ಗಜಲ್
ಎ . ಹೇಮಗಂಗಾ
ಯಾವ ಘಳಿಗೆಯಲ್ಲಾದರೂ ಕಚ್ಚಬಹುದು ಹೆಡೆ ಬಿಚ್ಚಿದ ಹಾವು
ಯಾವ ಕ್ಷಣಕ್ಕಾದರೂ ಹದ್ದಿನಂತೆ ಬಂದೆರಗಬಹುದು ಸಾವು
ನಿರ್ಭಯದಿ ಉಸಿರಾಡುವ ದಿನಗಳು ಸೇರಿಹೋಗಿವೆ ಭೂತಕ್ಕೆ
ಕಾಲನ ತುಳಿತಕೆ ಸತ್ತವನೂ ಅರಸಲೇಬೇಕಿದೆ ಮಸಣದಿ ತಾವು
ರಕ್ಕಸ ವೈರಾಣು ಬಲಿಪಡೆಯುತ್ತಿದೆ ಲಕ್ಷ , ಕೋಟಿ ಜೀವಿಗಳ
ಕಿಂಚಿತ್ತೂ ದಯೆಯಿಲ್ಲದ ವಿಧಿಯಾಟಕೆ ಮಣಿಯಲೇಬೇಕಿದೆ ನಾವು
ಉಳ್ಳವರು ನಿರ್ಗತಿಕರು ಎಲ್ಲರೊಂದೇ ಅಂತಕನ ಕರೆಯೆದುರು
ನಿಲ್ಲದ ಚಿತೆಗಳ ಸಾಲು ತಂದೊಡ್ಡುತ್ತಲೇ ಇದೆ ಆರದ ಕಾವು
ಅತಂತ್ರ ಬದುಕು ಎಂದು ಮುಗಿವುದೋ ತಿಳಿಯದು ಹೇಮ
ಭರಿಸಲೇಬೇಕು ನೀನೂ ಎಲ್ಲರಂತೆ ಅಸಹಾಯಕತೆಯ ನೋವು
****************