ಶಾಲೆಯಲ್ಲಿ ಸಿಹಿ-ಕಹಿ

ಮಕ್ಕಳ ಅನುಭವ ಕಥನ

ಶಾಲೆಯಲ್ಲಿ ಸಿಹಿ-ಕಹಿ

ವಿಜಯಶ್ರೀ ಹಾಲಾಡಿ

Girls from Indian villages going to school is always an encouraging sight!  | School photography, Village photography, Street photography people

ವಿಜಿಯ ಬಾಲ್ಯದ ಆ ದಿನಗಳಳ್ಲಿ ಮತ್ತು ಅದಕ್ಕೂ ಹಿಂದೆಲ್ಲ ಮಕ್ಕಳನ್ನು ಶಾಲೆಗೆ ಕಳಿಸಿಯೇ ತೀರಬೇಕೆಂಬ ದೊಡ್ಡ ಆಸೆ  ಮನೆಯವರಿಗೆ ಇರಲಿಲ್ಲ.  ಹೆಚ್ಚು ಕೇಳಿದರೆ, ಮಕ್ಕಳು ಶಾಲೆಗೆ ಹೋಗುವುದೇ ಬೇಡ, ಮನೆಯಲ್ಲೇ ಕೆಲಸ ಮಾಡಿಕೊಂಡಿರಲಿ ಎಂದು ಬಹುತೇಕ ಹಿರಿಯರ ಅಭಿಪ್ರಾಯವಾಗಿತ್ತು. ಅವರ ಹಳ್ಳಿಯಲ್ಲಿ ದೂರ ದೂರ ಮನೆಗಳು. ರಸ್ತೆಯಿಂದ, ಬಸ್ಸಿನ ಸಂಪರ್ಕದಿಂದ ಬಹು ದೂರ ಕಾಡು, ಗುಡ್ಡ, ಬಯಲುಗಳಲ್ಲಿ ಹುದುಗಿದ ಮನೆಗಳೇ ಜಾಸ್ತಿ. ಶಾಲೆಗಳ ಸಂಖ್ಯೆಯೂ ಆಗ ಕಡಿಮೆಯಿತ್ತು. ಹಾಗಾಗಿ ಶಾಲೆಗೆ ಹೋಗಿಬರಲು ಸಣ್ಣ ಸಣ್ಣ ಮಕ್ಕಳಿಗೆ ತೊಡಕಾಗಿತ್ತು. `ಕಡ್ಡಾಯ ಶಿಕ್ಷಣ’ ಎಂಬ ಸರ್ಕಾರದ ಕಾನೂನೇ ಆಗ ಇರಲಿಲ್ಲ!  ಇದೆಲ್ಲದರಿಂದಾಗಿ ಅಂದಿನ ದಿನಗಳಲ್ಲಿ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾದರು. ಇದು ನಿಜವಾಗಿಯೂ ಅಂತವರ ಬದುಕಿನಲ್ಲಾದ ನಷ್ಟ. ವಿಜಿಯ ಮನೆಯಲ್ಲಿ ಅವಳು ಶಾಲೆಗೆ ಹೋಗುವುದು ಬೇಡ ಎಂದೇನೂ ಅಜ್ಜಿ, ಅಪ್ಪಯ್ಯ, ಅಮ್ಮ ಯಾರ ಮನಸ್ಸಿನಲ್ಲಿಯೂ ಇರಲಿಲ್ಲ. ಆದರೆ ಎಲ್ಲಾ  ಮನೆಗಳಂತೆಯೇ ಅವರ ಮನೆಯಲ್ಲಿಯೂ ಶಾಲೆ, ಮಾರ್ಕ್ಸ್ ಎಂದೆಲ್ಲ ಹಿರಿಯರ‍್ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಒಂದು ಲೆಕ್ಕಕ್ಕೆ ಇದು ಒಳ್ಳೆಯದೇ ಆಯಿತು. ಬೇಕಾದಷ್ಟು ಆಡಬಹುದಿತ್ತು; ಕಾಡು ಗುಡ್ಡಗಳಲ್ಲಿ ಓಡಿಯಾಡಬಹುದಿತ್ತು. ಬಿಸಿಲು, ಮಳೆಯೆನ್ನದೆ ಮನೆ ಸುತ್ತಮುತ್ತ ನಿಸರ್ಗದ ಮಧ್ಯೆ ಹೊಸ ಹೊಸ ಅನುಭವಗಳನ್ನು ಪಡೆಯಬಹುದಿತ್ತು. ಹಾಗೆ ವಿಜಿ ಮತ್ತು ಅವಳ ವಯಸ್ಸಿನ ಮಕ್ಕಳೆಲ್ಲ ಬೇಕಾದಷ್ಟು ಆಡಿ, ಓಡಿ, ದಣಿದು, ಮನೆಕೆಲಸಗಳನ್ನು ಮಾಡಿ ಕೊನೆಗೆ ಸಮಯ ಉಳಿದರೆ ಓದುತ್ತಿದ್ದರು!  ಹೆಚ್ಚಿನ ಎಲ್ಲಾ ಮಕ್ಕಳೂ ಮೈಲಿಗಟ್ಟಲೆ ನಡೆದೇ ಶಾಲೆಗೆ ಬರುತ್ತಿದ್ದರು. ಹೈಸ್ಕೂಲಿನ ದಿನಗಳಲ್ಲಿ ಹೋಗಿ-ಬರುವ ಒಟ್ಟು ದೂರ ದಿನಕ್ಕೆ ಐದು ಮೈಲಿ ನಡಿಗೆಯಾದರೆ, ಬಸ್ಸಿನಲ್ಲಿ ಹತ್ತು ಕಿಲೋಮೀಟರ್ ಪ್ರಯಾಣಿಸಬೇಕಿತ್ತು ವಿಜಿ. ಅದೂ ಆ ಬಸ್ಸುಗಳಲ್ಲಿ ನಿಲ್ಲಲು ಜಾಗ ಸಿಕ್ಕಿದರೇ  ಪುಣ್ಯ! ಇದ್ದದ್ದೇ ಕೆಲವು ಬಸ್. ಆ ಬಸ್ಸುಗಳೂ ಶಾಲೆಯ ಮಕ್ಕಳನ್ನು ಹತ್ತಿಸಿಕೊಳ್ಳದೆ ಬಿಟ್ಟುಹೋಗುತ್ತಿದ್ದವು. ಶಾಲೆ ಮಕ್ಕಳು ಟಿಕೆಟ್ಟಿಗೆ ಕೊಡುವ ದುಡ್ಡು ತೀರಾ ಕಡಿಮೆಯಾದ್ದರಿಂದ ಬಸ್ ಕಂಡಕ್ಟರ್‌ಗಳು ಇವರು ಹತ್ತುವ ಮುಂಚೆಯೇ `ರೈಟ್’ ಹೇಳುತ್ತಿದ್ದರು. ಹೀಗೆ ಶಾಲೆಗೆ ಹೋಗಿ ಬರುವುದೇ ಒಂದು ಸಾಹಸವಾಗಿತ್ತು. ಇದರಿಂದ ದೈಹಿಕವಾಗಿ ಹೆಚ್ಚು ಆಯಾಸವಾಗುತ್ತಿದ್ದುದರಿಂದರಾತ್ರಿ ಎಂಟು ಗಂಟೆಗೆಲ್ಲ ನಿದ್ದೆ ಎಳೆಯುತ್ತಿತ್ತು. ಹತ್ತನೇ ಕ್ಲಾಸಿನ ಪಬ್ಲಿಕ್ ಪರೀಕ್ಷೆಗೆ ಮಾತ್ರ ಮಕ್ಕಳು ಜಾಸ್ತಿ ಓದುತ್ತಿದ್ದರು. ಅಲ್ಲಿಯವರೆಗಿನ ಕ್ಲಾಸ್‌ಗಳಲ್ಲಿ ಓದುವ ಒತ್ತಡ ಅಷ್ಟಾಗಿ ಇದ್ದಿರಲಿಲ್ಲ.

ನಮ್ಮ ವಿಜಿ ಓದುವುದರಲ್ಲಿ ಚುರುಕೇ. ಆದರೆ ಹಿರಿಯ ಪ್ರಾಥಮಿಕ ಶಾಲೆಗೆ ಹೋದಾಗ ಐದನೇ ತರಗತಿಗೆ ಇಂಗ್ಲಿಷ್ ಹೊಸದಾಗಿ ಸೇರಿಕೊಂಡಿತು. ಇಂಗ್ಲಿಷ್ ಪಾಠ ಚೆನ್ನಾಗಿ ಮಾಡಲಿಲ್ಲವೋ ಅಥವಾ ಇವಳಿಗೆ ಅರ್ಥವಾಗಲಿಲ್ಲವೋ ಒಟ್ಟಿನಲ್ಲಿ ಆ ವಿಷಯದಲ್ಲಿ ಸ್ವಲ್ಪ ಹಿಂದಿದ್ದಳು. ಆರನೆ ತರಗತಿಯಲ್ಲಿ ಹಿಂದಿ ಇತ್ತು. ಆ ಕ್ಲಾಸಿನಲ್ಲಿಯೂ ಅಷ್ಟೇ. ಹಿಂದಿ ಅಕ್ಷರಗಳನ್ನು ಬರೆಯುವುದು ಕಷ್ಟವೆನಿಸುತ್ತಿತ್ತು. ಏಳನೇ ತರಗತಿಗೆ ಹೋದ ಹೊಸದರಲ್ಲಿ ಒಂದಿನ ಯಾಕೋ ಏನೋ ಅಮ್ಮ ಚೆನ್ನಾಗಿ  ಬಯ್ದರು. “ಆಟವೇ ಜಾಸ್ತಿ ಆಯಿತು ಇವಳದ್ದು, ಓದುವುದಿಲ್ಲ, ನೆಟ್ಟಗೆ ಮನೆಕೆಲಸ ಮಾಡುವುದಿಲ್ಲ” ಎಂದೆಲ್ಲ ಅವರು ನಿಜವನ್ನೇ ಹೇಳಿದ್ದರೂ, ವಿಜಿಗೆ ಅವಮಾನವಾದಂತಾಗಿ ಕಣ್ಣೀರು ಬಂತು. `ಈ ಸಲ ಚಂದ ಓದಿಯೇ ಓದಬೇಕು’ ಎಂದು ಮನಸ್ಸಿನಲ್ಲೇ ಚಾಲೆಂಜ್ ಹಾಕಿದಳು. ಅದಕ್ಕೆ ಸರಿಯಾಗಿ ಆ ವರ್ಷ ಹಿಂದಿ ಮೇಷ್ಟು ಚೆನ್ನಾಗಿ ಕಲಿಸುತ್ತಿದ್ದರು. ಆಗ ಕಿರುಪರೀಕ್ಷೆ  ಬಂತು. ವಿಜಿ ಸವಾಲಾಗಿ ತೆಗೆದುಕೊಂಡು ಹಿಂದಿಯನ್ನು ಓದಿದಳು. ಮಾಷ್ಟು ಪೇಪರ್‌ ತಿದ್ದಿ ಕೊಟ್ಟಾಗ ಅವಳಿಗೆ ಹಿಂದಿಯಲ್ಲಿ ಇಪ್ಪತೈದಕ್ಕೆ ಇಪ್ಪತೈದು ಮಾರ್ಕ್ಸ್ ಬಂದಿತ್ತು!  ಅವಳಿಗಾದ ಖುಷಿಗೆ ಲೆಕ್ಕವೇ ಇರಲಿಲ್ಲ. ನಾಲ್ಕೈದು ಜನರಿಗೆ ಇಪ್ಪತ್ತನಾಲ್ಕೂವರೆ ಮಾರ್ಕ್ಸ್ ಬಂದಿತ್ತು. ಆಗ ಮಾಷ್ಟು ಒಂದು ಮಾತು ಹೇಳಿದರು. “ವಿಜಯಶ್ರೀಗೆ ಅರ್ಧ ಅಂಕ ಕೂಡಾ ಕಳೆಯಲು ಆಗಲಿಲ್ಲ ನನಗೆ, ಯಾಕೆಂದರೆ ಅವಳು ಒಂದೂ ತಪ್ಪು ಮಾಡಿಲ್ಲ” ಎಂದು. ಈ ಮಾತು, ಸನ್ನಿವೇಶ ದೊಡ್ಡವಳಾದ ನಂತರವೂ ಅವಳಿಗೆ ಮರೆಯಲಿಲ್ಲ. ಅದಲ್ಲದೆ ಅಮ್ಮ ಬಯ್ದದ್ದು ಒಳ್ಳೆಯದೇ ಆಯಿತು ಅನಿಸಿತು.  ಏಳನೇ ತರಗತಿಯಲ್ಲಿ ಅವಳು ಆ ವರ್ಷ ಕ್ಲಾಸಿಗೇ ಪ್ರಥಮ ಸ್ಥಾನದಲ್ಲಿ ಪಾಸಾದಳು. ಆದರೆ ಮತ್ತೆ ಹೈಸ್ಕೂಲಿಗೆ ಹೋದಾಗ ಅಲ್ಲಿನ ಹೊಸ ಪರಿಸರ ಹೊಂದಿಕೆಯಾಗದ್ದಕ್ಕೋ ಅಥವಾ ಉದಾಸೀನದಿಂದಲೋ  ಎಂಟು, ಒಂಬತ್ತನೇ ತರಗತಿಯಲ್ಲಿ ಹೆಚ್ಚೇನೂ ಓದುತ್ತಿರಲಿಲ್ಲ. ಅವಳಿಗೆ ಶಾಲೆ ಎಂದರೆ ಸಾಕಷ್ಟು ಹೆದರಿಕೆಯೂ ಇತ್ತು.  ಆದರೆ ಹತ್ತನೇ ತರಗತಿಯಲ್ಲಿದ್ದಾಗ ಮಾತ್ರ ಬೆಳಗಿನ ಜಾವ ಮೂರು ಗಂಟೆಗೆಲ್ಲ ಎದ್ದು ಚಿಮಣಿದೀಪ ಹತ್ತಿಸಿಕೊಂಡು ಹೊಗೆ ಕುಡಿಯುತ್ತಾ ಓದುತ್ತಿದ್ದಳು! ಕನ್ನಡ ಅವಳ ಪ್ರೀತಿಯ ವಿಷಯವಾಗಿತ್ತು. ನಾಲ್ಕನೇ ತರಗತಿಯಿಂದಲೇ ಮನೆಯಲ್ಲಿದ್ದ ಸಾಹಿತ್ಯದ ಪುಸ್ತಕಗಳನ್ನು ಓದಿದ್ದಳು. ಅದಲ್ಲದೆ ದೊಡ್ಡ ದೊಡ್ಡ ಕಾದಂಬರಿಗಳನ್ನೂ ಓದಿಬಿಟ್ಟಿದ್ದಳು!  ಒಂದು ಸಲ ತರಗತಿಯಲ್ಲಿ ಕನ್ನಡ ಮಾಷ್ಟು ಈಗೊಂದು ಪದ್ಯ ಹೇಳುತ್ತೇನೆ, ಇದಕ್ಕೆ ಸರಿಯಾಗಿ ಅರ್ಥ ಹೇಳಿದವರಿಗೆ ನಾಕಾಣೆ (ಇಪ್ಪತೈದು ಪೈಸೆ) ಬಹುಮಾನ ಎಂದು ಘೋಷಿಸಿದರು. ಆ ಪದ್ಯ ಹೀಗಿತ್ತು.

ಮೇಲಕೆ ಹತ್ತಿರಿ ಮುಂದಕೆ ಬನ್ನಿರಿ

ಎನ್ನುತ ಕಂಡಕ್ಟರ ಕರೆಯೇ;

ಉಳಿದೆಲ್ಲ ಕಡೆಯೊಳು ಹಿಂದಕೆ

ತಳ್ಳಿಸಿಕೊಂಡವನಾನಂದಕೆಣೆಯೆ!”

ಸುಮಾರು ಮಕ್ಕಳು ಪ್ರಯತ್ನಿಸಿದರಾದರೂ ಸರಿಯಾದ ಅರ್ಥ ಹೇಳಲಾಗಲಿಲ್ಲ. ವಿಜಿ ಮಾತ್ರ ಸರಿಯಾದ ಉತ್ತರ ಕೊಟ್ಟಳು. ಆಗ ಅವಳಿಗೆ ಬಹುಮಾನವಾಗಿ ನಾಕಾಣೆ ದೊರಕಿತು. ಆ ದುಡ್ಡಿಗಿಂತ ಅಷ್ಟು ಬುದ್ಧಿವಂತ ಮಕ್ಕಳಿದ್ದ ತರಗತಿಯಲ್ಲಿ ತಾನೊಬ್ಬಳೇ ಉತ್ತರಿಸಿದ್ದು ವಿಜಿಗೆ ಹೆಮ್ಮೆಯೆನಿಸಿತ್ತು. ನಿಜವಾಗಿಯೂ ಅವರ ಶಾಲೆ ಸುತ್ತಲೆಲ್ಲ ಪ್ರಸಿದ್ಧವಾದ ಶಾಲೆಯಾಗಿತ್ತು. ಎ ಮತ್ತು ಬಿ ಎರಡು ವಿಭಾಗವಿದ್ದ ಅವರ ತರಗತಿಯಲ್ಲಿ ಬಹಳ ಬುದ್ಧಿವಂತ ವಿದ್ಯಾರ್ಥಿಗಳಿದ್ದರು. ಆಗೆಲ್ಲ ಖಾಸಗಿ ಶಾಲೆಗಳೆಂದರೆ ಏನೆಂದು ಜನರಿಗೆ ಗೊತ್ತೇ ಇರಲಿಲ್ಲ. ಇದ್ದದ್ದು ಸರ್ಕಾರಿ ಶಾಲೆಗಳು ಮಾತ್ರ. ಹತ್ತನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಬರೆದು ವಿಜಿ ತರಗತಿಗೆ ಐದನೇ ಸ್ಥಾನ ಪಡೆದುಕೊಂಡಿದ್ದಳು.

ಹತ್ತನೇ ತರಗತಿಯಲ್ಲಿದ್ದಾಗ ನಡೆದ ಮತ್ತೊಂದು ಖುಷಿಯ ಘಟನೆ ಮರೆಯಲಾರದ್ದು. ಪ್ರತೀ ವರ್ಷದಂತೆ ಆ ವರ್ಷವೂ ಸ್ಪರ್ಧೆಗಳಿದ್ದವು. ಇಷ್ಟು ವರ್ಷ ಪ್ರಬಂಧ ಮುಂತಾದ ಬರವಣಿಗೆ ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಿದ್ದ ವಿಜಿ ಈ ವರ್ಷ ಭಾಷಣಕ್ಕೆ ಸೇರಿದಳು. ಕೊಟ್ಟ ವಿಷಯಕ್ಕೆತಾನೇ ಭಾಷಣ ಬರೆದುಕೊಂಡು ಮನೆಯಲ್ಲಿ ಪ್ರಾಕ್ಟೀಸ್ ಮಾಡಿಕೊಂಡು ಹೋದಳು. ಮೊದಲೆಲ್ಲ ಅವಳಿಗೆ ಭಾಷಣ ಎಂದರೇ ಭಯವಾಗುತ್ತಿತ್ತು. ಈ ಸಲ “ನನಗೆ ಭಯವೇನೂ ಇಲ್ಲ, ನಾನು ಚೆನ್ನಾಗಿ ಮಾತಾಡಬಲ್ಲೆ, ಗೆದ್ದು ತೋರಿಸುತ್ತೇನೆ” ಎಂದೆಲ್ಲ ತನಗೆ ತಾನೇ ಪುಸಲಾಯಿಸಿಕೊಂಡು ಹೆದರಿಕೆಯನ್ನು ಮೆಟ್ಟಿ ತುಂಬಾ ಚೆನ್ನಾಗಿ  ಎದುರು ಕುಳಿತವರೆಲ್ಲರ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಿದಳು. ಅವಳಿಗೇ ಮೊದಲ ಬಹುಮಾನ ಬಂತು. ಇಡೀ ಕಾಲೇಜಿನಲ್ಲಿ ಅವಳನ್ನು ಎಲ್ಲರೂ ಗಮನಿಸುವಂತಾಯಿತು. ಪಿ.ಯು.ಸಿ.ಯಲ್ಲಿ ಓದುತ್ತಿದ್ದ ಅವಳ ಊರಿನ ಗೆಳತಿಯರೂ ಕೂಡಾ “ವಿಜಯಶ್ರೀ ಅಡ್ಡಿಲ್ಲೆ. ಹೀಗೇ ಮಾತಾಡುವುದು ಕಮ್ಮಿ. ಆದರೆ ಸ್ಟೇಜ್ ಮೇಲೆ ಚಂದ ಮಾತಾಡ್ತಾಳೆ.” ಎಂದು ಅವಳೆದುರಿಗೇ ಹೇಳಿದಾಗ ಸಂಕೋಚವೆನಿಸಿದರೂ ಖುಷಿಯಾಯಿತು. ಈ ಪ್ರಸಂಗದಿಂದಾಗಿ ಮುಂದೆ ಅವಳಿಗೆ ಎಲ್ಲರೆದುರು ನಿಂತು ಮಾತಾಡಲು ಧೈರ‍್ಯ ಬಂದಿತು.

ಆಗೆಲ್ಲ ಕೆಲವು ಶಿಕ್ಷಕರು ಮಕ್ಕಳಿಗೆ ವಿಪರೀತ ಹೊಡೆಯುತ್ತಿದ್ದರು. ಮಕ್ಕಳನ್ನು ಶಿಕ್ಷಿಸುವುದು ಅಪರಾಧ ಎಂಬ ಕಾನೂನು ಆಗ ಇತ್ತೋ ಇಲ್ಲವೋ ಗೊತ್ತಿಲ್ಲ. ಇಂತಹ ಕಹಿ ಘಟನೆಗಳು ವಿಜಿಗೆ ಎಂದಿಗೂ ಮರೆಯಲು ಸಾಧ್ಯವಾಗಿಲ್ಲ. ಅವಳ ಕಿರಿಯ ಪ್ರಾಥಮಿಕ ಏಕೋಪಾಧ್ಯಾಯ ಶಾಲೆಯ ಮಾಷ್ಟು ತುಂಬಾ ಒಳ್ಳೆಯವರು, ಶಿಸ್ತುಗಾರರು; ಆದರೆ ಅವರಿಗೆ ವಿಪರೀತ  ಸಿಟ್ಟು. ಓದಲು, ಬರೆಯಲು ಬಾರದ ಮಕ್ಕಳಿಗೆ ಕೋಲಿನಿಂದ ಸರಿಯಾಗಿ ಹೊಡೆಯುತ್ತಿದ್ದರು. ಅದೂ ಅಲ್ಲದೆ ಅಂತಹ ಮಕ್ಕಳ ತಲೆಯನ್ನು ಹಿಡಿದು ಗೋಡೆಗೆ ಜಪ್ಪುವುದು, ಸ್ಲೇಟಿನಲ್ಲಿ ತಲೆಗೆ ಹೊಡೆಯುವುದನ್ನೂ ಮಾಡುತ್ತಿದ್ದರು. ಹಾಗೆ ಬೇರೆಯವರಿಗೆ ಹೊಡೆಯುವಾಗಲೇ ವಿಜಿಗೆ ತುಂಬಾ ಹೆದರಿಕೆಯಾಗಿ ಎದೆ ವೇಗವಾಗಿ ಹೊಡೆದುಕೊಳ್ಳುತ್ತಿತ್ತು; ಮುದುರಿ ಕೂರುತ್ತಿದ್ದಳು. ಹಾಗೆ ಹೊಡೆಸಿಕೊಂಡ ಮಕ್ಕಳ ಕುರಿತು “ಅಯ್ಯೋ ಪಾಪ” ಅಂದುಕೊಳ್ಳುತ್ತ ಕಣ್ಣು ಒರೆಸಿಕೊಳ್ಳುತ್ತಿದ್ದಳು. ಹಾಗೆ ಹೊಡೆಸಿಕೊಂಡ ಮಕ್ಕಳ ಅಸಹಾಯಕ ಸ್ಥಿತಿ ಕನಸಿನಲ್ಲೂ ಬಂದು ಕೆಲವೊಮ್ಮೆ ಕಾಡುತ್ತಿತ್ತು.

ಹೈಸ್ಕೂಲಿನಲ್ಲಿ ರೇಖಾಗಣಿತ ಮಾಡುತ್ತಿದ್ದ ಕನ್ನಡ ಲೆಕ್ಚರರ್‌ ಕೂಡಾ ತುಂಬಾ ಸಿಟ್ಟಿನವರು. ಪಾಠವನ್ನು ಬಹಳ ಚೆನ್ನಾಗಿ ಮಾಡುತ್ತಿದ್ದರು; ಅವರ ಪಾಠದಿಂದಾಗಿಯೇ ರೇಖಾಗಣಿತ ಸುಲಭವಾಗಿತ್ತು ವಿಜಿಗೆ. ಆದರೆ ಅವರಿಗೆ ಎಷ್ಟು ಸಿಟ್ಟೆಂದರೆ, ಅವರು ತರಗತಿಗೆ ಬಂದೊಡನೆ ಮಕ್ಕಳೆಲ್ಲ ಗಪ್‌ಚಿಪ್‌ ಕೂರುತ್ತಿದ್ದರು. ವಿಜಿ ಮತ್ತು ಅವಳ ಕೆಲ ಗೆಳತಿಯರಂತೂ ಜೋರಾಗಿ ಉಸಿರಾಡಲೂ ಹೆದರುತ್ತಿದ್ದರು. ಅವರು ಹುಡುಗರಿಗೆ ಅಂದರೆ ಗಂಡುಮಕ್ಕಳಿಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರಾದರೂ ಹೆಣ್ಣುಮಕ್ಕಳು ತಪ್ಪು ಮಾಡಿದರೆ ಎಲ್ಲರೆದುರು ವ್ಯಂಗ್ಯವಾಗಿ ಏನಾದರೂ ಹೇಳಿ ಕಣ್ಣೀರು ಬರುವ ಹಾಗೆ ಮಾಡಿ ಸುಮ್ಮನಾಗುತ್ತಿದ್ದರು. ಒಂದು ಸಲ ಒಬ್ಬ ಹುಡುಗ ಸರಿಯಾಗಿ ಉತ್ತರಿಸದ ಕಾರಣಕ್ಕೆ ಭಯಂಕರ ಕೋಪಗೊಂಡು ಕೋಲಿನಲ್ಲಿ ಅವರು ಯಾವ ತರ ಹೊಡೆದರೆಂದರೆ ಉಳಿದ ಮಕ್ಕಳೆಲ್ಲ ಹೆದರಿಕೊಂಡರು. ಆ ಹುಡುಗನ ಕೈ ಕಾಲಿನಲ್ಲಿ ರಕ್ತ ಬರಲಾರಂಭಿಸಿತು. ಆ ದಿನ ಇಡೀ ಶಾಲೆಯಲ್ಲಿ ಇದೇ ವಿಷಯ ಒಳಗೊಳಗೇ ಗುಸುಗುಸು ಚರ್ಚೆಯಾಯಿತು. ಜೋರಾಗಿ ಮಾತಾಡುವ ಧೈರ್ಯ ಮಕ್ಕಳಿಗೆ ಇರಲಿಲ್ಲ. ಆ ಹುಡುಗನಿಗೆ ಮನೆಗೆ ನಡೆದುಕೊಂಡು ಹೋಗುವುದೇ ಕಷ್ಟವಾಯಿತು!   ಆಮೇಲೆ  ಸುಮಾರು ದಿನ ಅವನು ಶಾಲೆಗೆ ಬರಲಿಲ್ಲ. ಈ ಪ್ರಸಂಗ ವಿಜಿಗೆ ತುಂಬಾ ಕೆಡುಕೆನಿಸಿತು. ಶಾಲೆ ಎಂದರೆ ಏನೋ ಭಯ, ಆತಂಕ ಅವಳೊಳಗೆ ಸೇರಿಕೊಂಡಿತು.

ಆಟದ ಬಯಲಲ್ಲಿ ಮಾತ್ರ ವಿಜಿ ಯಾವತ್ತೂ ಹಿಂದೆಯೇ ಇದ್ದಳು. ಅವಳು ತುಂಬಾ ಸಪೂರವಾಗಿ ದೇಹದಲ್ಲಿ ಶಕ್ತಿಯೂ ಕಮ್ಮಿ ಇದ್ದುದರಿಂದಲೋ ಏನೋ ಆಟವಾಡಿದರೆ, ಓಡಿದರೆ ಆಯಾಸವಾಗುತ್ತಿತ್ತು. ಥ್ರೋ ಬಾಲ್‌ ಆಡುವಾಗ ಚೆಂಡು ನೆಟ್‌ಪಾಸ್‌ ಆಗುತ್ತಿರಲಿಲ್ಲ. ಇದಂತೂ ತುಂಬಾ ಅವಮಾನವೆನಿಸುತ್ತಿತ್ತು  ಅವಳಿಗೆ. ರಿಂಗ್ (ಟೆನ್ನಿಕಾಯ್ಟ್) ಮಾತ್ರ ಚೆನ್ನಾಗಿ  ಆಡುತ್ತಿದ್ದಳು. ಸ್ವಲ್ಪ ಸಮಾಧಾನವೆಂದರೆ ಅವಳಂತೆಯೇ ಆಟಗಳಲ್ಲಿ ಹಿಂದೆ ಇದ್ದ ಹುಡುಗಿಯರೂ ಕೆಲವರಿದ್ದರು ಎಂಬುದು! ತುಂಬಾ ಚೆನ್ನಾಗಿ ಆಟವಾಡುವ ಕೆಲವು ದೊಡ್ಡಕಿದ್ದ ಹುಡುಗಿಯರನ್ನು ನೋಡಿ ಅವಳಿಗೆ ಆಶ್ಚರ್ಯ, ಮೆಚ್ಚುಗೆ ಎರಡೂ ಆಗುತ್ತಿತ್ತು. ತಾನು ಎಂದಿಗೂ ಅವರಷ್ಟು ಬಲಿಷ್ಠಳಾಗಲು ಸಾಧ್ಯವಿಲ್ಲ ಅನಿಸುತ್ತಿತ್ತು. ಹಾಗಾಗಿ ಚೆನ್ನಾಗಿ ಓದುವುದರ ಮೂಲಕ ಈ ಕೊರತೆಯನ್ನು ತುಂಬಿಕೊಳ್ಳಬೇಕು ಎಂದುಕೊಂಡು ಅದಕ್ಕಾಗಿ ಪ್ರಯತ್ನಿಸುತ್ತಿದ್ದಳು.

ಒಂಬತ್ತನೆ ಕ್ಲಾಸಿನ ನಂತರ ದ್ವಿತೀಯ ಪಿ.ಯು.ಸಿ.ಯವರೆಗೆ ವಿಜಿ ಎದುರಿಸಿದ ಒಂದು ಸಮಸ್ಯೆಯೆಂದರೆ ಅದು ಉಡುಪಿನದ್ದು. ಅವರ ಊರು ಹಳ್ಳಿಯಾಗಿದ್ದಕ್ಕೋ ಅಥವಾ ಅವಳ  ಪರಿಚಿತ ಹೆಣ್ಣುಮಕ್ಕಳ್ಯಾರೂ ಉಡುಗೆ ತೊಡುಗೆಯ ಬಗ್ಗೆ ಮಾತಾಡದೇ ಇದ್ದುದಕ್ಕೋ ಆ ಕುರಿತು ಹೆಚ್ಚಿನ ಜ್ಞಾನವೇ ಇರಲಿಲ್ಲ ಅವಳಿಗೆ. ಇದಲ್ಲದೆ ಅವರ ಊರಿನಲ್ಲಿ ಹೆಣ್ಣುಮಕ್ಕಳೇನಾದರೂ ಸ್ವಲ್ಪ ಆಧುನಿಕವಾಗಿ ಫ್ಯಾಷನ್ ಮಾಡಿಕೊಂಡರೆ ಆಡಿಕೊಂಡು ನಗುತ್ತಿದ್ದರು. ಮತ್ತು ಮೈಕೈ ತುಂಬಿಕೊಂಡು ದಪ್ಪ ಉದ್ದಕ್ಕಿರುವ ಹೆಣ್ಣುಮಕ್ಕಳಿಗೂ  ವ್ಯಂಗ್ಯ ಮಾಡುತ್ತಿದ್ದರು!  ಹಾಗಾಗಿ ತಾನು ತೋರ ಆಗುವುದು ಬೇಡವೆಂದು ವಿಜಿ ಆಗಾಗ ದೇವರಲ್ಲಿ ಪ್ರಾರ್ಥಿಸುತ್ತಿದ್ದಳು! ಆರಂಭದಲ್ಲಿ ಮಿಡಿ ಹಾಕುತ್ತಿದ್ದ ಅವಳು ಆಮೇಲೆ ಸ್ಕರ್ಟು ಹಾಕಿದರೂ ಅದರಿಂದ ಬೇಗನೆ ಉದ್ದಲಂಗಕ್ಕೆ ಜಿಗಿದಳು. ಏಕೆಂದರೆ ಒಂಬತ್ತನೇ ತರಗತಿಯ ಸಮಯಕ್ಕೆ ಆದ ದೈಹಿಕ ಬದಲಾವಣೆ ಅವಳಿಗೆ ಬಹಳಷ್ಟು ತೊಂದರೆ ತಂದುಕೊಟ್ಟಿತ್ತು.  ಹಾಗೆ ಅವಳು ದೊಡ್ಡವಳಾದ ನಂತರದ ದಿನಗಳಲ್ಲಿ  ಉದ್ದ ಲಂಗ ಹಾಕಿಕೊಳ್ಳುವುದೇ ಅತ್ಯಂತ ಸುರಕ್ಷಿತ ಅನಿಸುತ್ತಿತ್ತು. ಮಸುಕು ಬಣ್ಣದ ಪುಟಾಣಿ  ಹೂಗಳಿರುವ, ಕಲೆಯಾದರೆ ಕೂಡಲೇ ಗೊತ್ತಾಗದ ಬಟ್ಟೆಯನ್ನು  ಆರಿಸಿಕೊಳ್ಳುತ್ತಿದ್ದಳು!  ಜಾಸ್ತಿ ನೆರಿಗೆಗಳನ್ನಿಡುವಂತೆ ಟೈಲರ್‌ಗೆ ಹೇಳಿ ಉದ್ದಲಂಗ  ಮತ್ತು ಸಡಿಲ ಸಡಿಲವಾಗಿರುವ ಬ್ಲೌಸ್ ಹೊಲಿಸುತ್ತಿದ್ದಳು. ಆ ಉಡುಪು ಹೆಚ್ಚು ಆರಾಮದಾಯಕವೆನಿಸುತ್ತಿತ್ತು. ಹತ್ತನೇ ತರಗತಿ ಮುಗಿದ ನಂತರದ ರಜೆಯಲ್ಲಿ ಅಪ್ಪಯ್ಯ, ಅಮ್ಮನೊಂದಿಗೆ ಅವಳು ಬೆಂಗಳೂರಿಗೆ ಹೋಗಿದ್ದಳು. ಆ ದೊಡ್ಡ ನಗರಕ್ಕೆ ಅವಳು ಹೋದದ್ದು ಅದೇ ಮೊದಲ ಸಲ (ಸಣ್ಣ ಮಗುವಾಗಿದ್ದಾಗ ಹೋಗಿದ್ದಳೋ ಏನೋ, ಅವಳಿಗೆ ನೆನಪಿಲ್ಲ). ಆಗ ಅಪ್ಪಯ್ಯ ಒತ್ತಾಯ ಮಾಡಿ ಒಂದು ನೇರಳೆ ಬಣ್ಣದ ಚೂಡಿದಾರ ಕೊಡಿಸಿದರು. ಅವರ ಶಾಲೆ-ಕಾಲೇಜಿನಲ್ಲಿ ಕೆಲವು ಪೇಟೆಯ ಮಕ್ಕಳನ್ನು ಬಿಟ್ಟರೆ ಉಳಿದವರ‍್ಯಾರೂ ಚೂಡಿದಾರ (ಸಲ್ವಾರ್) ಹಾಕುತ್ತಿರಲಿಲ್ಲ. ವಿಜಿಗೆ ಅದನ್ನು ಹಾಕಿಕೊಂಡು ಕಾಲೇಜಿಗೆ ಹೋಗಲು ತುಂಬಾ ಸಂಕೋಚವೆನಿಸುತ್ತಿತ್ತು. ಆದರೂ ಧೈರ‍್ಯ ಮಾಡಿ ಒಂದು ದಿನ ಹಾಕಿಕೊಂಡು ಅಳುಕಿನಲ್ಲೇ ಕಾಲೇಜಿಗೆ ಹೋದಳು. ಅಬ್ಬಾ! ಆ ದಿನ ಅವಳಿಗಾದ ಮುಜುಗರ ಅಷ್ಟಿಷ್ಟಲ್ಲ. ಏಕೋ ಏನೋ ಆ ಉಡುಪು ತನಗೆ ಸರಿ ಕಾಣುತ್ತಿಲ್ಲವೆನಿಸಿ  ಅಸಾಧ್ಯ ಕಿರಿಕಿರಿಯಾಯಿತು. ಎಲ್ಲರೂ ತನ್ನನ್ನು ನೋಡಿ ನಕ್ಕಂತೆ ಭಾಸವಾಗಿ ಚಡಪಡಿಸುತ್ತಾ ದಿನ ಕಳೆದಳು.

ಯಾವಾಗ ಮನೆ ಸೇರಿ ಆ ಚೂಡಿದಾರ ತೆಗೆದು ಎಸೆಯುತ್ತೇನೋ ಎಂಬ ಉದ್ವೇಗ.  ಕೊನೆಗೂ ಮನೆಗೆ ಬಂದು ಅದನ್ನು ತೆಗೆದಿಟ್ಟವಳು ಮತ್ತೆಂದೂ ಆ ಡ್ರೆಸ್ ಹಾಕಲೇ ಇಲ್ಲ. ಕಡೆಗೆ ಡಿಗ್ರಿಗೆ ಹೋದ ನಂತರ ಸಲ್ವಾರ್ ಹಾಕುವುದನ್ನು ಅಭ್ಯಾಸ ಮಾಡಿಕೊಂಡು, ಉದ್ದಲಂಗ ಬಿಟ್ಟೇ ಬಿಟ್ಟಳು. ಆಗಲೂ ಅವಳ ಕ್ಲಾಸ್‌ಮೇಟ್ಸ್ ಕೆಲ ಹುಡುಗಿಯರ ಉಡುಪು ಉದ್ದಲಂಗವೇ ಆಗಿತ್ತು. ಆದರೆ ವಿಜಿಗೆ ಚೂಡಿದಾರ ಎಷ್ಟು ಆರಾಮದಾಯಕ ಉಡುಪೆಂದು ಈಗ ಅರ್ಥವಾಯಿತು. ಮೊದಲಿನ ಹಿಂಜರಿಕೆ, ಸಂಕೋಚವನ್ನೆಲ್ಲ ಬಿಟ್ಟು ಧೈರ‍್ಯವಾಗಿರಲು ಕಲಿತಳು. ಆತ್ಮವಿಶ್ವಾಸ ಮತ್ತು ದಿಟ್ಟತನದಿಂದಲೇ ಜಗತ್ತನ್ನು ಎದುರಿಸಬೇಕೆಂಬ ಪಾಠವನ್ನು ವಿಜಿ ಹೀಗೆ ಕ್ರಮೇಣ ಕಲಿತುಕೊಂಡಳು.

***********************

Leave a Reply

Back To Top