋಡುತ್ತ ಅವನು ಓಡಾಡಿದ ರೀತಿಯನ್ನೂ ಅವನ ಮೈಕೈಯೆಲ್ಲ ಬೊಕ್ಕೆ ಎದ್ದುದನ್ನೂ ಮತ್ತದರ ಬೆನ್ನಿಗೆ ನಾಗರಹಾವೊಂದು ಕಾಣಿಸಿಕೊಂಡದ್ದನ್ನೂ ಒಟ್ಟೊಟ್ಟಿಗೆ ಯೋಚಿಸಿ ನೋಡಿದರೆ ಖಂಡಿತಾ ಇವನಲ್ಲಿ ಯಾವುದೋ ಶಕ್ತಿಯಿರುವುದು ಸ್ಪಷ್ಟವಾಗುತ್ತದೆ. ಹಾಗಾಗಿ ಇನ್ನು ಇವನ ಮಾತನ್ನು ತಿರಸ್ಕರಿಸುವಂತೆಯೂ ಇಲ್ಲ. ಆದ್ದರಿಂದ ಇನ್ನು ಮುಂದೆ ಏನೇನು ಕಿತಾಪತಿ ಮಾಡುತ್ತಾನೆ ಎನ್ನುವುದನ್ನು ಜಾಗ್ರತೆಯಿಂದ ನೋಡಿಕೊಂಡು ವ್ಯವಹರಿಸಿದರಾಯ್ತು!’ ಎಂದು ನಿರ್ಧರಿಸಿದವನು ನೆಮ್ಮದಿಯ ಉಸಿರುಬಿಟ್ಟ. ಅಷ್ಟರಲ್ಲಿ ಏಕನಾಥರು ಬೈರಾಸಿನಿಂದ ಬೆವರೊರೆಸಿಕೊಳ್ಳುತ್ತ ಬಂದು ಕುಳಿತವರು, ‘ಏನು ನಿರ್ಧಾರ ಮಾಡಿದೆ ಶಂಕರ…?’ ಎಂದು ನಗುತ್ತ ಕೇಳಿದರು.

‘ಅಯ್ಯೋ, ನೀವು ಇಷ್ಟೆಲ್ಲ ಕಥೆ ಹೇಳಿದ ಮೇಲೆ ಇನ್ನು ಬೇರೇನು ನಿರ್ಧರಿಸಲಿಕ್ಕಾಗುತ್ತದೆ ಗುರೂಜಿ? ಹೇಗೆ ಹೇಳುತ್ತೀರೋ ಹಾಗೆ ಮಾಡುವ. ಆದರೂ ಒಂದು ಮಾತು ನೋಡಿ, ಇನ್ನು ಮುಂದೆ ನೀವೂ ನನ್ನೊಟ್ಟಿಗಿದ್ದುಕೊಂಡು ಸಹಕರಿಸುತ್ತೀರಿ ಎಂದಾದರೆ ಮಾತ್ರ ನಾನೂ ಈ ವಿಷಯದಲ್ಲಿ ಮುಂದುವರೆಯುತ್ತೇನೆ!’ ಎಂದೆನ್ನುತ್ತ ಅವರನ್ನು ಮೆಚ್ಚಿಸುವ ವಿನಯತೆ ನಟಿಸಿದ.

‘ಅರೆರೇ…! ಅದರ ಬಗ್ಗೆ ನಿನಗೆ ಸಂಶಯವೇ ಬೇಡ ಮಾರಾಯಾ. ಎಷ್ಟಾದರೂ ನಾವು ಬಾಲ್ಯದ ಗೆಳೆಯರಲ್ಲವಾ. ಅದನ್ನು ಎಂದಾದರೂ ಮರೆಯಲಿಕ್ಕುಂಟಾ ಹೇಳು. ನೀನೀಗ ನಮ್ಮ ಹತ್ತಿರ ಬಂದಾಯ್ತಲ್ಲ ಇನ್ನು ನಿನ್ನ ಆತಂಕವನ್ನು ಬದಿಗಿಟ್ಟುಬಿಡು. ನಿನ್ನೆಲ್ಲಾ ತೊಂದರೆಗಳನ್ನೂ ಒಂದೊಂದಾಗಿ ನಿವಾರಿಸಿಕೊಡುವ ಜವಾಬ್ದಾರಿ ನಮ್ಮದು. ಈಗ ಸದ್ಯದ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ದೊಡ್ಡ ಖರ್ಚೆನೂ ಬೀಳುವುದಿಲ್ಲ ಮಾರಾಯಾ. ಅಲ್ಲದೇ ಅದಕ್ಕೂ ನಮ್ಮ ಹತ್ರ ಉಪಾಯವಿದೆ ನೋಡು. ಏನೆಂದರೆ ಆ ಶಕ್ತಿಗಳಿರುವ ಜಾಗವಿದೆಯಲ್ಲ ಅದರಲ್ಲೇ ಒಂದ್ಹತ್ತು ಸೆಂಟ್ಸನ್ನು ಅವುಗಳಿಗೇ ಬಿಟ್ಟುಕೊಡುವುದು. ಅಲ್ಲಿರುವ ನೂರಾವೊಂದು ಭೂತಗಳಲ್ಲಿ ನಾವು ಎಲ್ಲವನ್ನೂ ನಂಬಲಿಕ್ಕಿಲ್ಲ. ನಾಗ ಮತ್ತು ಅವನ ಪರಿವಾರದ ನಮ್ಮ ತುಳುನಾಡಿನ ಪಂಚ ದೈವಗಳನ್ನು ಮಾತ್ರ ಉಳಿಸಿಕೊಂಡು ದಕ್ಷಿಣಕನ್ನಡ, ಕಾಸರಗೋಡು ಮತ್ತು ಕೇರಳದಿಂದ ಬಂದಂಥ ದೈವ, ಭೂತಗಳನ್ನೆಲ್ಲ ಅಲ್ಲಿಂದ ಉಚ್ಛಾಟಿಸಿ ಅವುಗಳ ಊರಿಗೇ ಕಳುಹಿಸಿಬಿಡುವುದು. ಆನಂತರ ನಾವು ಅಲ್ಲಿ ನಂಬುವಂಥ ಶಕ್ತಿಗಳಿಗೆ ಸಣ್ಣಸಣ್ಣ ಗುಡಿಗಳನ್ನು ಕಟ್ಟಿಸಿ ಅವನ್ನು ಸ್ಥಾಪಿಸಿ ಪೂಜಿಸಿಕೊಂಡು ಬರುವುದು. ಇವಿಷ್ಟನ್ನು ನೀನು ಮಾಡಿದರಾಯ್ತು. ಸದ್ಯ ಅದಕ್ಕೆ ತಗಲುವ ಖರ್ಚವೆಚ್ಚವನ್ನು ನೀನೇ ನೋಡಿಕೊಳ್ಳಬೇಕಾಗುತ್ತದೆ. ಆದರೆ ಮುಂದೆ ಅವುಗಳಿಗೆ ನಡೆಯಲಿರುವ ಪೂಜೆ ಪುನಸ್ಕಾರಗಳಿಗೆಲ್ಲಾ ನೀನು ಮಂಡೆಬಿಸಿ ಮಾಡಬೇಕಾಗಿಲ್ಲ. ಆ ಜಾಗವನ್ನು ಲೇಔಟ್ ಮಾಡಿ, ಮನೆ ಕಟ್ಟಿಸಿ ಮಾರಾಟ ಮಾಡುತ್ತಿಯಲ್ಲ ಆವಾಗ ಅದನ್ನು ಕೊಂಡು ಕುಳಿತವರಿಂದಲೇ ಆ ದೈವಶಕ್ತಿಗಳ ಪೂಜಾ ಕೈಂಕರ್ಯಗಳನ್ನೂ ನಿರ್ವಿಘ್ನವಾಗಿ ಮಾಡಿಸಿಕೊಂಡು ಹೋಗುವ ಹೊಣೆ ನಮ್ಮದು. ಇಷ್ಟು ಸುಲಭದ ಕೆಲಸವೂ ನಿನಗೆ ಕಷ್ಟವಾಗುತ್ತದೆ ಎಂದರೆ ಅದಕ್ಕೆ ಇನ್ನೊಂದು ದಾರಿಯೂ ಉಂಟು. ನೀನು ಜೀರ್ಣೋದ್ಧಾರಕ್ಕೆ ಮಾಡುವ ಖರ್ಚನ್ನು ಆ ಲೇಔಟ್ ಮಾರಾಟ ಮಾಡುವ ಮೊತ್ತಕ್ಕೆ ಸೇರಿಸಿಯೂ ಹಿಂದೆ ಪಡೆಯಬಹುದು ನೋಡು. ಅಲ್ಲಿಗೆ ನಿನ್ನ ಸಮಸ್ಯೆ ಪೂರಾ ಪರಿಹಾರವಾದಂತೆ. ಏನಂತಿಯಾ?’ ಎಂದು ಏಕನಾಥರು ತುಟಿಯಂಚಿನಲ್ಲಿ ನಗುತ್ತ ಅಂದರು. ಆದರೆ ಶಂಕರನಿಗೆ ಪಕ್ಕನೆ ಅದು ಅರ್ಥವಾಗದೆ, ಹಳೆಯ ಟ್ಯೂಬ್‍ಲೈಟೊಂದು ಪುಕ್‍ಪುಕ್‍ಪುಕ್ ಎಂದು ನಿಧಾನಕ್ಕೆ ಹೊತ್ತಿಕೊಳ್ಳುವಂತೆ ಗುರೂಜಿಯವರ ಮಾತನ್ನು ಅರ್ಥ ಮಾಡಿಕೊಂಡವನು ಓಹೋ, ಈ ಏಕನಾಥ ಸಾಮಾನ್ಯದವನಲ್ಲ! ಇವನು ನನಗೆ ಇನ್ನಷ್ಟು ಲಾಭ ತರುವ ಮಾರ್ಗವನ್ನೇ ತೋರಿಸುತ್ತಿದ್ದಾನೆ.  ಮಾತ್ರವಲ್ಲದೇ ನನ್ನ ವ್ಯವಹಾರದಲ್ಲಿ ಇನ್ನು ಮುಂದೆಯೂ ಇಂಥ ತೊಂದರೆಗಳು ಬರುತ್ತಿರಬಹುದು. ಅದಕ್ಕೂ ಇವನ ಸಹಾಯಬೇಕಾಗುತ್ತದೆ. ಹಾಗಾಗಿ ಇವನನ್ನು ಬಿಡಬಾರದು. ಶಾಶ್ವತವಾಗಿ ತನ್ನ ಜೊತೆಯಲ್ಲಿಟ್ಟುಕೊಂಡು ಸಾಕಬೇಕು!- ಎಂದು ಯೋಚಿಸಿದ ಶಂಕರ ತನ್ನ ನಿರ್ಧಾರಕ್ಕೆ ತಾನೇ ಹೆಮ್ಮೆಪಟ್ಟ.

‘ಆಯ್ತು ಗುರೂಜಿ, ನೀವು ಹೇಗೆ ಹೇಳುತ್ತೀರೋ ಹಾಗೆ. ಈ ರೀತಿಯಲ್ಲಾದರೂ ನಮ್ಮ ಸ್ನೇಹವು ಶಾಶ್ವತವಾಗಿ ಉಳಿಯುವಂತಾಗಲಿ. ಏನಂತೀರೀ…?’ ಎಂದ ನಗುತ್ತ.

‘ಎಲ್ಲಾದರೂ ಉಂಟ ಮಾರಾಯಾ. ದುಡ್ಡು ಇವತ್ತು ಬರುತ್ತದೆ. ನಾಳೆ ಹೋಗಬಹುದು. ಆದರೆ ಮನುಷ್ಯ ಸಂಬಂಧ ಹಾಗಲ್ಲವಲ್ಲ. ಅದನ್ನು ಉಳಿಸಿಕೊಳ್ಳಬೇಕಾದರೆ ಒಬ್ಬರಿಗೊಬ್ಬರು ಸಾಧ್ಯವಾದಷ್ಟು ಪ್ರಾಮಾಣಿಕವಾಗಿರಬೇಕಾಗುತ್ತದೆ. ಅಲ್ಲದೇ ನಾವಿಬ್ಬರೂ ಎಂದಿಗೂ ಹಾಗೆಯೇ ಇರುವವರು. ಅಂದ ಮೇಲೆ ನಮ್ಮ ಸ್ನೇಹಕ್ಕೆ ಯಾವುದರ ಅಡ್ಡಿ ಬಿಡು. ಒಂದುವೇಳೆ ದುಡ್ಡೇ ನಮಗೆ ಮುಖ್ಯವಾಗುತ್ತಿದ್ದರೆ ನೀನು ಹೇಳಿದ ಕೆಲಸವನ್ನು ಮಾತೆತ್ತದೆ ಮಾಡಿಕೊಟ್ಟು ಇಷ್ಟು ದೊಡ್ಡ ಮನೆಯನ್ನು ನಿನ್ನಿಂದ ರಿಪೇರಿ ಮಾಡಿಸಿಕೊಂಡು ಆರಾಮವಾಗಿರುತ್ತಿದ್ದೆವು. ಆದರೆ ಆಮೇಲೆ ನಿನಗೊದಗುವ ಅನೇಕ ಬಗೆಯ ದೋಷ ಮತ್ತದರ ತೊಂದರೆಗಳಿಗೂ ನಾವೇ ಕಾರಣರಾಗುತ್ತಿದ್ದೆವು! ಹೀಗಿರುವಾಗ ನಮ್ಮನ್ನೇ ನಂಬಿ ಬಂದ ನಿನ್ನಂಥ ಸ್ನೇಹಿತನನ್ನು ತಿಳಿದು ತಿಳಿದೂ ಹಾಳು ಬಾವಿಗೆ ತಳ್ಳುವುದೆಂದರೆ ದೇವರು ಮೆಚ್ಚುವ ಕೆಲಸವಾ ಹೇಳು…? ಅಂಥ ಪಾಪಕೃತ್ಯವನ್ನು ನಾವು ನಿನಗೆ ಮಾತ್ರವಲ್ಲ ಜೀವನದಲ್ಲಿ ಯಾರಿಗೂ ಮಾಡಲಾರೆವು. ನಿನ್ನ ಸಮಸ್ಯೆಯನ್ನು ಹೇಗೆ ನಿವಾರಿಸಿದರೆ ಚಂದ ಅಂತ ಮೊನ್ನೆಯಿಂದಲೂ ಯೋಚಿಸುತ್ತಿದ್ದೆವು. ಕೊನೆಗೆ ಈ ಕೆಲಸವನ್ನು ನಿನ್ನಿಂದಲೇ ಮಾಡಿಸಿದರೆ ನಮಗೂ ನೆಮ್ಮದಿ ಮತ್ತು ನಿನಗೂ ನಾಲ್ಕು ಕಾಸಾದೀತು ಎಂದು ತೋರಿತು. ಹಾಗಾಗಿ ಆ ಶುಭಕಾರ್ಯವನ್ನು ನಾಳೆಯಿಂದಲೇ ಶುರು ಮಾಡುವ ಏನಂತೀ?’ ಎಂದವರು ಮರಳಿ, ‘ಹ್ಞಾಂ, ಇನ್ನೊಂದು ಮಾತು ಶಂಕರ, ನೂರಾರು ವರ್ಷಗಳಿಂದಲೂ ನೀರು ನೆರಳಿಲ್ಲದೆ ಸೋತು ಸುಣ್ಣವಾಗಿರುವ ದೈವಶಕ್ತಿಗಳವು. ಅವಕ್ಕೊಂದು ಶಾಶ್ವತ ನೆಲೆ ನೀಡಲು ಮನಸ್ಸು ಮಾಡಿರುವ ನಿನ್ನ ಕೆಲಸವನ್ನು ಯಾವತ್ತೂ ಸಣ್ಣದೆಂದು ಭಾವಿಸಬೇಡ! ಅವಕ್ಕೆ ನೀನು ಮಾಡುವ ಉಪಕಾರಕ್ಕೆ ಪ್ರತಿಯಾಗಿ ಅವು ಮುಂದೆ ನಿನ್ನನ್ನು ಯಾವ ಮಟ್ಟಕ್ಕೆ ಏರಿಸುತ್ತವೆ ಅನ್ನುದನ್ನೂ ಕಾದು ನೋಡಬೇಕು ನೀನು!’ ಎಂದು ಉದ್ವೇಗದಿಂದ ಹೇಳಿದರು.

   ಏಕನಾಥರ ಮಹತ್ವದ ಮಾತುಗಳನ್ನೂ ಅವರ ಮುಖದಲ್ಲಿದ್ದ ದೃಢವಿಶ್ವಾಸವನ್ನೂ ಕಂಡ ಶಂಕರ ರೋಮಾಂಚಿತನಾದವನು ದಢಕ್ಕನೆದ್ದು ಡೊಗ್ಗಾಲೂರಿ ಅವರಿಗೆ ನಮಸ್ಕಾರ ಮಾಡಿದ. ಅವನ ಕತ್ತು ಬಾಗಿ, ಹಣೆಯು ತಮ್ಮ ಪಾದಗಳೆದುರಿನ ನೆಲವನ್ನು ಸೋಕುತ್ತಲೇ ಏಕನಾಥರ ತುಟಿಯಂಚಿನಲ್ಲಿ ಗೆಲುವಿನ ನಗು ಪುಟಿಯಿತು. ಶಂಕರ ಎದ್ದು ತನ್ನ ಹ್ಯಾಂಡ್‍ಬ್ಯಾಗ್‍ನಿಂದ ಹದಿನೈದು ಸಾವಿರ ರೂಪಾಯಿಗಳನ್ನು ತೆಗೆದು ಅವರ ಹರಿವಾಣದಲ್ಲಿಟ್ಟವನು, ‘ನೀವು ಹತ್ತು ಸಾವಿರ ಕೇಳಿದ್ದಿರಿ ಗುರೂಜೀ. ಇದರಲ್ಲಿ ಹದಿನೈದಿದೆ. ಇನ್ನು ಮುಂದಿನ ಕೆಲಸಕ್ಕೆ ಯಾವಾಗ, ಎಷ್ಟು ಬೇಕು ಎಂದು ನೀವು ಅಪ್ಪಣೆ ಕೊಟ್ಟರಾಯ್ತು!’ ಎಂದು ಗತ್ತಿನಿಂದ ಹೇಳಿ ಮತ್ತೊಮ್ಮೆ ಅವರಿಗೆ ಕೈಮುಗಿದವನು ಅಂಗಿಯನ್ನು ತೊಟ್ಟುಕೊಂಡು ಗೆಲುವಿನಿಂದ ಹಿಂದಿರುಗಿದ. ಇತ್ತ ತಮ್ಮ ಮಾತುಗಳಿಂದ ಶಂಕರನಲ್ಲಿ ಒಮ್ಮೆಲೇ ಹುಟ್ಟಿದ ಔದಾರ್ಯವನ್ನು ಕಂಡ ಏಕನಾಥರಿಗೆ ಆನಂದದಿಂದ ಕೆಲವುಕ್ಷಣ ಮಾತೇ ಹೊರಡಲಿಲ್ಲ. ಆದ್ದರಿಂದ, ಅದೆಷ್ಟೋ ಕಾಲದಿಂದ ನೀರು, ನೆರಳಿಲ್ಲದ ಆ ದೈವಶಕ್ತಿಗಳಿಗೆ ತಾವು ಮರಳಿ ನೆಲೆ ಕಲ್ಪಿಸಲು ಹೊರಟಿದ್ದರಿಂದಲೇ ಇವತ್ತು ಅವು ತಮ್ಮ ಜೀವನಕ್ಕೂ ಸನ್ಮಾರ್ಗ ಕರುಣಿಸಿದವು ಎಂದುಕೊಂಡ ಅವರ ಕಣ್ಣಾಲಿಗಳು ತುಂಬಿ ಬಂದವು. ಮರುಕ್ಷಣ ತಮ್ಮ ಮೊಟ್ಟ ಮೊದಲ ಸ್ವತಂತ್ರ ಸಂಪಾದನೆಯನ್ನು ಕೈಗೆತ್ತಿಕೊಂಡವರು ಭಕ್ತಿಯಿಂದ ಹಣೆಗೊತ್ತಿಕೊಂಡರು.                                     

                                                         ***

ಶಂಕರನ ಜಾಗವನ್ನು ಸಮತಟ್ಟುಗೊಳಿಸುವಾಗ ತಮ್ಮ ಜೆಸಿಬಿ ಚಾಲಕರಿಂದ ನಾಗ ಪರಿವಾರ ದೈವಗಳ ಕುರುಹುಗಳು ಹಾಳಾಗಿದ್ದನ್ನು ಕಂಡ ಪುರಂದರಯ್ಯನೂ ಕಂಗಾಲಾಗಿದ್ದರು. ಈಶ್ವರಪುರ ಮತ್ತದರ ಸುತ್ತಮುತ್ತಲಿನ ಹತ್ತೂರುಗಳಲ್ಲಿ ನಾಗನ ಕಟಾಕ್ಷ ಎಂಥದ್ದು ಎನ್ನುವುದನ್ನು ಕಣ್ಣಾರೆ ಕಂಡಿದ್ದ ಮತ್ತು ಕಿವಿಯಾರೆ ಕೇಳಿದ್ದ ಮಹಮ್ಮದ್ ರಫೀಕನೂ ಬೆದರಿಬಿಟ್ಟಿದ್ದ. ಹಾಗಾಗಿ ಇಬ್ಬರೂ ಶಂಕರನ ಕೆಲಸದೊಂದಿಗೆ ಆನಂತರ ತಮಗೆ ದೊರೆತ ಇನ್ನು ಕೆಲವು ಕೆಲಸಗಳನ್ನೂ ವಹಿಸಿಕೊಳ್ಳಲು ಹಿಂಜರಿದು ಮುಂದೂಡಿಬಿಟ್ಟರು. ಆದರೆ ಶಂಕರ ಏಕನಾಥರ ಬಲದಿಂದ ಧೈರ್ಯವಾಗಿದ್ದ ಮಾತ್ರವಲ್ಲದೇ ತಮ್ಮಿಂದಾದ ಅನಾಹುತಕ್ಕೆ ತನ್ನ ಬಾಲ್ಯ ಸ್ನೇಹಿತ ಏಕನಾಥ ಗುರೂಜಿಯವರು ಸೂಕ್ತ ಪರಿಹಾರ ಸೂಚಿಸಿರುವುದನ್ನು ಪುರಂದರಯ್ಯನಿಗೂ ರಫೀಕನಿಗೂ ತಿಳಿಸಿ ಅವರಲ್ಲೂ ಧೈರ್ಯ ತುಂಬಿದ. ಶಂಕರ, ಏಕನಾಥರ ಹೆಸರೆತ್ತುತ್ತಲೇ ಅವರಿಬ್ಬರೂ ಗೆಲುವಾದರು. ‘ಹೌದಾ ಶಂಕರಣ್ಣಾ… ಹಾಗಾದರೆ ನಾವು ಬಚಾವಾದೆವು. ಆದರೆ ನಮ್ಮಿಂದಲೂ ತಪ್ಪು ನಡೆದಿದೆಯಲ್ಲವಾ. ಅದರ ನಿವಾರಣೆಗೆ ಮೊದಲ ದೇಣಿಗೆ ನಾವೇ ಕೊಟ್ಟು ಪ್ರಾಯಃಶ್ಚಿತ್ತ ಮಾಡಿಕೊಳ್ಳುತ್ತೇವೆ!’ ಎಂದ ಇಬ್ಬರೂ ನಿಂತ ನಿಲುವಿನಲ್ಲೇ ತಲಾ ಐದೈದು ಸಾವಿರದ ಒಂದು ರೂಪಾಯಿಗಳನ್ನು ತೆಗೆದು ಶಂಕರನ ಕೈಗಿತ್ತರು. ಆಗ ಶಂಕರನಿಗೆ ಗುರೂಜಿಯ ಮಾತುಗಳು ಅಕ್ಷರಶಃ ಸತ್ಯವೆನಿಸಿ ಅವರ ಮೇಲಿದ್ದ ಗೌರವಾದರಗಳು ಇಮ್ಮಡಿಯಾದವು.

   ಏಕನಾಥರು ತಾವು ನಿರ್ಧರಿಸಿದ ದಿನದಂದು ಶಂಕರನ ಜಾಗಕ್ಕೆ ಮರಳಿ ಬಂದರು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ನಾಗ, ದೈವಗಳ ಕುರುಹುಗಳನ್ನು ಆರಿಸಿ ತೆಗೆದು ಅಲ್ಲೇ ಒಂದು ಕಡೆ ಜೋಪಾನವಾಗಿಟ್ಟರು. ಅವು ಭಿನ್ನಗೊಂಡ ಸ್ಥಳದಲ್ಲಿ ವಿಶೇಷ ಪೂಜೆಯೊಂದನ್ನು ನಡೆಸಿದರು. ನಂತರ ಪುರಂದರಯ್ಯ, ರಫೀಕ್ ಮತ್ತು ಶಂಕರನಿಗೆ ಗಂಧಪ್ರಸಾದವನ್ನು ಕೊಟ್ಟು ಕೆಲಸ ಪುನರಾರಂಭಿಸಲು ಅಪ್ಪಣೆ ನೀಡಿ ಹೊರಟು ಹೋದರು. ಯಂತ್ರಗಳ ಮಾಲಕ, ಚಾಲಕರಿಗೆ ವಿಶೇಷ ಹುರುಪು ಬಂತು. ಕೂಡಲೇ ನಾಗಬನದ ಆವರಣವನ್ನು ಕೀಳುವ ಕೆಲಸ ಆರಂಭವಾಯಿತು. ಕೆಲವು ಗಂಟೆಗಳಲ್ಲಿ ಬನದ ಮುಕ್ಕಾಲು ಭಾಗದ ಸುತ್ತುಗೋಡೆಯನ್ನು ನೆಲಸಮಗೊಳಿಸಲಾಯಿತು. ಇನ್ನೊಂದಷ್ಟನ್ನು ಕಿತ್ತು ಬಿಸಾಡಿದರೆ ನಂತರ ಬನ ತೆರವಿನ ಕೆಲಸ ಮುಗಿದಂತೆಯೇ! ಎಂದುಕೊಳ್ಳುತ್ತಿದ್ದ ಪುರಂದರಯ್ಯನೂ ರಫೀಕನೂ ಖುಷಿಯಿಂದ ಇದ್ದರು. ಆದರೆ ಶಂಕರ ಮರವೊಂದರ ನೆರಳಿನಲ್ಲಿ ನಿಂತುಕೊಂಡು ವಿಚಿತ್ರ ತಳಮಳದಿಂದ ನರಳುತ್ತಿದ್ದ. ಅದೇ ಹೊತ್ತಿಗೆ ಅಲ್ಲಿ ಮತ್ತೊಂದು ಘನಘೋರ ಘಟನೆ ನಡೆದುಬಿಟ್ಟಿತು. ಬನದ ಪಾಗರ ತೆಗೆಯುತ್ತಿದ್ದ ಯಂತ್ರವು ತಟ್ಟನೆ ಸ್ತಬ್ಧವಾಯಿತು. ಅದರ ಚಾಲಕ ದಡಬಡನೇ ಕೆಳಗಿಳಿದವನು ಹುಚ್ಚನಂತೆ ತಲೆ ಕೆರೆದುಕೊಳ್ಳುತ್ತ ಓಡಾಡತೊಡಗಿದ. ಅವನು ಕೊಟ್ರೇಶ ಅಂತ. ಉತ್ತರ ಕರ್ನಾಟಕದಿಂದ ಬಂದವನು. ಅವನು ಮೊದಲಿನಿಂದಲೂ ಸ್ವಲ್ಪ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದುದು ಪುರಂದರಯ್ಯನಿಗೆ ಗೊತ್ತಿತ್ತು. ಆದರೆ ಈಶ್ವರಪುರದಲ್ಲಿ ನಾಗನಂಬಿಕೆಗೆ ವಿಶೇಷ ಮಹತ್ವವಿದ್ದುದರಿಂದ ಅದಕ್ಕೆ ಸಂಬಂಧಿಸಿ ಸೃಷ್ಟಿಸಲಾದ ‘ನಾಗದೋಷ’ ಎಂಬ ಭಯವೊಂದು ಇಲ್ಲಿನ ಜನರನ್ನು ಅತಿರೇಕವೆಂಬಷ್ಟರಮಟ್ಟಿಗೆ ಹಿಡಿದು ಕುಣಿಸುತ್ತಿತ್ತು. ಆ ಕಾರಣದಿಂದ ನಾಗಬನ ಅಥವಾ ಹುತ್ತಗಳನ್ನು ತೆರವುಗೊಳಿಸಲು ಸ್ಥಳೀಯ ಯಂತ್ರ ಚಾಲಕರು ಯಾರು ಕೂಡ ಮುಂದೆ ಬರುತ್ತಿರಲಿಲ್ಲ.

   ಆದರೆ ಕೊಟ್ರೇಶನಿಗೆ ಆ ಹೆದರಿಕೆಯಿರಲಿಲ್ಲ. ಏಕೆಂದರೆ ಅವನ ಊರಿನಲ್ಲಿ ಅನೇಕರು ನಾಗರಹಾವು ಮತ್ತಿತರ ಹಾವುಗಳನ್ನು ಕಂಡಕಂಡಲ್ಲಿ ಹೊಡೆದು ಕೊಲ್ಲುತ್ತಿದ್ದರು. ನಾಗರಹಾವನ್ನು ಸಾಯಿಸಿದ ಬಳಿಕ ಅದರ ಮೇಲೊಂದಿಷ್ಟು ಹಾಲು ಸುರಿದು ನಾಣ್ಯವೊಂದನ್ನು ಹಾಕಿ ಸುಟ್ಟ ನಂತರ ಕರಕಲಾದ ನಾಣ್ಯವನ್ನು ಹಾವು ಕೊಂದವನು ತನ್ನ ಕೊರಳಿಗೋ ಅಥವಾ ಉಡಿದಾರಕ್ಕೋ ಕಟ್ಟಿಕೊಂಡರೆ ಹಾವು ಕೊಂದ ಪಾಪ ಪರಿಹಾರವಂತೆ! ಆ ನಾಣ್ಯವು ಅವನ ದೇಹದ ಮೇಲಿರುವತನಕ ಸತ್ತ ಹಾವಿನ ಆತ್ಮವು ಅವನ ಮೇಲೆ ಹಗೆ ಸಾಧಿಸುವುದಿಲ್ಲ ಎಂಬ ನಂಬಿಕೆ ಅವರದ್ದು. ರೈತಾಪಿ ಜನರಾದ ಅವರಲ್ಲಿ ಬಹುತೇಕರಿಗೆ ಹಾವುಗಳು ಮುಖಾಮುಖಿಯಾಗುವುದು ತಮ್ಮ ಹೊಲಗದ್ದೆಗಳಲ್ಲಿ ಮತ್ತು ಹೆಚ್ಚಿನ ಬಾರಿ ಅವುಗಳಿಂದ ಕಚ್ಚಿಸಿಕೊಂಡ ನಂತರವೇ. ಹಾಗಾಗಿ ಅಂಥ ಜೀವಭಯವೇ ಅವರಿಂದ ಮುಗ್ಧ ಉರಗಗಳನ್ನು ಕಂಡಲ್ಲಿ ಮಾರಣಹೋಮ ನಡೆಸುವಂತೆಯೂ ಪ್ರೇರೇಪಿಸುತ್ತದೆ. ಆದ್ದರಿಂದ ನಾಗರ ಹಾವಿನಂಥ ಜೀವಿಗಳು ತಮ್ಮ ಕಣ್ಣಿಗೆ  ಬಿದ್ದಲ್ಲಿ ಕೊಲ್ಲದೆ ಬಿಟ್ಟರೆ ಅವು ಎಂದಾದರೊಂದು ದಿನ ತಮಗೆ ಅಪಾಯ ಮಾಡಬಲ್ಲವು ಅಥವಾ ತಮ್ಮಿಂದೇನಾದರೂ ಹಾನಿಗೊಂಡರೆ ಅವುಗಳು ತಮ್ಮ ಮೇಲೆ ಹನ್ನೆರಡು ವರ್ಷ ಹಗೆತೊಟ್ಟು ಕಚ್ಚಿ ಸಾಯಿಸದೆ ಬಿಡಲಾರವು! ಎಂಬ ಮೌಢ್ಯಕ್ಕೆ ಬಲಿಯಾಗಿದ್ದಂಥ ಅಲ್ಲಿನ ಬಹುತೇಕರಲ್ಲಿ ಕೊಟ್ರೇಶನೂ ಒಬ್ಬನಾಗಿದ್ದ. ಹಾಗಾಗಿ ಅವನೂ ಹತ್ತಾರು ನಾಗರಹಾವುಗಳನ್ನು ವೀರಾವೇಶದಿಂದ ಚಚ್ಚಿ ಸಾಯಿಸಿದ್ದ!

   ಈ ಕೊಟ್ರೇಶ ಕೆಲವು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಈಶ್ವರಪುರಕ್ಕೆ ಬಂದವನು ತನ್ನ ಚುರುಕಿನ ದುಡಿಮೆಯಿಂದಾಗಿ ಪುರಂದರಯ್ಯನ ಕಣ್ಣಿಗೆ ಬಿದ್ದಿದ್ದ. ಬಹಳ ಬೇಗನೇ ಅವರ ಜೆಸಿಬಿ ಯಂತ್ರಗಳನ್ನು ಚಲಾಯಿಸಲೂ ಕಲಿತ. ಅವನೇ ಕಲಿತ ಎನ್ನುವುದಕ್ಕಿಂತ ಪುರಂದರಯ್ಯನವರೇ ಆಸ್ಥೆಯಿಂದ ಕಲಿಸಿದರು ಎಂದರೂ ಸರಿಯೇ. ಏಕೆಂದರೆ ಈಗಾಗಲೇ ನಗರೀಕರಣದ ಭರಾಟೆಗೆ ತುತ್ತಾಗಿರುವ ಈಶ್ವರಪುರದ ಅನೇಕ ಹಸಿರುಪ್ರದೇಶ ಮತ್ತು ಬೆಟ್ಟಗುಡ್ಡಗಳನ್ನು ತೆರವುಗೊಳಿಸುವ ಕೆಲಸಕಾರ್ಯಗಳ ಗುತ್ತಿಗೆಯು ಹೆಚ್ಚಾಗಿ ಪುರಂದರಯ್ಯನಿಗೇ ಸಿಗುತ್ತಿದ್ದವು. ಅಂಥ ದೊಡ್ಡ ದೊಡ್ಡ ಕಾಡುಗುಡ್ಡಗಳಲ್ಲಿರುವ ನೂರಾರು ಹುತ್ತಗಳನ್ನೂ ಹಸಿರು ನಾಗಬನಗಳನ್ನೂ ನಿರ್ಮೂಲ ಮಾಡಲು ನಾಗದೋಷಕ್ಕೆ ಹೆದರದಂಥ ಗಟ್ಟಿಗ ಯುವಕರೇ ಅವರಿಗೆ ಬೇಕಿದ್ದರು. ಅದಕ್ಕೆ ಕೊಟ್ರೇಶನೂ ಸೂಕ್ತ ವ್ಯಕ್ತಿಯೆಂದು ಮನಗಂಡಿದ್ದ ಅವರು ಆ ಕೆಲಸಗಳನ್ನು ಅವನಿಂದಲೇ ಮಾಡಿಸುತ್ತಿದ್ದರು.

   ಕೊಟ್ರೇಶ ತನ್ನ ಊರಿನಲ್ಲಿದ್ದಾಗ ಅದೆಷ್ಟೋ ನಾಗರಹಾವುಗಳನ್ನು ನಿಷ್ಕರುಣೆಯಿಂದ ಕೊಂದಿದ್ದನಾದರೂ ಈಶ್ವರಪುರಕ್ಕೆ ಬಂದ ಮೇಲೆ ಇಲ್ಲಿನ ಜನರು ನಾಗರಹಾವನ್ನು ‘ದೇವರು’ ಎಂದು ಪೂಜಿಸುವುದು ಮತ್ತು ಆ ಹಾವುಗಳು ಆಕಸ್ಮತ್ ಕಣ್ಣಿಗೆ ಬಿದ್ದಾಗಲೆಲ್ಲ ಕೈಮುಗಿದು ಗೌರವ ತೋರಿಸುವುದನ್ನು ಕಾಣುತ್ತಿದ್ದವನು, ‘ಹೇ ಇಲ್ಲಿನ ಮಂದಿಗೆಲ್ಲೋ ತಲೆ ಕೆಟ್ಟೈತೆ! ಇಲ್ಲಾಂದ್ರ ವಿಷದ ಹುಳವೊಂದನ್ನು ಚಚ್ಚಿ ಸಾಯಿಸಿ ಸುಡೋದನ್ನು ಬಿಟ್ಟು ದೇವರು ದಿಂಡರು ಅಂತ ಪೂಜೆ ಪುನಸ್ಕಾರ ಮಾಡಕತ್ಯಾರಲ್ಲ ಮಂಗ್ಯಗಳು!’ ಎಂದು ತಮ್ಮವರೊಡನೆ ಗೇಲಿ ಮಾಡಿ ನಕ್ಕಿದ್ದ ಮತ್ತು ಇಲ್ಲಿನ ಸರ್ಪಸಂಸ್ಕಾರದ ಆಚರಣೆಗಳನ್ನು ಕಂಡು ತಲೆಕೆರೆದುಕೊಂಡು ವಿಸ್ಮಯವನ್ನೂ ಪಟ್ಟಿದ್ದ. ಆದರೆ ಹತ್ತು ಮಂದಿ ಸುಭಗರೊಂದಿಗೆ ಬೆರೆಯುವ ಒಬ್ಬ ಕೆಟ್ಟವನೂ ಕ್ರಮೇಣ ಸುಭಗನಾಗುತ್ತಾನೆ! ಎಂಬ ಮಾತಿನಂತೆ ಕೊಟ್ರೇಶನೊಳಗೂ ನಿಧಾನವಾಗಿ ನಾಗರಹಾವುಗಳ ಮೇಲೆ ಪೂಜ್ಯ ಭಾವನೆಯೂ, ನಾಗಾರಾಧನೆಯ ಮೇಲೆ ಭಯಭಕ್ತಿಯೂ ಮೂಡಿಬಿಟ್ಟಿತು. ಅಷ್ಟೇ ಆಗಿದ್ದರೆ ತೊಂದರೆಯಿರಲಿಲ್ಲವೇನೋ? ಆದರೆ ಇಲ್ಲಿನ ಮಂದಿಯ ನಂಬಿಕೆಯಂತೆ, ತಾನು ತನ್ನೂರಲ್ಲಿ ಸಾಯಿಸಿದ ಅಷ್ಟೂ ನಾಗರಹಾವುಗಳ ಶಾಪದ ದೋಷ ತನಗೂ ತಟ್ಟದಿದ್ದೀತೇ…? ಎಂಬ ಚಿಂತೆಯೂ ಅವನನ್ನು ಹಿಂಸಿಸತೊಡಗಿದ್ದರಿಂದ ಕ್ರಮೇಣ ಆ ಭಯವು ಅವನನ್ನು ಗಾಢವಾಗಿ ಆವರಿಸಿಕೊಂಡುಬಿಟ್ಟಿತು. ಆದರೆ ಆ ವಿಷಯ ಅವನ ಮನೆಮಂದಿಗಾಗಲಿ ಜೊತೆಗಾರರಿಗಾಗಲಿ ಅಥವಾ ಪುರಂದರಯ್ಯನಿಗಾಗಲಿ ತಿಳಿದಿರಲಿಲ್ಲ.

  ಇಂಥ ಸ್ವಭಾವದ ಕೊಟ್ರೇಶ ಇವತ್ತು ಏಕಾಏಕಿ ಕೆಲಸ ನಿಲ್ಲಿಸಿ ಹುಚ್ಚನಂತೆ ವರ್ತಿಸುತ್ತಿದ್ದ. ಪುರಂದರಯ್ಯನಿಗೆ ಆತಂಕವಾಯಿತು. ಅವರು ಕೂಡಲೇ ಅವನತ್ತ ಧಾವಿಸಿದವರು, ‘ಹೇ, ಕೊಟ್ರೇಶಾ… ಯಾಕಾ, ಯಾಕನಾ ಏನಾಯ್ತನಾ…?’ ಎಂದು ಗದರಿಸಿದರು. ಆದರೆ ಅವರನ್ನು ಕಂಡ ಆತ ಮತ್ತಷ್ಟು ವಿಚಲಿತನಾಗಿ, ‘ಅಲ್ನೋಡ್ರೀ ಧಣೇರಾ, ಅಲ್ನೋಡ್ರೀ…! ನನ್ನಿಂದ ಭಾಳ ದೋಡ್ ತಪ್ಪಾಗಿ ಹೋತ್ರಿಯಪ್ಪಾ ಶಿವನೇ…!’ ಎಂದು ಅರಚುತ್ತ ಗೋಳಾಡತೊಡಗಿದ. ಅವನ ಬೊಬ್ಬೆಯನ್ನು ಕಂಡ ಪುರಂದರಯ್ಯನಿಗೂ ಶಂಕರನಿಗೂ ದಿಕ್ಕುತೋಚದಾಯಿತು. ಕೊಟ್ರೇಶ ಬೆಟ್ಟು ಮಾಡಿದತ್ತ ಅಳುಕುತ್ತ ನಡೆದರು. ಆದರೆ ಅಲ್ಲಿನ ದೃಶ್ಯವನ್ನು ಕಂಡವರು ದಿಗ್ಭ್ರಾಂತರಾದರು!

(ಮುಂದುವರೆಯುವುದು)

*****

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

2 thoughts on “

  1. ಶಂಕರ ಹಿಡಿದ ದಾರಿಯಲ್ಲಿಯೇ ಏಕನಾಥರೂ ಸಾಗಿ, ಅವನ ಅಸಹಾಯಕತೆಯ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡು ಶಂಕರನನ್ನು ಸಂಪೂರ್ಣವಾಗಿ ತನ್ನ ವಶ ಮಾಡುವಲ್ಲಿ ಹೇಗೆ ಯಶಸ್ವಿಯಾಗುತ್ತಾರೆಂಬುದು ಈ ಅಧ್ಯಾಯದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಕಾದಂಬರಿಕಾರರಿಗೆ ಅಭಿನಂದನೆಗಳು

Leave a Reply

Back To Top