ಅವಳ ಕಣ್ಣು ಬತ್ತಿ ಹೋಗಿತ್ತು

ಕವಿತೆ

ಅವಳ ಕಣ್ಣು ಬತ್ತಿ ಹೋಗಿತ್ತು

ಆಸೀಫಾ

ಜಗುಲಿಯ ಮೇಲೆ ಕೂತು ಪಕ್ಕದ ಖಾಲಿ ಜಾಗವನ್ನೇ ದಿಟ್ಟಿಸುತ್ತಿದ್ದಳು
ತಲೆಯೊಳಗೆ ಏನೋ ಮಹಾ ಚರ್ಚೆಗಳು ತಂತಾನೇ ನಡೆಯುತ್ತಿದ್ದವು
ಹೊರಗಿನ ಪ್ರಪಂಚದ ಆಗುಹೋಗುಗಳ ಸಂಪರ್ಕವೇ
ಕಡಿದುಹೋಗಿತ್ತು
ಬಟ್ಟಲುಗಣ್ಣಿನ ಚೆಲುವೆಯ ಅಂದದ ಕಣ್ಣುಗಳೇ ಬತ್ತಿ ಹೋಗಿದ್ದವು

ಶಾಪವೋ ಕೋಪವೋ ವಿಧಿಯ ಕಣ್ತಪ್ಪಿನ ಫಲವೋ ತಿಳಿಯುತ್ತಿಲ್ಲ
ಆಟಿಕೆಯೊಂದಿಗಿರುವ ಕೂಸಿಗೆ ಅಪ್ಪನೆಂಬ ಆಕಾಶ ಕಳಚಿದ್ದು ಅರಿವಿಲ್ಲ
ಹೆತ್ತವಳಿಗೆ ಕರುಳ ಸಂಕಟ ಸಹಿಸಿ ಮೇಲೇಳಲೂ ಆಗುತ್ತಿಲ್ಲ
ಮನೆಯ ದೀಪ ಮನೆಮಂದಿಯ ಮುಂದೆಯೇ ಆರಿದ್ದು
ನಂಬಲಾಗುತ್ತಿಲ್ಲ

ಗರ್ಭದೊಳಗಿನ ಉಸಿರಿಗೂ ಏನೋ ಚಡಪಡಿಕೆ ತಳಮಳ
ಅನುದಿನ ಸಂಭಾಷಿಸುತ್ತಿದ್ದ ದನಿಕೇಳದೆ ಅದಕ್ಕೂ ಕಳವಳ
ಬಿಕ್ಕಿ ಬಿಕ್ಕಿ ಅತ್ತರೆ ಶವವಾಗಿ ಕೂತಲ್ಲೇ ಕೂರುತಿದ್ದಿದ್ದೇ ಬಹಳ
ಅರ್ಧ ಬದುಕು ಅರ್ಧ ಕನಸಿನ ನೆರಳು ಆವರಿಸಿತ್ತು ಆಕೆ ಕಂಗಳ

ಹದಿಹರೆಯದಲ್ಲೇ ಶೂನ್ಯವಾಗಿತ್ತು ಬಾಲೆಯ ಬಾಳು
ಹೇಳಲಾಗದು ಅವಳ ಸಂಕಟ , ನೋವು,ಗೋಳು
ಸೂತಕದ ಛಾಯೆ ಕಂಡಿತ್ತು ಅಬಲೆಯ ಮನಸು
ಮೌನವುಂಡು ಮೌನದಲ್ಲೇ ನೆಲಕುರುಳಿ ಬಿದ್ದಳು.

***********

(ಎರಡು ದಿನಗಳ ಹಿಂದೆ ಕೊರೋನಾದಿಂದ ತೀರಿಕೊಂಡ ಗರ್ಭಿಣಿಯ ಗೋಳು ಕಂಡು ನನಗೆ ಅನಿಸಿದ್ದು ಬರೆದಿರುವೆ)

2 thoughts on “ಅವಳ ಕಣ್ಣು ಬತ್ತಿ ಹೋಗಿತ್ತು

  1. ಓದಿ ಕಣ್ತುಂಬಿ ಬಂತು, ಇನ್ನು ನೋಡಿದ ನಿಮಗೆ ಹೇಗಾಗಿರ ಬಹುದು.

Leave a Reply

Back To Top