ಅಂಕಣ ಬರಹ

.

ರಾಮಕೃಷ್ಣ ಗುಂದಿ ಅವರ ಆತ್ಮಕಥೆ22

ಆತ್ಮಾನುಸಂಧಾನ

ಭದ್ರಕಾಳಿ ಜ್ಯೂನಿಯರ್ ಕಾಲೇಜಿನಲ್ಲಿ

ನನ್ನ ಮೆಟ್ರಿಕ್ ಪರೀಕ್ಷೆ ಮುಗಿಯುವ ಹೊತ್ತಿಗೆ ನಮ್ಮ ತಂದೆಯವರಿಗೆ ಅಂಕೋಲಾ ತಾಲೂಕಿನ ಮಂಜಗುಣಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯೋಪಾಧ್ಯಯರೆಂಬ ಭಡತಿಯೊಂದಿಗೆ ವರ್ಗವಾಯಿತು. ಮತ್ತೆ ನಮ್ಮ ಕುಟುಂಬ ನಾಡು ಮಾಸ್ಕೇರಿಯ ವಾಸ್ತವ್ಯಕ್ಕೆ ಮರಳಬೇಕಾಯಿತು. ನಾನು ನನ್ನ ಪದವಿಪೂರ್ವ ಶಿಕ್ಷಣಕ್ಕಾಗಿ ಗೋಕರ್ಣದ ಭದ್ರಕಾಳಿ ಪದವಿಪೂರ್ವ ಕಾಲೇಜು ಸೇರಿದೆ. ನನ್ನ ತಮ್ಮ ನಾಗೇಶ ಹನೇಹಳ್ಳಿಯ ಆನಂದಾಶ್ರಮ ಹೈಸ್ಕೂಲಿನಲ್ಲಿ ಪ್ರವೇಶ ಪಡೆದುಕೊಂಡ.

                ನಾಡು ಮಾಸ್ಕೇರಿಯಿಂದ ನಾನು, ಹಾರು ಮಾಸ್ಕೇರಿಯ ಕುಪ್ಪಯ್ಯ ಗೌಡ, ಮುಕುಂದ ಪ್ರಭು, ಗಂಗಾವಳಿಯ ಯುಸೂಫ್, ಸದಾನಂದ ಕೂರ್ಲೆ, ಬಾವಿಕೊಡ್ಲಿನ ರಮೇಶ ಗೌಡ ಮೊದಲಾಗಿ ಆರೆಂಟು ಜನ ಸೇರಿ ದಿನವೂ ಕಾಲ್ನಡಿಗೆಯಲ್ಲೇ ಗೋಕರ್ಣಕ್ಕೆ ಹೋಗಿ ಬರುತ್ತಿದ್ದೆವು.

                ನಮ್ಮೂರಿನಿಂದ ಭದ್ರಕಾಳಿ ಕಾಲೇಜ್ ಕ್ಯಾಂಪಸ್ ತಲುಪಲು ಎಂಟು ಕಿಲೋಮೀಟರ್ ನಡೆಯಬೇಕಿತ್ತು. ಆಗಿನ ಕಾಲಕ್ಕೆ ಬಸ್ ಸೌಕರ್ಯವೂ ಸರಿಯಾಗಿ ಇರಲಿಲ್ಲ. ಸಮಯವೂ ಹೊಂದಾಣಿಕೆಯಾಗುತ್ತಿರಲಿಲ್ಲ. ದಿನಕ್ಕೆ ಎರಡು ಬಾರಿ ಮಾತ್ರ ಗೋಕರ್ಣದಿಂದ ಗಂಗಾವಳಿಯವರೆಗೆ ಬಸ್ ಬಂದು ಹೋಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಬಳಗದ ಯಾರೂ ಬಸ್ಸಿನಲ್ಲಿ ದಿನವೂ ಪ್ರಯಾಣಿಸುವಷ್ಟು ಆರ್ಥಿಕ ಅನುಕೂಲತೆಯನ್ನು ಹೊಂದಿರಲಿಲ್ಲ. ಹೀಗಾಗಿ ಒಪ್ಪಂದ ಮಾಡಿಕೊಂಡವರAತೆ ಕಾಲ್ನಡಿಗೆಯ ಪ್ರಯಾಣಕ್ಕೆ ಒಪ್ಪಿಕೊಂಡಿದ್ದೆವು.

                ಅಂದು ಗೋಕರ್ಣದವರೆಗಿನ ರಸ್ತೆ ಈಗಿನಂತೆ ಟಾರು ರಸ್ತೆಯಾಗಿರಲಿಲ್ಲ. ಬೋಡ್ರಾಸು ಕಲ್ಲುಗಳನ್ನು ಹಾಸಿ ಅದರ ಮೇಲೆ ಬರಿಗಾಲ ಪಯಣಿಗರಾದ ನಾವು ರಫರಫಾ ಹೆಜ್ಜೆಯಿಡುತ್ತಾ ಮುಂಜಾನೆ ಒಂಭತ್ತಕ್ಕೆ ಹೊರಟು ನಿಂತರೆ ಹತ್ತು ಹತ್ತೂ ಕಾಲು ಗಂಟೆಯ ಹೊತ್ತಿಗೆ ಕಾಲೇಜು ಗೇಟು ತಲುಪುತ್ತಿದ್ದೆವು. ಅಷ್ಟು ಹೊತ್ತಿಗಾಗಲೇ ರಸ್ತೆಯ ಕೆಂಪುಧೂಳು ನಮ್ಮ ಮಂಡಿಯವರೆಗೂ ಮೆತ್ತಿಕೊಂಡು ಕೆಂಪಗೆ ಕಾಣುತ್ತಿತ್ತು. ಕಾಲೇಜು ಗೇಟಿನ ಎದುರೇ ಇರುವ ದೊಡ್ಡ ಆಲದ ಮರದ ನೆರಳಲ್ಲಿ ನಿಂತು ಒಂದಿಷ್ಟು ರದ್ದಿ ಪೇಪರು ಆಯ್ದುಕೊಂಡು ಕಾಲಿಗೆ ಅಂಟಿದ ಧೂಳು ಒರೆಸಿಕೊಂಡೇ ನಾವು ಕಾಲೇಜು ಕಂಪೌAಡಿನ ಒಳಗೆ ಹೋಗುವುದು ನಮ್ಮ ದಿನಚರಿಯೇ ಆಗಿತ್ತು.

                ಮೂರ್ತಿ ಮಾಸ್ತರರು ಅಂದು ಕಾಲೇಜಿನ ಪ್ರಾಚಾರ್ಯರಾಗಿದ್ದ ನೆನಪು. ಉಳಿದಂತೆ ಕನ್ನಡ ಪಾಠ ಹೇಳುವ ಗೌರೀಶ ಮಾಸ್ತರರು(ಗೌರೀಶ ಕಾಯ್ಕಿಣಿ), ಇತಿಹಾಸ ಕಲಿಸುವ ರಮೇಶ ನಾಯಕ, ಇಂಗ್ಲೀಷ್ ಕಲಿಸುವ ಖಾನ್ ಸಾಹೇಬರು ಮಾತ್ರ ನಮ್ಮ ನೆನಪಿನಲ್ಲಿ ಇಂದಿಗೂ ಉಳಿದ ಗುರುಗಳಾಗಿದ್ದಾರೆ.

                ಭದ್ರಕಾಳಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಈಗಿನಂತೆ ಎರಡು ವರ್ಷದ ಅವಧಿ ಇರಲಿಲ್ಲ. ಕೇವಲ ಒಂದೇ ವರ್ಷದ ಪಿ.ಯು ಶಿಕ್ಷಣವಿತ್ತಾದ್ದರಿಂದ ಕಾಲೇಜಿನಲ್ಲಿ  ಕಳೆದ ಆರೆಂಟು ತಿಂಗಳ ಕಾಲಾವಧಿಯಲ್ಲಿ ವಿಶೇಷ ಅನುಭವಗಳೇನೂ ಇಲ್ಲವೆಂದೇ ಹೇಳಬೇಕು.

                ಆದರೂ ಇದೇ ಅವಧಿಯಲ್ಲಿ ಕಾಲೇಜಿನ ಹೊರತಾಗಿ ನನಗಾದ ಎರಡು ಅನುಭವಗಳನ್ನು ಹಂಚಿಕೊಳ್ಳಲೇ ಬೇಕು.

                ಗೋಕರ್ಣ ಸಮೀಪದ ಸಾಣಿಕಟ್ಟೆ ಎಂಬ ಪುಟ್ಟ ಊರು. ಉಪ್ಪಿನ ಉತ್ಪಾದನೆಗೆ ಪ್ರಸಿದ್ಧಿ ಹೊಂದಿದ ಸ್ಥಳ. ವಿಶಾಲವಾದ ಉಪ್ಪಿನಾಗರದಲ್ಲಿ ಉಪ್ಪು ಬೆಳೆಯುವುದು ಒಂದು ಉದ್ಯಮವೇ ಆಗಿತ್ತು. ಆಗರಗಳಲ್ಲಿ ಉಪ್ಪು ತೆಗೆಯುವುದನ್ನೇ ಮುಖ್ಯ ವ್ಯವಸಾಯವನ್ನಾಗಿ ಮಾಡಿಕೊಳ್ಳುವ ಮೂಲಕವೇ “ಆಗೇರರು” ಎಂದು ಕರೆಸಿಕೊಂಡ ನಮ್ಮ ಜಾತಿಯ ಬಹುಸಂಖ್ಯೆಯ ಜನ ಈ ಆಗರಗಳಲ್ಲಿ ದುಡಿಯುತ್ತಿದ್ದರು. ಅವರೆಲ್ಲ ಆಗರದ ಕೆಲಸ ಮುಗಿಸಿ ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಗೋಕರ್ಣಕ್ಕೆ ಬಂದು ಹನೇಹಳ್ಳಿಯ ತಿರುವಿನಲ್ಲಿರುವ ಶೆಟ್ಟರಂಗಡಿಯಲ್ಲಿ ಚಹಾ ಕುಡಿಯಲು ನಿಲ್ಲುತ್ತಿದ್ದರು. ಮಡಿ ಮೈಲಿಗೆಯ ಅಂದಿನ ಕಠಿಣ ದಿನಗಳಲ್ಲಿ ಆಗೇರರು ಅಂಗಡಿಯ ಒಳಗೆ ಹೋಗುವಂತಿರಲಿಲ್ಲ. ಅಂಗಡಿಯ ಹೊರಗೆ ಇಟ್ಟ ಬೆಂಚುಗಳ ಮೇಲೆ ಅಥವಾ ರಸ್ತೆ ಬದಿಯ ನೆಲದ ಮೇಲೆ ಕುಳಿತು ತಿಂಡಿ ತಿನ್ನಬೇಕಿತ್ತು. ಅವರಿಗಾಗಿಯೇ ಇಟ್ಟ ಪ್ರತ್ಯೇಕ ಗ್ಲಾಸುಗಳನ್ನು ತಾವೇ ತೊಳೆದುಕೊಂಡು ಚಹಾ ಕುಡಿಯಬೇಕಿತ್ತು. ಇದನ್ನು ಯಾವ ಮುಜುಗರವೂ ಇಲ್ಲದೇ ನಮ್ಮ ಜಾತಿಯ ಜನ ರೂಢಿಸಿಕೊಂಡಿದ್ದರು.

                ಆದರೆ ಈ ಅಸ್ಪೃಶ್ಯತೆಯ  ಕಟ್ಟುನಿಟ್ಟಿನ ಪಾಲನೆ ನಿಜವಾಗಿಯೂ ಸಂಕಟ ತಂದದ್ದು ನನಗೆ. ಆಗೇರರು ಶೆಟ್ಟರಂಗಡಿಯ ಅಂಗಳದಲ್ಲಿ ಹೀಗೆ ಸಾಲುಗಟ್ಟಿ ಕುಳಿತಿರುವ ಸಮಯದಲ್ಲೇ ನಮ್ಮ ಕಾಲೇಜು ಮುಗಿದು ನಾನು ನನ್ನ ಸಹಪಾಠಿಗಳೊಟ್ಟಿಗೆ ಇದೇ ದಾರಿಯಲ್ಲಿ ನಡೆದು ಬರುವುದು ಅನಿವಾರ್ಯವಾಗಿತ್ತು. ಆಗ ಗುಂಪಿನಲ್ಲಿ ಯಾರಾದರೂ ನನ್ನ ಸಂಬAಧಿಗಳು ಇದ್ದೇ ಇರುತ್ತಿದ್ದರು. ನನ್ನನ್ನು ಕಂಡೊಡನೆಯೇ ‘ಶಾಲೆ ಓದುವ ಸಂಬಂಧಿಕರ ಹುಡುಗ’ ಎಂಬ ಅಕ್ಕರೆಯಲ್ಲಿ ನನ್ನನ್ನೂ ಅಲ್ಲಿ ಚಹಾ ಕುಡಿಯಲು ಕರೆಯುತ್ತಿದ್ದರು. ನಾನು ತಪ್ಪಿಸಿಕೊಳ್ಳಲು ಹೋದರೆ ಕುಳಿತಲ್ಲಿಂದ ಎದ್ದು ಬಂದು ನನ್ನ ಕೈ ಹಿಡಿದು ಎಳೆದೊಯ್ದು ಕೂಡ್ರಿಸುತ್ತಿದ್ದರು. ಗೆಳೆಯರ ಗುಂಪು ನನ್ನ ಅವಸ್ಥೆ ನೋಡಿ ನಗುವುದು ಒಂದು ಕಡೆ. ಅಂಗಳದಲ್ಲೇ ಕುಳಿತು ತಿಂಡಿ ತಿನ್ನುವ ಸಂಕಟ ಇನ್ನೊಂದು ಕಡೆ. ನಾನು ಅವಮಾನದಿಂದ ಕುಸಿದು ಹೋಗುತ್ತಿದ್ದೆ. ಯಾಕಾದರೂ ಇಂಥ ಜಾತಿಯಲ್ಲಿ ಹುಟ್ಟಿದೆನೋ ಎಂದು ಅತೀವ ವೇದನೆ ಅನುಭವಿಸುತ್ತಲೇ ತಲೆ ತಗ್ಗಿಸಿ ಕುಳಿತು ಕೊಟ್ಟಿದ್ದನ್ನು ತಿಂದು ಬರುತ್ತಿದ್ದೆ.

                ಆದರೆ ನನಗೆ ತಿಂಡಿ ತಿನ್ನಿಸುವುದರ ಹಿಂದೆ ನನ್ನ ಜಾತಿ ಬಂಧುಗಳಿಗೆ ಇದ್ದ ‘ಓದುವ ಹುಡುಗ’ ಎಂಬ ಅಭಿಮಾನ, ‘ಸಂಬಂಧಿಕರ ಹುಡುಗ’ ಎಂಬ ಅಕ್ಕರೆಗಳಿಗೆ ಬೆಲೆ ಕಟ್ಟುವುದು ಸಾಧ್ಯವಿರಲಿಲ್ಲ ಎಂಬುದು ನನಗೆ ಅರ್ಥವಾಗಲು ಬಹುಕಾಲ ಬೇಕಾಯಿತು.

                ನನ್ನ ಪಿ.ಯು ಓದಿನ ದಿನಗಳಲ್ಲಿ ನನ್ನನ್ನು ಇಂದಿಗೂ ಪ್ರೀತಿ, ಅಭಿಮಾನದ ಸ್ಮರಣೆಯಾಗಿ ಉಳಿದ ಇನ್ನೊಂದು ಘಟನೆಯೆಂದರೆ ಕುಪ್ಪಯ್ಯ ಗೌಡನೆಂಬ ಸಹಪಾಠಿಯ ಸ್ನೇಹ.

                ಕುಪ್ಪಯ್ಯ ಹಾಲಕ್ಕಿ ಸಮುದಾಯದ ನನ್ನ ಸಹಪಾಠಿ. ಹಾರು ಮಾಸ್ಕೇರಿ ಭಾಗದಲ್ಲಿ ತಂದೆ ಬೀರ ಗೌಡ ಮತ್ತು ಅವನ ಕಿರಿಯ ಸಹೋದರ ಮಾದೇವನ ಜತೆ ಹುಲ್ಲು ಗುಡಿಸಿಲಲ್ಲಿದ್ದ ಕುಪ್ಪಯ್ಯ ನಮ್ಮೊಟ್ಟಿಗೆ ಓದುತ್ತಿದ್ದ. ಬಾಲ್ಯದಲ್ಲಿಯೇ ತಾಯಿ ತೀರಿಕೊಂಡಿದ್ದಳು. ತಂದೆ ಬೀರ ಗೌಡ. ತಮ್ಮ ಪಾಲಾಗಿದ್ದ ಸ್ವಲ್ಪ ಜಮೀನಿನಲ್ಲಿ ಭತ್ತ, ತರಕಾರಿ ಬೆಳೆಯುವ ಕಾಯಕ ಮಾಡಿಕೊಂಡಿದ್ದ. ಸಹೋದರ ಮಾದೇವನೂ ಶಾಲೆ ಕಲಿಯದೆ ತಂದೆಯ ಕೃಷಿ ಕಾಯಕದಲ್ಲಿ ನೆರವಾಗುತ್ತಿದ್ದ.

                ಅಂದಿನ ದಿನಗಳಲ್ಲಿ ಹಾಲಕ್ಕಿಗಳು ಇತರ ಎಲ್ಲ ಜಾತಿಯ ಜನರಿಗಿಂತ ಅಧಿಕ ಪ್ರಮಾಣದಲ್ಲಿ ಅಸ್ಪೃಶ್ಯತೆಯ ಕುರಿತು ವಿಶ್ವಾಸ ಹೊಂದಿದ್ದರು. ನಮ್ಮ ಜಾತಿಯ ಜನರನ್ನು ಮುಟ್ಟಿಸಿಕೊಳ್ಳುವುದಿರಲಿ ಗಾಳಿಯೂ ಸೋಕದಂತೆ ಎಚ್ಚರ ವಹಿಸಿ ಮಾರು ದೂರ ನಿಲ್ಲುತ್ತಿದ್ದರು. ಅಂಥ ಪರಿಸರದಲ್ಲಿ ಕುಪ್ಪಯ್ಯ ಗೌಡ ನನ್ನನ್ನು ಸ್ನೇಹಿತನೆಂದು ಒಪ್ಪಿಕೊಂಡಿದ್ದು ಮಾತ್ರವಲ್ಲದೇ ತನ್ನದೇ ಮನೆಯಲ್ಲಿ ಗಂಜಿ ಊಟ ನೀಡಿದ್ದ!

                ಅಂದು ಅವರ ತಂದೆಯಾಗಲೀ ತಮ್ಮನಾಗಲೀ ಮನೆಯಲ್ಲಿ ಇರಲಿಲ್ಲ. ಅಂಥ ಸಮಯ ಕಾದು ತಮ್ಮ ನಿತ್ಯ ಬಳಕೆಯ ಕಂಚಿನ ಗಂಗಾಳದಲ್ಲಿ ಗಂಜಿ ಉಪ್ಪಿನಕಾಯಿ ಬಡಿಸಿಕೊಟ್ಟು ತಾನೂ ಪಕ್ಕದಲ್ಲೇ ಕುಳಿತು ಗಂಜಿ ಊಟ ಮಾಡಿಸಿದ. ಕುಪ್ಪಯ್ಯ ಗೌಡನ ಪರಾಕ್ರಮದ ಕೆಲಸ ತಂದೆ-ತಮ್ಮನಿಗಾಗಲಿ, ಜಾತಿಯ ಬಂಧುಗಳಿಗಾಗಲಿ ಗೊತ್ತಾಗಿದ್ದರೆ ಕುಪ್ಪಯ್ಯ ಜಾತಿ ಬಹಿಷ್ಕಾರದ ಶಿಕ್ಷೆಯನ್ನೇ ಅನುಭವಿಸಬೇಕಿತ್ತು.

                ಅಂದಿನ ಅಂಥ ವಾತಾವರಣದಲ್ಲಿಯೂ ಧೈರ್ಯದಿಂದ ಗಂಜಿ ಉಣ್ಣಿಸಿದ ಕುಪ್ಪಯ್ಯ ಬಡಿಸಿದ ಆ ಗಂಜಿ ಜೀವಮಾನದಲ್ಲಿ ನಾನು ಉಂಡ ಮೃಷ್ಟಾನ್ನವೇ ಆಗಿ ಇಂದಿಗೂ ನೆನಪಾಗಿ ಉಳಿದುಕೊಂಡಿದೆ.

*******************************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

8 thoughts on “

  1. ಕುಪ್ಪಯ್ಯ ಗೌಡನ “ಜಾತ್ಯಾತೀತ “ಸ್ವಭಾವ ಅನುಸರಣೀಯ!

  2. ಮೌನಕ್ರಾಂತಿಯ ಗೆಳೆಯ ಕುಪ್ಪಯ್ಯಗೌಡನ ವ್ಯಕ್ತಿತ್ವ ಎತ್ತರಕ್ಕೆ ಬೆಳೆದು ನಿಂತಿದೆ

  3. ಹೃದಯವಂತ ಕುಪ್ಪಯ್ಯ ಗೌಡರಲ್ಲಿ ಈಗಲೂ ಅಂತಹ ಗುಣವೇ ಇದೆ.

    1. ಹೌದು..ಈಗವನು ಸದಾಶಿವಗಡದಲ್ಲೇ ಇದ್ದಾನೆ….ನಾನು ಕಾರವಾರದಲ್ಲಿರುವಾಗ ಮನೆಗೆ ಬಂದಿದ್ದ.

  4. ಗುರೂಜಿ,
    ಕುಪಯ್ಯ ಗೌಡ ನಿಮ್ಮ ಆಪ್ತ ಗೆಳೆಯ ಆಗ ಜಾತಿ ಭೇದ ಬಹಳ, ಆದರೂ ಗಂಜಿ ಕುಡಿದ ನೆನಪು ಇನ್ನೂ ಶಾಶ್ವತ ಉಳಿದಿದೆ. ನಿಮ್ಮ ವಿದ್ಯಾರ್ಥಿ ಜೀವನ ಎಷ್ಟೊಂದು ಅವಮಾನದು.
    ಗುರೂಜಿ ನಾನು ಈ ಹಿಂದೆ ಕೂಡ ಒಂದು ಸಣ್ಣ ಸಲಹೆ ನೀಡಿದ್ದೆ ಏನು ಅಂದ್ರೆ ದಯವಿಟ್ಟು ನಿಮಗೆ ನೆನಪು ಇರುವ ಘಟನೆಗಳ ವರ್ಷ (year) ಯಾವುದು ಎಂದು ಬರೆದರೆ ತುಂಬಾನೆ ಅನುಕೂಲ.

    ಮುಂದುವರಿದ ಸಂಚಿಕೆ…..

  5. ಸರ್ ಕುಪ್ಪಯ್ಯಗೌಡರ ಮಾನವೀಯತೆ, ಮಾನವಧರ್ಮಕ್ಕೆ ನನ್ನದೊಂದು ಸಲಾಂ . ದೇವರೇ ಹೇಗೆ ಸಹಿಸಿದಿರೋ ಅಸ್ಪ್ರಶ್ಯತೆಯ ಅಗ್ನಿಯನ್ನು!!

Leave a Reply

Back To Top