ಕವಿತೆ
ಅನರ್ಥರು
ಮಾಸ್ಕೇರಿ ನಾಯಕ
ಮಾತು ಮಾತಿಗೆ ಸುಳ್ಳು
ಬಿಡದೆ ಹೇಳುವ ಚಾಳಿ
ಊರು ಕೇರಿ ಹಾದಿ-
ಬೀದಿ ಗುನುಗು. |
ಮೂರು ಹೆತ್ತು ನೂರು
ಹೆತ ್ತವರ ನಾಚಿಸುವ
ಲೋಭಿ ಜೋಡಿ ಹಮ್ಮು-
ಬಿಮ್ಮು ಬೆರಗು. ||
ಪೂರ್ವಜರ ಕರ್ಮಫಲ
ಅನುಜರೊಲ್ಮೆಯ ಬಲ್ಮೆ
ಬಳಸಿ ಬೆಳೆದು ಮಲೆತು-
ಮರೆತ ಪ್ರೀತಿ. |
ಪಾದರಸ ಸ್ಪರ್ಷದಲಿ
ಚಿನ್ನ ಬಣ್ಣವು ಬದಲು
ಅರಿತು ಅರಿಯದೆ ಬೆರೆತು-
ಮಣ್ಣು ಖ್ಯಾತಿ. ||
ಶತ್ರುವಿನ ಶತ್ರು ಕ್ಷಣ-
ಮಾತೃದ ಮಿತ್ರನಹ
ಮರುಗಳಿಗೆ ಕುದಿವ ನವ-
ಜಯಶಾಲಿಗೆ. |
ಮನುಷತ್ವ ದಿವಾಳಿಯ
ಬಾಂಧವ್ಯಕ್ಕೆಲ್ಲಿ ಬೆಲೆ?
ಅಡ್ಡ ಮಾರ್ಗವೇ ಸ್ವರ್ಗ-
ಅನರ್ಥರಿಗೆ. ||
ಮರಕುಟುಕ ಬಲ್ಲುದೆ
ತನಿವಣ್ಣು ತರು ಬೆಲೆ?
ಹುಳ ಹುಪ್ಪಡಿ ಕುಕ್ಕಿ-
ತಿನುವ ಕರ್ಮ. |
ಕುಲಘಾತುಕ ತಿಳಿಯನು
ಆಶ್ರಯದ ಕರುಳ ಬೆಲೆ
ದಯೆಯ ಹಾದಿಯೇ ನಿಜದ-
ಮನುಜ ಧರ್ಮ. ||
**********************************
ವರ್ತಮಾನಕ್ಕೆ ಕನ್ನಡಿ ಹಿಡಿವ ಕವಿ . ಚೆಂದ ಕವಿತೆ
ಜನರ,ಸಮಾಜದ ಅಂತರಂಗವನ್ನು ಶೋಧಿಸುವ ಕವಿತೆ..
ಅಧ್ಬುತ ಕವಿತೆ ಹಮ್ಮು ಗಿಮ್ಮು ಬಿಟ್ಟು ಬದುಕುವ ಬದುಕು ಜನರ ಆತ್ಮಸಾಕ್ಷಿಗೆ ಹಿಡಿದ ಕನ್ನಡಿ..ಸೂಪರ್ ಕವಿತೆ…ಗುರುಗಳೇ