ಲಾಕ್ಡೌನ್ ಕಾಲಘಟ್ಟದ ದಾಂಪತ್ಯ

ಲೇಖನ

ಲಾಕ್ಡೌನ್ ಕಾಲಘಟ್ಟದ ದಾಂಪತ್ಯ

ಅಂಜಲಿ ರಾಮಣ್ಣ

ಬೆಳಗಿನಲ್ಲಿ ಅವನು ಬಲು ಸುಭಗ. ರಾತ್ರಿಯಾಯಿತೆಂದರೆ ಕೀಚಕನೇ ಮೈಯೇರಿದ್ದಾನೆ ಎನ್ನುವಂತೆ ಇರುತ್ತಿದ್ದ. ಅವಳ ಮೈಮೇಲಿನ ಹಲ್ಗುರುತು, ಉಗುರ್ಗೆರೆ, ಸಿಗರೇಟಿನ ಬೊಟ್ಟು ಕತ್ತಲಲ್ಲೂ ಮಿರಮಿರ ಉರಿಯುತ್ತಿತ್ತು. ಸಹಿಸುತ್ತಲೇ ಅವಳ ದಾಂಪತ್ಯಕ್ಕೆ ಮೂರು ವರ್ಷ ಕಳೆದುಹೋಗಿತ್ತು. ಸ್ನಾನದ ನೀರು ಬಿದ್ದರೆ ಧಗಧಗ ಎನ್ನುವ ದೇಹ ದಹನಕ್ಕೆ ಹೆದರಿದ್ದ ದಾಕ್ಶಾಯಣಿ  ಅವಳು ಅದೆಷ್ಟೋ ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಿದ್ದಳು. ಕತ್ತಲಲ್ಲಿ ಅವಳಾತ್ಮವನ್ನು ಹೀಗೆ ಚರ್ಮದಂತೆ ಸಂಸ್ಕರಿಸುತ್ತಿದ್ದವ ಬೆಳಕಿನಲ್ಲಿ ಬೆಕ್ಕಿನ ಮರಿಯಂತೆ ಆಗುತ್ತಿದ್ದ. ಆಫೀಸಿನಲ್ಲಿ ಬಹಳವೇ ಪ್ರಾಮಾಣಿಕ. ನೆಂಟರಿಷ್ಟರ ಗೋಷ್ಠಿಯಲ್ಲಿ ಇವನೇ ಗೋಪಾಲಕೃಷ್ಣ. ಸಹಿಸಿದಳು, ಸಹಿಸಿದಳು ಅವಳು. ಸಹನೆ ಖಾಲಿಯಾಯ್ತು. ಉಪಾಯ ಒಂದು ಯಮಗಂಡಕಾಲದಂತೆ ಅವಳ ತಲೆ ಹೊಕ್ಕಿತು. 

ನಿತ್ಯವೂ ಅವನ ರಾತ್ರಿ ಊಟದಲ್ಲಿ ಬೇಧಿ ಮಾತ್ರೆ ಬೆರಸಿಕೊಡಲು ಶುರುವಿಟ್ಟಳು. ಆರು ತಿಂಗಳು ಮೈಯ್ಯಿನ ನೀರು ಆರಿ ಅವನು ಹೈರಾಣಾದ. ಸ್ಕ್ಯಾನಿಂಗ್ ಸೆಂಟರ್ಗಳಿಂದ ತಿಮ್ಮಪ್ಪನ ದರುಶನದವರೆಗೂ ಎಡುಕಾಡುತ್ತಾ ಮೆತ್ತಗಾದ. ಇವಳ ಮನಸ್ಸು ಉಸಿರಾಡಲು ಶುರುವಿಟ್ಟಿತು, ಶರೀರದ ಮೇಲಿನ ಗಾಯ ಒಣಗುವತ್ತ ಮುಖ ಮಾಡಿತ್ತು. ಅವಳು ಈ ಕಥೆಯನ್ನು ಮತ್ತ್ಯಾರದ್ದೋ ಜೀವನದ ಘಟನೆಯಂತೆ ಏರಿಳಿತವಿಲ್ಲದೆ ಹೇಳಿದಾಗ ಸಂಬಂಧಗಳ ನಡುವಿನ ಥಣ್ಣನೆಯ ಕ್ರೌರ್ಯಕ್ಕೆ ದಂಗಾಗಿ ಹೋಗಿದ್ದೆ. ದೌರ್ಜನ್ಯಕ್ಕೆ ದಶಕಂಠ ಎಂದರಿವಿದ್ದವಳಿಗೆ ಅದು ಮುಖವಿಹೀನ ಎನ್ನುವುದು ಅರಿವಿಗೆ ಬಂದಿತ್ತು.

ಹೀಗೆ ಗಂಡಹೆಂಡಿರು ಅವರ ಸಮಸ್ಯೆಗಳನ್ನು ಹೇಳಿಕೊಂಡಾಗಲೆಲ್ಲಾ ಟೆಬಲ್‍ನ ಈ ಬದಿಯಲ್ಲಿ ಕುಳಿತ ನನ್ನದು ಸಾಧಾರಣವಾಗಿ ಒಂದು ಸಿದ್ಧ ಉತ್ತರ ಇರುತ್ತಿತ್ತು  “ಒಟ್ಟಿಗೆ ಕುಳಿತು ಮಾತನಾಡಿ” ಅಥವಾ “ಹೆಚ್ಚು ಸಮಯವನ್ನು ಒಬ್ಬರ ಜೊತೆ ಒಬ್ಬರು ಕಳೆಯಿರಿ” ಎನ್ನುತ್ತಿದ್ದೆ.   ಉದ್ಯೋಗ, ಹಣ ಇವುಗಳ ಬೆನ್ನ ಮೇಲೆ ತಮ್ಮ ವಿಳಾಸವನ್ನು ಕೆತ್ತಿಡಬೇಕು ಎನ್ನುವ ಧಾವಂತದಲ್ಲಿಯೇ ಶ್ವಾಸಕೋಶ ತುಂಬಿಕೊಳ್ಳುವ ಅವನು-ಅವಳು ಇವರ ಮಧ್ಯೆ ಸಮಯ ಮತ್ತು ಮಾತು ಇವುಗಳನ್ನುಳಿದು ಇನ್ನೆಲವೂ ಇರುವುದನ್ನು ಕಂಡಿದ್ದರಿಂದ, ಬಂದವರಿಗೆಲ್ಲಾ “ಟೈಮ್ ಕೊಟ್ಟು ಟೈಮ್ ಕೊಳ್ಳಿ” ಎನ್ನುತ್ತಿದ್ದೆ.

ಇದನ್ನು ಕೇಳಿಸಿಕೊಂಡಿತೇನೋ ಎನ್ನುವ ಹಾಗೆ ಬಂದು ಬಿಟ್ಟಿತು ಕರೋನ ಸಾಂಕ್ರಾಮಿಕ ಪಿಡುಗು. ನಾನೊಂದು ತೀರ ನೀನೊಂದು ತೀರ ಎಂದು ಹಾಡುತ್ತಿದ್ದವರೆಲ್ಲಾ, ನೀನೆಲ್ಲೋ ನಾನಲ್ಲೇ ರಾಗವಾಗುವಂತೆ ಆಯಿತು. ಆಹಾ, ಇನ್ನು ಎಲ್ಲರ ದಾಂಪತ್ಯ ಕೆ.ಎಸ್.ನ ಅವರ ಕವಿತೆಗಳಂತೆ ಎಂದು ಭಾವಿಸುವ ಹೊತ್ತಿನಲ್ಲಿ ವಿಶ್ವಸಂಸ್ಥೆಯಾದಿಯಾಗಿ, ಸಚಿವಾಲಯ ಮತ್ತು ಪ್ರಪಂಚದಾದ್ಯಂತ ಹಲವಾರು ವಿಶ್ವವಿದ್ಯಾಲಯಗಳು “ ಲಾಕ್ಡೌನ್ ಸಮಯದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಗಣನೀಯ ಏರಿಕೆ” ಎನ್ನುವ ಕ್ಷಾರ ಸತ್ಯವನ್ನು ಒಮ್ಮೆಲೆ ಅಂಕಿಅಂಶಗಳ ಸಹಿತ ಹೊರಹಾಕಿರುವುದು ದಾಂಪತ್ಯ ಎನ್ನುವ ಪರಿಕಲ್ಪನೆಯನ್ನು ಮೂಕವಾಗಿಸಿದೆ.

ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಹೆಚ್ಚಿದೆ. ಅದೆಷ್ಟೋ ಮನೆಗಳಲ್ಲಿ ನಿರುದ್ಯೋಗ ಎನ್ನುವ ವೈರಸ್ ಕಣ್ಣೀರಾಗಿ ಹರಿಯುತ್ತಿದೆ. ಶಾಲೆಗಳಿಲ್ಲದೆ ಮಕ್ಕಳು ಬಳ್ಳಿಗೆ ಭಾರ ಎನ್ನುವಂತಾಗಿದೆ. ಹೆಣ್ಣು-ಗಂಡಿನ ನಡುವಲ್ಲಿ ಮಾಧುರ್ಯ ಕುರುಡಾಗಿದೆ, ಸಂಯಮ ಮನೆಬಿಟ್ಟು ಹೊರಟಿದೆ. ಅಹಂ ಅಸಹನೆಯಲ್ಲಿ ಮಾತಾಗುತ್ತಿದೆ. ಮೌನ ನೋವು ನುಂಗುತ್ತಿದೆ.

“ಮೇಡಂ ನಿಮ್ಮನ್ನು ಮೀಟ್ ಮಾಡಬೇಕು” ಎಂದು ಫೋನ್‍ನಲ್ಲಿದ್ದವಳು ಕೇಳಿದಾಗ “ಈಗ ಕಷ್ಟ, ಲಾಕ್ದೌನ್ ಇದೆಯಲ್ಲ” ಎಂದೆ. “ನೀವೇ ಏನಾದರೂ ಸಲಹೆ ಕೊಡಿ, ನನ್ನಿಂದ ಇನ್ನು ಈ ಮದುವೆಯನ್ನು ತಡೆದುಕೊಳ್ಳಲು ಆಗುತ್ತಿಲ್ಲ” ಎಂದವಳ ಮದುವೆಗೆ ಮೂವತ್ತಾರು ತಿಂಗಳಷ್ಟೇ. “ಏನಾಯ್ತು?” ಎನ್ನುವ ಚುಟುಕು ಪ್ರಶ್ನೆಗೆ ಅವಳು “ ಮೇಡಂ ಆಫೀಸಿಗೆ ಹೋಗುತ್ತಿದ್ದಾಗ ಹೇಗೊ ಎರಡೆರಡು ಶಿಫ್ಟ್ ಹಾಕಿಸಿಕೊಂಡು ಮ್ಯಾನೇಜ್ ಮಾಡ್ತಿದ್ದೆ. ಆದರೆ ಈಗ ನಮ್ಮ ಆಫೀಸಿನಲ್ಲಿ ಇನ್ನೊಂದು ವರ್ಷ ಮನೆಯಿಂದಲೇ ಕೆಲಸ ಮಾಡಿ ಎಂದು ಬಿಟ್ಟಿದ್ದಾರೆ. ನನ್ನ ಗಂಡನಿಗೂ ಮನೆಯಿಂದಲೇ ಕೆಲಸ. ಜೊತೆಲಿರೋದು ಬಹಳ ಕಿರಿಕಿರಿ” ಎಂದು ಮುಂದುವರೆದಳು. “ ಹತ್ತು ನಿಮಿಷಕೊಮ್ಮೆ ನನ್ನ ಅತ್ತೆ ಊರಿನಿಂದ ಮಗನಿಗೆ ಫೋನ್ ಮಾಡ್ತಾರೆ. ಅವರಿಗೆ ನಾವಿಬ್ಬರು ಮನೆಲಿದ್ದೀವಿ ಒಟ್ಟಿಗೆ ಎಂದರೆ ಏನೋ ಇನ್ಸೆಕ್ಯುರಿಟಿ. ಏನೇನೋ ಮಗನ ಕಿವಿಗೆ ಊದುತ್ತಾರೆ. ಅದನ್ನು ಕೇಳಿಕೊಂಡು ನನ್ನ ಗಂಡ ಇಲ್ಲಸಲ್ಲದ್ದಕ್ಕೆ ಜಗಳ ಮಾಡ್ತಾನೆ. ಪ್ಲೀಸ್ ಏನಾದರು ಲೀಗಲ್ ರೆಮಿಡಿ ಹೇಳಿ ಮೇಡಂ” ಎಂದು ನನ್ನ ಕಿವಿ ತುಂಬಿಸಿದಳು.

ಒಳ್ಳೆ ಅಡುಗೆ ಮಾಡಿಕೊಂಡು ತಿನ್ನಿ, ಪುಸ್ತಕ ಓದಿ, ಒಟ್ಟಿಗೆ ಟಿವಿ ನೋಡಿ, ರಾತ್ರಿಗಳನ್ನು ರಂಗಾಗಿಸಿಕೊಳ್ಳಿ ವಗೈರೆ ವಗೈರೆ ಸಲಹೆಗಳು ಲಾಕ್ಡೌನ್ ಕಾಲಘಟ್ಟದ ದಾಂಪತ್ಯಕ್ಕೆ ಅದೆಷ್ಟು ಪೇಲವ. ಒಂದೇ ಮುಖವನ್ನು ಸದೊಂಭತ್ತು ಕಾಲವೂ  ನೋಡುತ್ತಿದ್ದರೆ ಆಕ್ಸಿಟೋಸಿನ್ ಹಾರ್ಮೋನ್ ತನ್ನ ಫ್ಯಾಕ್ಟರಿಯನ್ನು ಬಂದು ಮಾಡಿಬಿಡುತ್ತದೆ ಎನ್ನಿಸುತ್ತೆ. ಅಥವಾ ಸೈರಣೆಗೂ ಕೋವಿಡ್-19 ಆಕ್ರಮಣ ಮಾಡಿದೆಯೇನು? ಪರಸ್ಪರ ವಿಶ್ವಾಸ , ಗೌರವಗಳು ಆಷಾಢಕ್ಕೆ ತವರಿಗೆ ಹೋದವೇನು?!

ಮನೆವಾರ್ತೆ ಸಹಾಯಕಿಯ ಹೆಸರು ರಾತ್ರಿ ಹತ್ತು ಗಂಟೆಗೆ ಮೊಬೈಲ್‍ನಲ್ಲಿ ಸದ್ದಾದಾಗ “ಓಹೋ ನಾಳೆ ಪಾತ್ರೆ ತೊಳೆಯಬೇಕಲ್ಲಪ್ಪಾ” ಎಂದು ಗೊಣಗಿಕೊಂಡು “ಏನು” ಎಂದೆ.  ಅವಳು ಜೋರಾಗಿ ಅಳುತ್ತಾ “ಅಕ್ಕಾ ನಂಗೆ ಜೀವ್ನ ಸಾಕಾಯ್ತಕ್ಕ, ಏನಾರಾ ಮಾಡ್ಕೊಳವಾ ಅನ್ದ್ರೆ ಮಕ್ಕ್ಳ್ಮುಕ ಅಡ್ಡ ಬತ್ತದೆ” ಎಂದು ಗೋಳಾದಳು. “ ಮೊದ್ನಾಗಿದ್ದ್ರೆ ಬೆಳಗೆಲ್ಲಾ ಗಾರೆ ಕೆಲ್ಸುಕ್ಕ್ ಓಗಿ ಎನ್ಗೋ ಸನ್ಜೆಗೆ ಬಾಟ್ಲೀ ತಂದು ಕುಡ್ಕೊಂಡು, ಉಣ್ಣಕ್ಕಿಕ್ದಾಗಾ ಉಣ್ಣ್ಕೊಂಡು ಮನೀಕೊಳೋನು. ಈಗ ಮನೇಲೆ ಇರ್ತಾನೆ ಅಕ್ಕ. ಕುಡ್ಯಕ್ಕೂ ಸಿಂಕ್ತಿಲ್ಲ. ಸುಮ್ಕೆ ಇಲ್ಲ್ದಕೆಲ್ಲಾ ಕ್ಯಾತೆ ತಗ್ದು ಒಡಿತಾನೆ ಅಕ್ಕ. ಮೈಯಲ್ಲಾ ಬಾಸುಂಡೆ ಬಂದೈತೆ” ಅವಳು ಅಳುತ್ತಿದ್ದಳು. “ಅಳ್ಬೇಡ ಸುಮ್ಮ್ನಿರು. ಪೋಲಿಸ್ ಕಂಪ್ಲೇಂಟ್ ಕೊಡ್ತೀನಿ ಅನ್ನು” ಎನ್ನುವ ಸಲಹೆ ಕೊಟ್ಟೆ. “ ಉಂ, ಅಕ್ಕ ಅಂಗೇ ಏಳ್ದೆ ಅದ್ಕೆ ಈಗ ಲಾಕ್ಡೋನು ಯಾವ ಪೋಲೀಸು ಏನು ಮಾಡಲ್ಲ. ಅದೇನ್ ಕಿತ್ಕೋತೀಯೋ ಕಿತ್ಕೋ ಓಗು ಅಂದ ಕಣಕ್ಕ” ಎಂದು ಮುಸುಗುಟ್ಟಿದಳು. ಕರೋನಾದ ಕರಾಳ ಮುಖ ಕಾಣುತ್ತಿರುವುದು ಬರೀ ಆಸ್ಪತ್ರೆಗಳಲ್ಲಿ ಅಲ್ಲ ಅದೆಷ್ಟು ಗುಡಿಸಲು, ಶೆಡ್ಡುಗಳಲ್ಲೂ ವೆಂಟಿಲೇಟರ್ಗಳನ್ನು ಬಯಸುತ್ತಿದೆ ಬದುಕು.

ವಿವಾಹ ಆಪ್ತಸಮಾಲೋಚನೆ ಎನ್ನುವ ವಿಷಯವನ್ನೇ ವಿದೇಶದ  ಕಾಲೇಜುಗಳಲ್ಲಿ ಕಲಿಸಲಾಗುತ್ತದೆ. ಮದುವೆಗೆ ಮೊದಲೇ ವಧು-ವರ ಇಬ್ಬರಿಗೂ ಸಂಸಾರ ಎಂದರೆ ಏನು ಎಂದು ಹೇಳಿಕೊಡುವ, ಹೊಂದಾಣಿಕೆಯ ಪಾಠ ಮಾಡುವ ತರಬೇತಿ ಶಿಬಿರಗಳು ಈಗ ನಮ್ಮ ದೇಶದಲ್ಲೂ ವ್ಯಾಪಾರ ಮಾಡುತ್ತಿವೆ. ಮದುವೆಯಾದವಳಿಗೆ ಸ್ತ್ರೀಧನ ಹಕ್ಕು ತಿಳಿ ಹೇಳುತ್ತೆ ಕಾನೂನು. ದೇಹಗಳ ಸಮಾಗಮದ ಬಗ್ಗೆ, ಲೈಂಗಿಕ ಆರೋಗ್ಯದ ಬಗ್ಗೆ ಖುಲ್ಲಂಖುಲ್ಲಾ ವಿವರಿಸಲು ತಜ್ಞರಿದ್ದಾರೆ. ಗಂಡಹೆಂಡತಿಯರ ಜಗಳ ಉಂಡು ಮಲಗುವ ತನಕ ಎಂದು ಕಂಡುಕೊಂಡಿದ್ದ ಮನೆ ಹಿರೀಕರೂ ’ಸಲಹೆಕೋರ’ರಾಗಿದ್ದಾರೆ. ಕೌಟುಂಬಿಕ ನ್ಯಾಯಾಲಯ ಇದೆ, ಸಹಾಯವಾಣಿ ಕೆಲಸ ಮಾಡುತ್ತಿದೆ. ಸ್ನೇಹಿತರಿದ್ದಾರೆ. ಮನೆ ಕಟ್ಟುವವರಿದ್ದಾರೆ. ಮನಮುರುಕಿದ್ದಾರೆ. ಹಳೆ ಹುಡುಗಿ ನೆನಪೂ ಇದೆ ಹೊಸಗೂಸ ತೊಟ್ಟಿಲು ತೂಗುತ್ತಿದೆ. ಇಬ್ಬರಿಗೂ ಆಸ್ತಿ ಜಗಳವಿದೆ, ಮುನಿಸು ಕದನವೂ ಇದೆ. ಶಾಂತಿ ನೆಮ್ಮದಿ ಕುಂಟಿದರೂ ಮನೆ ಮೂಲೆಯಲ್ಲಿ ಇನ್ನೂ ಇದೆ. ಹೀಗೆ ’ಇರುವ’ ಇವರುಗಳು ಯಾರೂ ಊಹೆ ಮಾಡಿದ್ದಿರದ ಒಂದೇ ವಿಷಯ  “ ಗಂಡ ಹೆಂಡತಿ ಹೆಚ್ಚು ಸಮಯ ಜೊತೆಯಲ್ಲಿ ಇದ್ದರೆ ಕೌಟುಂಬಿಕ ದೌರ್ಜನ್ಯ ಹೆಚ್ಚುತ್ತದೆ” ಎನ್ನುವುದು. 

ಮುಂದಿನ ವರ್ಷ ತಮ್ಮ ಮದುವೆಯ ಅರವತ್ತನೆಯ ವಾರ್ಷಿಕೋತ್ಸವಕ್ಕೆ ಖುಷಿಯಿಂದಲೇ ತಯಾರಿ ಮಾಡಿಕೊಳ್ಳುತ್ತಿದ ಆ ಯಜಮಾನನಿಗೆ ನಿತ್ಯವೂ ಕ್ಲಬ್‍ಗೆ ಹೋಗಿ ಒಂದು ಪೆಗ್ ಜೊತೆ ನಾಲ್ಕು ಸುತ್ತು ಇಸ್ಪೀಟಾಟ ಮುಗಿಸಿ ಸ್ನೇಹಿತರ ಜೊತೆ ಹರಟಿ ಬರುವುದು, ಮೂವತ್ತು ವರ್ಷಗಳಿಂದ ರೂಢಿಸಿಕೊಂಡಿದ್ದ ಹವ್ಯಾಸ. ಈಗಾತ ಹಿರಿಯ ನಾಗರೀಕ. ಕರೋನ ಹೊಸಿಲಲ್ಲೇ ಕುಳಿತಿದೆ. ಕ್ಲಬ್‍ಗೆ ಹೋಗುವುದು ಇನ್ನು ಕನಸಿನಂತೆಯೇ. ಯಜಮಾನನಿಗೆ ಈಗ ಜುಗುಪ್ಸೆ. ಸಿಟ್ಟು ತೋರಿಸಲು ಮನೆಯಲ್ಲಿ ಇರುವುದು ಎಂಭತ್ತರ ಹೆಂಡತಿ ಮಾತ್ರ. ಆಕೆ ಈಗ ದೂರದೇಶದ ಮಗಳು ಅಳಿಯನಿಗೆ ನಿತ್ಯವೂ ಫೋನ್ ಮಾಡಿಕೊಂಡು ಅಳುತ್ತಾರೆ. “ಇವರ ಬೈಗುಳ ತಡೆಯಕ್ಕಾಗ್ತಿಲ್ಲ” ಎಂದು ಗೋಳಿಡುತ್ತಾರೆ. ವಯಸ್ಸು ನಡೆದಂತೆ ಮನಸ್ಸು ಕೂರುವುದು ಎಂನ್ನುವ ನಂಬಿಕೆ ಇದ್ದ ದಾಂಪತ್ಯಗಳಲ್ಲಿ ಈಗ ಕರೋನ ಮಾಗುವಿಕೆಯನ್ನು ಅನಿರ್ಧಿಷ್ಟ ಕಾಲಕ್ಕೆ ಮುಂದೂಡಿದೆ. 

ಅದೆಷ್ಟೋ ವರ್ಷಗಳ ಹಿಂದೆಯೇ ಹಳ್ಳಿ ಬಿಟ್ಟು ಪಟ್ಟಣ ಸೇರಿದ ಇವನು ಈ ಊರಿನಲ್ಲಿಯೇ ಟ್ಯಾಕ್ಸಿ ಓಡಿಸುತ್ತಲೇ ಒಂದು ಸೈಟು, ವಾಸಕ್ಕೆ ಮನೆ ಮತ್ತು ಮದುವೆಯನ್ನೂ ಮಾಡಿಕೊಂಡ. ಈಗ ಒಂದು ವರ್ಷದಲ್ಲಿ ತಮ್ಮನನ್ನು ಅವನಾಕೆಯನ್ನೂ ಕರೆಸಿಕೊಂಡು ತನ್ನ ಬಳಿಯೇ ಇರಿಸಿ ಕೊಂಡಿದ್ದಾನೆ. ತಮ್ಮನಿಗೆ ಅಪಾರ್ಟ್‍ಮೆಂಟ್ ಒಂದರಲ್ಲಿ ಸೆಕ್ಯುರಿಟಿ ಕೆಲಸ ನಾದಿನಿಗೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಕೊಡಿಸಿ ನೆಮ್ಮದಿಯ ಮೀಸೆ ತಿರುವುತ್ತಾ ಸುಖದಿಂದ ಇದ್ದ.  ಬಸುರಿ ಹೆಂಡತಿ ಮೊದಲ ಮಗುವಿನೊಡನೆ ಊರಿಗೆ ಹೋದೊಡನೆ ಲಾಕ್ಡೌನ್ ಬಂತು. ಮನೆಯಲ್ಲಿನ ಮೂವರೂ ಈಗ ಬರಿಗೈಯಾಗಿದ್ದಾರೆ. ಹತ್ತಿದ ಜಗಳ ಹರಿಯುತ್ತಿಲ್ಲ. ಅಣ್ಣತಮ್ಮರ ಜಗಳದ ನಡುವೆ ಬಿಡಿಸಲು ಹೋದವಳ ತಲೆಗೆ ಹಾರೆಯೇಟು ಬಿದ್ದಿದೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಅಜ್ಞಾವಸ್ಥೆಯಲ್ಲಿ ಬಿದ್ದಿದ್ದಾಳೆ. 

ಮದುವೆ ಇಲ್ಲದ ಮೂವರು ಅಕ್ಕಂದಿರು ಅವರ ಹಾಸಿಗೆ ಹಿಡಿದ ತಾಯ್ತಂದೆಯರು ನಡುವೆ ಮನೆಗೊಬ್ಬನೇ ಕುಲೋದ್ಧಾರಕ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾನೆ. ಬಾಲ್ಯದಿಂದಲೂ ಅಕ್ಕಂದಿರ ಮಾತಿಗೆ, ಬಿರುಸಿಗೆ ನಲುಗಿದ್ದವ ಒಂದ್ನಾಲ್ಕು ವರ್ಷವಾದರೂ ಎದೆ ಪೂರ್ತಿ ಉಸಿರು ತುಂಬಿಕೊಳ್ಳಲು ಬಯಸಿದ್ದ. ಮೊನ್ನೆ ಜನವರಿಯಲ್ಲಿ ಅವನ ಕಂಪನಿಯವರು ಒಂದು ಪ್ರಾಜೆಕ್ಟಿಗೆ ಇವನನ್ನು ಮುಖ್ಯಸ್ಥನನ್ನಾಗಿಸಿ ಸಿಂಗಾಪೂರಿಗೆ ವರ್ಗಾವಣೆ ನೀಡಿದ್ದರು. ಉತ್ಸಾಹದಲ್ಲಿ ಹೊರಟಿದ್ದವನೀಗ ವರ್ಗಾವಣೆಯ ರದ್ದತಿ ಪತ್ರ ಮಾತ್ರ ಹಿಡಿದಿಲ್ಲ, ಕೆಲಸ ಕಳೆದುಕೊಳ್ಳುವ ಭಯವನ್ನೂ ಹೊತ್ತು ಕುಳಿತಿದ್ದಾನೆ. ಹೌದು, ಕುಟುಂಬ ಎಂದರೆ ಕೇವಲ ಗಂಡ ಹೆಂಡಿರಲ್ಲ ಅದಕ್ಕೇ ದೌರ್ಜನ್ಯ ಎಂದರೂ ಅವರಿಬ್ಬರ ನಡುವಿನದ್ದು ಮಾತ್ರವಲ್ಲ.

ಭೂಗೋಳದ ಈ ಭಾಗ “ಸಂಬಂಧಗಳು ಋಣದಿಂದ ಆಗುವುದು” ಎಂದು ನಂಬಿದ್ದರೆ ಆ ಭಾಗ “ಮದುವೆಗಳು ಸ್ವರ್ಗದಲ್ಲಿ ನಿರ್ಧಾರವಾಗುತ್ತವೆ” ಎಂದು ನೆಚ್ಚಿದೆ. ಆದರೆ ಬಂದೆರಗಿರುವ ವೈರಸ್ ಮಾತ್ರ ಜಗತ್ತು ದುಂಡಗಿದೆ ಮತ್ತು ಮನುಷ್ಯ ಮೂಲಭೂತವಾಗಿ ಒಂದು ಪ್ರಾಣಿ ಮಾತ್ರ ಎನ್ನುವ ಸತ್ಯವನ್ನು ಬೇಧವಿಲ್ಲದೆ  ಪುನಃಪ್ರಸಾರ ಮಾಡುತ್ತಿದೆ. ಅರ್ಥಶಾಸ್ತ್ರಜ್ಞರು ಕೋವಿಡ್-19ಗಾಗಿಯೇ ಇನ್ಸ್ಯೂರೆನ್ಸ್ ತೆಗೆದುಕೊಳ್ಳಿ ಎನ್ನುತ್ತಿದ್ದಾರೆ. ಸೀಲ್‍ಡೌನ್ ಆಗಿರುವ ಸಂಬಂಧಗಳು ಕೌಟುಂಬಿಕ ದೌರ್ಜನ್ಯದಲ್ಲಿ ನೊಂದವರಿಗೆ ಯಾವುದಾದರೂ ವಿಮೆ ಇದೆಯೇ ಎಂದು ಹುಡುಕುತ್ತಿವೆ.

ಅವಳಿಗೆ ಹದಿಮೂರುಹದಿನಾಲ್ಕು ವರ್ಷ ವಯಸ್ಸಿರಬೇಕು. ಮೂಕಿ ಕಿವುಡಿ ಹುಡುಗಿ. ಸಣ್ಣ ಕೋಣೆಯ ಮನೆಯಲ್ಲಿ ಕೆಲಸ ಕಳೆದುಕೊಂಡ ಹನ್ನೊಂದು ಜನ ಇರಬೇಕಾದ ಪ್ರಸ್ತುತತೆ. ಭಾರ ಕಳಚಿಕೊಳ್ಳಲು ಇವಳ ಕೈಮೇಲೆ ಹೆಸರು, ಊರಿನ ಹಚ್ಚೆ ಹಾಕಿಸಿ ಯಾವುದೋ ರೈಲು ಹತ್ತಿಸಿ ಮನೆಯವರೇ ಕಳುಹಿಸಿಬಿಟ್ಟಿದ್ದಾರೆ. ಪ್ರೀತಿ, ಸಾಹಚರ್ಯ ಎಲ್ಲಾ ಅನಿವಾರ್ಯದ ಕೈಗೆ ಸಿಕ್ಕಿ ವಿರುದ್ಧ ದಿಕ್ಕಿನಲ್ಲಿ ಪ್ರಯಾಣ ಬೆಳಿಸಿವೆ. ಮೊದಲೆಲ್ಲಾ ಇವುಗಳಿಗೆ ಯಾರೋ ತುತ್ತುಣಿಸಿ ಮತ್ತ್ಯಾರೋ ನೀರು ಹನಿಸುತ್ತಿದ್ದರು. ಆದರೀಗ ಸಹಾಯ ಹಸ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದೆ.

ಅಮ್ಮನಿಗೆ ಅಪ್ಪ ಬೇಡವಾಗಿದ್ದಾನೆ, ಅವನಿಂದ ಮಕ್ಕಳು ದೂರವಾಗಿದ್ದಾರೆ, ಅಣ್ಣತಮ್ಮಂದಿರ ಫೋನ್ ಕರೆನ್ಸಿ ಖಾಲಿಯಾಗಿದೆ. ವಾರೆಗಿತ್ತಿ ನಾದಿನಿಯರು ತಮ್ಮತಮ್ಮ ಸ್ಥಿತಿಗಳನ್ನು ತಕ್ಕಡಿಯಲ್ಲಿ ತೂಗುತ್ತಿದ್ದಾರೆ. ಸಚಿವ, ವೈದ್ಯ, ಉಪಾಧ್ಯಾಯ, ಪೋಲೀಸ್, ಪುರೋಹಿತ ಯಾರನ್ನೂ ಬಿಟ್ಟಿಲ್ಲ ಎಂದು ಕೂಗುತ್ತಿದ್ದ ಮಾಧ್ಯಮಗಳಿಗೂ ಕರೋನ ಆಸ್ಪತ್ರೆಯಲ್ಲಿ ವಾರ್ಡ್ ಖಾಲಿ ಇಲ್ಲ ಎನ್ನುವ ಬೋರ್ಡ್ ಎದುರಾಗುತ್ತಿದೆ. ಇವರೆಲ್ಲರಿಗೂ ಕುಟುಂಬ ಇದೆ. ನಾಲ್ಕು ಗೋಡೆಗಳ ಮಧ್ಯೆ ದೌರ್ಜನ್ಯ ವಲಸೆ ಹೋಗಲೂ ಆಗದೆ ಕಾರ್ಮಿಕನಂತೆ ನೋಯುತ್ತಿದೆ, ನೋಯಿಸುತ್ತಿದೆ. ಆದರೂ ಪ್ರಪಂಚ ಕುಟುಂಬವನ್ನು ಹಿಡಿದಿಡುವ ಪ್ರಯತ್ನ ಬಿಟ್ಟಿಲ್ಲ. ಅದಕ್ಕೇ ಮಾನಸಿಕ ತಜ್ಞರು ತಾವು ಸಹಾಯ ಮಾಡಲು ತಯಾರಿದ್ದೇವೆ ಎಂದು ಸಹಾಯವಾಣಿಗಳ ಮೂಲಕ ಕೂಗಿ ಹೇಳುತ್ತಿದ್ದಾರೆ. ಸಹಾಯ ಬೇಕಿದ್ದವರು ನೆವ ಹೇಳದೆ ಪಡೆಯಬೇಕಿದೆ ಅಷ್ಟೆ. 

********************************

ಲೇಖನ ಕೃಪೆ:ಮೈಸೂರಿನ ಆಂದೋಲನ ಪತ್ರಿಕೆ ಮತ್ತು ಅಸ್ಥಿತ್ವ ಲೀಗಲ್ ಬ್ಲಾಗ್ ಸ್ಪಾಟ್

2 thoughts on “ಲಾಕ್ಡೌನ್ ಕಾಲಘಟ್ಟದ ದಾಂಪತ್ಯ

  1. ಲೇಖನ ತುಂಬಾ ಚೆನ್ನಾಗಿದೆ ಮೇಡಂ.

Leave a Reply

Back To Top