ಬದರ್ ಪುಸ್ತಕದ ವಿಶ್ಲೇಷಣೆ

ಪುಸ್ತಕ ಸಂಗಾತಿ

ಬದರ್ ಪುಸ್ತಕದ ವಿಶ್ಲೇಷಣೆ

ಮಹಾಮಾನವತೆಗೆ ಬೆಳಕಿನ ಕನ್ನಡಿ

ವಚನಗಳಂತಿರುವ ಅಬಾಬಿಗಳ ತಿರುಳು ಸಮಾಜ ಮುಖಿ ಚಿಂತನೆಗಳು. ಹೊತ್ತಿ ಉರಿಯುತ್ತಿರುವ ದ್ವೇಷದ ಧರ್ಮದ ಜ್ವಾಲೆಗಳಿಗೆ ಸಾಂತ್ವನಿಸುವ ಶಕ್ತಿ ಇರುವುದು ಪ್ರಖರ ನುಡಿಗಳಿಗೆ ಮಾತ್ರವೇ. ಹೀಗಾಗಿ ಆಯಾ ಕಾಲ, ಸಂದರ್ಭ ಮತ್ತು ಪರಿಸರಗಳಿಗೆ ಅನುಗುಣವಾಗಿ ಧರ್ಮ ಗ್ಲಾನಿಯಾದಾಗ ಸಮಾಜ ಮತ್ತು ಮನುಷ್ಯನನ್ನು ಸರಿ ದಾರಿಗೆ ತರುವ ಮಹತ್ಕಾರ್ಯ ಮಾಡಿದ ಮಹಾ ಸಂತರ ಅಮೃತವಾಣಿಗಳೇ ಇಂದಿಗೂ ಜಗತ್ತನ್ನು ಆಳುತ್ತಿವೆ. ವ್ಯಕ್ತಿಯೊಬ್ಬನ ಆಂತರಂಗಿಕ ಜಿಜ್ಞಾಸೆ ಸಾಮುದಾಯಿಕ ಶಾಂತಿ ಬಯಸುವುದೇ ಆದರೆ ಅದೊಂದು ಸಮಷ್ಟಿ ಪ್ರಜ್ಞೆಯ ಪ್ರತೀಕ. ಈ ನಿಟ್ಟಿನಲ್ಲಿ ತೆಲುಗಿನ ಕವಿ ಷೇಕ್ ಕರೀಮುಲ್ಲಾ ಅವರು ರಚಿಸಿರುವ ವಿಶಿಷ್ಟವಾದ ಪಂಚಪದಿಗಳಾದ ಅಬಾಬಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಧನಪಾಲ ನಾಗರಾಜಪ್ಪನವರು ಸತ್ವಯುತ, ವೈಚಾರಿಕ ಚಿಂತನೆಗಳಿಗೆ ನೆಲೆ ನೀಡಿದ್ದಾರೆ. 

ಬದರ್ ಎನ್ನುವುದು ಒಂದು ಯುದ್ಧಭೂಮಿ. ಅಬಾಬಿಗಳು ಎಂದರೆ ಧರ್ಮದ ಜಯಕ್ಕಾಗಿ ಹೋರಾಡಿದ ಪಕ್ಷಿಗಳ ಸಮೂಹ. ಅಧರ್ಮ, ಅನ್ಯಾಯ, ಅನೀತಿಗಳೊಂದಿಗೆ ಮುಖಾಮುಖಿ ಆಗಲೇಬೇಕಾದ ಸಂದಿಗ್ಧತೆಯಲ್ಲಿ ದುರುಳರೊಂದಿಗೆ ಹೋರಾಡಲು ಬೇಕಾಗಿರುವುದು ದೈವ ಪ್ರೇರಕ ಶಕ್ತಿ. ಹೀಗಾಗಿ ಅಬಾಬಿಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುತ್ತವೆ.  ಅಂದು ದೈವದ ಪಕ್ಷಿಗಳು ಧರ್ಮ ಉಳಿಸಿದರೆ ಇಂದು ದೈವದ ನುಡಿಗಳು ಧರ್ಮ ರಕ್ಷಿಸುತ್ತಿವೆ ಎಂಬುವುದಕ್ಕೆ ಈ ಅಬಾಬಿಗಳೇ ಸಾಕ್ಷಿ. ಸಾತ್ವಿಕ ತಳಹದಿಯ ಸಾತ್ವಿಕ ಸಮಾಜ ನಿಮಾರ್ಣದ ಮಹತ್ತರವಾದ ಆಲೋಚನೆಗಳನ್ನು ಒಳಗೊಂಡ ಒಟ್ಟು ನೂರು ಅಬಾಬಿಗಳು ಇಲ್ಲಿ ಮಹಾಮಾನವತಾವಾದದ ಸಿದ್ಧಾಂತಗಳಂತೆ ನಿರೂಪಿಸಲ್ಪಟ್ಟಿವೆ. 

ಆತ್ಮಾನುಸಂಧಾನದ ಮೂಲಕ ಸಮಾಜವನ್ನು ತಿದ್ದುವ ಹಂಬಲ ಹೊತ್ತುನಿಂತ ಈ ಪ್ರಸ್ತುತ ಅಬಾಬಿಗಳು ವಿಶ್ವ ಮಾನವತೆಗೆ ಕರೆ ನೀಡುವ ಶಕ್ತಿಯುತ ವಾಣಿಗಳಾಗಿವೆ. ಸಜ್ಜನ, ಸಚ್ಚಾರಿತ್ರ್ಯವಂತ ವ್ಯಕ್ತಿಯೊಬ್ಬನನ್ನು ಆವರಿಸಿಕೊಳ್ಳಬಹುದಾದ ಮನಃಶ್ಶಾಂತಿಯತ್ತ ಕೊಂಡೊಯ್ಯಬಹುದಾದ ತಾಕತ್ತು ಈ ಅಬಾಬಿಗಳಲ್ಲಿದೆ. ಜಾಗತಿಕ ಸಂತರ ಮಹೋನ್ನತವಾದ ತತ್ವಾದರ್ಶಗಳನ್ನು ಪ್ರತಿನಿಧಿಸುವ ಅಬಾಬಿಗಳಲ್ಲಿನ ಅಭಿವ್ಯಕ್ತಿಗಳು ನಿಜಕ್ಕೂ ಮಾನವೀಯತೆಯ ಉಕ್ತಿಗಳಾಗಿವೆ. ಇಂತಹ ಬಹು ಮಹತ್ವವಾದ ಅಬಾಬಿಗಳನ್ನು ತೆಲುಗಿನಿಂದ ಅತ್ಯಂತ ಸಮರ್ಥವಾಗಿ ಅನುವಾದಿಸಿ ಕನ್ನಡಕ್ಕೆ ವಿಶಿಷ್ಟವಾದ ಕೊಡುಗೆ ನೀಡುತ್ತಿರುವ ಧನಪಾಲರವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಒಬ್ಬ ಕವಿಯ ಅಂತರಾಳದ ಜಿಜ್ಞಾಸೆಗಳು ಕೇವಲ ಆಯಾ ಭಾಷಿಕ ನೆಲೆಗಳಲ್ಲಿ ಮಾತ್ರ ಉಳಿದುಕೊಳ್ಳುವುದರಿಂದ ಸಾರ್ವತ್ರಿಕ ಸಿದ್ಧಾಂತಗಳು ಆಸಕ್ತರನ್ನು ತಲುಪವಲ್ಲಿ ಸೋಲುತ್ತವೆ. ಇಂತಹ ಕೊರತೆಯನ್ನು ತುಂಬಬಲ್ಲಂತಹ ಶಕ್ತಿ ಇರುವುದು ಅನುವಾದಕ್ಕೆ ಮಾತ್ರವೇ ಎಂಬುವುದನ್ನು ಅರಿತಿರುವ ಧನಪಾಲರವರ ನಿರಂತರವಾದ ಪ್ರಯತ್ನ ಸಾಹಸವೇ ಸರಿ.

  ಬದರ್ ಕೃತಿಯ ಮೂಲ ಆಶಯವೇ ಮಹಾಮಾನವತೆ. ಪ್ರಸ್ತುತ ಕೃತಿಯ ಒಳಗೆ ಅಡಗಿದ ಧರ್ಮಸಾರವನ್ನು ಮತೀಯ ನೆಲೆಗಟ್ಟಿನಲ್ಲಿ ಅರ್ಥೈಸಿಕೊಳ್ಳುವುದಕ್ಕಿಂತ ವಿಶ್ವಮಾನವತೆ ಮತ್ತು ಸೌಹಾರ್ದತೆಯ ಚಿಂತನೆಗಳಾಗಿ ಸ್ವೀಕರಿಸಬೇಕಿದೆ. ಬದರ್ ಕೃತಿಯ ಮೂಲಕ ಅಬಾಬಿಗಳು ನಮ್ಮ ಮನದಾಳದ ಮತೀಯ ಮೌಢ್ಯ, ವರ್ಗ ಸಂಘರ್ಷಗಳ ಬೇರುಗಳನ್ನು ಕಿತ್ತು ಹಾಕಿ ಮಾನವೀಯತೆಯ ತಳಪಾಯದಲ್ಲಿ ನಿಲ್ಲುವ ಮನೋಜ್ಞ ನುಡಿಗಳಾಗಿವೆ. ಸೃಜನಶೀಲ ಸಾಹಿತ್ಯದ ಭಾಗವಾಗಿ ಪರಿಗಣಿಸಲ್ಪಡುವ ಅಬಾಬಿಗಳು ಅಂತಃಕರಣ, ಶಾಂತಿ ಮತ್ತು ಸೌಹಾರ್ದತೆಯ ಮೈಲಿಗಲ್ಲುಗಳಾಗಿವೆ. ಆತ್ಮನೀರಿಕ್ಷಣೆ ಮಾದರಿಯ ಆತ್ಮಾವಲೋಕನ ಮತ್ತು ಆತ್ಮಾನುಸಂಧಾನದ ಮಾದರಿಗಳಾದ ಅಬಾಬಿಗಳು ಹೊಸ ಚೈತನ್ಯಶೀಲ ಬದುಕಿಗೆ ದಾರಿದೀಪಗಳಾಗಿವೆ.  ಆತ್ಮೋನ್ನತಿಗೆ ಮತ್ತು ಆತ್ಮಗೌರವದ ಉತ್ಕರ್ಷಕ್ಕೆ ಹುರಿಗೊಳಿಸುವ ಮಾನವೀಯ ಜಿಜ್ಞಾಸೆಗಳಿಂದ ಆವೃತ್ತವಾದ ಅಬಾಬಿಗಳು ಸಾರ್ವಕಾಲಿಕ ಮೌಲ್ಯಗಳನ್ನು ಗರ್ಭಿಕರಿಸಿಕೊಂಡಿವೆ. ನೆಲದ ಗುಣ, ಮಾನವ ಜೀವನದ ಪರಮೋನ್ನತಿ ಅಂತೆಯೇ. ವಿಭಿನ್ನ ಕಾವ್ಯ ಶೈಲಿಯಲ್ಲಿ ಹೊರಹೊಮ್ಮಿದ ಪ್ರಸ್ತುತ ಅಬಾಬಿಗಳು ಧರ್ಮ ರಾಜಕಾರಣದಿಂದ ಹೊರಬರುವ ಮೂಲಕ ವಿಶ್ವಮಾನವ ಸಂದೇಶಗಳನ್ನು ಹೊತ್ತು ನಿಂತಿವೆ. ವಿಶ್ವಪಥದ ಸಾರ್ವಕಾಲಿಕ ಮೌಲ್ಯವೇ ಮಾನವೀಯತೆ. ಹೀಗಾಗಿ ಮನೋಗ್ಲಾನಿಯಿಂದ ಹೊರಬರಲು ಕರೆ ನೀಡುವ ಅಬಾಬಿಗಳಿಗೆ ತನಿ ಬೆಲೆಯಿದೆ.

ಜಿಹಾದ್ ಅಂದರೆ 

ಜಿಂದಗಿಯನ್ನು ಚಿವುಟುವುದೆಂದು ಯಾರು ಹೇಳಿದ್ದು

ಸಸಿಗೆ ನೀರು ಉಣಿಸುವುದು ಕೂಡಾ ಜಿಹಾದೇ 

ಕರೀಮ್

ಉಗ್ರವಾದದ ಮತಿ ಕೆಟ್ಟಿದೆ ನೋಡು.

(17ನೇ ಅಬಾಬಿ)  ಮತೀಯವಾದಗಳು ಕೆಂಡದಲ್ಲಿ ಕೊದಲು ತೊಳೆದುಕೊಂಡಂತೆ. ಧರ್ಮಯುದ್ಧ ಎನ್ನುವುದು ಅಮಾನವೀಯ ನೆಲೆಯ ರಕ್ತಪಾತ. ಇದು ಕೇವಲ ಮನೆಯನ್ನು ಸುಡುವ ಕಿಚ್ಚು. ಬದುಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಅಂತೆಯೇ ನೆಟ್ಟ ಸಸಿಗೆ ನೀರೆರೆದು ಹಸಿರು ಹೊನ್ನನ್ನು ಜೀವಂತಗೊಳಿಸುವುದು ಪ್ರಕೃತಿ ಪ್ರೇಮದ ಧರ್ಮ ಯುದ್ಧವಾಗಿದೆ. 

ಕನಸುಗಳೆಲ್ಲಾ ಹಳೆಯವೇ 

ಹುಟ್ಟೇ ಹೊಸದು ಬೇಕು

ಹೇತುವನ್ನೆಂದೂ ಹೀನಗೊಳಿಸಬೇಡ 

ಕರೀಮ್

ಸೃಜನ ಶಾಯಿ ಅಂತಹದ್ದು.

(19ನೇ ಅಬಾಬಿ)  ಕವಿಯ ಆರ್ತಧ್ವನಿ ಇಲ್ಲಿ ಹೃದಯ ವಿದ್ರಾವಕತೆಯಿಂದ ಮರುಗಿದೆ. ಕವಿಯ ಅಭಿವ್ಯಕ್ತಿಯ ಜೀವಂತಿಕೆ ಇರುವುದೇ ಸೃಜನಶೀಲತೆಯಲ್ಲಿ. ಇದುವೇ ಜೀವನ್ಮುಖಿ ತತ್ವವು ಕೂಡಾ ಆಗಿದೆ. ಕವಿಯ ಕಾವ್ಯ ಪ್ರವಾಹದಿಂದ ಅಧರ್ಮದ ಕೊಳೆಗಳು ಕೊಚ್ಚಿಹೋಗಬೇಕು. ಲೋಕದ ಮೂಲ ಆಶಯವು ವಿಶ್ವಪ್ರೇಮದ ಮೂಲಕ ಭ್ರಾತೃತ್ವವನ್ನು ಹುರಿಗೊಳಿಸುವುದು. ಹೀಗಾಗಿ ಈಗ ಹೊಸ ರೀತಿಯ ಚಿಂತನೆಗಳಿಗೆ ಆದ್ಯತೆ ನೀಡಬೇಕಾಗಿದೆ. 

ಅರ್ಧರಾತ್ರಿಯಲ್ಲಿ ಒಂಟಿಯಾಗಿ 

ಫುಟ್ಪಾತ್ನಲ್ಲಿ ಫಕೀರನೊಬ್ಬ ತಿರುಗಾಡುತ್ತಿದ್ದಾನೆ 

ಅವನೇನು ಕಳೆದುಕೊಂಡಿದ್ದಾನೋ ತಿಳಿಯದೆ 

ಕರೀಮ್

ಅದು ನಿನ್ನ ನೆರಳೇನಾ?

(26ನೇ ಅಬಾಬಿ) ಬಂಜರು ಭೂಮಿಯಲ್ಲಿ ಬೆಳೆ ಅಸಾಧ್ಯ. ಬುದ್ಧ, ಬಸವ, ಗಾಂಧಿ, ಪೈಗಂಬರ್, ಅಂಬೇಡ್ಕರ್, ಲೋಹಿಯಾ, ಜ್ಯೋತಿಬಾ ಫುಲೆ, ಸ್ವಾಮಿ ವಿವೇಕಾನಂದರು ಮಾನವ ಚರಿತ್ರೆಯುದ್ದಕ್ಕೂ ಮಾನವೀಯತೆಗೆ ಕರುಳ ಸ್ಪರ್ಶ ನೀಡಿದ್ದಾರೆ. ಸಮಾಜಕ್ಕೆ ಅಂಟಿದ ರೋಗಗಳನ್ನು ತಮ್ಮ ಪ್ರಖರ ವಾಣಿಗಳಿಂದ ಗುಣಮುಖವಾಗಿಸಿದ್ದಾರೆ. ಜಗತ್ತನ್ನು ಬದಲಿಸಬಲ್ಲ ಶಕ್ತಿ ಆಧ್ಯಾತ್ಮಿಕ ಚಿಂತನಗಳಲ್ಲಿದೆ. ಲೋಕದ ಪರಿಭ್ರಮಣೆಯ ನಿತ್ಯತಸ್ಯವೇ ಪರಿವರ್ತನೆ. ಹೀಗಾಗಿ ದಾರ್ಶನಿಕರ ಪ್ರತಿಬಿಂಬಗಳು ಕಾಲಕಾಲಕ್ಕೆ ಕೊಳೆ ತೊಳೆಯಲಿವೆ.

ಭಯೋತ್ಪಾದನೆ ಒಂದು ಭೂತ 

ಖಂಡ ಖಂಡಾಂತರಗಳ ಪ್ರಶ್ನೆ 

ಶವಗಳು ಬದುಕುತ್ತಿವೆ

ಕರೀಮ್

ಯಾಕೋ ಮನುಷ್ಯರೇ ಮರಣಿಸುತ್ತಿದ್ದಾರೆ!

(30ನೇ ಅಬಾಬಿ)  ಅರೆ ಪ್ರಜ್ಞೆಯ ಮನಃಸ್ಥಿತಿಯ ಅರೆಬುದ್ಧಿಯ ಮನೋಮಾಲಿನ್ಯ, ಮನೋವೈಕಲ್ಯದ ಮೈಲಿಗೆ ಹೊಂದಿದ ಜಾಲೆಜ್ವಾಲೆಗೆ ಸಿಲುಕಿದ ಯಾರೂ ಬದುಕಿಲ್ಲ. ಸಾಮಾಜಿಕ ಜೀವನದಲ್ಲಿ ಜಾತಿ, ಮತದ ಜಿಜ್ಞಾಸೆಗಳು ಅಡ್ಡಗೋಡೆಯ ಮೇಲಿನ ದೀಪಗಳಾಗಬಾರದು.

ಬದರ್ನ ಸುತ್ತಲೂ 

ಭಾರವಾಗಿ ಕಾಲ ಸುತ್ತುತಿಹುದು 

ವಿಶ್ವಾಸ ವಿಲಯವನ್ನು ಎದುರಿಸಬಲ್ಲದು 

ಕರೀಮ್

ಮುಂದಿದೆ ಹುಣ್ಣಿಮೆಯ ಬೆಳದಿಂಗಳು.

(33ನೇ ಅಬಾಬಿ)  ಆಕಾಶದ ಎದೆಯ ತುಂಬೆಲ್ಲಾ ಹೆಪ್ಪುಗಟ್ಟಿ ಉಪ್ಪುಗಟ್ಟಿದ ಮೋಡಗಳು ಆವರಿಸಿವೆ. ಮನುಷ್ಯ-ಮುಷ್ಯರ ನಡುವಿನ ಸ್ನೇಹ ಗಟ್ಟಿಗೊಳ್ಳಬೇಕು. ಬೆಳಕು ಅನೂಚಾನವಾಗಿ ಹರಡಬೇಕು. ಯುದ್ಧ ಮತ್ತು ಶಾಂತಿ ಇವೆರಡೂ ಲೋಕದ ಸತ್ಯಗಳು. ಯುದ್ಧದ ನಂತರ ಸೋಲು-ಗೆಲುವು ಮುಖ್ಯವಲ್ಲ; ಪರಿವರ್ತನೆ ಬಹುಮುಖ್ಯ. ರಾಜ ಅಶೋಕನಂತೆ, ದೊರೆ ಅಲೆಕ್ಸಾಂಡರ್ನಂತೆ ಸತ್ಯದ ನೆಲೆಗಳು ಲೋಕವನ್ನು ಆವರಿಸಿಕೊಳ್ಳಬೇಕು. ತನ್ಮೂಲಕ ಜ್ಞಾನದ ಬೆಳಕು ಚಂದಿರನ ಬೆಳದಿಂಗಳಂತೆ ತಂಪಾದ ಕಿರಣ ಸೂಸಿ ಮಹಾಮಾನವತೆಯ ದೀಪ ಬೆಳಗಬೇಕು. 

ನನ್ನ ಮಸೀದಿಯಲ್ಲಿ 

ನಿನ್ನ ದೇವರು ಹುಟ್ಟಿದ್ದಾನೆ ಎಂದೆ 

ಮಸೀದಿ ಏನು ಕರ್ಮ ಮನಸ್ಸನ್ನೇ ಬರೆದುಕೋ

ಕರೀಮ್

ಭೂಗೋಳವೆಲ್ಲಾ ನಿನ್ನ ಮಸೀದಿಯೇ ಅಂತ ಹೇಳು.

 (35ನೇ ಅಬಾಬಿ)  ಮೆದುಳಿಗೆ ಅಂಟಿದ ಮುಳ್ಳುಗಳು ಯಾವಾಗಲೂ ವಿಷಬೀಜಗಳನ್ನು ಬಿತ್ತುತ್ತಲೇ ಇರುತ್ತವೆ. ಧರ್ಮ, ದೇವರುಗಳ ಹೆಸರಿನಲ್ಲಿ ನಡೆಯುವ ಕುಕೃತ್ಯಗಳಿಗೆ ಈ ನೆಲ ನಡುಗಿದೆ. ಬಯಲು, ಬಾಂದಳಗಳೆಲ್ಲಾ ದೇವನ ಮನೆ. ರಾಮ ರಹೀಮರೀರ್ವರು ಈ ಜಗದ ರಕ್ಷಕರು. ಜೀವ ಕೋಟೆಯ ಆರಾಧನೆಗೆ ಸತ್ಚಿಂತನೆಯ ಭಾವ ಮುಖ್ಯವೇ ಹೊರೆತು ಸಂಘರ್ಷವಲ್ಲ.

ವೀರನೆಂದರೆ ಯಾರು

ನಾಳೆಗಾಗಿ ಇಂದನ್ನು ತ್ಯಜಿಸಿದವನು 

ತರುವಿನಂತಾಗಿ ತಪಸ್ವಿಯಂತೆ ನಿಂತವನು 

ಕರೀಮ್

ಆಕಾಶದ ಮುಡಿಯಲ್ಲಿ ಹೊಸ ತಾರೆಯ ನೋಡು.

(45ನೇ ಅಬಾಬಿ)  ಸತ್ಯ ಸಮತೆಯ ಪಥಕೆ ಯಾವ ದೇವನು ಇಹನು? ಸತ್ಯ ಸಮತೆಯ ದಾಟಿ ಧರ್ಮವಿಹುದೆ? ಪ್ರೀತಿ ವಿಶ್ವಾಸಗಳ ಮೀಟಿ ಕರೆಯುವ ಹೃದಯ ದೇವಮಂದಿರಕ್ಕಿಂತ ಕಡಿಮೆಯಾಗುವುದೆ? ತ್ಯಾಗದಲ್ಲಿ ಅಮೃತವಿದೆ. ನಿರ್ಮಲ ಚಿತ್ತದ ಬೇಡಿಕೆಗೆ ಎಂದೂ ಕೆಡುಕಿಲ್ಲ. ಧನ್ಯತೆಯೇ ವೀರತ್ವ.

ಆಗ್ರಹಕ್ಕೂ ಮಿಗಿಲಾದ  ವಿಗ್ರಹ ಇದೆಯೆನಿಗ್ರಹಕ್ಕೂ ಮೇಲಾದ ಸನ್ಮಾರ್ಗ ಇದೆಯೆಕರೀಮ್

ಪ್ರವಾದಿಯ ವಚನ ನಿನಗೇನು ಕಲಿಸಿತು?

(51ನೇ ಅಬಾಬಿ)  ಮನುಷ್ಯತ್ವದ ಶುದ್ಧೀಕರಣ ಬಹುಮುಖ್ಯ. ಆತ್ಮವಿಶ್ವಾಸ ತೀರಾ ಹದಗೆಟ್ಟರೆ ಮನುಕುಲ ಖಂಡಿತವಾಗಿಯೂ ನಾಶವಾಗುವುದರಲ್ಲಿ ಸಂದೇಹವೇ ಇಲ್ಲ. ಪರಸ್ಪರ ತಿಳುವಳಿಕೆಯ ಮಾನವೀಯ ಅಂತಃಕರಣದ ಪ್ರಾಯೋಗಿಕ ಬದುಕನ್ನೇ ಅಲ್ಲವೆ ಪ್ರವಾದಿಗಳು ಬೇಧಿಸಿದ್ದು. ಅವರ ಅರಿವಿನ ದೀವಿಗೆ ಸದಾ ಬೆಳಗಲಿ. ಗರ್ವ, ಅಹಂಕಾರದಿಂದ ವ್ಯಕ್ತಿ ಮತ್ತು ವ್ಯಕ್ತಿತ್ವದ ನಾಶ ಖಂಡಿತ. 

ಮತದ ಬಗ್ಗೆ ಹೇಳಬೇಡ 

ಮಾನವನ ವಿಳಾಸವಲ್ಲಿ ಸಿಗುವುದಿಲ್ಲ 

ವಿಶ್ವಾಸಿ ವಿಶ್ವಪ್ರೇಮಿ 

ಕರೀಮ್

ಬೀಸುವ ಗಾಳಿಗೆ ಬಂಧವಿದೆಯೆ?

(71ನೇ ಅಬಾಬಿ)  ಈ ಸಾಮಾಜಿಕ ವ್ಯವಸ್ಥೆ ದೇಶ, ಭಾಷೆ, ಪ್ರಕೃತಿ ಇವೆಲ್ಲಾ ಹಲವಾರು ಅರಿವಿನೊಳಗೆ ಇಳಿದು ದಕ್ಕಿದ ಭಾವನೆಗಳು. ಜಾತಿಯ ಜೀವತಂತುಗಳು ಮಾನವೀಯತೆಗೆ ಮಿಡಿಯುವ ರಾಗಗಳಾಗಬೇಕು. ಮತೀಯ ಹುಚ್ಚು ನಾವೇ ಬಿತ್ತಿಕೊಂಡ ಮೆತ್ತನೆಯ ಮುಳ್ಳುಗಳು. ವಿಶ್ವಪ್ರೇಮ ಇಂದಿನ ಆದ್ಯತೆ. 

ಜಹೆಜ್ (ವರದಕ್ಷಿಣೆ)ಗಾಗಿ,

ಜನ್ನತ್ (ಸ್ವರ್ಗ) ಅನ್ನು ಕಳೆದುಕೊಂಡನೊಬ್ಬ 

ಮಂಡಿಯೂರಿ ಎಷ್ಟು ಪ್ರಾರ್ಥಿಸಿದರೇನು

ಕರೀಮ್

ಕೂಳಿನಲ್ಲೇ ಕಾಲವನ್ನು ಹುಡುಕುತ್ತಿರುವಂತಿದೆಯಲ್ಲಾ!

(74ನೇ ಅಬಾಬಿ)  ನೈಜ ಬದುಕಿನ ಹುಡುಕಾಟ ಈ ಅಬಾಬಿಯಲ್ಲಿದೆ. ಪ್ರಪಂಚದ ನೋವನ್ನು ತನಗಾದ ನೋವಿನಂತೆ ಕವಿಹೃದಯವಿಲ್ಲಿ ಮರುಗಿದೆ. ಸಿಹಿ ಚಿಗುರಿನ ಬದುಕು, ಬದುಕಿನ ಉಪಕ್ರಮವೆಂದರೆ ಸರಳತೆ. ಮನರಂಜನೆ ಮತ್ತು ಆಸ್ತಿ, ಅಂತಸ್ತುಗಳ ಗಳಿಕೆಯಲ್ಲಿ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳುವ ಮೂಲಕ ವ್ಯರ್ಥ ಕಾಲಹರಣ ಮಾಡುವ ಮೃಗೀಯತೆಯನ್ನು ಈ ಅಬಾಬಿಯಲ್ಲಿ ಖಂಡಿಸಲಾಗಿದೆ. 

ಆಕೆಗೆ 

ಮೊಳಕೆ ನಾಟುವುದಷ್ಟೇ ಗೊತ್ತು 

ಫಸಲು ಕೊಡುವ ಹೊಲದಂತೆ 

ಕರೀಮ್

ಮಡದಿಗೂ ಮಿಗಿಲಾದ ಮಮತೆಯಿಲ್ಲ.

(85ನೇ ಅಬಾಬಿ)  ಈ ಲೋಕದ ನಿಸ್ವಾರ್ಥತೆಗೆ ಪಠ್ಯವಾಗಿರುವವಳೇ ಹೆಣ್ಣು. ಭೂಮಿಗೆ ಬಿದ್ದ ಫಲ ಕೊಡಲೇಬೇಕು. ಅಂತೆಯೇ ಈ ಲೋಕದ ಉತ್ಪಾದಕತೆಯ ಶಕ್ತಿ ಇರುವುದು ಹೆಣ್ಣಿನಲ್ಲಿ ಮಾತ್ರ. ಆದ್ದರಿಂದ ಮಡದಿಯನ್ನು, ತಾಯಿಯನ್ನು, ಹೆಣ್ಣನ್ನು ಗೌರವಿಸುವುದು ನಮ್ಮ ಸಂಸ್ಕೃತಿಯಾಗಿದೆ.

 ವಿನೂತನ ಪ್ರಯೋಗದ ಪಂಚಪದಿಗಳ ಅಬಾಬಿಗಳು ಈ ಜಗದ ಮಹಾಮಾನವತೆಗೆ ಹಿಡಿದ ಕನ್ನಡಿಗಳಾಗಿವೆ. ಓದುತ್ತ ಹೋದಂತೆ ಸಿರಿವಂತ ಪ್ರತಿಮಾ ಪದಗಳು ಎಲ್ಲರ ಎದೆಯಲ್ಲಿ ಹೆಪ್ಪು ಗಟ್ಟುತ್ತಿರುವ ಕತ್ತಲನ್ನು ಬೇಧಿಸಿದಂತೆ ಭಾಸವಾಗುತ್ತದೆ. ಅಕ್ಷರ ಗರ್ಭ ಸೀಳಿದ ಭಾವ ಬಸರಿನ ಹೆರಿಗೆಗೆ ಪದಲಾಲಿತ್ಯ, ಶಬ್ದ ಪ್ರಮಾಣಗಳ ಮೂಲಕ ಶಬ್ದಸೂತಕದ ಹಂಗು ತೊರೆದು ಅನುಭೂತಿಯ ಕುಲುಮೆಯಲ್ಲಿ ಸಾಣೆಹಿಡಿದಂತಿವೆ.  “ವಿಶ್ವಾಸ ಅಂದರೆ ಬಿಚ್ಚುಗತ್ತಿಯಲ್ಲ”, “ಈ ಮಣ್ಣಿನ ಋಣ ಮರೆಯದಿರು”, ಸೋಲು-ಗೆಲುವುಗಳ ನಡುವೆ ಸಣ್ಣ ರಹದಾರಿಯಿದೆ ನೋಡು”, “ವಿಶ್ವಾಸ ವೀರತ್ವಕ್ಕಿಂತಲೂ ದೊಡ್ಡದು”, “ಸೂರ್ಯ ತಲೆ ತಗ್ಗಿಸುವುದಿಲ್ಲ”, ಬೇಷರಂ ಆಗಿ ಬದುಕಬೇಡ”, “ಕಸ್ತೂರಿ ಕತ್ತಲಲ್ಲಿ ಇದ್ದರೇನು?, “ಅಂಗಳದಲ್ಲಿ ಮುಳ್ಳುಗಳಿವೆ ನೋಡಿ ಅಡಿಯಿಡು”, “ಸಹನೆಯಲ್ಲಿ ಸ್ವರ್ಗವಿದೆ” ಎಂಬ ಹದವರಿತ ಪದಪುಂಜಗಳು ನಮ್ಮ ಎದೆಯಲ್ಲಿ ಗೆಜ್ಜೆಕಟ್ಟಿ ತಾಳ ಹಾಕುತ್ತವೆ. ಪ್ರತಿಮಾ ಲೋಕದ ಮಹಾಪರ್ವವೇ ಇಲ್ಲಿ ಮನೋಜ್ಞ. ಓದಿದಷ್ಟು ಹಸಿವನ್ನು, ನುಂಗಿದಷ್ಟು ನಂಜನ್ನು, ಮರೆಯದಷ್ಟು ಭಾವೋದ್ವೇಗ, ಹಾಡಿದಷ್ಟು ಮೀಟುವ ಶಬ್ದ ಸಾಮರ್ಥ್ಯ ಹೊಂದಿರುವುದು ಆಪ್ಯಾಯಮಾನವಾಗಿದೆ.  ನಮ್ಮನ್ನು ಆವರಿಸಿಕೊಂಡು ಚಿತ್ತಬಿತ್ತಿಯಲ್ಲಿ ರಂಗವಲ್ಲಿ ಬಿಡಿಸಿದ ಬದರ್ ಕೃತಿಯ ಅಬಾಬಿಗಳು ನಮ್ಮ ಎದೆಯನ್ನು ಸೀಳಿ ಮಹಾಸ್ಫೋಟಗೊಳಿಸಿ ಕತ್ತಲಾವರಿಸಿ ಘನೀಕರಿಸಿ ನಿಂತ ಕಾರ್ಮೋಡಗಳಿಂದ ಬೇರ್ಪಟ್ಟು ವಿಷಮ ಘಳಿಗೆ ವಿಷದ ಗಾಳಿಯಿಂದ ದೂರಾಗಿ ವಿಶ್ವಮಾನವತೆಗೆ ಬೆಳಕಿನ ಕನ್ನಡಿಗಳಾಗಿ ಹೊರಹೊಮ್ಮಲಿ ಎಂದು ಆಶಿಸುವೆ. ಷೇಕ್ ಕರೀಮುಲ್ಲಾರವರ ಅಬಾಬಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಓದುಗರಿಗೆ ಮೌಲಿಕ ಚಿಂತನೆಗಳನ್ನು ನೀಡಿದ್ದಕ್ಕಾಗಿ ಧನಪಾಲರವರನ್ನು ಅಭಿನಂದಿಸುವೆ. 

************************ 

ಡಾ|| ಮೈತ್ರೇಯಿಣಿ ಗದಿಗೆಪ್ಪಗೌಡರ 

One thought on “ಬದರ್ ಪುಸ್ತಕದ ವಿಶ್ಲೇಷಣೆ

  1. ಸಂಗಾತಿ ತಂಡಕ್ಕೆ ಧನ್ಯವಾದಗಳು

Leave a Reply

Back To Top