ಮೇ ದಿನಕ್ಕೊಂದು ವಿಶೇಷ ಕವಿತೆ

ದುಡಿದು ದುಡಿದು
ಹಣ್ಣಾದರು ಹೆಣ್ಣು
ಎಲ್ಲಿ ನಿನ್ನ ದುಡಿಮೆ…
ಎಂದು ಕೇಳುವುದು
ಕುಟುಂಬ, ಸಮಾಜ…

ಉತ್ತರಿಸಲು ನಿಂತರೆ
ನನ್ನ ಕೆಲಸವನ್ನು
ದುಡಿಮೆ ಅಥವಾ ಕೆಲಸವೆಂದು
ಪರಿಗಣಿಸುವಿರೆ?

ನನ್ನ ದುಡಿಮೆಯ
ಸ್ವಲ್ಪವೇ ಸ್ವಲ್ಪ ವಿವರಣೆ ಕೋಡುವೇ
ಕೇಳಿ…

ಬಟ್ಟೆ ಒಗೆಯುವುದು
ಒಗೆದು ಒಣಗಿಸುವುದು..
ಒಣಗಿಸದಿದ್ದರೆ,
ಬಟ್ಟೆ ಒಗೆದಂತೆ ಎಲ್ಲಿ
ಒಗೆದು ಬಿಡುತ್ತಿರೆಂಬ
ಭಯದಲ್ಲಿ ಬದುಕುವುದು..

ಪಾತ್ರೆ ತೊಳೆಯುವುದು
ತೊಳೆದ ಪಾತ್ರೆಯನ್ನು
ಜೋಡಿಸುವುದು…
ಇದು ಮಾಡದಿದ್ದರೆ
ಪಾತ್ರೆ ತೊಳೆದಂತೆ
ತೊಳೆದು ಬಿಡುತ್ತಿರೆಂಬ
ಆತಂಕದಲ್ಲಿ ಜೀವಿಸುವುದು…

ತರಕಾರಿ ತರುವುದು
ತಂದ ತರಕಾರಿ
ಸ್ವಚ್ಛಗೊಳಿಸುವುದು…
ಸ್ವಚ್ಛ ಗೊಳಿಸದಿದ್ದರೆ
ತರಕಾರಿ ಕತ್ತರಿಸಿದಂತೆ
ಕತ್ತರಿಸಲು ಹಿಂಜರಿಯದವರು
ಎಂಬ ಹಿಂಜರಿಕೆಯಲ್ಲಿರುವುದು…

ಅನಾರೋಗ್ಯಕ್ಕೆ ಒಳಗಾದ
ಹಿರಿಯರ ಸೇವೆ ಮಾಡುವುದು…
ಸೇವೆ ಮಾಡಲಿರುವುದೆಂದು
ಜೀವವ ಸವೆಯುವುದು…

ರೊಟ್ಟಿ, ಚಪಾತಿ, ಮುದ್ದೆ ಮಾಡುವುದು..
ಅದಕ್ಕೆ ತಕ್ಕ ಪಲ್ಯ, ಸಾಂಬಾರು ಇತ್ಯಾದಿ
ಮಾಡುವುದು….
ಮಾಡಿದ ಅಡುಗೆಯಲ್ಲಿ,
ಸ್ವಲ್ಪ ರುಚಿಯಲ್ಲಿ
ಏರುಪೇರಾದರೆ
ಬಡಿಸಿಕೊಳ್ಳುವುದು…
ಬೈಸಿಕೊಳ್ಳುವುದು..
ಖಚಿತ…

ಪ್ರಾಣವ ಪಣಕ್ಕಿಟ್ಟು
ರಕ್ತವ ಹರಿಸಿ
ಮಕ್ಕಳ ಹೆರುವುದು….
ಹೆತ್ತ ಮಕ್ಕಳು
ಮುಂದೊಂದು ದಿನ ಒದ್ದರು
ಒದಿಸಿಕೊಳ್ಳುವುದು….
ನನ್ನ ಕೆಲಸ…

ಪರಿಗಣಿಸುವಿರೆ?
ಇದು ಕೆಲಸವೆಂದು,
ದುಡಿಮೆವೆಂದು,
ಹೆಣ್ಣು ಕಾರ್ಮಿಕಳೆಂದು….

ದಿನದ ಇಪ್ಪತ್ನಾಲ್ಕು
ಗಂಟೆಗಳ ದುಡಿಯುವ
ಕಾರ್ಮಿಕಳೆಂದು..?
ಹೆಣ್ಣಿನ್ನು ಭೂಮಿ ಎನ್ನುವವರು
ತಾಯಿ ಎನ್ನುವವರು
ಅವಳ ಬೆವರಿಗೆ ಏನೆಂದು ಕರೆಯುವಿರಿ?

****************************************


ಡಾ.ಸುರೇಖಾ ರಾಠೋಡ್

Leave a Reply

Back To Top