ಲೇಖನ
ಪರಿಣಾಮ
ಡಾ. ಅರಕಲಗೂಡು ನೀಲಕಂಠ ಮೂರ್ತಿ


ಮನುಷ್ಯ ಸಾಮಾನ್ಯವಾಗಿ ಯಾವುದೇ ಕೆಲಸ ಮಾಡಬೇಕಾದರೆ, ಅಥವ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು, ಅದರ ಪರಿಣಾಮದ ಬಗ್ಗೆ ಖಂಡಿತ ಕೂಲಂಕುಷವಾಗಿ ಚಿಂತಿಸುತ್ತಾನೆ. ಆದರೆ ಎಂಥ ಸಂದರ್ಭಗಳಲ್ಲೂ ಸಹ ಕೆಲವರು, ಉಡಾಫೆ ಬದುಕಿನವರು, ಪ್ರಪ್ರಥಮವಾಗಿ ಆಳವನ್ನೂ ಅಂದಾಜಿಸದೆ, ನೇರ ಭಾವಿಗೇ ದಿಢೀರಂತ ಧುಮಿಕಿಬಿಡುತ್ತಾರೆ. ನಂತರ ಪರಿಣಾಮದತ್ತ ಗಮನ ಹರಿಸಿದ ಹಾಗೆ, ಕೈಕಾಲುಗಳನ್ನು ಆತುರಾತುರವಾಗಿ ಬಡಿಯತೊಡಗುತ್ತಾರೆ. ಆಗ ತುಂಬ ತಡವಾಗಿ ಪಶ್ಚಾತ್ತಾಪ ಪಟ್ಟು ಸಂಕಟದ ಕೆಸರೊಳಗೆ ಒದ್ದಾಡುತ್ತಾರೆ.
ಬಹಳ ಒಳ್ಳೆಯ, ಆದರೆ ದಿನನಿತ್ಯದ ನಮ್ಮನಿಮ್ಮೆಲ್ಲರ ನಿದರ್ಶನದಿಂದಲೇ ಆರಂಭಿಸೋಣ. ನಾವೆಲ್ಲ ಆಗಾಗ್ಗೆ ಕ್ಷೌರಕ್ಕಾಗಿ ಹೋಗುತ್ತೇವೆ. ತನ್ನ ಕಾಯಕದಲ್ಲಿ ನೈಪುಣ್ಯ ಇಲ್ಲದ ಯಡವಟ್ಟನ ಹತ್ತಿರ ಅಕಸ್ಮಾತ್ ಹೋದರೆ, ನಿಮ್ಮ ಕೂದಲನ್ನು ಕುರಿಯ ಉಣ್ಣೆ ಕೆರೆದಂತೆ, ಜೋಕರ್ ಕಟಾವು ಮಾಡಿ ಎಲ್ಲರೆದುರು ನಗೆಪಾಟಲಿಗೆ ಕಾರಣ ಮಾಡುತ್ತಾನೆ. ಏಕೆ? ನೀವು ಅಂಥ ಕಡೆ ಹೋದ ಪರಿಣಾಮ! ಆದ್ದರಿಂದ ಈ ಪರಿಣಾಮ ಎಂಬುದು ಯಕಃಶ್ಚಿತ್ ಪದವೇ ಆಗಿದ್ದರೂ, ಅದರ ಪ್ರಭಾವ ಮಾತ್ರ ಅಗಾಧ. ಎಂಥ ಅಲ್ಲೋಲಕಲ್ಲೋಲ ಸೃಷ್ಟಿಸಿ ಮುಜುಗರಕ್ಕೆ ನೂಕುತ್ತದೆ ಅಲ್ಲವೇ? ಅಲ್ಲಾರೀ, ಅದು ನೀವೇ ದಿನ ಶೇವ್ ಮಾಡುವಾಗ, ಸೈಡ್ ಬರ್ನ್ಸ್ ಅಕಸ್ಮಾತ್ ವ್ಯತ್ಯಾಸ ಆದರೆ ನಿಮಗೇ ಹಿಂಸೆ ಅಲ್ಲವೇ, ಹಾಗೆ…”Patriotism is the last refuge of a scoundrel”. “ದೇಶಭಕ್ತಿ ಅಥವ ರಾಷ್ಟ್ರಪ್ರೇಮ ಎಂಬುದು ಒಬ್ಬ ದುಷ್ಟ ಮನುಷ್ಯನ ಅಂತಿಮ ಆಶ್ರಯ”.(Scoundrel = ನೀಚ, ಲುಚ್ಚ, ದುಷ್ಟ, ದಗಾಕೋರ, ದಗಲ್ಬಾಜಿ…New Modern Dictionary; Eglish-English-Kannada) ಎಂಬ ಪ್ರಸಿದ್ಧವಾದ ಹೇಳಿಕೆ ಘೋಷಿಸಿದ್ದು ಡಾ. ಸ್ಯಾಮ್ಯುಯಲ್ ಜಾನ್ಸನ್ ಅವರು. ಅಂತಹ ವ್ಯಕ್ತಿ ಹೇಳಿದ್ದರ ಪರಿಣಾಮ ಜಗತ್ತಿನಾದ್ಯಂತ ದೇಶಭಕ್ತರು ಇಲ್ಲವೇ ಇಲ್ಲವಾಗಿಬಿಟ್ಟರೆ? ಹಾಗೇನೂ ಖಂಡಿತ ಇಲ್ಲವಲ್ಲ! ವಾಸ್ತವ ಏನೆಂದರೆ ಇನ್ನೂ ವಿಪುಲ, ಬಣ್ಣಬಣ್ಣದ ಭಕ್ತ ಶಿರೋಮಣಿಗಳೇ ಜನ್ಮ ತಾಳಿದ್ದಾರೆ; ಈಗಲೂ ಸಹ ದಿಢೀರನೆ ಕಂಡಕಂಡಲ್ಲೆಲ್ಲ ಪ್ರತ್ಯಕ್ಷ ಆಗುತ್ತಲೇ ಇದ್ದಾರೆ/ಇರುತ್ತಾರೆ. ಎಲ್ಲೆಲ್ಲೂ ಭಕ್ತಿಯ ಹೆಸರಿನ ನಾಮ ಹಚ್ಚಿಕೊಂಡ ಭಾರಿ ಭಕ್ತಿಯ “ಭುಕ್ತ”ರೂ ಅನಂತವಾಗಿದ್ದಾರೆ. ಮುಂದೂ ಇದ್ದೇ ಇರುತ್ತಾರೆ — ಭಕ್ತಿ ಅಲ್ಲವೇ? ಅದೂ ದೇಶಕ್ಕಾಗಿ!
ಪರಿಣಾಮ…?ಆ ಪ್ರಸಿದ್ಧ ಡಾ. ಜಾನ್ಸನ್ ಅವರು ಹಾಗೆ ಹೇಳಿದ್ದು ಉಪಯೋಗ ಇಲ್ಲ ಅಂತಲೇ ಅಥವ ಅಂಥ ಕೆಲಸಕ್ಕೆ ಬಾರದ ಹೇಳಿಕೆಗಳು ಯಾರಿಗೆ ಬೇಕು; ಉಪ್ಪು ಕಾರ ಹುಳಿ ಇಲ್ಲದ ಮೇಲೆ ಅಂತಲೇ?
ಹಾಗಾದರೆ ಅವರ ನಂತರ ಬಂದ ಇನ್ನೊಬ್ಬ ಮಹನೀಯರಾದ ಜಾರ್ಜ್ ಬರ್ನಾರ್ಡ್ ಷಾ ಅವರು ಜಾನ್ಸನ್ ಹೇಳಿದ್ದನ್ನೇ ಇನ್ನೂ ಉತ್ತಮ ಪಡಸಿ,”Politics is the last refuge of a scroundrel” ಅಂತ, ಅಂದರೆ, “ಒಬ್ಬ ದಗಾಕೋರನ ಅಂತಿಮ ಆಶ್ರಯ ರಾಜಕೀಯ” ಅಂದಿದ್ದರು. ಪರಿಣಾಮ! ಬರ್ನಾರ್ಡ ಷಾ ಅಂತಹ ಮಹಾನ್ ವ್ಯಕ್ತಿಯ ಉವಾಚ, ರಾಜಕೀಯಕ್ಕೇ ಯಾರೂ ಬರದ ಹಾಗೇನೂ ಮಾಡಿಲ್ಲವಲ್ಲ! ಬದಲಿಗೆ ಸ್ಕೌಂಡ್ರೆಲ್ ಗಳಿಗಾಗಿಯೇ ಮತ್ತೊಂದು ನವೀನ ನಮೂನೆಯ ಶ್ರೇಣಿಯನ್ನೇ ಸೃಷ್ಟಿಸಲಾಗಿದೆ, ಬಹುಷಃ! ಅದರಲ್ಲಿಯೂ ಅತ್ಯಂತ ಕೆಳ ಸ್ತರದ, ಅಂದರೆ ಸ್ಕೌಂಡ್ರೆಲ್ ಗಳಲ್ಲೇ ಅತ್ಯಂತ ಕೊನೆ ಬೆಂಚಿನ ಹಂತದಲ್ಲೇ ಕೂರುವ ಸ್ಕೌಂಡ್ರೆಲ್ ಅಂಥವರೇ ಈಗ ಅಧಿಕ!
ಕೌರವರೊಳ್ ಕೆಳದರ್ಜೆ ಕೌರವರಾಗಿ, ಇನ್ನೂ ಭಯಂಕರ ಆಯುಧಗಳನ್ನು ಹೆಗಲುಗಳಲ್ಲಿ ಹೊತ್ತುಕೊಂಡೇ ರಾಜಕೀಯ ಎಂಬ ಕುರುಕ್ಷೇತ್ರಕ್ಕೆ ಧುಮುಕುತ್ತಿಲ್ಲವೇ?
ಪರಿಣಾಮ? ಪಾಪ ನೊಬೆಲ್ ಪಾರಿತೋಷಕ ಪಡೆದೂ ಬರ್ನಾರ್ಡ್ ಷಾ ಅವರ ಬೆಲೆ ಕುಲಗೆಟ್ಟ ನೀರಿನಲ್ಲಿ ಅದ್ದಿ ಬಿಸಾಡಿದ ಕಳಪೆ ಡಿಗ್ರಿಗಳ ಹಾಗೇನು? ಖಂಡಿತ ಇಲ್ಲ.ಅಂದಮೇಲೆ ಈ ಪರಿಣಾಮ ಎಂಬ ಮಹಾನ್ ಮಾಂತ್ರಿಕ ‘ದಂಡ’ಕ್ಕೆ ಬೆಲೆ ಕಿಂಚಿತ್ತೂ ಇಲ್ಲ ಅಂತಲೇ? ಇದ್ದರೆ ಅದಕ್ಕೂ ಒಂದು ‘ಪರಿಮಾಣ’ ಅಂತ ಇರಬೇಕಲ್ಲವೇ?ಇಂದಿನ ಕಾಲಖಂಡದಿಂದ ಏಕದಂ ಅಂದಿನ ಮಹಾಭಾರತ ಸಂದರ್ಭದ ಶಕುನಿ ಮಹಾಶಯನ ಕೃತ್ರಿಮ ಮಾಯಾದಂಡ ಎಂಬ ಆ ಪಗಡೆ ಮತ್ತು ಅದರ ಆಟದ ಕಡೆ ಸ್ವಲ್ಪ ಹೊರಳೋಣ.
ದುರ್ಯೋಧನ ತನ್ನ ಸಾಮ್ರಾಜ್ಯದ ಮತ್ತು ಚಕ್ರಾಧಿಪತ್ಯದ ದುರಾಸೆಗೆ, ಮತ್ತದನ್ನು ಪೋಷಿಸುವ ತನ್ನ ಮಾವನ ಕುಟಿಲ ಮಾತಿಗೆ ಬದ್ಧನಾಗಿ ಪಗಡೆ ಆಟ ಆಡಲು ಪಾಂಡವರಿಗೆ ಆಹ್ವಾನ ಕಳಿಸಿದ. ಅದನ್ನು ತಿರಸ್ಕರಿಸುವ ಅಧಿಕಾರ ಸಾಮ್ರಾಟನಾಗಿದ್ದ ಧರ್ಮರಾಯನಿಗೆ ಖಂಡಿತ ಇತ್ತು. ಹಾಗಾಗಿದ್ದರೆ, ಆ ‘ಪರಿಣಾಮ’ವೇ ಬೇರೆ ಆಗುತ್ತಿತ್ತು. ಬಹುಷಃ ಯುದ್ಧ ಇಲ್ಲದೇ ಇದ್ದಿದ್ದರೆ ಆಗ ಅದು ಮಹಾಭಾರತ ಹಾಗಿರಲಿ, ಬದಲಿಗೆ ಒಂದು ಸಣ್ಣ ಭಾರತ ಕತೆಯೂ ಆಗುತ್ತಿರಲಿಲ್ಲ, ಅಲ್ಲವೇ? ಜನ ಈಗ ಹೇಗೆ ಕಪ್ಪುಬಿಳುಪು ಸಿನಿಮಾ ನೋಡಲು ನಿರಾಕರಿಸುತ್ತಾರೋ, ಹಾಗೆ ಯಾರೂ ಅದನ್ನು ರಾತ್ರಿಯೆಲ್ಲ ಕಣ್ಣಿಗೆ ಎಣ್ಣೆ ಸುರಿದುಕೊಂಡು ನೋಡುತ್ತಿರಲಿಲ್ಲ ಅಲ್ಲವೇ. ಅಷ್ಟೇ ಅಲ್ಲ; ಫೈಟಿಂಗೇ ಇಲ್ಲ ಅಂದಮೇಲೆ ಅಂಥ ಸಿನಿಮಾ ತಾನೆ ಯಾರು ಮೂಸುತ್ತಾರೆ ಅನ್ನುವ ಹಾಗೆ (ಅದು ಕನ್ನಡ ಸಿನಿಮಾದ ನಿರ್ಮಾಪಕರ ತರ್ಕ ಅನ್ನುವುದೇ ವಿಪರ್ಯಾಸ!); ಅದೇ ನೋಡಿ ಆ ಪಗಡೆಯ ‘ಮಹಾಪರಿಣಾಮ’! ಶಕುನಿಮಾವ, ದುರ್ಯೋಧನ, ದೃತರಾಷ್ಟ್ರ ಮುಂತಾದ ಇನ್ನೂ ಅನೇಕರೆಲ್ಲ ಪರಿಣಾಮಗಳ ಒಡೆಯರು! ಕುರುಕ್ಷೇತ್ರ ಯುದ್ಧದ ಫಲಿತಾಂಶವೇ ಒಡೆತನ! ಅದೇ ರೀತಿಯ ಒಡೆಯರು/ಒಡೆತನಗಳು ಪುಂಖಾನುಪುಂಖವಾಗಿ ಕಾಲಕಾಲಕ್ಕೆ ಜನುಮ ಅಂತ ತಳೆದರೆ ತಾನೆ ಇತಿಹಾಸದ ಸೃಷ್ಟಿ! ಅನೇಕ ಬಾರಿ ಅಂತಹ ಇತಿಹಾಸ ‘ಮಹಾಹಾಸ್ಯ’ ಆಗುವುದೂ ಅಥವಾ ಸುಳ್ಳುಗಳನ್ನೇ ಪೋಣಿಸಿದ ಸರಪಟಾಕಿ ಕೂಡ ಆಗುವುದು ಇರಬಹುದು…
ಪರಿಣಾಮ ಅನ್ನೋದು ಬಹುಷಃ ಮಾಯಾಚಾಪೆ ಥರ. ಮೇಲಕ್ಕೆ ಏರಿಸಲೂಬಹುದು, ಕೆಳಕ್ಕೆ ಧೊಪ್ಪಂತ ಎತ್ತಿ ಹಾಕಲೂಬಹುದು. ಹಾಗಾಗಿ ಪ್ರತಿ ಕೆಲಸದಲ್ಲೂ, ಪ್ರತಿ ಹಂತದಲ್ಲೂ ಒಂದೊಂದು ರೀತಿ ಪರಿಣಾಮದ ಪರಿಮಾಣ ಇದ್ದೇ ಇರುತ್ತದೆ. ಹಾಗಾಗಿ ಈ ಪರಿಣಾಮದ ತಕ್ಕಡಿಯಲ್ಲಿ ಯಾವುದಾದರೂ ಒಂದು ಕಡೆಗೆ ಯಕಃಶ್ಚಿತ್ ಜಾಸ್ತಿ ಆದರೂ ಆ ತಕ್ಕಡಿಯ ಪರಿಮಾಣ ವ್ಯತ್ಯಾಸವಾಗಿ ಆ ಒಂದು ಕಡೆಯ ತಟ್ಟೆ ಅಷ್ಟು ಕೆಳಕ್ಕೆ ಕುಸಿಯುತ್ತದೆ. ಆದರೆ ಅಲ್ಲಿ, ಅಂದರೆ ಆ ತಕ್ಕಡಿಯ ವಿಷಯದಲ್ಲಿ ಅದು ಕೆಳಕ್ಕಿಳಿದಷ್ಟೂ ಬೆಲೆ!
“ಬೇಡ ಬೇಡ ಅಂದರೂ ಕೇಳಲಿಲ್ಲ. ನಿಮ್ಮಂಥ ಗಂಡಸರೇ ಹಾಗೆ. ಎಲ್ಲಿ ಹೆಂಡತಿ ಮಾತು ಕೇಳಿ ಬಿಟ್ಟರೆ ತಮ್ಮ ತಲೆಮೇಲಿರೋ ಕೋಡಿಗೆ ಧಕ್ಕೆ ಆಗುತ್ತೋ ಅಂತ. ಜೊತೆಗೆ ದುರಾಸೆ ಬೇರೆ. ಹಣ ಹಣ ಹಣ ಅಂತ ಮತ್ತು ಹತ್ತಿರದ ನಂಟುಕಣೇ ಅಂತೆಲ್ಲಾ ಒಗ್ಗರಣೆ ಹಾಕಿ, ಮಗನಿಗೆ ಈ ಬೊಂಬಾಯಿ ತಂದು ಕಟ್ಟಿದಿರಿ. ಪರಿಣಾಮ ನೀವೇ ಉಣ್ಣುತ್ತಾ ಇದ್ದೀರಿ…!” ಇದು ಒಂದು ಮನೆಯ ಕಥೆ ಪರಿಣಾಮ.
ಇನ್ನೊಬ್ಬರ ಮನೇಲಿ: “ಕನ್ನಡ ಕನ್ನಡ ಅಂತ ಕನ್ನಡ ಭಕ್ತರ ಥರ ಮೇಲೆ ಕೆಳಗೆ ಕುಣಿದಿರಿ; ಈ ಸರ್ಕಾರಿ ಸ್ಕೂಲಿಗೆ ಅಷ್ಟು ಚನ್ನಾಗಿ ಓದೋ ಮಗೂನ ಸೇರಿಸಿದಿರಿ. ಪರಿಣಾಮ ನಿಮ್ಮೆದುರಿಗೇ ನರ್ತನ ಮಾಡ್ತಾ ಇದೆ ಕಣ್ತುಂಬ ನೋಡ್ಕೊಳಿ! ಕಾನ್ವೆಂಟಿಗೆ ಸೇರಿಸಿದರೆ ದುಡ್ಡು ಖರ್ಚು ಅಂದರಿ. ನೀವು ದುಡಿಯೋದಾದರೂ ಯಾರಿಗಾಗಿ…ಛೆ!”
ಮತ್ತೊಂದು ಕಡೆ: “ಸ್ವಲ್ಪ ಲಂಚ ಅಂತ ಕೊಟ್ಟರೂ ಪರವಾಗಿಲ್ಲ, ಮಗನಿಗೆ ಒಳ್ಳೆ ಕೆಲಸ ಕೊಡಿಸಿ ಅಂತ ಬೇಡ್ಕೊಂಡೆ. ಕೇಳಿದ್ರಾ, ಊಹ್ಞು! ಹರಿಶ್ಚಂದ್ರನ ಮೊಮ್ಮಗನ ಥರ ಒಂದೇ ಒಂದು ಗೆರೆ ಅಷ್ಟೂ ಮುಂದುವರೀಲಿಲ್ಲ. ಪರಿಣಾಮ ನೋಡಿ ನಿಮಗೇನೂ ಹೊಟ್ಟೇನೇ ಉರಿಯೋಲ್ಲವೆ? ಎಲ್ಲೆಲ್ಲಿಯೋ ಕೆಲಸ ಕೆಲಸ ಅಂತ ಅಲೆದೂ ಅಲೆದೂ ಸೋತು ಹೋದ ಮಗ. ನಿಮ್ಮ ಮಗಾನೇ ರೀ ಅವನು…!”
ಇಂತಹ ಪರಿಣಾಮಗಳಿಂದಾದ ಅನಂತ ವಿಧವಿಧದ ಪ್ರಭಾವಗಳು ಎಲ್ಲರ ಬದುಕಿನಲ್ಲೂ ಯಥೇಚ್ಛ!
ಈಗ ಸ್ವಲ್ಪ ವಿರುದ್ಧ ದಿಕ್ಕಿನತ್ತಲೂ ಹೊರಳೋಣ. ಅಕಸ್ಮಾತ್ ಗಂಡಸರ ಬದಲು ಹೆಂಗಸರು ದುಡಿಯುತ್ತಿದ್ದರೆ ಮತ್ತು ಮನೆಯ ರಥ ಉರುಳಿಸುವ ಕಾಯಕ ಅವರ ಕೈಲಿ ಇದ್ದಿದ್ದರೆ…ರೆ?
ಆಗ! ಒಂದು ರೀತಿಯಲ್ಲಿ ಅದು ಒಳ್ಳೆಯದೇ ಆಗುತ್ತಿತ್ತು; ಬಹುಷಃ. ಮೊದಲಿಗೆ ದಿನದಿನವೂ ‘ಬಾರ್’ ಗಾಗಿ ಅಂತ ಅಥವ ಒಂದೆರಡು ಪೆಗ್ಗು, ಗಡಂಗಿಂದ ತಂದು ಮನೆಯಲ್ಲೇ ಅಂತಲೋ, ಆ ಗಂಡು ಎಂಬ ದೈನಾಸ ಹೇಗೆ ತಾನೆ ಕುಗ್ಗಿ ಕುಗ್ಗಿ ಹೆಂಡತಿಯನ್ನ ಬೇಡುವುದು? ಮತ್ತು ಬೀಡಿ ಸಿಗರೇಟು ಮುಂತಾದ ಗತಿ? ಪೆಗ್ಗೇ ಭಿಕ್ಷೆ; ಇನ್ನು ಅದರ ಮೇಲೆ ದಮ್ಮು ಅಂತ ಬೇರೆ! ಯಾವ ಯಜಮಾನಿ ತಾನೆ ಕೊಟ್ಟುಬಿಡ್ತಾಳೆ? ಪರಿಣಾಮ ಅಲ್ಲಿ ಆಗಾಗ ಉಳಿತಾಯ – ಅದು ಎಷ್ಟೇ ಕನಿಷ್ಠ ಇರಲಿ. ಅಷ್ಟೇ ಅಲ್ಲ; ಕಳಸಪ್ರಾಯದಂತೆ ಯಾವ ಯಜಮಾನಿ ಹೆಣ್ಣು ತಾನೆ ಬಾರಿಗೆ ಹೋಗುವಳು? ಅಲ್ಲೂ ಉಳಿತಾಯ! ಇತ್ತೀಚೆಗೆ ಈ ಸ್ತರದಲ್ಲಿ ಸಹ ವಿಮೋಚನೆಯ ಹವಾ ಬೀಸಿ ಬೀಸಿ ಆನಂದ ಆಗ್ತಾ ಇದೆ! ಅದು ಬೇರೆ ಮಾತು; ಲಿಬರೇಷನ್ ಕಾಂಡ!
ಆದರೆ…ಹೌದು, ಹಾಗಂತ ಅವರೇನೂ ಅವರ ಗಂಡುಮಕ್ಕಳ ಮದುವೆಯ ವರದಕ್ಷಿಣೆಗೆ ಕೈ ಒಡ್ಡುತ್ತಿರಲಿಲ್ಲವೇ? ಮಿಲಿಯನ್ ಡಾಲರ್ ಪ್ರಶ್ನೆ! ಹೆಣ್ಣಾದರೇನು ಗಂಡಾದರೇನು ದುಡ್ಡು ಇಬ್ಬರಿಗೂ ದೊಡ್ಡ ಡ್ಯಾಡೀನೇ ತಾನೇ! ಅಂತೆಯೇ ಮಕ್ಕಳ ಕೆಲಸಕ್ಕೆ ಲಂಚ, ಪ್ರೈವೇಟ್ ಶಾಲೆ ಫೀಸು, ಮುಂತಾಗಿಯೂ ಖಂಡಿತ ಇದ್ದರೂ ಇರಬಹುದು. ಉತ್ತಮತೆಗಾಗಿ ಈಗ ಹೆಂಗಸು ಸದಾ ಸನ್ನದ್ಧ!
ಹಾಗಂತ ಅವರಿಗಾಗಿ ಒಳ್ಳೊಳ್ಳೆ ಬಟ್ಟೆ, ಚಿನ್ನಗಿನ್ನ, ವೈನಾದ ಲಿಪ್ ಸ್ಟಿಕ್ಕು, ಅತ್ಯುತ್ತಮ ವಾಸನೆಯ ಇಂಪೋರ್ಟೆಡ್ ಪರ್ಫ್ಯೂಮ್, ಸಾಕಷ್ಟು ಎತ್ತರಕ್ಕೆ ಎತ್ತುವ ಹೈ ಹೀಲ್ಡ್ ಎಕ್ಕಡಗಳು ಇನ್ನೂ ಮುಂತಾಗಿ ಕೊಳ್ಳುತ್ತಿರಲಿಲ್ಲವೇ… ಮನೆ ಯಜಮಾನಿ ಬೇರೆ, ಅಲ್ಲದೆ ಹೊರಗೆ ದುಡಿಯೋ ಹಂಗಸು ಅಂದಮೇಲೆ ಎದ್ದು ಕಾಣೋ ಥರ, ಬೇರೆ ಬೇರೆ ಭುಜಗಳ ಮೀರಿ ನಡೆಯೋ ಥರ ಇರಲಿಲ್ಲ ಅಂದರೆ ಆ ಮನೆಯ ಗಂಡಸಿಗೇ ಅವಮಾನ ಅಲ್ಲವೇ…?
ನೋಡಿ ಇಲ್ಲೂ ಸಹ ಪರಿಣಾಮ ಎಂಥದ್ದು ಅಂತ ತೋರಿಸಿಕೊಟ್ಟಿದೆ. ಇಲ್ಲಿ ಸಹ ತಮ್ಮ ಗಂಡಸರ ಮರ್ಯಾದೆ ಬಗ್ಗೆ ಕಾಳಜಿ! ಹ್ಞಾ, ಇನ್ನೊಂದು ಮಾತು; ಮಕ್ಕಳ ಬಟ್ಟೆ ಮತ್ತು ಅವರ ಮೇಕಪ್ ಕಡೆ ಕೂಡ ಹೆಂಗಸರದೇ ಮಿತಿಮೀರಿದ ಮುತುವರ್ಜಿ…!ಕೊನೆಯಲ್ಲಿ ಪರಿಣಾಮ ಎಂಬ ನಾಣ್ಯದ ಮತ್ತೊಂದು, ಕಾರಾಳ ಹಾಗೂ ರಕ್ಕಸ ಮುಖದತ್ತ:
ಹೌದು ನಮ್ಮ ನಮ್ಮ ಬದುಕಿನಲ್ಲಿ ಬಂದೊದಗುವ ನತದೃಷ್ಟ ದುಷ್ಪರಿಣಾಮಗಳ ಹಾಗೆಯೇ ಜಗತ್ತಿಗೂ, ಹಾಗಾಗಿ ಆ ಮೂಲಕ ಜಗದೆಲ್ಲ ಜೀವಿಗಳ ಮೇಲೂ, ಸಸ್ಯ, ಮತ್ತಿತರ ಪ್ರಾಣಿ, ಜಂತುಗಳ ಮೇಲೂ, ದುರ್ಘಟನೆಗಳಿಂದ ಅಸಂಖ್ಯ ರೀತಿಯಲ್ಲಿ ಹಾನಿಕಾರಕ ಪರಿಣಾಮಗಳು ಆಗಾಗ ಜರುಗುತ್ತಲೇ ಬಂದಿವೆ…ಸಾವಿರದ ಒಂಭೈನೂರ ಹದಿನೆಂಟರಿಂದ ಇಪ್ಪತ್ತರಲ್ಲಿ ಜಗತ್ತನ್ನು ಆವರಿಸಿದ್ದ ಸ್ಪ್ಯಾನಿಷ್ ಫ್ಲೂ ಸರಿಸುಮಾರು ಐದು ಕೋಟಿಯಷ್ಟು ಜನರ ಬಲಿ ತೆಗೆದುಕೊಂಡಿತ್ತು ಎಂದು ಅಂದಾಜಿಸಲಾಗಿದೆ. ಎಂಥ ಸಂಕಷ್ಟದ ಪರಿಣಾಮವನ್ನು ಅಂದಿನ ಜನ ಅನುಭವಿಸಿರಬಹುದು!
ಹೀಗೆಯೇ ಪ್ಲೇಗ್ ಮಹಾಮಾರಿಗಳು, ಪಶ್ಚಿಮ ಆಫ್ರಿಕಾದ ಎಬೋಲೋ ವೈರಸ್, ನಂತರದ ಜೀಕಾ ವೈರಸ್! ಇವುಗಳ ಜೊತೆಜೊತೆಗೇ ಆಳುವವರ ದರ್ಪದ ಕಠಿಣ ಶಿಕ್ಷೆಗಳು, ಯುದ್ಧಗಳು, ಒಂದ ಎರಡ… ಮಹಾಯುದ್ಧಗಳಲ್ಲದೆ ಇನ್ನೂ ಅನೇಕ! ಇದೀಗ ನಮ್ಮನ್ನು ಅರೆಯುತ್ತಿರುವ ಈ ಕರೋನ ಮಹಾಮಾರಿ! ಅದರ ಪರಿಣಾಮ ನಾವು ದಿನನಿತ್ಯ ಕಾಣುತ್ತಿರುವ ಈ ಸಾವು ನೋವು. ಈಗ ಶವಗಳೂ ಕ್ಯೂ ನಲ್ಲಿ ಮಲಗಿ ಅಂತಿಮ ಘಳಿಗೆಗಾಗಿ ಕಾಯುವ ವಿಪರ್ಯಾಸ! ಇಷ್ಟಾದರೂ ಯಾವ ಪರಿಣಾಮಕ್ಕೂ ತಲೆ ಕೆಡಿಸಿಕೊಳ್ಳದೆ ಮಾಸ್ಕ್ ಇಲ್ಲದೇ ಓಡಾಡುವ ಅನಂತ ಬೇಜವಾಬ್ದಾರಿ ಜನ! ಇಂಥವರಿಗೆ ಆಸ್ಪತ್ರೆಗಳ, ಮಸಣಗಳ ದರ್ಶನ ಮಾಡಿಸಬೇಕು; ಅಮೆರಿಕದಲ್ಲಿ ದೊಡ್ಡದೊಂದು ಗುಂಡಿ ಅಗೆದು ಹೆಣಗಳ ರಾಶಿ ರಾಶಿ ಬಿಸಾಡಿದ ಕಂಡರಿಯದಿದ್ದಂತಹ ದೃಷ್ಯ ತೋರಿಸಬೇಕು…ಕನಿಷ್ಠ ತಮ್ಮ ಸಹಜೀವಿಗಳ ಇರುವಿಕೆಯ ಕಾಳಜಿಗಾಗಿ! ಇಂಥವರ ಮಧ್ಯೆ ಬದುಕು ಎಷ್ಟು ಹಿಂಸೆ…
ಇದೆಲ್ಲದರ ಪರಿಣಾಮದ ಬಗ್ಗೆ ಯೋಚಿಸಿದಾಗ, ಭೂಮಿ ಎಗ್ಗಿಲ್ಲದೆ ತದೇಕ ಏರುವ ತನ್ನ ಭಾರ (ಅಥವ ಏರಿಸುತ್ತ ಮೈಮರೆತ ಮಾನವನಿಗೆ ಪರಿಣಾಮದ ಬೋಧನೆ ಮಾಡಲೋ ಎಂಬಂತೆ) ಇಳಿಸಿಕೊಳ್ಳುವ ಸಲುವಾಗಿ ಹೀಗೆ ಮಾರಣಹೋಮ ಮಾಡಿ ಅಕ್ಷರಸಹ ತನ್ನನ್ನು ತಾನು ಹಗುರ ಮಾಡಿಕೊಳ್ಳುವುದೋ, ಹೇಗೆ…?
ಜೀವಿಗಳು ಇತರ ಜೀವಿಗಳನ್ನು ಹತಗೈದು ತಿಂದು ಜೀವಿಸುವುದೂ ಈ ಪ್ರಕೃತಿಯ ನಿಯಮ; ಭೂಮಿಯ ಭಾರ ಇಳುಕಲು ಇದೂ ಅಂಥ ಕೊಡುಗೆ ಅನ್ನಿಸುವುದಿಲ್ಲವೇ? ಮಾನವನೇ ತನ್ನ ಆಹಾರಕ್ಕಾಗಿ ಎಷ್ಟೊಂದು ಪ್ರಾಣಿಗಳನ್ನು ತದೇಕ ಈ ಭೂಮಿಯಿಂದ ಇಲ್ಲವಾಗಿಸುತ್ತಾನೆ, ಯೋಚಿಸಿ! ಇದೆಲ್ಲ ಈ ಭೂಮಿಯ ಸಮತೋಲ ಕಾಪಾಡಲು ನಿಸರ್ಗ ಹಿಡಿದಂಥ ತಕ್ಕಡಿಯ ಪರಿಣಾಮವೋ!
ಅಂತ್ಯಕ್ಕೆ ಒಂದು ವಿಚಿತ್ರ ಮತ್ತು ಗಾಬರಿ ಹುಟ್ಟಿಸುವ ಅನಿಸಿಕೆ: ನಾಗರಿಕತೆಯ ಉಗಮದಿಂದ ಈ ತನಕ ಎಲ್ಲ ರೀತಿಯ ರೋಗ ರುಜಿನ, ಸಾಂಕ್ರಾಮಿಕಗಳಿಂದ, ಮಾನವ/ಪ್ರಾಣಿ ಕ್ರೌರ್ಯದಿಂದ, ಎಲ್ಲ ಥರದ ಜಗಳ, ಹೋರಾಟ, ಕ್ರಾಂತಿ ಹಾಗೂ ಯುದ್ಧಗಳಿಂದ ಅಳಿದುಹೋದ ಅಷ್ಟೂ ಜನಸಮೂಹವೂ, ಯಾವ ತಕರಾರಿಲ್ಲದ ಹಾಗೆ ಅವರವರ ಪೂರ್ಣ ಆಯಸ್ಸು ಬದುಕಿದ್ದಿದ್ದರೆ… ಮತ್ತು ಅವರೆಲ್ಲರ ಸಂತಾನ ಸಂಕಲನಗಳೂ ಒಟ್ಟೊಟ್ಟು ಸೇರಿದ್ದರೆ ಈ ಭೂಮಾತೆಯ ಗತಿಸ್ಥಿತಿ…ಆಹಾ…
ಮಾಲ್ತೂಸಿಯನ್ ಮುಂತಾದವರು ಪ್ರತಿಪಾದಿಸಿದ್ದ ಜನಸಂಖ್ಯಾ ನಿರೋಧದ ತರ್ಕಶಾಸ್ತ್ರದ ‘ಪರಿಣಾಮ’ ಏನಾಗುತ್ತಿತ್ತೋ ಆಗ…?
***********************