ಅಂಕಣ ಬರಹ

ರಂಗ ರಂಗೋಲಿ

ಗುಲಾಬಿಯಾಗಿ ಅರಳುವ ಕನಸು.

Gulabi Talkies Movie: Showtimes, Review, Songs, Trailer, Posters, News &  Videos | eTimes

 ನಾಚಿಕೆ ಯಾಕೆ. ಸಂಕೋಚ ಮಾಡಬೇಡಿ. ಈಗ ನಮಗೂ ನಿಮಗೂ ಸಂಬಂಧವೂ ಅಗ್ತದೆ. ಒಳಗೆ ಬನ್ನಿ. ನೀವು ಬಾರದಿದ್ದರೆ ನಮಗೆ ಭಾರೀ ಬೇಜಾರಾಗ್ತದೆ.

 ನಿಮಗೆ ನಮ್ಮ ಮನೆಯವರು ಚಹಾ ಮಾಡ್ತಾರೆ. ಇದು ನಿಮ್ಮದೇ ಮನೆ. ನಿಮ್ಮ ಗುಂಪಿನವರು ಹೊರಗೆ ಚಹಾ ಕುಡಿಯಲಿ. ನೀವು ಮಾತ್ರ ಯಾವಾಗಲೂ ಇಲ್ಲಿಗೆ, ಒಳಹಜಾರಕ್ಕೇ ಬನ್ನಿ. ಎಲ್ಲರೂ ಬರುವುದು ನಮಗೆ ಅಷ್ಟು ಸರಿ ಆಗುವುದಿಲ್ಲ. “

ನಾನು ಅಯೋಮಯಳಾಗಿ ಏನೊಂದೂ ಅರ್ಥವಾಗದೆ ಅವರನ್ನು ದಿಟ್ಟಿಸುತ್ತಿದ್ದೆ.

ಅದು ಪುಟ್ಟ ಹಳೆಯ ಮಂಗಳೂರು ಹೆಂಚಿನ ಮನೆ. ಮನೆಯ ಹೊರಗೆ ಜಗುಲಿ. ಜಗುಲಿಗೆ ಒರಗಿದಂತೆ  ಕಡಲು ತನ್ನ ಸೆರಗು ಬಿಡಿಸಿಟ್ಟು ಬೀಸು ಗಾಳಿಗೆ ತುಯ್ದಾಡುತ್ತದೆ.

ಅಲ್ಲಿ ಕಡಲ ತಡಿಯಲ್ಲಿ ಇದ್ದುದೇ 4-5 ಮನೆ. ಭೋರ್ಗರೆಯುವ ಸಮುದ್ರ. ಮೀನುಗಾರಿಕೆ ಅವರ ಕಸುಬು. ಅವರು ನವಾಯತ್ ಮುಸ್ಲಿಂ ಜನಾಂಗಕ್ಕೆ ಸೇರಿದವರು.  ಆದರೆ ನನ್ನಲ್ಲಿ ಹೀಗೇಕೆ ಮಾತನಾಡುತ್ತಿದ್ದಾರೆ?. ಅದೂ ನಡು ವಯಸ್ಸಿನ ಗಂಡಸು.

 ಇದು “ಗುಲಾಬಿ ಟಾಕೀಸ್” ಸಿನೇಮಾ ಚಿತ್ರೀಕರಣದ ಸಮಯದಲ್ಲಿ ನಡೆದ ಪ್ರಸಂಗ. ಆದರೆ ಮೇಲಿನ ಮಾತುಗಳು ಸಿನೇಮಾದ ಮಾತುಗಳಂತೂ ಖಂಡಿತವಲ್ಲ. ಅಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ನಾವು ಬಿಡುವಿನ ಕಲಾವಿದರು  ಈ ಮನೆಯ ಜಗುಲಿಯ ಮೇಲೆ ಕೂತು ಹರಟೆ,ಮಾತು ನಡೆಸುತ್ತಿದ್ದೆವು. ಆ ಮನೆಯ ಯಜಮಾನರು ಯಾರಲ್ಲೂ ಅನಾವಶ್ಯಕವಾಗಿ ಮಾತನಾಡುತ್ತಿರಲಿಲ್ಲ. ಆದರೆ ನನ್ನನ್ನು ಬಲು ಆಪ್ತತೆಯಿಂದ

 “ಚಹಾ ಕುಡಿದಾಯಿತೇ

 ಎಂದು ವಿಚಾರಿಸುತ್ತಿದ್ದರು.

ಆಯಿತು

ನಾನಂದೆ.

 ” ಬನ್ನಿ ಒಳಗೆ ಬನ್ನಿ. ನಮ್ಮ ಜೊತೆ ಸ್ವಲ್ಪ ಕುಡಿಯಿರಿ

ಎಂಬ ಆಹ್ವಾನ.

ಬೇಡ. ಅಲ್ಲಿದೆ

ಎಂದರೂ ಮತ್ತೆ ಮತ್ತೆ ಒತ್ತಾಯ.

 ಉಳಿದವರು ಕುಡಿಯಲಿ. ನೀವು ಇಲ್ಲಿ ಬನ್ನಿ.”

ಎಂದವರು ಧ್ವನಿ ತಗ್ಗಿಸಿ ಸಂಬಂಧ ಕುದುರಿಸುವ ಮಾತು ಆಡಿದ್ದರು. ಅವಕ್ಕಾದೆ. ಇವರು ಏನು ಹೇಳುತ್ತಿದ್ದಾರೆ. ಅವರು ನಿಧಾನವಾಗಿ ಮಾತು ಮುಂದುವರೆಸಿದರು.

 ಮೊದಲೆಲ್ಲ ಬಹಳ ನಿಯಮಗಳು ಇದ್ದವು. ಆದರೆ ಈಗ ಅದೇನೂ ಅಂತದಿಲ್ಲ. ಬಹಳ ಕಡೆ ಆಗಿದೆ. ನಮಗೆ ಸಂಬಂಧ ಆಗುತ್ತದೆ. ಈಗ  ಬ್ಯಾರಿಗಳಿಗೂ ಹಾಗೂ ನಮ್ಮ ನವಾಯತ್ ನಡುವೆ ದೊಡ್ಡ ಭೇದವಿಲ್ಲ.”

 ನನ್ನ ಮುಖದಲ್ಲಿ ಅದುವರೆಗೂ ಕಟ್ಟಿಟ್ಟ  ವ್ಯಾಕುಲತೆ ಕಾಣೆಯಾಗಿ ಹಗುರಾದೆ.

ಹ್ಹೋ..ಹೀಗೋ..ಕಥೆ. ಅರ್ಥವಾಯಿತು

 ಅಂದುಕೊಂಡೆ.

ಇದು ಗುಲಾಬಿ ಟಾಕೀಸ್ ಸಿನೇಮಾದ ಚಿತ್ರೀಕರಣದಲ್ಲಿ ನಡೆದ ಸಂಗತಿ. ನನ್ನ ಸಾಂಪ್ರದಾಯಿಕವಾದ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಅಭಿನಯ ಉಡುಗೆ, ಆಭರಣಗಳನ್ನು ಕಂಡು ಆ‌ ಮಹಾಶಯರು ಮೋಡಿಗೊಳಗಾಗಿ ಮೋಸಹೋಗಿದ್ದರು. ಇದು ನನ್ನ ಪಾತ್ರದೊಳಗಿನ ನನ್ನ ತಾದಾತ್ಮ್ಯದ ಜಯವೇ? ಅಂತ ಹೇಳಲಾರೆ.

ಗುಲಾಬಿ ಟಾಕೀಸ್ ಸಿನೇಮಾ ನನ್ನ ಹಿರಿತೆರೆಗೆ ಬಾಗಿನ ಕೊಟ್ಟ ಸಿನೇಮಾ. ಅದರ ಮುನ್ನ ಸರಸಮ್ಮನ ಸಮಾಧಿ ಧಾರವಾಹಿಯ ವಿಫಲ ಯತ್ನ ನಡೆಸಿದ್ದೆನಷ್ಟೆ.

ಆ ಸಮಯದಲ್ಲಿ ನಾನು ಜೆ.ಸಿಯ ಮಹಿಳಾ ವಿಭಾಗದ ಘಟಕಾಧ್ಯಕ್ಷೆ. ಜವಾಬ್ದಾರಿ ವಹಿಸಿಕೊಂಡ ಕಾರಣ ಕಾರ್ಯಕ್ರಮ ಮಾಡಬೇಕು ಎಂಬ ತಹಾತಹಿಯಲ್ಲಿ ಒಂದಷ್ಟು ತರಬೇತಿ ಕಾರ್ಯಕ್ರಮಗಳನ್ನು ಹಲವಾರು ಕಡೆ ಹಮ್ಮಿಕೊಂಡಿದ್ದೆ. ನಿರಂತರ ಎರಡು ಸಪ್ತಾಹ ಮದ್ಯಾಹ್ನದ ಸಮಯ ತರಬೇತಿ ಇತ್ತು. ಆ ದಿನವೂ ಆಸ್ಪತ್ರೆಯ ದಾದಿಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಮುಗಿಸಿ ಮನೆಗೆ ಬರುತ್ತಿದ್ದೆ‌. ಆ ದಿನ ಬೆಳಿಗ್ಗೆ ದಿನಪತ್ರಿಕೆಯಲ್ಲಿ

” ಗಿರೀಶ್ ಕಾಸರವಳ್ಳಿಯವರ ಹೊಸ ಸಿನೇಮಾಗಾಗಿ  ಕಲಾವಿದರ ಆಯ್ಕೆ ಪ್ರಕ್ರಿಯೆ  ಹೊಟೇಲ್ ಕಿದಿಯೂರಿನಲ್ಲಿ  ನಡೆಯಲಿದೆ. ಆಸಕ್ತ ಕಲಾವಿದರು ಭಾಗವಹಿಸಬಹುದು” ಎಂದಿತ್ತು. ಮತ್ತೆ ಮತ್ತೆ ಓದಿದ್ದನ್ನೇ ಓದಿದೆ. ಕನಸು ಗರಿಕಟ್ಟಲಾರಂಬಿಸಿತ್ತು.

 ಅಬ್ಬಾ..ಜನ್ಮ ಸಾರ್ಥಕ. ಗಿರೀಶ್ ಕಾಸರವಳ್ಳಿಯವರ ಸಿನೇಮಾದಲ್ಲಿ ಅಭಿನಯ. ಬಾಲ್ಯದಲ್ಲಿ ಕನಸುಕಂಡಿದ್ದೆ. ಆದರೆ ಹೇಗೆ ಸಾಧ್ಯ? ಯಾವ ಹಿನ್ನೆಲೆ,ಅನುಭವ,

ಪರಿಚಯ,ಪ್ರತಿಭೆ ನನ್ನ ಆಯ್ಕೆ ಮಾಡುವಲ್ಲಿ ನೆರವಾದೀತು?

ಯೋಚನೆಯಲ್ಲೇ ನಡುದಿನ ಬಂದು ನನ್ನ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದೆ. ವಿಷಯ ಮಸುಕಾಗಿತ್ತು. ಸಂಜೆ ತರಬೇತಿ ಮುಗಿಸಿ ತರಬೇತಿಯಲ್ಲಿ ಭಾಗವಹಿಸಿದ್ದ ಹುಡುಗಿಯರ ಮಾತು,ವಿಷಯ ಇತ್ಯಾದಿಗಳ ಮೆಲುಕು ಹಾಕುತ್ತ ನಡೆದುಕೊಂಡು  ಬರುತ್ತಿದ್ದೆ. ಸುಸ್ತಾಗಿದ್ದೆ. ನಮ್ಮ‌ಮನೆ ತಲುಪಬೇಕಾದರೆ ಅದೇ ಕಿದಿಯೂರು ಹೋಟೇಲ್ ದಾಟಿ ಹೋಗಬೇಕಾಗಿತ್ತು. ಹೋಟೇಲ್ ಎದುರಿನಿಂದ ಹಾದು ಹೋಗುವಾಗ  ಮುಂಜಾವು ಅರಳಿದ್ದ ಕನಸುಮಲ್ಲಿಗೆಯ ಪರಿಮಳ ಮತ್ತೆ ಅಘ್ರಾಣಿಸಿದಂತಾಯಿತು. ಕ್ಷಣ ನಿಂತು ಎತ್ತರಕ್ಕೆ ನಿಂತ ಆ ಕಟ್ಟಡ ನೋಡಿದೆ. ಇದರ ಒಳಗಡೆ

‘ಅವರಿದ್ದಾರೆ’ ಹೋದರೆ ಹೇಗೆ..!? ಮತ್ತೆ ಅಳುಕು. ಹೇಗೆ ಹೋಗುವುದು? ಅಲ್ಲಿ ಯಾರೆಲ್ಲ ಇದ್ದಾರೆಯೋ..? ಹೋಟೇಲಿನ ರಿಸೆಪ್ಷನ್ ಬಳಿ ಪರಿಚಯದವರು ಎದುರಾದರೇ? ಪ್ರಶ್ನಿಸಿದರೆ..? ಯೋಚನೆಗಳ ಸುಳಿಯಲ್ಲಿ ಮನೆಗೆ ಹೋಗಲೂ ಮನಸ್ಸಾಗದೆ ಹೋಟೆಲ್ ಒಳಗೇ ಹೋಗಲು ಧೈರ್ಯ ಸಾಲದೆ ಕಲ್ಲಿನಂತೆ ರಸ್ತೆಯಲ್ಲೇ ನಿಂತಿದ್ದೆ.

 ಕಣ್ಣುಗಳು ಯಾರಾದರೂ ಪರಿಚಯದ ಕಲಾವಿದರು ಕಾಣಬಹುದೇ? ಅರೇ,ಪೂರ್ಣಿಮಾ. ಸಿನೇಮಾದ ಆಡಿಷನ್ ಗೆ ಬಂದ್ರಾ..ಒಳಗೆ ಬನ್ನಿ

ಎಂದು ಕರೆದುಕೊಂಡು ಯಾರಾದರೂ ಹೋದರೆ ಎಷ್ಟು ಒಳ್ಳೆಯದಿತ್ತು. ಇಲ್ಲ ಹಾಗೆಲ್ಲ ಆಗದು. ಮನೆಗೆ ಹೋಗುವುದೇ ಸರಿ   ಎಂದು ಹಾದಿಯ ತುದಿ ತಲುಪಿದವಳು ಒಳಗಿನ ಒತ್ತಾಸೆ ಮೀರಲಾರದೆ‌ ಮತ್ತೆ ಹಿಂತಿರುಗಿ ನೇರ ರಿಸೆಪ್ಷನ್ ಬಳಿ ಹೋದೆ.

ಅಲ್ಲಿ ಪರಿಚಯದ ಕಲಾವಿದರು ಉದ್ಯೋಗಿಯಾಗಿದ್ದರು.

 ಕಾಸರವಳ್ಳಿ ಯವರ ಸಿನೇಮಾದ ಆಡಿಷನ್ ಮುಗಿಯಿತಾ

ಬೆಳಗ್ಗಿನಿಂದ ನಡೆಯುತ್ತಿದೆ. ಎಂತಹ ಜನರು. ಎಷ್ಟು ಮಂದಿ..ಇನ್ನೂ ಮುಗಿದಿಲ್ಲ

 ಹ್ಹೋ..ಸರಿ. ಹಾಗಾದರೆ ನಾನು ಹೋಗುವುದು ಸುಮ್ಮನೆ. ವಾಪಾಸ್ ಹೋಗುವ “.

ಬೆನ್ನು ತಿರುಗಿಸಿದೆ.

 “ಅರೇ! ವಾಪಾಸು ಯಾಕೆ ಹೋಗ್ತೀರಿ. ಬಂದು ಆಗಿದೆ. ನೋಡಿಯಾದರೂ ಹೋಗಿ. ಎರಡನೇ ಪ್ಲೋರಿಗೆ ಹೋಗಿ. ನಿಮ್ಮ ರಂಗಭೂಮಿಯ ಕಲಾವಿದರೆಲ್ಲ ಬೆಳಗ್ಗಿನಿಂದ ಬಂದವರು ಅಲ್ಲೇ ಇದ್ದಾರೆ. ಹೋಗಿ,ಹೋಗಿ.”

ಒಹ್ ಹೌದೇ!”

ನಿಧಾನವಾಗಿ ಮೆಟ್ಟಲೇರಿದೆ. ಒಂದನೇ ಮಹಡಿಯಿಂದ ಎರಡನೇ‌ಮಹಡಿಗೆ ಹೋಗುವ ಮೆಟ್ಟಲುಗಳ ಮೇಲೆ ಕುಳಿತ ಕಲಾವಿದರು. ಎರಡನೆಯ ಮಹಡಿಯ ಕಾರಿಡಾರಿನ ತುಂಬ ಅಪರಿಚಿತ,ಪರಿಚಿತ ಕಲಾವಿದರುಗಳು ಸಾಲು ಸಾಲು ನಿಂತಿದ್ದಾರೆ.

ಎಂತದೋ ನಾಚಿಕೆ. ಹಿಂತಿರುಗುವುದು ಉತ್ತಮ ಎಂದರೂ ಪಾದ ಮುಂದಕ್ಕೆ ಚಲಿಸುತ್ತಿತ್ತು. ಅಲ್ಲಿ ಆ ರೂಮಿನ ಹೊರಗೆ ಕುರ್ಚಿಯ ಮೇಲೆ ನನ್ನ ರಂಗದ ಗುರುಗಳಾದ ‘ಬಾಸುಮ’ ಸರ್ ಇದ್ದರು. ಎದುರುಗಡೆ ಉದ್ದನೆಯ ಪುಸ್ತಕ. ಏನು ಬರೆಯುತ್ತಿದ್ದಾರೆ!?’

ಸರ್..”

ಹ್ಹೋ ಆಡಿಷನ್ ಗೆ ಬಂದ್ರಾ

ಸುಮ್ನೆ

ತಗೊಳ್ಳಿ. ಒಳಗೆ ಹೋಗಿ. ನಿಮ್ಮ ನಂಬರ್ 99″

ಸರ್..”

ಪೆಚ್ಚುಪೆಚ್ಚಾಗಿ ನೋಡಿದೆ. ಅದುವರೆಗೆ ಸರಿಯಾಗಿದ್ದ ಕೈಕಾಲುಗಳಲ್ಲಿ ನಿಧಾನವಾಗಿ ನಡುಕ ಆರಂಭ.

ಹೆದರಬೇಕಾಗಿಲ್ಲ. ನೇರ ಬಾಗಿಲು ದೂಡಿ ಒಳಗೆ ಹೋಗಿ. ಅವರು ಸಂಭಾಷಣೆಯ ಪಠ್ಯ ನೀಡಿದರೆ ಕ್ಯಾಮಾರದ ಎದುರು ಭಾವಪೂರ್ಣವಾಗಿ ಅಭಿನಯಿಸಿ. ಹೋಗಿ.ಬಹಳ ಜನ ಇದ್ದಾರೆ. ನೀವು ಹೋಗಿ. ಹೆದರಬೇಕಾಗಿಲ್ಲ

ಮೆಲ್ಲನೆ ಬಾಗಿಲು ಕಟಕಟಿಸಿ ಒಳಗಡಿ ಇಟ್ಟೆ. ಕ್ಯಾಮರದ ಎದುರು ಪುಸ್ತಕ ಹಿಡಿದು ನಿಂತ ಹುಡುಗರು. ಒಂದಿಬ್ಬರು ಸಂಭಾಷಣೆ ಉರು ಹೊಡೆಯುವ ಮುಖಭಾವದ ಕಲಾವಿದರು. ಕಾಸರವಳ್ಳಿ ಸರ್ ದಿಂಬಿಗೆ  ಒರಗಿದಂತೆ ಕೂತಿದ್ದರು. ಸೌಮ್ಯ ಮುಖ. ನಗುವ ಕಣ್ಣುಗಳು.

ಬನ್ನಿ, ನಾಟಕದಲ್ಲಿ ಅಭಿನಯಿಸಿದ್ದೀರಾ

ಹೌದು ಸರ್

ಯಾವುದು

ಸರ್, ಹೇಮಂತ

ಎಷ್ಟು ಕಾಲವಾಯಿತು

ಸುಮಾರು ಎರಡು ವರ್ಷ ಆಯ್ತು ಸರ್

ನಿಮ್ಮ ಪಾತ್ರದ ಮಾತು ನೆನಪಿದೆಯೇ

ಸರ್ಇದೆ. ಸ್ವಲ್ಪ

ಅಭಿನಯಿಸಿ

ನಾಟಕ ಮುಗಿದು ಅದೆಷ್ಟು ಕಾಲವಾಗಿದೆ. ಮಾತು ಹೇಗೆ,ಎಲ್ಲಿಂದ ನೆನಪಿಸಲಿ? ಅದೂ ಈ ಸ್ಥಿತಿ ಒತ್ತಡದಲ್ಲಿ! ನೆನಪಾಗುವುದೇ? ಯಾರಾದರೂ ಸಹಾಯ ಮಾಡಬಾರದೇ.. ಆರ್ತಳಾಗಿ ಬಾಗಿಲಿನತ್ತ ನೋಡಿದೆ. ಹೊರಗಡೆ ನಟನೆ ಕಲಿಸಿದ ಹೇಮಂತದ ನಿರ್ದೇಶಕರಿದ್ದಾರೆ. ಆದರೆ ಅಸಹಾಯಕಳು.

ಗೊತ್ತಿಲ್ವಾ

ಹಾಂ..ಮಾಡುವೆ ಸರ್

ಕುಸಿದೆ. ಹೇಮಂತನ ಉಷಾಳನ್ನು ನೆನಪಿಸಿದೆ. ಅವಳ ಅಸಾಯಕತೆ ಮನದಲ್ಲಿ ಚಿತ್ರಗೊಂಡಿತು. ಅಂದಿನ ಸಂಭಾಷಣೆ‌ ಮರೆತಿತ್ತು. ಕಣ್ಣೆದುರು ಉಷಾ. ಆ ಪಾತ್ರದ ಗುಣವಷ್ಟೆ..ಉಷಾ ಮಾತನಾಡಿದಳು.

ಸಾಕು. ಬೇರೆ ಯಾವುದರಲ್ಲಾದರೂ ಅಭಿನಯಿಸಿದ ಅನುಭವ ಇದೆಯೇ

ಥಟ್ಟನೆ ಕಣ್ಣಮುಂದೆ

 ‘ ಸರಸಮ್ಮನ ಸಮಾಧಿ’ ಬಂತು

ಹಾಂ ಸರ್. ಧಾರವಾಹಿಯಲ್ಲಿ ಅಭಿನಯಿಸಿದ್ದೇನೆ

ಯಾವುದು

ಸರಸಮ್ಮನ ಸಮಾಧಿ

ಹ್ಹೋ..ನಾಗೇಶರವರ ಧಾರವಾಹಿ. ಯಾವ ಪಾತ್ರ?”

(ಅಯ್ಯೋ..ಯಾವ ಪಾತ್ರ!,)

ಜಲಜಾಕ್ಷಿ..ಅಲ್ಲಲ್ಲ..ಗುಲಾಬಿ.” ತಡವರಿಸಿದೆ..

ಸರ್, ಅದೂ..ನಾನು ಪಾತ್ರ ಪೂರ್ತಿ ಮಾಡಲಿಲ್ಲ

ಯಾವ ಪಾತ್ರ

ಅದೇ,ನನಗೆ ಕೊಟ್ಟ ಪಾತ್ರ. ಅದೂ ಇಷ್ಟ ಆಗಿರಲಿಲ್ಲ. ಅದಕ್ಕೆ ಅರ್ಧ ಮಾಡಿ ವಾಪಾಸ್ ಬಂದೆ

ಮತ್ತೇ..?”

ಮತ್ತೆ. ನಾನು ಹೋಗಲಿಲ್ಲ ಸರ್. ಹಾಗಾಗಿ ಧಾರವಾಹಿಯಲ್ಲಿ ನಾನಿಲ್ಲ

ನನ್ನನ್ನೇ ಕ್ಷಣ ದಿಟ್ಟಿಸಿದರು.

ಎಷ್ಟು ಧೈರ್ಯ? ನನ್ನ ಬಳಿ ಬಂದುನಾನುಹಿಂದಿನ ನಿರ್ದೇಶಕರಿಗೆ ಅರ್ಧದಲ್ಲಿ ಕೈಕೊಟ್ಟು ಬಂದಿದ್ದೇನೆ. ಪಾತ್ರ ಕೊಡಿ ಅಂತೀರಲ್ವಾ ಸಿನೇಮಾದಲ್ಲಿ ಪಾತ್ರ ಬೇಕೇ? ನಾಳೆ ಇಲ್ಲಿಯೂ ಅದೇ ರೀತಿ ಮಾಡಿದ್ರೆ..” 

ಅವರ ಸ್ವರ ಗಡಸಾಗಿತ್ತು

ನಾನು ಪೂರ್ತಿ ಹೆದರಿ ಬೆವರಿ ತಣ್ಣಗಾದೆ.

ಅದೂ..ಅದೂ.ಹಾಗಲ್ಲ ಸರ್..”

ಮುಂದೆ ಮಾತೇ ಹೊರಬರುತ್ತಿಲ್ಲ. ಛೇ,ಬೇಕಾದ ಸಮಯದಲ್ಲಿ ಇದೂ ಕೈಕೊಡುತ್ತದೆ. ಒಳಗಿನಿಂದ  ಒತ್ತರಿಸಿ ಬರುವ ದುಃಖವನ್ನು ಒಡ್ಡು ಹಾಕಿ ತಡೆದಿರಿಸಿದ್ದೇನೆ. ಏನು ಮಾಡಲಿ. ಅಪರಾಧಿ. ಇವರ ಎದುರು ನಿಂತಿದ್ದೇನೆ. ಹೊರಗೆ ಹೋಗುವ ಹಾಗೂ ಇಲ್ಲ. ದೇಹವಿಡೀ ನಡುಗುತ್ತಿದೆ.ಅಷ್ಟರಲ್ಲಿ ಅಪದ್ಬಾಂದವರಂತೆ ‘ಬಾಸುಮ’ ಸರ್ ಒಳಗೆ ಬಂದರು. ಕಾಸರವಳ್ಳಿ ಸರ್ ಅವರಲ್ಲಿ ಹೇಳುತ್ತಿದ್ದಾರೆ..

ಇವರು ಸರಸಮ್ಮನ ಸಮಾಧಿ ಧಾರವಾಹಿಯಲ್ಲಿ ಯಾವುದೋ ಪಾತ್ರ ಸ್ವಲ್ಪ ಮಾಡಿ ಬಂದವರು ಮತ್ತೆ ಹೋಗೇ ಇಲ್ವಂತೆ..”

ಬಾಸುಮ ಸರ್ ನಿಧಾನವಾಗಿ ಅಂದರು:

ಅದೂನಾಗೇಶ್ ರವರು ಪಾತ್ರಕ್ಕೆ ಆರಿಸಿದ್ದರು. ಕೊನೆಗೆ ಪಾತ್ರ ಇವರಿಗೆ ಹೊಂದುವುದಿಲ್ಲವೆಂದು ಬೇರೆಯವರಿಂದ ಮಾಡಿಸಿದ್ರು

ಪೂರ್ಣಿಮಾ,ನೀವು ಹೋಗಿ

 ಬರುತ್ತೇನೆ ಎಂದು ಹೇಳಲೂ ತ್ರಾಣವಿಲ್ಲದೆ ಬಲಹೀನ ಕಾಲುಗಳನ್ನು ಎಳೆದಾಡುತ್ತ ಹೊರಬಂದೆ. ಹೇಗೆ ಮನೆಗೆ ತಲುಪಿದೆನೋ.  ಯಾಕೆ ಹೋದೆ..ಹೋಗುವುದು ಬೇಡ ಎಂದುಕೊಂಡು ಮುಂದೆ ಬಂದವಳು ಮತ್ತೆ ಹೋದದ್ದು. ಹೋದವಳು ಮಾತು ಯೋಚಿಸಿ ಆಡುವುದಲ್ವಾ? ತಪ್ಪುತಪ್ಪು ಮಾತುಗಳನ್ನು ಅಪಾರ್ಥವಾಗುವಂತೆ ಮಾತನಾಡಿ. ಏನಾಗಿ ಹೋಯಿತು. ಪಾತ್ರವಂತೂ ಇಲ್ಲ. ಜೊತೆಗೆ ‘ಸುಳ್ಳಿ’, ‘ಬದ್ಧತೆ ಇಲ್ಲದವಳು’ ಎಂಬ ಅಭಿಪ್ರಾಯ ಅವರಿಗೆ ಮೂಡಿಸಿದೆ. ಕನಸು ಮುರುಟಿತು. ಮುಗಿಯಿತು. ನಾನು ಆಸೆಯನ್ನು ಬಚ್ಚಲು ಮನೆಯ ನೀರು ಕಾಯಿಸುವ ಒಲೆಯೊಳಗೆ ಉರಿಸಿ, ಬಿಸಿ ನೀರಲ್ಲಿ ಮಿಂದೆ.

ಇದು ಆಗಿ ಒಂದು ಹತ್ತು ದಿನಗಳು ಆಗಿರಬಹುದು. ಮಗನ ಜೊತೆ ಆಟವಾಡುತ್ತಿದ್ದೆ. ಕರೆ ಬಂತು.

 ನಾನು ಗಿರೀಶ್ ಮಾತನಾಡುತ್ತಿದ್ದೇನೆ. ನಮ್ಮ ಸಿನೇಮಾದಲ್ಲಿ ನೀವು ಒಂದು ಪಾತ್ರ ಮಾಡಬಹುದೇ!? ನಿಮಗೆ ನಮ್ಮವರು ಕರೆ ಮಾಡಿ ವಿವರ ತಿಳಿಸುತ್ತಾರೆ.”

ಹಾಂ..ಹಾಂ..”

ಅಷ್ಟೆ.  ನಿಜವಾಗಿರಲಿಕ್ಕಿಲ್ಲ. ನನಗೆ ಕರೆ..! ಗಿರೀಶ್ ಕಾಸರವಳ್ಳಿಯವರದ್ದು. ಸುಳ್ಳು. ಭ್ರಮೆ. ಇರಲಿಕ್ಕಿಲ್ಲ. ನಾನು ಮಾತನಾಡಿದ್ದು ಹೌದೇ..

ಕೆಲವೇ ನಿಮಿಷಗಳಲ್ಲಿ ಮತ್ತೆ ಕರೆ

 ನಾನು ಸುಭಾಷಿಣಿ. ಕಾಸರವಳ್ಳಿ ಸರ್ ಅವರ ಸಹಾಯಕಳು. ನಿಮ್ಮನ್ನು ನಮ್ಮ ಸಿನೇಮಾದಕುಂಞ್ಞಿಪಾತುಎಂಬ ಪಾತ್ರಕ್ಕೆ ಸರ್ ಆರಿಸಿದ್ದಾರೆ. ಪಾತ್ರದ ಉಡುಪು ಹೊಲಿಯ ಬೇಕು. ಅಳತೆ ಕೊಡಿ.”

ಎಲ್ಲವೂ ಕನಸಿನಲ್ಲಿ. ಏನೋ ನಡೆದಂತೆ. ಉಮಾಶ್ರೀಯವರು ಮುಖ್ಯಪಾತ್ರದಲ್ಲಿದ್ದ ಸಿನೇಮಾ. ಕೃಷ್ಣಮೂರ್ತಿಯವರಿಗೆ ಅವರ ಗಂಡನ ಪಾತ್ರ. ನನಗೆ ಅವರ ಎರಡನೆಯ  ಹೆಂಡತಿಯ ಪಾತ್ರ.

ವೈದೇಹಿಯವರ ಕಥೆ

” ಗುಲಾಬಿ ಟಾಕೀಸ್ – ಸಣ್ಣ ಅಲೆಗಳು ” ಗಿರೀಶ ಕಾಸರವಳ್ಳಿಯವರ ಕನಸಿಗೆ ತಕ್ಕಂತೆ ತೆರೆಗೆ ಹೊಂದುವ ಮಾರ್ಪಾಟುಗಳೊಂದಿಗೆ  ಸಿದ್ದವಾಗಿತ್ತು.

 ವೈದೇಹಿಯವರೇ ಹೇಳಿರುವಂತೆ ಇದು ಅವರ ಕಥೆಯ ಕವಲು ಕಥೆ. ಮೂಲ ಕಥೆಯನ್ನೂ ಮೊದಲೇ ಓದಿದ್ದರಿಂದ ನನಗೆ ಒಂದು ಕಥೆ ಸಿನೇಮಾ ಮಾಧ್ಯಮಕ್ಕೆ ಆರಿಸಲ್ಪಟ್ಟಾಗ ಮೂಲ ಕಥೆಗೆ ಸಂವಾದಿಯಾಗಿ ಹೇಗೆ ಬೆಳೆಯಬಲ್ಲದು. ವಿಸ್ತರಿಸಬಲ್ಲದು. ಹೊಸಹೊಸ ಸಾಧ್ಯತೆಗಳು ಯಾವ ರೀತಿ ತೆರೆದುಕೊಳ್ಳಬಲ್ಲದು ಎಂಬುವುದನ್ನು ಕಾಣಲು ಈ ಸಿನೇಮಾ ಅವಕಾಶ ಮಾಡಿಕೊಟ್ಟಿತು.

 ಕಥೆಯೊಂದನ್ನು ನಿರ್ದೇಶಕ ಯಾವ ರೀತಿಯಲ್ಲಿ ಮತ್ತೆ ಕಟ್ಟಬಹುದು ,ಈ ತೌಲನಿಕ ಅಭ್ಯಾಸಕ್ಕೆ, ಮಂಥನಕ್ಕೆ ಗುಲಾಬಿ ಟಾಕೀಸ್ ಉತ್ತು ಬಿತ್ತಿದೆ.

ನನ್ನ ಕನಸಿನಂತೆ

ಕೊನೆಗೂ ಕಾಸರವಳ್ಳಿಯವರ ಸಿನೇಮಾದಲ್ಲಿ ಅಭಿನಯಿಸಿದ್ದೆ.

ನನಗೆ ಮುಸ್ಲಿಂ ಹೆಂಗಸಿನ ಪಾತ್ರ. ಮೂಲ ಕಥೆಗೆ ಭಿನ್ನವಾದುದು.

ಗುಲ್ ನಬೀ ಎಂಬ ಮುಸ್ಲಿಂ ಮಹಿಳೆ ಹಿಂದೂಗಳಿರುವ ದ್ವೀಪದಲ್ಲಿ ಸೂಲಗಿತ್ತಿಯಾಗಿ ಕಾಯಕ‌ ನಡೆಸುತ್ತ ಗುಲಾಬಿ ಯಾಗಿದ್ದಳು. ಸಿನೇಮಾ ನೋಡುವುದು ಅವಳ ಅತ್ಯಂತ‌ ಪ್ರಿಯ ಹವ್ಯಾಸ. ಗಂಡನಿಂದ ದೂರವಾಗಿರುವ ಗುಲಾಬಿಗೆ ಊರಿಡೀ ತನ್ನ ಮನೆ.  ಗಂಡ ಎರಡನೆಯ ಮದುವೆಯಾಗಿರುತ್ತಾನೆ. ಎರಡನೇ ಹೆಂಡತಿ ಕುಞ್ಞಿಪಾತು. ಅವರಿಗೆ ಒಬ್ಬ ಮಗ.

ಗುಲಾಬಿ ಆಗಾಗ, ತನ್ನ ಗಂಡನನ್ನು ನೋಡಲು ಬರುತ್ತಾಳೆ. ಹಾಗೆ ಬಂದಾಗ ಕುಞ್ಞಿಪಾತುಗೆ ಗುಲಾಬಿಯ ಬಗ್ಗೆ ಅಸಹನೆ,ಅಭದ್ರತೆ. ಎಷ್ಟಾದರೂ ಸವತಿಯಲ್ಲವೇ.

ಈ ಕುಞ್ಞಿಪಾತು ಪಾತ್ರ ನನ್ನ ದಾಗಿತ್ತು.

Gulabi Talkies - Cinema Without Borders

ಚಿತ್ರೀಕರಣದ ಸಮಯದಲ್ಲಿ ಒಂದು ಸನ್ನಿವೇಶ. ಗಂಡನನ್ನು ಹುಡುಕಿಕೊಂಡು ಬರುವ ಕುಂಞಪಾತು ಗುಲಾಬಿಯ ಮನೆಯಲ್ಲಿ ಅವನಿರುವುದನ್ನು ಕಾಣುತ್ತಾಳೆ. ಅಸಾಯಕತೆಯಲ್ಲಿ ಹಿಮ್ಮಖವಾಗಿ ಹೆಜ್ಜೆ ಇಡುತ್ತ ಬರಬೇಕು. ಹಿಂಬದಿಯಲ್ಲಿ ಒಂದು ಮರದ ದಿಮ್ಮಿ ಇತ್ತು. ಅದು ನನ್ನ ಕಾಲ ಹಿಂಬದಿಗೆ ತಾಕಿ ಎಡವಿ ಬಿದ್ದಿದ್ದೆ. ಆಗ ಅಲ್ಲಿದ್ದ ಉಮಾಶ್ರೀಯವರು ಬೆನ್ನು ತಟ್ಟಿ,

ಕಲಾವಿದನಾದವನಿಗೆ ಬೆನ್ನಿನಲ್ಲೂ ಕಣ್ಣಿರಬೇಕು. ಅಭಿನಯದಲ್ಲಿ ತಲ್ಲೀನತೆಯ ಜೊತೆಗೆ ಬಹಳಷ್ಟು ಇತರ ಸೂಕ್ಷ್ಮತೆಗಳ ಬಗ್ಗೆ ಸದಾ ಜಾಗ್ರತನಾಗಿರಬೇಕು

ಎಂದು ಕಣ್ಣೊಳಗಿಣುಕಿ ಕಾವ್ಯದಂತಹಾ ಸಂದೇಶ ಕೊಟ್ಟಿದ್ದರು.

  ಕ್ಯಾಮರ, ಅಭಿನಯ, ಕಲಾವಿದರಿಗೆ ಅತ್ಯಗತ್ಯವಾದ ಸೂಕ್ಷ್ಮತೆ, ಕ್ಯಾಮರಾ ಕಣ್ಣುಗಳ ಬಗ್ಗೆ ಅರಿವು, ಹೀಗೆ ಒಂದಷ್ಟು ವಿಷಯಗಳು ಮೆಲ್ಲಮೆಲ್ಲ ಅಡಿಯಿಡುತ್ತ ನನ್ನ ಒಳಲೋಕಕ್ಕೆ ಸೇರಿದವು.  ಜೊತೆಗೆ ಕಾಸರವಳ್ಳಿ ಸರ್ ಸಿನೇಮಾದ ವಸ್ತುವನ್ನು ಮುಟ್ಟುವ ರೀತಿ,ಒಂದು ಕಥೆ,ಕಾದಂಬರಿ ಸಿನೇಮಾವಾಗಿ ಸ್ವೀಕೃತಗೊಳಿಸುವ ಬಗೆ, ಕಲಾವಿದರಿಗೆ ನೀಡುವ ಸ್ಚಾತಂತ್ರ್ಯ, ಸಾವಧಾನವಾಗಿ ವಿಷಯ, ಸನ್ನಿವೇಶಗಳನ್ನು ತಿಳಿ ತಿಳಿಯಾಗಿ ತಿಳಿಸುವ ರೀತಿ ನನ್ನ‌ಮಟ್ಟಿಗೆ  ಸಿನೇಮಾ  ಕಲೆಯ ಅಕ್ಷರಾಭ್ಯಾಸದಂತಾಯಿತು.

 ಕ್ಯಾಮರಾದಲ್ಲಿ

ರಾಮಚಂದ್ರರಂತ ಪ್ರತಿಭಾವಂತರ  ಕೆಲಸ, ಉಮಾಶ್ರೀಯವರಂತಹ ಹಿರಿಯ ಕಲಾವಿದೆಯ ಜೊತೆ ಸುಮಾರು 15-20 ದಿನಗಳ ಕಾಲ ಅಭಿನಯದ ನೆವದಲ್ಲಿ ಬಯಲು ವಿಶ್ವವಿದ್ಯಾಲಯದಲ್ಲಿ  ಕಳೆದದ್ದು ಎಲ್ಲವೂ ಕಲಾ ಕುಲುಮೆಯ ನೆನಪುಗಳು. 

   ನನ್ನ ತೆರೆಯ ಮೇಲಿನ ಅಭಿನಯದ  ಮುನ್ನುಡಿ

 ” ಗುಲಾಬಿ ಟಾಕೀಸ್ “

 ಸಿನೇಮಾ ಬರೆದಿರುವುದು ಅದೃಷ್ಟವೆಂದುಕೊಳ್ಳುವೆ.  ಗಿರೀಶ್ ಕಾಸರವಳ್ಳಿಯವರಂತಹ ನಿರ್ದೇಶಕರ ಸಿನೇಮಾದಲ್ಲಿ ಅಭಿನಯಿಸಲು ದೊರಕಿದ ಅವಕಾಶದಿಂದ  ಒಂದು ಸಿನೆಮಾ ನಮ್ಮ ಗ್ರಹಿಕೆಯ ಕ್ರಮವನ್ನು ಹೇಗೆ ಬದಲಾಯಿಸಬಹುದೆಂದು ತಿಳಿಸಿದೆ. ಆ ಸಮಯದಲ್ಲಿ ನನ್ನ ಅರಿವಿನ ಚೌಕಟ್ಟಿಗೆ ಸಿಗದ ಹಲವಾರು ವಿಷಯಗಳು ಸುಪ್ತಪ್ರಜ್ಞೆ ತಲುಪಿ ಮುಂದಿನ ದಿನಗಳಲ್ಲಿ ಕಲೆಯ ಬಗ್ಗೆ ದೃಷ್ಟಿ ವಿಶಾಲಗೊಳಿಸಲು ಸಹಾಯಕವಾಗಿದೆ. ಸಿನೆಮಾ ಒಂದು ಕಲಾ ಕೃತಿಯಾಗಿ  ವಿಷಯವನ್ನು  ಹಲವು ಮಜಲುಗಳಿಂದ ಅಭ್ಯಾಸ ಮಾಡಿಸಬಲ್ಲದು. ಸಿನೇಮಾವೊಂದು ಕಲೆಯಾಗಿ, ಕೃತಿಯಾಗಿ  ಮತ್ತಷ್ಟು ಉತ್ಕಟತೆಯಿಂದ ಪ್ರೀತಿಸಲು ಕುಞ್ಞಿಪಾತು ಕಲಿಸಿದಳು.

*************

ಪೂರ್ಣಿಮಾ ಸುರೇಶ್

ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ

2 thoughts on “

  1. ಗುಲಾಬಿ ಟಾಕೀಸ್ ಸಿನಿಮಾ ಮತ್ತೆ ನೆನಪಾಯಿತು ನಿಮ್ಮ ಅನುಭವದ ಕಥೆ ಓದಿ…ಬ಼ಳ ಚೆನ್ನಾಗಿ ಬರೆದಿರುವಿರಿ.

Leave a Reply

Back To Top