ಗಜಲ್
ಸ್ಮಿತಾ ರಾಘವೇಂದ್ರ
ಯಾರೋ ಕಂಬನಿ ಮಿಡಿಯುತ್ತಿದ್ದಾರೆ ಗಮನಿಸಲಾಗುತ್ತಿಲ್ಲ
ಯಾರೋ ಬದುಕು ಮುಗಿಸಿದ್ದಾರೆ ಹೆಗಲು ಕೊಡಲಾಗುತ್ತಿಲ್ಲ.
ಮುಚ್ಚಿದ ಕಿಟಕಿಗೆ ಬಡಿದು ಸಾಯುವ ಹಕ್ಕಿಗೆ ಯಾವ ಭ್ರಮೆ
ಚಾಚಿದ ಕೈಗಳೆಲ್ಲ ಹಿಂದೆ ಸರಿಯುತ್ತಿವೆ ಸಹಿಸಲಾಗುತ್ತಿಲ್ಲ.
ಬಿಸಿಲ ಕೋಲ ಬೊಗಸೆ ತುಂಬಿಸಿ ಬೆಳಕ ಹಿಡಿದಿಡಲಾದೀತೇ
ಕಾಲವೇ ಕೋಲುಹಿಡಿದು ಬೆದರಿಸುತ್ತಿದೆ ಯಾರೂ ಬದಲಾಗುತ್ತಿಲ್ಲ
ಮೌನ ಮೆರವಣಿಗೆಯಲಿ ಅಂತರಂಗದ ನಗಾರಿ ಸದ್ದು
ವಿವಶ ಗೊಂಡ ಪ್ರಾಣ ನಿಡುಸುಯ್ಯುತಿದೆ ಸಂತೈಸಲಾಗುತ್ತಿಲ್ಲ.
ಭಾವ, ಬದುಕು, ಜೀವ,ಎಲ್ಲರಿಗೂ ಒಂದೇ ಅಲ್ಲವೇ “ಮಾಧವ”
ಮಸಣದ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತಾರೆ ಎದುರಿಸಲಾಗುತ್ತಿಲ್ಲ
**************
ತುಂಬ ಚನ್ನಾಗಿದೆ ವಂದನೆಗಳು
Super soooooooooo super
ಬಹಳ cotemporary verses
ಸಕತ್..