ಶಾಲಾ journey

ಲೇಖನ

ಶಾಲಾ journey

ಶಾಂತಿವಾಸು

After initial confusion, most private schools extend vacation in Gurugram |  Hindustan Times

ನಮ್ಮ ಮನೆಯಲ್ಲಿ ಬಾಡಿಗೆಗಿದ್ದ ನಾಗಮ್ಮನ ಮಗಳು ಕಲಿ ಅಂದ್ರೆ ಕಲಾವತಿ. ನಾಲ್ಕು ವರ್ಷ ದಾಟುವ ಮೊದಲೇ ಮನೆ ಗುಡಿಸಿ, ಸಾರಿಸುವುದರಲ್ಲಿ ಅವಳಮ್ಮನೊಂದಿಗೆ ಸೇರಿಕೊಳ್ಳುತ್ತಿದ್ದಳು. ಅವಳ ಸಮವಯಸ್ಕಳಾದ ನಾನು ನಮ್ಮಮ್ಮ ಗುಡಿಸಿ ಒರೆಸಿದ್ದನ್ನು ಸರಿ ಇಲ್ಲವೆಂದು ಬೆರಳು ತೋರಿಸುತ್ತಿದ್ದೆ. ನಾಗಮ್ಮನಿಗೆ ಒಂಥರಾ ಖುಷಿ  “ರೀ ಕಸ್ತೂರಮ್ಮ, ನನ್ನ ಮಗಳು ನಿಮ್ಮಂಗೆ ಕೆಲಸ ಕೆಲಸ ಅಂತಾಳೆ. ನಿಮ್ಮ ಮಗಳು ನನ್ನಂಗೆ, ಮಾಡೋರನ್ನ ಆಡ್ಕೊಂಡು ಊರು ಸುತ್ತೋದರಲ್ಲಿ ಚೂಟಿ” ಅಂತ ಹೇಳಿ ನಮ್ಮಮ್ಮನನ್ನು ಖುಷಿಯಾಗುವಂತೆ ಉಬ್ಬಿಸಿ ರೇಗಿಸ್ತಿದ್ರು..

ಒಮ್ಮೆ ಬಾಗಿಲ ಹೊರಗೆ ಬಲಭಾಗಕ್ಕಿದ್ದ ಚಿಕ್ಕ ನೀರಿನ ತೊಟ್ಟಿ ಹತ್ರ ಮಲಗಿ, ತೊಟ್ಟಿಯ ಗೋಡೆ ಮೇಲೆ ಸೀಮೇಸುಣ್ಣದಲ್ಲಿ ಅ ಆ ಇ ಈ ಬರಿಯುತ್ತಿದ್ದನ್ನು ನೋಡಿದ ನನ್ನ ದೊಡ್ಡಮಾವ (ಅಂದ್ರೆ ನಮ್ಮಮ್ಮನ ಎರಡನೇ ಅಣ್ಣ) ಚಿಕ್ಕಮಾವ (ತಾಯಿಯ ತಮ್ಮ)ಅಪ್ಪ, ಅಮ್ಮ,ನನ್ನನ್ನು ಕಾನ್ವೆಂಟಿಗೆ ಸೇರಿಸಿಬಿಡುವ ತೀರ್ಮಾನಕ್ಕೆ ಬಂದರು. ನಮ್ಮ ತಾಯಿ ತಂದೆ  ಬಳಗದಲ್ಲಿ ತುಂಬಾ ಮಕ್ಕಳಿದ್ದರು. ಆದರೆ ಅವರೆಲ್ಲ ಯಾವಾಗ, ಹೇಗೆ ಶಾಲೆ ಸೇರಿದರು, ಯಾರು ಸೇರಿಸಿದರು ಒಂದೂ ಸುಳಿವೇ ಇಲ್ಲ. ಅಷ್ಟು ಏಕೆ ನಮ್ಮಕ್ಕ ಆಗಲೇ ಮನೆಯ ಹತ್ತಿರವೇ ಇದ್ದ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದರು. ಆದರೆ ನನ್ನನ್ನು ಮಾತ್ರ ಮೆರವಣಿಗೆ ಹೊರಟಂತೆ ರಾಜಾಜಿನಗರದ ನಮ್ಮ ಮನೆಯಿಂದ ನಮ್ಮಮ್ಮ, ಅಪ್ಪ ಹಾಗೂ ಆಗಿನ ಕಾಲದಲ್ಲಿ 10ನೇ ಕ್ಲಾಸ್ ಪಾಸಾಗಿದ್ದ ನಾಗಮ್ಮ         ( ಕಾನ್ವೆಂಟಾದ್ದರಿಂದ ಏನಾದರೂ ಮಾತಾಡಲು, ಬರೆಯಲು ಬೇಕಾದರೆ ಇರಲಿ ಅಂತ ನಾಗಮ್ಮ) ಸುಬ್ರಹ್ಮಣ್ಯ ನಗರದಲ್ಲಿ ದೊಡ್ಡಮಾವ, ಅತ್ತೆ, ಚಿಕ್ಕ ಮಾವ, ಮತ್ತು ಅಷ್ಟು ದೂರ ನಾನು ನಡೆಯಲಾರೆನೆಂದು, ಹೆಗಲ ಮೇಲೆ ಹೊತ್ತ ಸುಬ್ರಹ್ಮಣ್ಯನಗರದ ನಂತರದ ಮಿಲ್ಕ್ ಕಾಲೋನಿಯಲ್ಲಿದ್ದ ನಮ್ಮಮ್ಮನ ಸೋದರ ಮಾವನ ಮಗ ಹೀಗೆ ಒಬ್ಬೊಬ್ಬರನ್ನೇ ಸೇರಿಸಿಕೊಂಡ ಗುಂಪು, ರೈಲ್ವೇಹಳಿ ದಾಟಿ ಮಲ್ಲೇಶ್ವರದ ನಿರ್ಮಲಾರಾಣಿ ಶಾಲೆಗೆ ಬಂದು ನಿಂತಿತು. ಬೆಂಗಳೂರಿನಲ್ಲಿ ಆಗೆಲ್ಲ ಎಲ್ಲೋ ಒಂದೊಂದು ಸ್ಕೂಟರ್, ಒಂದೊಂದು ಬಸ್ಸು ಬಿಟ್ಟರೆ, ಬರೀ ಸೈಕಲ್ಲುಗಳದ್ದೇ ಕಾರುಬಾರು.

     ಸ್ಕೂಲಿಗೆ ಸೇರುವ ತವಕ ಉತ್ಸಾಹ ಎಲ್ಲೆ ಮೀರಿ, ಓಡಿ ಓಡಿ ಎರಡು ಸಲ ಬಿದ್ದು ಮಂಡಿ ತರಚಿ, ನನ್ನ ಬಟ್ಟೆಯೆಲ್ಲಾ ಮಣ್ಣು ಮೆತ್ತಿಕೊಂಡಿತ್ತು. ಇಷ್ಟು ಕೊಳಕಾದ ಬಟ್ಟೆ ನೋಡಿ ಸ್ಕೂಲಿಗೆ ಸೇರಿಸಿಕೊಳ್ಳಲ್ಲ ಅಂತ ಎಲ್ಲರೂ ಗುಂಪು ಸೇರಿ ಗುಸುಪಿಸು ಮಾತಾಡಿ, ಕೊನೆಗೆ ಇಷ್ಟುದೂರ ಬಂದು ವಾಪಸ್ ಹೋಗುವುದು ಬೇಡ ಆದದ್ದಾಗಲಿ ನೋಡೋಣ ಎಂದು ತೀರ್ಮಾನಿಸಿದರು. ನಮ್ಮಮ್ಮನ ಮುಖ ಅಂತೂ ಕೋಪದಿಂದ ಉರಿಯುತ್ತಿತ್ತು. ನಾನು ನಮ್ಮಮ್ಮನ ಹತ್ತಿರ ಕೂಡ ಸುಳಿಯಲಿಲ್ಲ. ಆದರೂ ತಾನಾಗೇ “ಬಾರೆ ಇಲ್ಲಿ, ಒಳಗೆ ಮಿಸ್ಸು ಮಾತಾಡಿಸಿದ್ರೆ ಮಾತಾಡಬೇಕು. ಅಕ್ಕ ಹೇಳಿಕೊಟ್ಟಿರೋ ಅ ಆ ಇ ಈ ಆಮೇಲೆ ಒಂದು ಎರಡು ಮೂರು ಎಲ್ಲ ಹೇಳು” ಎಂದರು. “ಹೇಳಲ್ಲ” ನಾನೆಂದೆ. ಬಿನ್ನಿ ಮಿಲ್ಲಿನಲ್ಲಿ ರಾತ್ರಿ ಪಾಳಿ ಮುಗಿಸಿ ನನ್ನನ್ನು ಕಾನ್ವೆಂಟಿಗೆ ಸೇರಿಸಲೆಂದೇ, ನಿದ್ದೆ ಕೂಡ ಮಾಡದೇ ಬಂದಿದ್ದ ಚಿಕ್ಕ ಮಾವನ ಮುಖ ಹುಣಸೆ ಹಣ್ಣಾಯಿತು.

ನಾಗಮ್ಮ “ಲೇ, ಮನೆಲ್ಲಿ ಸಿಕ್ಕಿ ಸಿಕ್ಕಿದ ಕಡೆ ಗೀಚ್ತಾ ಇರ್ತೀಯ. ಸ್ಕೂಲಿಗೆ ಸೇರಬೇಕಾದ್ರೆ ಅವರು ಕೇಳಿದ್ದಕ್ಕೆ ಉತ್ರ ಹೇಳು ಆಯ್ತಾ” ಎಂದರು. “ನಿಮ್ಮ ಕಲೀನು ಕಳ್ಸಿ, ನಾನೂ ಹೋಗ್ತೀನಿ. ಇಲ್ದಿದ್ರೆ ನಂಗೆ ಸ್ಕೂಲ್ ಬೇಡ” ಅಂದೆ. “ನೀನು ಓದೋಷ್ಟು ಅವ್ಳು ಓದಲ್ಲ ಕಣೇ. ಮುಂದಿನ ವರ್ಷ ಕಳಿಸ್ತೀನಿ. ಈಗ ನೀನು ಸೇರಿಕೋ” ಎನ್ನುತ್ತಾ ಆರೇಳು ಮೆಟ್ಟಿಲು ಹತ್ತಿದರೆ ಎಡಕ್ಕಿದ್ದ ಆಫೀಸ್ ರೂಮಿನ ಒಳಗೆ ಕರೆದೊಯ್ದರು. ಕಪಾಟಿನಲ್ಲಿ ಪುಸ್ತಕ ತೆಗೆಯುತ್ತಿದ್ದ ಹೆಡ್ ಮೇಡಂ ಎಲ್ಲರನ್ನೂ “ಏನು”ಎನ್ನುವಂತೆ ನೋಡಿದರು. ಅದು ಹುಡುಗಿಯರ ಶಾಲೆಯಾದ್ದರಿಂದ ಅಲ್ಲಿ ಓದುತ್ತಿರುವ ಹುಡುಗಿಯ ಬಗ್ಗೆ ಏನಾದರೂ ಮಾತಾಡಲು ಬಂದಿರಬಹುದು ಅಂದುಕೊಂಡರೇನೋ?? ಇಷ್ಟು ಜನರ ಗುಂಪು ನೋಡಿ ಗಲಾಟೆ ಮಾಡಲಿಕ್ಕೆ ಬಂದವರು ಎಂದುಕೊಂಡಿರಲೂಬಹುದು.  ಆ ಶಾಲೆಗೆ ಶಿಸ್ತಿನ ಹಣೆಪಟ್ಟಿ ಬರಲು ಕಾರಣರಾದವರಲ್ಲಿ ಒಬ್ಬರಾದ “ಕಲಾ ಸಿಸ್ಟರ್” ಅವರು ಎಂಬುದು ನಂತರದ ದಿನಗಳಲ್ಲಿ ತಿಳಿಯಿತು.

  ಅವರು ನೋಟದಲ್ಲಿ ಕೇಳಿದ “ಏನು” ಎಂಬ ಪ್ರಶ್ನೆಯ ತೀಕ್ಷ್ಣತೆಗೆ ಎಲ್ಲರೂ ಪಿಳಿಪಿಳಿ ನೋಡಿ, ನಾಗಮ್ಮನನ್ನು ತಿವಿದರು. ನಾಗಮ್ಮನ ತಂಗಿ ಅದೇ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದರಿಂದ, ಈಗ ಅವರೇ ನಮ್ಮ ಗುಂಪಿನ ಮುಂದಾಳು. ಮರ್ಯಾದೆ ತುಂಬಿದ ದನಿಯಲ್ಲಿ ನಾಗಮ್ಮ “ಸಿಸ್ಟರ್, ಇವಳು ಅ ಆ ಇ ಈ ಎಲ್ಲಾ ಚೆನ್ನಾಗಿ ಓದುತ್ತಾಳೆ. ಅದಕ್ಕೆ ಸ್ಕೂಲಿಗೆ ಸೇರಿಸೋಕ್ಕೆ ಬಂದೆವು” ಎಂದು ನನ್ನನ್ನು ತೋರಿದರು. ಮುಖಭಾವವನ್ನು ಒಂದಿಷ್ಟೂ ಬದಲಿಸದ ಕಲಾ ಸಿಸ್ಟರ್ “ಸ್ಕೂಲಿಗೆ ಸೇರಿಕೊಳ್ತೀಯಾ” ಎಂದರು. ಅವರು ಧರಿಸಿದ್ದ ಪಾದದವರೆಗಿನ ಬಿಳಿ ಗೌನು, ಹಣೆಯಿಂದ ಹಿಂದಕ್ಕೆ ಇಳಿಬಿಟ್ಟಿದ್ದ  ಸ್ಕಾರ್ಫ್ ತರಹದ ಬಿಳಿ ವಸ್ತ್ರ ಹಾಗೂ ಮುಖದಲ್ಲಿನ ಆ ದೃಢತೆ ಕಂಡು ಏನನ್ನಿಸಿತೋ “ಬರಲ್ಲ” ಎಂದುಬಿಟ್ಟೆ.

ಅಷ್ಟೇ, ಹಿಂದೆ ಅಕ್ಕಪಕ್ಕ ಇದ್ದವರೆಲ್ಲ ನನ್ನ ಹಠ, ಅತಿಯಾದ ಮಾತುಗಳು, ಆಗಾಗ ಕಳೆದುಹೋಗುವ ನನ್ನ ಅಭ್ಯಾಸವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಈ ಶಾಲೆಯೇ ನನ್ನಂಥವಳಿಗೆ ಸರಿ ಎನ್ನುತ್ತಾ, ಸೇರಿಸಿಕೊಳ್ಳಲು ದಂಬಾಲು ಬಿದ್ದರು. ಕಲಿತ್ತಿದ್ದನ್ನೆಲ್ಲಾ ಹೇಳುವಂತೆ ನನ್ನನ್ನು ಪುಸಲಾಯಿಸತೊಡಗಿದರು. ನಾನು ಶಾಲೆಗೆ ಸೇರಿದರೆ ಇವರಿಗೆಲ್ಲ ಏನೋ ಲಾಭವಿದೆಯೆಂದು ನನಗೀಗ ಅರ್ಥವಾಗತೊಡಗಿತು. ನಾನು ಮಾಡಿದ ತಪ್ಪುಗಳಿಗೆಲ್ಲ ಶಿಕ್ಷೆ ಕೊಡುವುದು ಬಿಟ್ಟು, ನನ್ನನ್ನು ಬಾಯಿಬಿಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಹಾಗಾದರೆ ನಾನು ಎದುರಿಗಿರುವ ಸಿಸ್ಟರಿಗಿಂತ ಗಂಭೀರವಾಗಬೇಕು ಎಂದು ತೀರ್ಮಾನಿಸಿಬಿಟ್ಟೆ.

ಕೊನೆಗೆ ಸಿಸ್ಟರ್  “ಯಾಕೋ ಅವಳು ಏನೂ ಮಾತಾಡ್ತಿಲ್ಲ. ನಾಳೆ ಕರ್ಕೊಂಡು ಬನ್ನಿ” ಎನ್ನುತ್ತಾ ಹೊರನಡೆದುಬಿಟ್ಟರು. ಅಲ್ಲಿ ನಿಂತು ಮಾಡುವ ಯಾವ ಕೆಲಸವೂ ನಮ್ಮ ಪಾಲಿಗೆ ಉಳಿದಿರಲಿಲ್ಲ. ಹತ್ತಿದ ಮೆಟ್ಟಿಲನ್ನು ಇಳಿದ ಕೂಡಲೇ ಸಿಕ್ಕ ಮಾವಿನ ಮರದ ಕೆಳಗೆ ಬಿದ್ದಿದ್ದ ಮಿಡಿ ಮಾವಿನಕಾಯಿ ಆರಿಸುವ ಭರದಲ್ಲಿ, ಬಂದಿದ್ದವರ ಸಿಟ್ಟಿನ ಪ್ರಮಾಣ ಅಳಿಯುವುದಾಗಿರಲಿಲ್ಲ ನನಗೆ. “ಮಾಡಿದ್ಯಲ್ಲ ಮಾದೇವಿ ಮುಖಕ್ಕೆ ಮಂಗಳಾರತಿ ಬಾ ಮನೆಗೆ” ಎಂದು ಅತ್ತೆ “ಮ”ಕಾರಗಳಲ್ಲಿ ಕೋಪವನ್ನು ವ್ಯಕ್ತಪಡಿಸಿದರೆ, ಅಮ್ಮ ಅಪ್ಪನ ಮುಂದೆ ಒಂದು ದೊಡ್ಡ ಶೂನ್ಯ ಕಾಣಿಸಿರಬೇಕು.

ಮತ್ತೆ ಬಂದಹಾಗೇ ಒಬ್ಬೊಬ್ಬರಾಗಿ ಅವರವರ ಸ್ಥಳ ಬಂದಾಗ ಪ್ರಯಾಣಿಕರಿಳಿಸಿದ ಬಸ್ಸಿನಂತೆ, ಗುಂಪು ಕರಗುತ್ತಿತ್ತು. ದೊಡ್ಡ ಮಾವ ನನ್ನನ್ನು ಹೊತ್ತಿದ್ದರು. ಎಲ್ಲರೂ ಚಿಕ್ಕಮಾವನ ಮನೆಗೆ ಬರುವಷ್ಟರಲ್ಲಿ ನಮ್ಮಪ್ಪ “ಸಿಂಹ (ನರಸಿಂಹ ಅವರ ಹೆಸರು) ಇವಳನ್ನ ನಾಳೆ ಸ್ಕೂಲಿಗೆ ಸೇರಿಸಲೇ ಬೇಕು ಕಣೋ” ಎಂದದ್ದೇ ಮಾವ ಚಾರ್ಜ್ ತಗೊಂಡರು. ಒಳಗೆ ಹೋಗಿ ದಾರ ಹಿಡಿದು ಬಂದ ಮಾವ, ಅವರ ಮತ್ತು ದೊಡ್ಡಮಾವನ ಮನೆಗೆ ಮಧ್ಯದಲ್ಲಿದ್ದ ವಿದ್ಯುತ್ ಕಂಬಕ್ಕೆ ನನ್ನೆರಡು ಕೈಗಳನ್ನು ಹಿಂದಕ್ಕೆ ಕಟ್ಟಿ, ತೆಂಗಿನ ಗರಿಯ ಕಡ್ಡಿಯಿಂದ ಛಟ್ ಛಟ್ ಎಂದು ಮೊಣಕಾಲಿನ ಕೆಳಗೆ ನಾಲ್ಕೈದು ಬಾರಿ ಬೀಸಿದರು. ದೊಡ್ಡ ಮಾವ ಬಂದು ಬಿಡಿಸಿದರು. ನಾಗಮ್ಮ, ನಮ್ಮಮ್ಮ, ಅಪ್ಪ ಎಲ್ಲೂ ಕಾಣಲಿಲ್ಲ. ಕಟ್ಟು ಬಿಚ್ಚಿ ಮನೆಗೆ ಕರಕೊಂಡು ಹೋಗಿ ನೀರು ಕುಡಿಸಿದರು. ನಾನಾಗಿನ್ನೂ ಚೆನ್ನಾಗಿ ನೆನಪಿದೆ,  ನಮ್ಮಾವ ಹೇಳಿದಂತೆ ಚಕ್ಕಮಕ್ಕಳ ಕುಳಿತು “ನರಸಿಂಹ” ಅಂತ ಅವರ ಹೆಸರನ್ನೇ ನೆಲದ ಮೇಲೆ ಬರೆದಿದ್ದೆ.

ಎಷ್ಟು ಮೌಲ್ಯತೆಯಿತ್ತು ನಮ್ಮ ಜೀವನದಲ್ಲಿ. ನನ್ನನ್ನು ಶಾಲೆಗೆ ಸೇರಿಸುವುದಕ್ಕಾಗಿಯೇ  ಎಷ್ಟೆಷ್ಟು ಜನರು, ಎಷ್ಟು ಸಹಜ ರೀತಿಯಲ್ಲಿ ಪಾಲುಗೊಂಡಿದ್ದರು ಎಂಬುದನ್ನೇ ನಾನಿಲ್ಲಿ ಹೇಳಹೊರಟಿರುವುದು. ಹತ್ತನೇ ತರಗತಿ ಓದಿದ್ದ ನಾಗಮ್ಮ, ತನ್ನ ಮಗಳು ಕಲಿಗಿಂತ ಮೊದಲು ನನ್ನನ್ನು ಶಾಲೆಗೆ ಸೇರಿಸುವುದು ಅವರ ನಿಸ್ವಾರ್ಥ ಮನೋಭಾವನೆಯನ್ನು ತೋರುತ್ತದೆ. ಮತ್ತು ಅವರ ಪಾಡು ಹೇಗಾದ್ರೂ ಹೋಗಲಿ ಎನ್ನದೆ, “ಇವಳನ್ನು ಶಾಲೆಗೆ ಸೇರಿಸುವುದಕ್ಕಿಂತ ನಮಗೇನು ಕೆಲಸ” ಎಂಬಂತೆ ನಮ್ಮ ಮಾವಂದಿರು ತೋರಿದ ಪ್ರೀತಿ ಹಾಗೂ ಕರ್ತವ್ಯದ ಸಲಿಗೆ ಈಗ ಕಾಣೆಯಾಗಿದೆ.  ಅಂತೆಯೇ ತಂದೆತಾಯಿಯರು ಸಹ “ಯಾರದೇನು ಹೆಚ್ಚುಗಾರಿಕೆ” ಎಂದು ಯೋಚಿಸದೆ, “ಮಾವ ಬರ್ತಾನೆ” ಎನ್ನುತ್ತಾ ನಮ್ಮನ್ನು ಎಚ್ಚರಿಸುತ್ತಿದ್ದರು. ಆದರೆ ಸರಿಸುಮಾರು ನನ್ನಂಥದ್ದೇ ಪರಿಸರದಲ್ಲಿ ಬೆಳೆದ ಜನ ಮಕ್ಕಳಿಗೆ ಯಾರೋ ಹೇಳುವುದಿರಲಿ, ಅವರೇ ಹೊಡೆಯುವುದು ದೂರ ಬಿಡಿ, ಕೊನೆ ಪಕ್ಷ ಹೇಳುವುದಕ್ಕೂ ಹಿಂಜರಿಯುತ್ತಿದ್ದಾರೆ. ಕೊನೆಗೆ ಹೇಳುವುದಿಷ್ಟೇ. ಅಂದು ಹೊಡೆದು, ಬೈದು ನನ್ನನ್ನು ಶಾಲೆಗೆ ಸೇರಿಸಲು ಜೊತೆಗಿದ್ದ ಏಳರಲ್ಲಿ ಐದು ಜನ ಈಗಿಲ್ಲ. ಆದರೆ ಒದೆ ತಿಂದ ಪುಣ್ಯವಂತೆ ನಾನು, ನನಗೆ ಪ್ರತಿಯೊಬ್ಬರ ಬಗ್ಗೆಯೂ ಗೌರವ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ.

************

Leave a Reply

Back To Top