ಕಡ್ಡಿ ಗೀರಿದಾಗ

ಕವಿತೆ

ಕಡ್ಡಿ ಗೀರಿದಾಗ

ಧನಂಜಯ ಕುಂಬ್ಳೆ

Diya, Diwali, Hinduism, Deepavali

ಎಡಗೈ
ಹೆಬ್ಬೆರಳು ಮತ್ತು ತೋರುಬೆರಳು
ನಡುವೆ ವಾಮನ
ಅಲುಗಾಡಿದರೆ ಕಟ ಕಟ ಸದ್ದು
ಎದೆಗೆ ಗುದ್ದಿದಂತೆ

ಒಳಗಿನ ಪುಟ್ಟ ಕಡ್ಡಿಗೆ ಮೆತ್ತಿದ ತಲೆ
ಒಂದೇ ಗೀರಿಗೆ ಕಾದು ಕೂತಿದೆ
ಪೊಟ್ಟಣದ ಬದಿ ಸವರಿದೆ
ಶವದ ತುಟಿ ಸವರಿದಂತೆ
ಕಂಪಿಸಿತು ಒಡಲು

ಮನೆಯೆದುರ ಮಾವಿನ ಮರದ
ತೂಗುವ ಹಣ್ಣು ಕಾಣಲಿಲ್ಲ
ಬದಲು
ಹಸಿ ಕಟ್ಟಿಗೆಯ ರಾಶಿಯಲಿ
ನಾನೇ ಹೋಗಿ ಮಲಗಿದಂತೆ
ಪೊಟ್ಟಣದ ಕಡ್ಡಿ ಗಹಗಹಿಸಿ ಕುಣಿದಂತೆ

ಕಣ್ಣು ಮಂಜಾಗಿ
ಧಗಧಗನೇ ಉರಿವಗ್ನಿ ಚೆಂಡು
ನಿಂತಲ್ಲೇ ನಿಲಲಾರದೆ ಓಡುತಿದೆ
ಯಾರದೋ ಸುತ್ತ

ನಡುಗುವ ಕೈ
ನಡುಗುವ ದೇಹ
ಒದ್ದಾಡುವ ಮನಸು

ಕಡ್ಡಿಯೊಂದರ ಹೊರಗೆಳೆದು
ಪೊಟ್ಟಣದ ಸೊಂಟಕ್ಕೆ ಗೀರಿದೆ
ಚಳಕ್ ಎಂದಿತು

ದೀಪ ಉರಿಸಿದೆ ನನಗೆ ನಾನು

*************************

12 thoughts on “ಕಡ್ಡಿ ಗೀರಿದಾಗ

  1. ಒಳ್ಳೆಯ ಕವನ. ಒಳಿತು-ಕೆಡುಕು ನಮ್ಮೊಳಗೇ ಇದೆ ಎಂಬುದನ್ನು ಸೊಗಸಾಗಿ ವ್ಯಾಖ್ಯಾನಿಸಿದ ಕಾವ್ಯ…

  2. ಕಡ್ಡಿ ಗೀರಿದ ಪರಿಯಲ್ಲಿ ತೋರಿದ ನವ್ಯ ಗರಿಗಳು ಹಲವು ಆಯಾಮದ ಆಲೋಚನೆಗಳ ಹರವನ್ನು ಹಬ್ಬಿಸುತ್ತಿವೆ..
    ಕವಿತೆ ಸರ್

  3. ವಾಸ್ತವವನ್ನು ದೃಷ್ಟಿಯಲ್ಲಿಟ್ಟುಕೊಂಡು ನಮಗೆ ನಾವೇ ದೀಪವಾಗುವ ಪರಿಯನ್ನು ಚೆನ್ನಾಗಿ ಚಿತ್ರಿಸಿದ್ದೀರಿ ಎಂದು ಹಲವು ಗೆಳೆಯರು ಪ್ರತಿಕ್ರಿಯಿಸಿದ್ದಾರೆ.ಈ ಕವಿತೆಯ ಓದಿ. ಅದರಲ್ಲಿ ಒಬ್ಬರು ನಾನು ಯೋಚಿಸದೆಯೇ ಇರುವ ಅಂಶವನ್ನು ಹೇಳಿದ್ದಾರೆ.
    ಕವನದಲ್ಲಿ ಬರುವ ವಾಮನ ಪದ ಧಾರ್ಮಿಕ ಹೊಳಹನ್ನು ನೀಡಿ ಅದು ಧರ್ಮಾಂಧತೆ ನಮ್ಮನ್ನು ನಾಶದ ಕಡೆಗೆ ಕೊಂಡೊಯ್ಯುತ್ತೆ. ಅಂತರಂಗದ ಭಕ್ತಿ ನಮ್ಮನ್ನೇ ಬೆಳಗುತ್ತದೆ ಎಂಬ ಸೂಕ್ಷ್ಮವನ್ನು ಹೇಳಿದ್ದೀರಿ ಅಂದಿದ್ದಾರೆ. ಧರ್ಮ ಬೆಂಕಿಯೂ ಆಗಬಲ್ಲ, ದೀಪವೂ ಆಗಬಲ್ಲ ಶಕ್ತಿ ಹೊಂದಿದೆ ಎಂಬ ಅಭಿಪ್ರಾಯ ಕವಿತೆಯದ್ದು ಅಂದಿದ್ದಾರೆ. ಇಷ್ಟವಾಯಿತು

Leave a Reply

Back To Top