ಈ ಸಾವು ನ್ಯಾಯವೆ?
ಈ ಸಾವು ನ್ಯಾಯವೆ? ನಮ್ಮ ಸಾಂಸ್ಕೃತಿಕ ಲೋಕವೇ ಮಂಕಾಗುತ್ತಿದೆಯೆಲ್ಲ. ದಿನವೂ ಸಾಹಿತಿಗಳು, ಸಾಂಸ್ಕೃತಿಕ ಲೋಕದ ಮುಖ್ಯರನ್ನೆಲ್ಲ ಕಳೆದುಕೊಳ್ಳುತ್ತಿದ್ದೇವಲ್ಲ… ಇದು ಆಘಾತಕಾರಿ ಬೆಳವಣಿಗೆ. ಕವಿಯೆಂದೇ ಗುರ್ತಿಸಿಕೊಂಡ ಜರಗನಹಳ್ಳಿ ಶಿವಶಂಕರ ಅವರ ಸಾವು ಅತೀವ ದುಃಖ ತಂದಿದೆ. ಮೊನ್ನೆಯಿಂದ ಸರಣಿ ಸಾವು ನಮ್ಮನ್ನು ಆತಂಕಕ್ಕೆ ದೂಡಿದೆ. ಕನ್ನಡದ ಹನಿಗವಿತೆಗಳ ಇತಿಹಾಸಕ್ಕೆ ಒಂದು ಅರ್ಥಪೂರ್ಣ ಬುನಾದಿ ಹಾಕಿದವರು ಜರಗನಹಳ್ಳಿ. ಅವರು ಕಾವ್ಯವನ್ನೆ ಹಾಸಿ ಹೊದ್ದವರು. ಮೇಲು ನೋಟಕ್ಕೆ ಸರಳ ಅನ್ನಿಸಿದ ಪುಟ್ಟ ಕವನಗಳನ್ನು ಬರೆದರು. ಕಿರಿದುದರಲ್ಲಿ ಹಿರಿದರ್ಥ ತುಂಬಿದವರು ಅವರು. ಬದುಕಿನ ನಿಗೂಢ ಅರ್ಥ ತುಂಬುವ, ರೂಪಕದಲ್ಲಿ ಹೇಳುವ ಶಕ್ತಿ ಜರಗನಹಳ್ಳಿ ಕಾವ್ಯಕ್ಕಿತ್ತು.
ತಮ್ಮ ಶುಭಾಂಗಿ – (ಮಗಳ ಹೆಸರಲ್ಲಿ) ಪ್ರಕಾಶನ ಸಂಸ್ಥೆ ಆರಂಭಿಸಿ, ನಲವತ್ತಕ್ಕು ಹೆಚ್ಚು ಬರಿ ಕಾವ್ಯಕ್ಕೆ ಸಂಬಂಧಿಸಿದ ಕೃತಿ ತಂದಿದ್ದರು. ತಾವೆ ರಾಜ್ಯಮಟ್ಟದ ಕಾವ್ಯ ಕಮ್ಮಟ ನಡೆಸುತ್ತಿದ್ದರು. ಕಾವ್ಯದ ಬಗ್ಗೆ ಅವರಿಗೊಂದು ಬದ್ಧತೆ ಇತ್ತು. ಮೂಲತಃ ಕೆನರಾ ಬ್ಯಾಂಕ್ ಉದ್ಯೋಗಿ ಅವರು. ಅಲ್ಲಿದ್ದೆ ಸಾಹಿತ್ಯ ಕಂಪು ಹರಡಿದ ಹಿರಿಯ ಗೆಳೆಯರು. ಲಂಕೇಶ್, ಚಂಪಾ, ಶೂದ್ರ, ಎಚ್ಚೆಸ್ವಿ ಒಳಗೊಂಡಂತೆ ಹೆಸರಾಂತ ಸಾಹಿತಿಗಳ ಆಪ್ತರಾಗಿದ್ದರು. ಸರಳ, ಸಜ್ಜನ, ಸ್ನೇಹಜೀವಿ. ಅನೇಕ ಸಂಘ ಸಂಸ್ಥೆಗಳ ಒಡನಾಟವಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಂಥ ದೊಡ್ಡ ಸ್ಥಾನ ಅಲಂಕರಿಸಿದ್ದರು.
ಮೂರು ದಶಕಗಳ ಕಾವ್ಯ ಒಡನಾಟ, ಕುಟುಂಬದ ಸಖ್ಯ ಸಾಹಿತ್ಯ – ಸಾಂಸ್ಕೃತಿಕ ಚರ್ಚೆಯ ಜೊತೆ ಸಾಗಿ ಬಂದವರು ನಾವು. ಸ್ನೇಹಜೀವಿ, ಜನಪರ ಕಾಳಜಿಯ ಹಳ್ಳಿ ಸೊಗಡಿನ ಗೆಳೆಯನ ಅಗಲಿಕೆಯಿಂದ ನಾನು, ನನ್ನ ಕುಟುಂಬ ದುಃಖದಲ್ಲಿದ್ದೇವೆ.
ಕರೋನಾ ಎಂಬ ಮಹಾಮಾರಿಯ ಎರಡನೇ ಅಲೆ ಭೀಕರವಾಗಿದೆ. ನಮಗೆ ಎಲ್ಲರ ಜೀವವೂ ಮುಖ್ಯ. ದಯವಿಟ್ಟು ಎಲ್ಲರೂ ಎಚ್ಚರಿಕೆಯಿಂದಿರಿ. ಕಚೇರಿಗೆ ಹೋಗದವರು ಮನೆಯಲ್ಲೇ ಇದ್ದು ಸುರಕ್ಷಿತ ವಾತಾವರಣ ಸೃಷ್ಟಿಸಿಕೊಳ್ಳಿ. ಮನೆಯಿಂದ ಅನಿವಾರ್ಯ ಹೊರಗೆ ಹೆಜ್ಜೆ ಇಟ್ಟರೆ ಮಾಸ್ಕ್ ಧರಿಸಿಯೇ ಹೋಗಿ
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ.
ಅಗಲಿದ ಹಿರಿಯ ಗೆಳೆಯ ಜರಗನಹಳ್ಳಿ ಶಿವಶಂಕರ್ ಅವರಿಗೆ ಭಾವಪೂರ್ಣ ನಮನ.
****************************
ಆರ್ ಜಿ ಹಳ್ಳಿ ನಾಗರಾಜ
ಜರಗನಹಳ್ಳಿ ಶಿವಶಂಕರ್ ಕನ್ನಡ ಕಾವ್ಯಲೋಕ ಮರೆಯದಂತಹ ಕವಿತೆಗಳನ್ನು ಕಟ್ಟಿದರು. ತಮ್ಮದೇ ವಿಶಿಷ್ಟ ಶೈಲಿ, ವಿಶಿಷ್ಟ ರೂಪಕ ಪ್ರತಿಮೆಗಳ ಮೂಲಕ, ಚುಟುಕು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಅಫಜಲಪುರ ತಾಲೂಕು ೩ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾಡಿದ ಭಾಷಣದಲ್ಲಿ ಓದಿದ ಚುಟುಕುಗಳು ಗ್ರಾಮೀಣ ಜನರನ್ನು ಕೂಡ ಮಂತ್ರ ಮುಗ್ಧರನ್ನಾಗಿಸಿದ್ದವು.
ಅವರ ಅಗಲಿಕೆ ನೋವು ಸಹಿಸುಸುವ ಶಕ್ತಿ ಕುಟುಂಬಕ್ಕೆ ದೊರೆಯಲಿ.
ಡಿ ಎಂ ನದಾಫ್ ಅಫಜಲಪುರ