ನನಗಿಷ್ಟವಾದ ಸಿನಿಮಾ
ನಾಯಕ್
ನಾನು ವಿದ್ಯಾರ್ಥಿಯಾಗಿದ್ದಾಗಲೇ ಹೆಚ್ಚು ಹೆಚ್ಚು ಸಿನಿಮಾಗಳನ್ನು ನೋಡಿದ್ದು. ಬಹುಶಃ ಎಲ್ಲರೂ ಹಾಗೆ – ಸಿನಿಮಾದ ಆಕರ್ಷಣೆ ಇದ್ದವರೆಲ್ಲ. ನನ್ನ ಸಿನಿಮಾದ ಸೆಳೆತ ಆರಂಭ ಆದದ್ದೇ ಟೆಂಟ್ ಸಿನಿಮಾದ ನೆಲದ ಸೀಟಿಂದ! ನಂತರ, ಕಪ್ಪು ಬಿಳುಪಿಂದ ಬಣ್ಣವಾಗಿ, ಬಣ್ಣ ಈಸ್ಟಮನ್ ಆಗಿ, ಮುವತ್ತೈದು ಎಂಎಂ ನಿಂದ ಎಪ್ಪತ್ತು ಎಂಎಂ ಆಗಿ, ಸಿನೇರಮಾ ಆಗಿ, ನಂತರ ಈಗಿನ ಸಿನಿಮಾ ಸ್ಕೋಪ್ ಆಗಿ, ಅಂದಿನ ಟೆಂಟಿಂದ ಪಂಖಗಳ ಥಿಯೇಟರ್ ಆಗಿ, ಎಸಿ ಆಗಿ ಈಗ ಮಲ್ಟಿಪ್ಲೆಕ್ಸ್ ಗಳವರೆಗೂ ಬದಲಾವಣೆ ಕಂಡಿರುವ ಈ ಅದ್ಭುತ ಶಕ್ತಿಯ ಮಾಧ್ಯಮ, ಜಗತ್ತಿನ ಎಲ್ಲ ಸಮಾಜಗಳ ಮೇಲೂ ಒಂದಲ್ಲ ಒಂದು ಥರದಲ್ಲಿ ಪ್ರಭಾವ ಬೀರಿರುವುದು ಅತಿಶಯೋಕ್ತಿ ಅಲ್ಲ. ಇದನ್ನೇ ಸಮಾಜಘಾತಕ್ಕೆ ಎಡೆಮಾಡುವ ಪ್ರಲೋಭನಾ ಮಾಧ್ಯಮ ಅಂತ ಹಣೆಪಟ್ಟಿ ಅಂಟಿಸುವಂತಹ ಸಂಪ್ರದಾಯಸ್ಥರ ಗುಂಪುಗಳೂ ಎಲ್ಲೆಲ್ಲೂ ಇಲ್ಲದಿಲ್ಲ ಎಂದೂ ಅಲ್ಲ – ಅದು ಬೇರೆ ವಿಚಾರ ಬಿಡಿ.
ಮೈಸೂರಿನ ಪ್ರಭಾ ಥಿಯೇಟರಿನಲ್ಲಿ ಆಗ ಪ್ರತಿ ದಿನ ಹಳೆಯ ಹಿಂದಿ ಅಥವ ಬೇರೆ ಯಾವುದಾದರೂ ಭಾಷೆಯ ಚಿತ್ರಗಳನ್ನು ಬೆಳಗಿನ ಆಟವಾಗಿ (morning show) ಪ್ರದರ್ಶನ ಮಾಡುತ್ತಿದ್ದರು. ಹಾಗೆಯೇ ಆಗ ಆಂಗ್ಲ ಭಾಷೆಯ ಚಿತ್ರಗಳಿಗೇ ಮೀಸಲಾಗಿದ್ದ ಗಣೇಶ ಎಂಬ ಥಿಯೇಟರ್ ಇತ್ತು; (ಎಪ್ಪತ್ತು ಎಂಎಂನ ದೊಡ್ಡ ಪರದೆಯ ಮೇಲೆ ಬೆನ್ ಹರ್, ಟೆನ್ ಕಮಾಂಡ್ ಮಂಟ್ಸ್, ಲಾರೆನ್ಸ್ ಆಫ್ ಅರೇಬಿಯ ಮುಂತಾದ ಶ್ರೇಷ್ಠ ಕ್ಲಾಸಿಕ್ ಸಿನಿಮಾಗಳನ್ನು ನೋಡುವುದೇ ವಿಶಿಷ್ಟ ಅನುಭವ) – ಬೆಂಗಳೂರಿನ ಅಂದಿನ ಭಾರತ್ ಥಿಯೇಟರ್ ಕನ್ನಡ ಚಿತ್ರಗಳಿಗೆ ಮಾತ್ರ ಮೀಸಲಿಟ್ಟಿದ್ದ ಹಾಗೆ. ದುರಂತ ಎಂದರೆ ಈಗ ಆ ಎರಡೂ ಚಿತ್ರಮಂದಿರಗಳೂ ಇಲ್ಲ!
ಹಾಗೆ ಬೆಳಗಿನ ಆಟ ಅಂತ ನಾನು ನೋಡಿದ್ದು ಸತ್ಯಜಿತ್ ರೇ ಅವರ “ನಾಯಕ್”. ಅದು ಭಾರತದಲ್ಲಿ ಬಿಡುಗಡೆ ಆದದ್ದು 1966 ರಲ್ಲಿ. ಅದನ್ನೇ ಅಮೇರಿಕದಲ್ಲಿ ಒಂದು ದಶಕದ ನಂತರ,1974 ರಲ್ಲಿ “ನಾಯಕ್ – ದ ಹೀರೋ” ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಆ ಸಿನಿಮಾ ಇಂಗ್ಮರ್ ಬರ್ಗ್ಮನ್ ಅವರ “ವೈಲ್ಡ್ ಸ್ಟ್ರಾ ಬೆರೀಸ್” ನಿಂದ ಪ್ರೇರೇಪಿತವಾದದ್ದಂತೆ. ಮುಖ್ಯ ಭೂಮಿಕೆಯಲ್ಲಿ ಅಂದಿನ ಬೆಂಗಾಲಿ ಸಿನಿಮಾದ ಸೂಪರ್ ಸ್ಟಾರ್ ಆಗಿದ್ದ ಉತ್ತಮ್ ಕುಮಾರ್ (ಅವರು ಛೋಟೀಸಿ ಮುಲಾಕಾತ್, ಅಮಾನುಷ್ ಮುಂತಾದ ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ) ಮತ್ತು ಶರ್ಮಿಳಾ ಟ್ಯಾಗೂರ್ ಅವರು. ಕತೆ, ಚಿತ್ರಕತೆ, ಸಂಗೀತ ಮತ್ತು ನಿರ್ದೇಶನ ಸತ್ಯಜಿತ್ ರೇ ಅವರದ್ದು.ಆ ಸಿನಿಮಾದ ಕಥಾನಾಯಕ, ಅರಿಂದಮ್ ಮುಖರ್ಜಿ, ಬಂಗಾಳದ ಪ್ರಸಿದ್ಧ ನಟ. ಆತ ಕೋಲ್ಕೊತ್ತಾಯಿಂದ ನವದೆಹಲಿಗೆ, ತನಗೆ ಘೋಷಿಸಲಾಗಿದ್ದ ಪ್ರತಿಷ್ಠಿತ ಪ್ರಶಸ್ತಿ ಸ್ವೀಕಾರಕ್ಕಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಾನೆ. ಆಗ ಭೋಜನದ ಬೋಗಿಯಲ್ಲಿ ಅದಿತಿ ಸೇನ್ಗುಪ್ತ (ಶರ್ಮಿಳಾ ಟ್ಯಾಗೂರ್) ಎಂಬ ಯುವ ಪತ್ರಕರ್ತೆಯನ್ನು ಸಂಧಿಸುತ್ತಾನೆ. ಅವಳು ‘ಆಧುನಿಕ’ ಎಂಬ ಮಹಿಳಾಪ್ರಧಾನ ನಿಯತಕಾಲಿಕೆಯ ಸಂಪಾದಕಿ. ಅಹಂಕಾರ ತುಂಬಿದ ಅರಿಂದಮ್ ಮುಖರ್ಜಿಯಂತಹವರ ಮೇಲೆ ಅವಳಿಗೆ ತಿರಸ್ಕಾರ ತುಂಬ. ಆದರೂ ಅವನ ಅರಿವಿಗೆ ಬಾರದ ಹಾಗೆ ಅವನನ್ನು ಸಂದರ್ಶಿಸಲು, ಹಾಗೆ ಮಾಡಿ ಅವನ ನಿಜ ಸ್ವರೂಪವನ್ನು ಜನಕ್ಕೆ ತೋರಿಸುವ ಹಂಬಲದಿಂದ ಆರಂಭಿಸುತ್ತಾಳೆ. ಆಗ ಆತ ತನ್ನ ವ್ಯಕ್ತಿತ್ವದ ಬಗ್ಗೆ, ತನ್ನ ಅಭದ್ರತೆಯ ಬಗ್ಗೆ ಹಾಗೂ ತನಗಿರುವ ಮಿತಶಕ್ತಿ ಮುಂತಾಗಿ ಇದ್ದಕ್ಕಿದ್ದಂತೆ ತೆರೆದುಕೊಳ್ಳುತ್ತಾ ಹೋಗುತ್ತಾನೆ. ಅದರಿಂದ ಅದಿತಿಗೆ ಅವನ ಮೇಲೆ ಸಹಾನುಭೂತಿ ಮೂಡುತ್ತದೆ. ಅವನ ತಪ್ಪಿತಸ್ಥ ಮನೋಭಾವ ಉಕ್ಕಿ, ತನ್ನ ಮಾರ್ಗದರ್ಶಕ ಗುರು ಶಂಕರ್-ಡಾ ಸಿನಿಮಾ ಸೇರದ ಹಾಗೆ ತಾಕೀತು ಮಾಡಿದ್ದು ಮುಂತಾಗಿ ಹೇಳಿಕೊಳ್ಳುತ್ತಾನೆ. ಅಷ್ಟು ಪ್ರಸಿದ್ಧಿ ಮತ್ತು ಯಶಸ್ಸಿನ ಉತ್ತುಂಗಕ್ಕೆ ಏರಿದ್ದೂ, ಅರಿಂದಮ್ ತನ್ನೊಳಗೆ ಒಬ್ಬಂಟಿ ಎಂಬುದು ಅರಿವಾಗಿ, ಅದಿತಿ ತಾನು ಬರೆದುಕೊಂಡಿದ್ದ ಸಂದರ್ಶನ ಟಿಪ್ಪಣಿಯನ್ನು ಹರಿದು ಎಳೆಯುತ್ತಾಳೆ. ಆತನ ಪ್ರಸಿದ್ಧಿಯ ಮೇಲೆ ಮಸಿ ಬಳಿಯಲು ಇಷ್ಟ ಆಗದೆ!
ಇಷ್ಟೇ ಆಗಿದ್ದರೆ ಆ ಸಿನಿಮಾದ ಬಗ್ಗೆ ಬರೆಯುವ ವಿಶೇಷತೆ ಇರುತ್ತಿರಲಿಲ್ಲ. ರೈಲಿನ ಪ್ರಯಾಣದ ನಿದ್ದೆಯಲ್ಲಿ ನಾಯಕನಿಗೆ ಒಂದು ಕನಸು ಬೀಳುತ್ತದೆ. ಆ ಗಾಢ ಕನಸು ನನಗೆ ಈಗಲೂ ಜ್ಞಾಪಕ ಇದೆ; ಅಲ್ಪಸ್ವಲ್ಪ; ಆದರೂ ಚನ್ನಾಗಿ ವಿವರಿಸುವಷ್ಟು.
ಯಾರಿಗೇ ಆಗಲಿ, ಅಂತಹ ವೃತ್ತಿಯಲ್ಲಿ ಪ್ರಸಿದ್ಧಿಯ ಜೊತೆಜೊತೆ ಯಥೇಚ್ಛ ಹಣ ಮತ್ತು ಬಿಡುವು ಇಲ್ಲದ ಬದುಕು ಒಟ್ಟಿಗೇ ಬರುವುದು ಸಹಜ. ಅಂತಹ ಪ್ರಸಿದ್ಧಿಯ ಉತ್ತುಂಗದಲ್ಲಿದ್ದ ಆ ನಾಯಕ ಇದ್ದಕ್ಕಿದ್ದಂತೆ ಸಣ್ಣ ಪುಟ್ಟ ಗುಡ್ಡಗಳ ಬರಡುಭೂಮಿಯಲ್ಲಿ ನಡೆಯುವಾಗ, ದಿಢೀರಂತ ಎಲ್ಲ ದಿಕ್ಕಿನಿಂದಲೂ ನೋಟುಗಳು ಹಾರಿ ಅವನ ಸುತ್ತ ಬೀಳತೊಡಗುತ್ತವೆ! ಅದನ್ನು ಕಂಡ ಅರಿಂದಮ್ ಮುಖರ್ಜಿಯು ಆನಂದದಿಂದ ಅವುಗಳನ್ನು ಒಂದೊಂದಾಗಿ ಆಯ್ದುಕೊಳ್ಳಲು ಆರಂಭಿಸುತ್ತಾನೆ. ಕ್ರಮೇಣ ಸುರಿವ ನೋಟುಗಳ ವೇಗ ಹೆಚ್ಚಾಗುತ್ತಾ ಹೋದಂತೆ ಅವನಿಗೆ ಆ ವೇಗದಲ್ಲಿ ಆಯಲೂ ಆಗದೆ ಒಟ್ಟೊಟ್ಟಿಗೆ ಬಾಚಿಕೊಳ್ಳಲು ತೊಡಗುತ್ತಾನೆ. ಆದರೆ ಅದು ಅಸಾಧ್ಯವಾಗುವ ಹಾಗೆ, ಆ ರಭಸದಲ್ಲಿ, ನೋಟುಗಳ ಆಯುವಿಕೆ ಅಥವ ಬಾಚುವಿಕೆ ಕೂಡ ಕಷ್ಟ ಆಗುತ್ತಿದ್ದಂತೆ, ಟ್ರಿನ್ ಟ್ರಿನ್ ಸದ್ದು ಕೇಳುತ್ತದೆ. ಅದು ಟೆಲಿಫೋನ್. ಬಂದ ದಿಕ್ಕಿನಲ್ಲಿ ಒಂದು ಕೈ ಆಕಾರದ, ಬೆರಳುಗಳು ಅಗಲವಾಗಿ, ಟೆಲಿಫೋನು ತನ್ನೊಳಗೆ ಇರುವಂತಹ ಗಿಡದ ಹಾಗೆ ನಿಂತಿದೆ. ಆ ಬೆರಳುಗಳು ಬರಿ ಮೂಳೆಗಳಿದ್ದಂತೆ! ನೋಟುಗಳನ್ನು ಹಿಡಿಯುವ ಕೆಲಸ ಬಿಟ್ಟು ದೂರವಾಣಿಯ ಕಡೆ ಧಾವಿಸುತ್ತಾನೆ. ಆ ರಿಸೀವರನ್ನು ಕೈಗೆ ತೆಗೆದುಕೊಳ್ಳುವ ಹೊತ್ತಿಗೆ ಮತ್ತೊಂದು ಕಡೆಯಿಂದ ಟ್ರಿನ್ ಟ್ರಿನ್ ಸದ್ದು ಅದಕ್ಕೂ ಕೈ ಚಾಚುತ್ತಾನೆ. ಆಗ ಇನ್ನೊಂದು, ಮತ್ತೊಂದು…ಹೀಗೆ ಎಲ್ಲೆಲ್ಲೂ ಗಿಡಗಳ ಮೇಲಿನ ಟ್ರಿನ್ ಟ್ರಿನ್ ಹುಚ್ಚೆಬ್ಬಿಸುವ ಸದ್ದುಗಳ ಜೊತೆಜೊತೆಗೇ ಯಥೇಚ್ಛ ಮಳೆಯಾಗುತ್ತಿರುವ ನೋಟುಗಳ ರಾಶಿರಾಶಿ! ಸುತ್ತಲೂ ಗಡಚಿಕ್ಕುವ ಸದ್ದಿನ ಆರ್ಭಟ, ಮತ್ತು ಎಲ್ಲ ದಿಕ್ಕಿನಲ್ಲೂ ಒಂದೇ ಸಮ ಸುರಿವ ನೋಟಿನ ನಡುವೆಯಿಂದ ಹೊರಬರಲಾರದ ನಾಯಕನ, ಹೊರಬರುವ ಯಥೇಚ್ಛ ಪ್ರಯತ್ನ. ಎಷ್ಟು ಪ್ರಯಾಸ ಪಟ್ಟರೂ ಆಗದಿದ್ದಾಗ, ಇದ್ದಕ್ಕಿದ್ದ ಹಾಗೆ, ಸದ್ಯ ಬದುಕಿಲ್ಲದ ತನ್ನ ಮಾರ್ಗದರ್ಶಕ ಗುರುವಿನ ಪ್ರತ್ಯಕ್ಷ ಆಗುತ್ತದೆ. ಅವರು ನೀಡುವ ಕೈ ಹಿಡಿಯಲು ತನ್ನನ್ನು ನುಂಗುತ್ತಿದ್ದ ಹಣದ ರಾಶಿಯ ಮಧ್ಯದಿಂದ, ನಾಯಕ ತನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತಾನೆ. ಗುರು ಶಂಕರ್-ಡಾ ಸಹ ಇವನ ಹತ್ತಿರ ಹತ್ತಿರ ಬರಲು ಯತ್ನಿಸುತ್ತಾರೆ. ನಾಯಕ ಹೆಣಗಿ ಹೆಣಗಿ ಇನ್ನೇನು ನೋಟಿನ ರಾಶಿ ಅವನನ್ನು ಆ ಭಯಂಕರ ಟ್ರಿನ್ ಟ್ರಿನ್ ಸದ್ದಿನೊಡನೆ ನುಂಗಿತು…ಅನ್ನುವ ದೃಶ್ಯವು ದಢಕ್ಕನೆ ಪ್ರೇಕ್ಷಕರನ್ನು, ರೈಲಿನ ಬರ್ತಿನಲ್ಲಿ ಹೆದರಿ ಬೆವೆತು ಎದ್ದೇಳುವ ನಾಯಕನತ್ತ ಹೊರಳುತ್ತದೆ! ಈ ಮಧ್ಯೆ, ನಾಯಕನ ಮಾನಸಿಕ ಪ್ರಕ್ಷುಬ್ಧತೆ ಹಾಗೂ ಆಗುಹೋಗುಗಳ ಯಥೇಚ್ಛ ಜಂಜಡ ಮುಂತಾದ ದಡದಡಿಸುವಿಕೆಯನ್ನು ರೈಲಿನ ಹಳಿಗಳ ಓಟ, ಅವು ಹತ್ತಿರವಾದ ಹಾಗೆ ಮತ್ತೆ ದೂರದೂರ ಆಗುವಿಕೆ, ಹೀಗೆ ಸಾಂಕೇತಿಕವಾಗಿ ಚಿತ್ರದಲ್ಲಿ ಬಿಂಬಿಸುವುದೂ ಸಹ ಅನನ್ಯ.
ಆ ದೃಶ್ಯಕಾವ್ಯದಂತಹ ಸಿನಿಮಾ ನೋಡಿ ನನಗನಿಸಿದ್ದು ಹೀಗೆ:
ಒಟ್ಟಿನಲ್ಲಿ ಒಬ್ಬ ವ್ಯಕ್ತಿ ಎಷ್ಟೇ ‘ಅಮರ’ ಸಾಧಕ ಆಗಿದ್ದರೂ, ಎಷ್ಟೇ ಶ್ರೀಮಂತ ಆಗಿದ್ದರೂ, ಎಂಥೆಂಥ ಬಿರುದು ಪಡೆದಿದ್ದರೂ, ಆತನ ಸುತ್ತ ಹೊಗಳುವ ಸೈನ್ಯವೇ ಇದ್ದರೂ, ಕೆಲಕಾಲವಾದರೂ ಒಬ್ಬಂಟಿತನದ ಬೆಂಬಿಡದ ಭೂತದ ತುತ್ತು ಆತ! ಬಹುಷಃ! ಈಗಿನ ಜಗತ್ತಿನ ಪ್ರಕ್ಷೋಭ
ಸ್ಥಿತಿ ಇಂತಹ ಅನೇಕ ನಿಷ್ಠುರ ‘ಸತ್ಯ’ಗಳತ್ತ ಕೈ ತೋರಿಸುತ್ತಿಲ್ಲವೇ?
*************************************
ಡಾ. ಅರಕಲಗೂಡು ನೀಲಕಂಠ ಮೂರ್ತಿ.
ನಿಮ್ಮ ಬರಹಗಳನ್ನು ಒಮ್ಮೆ ಓದಿದರೆ ಸಾಲದು. ಆಗಾಗ ಓದಿದರೆ ಹೊಸ ಹೊಸ ಒಳಹು, ಹೊಳೆಯುತ್ತವೆ. ಚಿಂತನೆಗೆ, ಸ್ವವಿಮರ್ಷೆಗೆ ಹಚ್ಚುತ್ತವೆ. Nice write up uncle
ಲೇಖನ ಚೆನ್ನಾಗಿದೆ. ಅಭಿನಂದನೆಗಳು ನೀಲಣ್ಣ
ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ, ಧನ್ಯವಾದಗಳು ಮಾವ