ಕವಿತೆ
ಬೇಕೆನಿಸಿದೆ ಏಕಾಂತ
ಎಂ. ಆರ್. ಅನಸೂಯ
ಬೇಕೆನಿಸಿದೆ
ಎಂದಿಗಿಂತಲೂ ಹೆಚ್ಚು ಏಕಾಂತ
ಆಲ್ಲಿದೆ ಆತ್ಮದ ಸಾಂಗತ್ಯ
ನನ್ನ ನೋವುಗಳಿಗೆ ಸವರುವ
ಮುಲಾಮು ಅದಕಷ್ಟೆ ಗೊತ್ತು
ಯಾರಿಗೂ ಸಾಧ್ಯವಷ್ಟೆ ವೀಕ್ಷಕರಾಗಲು
ಪಾಲುದಾರಿಕೆ ಅಸಾಧ್ಯ
ಬಳಸಿ ಬಿಸುಟ ಸಂಬಂಧಗಳು
ಕೇಳುತ್ತವೆ ಸೂತಕದ ಹಕ್ಕು
ಹೊರದಿದ್ದರೂ ಹೊಣೆಗಾರಿಕೆಯ ಪಾಲು
ಮಾತಾಗಿ ಪ್ರಕಟವಾಗದ ಭಾವಗಳು
ಅಜ್ಞಾತವಾಗಿ ಮೌನದಲ್ಲಿರ ಬಯಸಿವೆ
ಕರುಳ ಕುಡಿಯ ನೋವಿಗೆ ನೇವರಿಸಿ
ಸಂತೈಸಲಾಗದ ಅಸಹಾಯಕತೆಗೆ
ಎದೆಯಾಳದ ನೋವೆಲ್ಲ ಕರಗಿ
ಕಣ್ಣಭಾಷೆಯ ಕಣ್ಣೀರಾಗಿ ಹರಿಯುವಾಗ
ಮಾತಿಗಿಂತಲೂ ಮೌನವೇ ಆಪ್ತವಾಗಿದೆ
*****************