ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮಹಾದೇವಿ ಅಕ್ಕ

ಡಾ.ಕೆ.ಶಶಿಕಾಂತ

Vachanagalu -Basavanna & Akkamahadevi - 02 - YouTube

ಬರೀ ಹಗಲ
ಭ್ರಮೆಯೊಳಗಿನ
ಈ ಜಗಕೆ,
ನಿನ್ನ
ಬೆತ್ತಲೆತನದ್ದೇ ಚಿಂತೆ….
ತನ್ನ ಬೆತ್ತಲ ಬದುಕಿನ
ಅರಿವು ಇದ್ದರಲ್ಲವೇ…
ಬಟ್ಟೆ ಹೊದ್ದಿಸಲಾಗದ
ನಿನ್ನ ದಿಗಂಬರತನವ
ತಿಳಿಯಲು…

ಬೋಳು ಗುಡ್ಡದಂತೆ
ಬರೀ ಮಂಡೆ ಬೋಳಾದ
ಈ ಹಿರಿಯರ ಲೋಕದಲ್ಲಿ
ಹುಡುಕುತ್ತಲೇ ಇದೆ ಈ ಜಗ
ಮೋಟು ಮರಗಳ ಗುಂಪಿನಲ್ಲಿ
ಚಿಗುರೊಡೆದ ಗಿಡವನರಸುವಂತೆ
ಬರಡಾಗಿರುವ ಭಾವದಲಿ
ಬಯಲ ಚೆಲುವ ಚೆನ್ನನ….

ಮರವೇ ಮರುಗುವಂತೆ
ಗರಗರ ಸುತ್ತಿದ್ದಾಯ್ತು ,
ನೀರೇ ಕಲಕುವಂತೆ
ಮುಳುಮುಳುಗಿ
ಮಿಂದದ್ದಾಯ್ತು ,
ಅರ್ಥವನರಿಯದ
ಗಿಳಿಯಂತೆ ನುಡಿದು
ತನ್ನ ಹಿರಿಮೆಯ ಸೊಲ್ಲು
ದನಿಯಿಲ್ಲದಾಯ್ತು,
ತಲೆಮಾರುಗಳ ಕಾಲ
ಚೆನ್ನನನು ಕಾಣದಾಯ್ತು…

ದೃಢವಲ್ಲದ ಹೊಟ್ಟೆಗಾಗಿ
ಮೃಡನನು ಗುರಿಮಾಡಿ
ಹೇಮಕಾಮದ ಇಚ್ಛೆಗೆ
ಚೆನ್ನನರಿವ ಮನಕೆ ಕಿಚ್ಚಿಟ್ಟು
ಕದಳಿಯ ದಾರಿಯರಿಯದೇ
ದಿಕ್ಕೆಟ್ಟ ಬದುಕಿಗೆ
ಸಾವ ವಿದ್ಯೆಯನರುಹಿದ
ಮಹದ ಗುರು ಮಹಾದೇವಿ….

ಹರಕೆ ಕಾಣಿಕೆಗಳಿಡದ
ಜೀವಕೋಟಿಯನಿರಿಯುವ
ನೂರುದೇವತೆಗಳ
ಈ ಲೋಕದಲ್ಲಿ,,
ಬಿಲ್ವಬೆಳವಲಗಳ
ಸಂದೇಹವ ಬಿಡಿಸಿಟ್ಟು
ಬಾಳೆಮಾವುಗಳಿಗೆ
ನೀರೆರೆದು ಸಲಹಿದವನ
ಕುರುಹನು ತೆರೆದಿಟ್ಟು
ಜಗವ ಪೊರೆದ
ಮಹಾತಾಯಿ
ನೀನಲ್ಲವೇ ಅಕ್ಕ…

ಸತ್ತು ಅಳಿವ ಕೌಶಿಕನ
ವಸ್ತು ನಾನಲ್ಲೆಂದು
ಸಾವಿಲ್ಲದ ಗಂಡನಿಗೊಲಿದ
ಸಾವಿರದ ಚೆಲುವೆ ನೀನಕ್ಕ

ನಾಮ ರೂಪಗಳನಳಿದ
ಸೀಮೆ ಗಡಿಗಳನಳಿದ
ಬಸವನ ಈ ಕಲ್ಯಾಣದ
ಸುಳಿಗಾಳಿ ನೀನಕ್ಕ

ಚಳಿಮಳಿ ಸೋಂಕದ
ವಸ್ತ್ರ ಹೊದೆಯಲರಿಯದ
ಬೆಳಕಿನ ದಿಗ್ ದಿಗಂಬರ
ನೀನಲ್ಲವೇ ಅಕ್ಕ.

ಜಗದ ಕತ್ತಲೆ ಕಳೆದ
ಬಾಳ ಕದಳಿಯ
ಜ್ಯೋತಿಯಾಗಿ
ಇಹದ ಜೀವಕೆ
ದೀವಿಗೆಯಾದ
ಚೆನ್ನನ ಬೆಳಕು ನೀನೇ ಅಕ್ಕ.
ಚೆನ್ನನ ಬೆಳಕು ನೀನೇ ಅಕ್ಕ

****************************

About The Author

1 thought on “ಮಹಾದೇವಿ ಅಕ್ಕ”

  1. ಶರಣಪ್ಪ ತಳ್ಳಿ

    ಒಳ್ಳೆಯ ಕವಿತೆಯನು ಓದಲು ನೀಡಿದ್ದೀರಿ.ಸಂಗಾತ ಅವರಿಗೆ ಮತ್ತು ಲೇಖಕರಿಗೆ ಅಭಿನಂದನೆಗಳು.

Leave a Reply

You cannot copy content of this page

Scroll to Top