ಮೇ ದಿನದ ವಿಶೇಷ ಲೇಖನ

ವಿಶ್ವ ಕಾರ್ಮಿಕ ದಿನಾಚರಣೆ

40+ May Day Pictures, Images, Photos

ಅಮೆರಿಕದಲ್ಲಿ 1886ರ ಮೇ 1ರಂದು 13,000 ವಿವಿಧ ಕ್ಷೇತ್ರಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಮೂರುವರೆ ಲಕ್ಷ ಜನ ಕಾರ್ಮಿಕರು ಕೆಲಸಕ್ಕೆ ಹೋಗದೇ ಮುಷ್ಕರ ಹೂಡಿದರು. ಈ ಕಾರ್ಮಿಕರ ಮುಷ್ಕರವನ್ನು ಅಲ್ಲಿನ ಎಡಪಂಥೀಯ ಕಾರ್ಮಿಕ ಸಂಘಟನೆ ಸಂಘಟಿಸಿತ್ತು. ಚಿಕಾಗೊ ನಗರವೊಂದರಲ್ಲೇ 40,000 ಶ್ರಮಿಕರು ಕೆಲಸದಿಂದ ದೂರ ಉಳಿದರು.

ಮೇ ದಿನ ಅಥವಾ ವಿಶ್ವ ಕಾರ್ಮಿಕರ ದಿನಾಚರಣೆ

ದಿನಕ್ಕೆಂಟು ಗಂಟೆಗಳ ನಿಗದಿತ ಕೆಲಸಕ್ಕಾಗಿ ಆರಂಭವಾದ ಹೋರಾಟವನ್ನು ಸ್ಮರಿಸುವ ಈ ದಿನವನ್ನು ಕಾರ್ಮಿಕರು ಇಡೀ ಜಗತ್ತಿನಾದ್ಯಂತ ತಮ್ಮ ಹಕ್ಕುಗಳಿಗಾಗಿ ನಡೆಸುವ ಹೋರಾಟದ ದಿನವನ್ನಾಗಿ ಆಚರಿಸುತ್ತಾರೆ. ಈ ಆಚರಣೆಗೆ ಒಂದು ಶತಮಾನಕ್ಕೂ ಮೀರಿದ ಸುದೀರ್ಘ ಇತಿಹಾಸವಿದೆ ಎಂದರೆ ಯಾರಿಗಾದರೂ ಅಚ್ಚರಿಯಾಗಬಹುದು.

ಚಾರಿತ್ರಿಕ ಘಟನೆಯೊಂದರ ಹಿನ್ನೆಲೆಯಲ್ಲಿಯೇ ಆರಂಭವಾದ ಮೇ ದಿನಾಚರಣೆ ಹುಟ್ಟಿದ್ದು ಹೇಗೆಂದು ನೋಡೋಣ ಈಗ.–

ಅಮೆರಿಕದಲ್ಲಿ ಚಿಗುರೊಡೆದ ಕಾರ್ಮಿಕರ ಹೋರಾಟ

ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ 19ನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು. ವಿವಿಧ ಕೈಗಾರಿಕೆಗಳು ಜನರಿಗೆ ಉದ್ಯೋಗ ನೀಡಿದ್ದವಾದರೂ ಕಾರ್ಮಿಕರ ಬದುಕು ಅತ್ಯಂತ ಹೀನಾಯ ಸ್ಥಿತಿಯಲ್ಲಿತ್ತು. ಅವರು ದುಡಿಯುತ್ತಿದ್ದ ಕಾರ್ಖಾನೆಗಳಲ್ಲೂ ಸಹ ಮನುಷ್ಯರ ಜೀವನಕ್ಕೆ ಅಗತ್ಯವಾದ ಕನಿಷ್ಠ ಸವಲತ್ತುಗಳನ್ನೂ ಕಟುಕ ಮಾಲೀಕರು ಒದಗಿಸುತ್ತಿರಲಿಲ್ಲ. ಕೆಲಸಗಾರರನ್ನು ಗಾಣದೆತ್ತುಗಳಂತೆ ಅಸುರಕ್ಷಿತ ವಾತಾವರಣದಲ್ಲಿ ದುಡಿಸಿಕೊಳ್ಳಲಾಗುತ್ತಿರು. ಮಾಲೀಕರ ಲಾಭವನ್ನು ನಿಯಂತ್ರಿಸಿ ಕಾರ್ಮಿಕರಿಗೆ ಸವಲತ್ತು ನೀಡುವ ಯಾವುದೇ ಶಾಸನವೂ ಅಸ್ತಿತ್ವದಲ್ಲಿರಲಿಲ್ಲ. ದಿನದ ಇಪ್ಪತ್ತುನಾಲ್ಕು ಗಂಟೆಗಳೂ ಮಾಲೀಕನ ಕಾರ್ಖಾನೆಯಲ್ಲಿ ಗೇಯಬೇಕಿದ್ದ ಕೆಲಸಗಾರರು ವಿಶ್ರಾಂತಿಯಿಂದ ಮತ್ತು ಕೌಟುಂಬಿಕ ಜೀವನದಿಂದ ವಂಚಿತರಾಗಿದ್ದರು. ಈ ರೀತಿ ಕಾರ್ಮಿಕರು ಹರಿಸಿದ ಬೆವರು ಮಾಲೀಕರ ಖಜಾನೆಯನ್ನು ತುಂಬಲು ಕಾರಣವಾಗಿತ್ತು ಮತ್ತು ಮಾಲೀಕರ ವರ್ಗ ಇನ್ನಷ್ಟು ಶ್ರೀಮಂತವಾಗುತ್ತಲೇ ಇತ್ತು. ಕಾರ್ಮಿಕರು ನೊಂದು ಬೆಂದು ಮಣ್ಣಾಗುತ್ತಲಿದ್ದರು.

8 ಗಂಟೆ ಕೆಲಸದ ನಿಗದಿಗಾಗಿ ಆಗ್ರಹ–

ಹೀಗಿರುವಾಗ 19ನೇ ಶತಮಾನದ ಕೊನೆಯ ಭಾಗದಲ್ಲಿ ಅಮೆರಿಕಾದ ಕಾರ್ಖಾನೆಗಳಲ್ಲಿ ಅಲ್ಲಲ್ಲೇ ಸ್ಥಳೀಯವಾಗಿ ಕಾರ್ಮಿಕರಲ್ಲಿ ಮಡುಗಟ್ಟಿದ ನೋವು ಮತ್ತು ಸಂಕಟಗಳು ಹೋರಾಟದ ಸಂಘಟಿತ ರೂಪವನ್ನು ಪಡೆಯಿತು. ಸಮಾಜವಾದಿ ನಾಯಕರ ನೇತೃತ್ವದಲ್ಲಿ ಮುಷ್ಕರಗಳನ್ನು ಸಂಘಟಿಸಿ ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಲು ಪ್ರಾರಂಭಿಸಿದರು. 8 ಗಂಟೆಗಳ ಕೆಲಸಕ್ಕಾಗಿ ಅನೇಕಾನೇಕ ಪ್ರಯತ್ನದಲ್ಲಿ ಇದ್ದರು.

8 ಗಂಟೆಗಳ ವಿಶ್ರಾಂತಿ ಮತ್ತು 8 ಗಂಟೆಗಳ ಮನರಂಜನೆಯಂತೆ ದಿನದ 24 ಗಂಟೆಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಉದ್ಯೋಗ ಕ್ಷೇತ್ರಗಳಲ್ಲಿ ದಿನವೊಂದಕ್ಕೆ 8 ಗಂಟೆಗಳ ನಿಗದಿತ ಕೆಲಸಕ್ಕಾಗಿ ಕಾರ್ಮಿಕ ಸಂಘಗಳು ಆಗ್ರಹಿಸಿದವು. ಅದು 1886ರ ಮೇ 1 ರಿಂದ ಕಾನೂನಾತ್ಮಕವಾಗಿ 8 ಗಂಟೆ ಕೆಲಸ ಮಾಡಲಿದ್ದೇವೆಂದು 1884ರಲ್ಲಿಯೇ ಅಮೆರಿಕದ ಕಾರ್ಮಿಕರ ಸಂಘಟನೆ ಘೋಷಿಸಿತ್ತು.

ಚಿಕಾಗೊದಲ್ಲಿ 1886ರ ಮೇ 1 ರಂದು ಕಾರ್ಮಿಕರ ಮುಷ್ಕರವೂ–

ಅಮೆರಿಕದಲ್ಲಿ 1886ರ ಮೇ 1ರಂದು 13,000 ವಿವಿಧ ಕ್ಷೇತ್ರಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಮೂರುವರೆ ಲಕ್ಷ ಜನ ಕಾರ್ಮಿಕರು ಕೆಲಸಕ್ಕೆ ಹೋಗದೇ ಮುಷ್ಕರ ಹೂಡಿದರು. ಈ ಕಾರ್ಮಿಕರ ಮುಷ್ಕರವನ್ನು ಅಲ್ಲಿನ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಸಂಘಟಿಸಿದ್ದವು. ಚಿಕಾಗೊ ನಗರವೊಂದರಲ್ಲೇ 40,000 ಶ್ರಮಿಕರು ಕೆಲಸದಿಂದ ದೂರ ಉಳಿದರು. ರಸ್ತೆಗಳು ಬಿಕೊ ಎನುತ್ತಿದ್ದವು. ರೈಲುಗಳು ಸ್ತಬ್ಧಗೊಂಡಿದ್ದವು, ಯಂತ್ರಗಳನ್ನು ನಡೆಸುವವರಿಲ್ಲದೇ ಕಾರ್ಖಾನೆಗಳಲ್ಲಿ ಮೌನ ಆವರಿಸಿತ್ತು. ನಿರ್ಮಾಣ ಕೈಗಾರಿಕೆಯಲ್ಲಿ ದುಡಿಯುತ್ತಿದ್ದವರೂ ಸೇರಿದಂತೆ ಸುಮಾರು 1,85,000 ಕಾರ್ಮಿಕರು ಆ ಕಾಲದಲ್ಲಾಗಲೇ ಎಂಟು ಗಂಟೆ ಕೆಲಸದ ಪದ್ಧತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನೂ ಹಲವಾರು ಕ್ಷೇತ್ರಗಳ ಕಾರ್ಮಿಕರು ಮೇ 1 ರ ಮುಷ್ಕರದಲ್ಲಿ ಕೈಜೋಡಿಸಿ ಕಾರ್ಮಿಕ ಚಳವಳಿಯ ಪ್ರವಾಹವನ್ನು ಸೇರಿಕೊಂಡರು. ಅನೇಕ ಕಾರ್ಮಿಕ ಸಂಘಗಳು ರಚನೆಯಾಗಿ ಕಾರ್ಮಿಕರು ಸಂಘಟಿತರಾದರು. ಕಾರ್ಮಿಕರು ಮಾಲೀಕರ ಮತ್ತು ಸರ್ಕಾರದ ದಬ್ಬಾಳಿಕೆಯ ವಿರುದ್ಧ ನ್ಯಾಯಕ್ಕಾಗಿ ಹೋರಾಟವನ್ನು ಶಾಂತಿಯುತವಾಗಿಯೇ ಮುಂದುವರಿಸಿದರು. ‘ಸಮಾಜವಾದ’ದ ಕಾರ್ಮಿಕರಿಗೆ ನೆಮ್ಮದಿಯ ಬದುಕು ನೀಡಬಲ್ಲದೆಂಬುದರ ಬಗ್ಗೆ ಕಾರ್ಮಿಕ ಮುಖಂಡರ ಭಾಷಣಗಳು ಹೋರಾಟನಿರತ ಕಾರ್ಮಿಕರ ಮನಮುಟ್ಟುತ್ತಿದ್ದವು.

‘ಹೇ ಮಾರ್ಕೆಟ್ ಸ್ಕ್ವೇರ್’ ನರಮೇಧ ಮತ್ತು ಹುತಾತ್ಮ ಕಾರ್ಮಿಕ ನಾಯಕರು–

ಮುಷ್ಕರದಿಂದ ದೂರ ಉಳಿದಿದ್ದ ಕಾರ್ಮಿಕರು ಪ್ರತಿದಿನವೂ ಬಂದು ಹೋರಾಟದಲ್ಲಿ ಸೇರ್ಪಡೆಯಾಗುತ್ತಲೇ ಇದ್ದರು. ಹೀಗೆಯೇ ಚಿಕಾಗೋ ನಗರದಲ್ಲೇ ಮುಷ್ಕರನಿರತ ಕಾರ್ಮಿಕರ ಸಂಖ್ಯೆ 1 ಲಕ್ಷ ಮುಟ್ಟಿತ್ತು. ಚಳವಳಿಯ ನೇತೃತ್ವ ವಹಿಸಿದ್ದ ಆಲ್ಬರ್ಟ್ ಪಾರ್ಸನ್ಸ್, ಜೊಹಾನ್ ಮಸ್ತ್, ಅಗಸ್ತ್ ಸ್ಪೈಸ್ ಮತ್ತು ಲೂಯಿ ಲಿಂಗ್ ಅಮೆರಿಕ ಕಾರ್ಮಿಕರ ಮನೆಮಾತಾದರು. ಅದೇ ಮೇ 3ರಂದು ಮ್ಯಾಕ್ ಕಾರ್ಮಿಕ್ ರೀಪರ್ ವರ್ಕ್ಸ್ ಎಂಬ ಕಾರ್ಖಾನೆಯ ಕಾರ್ಮಿಕರ ಮತ್ತು ಚಿಕಾಗೊ ಪೊಲೀಸರ ಮಧ್ಯೆ ಸಂಘರ್ಷ ಉಂಟಾಗಿ ಹಲವರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿ ಗುಂಡಿನ ದಾಳಿಗೈದರು. ಸ್ಥಳದಲ್ಲೇ ಕನಿಷ್ಟ ಇಬ್ಬರು ಸಾವನ್ನಪ್ಪಿ ಅನೇಕ ಜನ ಗಾಯಗೊಂಡರು. ಪೊಲೀಸರ ಈ ದುಷ್ಕೃತ್ಯವನ್ನು ಖಂಡಿಸಲು ಚಿಕಾಗೊ ನಗರದ ‘ಹೇ ಮಾರ್ಕೆಟ್ ಚೌಕ’ದಲ್ಲಿ ಮೇ 4 ರಂದು ಪ್ರತಿಭಟನಾ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆ ಮುಂದುವರೆದಂತೆ ಯಾರೋ ಬಾಂಬ್ ಎಸೆದು ಪೊಲೀಸರನ್ನು ರೊಚ್ಚಿಗೆಬ್ಬಿಸಿದ್ದು ಅದಕ್ಕಾಗೇ ಕಾಯುತ್ತಿದ್ದಂತಿದ್ದ ಪೊಲೀಸರು ಸಿಡಿಗುಂಡಿನ ಪ್ರಹಾರ ಕೈಗೊಂಡರು.

ಈ ಘಟನೆಯಲ್ಲಿ ಸಾಕಷ್ಟು ಪ್ರಾಣಹಾನಿ ಸಂಭವಿಸಿತು, ಆದರೆ ಬಾಂಬ್ ಎಸೆದವರಾರೆಂಬ ಸತ್ಯ ತಿಳಿಯುವ ಗೋಜಿಗೆ ಹೋಗಲಿಲ್ಲ. ಕಾರ್ಮಿಕ ಚಳವಳಿಯ ನಾಯಕತ್ವ ವಹಿಸಿದ್ದ ಸ್ಪೈಸ್, ಪಾರ್ಸನ್ಸ್, ಫಿಶರ್, ಎಂಗಲ್, ಲೂಯಿ ಅವರುಗಳನ್ನು ‘ಹೇ ಮಾರ್ಕೆಟ್ ಸ್ಕ್ವೇರ್’ ಪ್ರಕರಣದಲ್ಲಿ ಸಿಲುಕಿಸಿ, ಅನ್ಯಾಯವಾಗಿ 1887 ರಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು.

ಅವರು ಪ್ರಾಣ ತೆತ್ತಿದ್ದು ಅವರು ಮಾಡಿದ ಕೃತ್ಯಗಳಿಂದಾಗಲ್ಲ, ಬದಲಿಗೆ ಅವರು ನಂಬಿ ಮಂಡಿಸುತ್ತಿದ್ದ ವಿಚಾರಗಳಿಂದಾಗಿ, ಶ್ರಮಜೀವಿಗಳ ಪರವಾದ ಸಮಾಜವಾದಿ ಸಿದ್ಧಾಂತಗಳಿಂದಾಗಿ ಎಂಬುದನ್ನು ಇಡೀ ಜಗತ್ತೇ ಮನಗಂಡಿದೆ ಎನ್ನುವುದಕ್ಕೆ ವಿಶ್ವ ಕಾರ್ಮಿಕರ ದಿನಾಚರಣೆಯೇ ಸಾಕ್ಷಿ.  

ಮೇ ದಿನಾಚರಣೆವೂ – ತಪ್ಪಬೇಕು ಕಾರ್ಮಿಕರ ಬವಣೆಯೂ..!

ವಿಶ್ವದ ಕಾರ್ಮಿಕರಿಗೆ 8 ಗಂಟೆ ಕೆಲಸ ಎಂದು ನಿಗದಿ ಮಾಡಿದ ಶಾಸನಕ್ಕೆ ಮತ್ತು ಕಾರ್ಮಿಕರಿಗೆ ಸುರಕ್ಷಿತ ಕೆಲಸದ ಸ್ಥಳಗಳನ್ನು ಖಾತರಿಪಡಿಸುವಲ್ಲಿ ಈ ಎಲ್ಲಾ ಹೆಸರಿಸಬಹುದಾದ, ಪತ್ತೆಹಚ್ಚಲಾರದ ಸಾವಿರಾರು, ಲಕ್ಷಾಂತರ ಹೋರಾಟಗಾರರ ಮತ್ತು ಹೋರಾಟಗಾರ್ತಿಯರ ತ್ಯಾಗವಿದೆ ಎಂಬುದನ್ನು ಮತ್ತೆ ಮತ್ತೇ ಸ್ಮರಿಸಿಕೊಳ್ಳುವ ಅಗತ್ಯವಿದೆ. ಹಕ್ಕುಗಳನ್ನು ಕಾರ್ಮಿಕರಿಗೆ ಯಾರೂ ದಾನವಾಗಿ ನೀಡಿಲ್ಲ. ಅಮೆರಿಕ ದೇಶದ ಚಿಕಾಗೊ ನಗರದಲ್ಲಿ ಜರುಗಿದ ಈ ಚಾರಿತ್ರಿಕ ಮೇ ದಿನದ ಹೋರಾಟವನ್ನು ಸ್ಮರಿಸುತ್ತಲೇ ಕಾರ್ಮಿಕರ ಹಿತ ಕಾಪಾಡುವುದು ಮತ್ತು ಹಕ್ಕುಗಳನ್ನು ಉಳಿಸಿ ಗಳಿಸುವುದು ವಿಶ್ವ ಕಾರ್ಮಿಕರ ದಿನಾಚರಣೆಯ ಉದ್ದೇಶವೂ ಆಗಿರುತ್ತದೆ.

ಇದಕ್ಕಾಗಿ ಕಾರ್ಮಿಕರು ತಮ್ಮ ವಿರುದ್ಧ ಆಳ್ವಿಕೆ ನಡೆಸುತ್ತಿರುವ ಶ್ರೀಮಂತರ ಕಾರ್ಪೊರೇಟ್ ರಾಜಕೀಯವನ್ನು ಅರ್ಥೈಸಿಕೊಳ್ಳಬೇಕಿದೆ, ಶ್ರಮಜೀವಿಗಳ ಪರವಾಗಿರುವ ಸಮಾಜವಾದದ ಅರಿವನ್ನೂ ಪಡೆಯಬೇಕಿದೆ.

ಭಾರತದಲ್ಲಿ ಮೇ ದಿನಾಚರಣೆಯ ಆರಂಭ

ಭಾರತದಲ್ಲಿ 1890 ರಲ್ಲೇ ಬಾಂಬೆ ಹತ್ತಿ ಗಿರಣಿಗಳ ಸುಮಾರು 10000 ಕಾರ್ಮಿಕರು ಲೊಖಾಂಡೆ ಅವರ ನಾಯಕತ್ವದಲ್ಲಿ ಸಭೆ ಸೇರಿದ್ದರು. ಅಲ್ಲಿ ಇಬ್ಬರು ಮಹಿಳಾ ಕಾರ್ಮಿಕರು ಮಾತನಾಡಿದ್ದರು. ಸಭೆಯಲ್ಲಿ ವಾರದ ರಜೆಗಾಗಿ ಆಗ್ರಹಿಸಲಾಗಿ ಮಾಲೀಕರು ಒಪ್ಪಿಕೊಂಡರು. 1890 ರ ಸೆಪ್ಟೆಂಬರ್ 25 ರಂದು ಬ್ರಿಟಿಷ್ ಭಾರತ ಸರ್ಕಾರ ಒಂದು ಆಯೋಗ ರಚಿಸಿತು. ಈ ಆಯೋಗ 1891 ರಲ್ಲಿ ಫ್ಯಾಕ್ಟರಿ ಕಾನೂನಿಗೆ ಶಿಫಾರಸ್ಸು ಮಾಡಿತು.

1892 ಜನವರಿ 1ರಂದು ಈ ಶಾಸನವನ್ನು ಜಾರಿಗೆ ತರಲಾಗಿ, ಮಹಿಳೆಯರಿಗೆ 11 ಗಂಟೆಗಳ ಕೆಲಸ ಮತ್ತು ನಡುವೆ ಒಂದೂವರೆ ಗಂಟೆಗಳ ವಿಶ್ರಾಂತಿ ಹಾಗೂ ಮಕ್ಕಳಿಗೆ 7 ಗಂಟೆಗಳ ಕೆಲಸ ಎಂದು ನಿಗದಿಪಡಿಸಲಾಯಿತು. ಇದು ನಿಗದಿತ ಕೆಲಸದ ವೇಳೆಯ ಮೊದಲ ಶಾಸನವಾದರೂ ಇದರಲ್ಲಿ ಪುರುಷ ಕಾರ್ಮಿಕರಿಗೆ ಕೆಲಸದ ಸಮಯವನ್ನು ನಿಗದಿಗೊಳಿಸಿರಲಿಲ್ಲ. ವಾರದ ರಜೆಯೂ ಉಲ್ಲೇಖವಾಗಿತ್ತು.

ನಂತರದಲ್ಲಿ ಕಾರ್ಮಿಕರ ಹೋರಾಟಗಳ ಫಲವಾಗಿ 1911 ರಲ್ಲಿ ಪುರುಷ ಕಾರ್ಮಿಕರಿಗೆ 12 ಗಂಟೆಗಳ ಕೆಲಸವನ್ನು ನಿಗದಿಗೊಳಿಸಲು ಗಿರಣಿ ಕಾರ್ಮಿಕರು ಒಪ್ಪಿದರು. ಆದರೆ ಮೇ ದಿನಾಚರಣೆಯನ್ನು 1923 ರ ವರೆಗೂ ಭಾರತದಲ್ಲಿ ಆಚರಿಸಿದ ದಾಖಲೆಯಿಲ್ಲ. 1920ರಲ್ಲಿ ಜನ್ಮ ತಳೆದ ದೇಶದ ಮೊಟ್ಟಮೊದಲ ಕಾರ್ಮಿಕ ಸಂಘಟನೆ ಎಐಟಿಯುಸಿ ಮೇ ದಿನವನ್ನು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿ 1927 ರಿಂದ ಎಲ್ಲಾ ಪ್ರಾಂತ್ಯಗಳಲ್ಲೂ ಮೇ ದಿನವನ್ನು ಆಚರಿಸಲು ಆರಂಭಿಸಿತು. ಹೀಗೆಯೇ 1923 ರಿಂದ ವಿಶ್ವ ಕಾರ್ಮಿಕರ ದಿನಾಚರಣೆ ಕ್ರಮೇಣ ಭಾರತದೆಲ್ಲೆಡೆ ವ್ಯಾಪಿಸಿತು.

ಈ ವರ್ಷದ ವಿಶ್ವ ಕಾರ್ಮಿಕ ದಿನಾಚರಣೆಯ ಘೋಷಣೆ: ‘ಸೃಷ್ಟಿಸುವವನಿಗೆ ಸೇರಬೇಕು ಸಂಪತ್ತು’–

ಜಗತ್ತಿನಾದ್ಯಂತ ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಲಿದೆ. ಭಾರತದ ಪರಿಸ್ಥಿತಿಯನ್ನು ಗಮನಿಸೋಣ ಈಗ..‌-‍-

2017 ರಲ್ಲಿ ಸೃಷ್ಟಿಯಾದ ಸಂಪತ್ತಿನ ಶೇ.73 ರಷ್ಟು ಪಾಲು ಶೇ.1 ರಷ್ಟು ಸಿರಿವಂತರು ಹಂಚಿಕೊಂಡಿದ್ದರೆ, ಭಾರತದ ಅತಿಬಡತನದಲ್ಲಿರುವ ಶೇ.50 ರಷ್ಟು ಜನಸಂಖ್ಯೆ (67 ಕೋಟಿ ಭಾರತೀಯರು) ಕೇವಲ ಶೇ.1ರಷ್ಟು ಸಂಪತ್ತು ಹೆಚ್ಚಳವನ್ನು ಕಂಡಿದ್ದಾರೆಂದು ವರದಿಯಾಗಿದೆ. ಉದಾಹರಣೆಗೆ ಉದ್ಯಮಿಯಾಗಿರುವ ಅಂಬಾನಿ ಈ ವರ್ಷ ತನ್ನ ಆಸ್ತಿಯಲ್ಲಿ ಶೇ.25 ರಷ್ಟು ಅಧಿಕೃತ ಹೆಚ್ಚಳ ತೋರುತ್ತಾನೆ. ಆದರೆ ನಮ್ಮ ದೇಶದ ರೈತರು ಸಾಲದ ಶೂಲಕ್ಕೆ ಸಿಲುಕಿದ್ದಾರೆ, ಕಾರ್ಮಿಕರು ದಿನದೂಗಿಸಿದರೆ ಸಾಕೆಂದು ನಿಟ್ಟಿಸುರು ಬಿಡುವಂತಾಗಿದೆ..!

ಇದರರ್ಥ ಸಮಾಜದ ಸಂಪತ್ತನ್ನು ಸೃಷ್ಟಿಸುವ ಶ್ರಮಜೀವಿಗಳಿಗೆ ಆ ಸಂಪತ್ತು ದಕ್ಕುತ್ತಿಲ್ಲ. ಇದಕ್ಕೆ ಕಾರಣ ಶ್ರಮಜೀವಿಗಳ ಬೆವರು ಶ್ರೀಮಂತರ ಜೇಬಿಗೆ ಲಾಭವಾಗಿ ಹರಿಯಲು ಬಂಡವಾಳಶಾಹಿ ಸರ್ಕಾರಗಳು ಮಾಡುವ ಕಾನೂನು ಕಟ್ಟಲೆಗಳೇ. ಆದ್ದರಿಂದ ಶ್ರಮ ಜೀವಿಗಳು ಈ ರಾಜಕೀಯವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ತಮ್ಮ ಶ್ರಮದ ಫಲವನ್ನು ತಾವೇ ಉಣ್ಣಲು ರಾಜಕೀಯ ಚಿಂತನೆ ನಡೆಸುವುದು ಅಗತ್ಯವೂ ಮತ್ತು ಅನಿವಾರ್ಯವೂ ಆಗಿದೆ..!

***********************************************

ಕೆ.ಶಿವು.ಲಕ್ಕಣ್ಣವರ

Leave a Reply

Back To Top