ಲೇಖನ
ಬೆಂಗಾಡಾದ ಬದುಕಿನ ಕೊರಡು
ಮತ್ತೆ ಕೊನರುತ್ತೆ
ಜಯಶ್ರೀ.ಜೆ. ಅಬ್ಬಿಗೇರಿ
ನಾನು ಇಂಥ ದೇಶದಲ್ಲಿಯೇ ಹುಟ್ಟಬೇಕು. ಇಂಥವರ ಹೊಟ್ಟೆಯಲ್ಲಿ ಹುಟ್ಟಬೇಕೇಂದು ಕೇಳಿ ಜನಿಸಲು ಸಾಧ್ಯವಿಲ್ಲ. ಹಾಗೆ ಒಂದು ವೇಳೆ ಏನಾದರೂ ಅವಕಾಶ ಇದ್ದಿದ್ದರೆ ಎಲ್ಲರೂ ಬಾಯಿಯಲ್ಲಿ ಬಂಗಾರದ ಚಮಚವಿಟ್ಟುಕೊಂಡು ಶ್ರೀಮಂತರ ಮನೆಯಲ್ಲೇ ಹುಟ್ಟಬೇಕೆಂದು ದೇವರಿಗೆ ದುಂಬಾಲು ಬೀಳುತ್ತಿದ್ದರು. ಇನ್ನು ಮರಣವಂತೂ ಯಾವಾಗ ಹೇಗೆ ಬರುತ್ತದೆ ಅಂತ ಗೊತ್ತೇ ಇಲ್ಲ. ಆದರೆ ಅದು ನಿಶ್ಚಿತ. ಜೀವನದ ಆರಂಭ ಮತ್ತು ಅಂತ್ಯ ನಮ್ಮ ಕೈಯಲ್ಲಿಲ್ಲ. ಏನು ತಿಪ್ಪರಲಾಗ ಹಾಕಿದರೂ ಅದರಲ್ಲಿ ಬದಲಾವಣೆ ಮಾಡುವುದು ಅಶಕ್ಯ. ಆದರೆ ಆದಿ ಮತ್ತು ಅಂತ್ಯದ ಮಧ್ಯೆ ಇರುವ ನಾಲ್ಕು ದಿನಗಳ ಬದುಕು ಇಲ್ಲವೇ ಮೂರು ದಿನದ ಸಂತೆ ಅಂತ ಕರೆಯಲ್ಪಡುವ ಜೀವನ ಮಾತ್ರ ನಮ್ಮ ಕೈಯಲ್ಲಿದೆ. ಬದುಕು ಎಲ್ಲರಿಗೂ ಒಂದೇ ತೆರನಾಗಿಲ್ಲ. ಒಬ್ಬರಿಂದ ಒಬ್ಬರಿಗೆ ಪೂರ್ತಿ ಭಿನ್ನ ವಿಭಿನ್ನ. ಹಾಗೆಂದ ಮಾತ್ರಕ್ಕೆ ನಾನು ಹೇಳುತ್ತಿರುವುದು ಬಡತನ-ಶ್ರೀಮಂತಿಕೆ ಜಾಣ-ದಡ್ಡ ಎನ್ನುವ ವ್ಯತ್ಯಾಸದ ಬಗ್ಗೆ ಅಲ್ಲ. ಜೀವನದೆಡೆ ನೋಡುವ ದೃಷ್ಟಿಕೋನ ಹಾಗೂ ನಮ್ಮ ಆಲೋಚನಾ ರೀತಿಯ ಬಗ್ಗೆ ಹೇಳುತ್ತಿದ್ದೇನೆ. ‘ದೃಷ್ಟಿಯಂತೆ ಸೃಷ್ಟಿ.’ ಎಂಬ ಮಾತಿನಂತೆ ಬದುಕನ್ನು ನಾವು ನೋಡುವ ಬಗೆಯಂತೆ ಅದು ನಮಗೆ ಕಾಣುತ್ತದೆ. ಹೀಗಾಗಿಯೇ ಒಬ್ಬರ ಬದುಕಿಗೂ ಇನ್ನೊಬ್ಬರ ಬದುಕಿಗೂ ಅಜಗಜಾಂತರವೆನಿಸುವಷ್ಟು ವ್ಯತ್ಯಾಸ ಕಂಡು ಬರುತ್ತದೆ. ಎಷ್ಟೋ ಸಲ ಹುಟ್ಟಿನ ಮೂಲ ಮುಖ್ಯ ಎನ್ನಿಸುವುದೇ ಇಲ್ಲ. ಸೂತಪುತ್ರನೆನಿಸಿದ ಕರ್ಣ ದಾನಶೂರನಾದ. ಬೆಳದಿದ್ದು ಬೆಳಗಿದ್ದು ಹುಟ್ಟಿನ ಮೂಲವನ್ನು ಗೌಣವಾಗಿಸಿಬಿಡುತ್ತದೆ. ಬದುಕಿನೆಡೆಗೆ ನಾವು ನೋಡುವ ಬಗೆ ಹೇಗಿದೆಯೆಂದು ಒಮ್ಮೆ ದೃಷ್ಟಿ ಹಾಯಿಸೋಣ ಬನ್ನಿ.
ಬದುಕಿನಲ್ಲಿ ಮುಂದೇನಾಗುತ್ತದೆ ಅಂತ ತಿಳಿದುಕೊಳ್ಳುವುದು ಹೇಗೆ ಅಂತ ಗೊತ್ತಿಲ್ಲ. ಕತ್ತಲಲ್ಲಿ ಕುಳಿತು ತಪಸ್ಸು ಮಾಡಿದರೂ ತಿಳಿಯದ ಸಂಗತಿ. ಕಷ್ಟಗಳು ಹಿಂಬದಿಯಿಂದ ಅನಿರೀಕ್ಷಿತವಾಗಿ ಹೇಳದೇ ಕೇಳದೇ ನುಗ್ಗಿ ಬಿಡುತ್ತವೆ. ಇಂಥ ಸಂಕಷ್ಟದಲ್ಲಿ ಮನದಲ್ಲಿ ನೋವು ಜಿನುಗುತ್ತಿದ್ದರೂ ಮುಖ ಅರಳಿಸಿಕೊಂಡು ಅಡ್ಡಾಡುವವರನ್ನು ನೋಡಿ ಹೆಮ್ಮೆ ಅಭಿಮಾನ ಪುಟಿದೇಳುತ್ತದೆ. ಒಮ್ಮೊಮ್ಮೆ ಎಂದೆಂದೂ ಊಹಿಸಿರದ ಗೆಳೆಯ/ತಿಯ ಅಗಲಿಕೆ ಅಸಹನೆಯಿಂದ ಬೇಯಿಸುತ್ತದೆ. ಒಟ್ಟಿಗೆ ಆಡಿ ಬೆಳದವರು ಎಷ್ಟೇ ದೂರ ಆಗಿದ್ದರೂ ಒಳಗೊಳಗೆ ಕರುಳ ಬಳ್ಳಿ ಪಾಶ ಇದ್ದೇ ಇರುತ್ತದೆ. ಬೇರೆಯವರ ಮುಂದೆ ಹೇಳುವಾಗ ಗಂಟಲು ಬಿಗಿಯುತ್ತದೆ ಕಣ್ಣು ಹನಿಯುತ್ತದೆ. ಹೀಗೆ ಸಮಸ್ಯೆಗಳು ಒಂದರ ಹಿಂದೆ ಒಂದು ಕೂತಲ್ಲೆ ಸಣ್ಣಗೆ ಕೀಟಲೆ ತೆಗೆಯುತ್ತಿದ್ದರೆ ಏನು ಮಾಡುವುದು ತಿಳಿಯದೆ ಇರಿಸು ಮುರಿಸು ಉಂಟಾಗಿ ನಿದ್ದೆ ಹತ್ತಿರ ಸುಳಿಯುವುದಿಲ್ಲ. ಎಲ್ಲಕ್ಕೂ ಮೂಲ ಕಾರಣ ಮನಸ್ಸು ಎಂದೆನಿಸುತ್ತದೆ ಆದರೂ ಹೊರಗಿನ ಸನ್ನಿವೇಶ ಮನಸ್ಸಿನ ಕೈಯಲ್ಲಿಲ್ಲ. ಹಾಗಿದ್ದÀರೂ ಮನಸ್ಸಿನ ಮೇಲೆ ಆರೋಪ ಮಾಡಬೇಕೆಂಬುದು ಮನಸ್ಸಿನಲ್ಲಿ ಸುಳಿದು ಹೋಗುತ್ತದೆ. ಏನೇ ಹೇಳಿ ಮನಸ್ಸು ಒಳಗಿರುವುದನ್ನು ಈಚೆಗೆ ಎಳೆಯಲು ಹವಣಿಸುತ್ತಿರುತ್ತದೆ ಎಂಬುದಂತೂ ಸತ್ಯ. ಇಂತಹ ವಿಷಯಗಳಲ್ಲಿ ಬುದ್ಧಿಗೆ ಸಾರಥ್ಯ ನೀಡಿದರೆ ಒಳಿತು.
ಉಳ್ಳವರು ಇಲ್ಲದವರು
ಉಳ್ಳವರು ನೂರೆಕರೆ ಹೊಲ ಗದ್ದೆಗಳಿದ್ದರೂ ಒಂದು ಕಾಳು ಹೊರ ಹೋಗಲು ಬಿಡದ ಸರ್ಪದಂತೆ ಕಾವಲು ಕಾಯುತ್ತಾರೆ. ಬಾಳಿ ಬದುಕಲು ಏನೂ ಕಡಿಮೆ ಇರದಿದ್ದರೂ ಸಣ್ಣ ಪುಟ್ಟದ್ದಕ್ಕೆ ಆಸೆ ಪಡುತ್ತಾರೆ. ಅಗತ್ಯವಿದ್ದವರಿಗೆ ನೀಡಲು ಬೇಸರಪಟ್ಟುಕೊಳ್ಳುತ್ತಾರೆ. ಒಂಚೂರು ಹೆಚ್ಚು ಕಮ್ಮಿ ಆದರೂ ಸಹಿಸಿಕೊಳ್ಳಲ್ಲ. ತಿರುಗಾಮುರುಗಾ ಒಂದೇ ಮಾತನ್ನು ಹತ್ತು ಸಲ ಹೇಳುತ್ತಾರೆ. ಒಂದು ವೇಳೆ ಅದೇ ಮಾತೆತ್ತಿದರೆ ಆಗದು ಅಂತ ಖಡಾಖಂಡಿತವಾಗಿ ನಿರಾಕರಿಸಿ ಬಿಡುತ್ತಾರೆ. ಇದಕ್ಕೆ ತದ್ವಿರುದ್ಧವೆಂಬಂತೆ ಇಲ್ಲದವರು ಬಡತನದಿಂದ ಮೇಲೆದ್ದು ಬಂದು ಬದುಕು ಕಟ್ಟಿಕೊಳ್ಳುವವರು ಸಮಷ್ಟಿಗೆ ಮಾದರಿ. ಬಡತನದ ನೆನವರಿಕೆ ಅಂದರೆ ಅದೊಂದು ಮನಸ್ಸನ್ನು ಆದ್ರ್ರಗೊಳಿಸಿ ಭಾವುಕರನ್ನಾಗಿಸುವ ನೆನಪುಗಳ ಸರಮಾಲೆ. ಕಷ್ಟಗಳ ಸರಮಾಲೆ ಬಂದರೂ ಮುಂದೊಂದು ದಿನ ಸುಖದ ನದಿ ಹರಿಯುತ್ತದೆಂಬ ಅಮೋಘ ವಿಶ್ವಾಸದಿಂದಿರುತ್ತಾರೆ. ನಿಕೃಷ್ಟ ಸಂಗತಿಗಳು ಸಹ ಮನದ ಭಿತ್ತಿಯಲ್ಲಿ ಮಧುರ ನೆನಪುಗಳಾಗಿ ಉಳಿದುಕೊಂಡಿರುತ್ತವೆ. ಹೀಗಾಗಿ ಬಡತನದಲ್ಲೂ ಸಂತಸ ಸಂಭ್ರಮ ತುಂಬಿ ತುಳುಕಾಡುತ್ತದೆ. ದುಃಖಕರ ಘಟನೆಗಳು ದೀರ್ಘ ಕಾಲದವರೆಗೆ ತನ್ನ ಛಾಯೆಯನ್ನು ಉಳಿಸುತ್ತವೆ.ಶೋಕ ಸಾಗರದಲ್ಲಿ ಮುಳುಗಿಸುತ್ತವೆ. ಅಂಥ ಸಮಯದಲ್ಲಿ ದುಃಖ ನುಂಗಿ ಮೌನವಾಗಿರುವುದೊಂದೇ ದಾರಿ. ರಾತ್ರಿ ಆದಮೇಲೆ ಹಗಲು ಬರುತ್ತದೆ ಅದಕ್ಕಾಗಿ ಕಾಯಬೇಕು ಎಂಬುದು ಜ್ಞಾನಿಗಳ ಉವಾಚ.
ಕೌಶಲ್ಯಗಳ ಕಲಿಕೆ
ವ್ಯವಹಾರ ಕುಶಲತೆ ಕಲಿಯದಿದ್ದರೂ ಚೆನ್ನಾಗಿ ಹರಟುವ ಕೆಲವರಿಗೆ ವಿದ್ಯೆ ನೈವೇದ್ಯವೇ. ಇಂಥವರು ಊರೆಲ್ಲ ಓಡಾಡಿಕೊಂಡು ಭೂಷಣಪ್ರಾಯರಂತೆ ಇರುತ್ತಾರೆ. ಮಾತು ಬಾರದವರು ಯಾರೋ ಆತ್ಮೀಯರು ಕಿವಿಯಲ್ಲಿ ಊದಿದ್ದನ್ನು ಕೆಲಸವಾಗಬೇಕಾದವರ ಮುಂದೆ ಬಾಯಿ ಬಿಡುವ ಸಂದರ್ಭ ಬಂದಾಗ ತಲೆ ಬಾಗಿಸಿಕೊಂಡು ಉಸಿರು ಹಿಡಿದುಕೊಂಡು ತುಸು ತಡಬಡಾಯಿಸುತ್ತಾರೆ. ನಂತರ ಮುಖ ಬಾಡಿಸಿಕೊಂಡು ಮನೆಗೆ ವಾಪಸ್ಸಾಗುತ್ತಾರೆ. ತಮ್ಮ ಅವಮಾನವನ್ನು ಹತಾಶೆಯನ್ನು ಮನೆಯವರ ಎದುರು ಕಾರಿಕೊಳ್ಳುತ್ತಾರೆ. ತಮ್ಮ ಹೊಣೆಗೇಡಿತನಕ್ಕೆ ಕೋಪೋದ್ರಕ್ತರಾಗಿ ಕೂಗಾಡುವುದು ಹೆಚ್ಚಾಗುತ್ತದೆ. ಇವರ ಎದುರಿಗಿದ್ದವರು ಗಾಯಕ್ಕೆ ಮುಲಾಮು ಸವರುವಂತೆ ಮಾತನಾಡುವುದರಲ್ಲಿ ನಿಸ್ಸೀಮರಾಗಿದ್ದರೆ ಒಳಿತು. ಇಲ್ಲದಿದ್ದರೆ ಮುದುಡಿ ಮೂಲೆಯಲ್ಲಿ ಕುಳಿತುಕೊಳ್ಳುವುದೊಂದೇ ಬಾಕಿ. ಒಟ್ಟಿನಲ್ಲಿ ಇಂಥವರಿಗೆ ಕಷ್ಟಪಟ್ಟು ಮೈಬಗ್ಗಿಸಿ ದುಡಿಯುವುದು ಸಾಧ್ಯವಾಗದ ಮಾತು. ಬದುಕಿಗೆ ಅಗತ್ಯವಿರುವ ಕೌಶಲ್ಯಗಳನ್ನು ಕಲಿಯಲೇಬೇಕು. ಮತ್ತು ದುಡಿಯಲು ತಯಾರಾಗಬೇಕು.
ತಿರುವುಗಳು
ಸಂಪ್ರದಾಯಗಳನ್ನು ಪಾಲಿಸುತ್ತ ಮಡಿ ಹುಡಿ ಮಾಡುತ್ತ ಬದುಕನ್ನು ಬಂದಂತೆ ಸ್ವೀಕರಿಸಿಕೊಂಡು ಹೋಗುತ್ತಿದ್ದರೂ ಪಕ್ಕದವರ ನಡೆ ನುಡಿ ಹೀಯಾಳಿಕೆಗಳು ಅಸಹನೀಯವೆನಿಸುತ್ತವೆ. ಜನರು ತಮಗೆ ಬೇಕಾದಾಗೊಂದು ಬೇಡವಾದಾಗೊಂದು ತರ ಇರುತ್ತಾರೆ. ಹೀಗೇಕೆ ಬದಲಾಗುತ್ತಾರೆ? ಬಾಹ್ಯ ರೂಪ ಬದಲಾಗುವುದು ಸ್ವಾಭಾವಿಕ ವಯೋಸಹಜ. ಆದರೆ ಅಂತರಂಗ ಯಾಕೆ ಬದಲಾಗಬೇಕು? ಎಂಬುದು ಯಕ್ಷ ಪ್ರಶ್ನೆಯಂತೆ ಕಾಡುತ್ತದೆ. ಈ ಕೊರಗು ಕಟ್ಟಿಗೆ ಹುಳದಂತೆ ಒಳಗೊಳಗೆ ಕೊರೆಯುತ್ತದೆ. ಇದ್ದಕ್ಕಿದ್ದಂತೆ ಬದುಕಿನ ದಾರಿಯಲ್ಲಿ ತಿರುವು ಬಂದರೆ ಹೆದರದೇ ಆ ತಿರುವಿಗೆ ತಿರುವಿನಂತೆಯೇ ತಿರುವಿಕೊಂಡರೆ ಸಾಗುವ ಮುಂದಿನ ದಾರಿ ನೇರವಾಗುತ್ತದೆ. ಮನದಲ್ಲಿ ಮಣೆ ಹಾಕಿ ನನಸಾಗಿಸಲು ಕಾಯುತ್ತಿರುವ ಕನಸು ಕಂಗೊಳಿಸುತ್ತದೆ. ಒಂದು ವೇಳೆ ತಿರುವಿನಲ್ಲಿ ತಿರುಗಿಕೊಳ್ಳುವ ಜಾಣತನ ತೋರದೇ ಹೋದರೆ ಬದುಕು ಇದ್ದಲ್ಲೇ ಇರುತ್ತದೆ. ತಿರಿಗುಣಿಯಂತೆ ಅಲ್ಲೇ ತಿರುಗಿಸುತ್ತಿರುತ್ತದೆ. ಇದಿಷ್ಟು ಸಾಲದೆಂಬಂತೆ ನಾನು ಮುಂದೆ ಹೋಗುತ್ತಿದ್ದೇನೆಂಬ ಭ್ರಮೆಯನ್ನು ಹುಟ್ಟು ಹಾಕುತ್ತದೆ. ಭ್ರಮೆಯಲ್ಲಿ ಬದುಕುವಂತೆ ಮಾಡಿ ಕೊನೆಗೊಂದು ದಿನ ಕೊನೆಯುಸಿರು ಎಳೆಯುವಂತೆ ಮಾಡುತ್ತದೆ. ಹೀಗಾಗಿ ಬದುಕಿನ ತಿರುವುಗಳಲ್ಲಿ ಬುದ್ಧಿವಂತಿಕೆಯಿಂದ ವರ್ತಿಸುವುದು ಬುದ್ಧಿವಂತರ ಲಕ್ಷಣ. ಒಟ್ಟಿನಲ್ಲಿ ಬದುಕನ್ನು ನಮ್ಮ ನಮ್ಮ ಮನೋಸ್ಥಿತಿಗೆ, ಸ್ವಾರ್ಥಕ್ಕೆ, ಅನುಕೂಲಕ್ಕೆ ತಕ್ಕಂತೆ, ಬದಲಾಗುವ ಸಂದರ್ಭಗಳ ಸ್ವರೂಪ ನೋಡಿ ಅಚ್ಚರಿಯಾಗದಿರದು ಅಲ್ಲವೇ?
ಕೊನೆ ಹನಿ
ಜೀವನದಿ ಶಾಂತವಾಗಿ ಹರಿಯುತ್ತಿದೆಯೆಂದು ನಾವಂದುಕೊಳ್ಳುವಾಗ ದೊಡ್ಡ ಸುಳಿ ಬಂದು ದೋಣಿ ಅಲ್ಲಾಡಿಸಿ ಬಿಡುತ್ತದೆ. ಬದುಕಿನ ಬಂಡಿ ನಿರಾಳವಾಗಿ ಸಾಗುತ್ತದೆ ಎನ್ನುತ್ತಿರುವಾಗಲೇ ವಿಧಿಗೆ ಅದನ್ನು ಸಹಿಸಲಾಗುವುದಿಲ್ಲ.ಅಂಥ ಪರಿಸ್ಥಿತಿಯಲ್ಲಿ ಇಕ್ಕಳದಲ್ಲಿ ಸಿಕ್ಕಂತೆ ಒದ್ದಾಡುವಂತಾಗುತ್ತದೆ. ಹುಟ್ಟುವಾಗ ಅಳು ಕೊನೆಯುಸಿರು ಎಳೆದಾಗಲೂ ಅಳು. ಹುಟ್ಟು ಸಾವಿನ ನಡುವಿರುವ ಬದುಕಿನಲ್ಲಿ ನಗು ಮಾಯವಾದರೆ ಬರಿ ಅಳುವೇ ಖಾಯಂ ಆದಂತೆ ಅಲ್ಲವೇ? ಉಸಿರು ಇರುವವರೆಗೆ ಮಾತ್ರ ಬದುಕು. ಅದು ನಿಂತರೆ ಜೀವನವೆಂಬ ಪುಸ್ತಕದ ಕೊನೆಯ ಪುಟ. ಮತ್ತೆ ತೆರೆಯಲಾಗದು. ಇತ್ತೀಚಿನ ವೇಗದ ದಿನಗಳಲ್ಲಿ ಜೀವನ ಬೀದಿಗೆ ಬಿದ್ದಂತ ವಸ್ತು ಆಗಿದೆ. ಸುರಕ್ಷಿತವಾಗಿ ಬೆಚ್ಚನೆಯ ಗೂಡಿನಲ್ಲಿ ಇರುತ್ತೇವೆ ಅನ್ನುವ ಹಾಗಿಲ್ಲ. ಬದುಕು ಯಾವಾಗ ಎಲ್ಲಿ ಕೊಚ್ಚಿಕೊಂಡು ಹೋಗುತ್ತೋ ಗೊತ್ತಿಲ್ಲ. ಎಲ್ಲವೂ ಅನಿಶ್ಚಿತ. ನಮ್ಮ ಹಿರಿಯರು ಪೂರ್ವಜರು ಬಂಗಾರದಂತಹ ಸಂತೃಪ್ತ ಬದುಕನ್ನು ಬದುಕಿದರು. ಬಾಹ್ಯ ಜಗತ್ತಿನಲ್ಲಿ ಅತಿ ಹೆಚ್ಚಿನ ಸಾಧನೆಗೈದ ನಾವು ಅಂತರಂಗದಲ್ಲಿ ಸೊರಗುತ್ತಿದ್ದೇವೆ ಕೊರಗುತ್ತಿದ್ದೇವೆ. ಹೊರಗಿನ ದೊಂಬರಾಟವನ್ನೇ ನಿಜ ಜೀವನವೆಂಬ ಭ್ರಮೆಯ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದೇವೆ. ಆ ಭ್ರಮೆಯಿಂದ ಹೊರಬಂದು ಅಂತರಂಗದ ಸಿರಿಯ ಸಾಧನೆಗೆ ಬೆನ್ನು ಹತ್ತಿದರೆ ಬೆಂಗಾಡಾದ ಬದುಕಿನ ಕೊರಡು ಮತ್ತೆ ಕೊನರುತ್ತೆ. ಎಲ್ಲೆಲ್ಲೂ ಸಂತಸದ ಚಿಲುಮೆ ಚಿಮ್ಮುತ್ತೆ.
**************