ಕಾಡುವ ಕವಿತೆ

ಕವಿತೆ (ಗಜಲ್) ಹಿಂದಿನ ಕಥನ

ಭಾವಲೋಕದಲ್ಲಿ ಒಂದು ಸುಂದರ ಪಯಣ

Valentine's Day Backgrounds & Flatlays

.

ಗಜಲ್

ನಿನ್ನ ಕನಸದಿರುವ ಕಥೆ ಮರೆತು ಬಿಡು ಈಗ

ನೀ ಕಾಣೆಯಾಗುವ ಕಥೆ ಮರೆತು ಬಿಡು ಈಗ

ಹೆಜ್ಜೆ ಹೆಜ್ಜೆಗೂ ನಿನ್ನದೇ ನೆನಪು ಕಾಡುವುದು

ನಿನ್ನ ತೊರೆಯುವ ಕಥೆ ಮರೆತು ಬಿಡು ಈಗ

ಹಗಲೂ ಇರುಳೂ ವ್ಯತ್ಯಾಸ ಅರಿಯದಾಗಿರುವೆ

ನೆನಪಿಲ್ಲದೆ ನಿದ್ರಿಸುವ ಕಥೆ ಮರೆತು ಬಿಡು ಈಗ

ಸಿಹಿ ಕಹಿ ಏನೇ ಇರಲಿ ಹಂಚಿಕೊಳ್ಳದಿರಲಾರೆ

ನೀನಿಲ್ಲದೆ ಸುಖಿಸುವ ಕಥೆ ಮರೆತು ಬಿಡು ಈಗ

ಕಟ್ಟಿದ ಕನಸು ಕುಡಿದ ಮಧುಬಟ್ಟಲು ಚೂರಾಗಿವೆ

ಮೌನದಿ ದೂರ ಸರಿಸುವ ಕಥೆ ಮರೆತು ಬಿಡು ಈಗ

ಕಟ್ಟಿದ ಕೋಟೆ ಕೊತ್ತಲು ಹಾಳಾಗಿವೆ ಪ್ರೀತಿ ಕಾಣದೆ

ಪ್ರೇಮದಿ ವಂಚಿತನಾಗುವ ಕಥೆ ಮರೆತು ಬಿಡು ಈಗ

ನೀ ಇಲ್ಲದೇ ಏನಿಲ್ಲ ಕಾತರಿಸುತಿರುವೆ ಜಗದಲಿ

ಹೊನ್ನಸಿರಿ’ದೂರವಾಗುವ ಕಥೆ ಮರೆತು ಬಿಡು ಈಗ

ಗಜಲ್ ನಾದಕ್ಕೆ ನಮ್ಮದು ಯಾವತ್ತೂ ವಿಶಿಷ್ಟ ಲಯವೇ…  ನಿಜ. ಹೀಗೊಂದು ನಿಮಗೆ ಕಾಡಿದ ಕವಿತೆಯೊಂದರ ಕುರಿತು ಬರೆಯಲು ಸಂಗಾತಿ ಸಂಪಾದಕರು ಕೇಳಿದರು.ಹೀಗೆ ಬರೆಯಲು ಹಚ್ಚಿ ಕಥನ ಕೇಳುವ‌ ಎಲ್ಲ ಮನಸಿಗೂ ಇದೊಂದು ಪ್ರೀತಿಯ ಪ್ರೇಮದ ನಮಸ್ಕಾರ. ಈಗ ಕಾಡಿದ ಗಜಲ್ ಹಿಂದಿನ ಕಥನ ಬರೆಯಲು ಕುಂತಿರುವೆ. ಗಜಲ್ ನಾದಲೋಕ, ಒಲಿದಂತೆ ಹಾಡುವಾ.., ಸಂಭ್ರಮ,ಸಂಗಾತಿ ಬಳಗ ಹೀಗೆ ಎಲ್ಲ ಪ್ರೀತಿ ಪ್ರೇಮಮಯ ಮನಸುಗಳನು ಮನದಲಿ ನೆನೆದು ಈ ಬರಹ.

       ತಾಸೊತ್ತು ಯಾವ್ಯಾವ ಗಜಲ್ ಕವಿತೆ ಕಾಡಿವೆ ಅಂತ ಹಲವರ ಗಜಲ್ ನೆನಪಿಸಿಕೊಂಡೆ.ನನಗೆ ಅನೇಕರ ಗಜಲ್ ಕಾಡಿವೆ.ದಿನ ನಿತ್ಯ ಕೇಳಿ ಕೇಳಿ ಎಷ್ಟು ಕೇಳಿದರು ತಣಿಯದ ದಾಹದಿ ಮುಳುಗಿದ ಗಜಲ್ ಗಳು ಅನೇಕ. ಆ ಬಗ್ಗೆ ಬೇರೆಯದೇ ಆದ ಒಂದು ಲೇಖನ, ಪುಟ್ಟ ಕೃತಿ ಬರೆಯುವಷ್ಟು ಗಜಲ್ ಗಳು ನನಗೆ ಕಾಡಿವೆ. ಈಗಲೇ ಬರೀಬಹುದು.ಆದರೆ ಈ ವ್ಯಾಪ್ತಿಯಲ್ಲಿ ಅದಕ್ಕೆ ಅವಕಾಶ ಕಡಿಮೆ.ಹಾಗಾಗಿ ಅದು ಬೇರೆಯದೇ ಲಲಿತ ಪ್ರಬಂಧ ಬರೀವೆ.

   ನನಗೆ ನನ್ನ ಈ ಗಜಲ್ ಬರೆಯಲು ಕಾಡಿದ ಸಂದರ್ಭಗಳು, ಹಾಗೂ ಆ ಮೂಲಕ ರಚನೆಗೊಂಡ ನನ್ನದೇ ಗಜಲ್ ದ ಹಿಂದಿನ ಕಥನದ ಬಗ್ಗೆ  ಬರಿಯೋದೆ ಹೆಚ್ಚು ಸೂಕ್ತ ಅನಿಸಿತು. ಇದಿಷ್ಟು ಹಿನ್ನೆಲೆಯಲ್ಲಿ ಈಗ ನನ್ನ  ನಿನ್ನ ಪ್ರೇಮವಿಲ್ಲದೇ ಸಾಕಿ… ಸಂಕಲನದ ನನ್ನ ಈ ಮೇಲಿನ ಹಾಗೂ ಇತರೆ ಅಂತಹುದೇ ಪೂರಕ ಮನಸ್ಥಿತಿಯ ನನ್ನೆಲ್ಲ ಕವಿತೆ ಹಾಗೂ ಗಜಲ್-ರಚನೆಯ ಹಿಂದಿನ ಕಾಡಿದ ಕಾರಣ ಹಾಗೂ ಕಥನ ಬರೆದಿರುವೆ. ಒಪ್ಪಿಸಿಕೊಳ್ಳಿ.

  ಹೀಗೊಂದು ಕವಿತೆ (ಗಜಲ್) ಹಿಂದಿನ ಆತ್ಮಕಥನ

ಕಳೆದುಕೊಂಡವಳ ಕಣ್ಣ ಭಾಷೆಯನು ಕಾಣುವ ಕಣ್ಣು ಕಣ್ಣುಗಳಲಿ ಹುಡುಕುತಿರುವೆ ಸಾಕಿ

ತುಂಬಾ ಭಾವುಕನಾದ ಮಿತ್ರನೊಬ್ಬ ಯುವ ಕಥೆಗಾರ. ವಯೋ ಸಹಜ ಮನೋಧರ್ಮ ಹಾಗೂ ಶಾಶ್ವತ ಸತ್ಯ ಮತ್ತು ಕಾಲಾತೀತವಾದುದೂ ಪ್ರೇಮ ವೇ ಆಗಿರುವುದರಿಂದ ಆ ಕುರಿತು ಬರೆಯಲು ಆರಂಭಿಸಿದನೆಂದು ನಾನು ಇಲ್ಲಿ ಒತ್ತಿ ಹೇಳಬೇಕಾಗಿಲ್ಲ  ಅಂದುಕೋತೇನೆ.

ತುಂಬಾ ಸೆಂಟಿಮೆಂಟಲ್ ಮನೋಭಾವದ ಆ ಗೆಳೆಯನ ಹೆಸರನ್ನು ಗೌಪ್ಯವಾಗಿಟ್ಟು ಇಲ್ಲಿ ಕಥನ ಹೇಳುವೆ.ಅಥವಾ ಓದುವ ನೀವು ಯಾವುದೇ ಹೆಸರಿಟ್ಟುಕೊಂಡರೂ ಪರವಾಗಿಲ್ಲ.ಅದು ನಿಮ್ಮದು ಆದರೂ ನಡಿತದೆ.ಒಟ್ಟಿನಲ್ಲಿ ನನ್ನ ಗೆಳೆಯನ ಹೆಸರು ಹೊರ ಬರಬಾರದು ಅಷ್ಟೇ.ಆತನ ಹೆಸರು ಬಯಲಾದರೆ ಆತನ ಸೆಂಟಿಮೆಂಟಾಲಿಟಿಗೆ ಹರ್ಟ ಆಯಿತು, ಅಂತ ಹಲುಬಿ ಆತ ಆತ್ಮಹತ್ಯೆ ಮಾಡಿಕೊಂಡು ಬಿಟ್ಟರೆ ಹ್ಯಾಗೆ !? ಅದರ ನೈತಿಕ ಹೊಣೆ ಹೊತ್ತು ನಾ ಆತನ ಶವವನ್ನು ನನ್ನ ಹೃದಯದಲ್ಲಿ ಜೀವನಪೂರ್ತಿ ಇಟ್ಟುಕೊಂಡು ಆ ಸೆಂಟಿಮೆಂಟಾಲಿಟಿಗೆ ನಾ ಜೋತು ಬೀಳೋದು ನನಗಿಷ್ಟವಿಲ್ಲದ ಕೆಲಸ.

      ಆತ ಒಂದು ಸುಂದರ ಸಾಯಂಕಾಲ ನನ್ನ ಹುಡುಕಿಕೊಂಡು ನಾನಿರುವ ರೂಮಿಗೆ ಬಂದ.ಬಂದವನೇ, ಗೆಳೆಯಾ,ಅನೇಕರ ನೋವು ನಲಿವುಗಳನ್ನು,ಅವರ ಸುಂದರ ಕನಸುಗಳನ್ನು ನಾನು ಕಥೆಯಾಗಿಸಿದೆ.ಆದರೆ ನನ್ನದನ್ನು ಕಥೆಯಾಗಿಸಿ ಮನದ ದು:ಖ ಮರೆಯಲು *ಆಗುತ್ತಿಲ್ಲ”. ಅಂತ ಹೇಳಿ ನಿಟ್ಟುಸಿರು ಬಿಟ್ಟ.ನನ್ನ ಅತಿ ಭಾವುಕತೆಯಿಂದ ಕಥೆಯಲ್ಲಿಯ ನನ್ನ ಪಾತ್ರಕ್ಕೆ ಉದಾತ್ತತೆ ನೀಡಬಹುದು.ಅಥವಾ ವೈಭವಿಕರಿಸಿಕೋಬಹುದೆಂಬ ಭಯ ನನಗೆ.ಹಾಗಾಗಬಾರದು ಇದ್ದುದಿದಂತೆ ಯಾವ ವೈಭವಿಕರಣವಿಲ್ಲದೇ ನೀನು ಮಾತ್ರ ಬರೆಯಬಲ್ಲೆ”ಎಂದು ನನಗೆ ರೈಲು ಹತ್ತಿಸಲು ನೋಡಿದ.

 ಆತನ ಕನಸುಗಳು,ಕೈ ಮೀರಿ ಜಾರಿ ಹೋದ ಘಟನೆಗಳು, ಜೀವನ ಧೋರಣೆ,ಇತ್ಯಾದಿ ಕಥೆ ಬರೆಯುವ ಜವಾಬ್ದಾರಿ ನನ್ನ ಹೆಗಲಿಗೇರಿಸಲು ನೋಡಿದ.ನಿನ್ನದು ಮಹಾಕಾವ್ಯ ವಾಗುವ ಅಮರ ಪ್ರೇಮದ ಖಂಡ ಕಥನ ಮಾರಾಯ. ನನ್ನ ಕೈಲಿ ಆಗಲ್ಲ.ನಿನ್ನ ಕಥನ ಕಾದಂಬರಿ ನೀನೆ ಬರೀ.ನಿನ್ನ ಪಾತ್ರದ ಬಗ್ಗೆ ಒಂದಿಷ್ಟು ಎಚ್ಚರವಿರಲಿ ಅಂತ ಜಾರಿಕೊಳ್ಳುವ ಪ್ರಯತ್ನ ಮಾಡಿದೆ.ಆತ ಒಪ್ಪಲಿಲ್ಲ.

ಇಲ್ಲಿಯವರೆಗೆ ಬರೆದ ನೂರಾರು ಗಜಲ್ ಗಳ ಹಿನ್ನೆಲೆಯಲ್ಲಿ ಆತನದೊಂದು ವಿಚಿತ್ರ ಕಥನ.

ಎಲ್ಲಿ ಹೋದಳು ಅವಳು ನನ್ನವಳು ಎಲ್ಲಿ ಹೋದಳು….

ಕನಸಿನಲಿ ಕಾಡುವವಳು ಖುಷಿಯಲೂ ಕುದಿಯುವವಳು(ಗ-೪)

ಎಲ್ಲಿ ಹೋದಳು ಅವಳು ಹೊನ್ನಸಿರಿ ಆಗಿಸಿದವಳು

ಮತ್ತೆ ನಾಳೆ “ಗಜಲ್” ಆಗಿ ಬಂದೇ ಬರುವಳು ಅವಳು

ಆಗ ಅವನ ಪ್ರೇಮ ಪ್ರೀತಿಗೆ ಒಲಿಯದೇ ಹೋದವಳು ಈ ಗಜಲ್ ಆಶಯದಂತೆ ಅವನ ಬಾಳಲಿ ಆ ಪ್ರೇಮದೇವತೆ ಮತ್ತೆ ಗಜಲ್ ಕಾವ್ಯರೂಪ ಧರಿಸಿ ಅವನ ಬಾಳಿಗೆ ಬಂದ ಸುಂದರ ಕಥನವಿದು.ಇದೀಗ ಸ್ವಲ್ಪ ಫ್ಲ್ಯಾಶ್ ಬ್ಯಾಕ್ ಹೋಗಿ ಬರೋಣ.

ನನ್ನ ಆ ಗೆಳೆಯನದು ಬಹು ಕಲರ್ ಫುಲ್ ಜೀವನ.ಆತ ಸದಾ ತೋಡುವ‌ ಕಲರ್ ಫುಲ್ ಬಟ್ಟೆಗಳಂತೆ.ಆತ ವಿದ್ಯಾರ್ಥಿ ದೆಸೆಯಲ್ಲಿ ಒಮ್ಮೆ ಪಿಯು ಫೇಲಾದ.ಆ ಫೀಲಲಿ ಸಾಹಿತ್ಯ ಓದಿ ಓದಿ ಪ್ರೇಮ ಕವಿಯಾದವನು.ಆ ವಯಸ್ಸೆ ಹಾಗಲ್ಲವೇ ?

ಓದುವುದು,ಬರೆಯುವುದು,ಚರ್ಚೆ, ಸಾಂಸ್ಕೃತಿಕ ಚಟುವಟಿಕೆ,ಡಿಬೇಟ್ ಗೆ ಇಡೀ ಕಾಲೇಜಿಗೇನೇ ಮುಂದು. ಹಾಗಾಗಿ ಇಡೀ ಕಾಲೇಜಿನಲ್ಲಿ ಈತನ ಸುತ್ತ ಒಂದು ವರ್ಣರಂಜಿತ ಮಿತ್ರರ ಪಡೆಯಿತ್ತು.ಅವರಲ್ಲಿ ನಡೆಯದ ಚರ್ಚೆಗಳೇ ಇರಲಿಲ್ಲ.ರೋಡ ರೋಮಿಯೋ ಗಳಿಂದ ಹಿಡಿದು ಲೈಲಾ ಮಜ್ನುಗಳಂತಹ ಅಮರ ಪ್ರೇಮಿಗಳವರೆಗೆ, ಬುರುಡೆ ಬಾಬಾಗಳಿಂದ ಹಿಡಿದು  ಪ್ಲೇಟೋ, ಟಾಲ್ಸ್ಟಾಯ್, ಕಾಫ್ಕನಂತವರವರೆಗೆ ಆ ಕಾಲದಲ್ಲೆ ಮಾತಾಡಿ ಕೇಳುಗರಿಗೆ ದಿಂಗು ಬಡಿಸುವಂತಹ ವ್ಯಕ್ತಿತ್ವಕ್ಕೆ ಇಡೀ ಕಾಲೇಜಿನ ಉಪನ್ಯಾಸಕರಾದಿಯಾಗಿ ವಿದ್ಯಾರ್ಥಿ ಸಮೂಹ ನಿಬ್ಬೆರಗಾಗುತ್ತಿತ್ತು. ಎಲ್ಲ ಪುರಸ್ಕಾರಗಳು, ಬಹುಮಾನಗಳು ಹುಡುಕಿ ಬರುತ್ತಿದ್ದವು. ರಾಜರ ಅರಮನೆಯಲ್ಲಿದ್ದ ಬಹು ದೊಡ್ಡ ಐತಿಹಾಸಿಕ ಕಾಲೇಜು ಅದು.ದೊಡ್ಡ ದೊಡ್ಡ ನಗರದ  ಅಂತರ ಕಾಲೇಜುಗಳಿಗೂ ಹೋಗಿ ಗೆದ್ದು ಬಂದು ಕೀರ್ತಿ ಪತಾಕೆಯನ್ನು ಹಾರಿಸಿದ ಪ್ರತಿಭಾವಂತ ಸಾಹಸಿ ಆತ.ಸ್ವಲ್ಪ ಅನುಕೂಲವಂತ ದೊಡ್ಡ ರೈತ ಹಾಗೂ ವ್ಯಾಪಾರಿ ಕುಟುಂಬದ ಹಿನ್ನೆಲೆಯಿಂದ ಬಂದಿರೋದರಿಂದ ಗೆಳೆಯರಿಗೆ,ಸುತ್ತಲಿನ ವಿದ್ಯಾರ್ಥಿಗಳ ಕಷ್ಟ ಸುಖಕ್ಕೆ ಆಗುತ್ತಿದ್ದುದರಿಂದ ಈತನನ್ನು ಕಾಲೇಜಿನ ವಿದ್ಯಾರ್ಥಿ ನಾಯಕನಾಗಿ ಚುನಾವಣೆಯಲ್ಲಿ ಸಹ ಬಹುಮತದಿಂದ ಆಯ್ಕೆ ಮಾಡಿದ್ದರು.ಈತನ ಸುತ್ತಲಿನವರ ಸ್ಪೂರ್ತಿ ಮಾತುಕತೆಗಳೇ ಈತನಿಗೆ ಜೀವಾಳವಾಗಿದ್ದವು.

ಆದರೆ ಈತನೋ ಅತ್ಯಂತ ಸರಳಜೀವಿ.ಅಷ್ಟೇ ವಿಚಿತ್ರ ಪ್ರಾಣಿ.ತನ್ನ ಸುತ್ತ ಹಗಲಿರುಳು ಹರಟುವ ಹಲವಾರು ಗೆಳತಿಯರನ್ನು ಅಷ್ಟಕಷ್ಟೆ ಚರ್ಚೆಗೆ ಮಾತ್ರ ಸೀಮಿತ ಗೊಳಿಸಿಕೊಂಡು ಗೌರಮ್ಮ  ಎಂದು ಲೇವಡಿಗೊಳಗಾದ, ಯಾವ ಸಂವಾದಕ್ಕೂ ಬಾರದ,ತನ್ನಪಾಡಿಗೆ ತಾನಿರುವ, ಇನ್ನೋವರ್ಟ- ಮಿತಭಾಷಿ ಮೋಡಿ ಕಣ್ಣವಳ ಕಣ್ಣ ಭಾಷೆಗೆ ಮರುಳಾಗಿ ಹೋಗಿ ಅವಳ ಪ್ರೇಮದಲ್ಲಿ ಬಿದ್ದಿದ್ದ. ಗಂಭೀರ ವದನೆಯ ಕೋಮಲಾಂಗಿ, ನೈತಿಕತೆಯ ಹಂದರಲ್ಲೆ ನಗೆ ಅರಳಿಸುವ ಮೂಲಕ ಬುಟ್ಟಿಗೆ ಬೀಳಿಸಿಕೊಂಡಿದ್ಜಳು. ಅವಳೋ ಆ ಮೋಹಕ ಕಣ್ಣಲೇ ನಿತ್ಯ ಕ್ಲಾಸಲ್ಲಿ ನೂರು ಮಾತನಾಡಿ ಹುಚ್ಙು ಹಿಡಿಸಿದ್ದ ಕ್ಲಾಸ್ ಮೇಟ್ ಅವಳು. ನೂರು ಮಾತುಗಳ ಸ್ಪೂರ್ತಿಯನ್ನು ಒಂದು ಉಲ್ಲಾಸ ದಾಯಕ ನಗುವಿನ ಕಣ್ಣೋಟದ ಮೂಲಕ ನೀಡಿ ಪ್ರೇಮಕ್ಕೆ ಚೈತನ್ಯ ತುಂಬುತ್ತಿದ್ದಳು.

ಮೊದಲೇ ಹೇಳಿ ಕೇಳಿ ಸೆಂಟಿಮೆಂಟಲ್ ಫೂಲ್ ಇವನು. ಒಂದಕ್ಕೆ ಹತ್ತಿಕೊಂಡರೆ ಮುಗಿಯಿತು.ಕಾಣುವ ಚರಾಚರ ವಸ್ತುಗಳಲ್ಲಿ ತನ್ಮಯವಾಗಿ ಅವಳನ್ನು ಆರಾಧಿಸತೊಡಗಿದ. ಹುಡುಕತೊಡಗಿದ.ಇಷ್ಟೆಲ್ಲ ಮಾಡಿದವ ಮುಂದೇನು ಮಾಡಿದ ಎಂಬ ಕುತೂಹಲ ನಿಮಗಿರಬಹುದು.ಕೇಳಿ. ಅವಳ ಮೆಚ್ಚುಗೆ ಪಡೆಯಲು ಕಷ್ಟಪಟ್ಟು ಚೆನ್ನಾಗಿ ಓದಿದ. ಇಡೀ ವಿವಿಗೇನೆ ಹೈಯೆಸ್ಟ್ ಮಾರ್ಕ ತೆಗೆದಿದ್ದ ಒಮ್ಮೆ. ಆಗ ಕೆನರಾ ಬ್ಯಾಂಕು ಆ ಕಾರಣದಿಂದ ವಿಶೇಷ  ಸ್ಕಾಲರ್ಶಿಪ್ ಸಹ ನೀಡಿತ್ತು ಈತನಿಗೆ ಮೂರುವರ್ಷ.ಆ ವಿದ್ಯಾರ್ಥಿ ಜೀವನದ ಕಾಲದಲ್ಲಿ ಅದು ಸ್ವಲ್ಪ ದೊಡ್ಡ ಮೊತ್ತವೆ ಆಗ. ಅವಳ ಮೆಚ್ಚುಗೆಗಾಗಿ ಡಿಬೇಟ್,ಎಸ್ಸೆ ಬರಹ,ಕವಿತೆ, ಕಥೆ, ಏಕಪಾತ್ರಾಭಿನಯ ಹೀಗೆ ಎಲ್ಲದರಲ್ಲೂ ಬಹುಮಾನ ಬಾಚಿಕೊಂಡು ಕಾಲೇಜು ಗ್ಯಾದರಿಂಗ್ ಗಳಲ್ಲಿ ಮಿಂಚಿ ಒಳ್ಳೆಯ ಮಾರ್ಕು ಪಡೆದು ಪಾಸು ಆದ.ಆದರೆ ಅವಳ ಮುಂದೆ ಹೋಗಿನಿಂತು  ಐ ಲವ್ ಯೂ ಅಂತ ಮೂರಕ್ಷರ ಬಾಯಿಬಿಟ್ಟು ಹೇಳಲಿಲ್ಲ.ಅವಳು ಕೇಳಲಿಲ್ಲ.

ಇಂತಹ ಕೇಸುಗಳ ಗತಿ ಏನು ಅಂತ ತಮಗೆಲ್ಲರಿಗೂ ಗೊತ್ತಿರುವಂತದೆ ಅಲ್ಲವೆ ! ಇದು ಕೂಡಾ ಹಾಗೇ ಏಕಪಕ್ಷೀಯ (ಉಭಯರಿಗೂ) ಪ್ರೇಮವಾಯಿತು.ದಿನಾ ಕಣ್ಣಲ್ಲೆ ಮಾತಾಡಿ ಖುಷಿಪಟ್ಟ ಜೀವಗಳು ಇಡೀ ಕಾಲೇಜು ಜೀವನ ಮುಗಿಸುವಷ್ಟರಲ್ಲಿ ಮಾತಾಡಿದ್ದೆ ತೀರಾ ತೀರಾ ಕಡಿಮೆ.ಅವಾದರೂ ಪ್ರೇಮದ ಮಾತಲ್ಲ. ಕಾಲೇಜಿನ ಓದು ಮುಗಿತು.ಮುಂದೇನು ? ಓದು ಮುಂದುವರಸ್ತೀರಾ,ಮನೆಗೆ ಬನ್ನಿ,ಹ್ಯಾಗಿದೀರಿ…..ಹೀಗೆ..ಇಷ್ಟಾಗುವಷ್ಟರಲ್ಲಿ ಯಾವಾಗಲೋ ಬರೆದ ಬ್ಯಾಂಕ್ ಪರೀಕ್ಷೆಯಲಿ ಪಾಸಾದ ಸುದ್ದಿ ಬಂದು,ಈ ಕಾಲದಲ್ಲಿ ಬ್ಯಾಂಕ್ ಉದ್ಯೋಗ ಅದು ಕ್ಯಾಷಿಯರ್ ಹುದ್ದೆ. ಏನೇನು ತ್ರಾಸ್ ಇಲ್ಲದೇ ಪದವಿಯ ಪರೀಕ್ಷೆ ಮುಗಿದ ಎರಡು ಮೂರು ದಿನದಲ್ಲಿ ಉದ್ಯೋಗ. ಯಾರಿಗುಂಟು ಯಾರಿಗಿಲ್ಲ ಎಂಬ ಅವಿಭಕ್ತ ಕುಟುಂಬದ ಮನೆಯವರ ಒತ್ತಾಯಕ್ಕೆ ಹೋಗಿಬಿಟ್ಟ.ದಾರಿ ಕವಲಾಯಿತು.ಅವಳು ನಗರಕ್ಕೆ ಓದಲು ಹೋದರೆ ಈತ ಅದೇ ನಗರದಿಂದ ಹಳ್ಳಿಗೆ ಉದ್ಯೋಗಕ್ಕೆ ಹೋದ.ವಿಫಲ ಪ್ರೇಮದೆಡೆಗೆ ಹೆಜ್ಜೆ ಇಟ್ಟಿದ್ದ. ಕುಲಾಲಿ  ಎಂಬ ರೈಲ್ವೆ ಸ್ಟೇಷನ್ ದಲ್ಲಿ ಹೋಗುವ ಬರುವ ತಾನು ಹತ್ತಲಾಗದ ಟ್ರೈನ್ ಗಳನು ನಾಲ್ಕಾರು ತಾಸು ಒಂಟಿ ಕಾಯುತ್ತಾ, ನೋಡುತ್ತಾ ಒಳಗೊಳಗೆ ಧ್ಯಾನಿಸುತ್ತಾ ಲೇಖಕನಾಗಿ ರೂಪುಗೊಳ್ಳುತ್ತ ಹೋದ.ಆದರೆ ಪ್ರೀತಿಯ ದಾರಿಯಲಿ ನಡೆವ ಹೆಜ್ಜೆ ತಪ್ಪಾಗಿತ್ತು.

ಪರಸ್ಪರ ಪ್ರೀತಿಸ್ತಿದೀವಿ ಎಂದು ಇಬ್ಬರೂ ಒಮ್ಮೆಯು ಹೇಳಿಕೊಂಡಿರದಿದ್ದರೂ ಸಹ ಪರಸ್ಪರ ಪ್ರೀತಿ ಇತ್ತು.ಅದು ಅವರ ಪರಸ್ಪರರ ಕಣ್ಣುಗಳ ಮೂಲಕ ಮನಕೆ ಗೊತ್ತಿದ್ದ ಸತ್ಯವಾಗಿತ್ತು. ಇಡೀ ಗೆಳೆಯರ ಗುಂಪೆ ಅರ್ಥಮಾಡಿ ಕೊಂಡಿತ್ತು.ಚುನಾವಣೆಯಲ್ಲಿ ಈತನ ವಿರುದ್ಧ ಸೋತವರು ಕಾಲೇಜಿನ ಡೆಸ್ಕ್, ಟೇಬಲ್ ಮೇಲೆ,ಗೋಡೆಯ ಮೇಲೆ,ಬೋರ್ಡಗಳ ಮೇಲೆ,ಅವರಪ್ಪ ಓಡಾಡುವ ರಸ್ತೆಗಳಲ್ಲಿ ಇವರಿರ್ವರ ಹೆಸರುಗಳನ್ನು  ಹೃದಯದ ಚಿತ್ರದ ಜೊತೆ ಗೆ ಬರೀತಾ ಇದ್ದರು.ಈತನಾಗಲಿ,ಗೆಳೆಯರಾಗಲಿ ಅದನು ಅಳಿಸೋ ಕೆಲಸ ಸಹ ನಾಲ್ಕಾರು ಸಲ ಮಾಡಿ ಆಗಿತ್ತು.ನಾನೇ ಹಲವು ಸಲ ಆ ಗೆಳೆಯನಿಗೆ ತಮಾಷೆಯಲಿ ಹೇಳಿದ್ದೆ. ಅವಳಿಗಾಗಿ ಇಷ್ಟೆಲ್ಲಾ ಒದ್ದಾಡ್ತಿಯಾ,ಯಾಕೆ     ಒಮ್ಮೆ ನಿನ್ನ ಮನದ ಬಯಕೆ ಮುಂದಿಡಬಾರದು ?  ಅಂತ.ಆದರೆ ಆ ಫೂಲ್ ಒಪ್ಪಲೇ ಇಲ್ಲ.ಇನ್ನೂ ಒಳ್ಳೆಯ ಉದ್ಯೋಗ ಸಿಗ್ಲಿ,ಅವಳ ಪಿಜಿ ಓದು ಮುಗಿಲಿ…ಇತ್ಯಾದಿ ಪಿಳ್ಳೆನೆವ್ ಮುಂದೆ ಮಾಡಿ ನನ್ನ ಒಬ್ಬನ ಮುಂದೆ ಮಾತ್ರ ಸದಾ ಕೊರಗುತ್ತಿದ್ದ.

ಕಾಲ ಯಾರಿಗೂ ಕಾಯಲೇ ಇಲ್ಲ.ಅವಳ ಓದು ಮುಗಿಯೋ ಮುಂಚೆಯೇ ಅವಳ ವಿವಾಹದ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿತು.ಇವನಿಗೆ ಹೊರತು ಪಡಿಸಿ ಎಲ್ಲರಿಗೂ ವಿವಾಹದ ಅಹ್ವಾನ ಪತ್ರಿಕೆ ಬಂದಿದ್ದವು. ಈತನ ಸೆಂಟಿಮೆಂಟಾಲಿಟಿ ಹರ್ಟ ಮಾಡಬಾರದು ಎಂದು ಎಲ್ಲ ಗೊತ್ತಿದ್ದವಳ ಹಾಗೇ,(ಗೊತ್ತಿದ್ದವರ ಹಾಗೇ) ಕಾರ್ಡ ಸಹ ನೀಡಿರಲಿಲ್ಲ.ಆದರೂ ದುರಂತನಾಯಕನ ಪೋಜು ಹೊತ್ತು ಆ ವಿವಾಹಕ್ಕೆ ನಮ್ಮಗಳ ಸಂಗಡ ಬಂದಿದ್ದ.(ಬರಬಾರದಿತ್ತು ಅಂತ ಹಿಂದಿರುಗಿದ ಮೇಲೆ ಗೋಳಾಡಿದ)

ಪ್ರೀತಿಸಿ ಬಯಸಿ ಕಾತರಿಸಿ ಕಾದು ಹೇಳದೆ ಬಸವಳಿದವನು

ಅವಳ ವಿವಾಹದಲಿ ಅಕ್ಷತೆಯ ಬದಲು ಕಣ್ಣೀರು ಹಾಕಿದವನು (ಗಜಲ್)

ಈ ಅರ್ಥದ ಮುಖಹೊತ್ತುಕೊಂಡು ಆಕಾಶವೇ ಕಳಚಿ ಬಿದ್ದವನ ಹಾಗೇ;ಬದುಕೇ ಮುಗಿಯಿತು,ಎಲ್ಲಾ ಕಳೆದು ಕೊಂಡವನ ಹಾಗೇ ತಿಂಗಳುಗಟ್ಟಲೆ,ವರ್ಷಗಟ್ಟಲೇ ಒಳಗೊಳಗೆ ನರಳಿದ.ಒಮ್ಮೆ ಕೊಡೈಕೆನಾಲ್ ಹೋಗ್ತಿದೀನಿ ಅಂದ.ಯಾಕಪ್ಪಾ ಅಂದೆ.ಅಲ್ಲೊಂದು ಸುಂದರ ಮನಮೋಹಕ ಸುಸೈಡ್ ಪಾಯಿಂಟ್ ಇದೆ ಅಂದ. ನಿಜವಾಗಿಯು ಅಲ್ಲೊಂದು ವಿಫಲ ಪ್ರೇಮಿಗಳು ಬೀಳಲು ಅತ್ಯಂತ ಯೋಗ್ಯ ಸ್ಥಳವಿದೆ.ಮತ್ತ್ಯಾರಾದರು ಇದು ಓದಿ ಹೋಗಿ ಬಿದ್ದೀರಿ ಮತ್ತೆ.ನಾ ಅದಕೆ ಹೊಣೆಯಲ್ಲ. ಈಗ ಅಲ್ಲಿ ಜಾಲರಿ ಹಾಕಿ,ಬೀಳದಂತಹ ವ್ಯವಸ್ಥೆ ಸಹ ಮಾಡಿದ್ದಾರೆ.ಆ ಮಾತು ಬೇರೆ.

ಸಾಯೋದಕೆ ನಿರ್ಧರಿಸಿದ ಮೇಲೆ ಎಲ್ಲಿ ಸತ್ತರೂ ಅಷ್ಟೇ. ಅಲ್ಲಿ ಹೋಗಿ ಯಾಕಯ್ಯಸಾಯ್ತಿ. ಸಾಯೋ ಹಾಗಿದ್ದರೆ ಇಲ್ಲೆ ಸಾಯಿ ಎಂದು ನಾವೆಲ್ಲ ನಾಲ್ಕು ಜನ ಖಾಸಾ ಗೆಳೆಯರು ಸಮಾಧಾನಿಸಿದೆವು. ಅದೆಲ್ಲ ಮುಗಿದು ಹೋದ ಮಾತು. ಮರೆತು ಬಿಡು ಎಂದರೂ ಒಳಗೊಳಗೆ ದಹಿಸತೊಡಗಿದ.ಉರಿಯುವ ಕೆಂಡಕ್ಕೆ ತುಪ್ಪ ಸುರಿಯುವ ಹಾಗೇ ಗೆಳೆಯನೊಬ್ಬ ಬಂದು “ಅವರ ತಂದೆ ನಿನ್ನ ಬಗ್ಗೆ ನನ್ನ ಬಳಿ ಬಹಳ ವಿಚಾರಿಸಿದರು.ಆದರೆ ಅದ್ಯಾವ ಸುಂದರ ಹುಡುಗಿ ಅಂತ ಅಲಕ್ಷಮಾಡಿ ನಿನಗೆ ತಿಳಿಸಲಿಲ್ಲವೆಂದು” ಹೇಳಿದಾಗಲಂತೂ ಇವನು ಉರಿದೆದ್ದು ಹೋದ. “ಥೂ..ಪಾಪಿ,,ನೀನು ನನ್ನ ಸ್ನೇಹಿತ ಅಲ್ಲ ಕಣೋ.. ವೈರಿ.ಹಿತ ಶತ್ರು.ಅಂತಹ ಉನ್ನತ ವ್ಯಕ್ತಿತ್ವದ ದೊಡ್ಡ ವ್ಯಕ್ತಿಯ ಮಗಳ ಸಂಬಂಧ ನನಗೆ ಸಿಗಬಾರದೆಂಬ ಹೊಟ್ಟೆಕಿಚ್ಚು ನಿನಗೆ.. ” ಎಂದು ಹಲವು ದಿನ ಜಗಳಾಡಿ ಅವನನ್ನು ದೂರಮಾಡಿಬಿಟ್ಟ.ನಿಜವಾಗಲೂ ಆ ಸಂಬಂಧ ಆದರೆ ಈತ ಬಹಳ ದೊಡ್ಡ ವ್ಯಕ್ತಿ ಆಗಿ ಬೆಳಿತಾನೇ ಎಂಬ ಹೊಟ್ಟೆಕಿಚ್ಚೇ ಇದರ ಹಿಂದೆ ಇತ್ತು ಆಗ ಹಲವು ಕ್ಲಾಸ್ ಮೇಟ್ ಗಳಿಗೆ.

ನಿಜಕ್ಕೂ ತುಂಬಾ ಅಪೂರ್ವ ಚೆಲುವೆ ಏನಲ್ಲ ಅವಳು. ಆದರೆ ಅವಳ ಆ ಮೌನ,ಆ ನಗು,ಆ ಕಣ್ಣ ಸಂಭಾಷಣೆ, ಅವಳ ಗಾಂಭೀರ್ಯತೆಯಲ್ಲೇ ಏನೋ ಒಂದು ವಿಶಿಷ್ಟ ಸೆಳೆತ ಇತ್ತು.ಇವನಿಗಂತೂ ಆಗ ಥೇಟ್ ಕಾಲೇಜಿನಲ್ಲಿ ವಿಷ್ಣುವರ್ಧನ್ ಅಂತಲೇ ಗುರ್ತಿಸಿ ನೆಕ್ ನೇಮ್ ಇತ್ತು.ಆಗಿನ ಹೋಲಿಕೆಯೇ ಹಾಗಿತ್ತು.ಕಣ್ಣಿನ ಭಾವದಲ್ಲಿ ಭಾಷೆ ನೀಡಿದಂತಿದ್ದ ಹುಡುಗಿ ನಿರಾಶೆ ಮಾಡಿರಲಿಲ್ಲ ಅನಿಸುವುದು.ತಂದೆಯ ಮೂಲಕ ಅಭಿವ್ಯಕ್ತಿ ಗೊಳಿಸಿದ್ದಳೋ, ಅಥವಾ ಅವರ ತಂದೆಯೇ ಅರ್ಥ ಮಾಡಿಕೊಂಡಿದ್ದರೋ ಒಂದು ಗೊತ್ತಾಗಿರಲಿಲ್ಲ.ಅವರ ತಂದೆಯ ಸ್ನೇಹಿತರೊಬ್ಬರು ಸಹಜವಾಗಿ ಇವನೊಂದಿಗೆ ಮಾತಾಡುತ್ತಾ ಲಿಂಗಾಯತ ಪಂಗಡದಲ್ಲಿ ನೀವು ಯಾವ ಪಂಗಡ ಅಂತ ಕೇಳಿದ್ದರಂತೆ.ತಾವು ದೀಕ್ಷ ಬಳಕೆ ಇದರು ಸಹ, ಆಗ್ಗೆ ಇಂತಹ ಜಾತಿ ಗೀತಿಗಳ ಬಗ್ಗೆ ತಲೆಕೆಡಿಸಿಕೊಳ್ಳದ ಗೆಳೆಯ ಆತನಿಗೆ ಯಾಕೆ ಬೇಕಿರಬೇಕು ತನ್ನ ಜಾತಿ, ಅಂತ ಉಡಾಫೆಯಿಂದ ಅಂಥವೆಲ್ಲಾ ತಗೊಂಡು ಏನು ಮಾಡುವೀರಿ.ನಾ ಮನುಷ್ಯ.ಪುರುಷ ಜಾತಿ ಅಂತ ಲೇವಡಿ ಮಾಡಿದ್ದನಂತೆ.ನಂತರ ಗೆಳೆಯ ಹೇಳಿದ್ದು,ಅವರ ಗೆಳೆಯ ಕೇಳಿದ್ದು ಒಂದಕ್ಕೊಂದು ಅಂತರ ಸಂಬಂಧ ನೆನಪಾಗಿ ಅಯ್ಯೋ , ತನ್ನ ಕೊಂಚ ಉಡಾಫೆಗೆ ಇಷ್ಟು ದೊಡ್ಡ ಬೆಲೆ ಕೊಡಬೇಕಾಯಿತಲ್ಲ ಅಂತ ಗೋಳಾಡಿದ.

    ಈರ್ವರ ಜಾತಿ, ಉಪಜಾತಿ, ಧರ್ಮ ಒಂದೇ ಇದ್ದವು. ಆದರೆ  ಕಮುನಿಕೇಷನ್ ಗ್ಯಾಪ್  ಎಲ್ಲಾ ಹಾಳು ಮಾಡಿಸಿತು. ನೇರಾ ನೇರ ಆಗಬೇಕಿತ್ತು.ಆಗಲಿಲ್ಲ.ಉನ್ನತ ಸ್ಥಾನದಲ್ಲಿದ್ದ ಅವರು ಈತನ ಕಾಲೇಜು ಪ್ರೇಮವನ್ನು ಇಷ್ಟು ಸಿರಿಯಸ್ ತಗೋಬಹುದು ಅಂತ ಆತನಿಗೆ ಹೇಗೆ ಅರ್ಥ ಆಗಬೇಕು. ಪರಿಗಣಿಸಿರಲಿಕ್ಕಿಲ್ಲ ಅಂದುಕೊಂಡಿದ್ದನಂತೆ. ಆದರೆ ಅವರು ಮಾಡೋ ಪ್ರಯತ್ನ ಮಾಡಿದ್ದರು. ಈತನಿಗಾಗದ ಹಿತ ಶತ್ರುಗಳು ದಾರಿ ತಪ್ಪಿಸಿದ್ದರು.ಇದು ಅರ್ಥ ಆದ ಮೇಲೆ ಗೆಳೆಯ ಮತ್ತಷ್ಟು ಅಂತರ್ಮುಖಿ ಆದ.ಆದು ಮರೆಯಲು ಓದೇ ಓದಿದ.ಹುದ್ದೆಗಳು ಬದಲಾದವು.

    ಕಾಲ ಯಾರಿಗೂ ಕಾಯದೇ ಉರುಳಿ ಹೋಯಿತು. ರಸ್ತೆಯ ಮಧ್ಯೆಯೆ ಒಮ್ಮೆ ಆಕಸ್ಮಿಕ ಕಚೇರಿಗೆ ಹೊಂಟವನ ಎದುರು ಹೊಂಟಿದ್ದಳು.ಕಲಬುರ್ಗಿಯ ಐವಾನ್ ಶಾಯಿಯ ರಸ್ತೆಯಲ್ಲಿ.ಕೈಯಲ್ಲಿ ಅವಳಷ್ಟೆ ಮುದ್ದಾದ ಮಗು.ತಾಯಿ ಜೊತೆ ಇದ್ದಳು.ಇವನ ನೋಡಿ ಅದೇ ಕಂಗಳ ಮಾತು. ನಗು.ಆದರೆ ಈಗ ಮನಸಾರೆ ಮಾತಾಡಿದ್ದಳು.ಹೇಗಿದ್ದೀರಿ. ತುಂಬಾ ಓದಿರಂತೆ,ಬೇರೆ ಉದ್ಯೋಗ ಹೋಗಿರಂತೆ, ಸಾಧಿಸುವ ಹಟದಲ್ಲಿ ನೀವು ಎಂದೂ ಸೋತಿಲ್ಲ.ಸೋಲಲ್ಲ ನೀವು. ಗಟ್ಟಿಗರು ಅಂತ ಮಾತೇ ಮಾತು.ನಿನಗಾಗಿ ಇದೆಲ್ಲಾ.ಇದು ಸಾಧಿಸಿ ಬರೋಷ್ಟರಲ್ಲಿ ನೀನೇ ಇಲ್ಲ.ಈ ಸಾಧನೆ ಯಾಕಾಗಿ ಈಗ ಅಂತ ಒಳ ಹೃದಯ ಚೀರಿಡುತ್ತಿತ್ತು. ಏನು ಹೇಳಲಿಲ್ಲ.ನಸು ನಕ್ಕನಂತೆ.ನೋವು ಮತ್ತು ಅಸಹಾಯಕತನದಿಂದ.ಕಣ್ಣು ತುಂಬಿ ಬಂದವು. ಮದುವೆ ಆಯಿತೆ ? ಅಂದ್ಲು…. ಸುಮ್ಮನೆ ಆದ. ಆಯಿತು.ಎಲ್ಲ ಮರೆತು ಹಾಯಾಗಿರಿ, ಅಂತ ಹೇಳಿ ಮನೆಗೆ ಬನ್ನಿ… ಅಂತ ಕರೆದು ತಾಯಿಯೊಂದಿಗೆ ಹೋದಳು. ನೋಡುತ್ತಾ ನಿಂತಲ್ಲಿ ನಿಂತೆ ಇದ್ದ.ತಿರುತಿರುಗಿ ಕೈ ಮಾಡುತ್ತಾ ಹೋದಳು.ಹೋಗೆ ಬಿಟ್ಟಳು.

ನೀ ಎಲ್ಲೋ ನಾ ಎಲ್ಲೋ ಈ ಗುಂಡಗಿರುವ ಪ್ರಪಂಚದಲ್ಲಿ ಮತ್ತೆ ಭೇಟಿಯಿಲ್ಲ

ಹೊನ್ನಸಿರಿ ಸದಾ ಹಾರೈಸುವ ಆ ಜೀವಾತ್ಮಕೆ ಸುಖದಿ ತಣ್ಣಗಿರಲವಳು ಎಲ್ಲಿ ಹೋದಿ….

ಹೀಗೆ ಹೋದವಳು ಕಾವ್ಯವಾಗಿ, ಕಥೆಯಾಗಿ, ಒಟ್ಟಾರೆ ಬರೆಹವಾಗಿ ಗೆಳೆಯ ರವಿ ಬೆಳಗೆರೆಯ ಹಸಿರು ಲಂಗದ ಹುಡುಗಿಯಂತೆ ಕಲ್ಪನೆಯ ಬರಹಕೆ ವಸ್ತುವಾಗಿ ಕಾಡುತ್ತಿದ್ದವಳು ಆಕಸ್ಮಿಕವಾಗಿ ಗಜಲ್ ನ ಆತ್ಮಸಖಿ ರೂಪದಲಿ ಮತ್ತೆ ಬಾಳ ಸಖಿಯಾಗಿ, ಜೊತೆಗಾತಿಯಾಗಿ ಪ್ರತಕ್ಷವಾಗಿ ಬಿಟ್ಟಳು. ಅವಳೀಗ ಗೆಳೆಯನ ನಿಜದ ಸಂಗಾತಿ.ಅಪಾರ ಪ್ರೇಮ ನೀಡಿದ್ದಾಳೆ.ಅವನ ಬೇಕು ಬೇಡ,  ಪ್ರಗತಿ, ಪ್ರೋತ್ಸಾಹ ನೀಡಿ ಆತ ಎಲ್ಲಾ ರೀತಿಯಲ್ಲಿ ಬೆಳೆಯಲು ಸಹಕರಿಸಿ ಖುಷಿ ಪಡುವಳು.ಅವಳು ಮುಂದಿನ ಗಜಲ್ ಅಂತೆ ಹೊನ್ನಸಿರಿ ಯ ಏನೆಲ್ಲಾ ಆಗಿದ್ದಾಳೆ.ಅವಳು ಹೀಗಿದಾಳೆ ಗೆಳೆಯನಲ್ಲಿ.ಈ ಕೆಳಗಿನ ಗಜಲಂತೆ.

ಗಜಲ್

ನನ್ನ ಸಖಿ ಈ ಜಗದಿ ಅಪರೂಪ ಏನನೂ ಬೇಡಳು

ಕೊಡುವೆ ಅಂದಾಕ್ಷಣವೇ ಕೋಪದಿ ಕ್ಷಣ ಮುನಿವಳು

ಏನು ಕೊಟ್ಟರು ಕಡಿಮೆ ಅವಳಿಗೆ ಅಂತಹ ಗುಣದವಳು

ಮುಳ್ಳು ತರಚುವ ಮೃದು ಮಧುರ ಗುಲಾಬಿ ಅಂಥವಳು

ಬೇಡ ಕೊಟ್ಟಷ್ಟು ಆಸೆ ಬೆಳೆವವು ಅಂದು ಕೊಂಡಿಹಳು

ಆಸೆಯೇ ಇಲ್ಲದ ಅಪ್ಪಟ ಬಂಗಾರು! ನನಗೆ ಸಿಕ್ಕಿಹಳು

ತಾ ಕೊಡುವದರಲು ಹೀಗೆ ಬಲೂ ಕಂಜೂಸಿ ಮನದವಳು

ಮಾತೇ ಮುತ್ತಾಗಿಸಿದವಳು ಬೇಗ ಮುತ್ತು! ಸಹ ನೀಡಳು

ಅಭಿಮಾನದಿ ಪ್ರೀತಿ ಪ್ರೇಮದ ಹೊಳೆಯ ಹರಿಸುವಳು

ಹೊಟ್ಟೆ ಬಟ್ಟೆ ದೇಹ ಬದುಕು ಬರಹ ಚೆಂದ ಮಾಡಿಹಳು

ನೋವುಗಳ ನುಂಗಿಬಿಟ್ಟು ಬರೀದೆ ನಗು ನಟಿಸುವಳು

ಆಗಾಗ ಸಿಟ್ಟು ಸೆಡವು ಹುಸಿ ಕೋಪವು ತೋರುವಳು

ಬದುಕಲಾರೆ ಬಿಟ್ಟಿರಲಾರೆ ಈ ಜೀವದ ಜೀವವವಳು

ಎಲ್ಲಿಯದೋ ಈ ಬಂಧ ಅನುಬಂಧ ಆಗಿಸಿದವಳು

ಇದ್ದಲ್ಲೆ ಕಡು ಒಲವಿನ ಮೋಹದ ಮಳೆ ಸುರಿಸುವಳು

‘ಹೊನ್ನಸಿರಿ’ಮನ ಸರೋವರದಿ ಶಾಂತ ಇರಿಸುವಳು

*

ಹೀಗೆ ಗೆಳೆಯನ ಮನಸು ಈಗ ಸಂಪೂರ್ಣವಾಗಿ ಮತ್ತೆ ಭಾವಲೋಕಕೆ ಮರಳಿದೆ.ಆತ್ಮಸಖಿಯ, ಈಗಿನ ಬಾಳ ಸಂಗಾತಿಯ ಮಧುರ ಲೋಕದಲ್ಲಿ ಕಾವ್ಯ ಕಟ್ಟುತ್ತಿದೆ.ಇದು ಕೇವಲ ನನ್ನ ಗೆಳೆಯನ ಕಥನವಲ್ಲ.ನಮ್ಮ ನಿಮ್ಮ ಎಲ್ಲರ ಕಥನ. ಬದುಕಿರಲಾರೆ,ಬರೆಯದಿರಲಾರೆ  ಗಜಲ್ ಗಳು. ಹೀಗೆ ಬರೆದ ಎಲ್ಲ ಗಜಲ್ ಗಳ ಹಿಂದೆ ಇರೋದು ಇದೇ ಈಗಿನ ಪ್ರೇಮ ನಿವೇದನೆ.ಮೊದಲಿನವಳು ಮರೆಯಾಗಿ ಈಗ ಅದೆಷ್ಟು ಕಾಲವೋ.ಅವಳನ್ನು ಸಂಪೂರ್ಣವಾಗಿ ಮರೆಯಿಸಿಬಿಟ್ಟಿದ್ದಾಳೆ ಈಗ ನಿಜದ ಸಖಿ.ಭಾವಲೋಕದ ಈ ಪಯಣದಲ್ಲಿ ಕಳೆದುಕೊಂಡ,ಹುಡುಕಿದ, ಬಳಲಿದ, ಪಡೆದ, ಧನ್ಯತಾ ಭಾವದ ಗಜಲ್ ಗಳ ಒಂದು ಕಥನವಿದು. ಬರೆಯದ ನೂರು ಮಾತುಗಳಿವೆ. ಪ್ರೇಮವೆಂದರೆ ಅದು ಹಾಗೇನೆ.ಎಂದೂ ಮುಗಿಯದ ಕಥನ.ನಮಸ್ಕಾರ.

*******************

ಸಿದ್ಧರಾಮ ಹೊನ್ಕಲ್

******************

Leave a Reply

Back To Top