ಅಂಕಣ ಬರಹ

ಕಾಲೆಳೆವ ಕೈಗಳೇ ಮೆಟ್ಟಿಲಾಗಲಿ

Frog, Green, Leaf, Frog, Frog, Frog

    ಸಾಮಾನ್ಯವಾಗಿ ಕಾಲೆಳುವುದು ಅಥಬಾ ಲೆಗ್ ಪುಲ್ಲಿಂಗ್ ಎಂದರೆ ಕೀಟಲೆ ಮಾಡುವುದು ಅಥವಾ ಇಲ್ಲದ್ದನ್ನು ಇದೆ ಎಂದು ತಮಾಷೆಗಾಗಿ ನಂಬಿಸುವುದು ಎಂದರ್ಥವಿದೆ. ಆದರೆ ಇಲ್ಲಿ ಕಾಲೆಳುವುದೆಂದರೆ ಹಗುರ ಅರ್ಥದಲ್ಲಿ ಇಲ್ಲ. ಮುನ್ನಡೆವವನ ದಾರಿಗೆ ಅಡ್ಡ ಹಾಕುವುದಿ ಎಂಬರ್ಥದಲ್ಲಿ ಬಳಸಲಾಗಿದೆ.

ಬಹಳ ಹಿಂದೆ ಕೇಳಿದ್ದ ಕಥೆಯೊಂದು ನೆನಪಾಗುತ್ತಿದೆ. ಒಂದು ಕಾಡಿನಲ್ಲಿ ಒಂದು ಬಾವಿ. ಆ ಬಾವಿಯಲ್ಲಿ ನೂರಾರು ಕಪ್ಪೆಗಳು. ಬಾವಿಯನ್ನೇ ಪ್ರಪಂಚವೆಂದುಕೊಂಡು ನೆಮ್ಮದಿಯಿಂದಿದ್ದವು. ಒಮ್ಮೆ ಅಲ್ಲಿದ್ದ ಒಂದು  ಕಪ್ಪೆಗೆ ಯಾಕೋ ಆ ಬಾವಿಯ ಜಗತ್ತು ಬೇಸರವೆನಿಸಿ ಒಂದು ಬಾರಿಯಾದರೂ ಹೊರಗೆ ಹೋಗಿ ನೋಡಬೇಕೆನಿಸಿತಂತೆ. ಸರಿ ಅದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡತೊಡಗಿತು. ಇಷ್ಟಿಷ್ಟೇ ಎತ್ತರಕ್ಕೆ ಜಿಗಿಯುತ್ತ ಜಿಗಿಯುತ್ತಾ ಹೊರಗೆ ಹಾರಲು ಅಭ್ಯಾಸ ಮಾಡಿಕೊಳ್ಳತೊಡಗಿತು. ಉಳಿದ ಕಪ್ಪೆಗಳು ಮೊದ ಮೊದಲು ಆಶ್ಚರ್ಯದಿಂದ ಅದನ್ನೇ ಗಮನಿಸುತ್ತಿದ್ದವು ನಂತರ ತಾವೂ ಹಾರಲು ಪ್ರಯತ್ನ ಮಾಡತೊಡಗಿದವಂತೆ. ಆದರೆ ಯಾವಾಗ ಅವುಗಳಿಗೆ ಆ ಕಪ್ಪೆ ಬಾವಿಯಿಂದ ಹೊರಗೆ ಹೋಗಲು ಪ್ರಯತ್ನ ಮಾಡುತ್ತಿದೆಯೆಂದು ತಿಳಿಯಿತೋ ಆ ಕ್ಷಣದಿಂದಲೇ ಆ ಕಪ್ಪೆ ಮೇಲೆ  ಜಿಗಿಯಲು ಹೋದರೆ ಅದರ ಕಾಲೆಳೆದು ಕೆಳಗೆ ಬೀಳಿಸತೊಡಗಿದವು. ಪ್ರತೀ ಬಾರಿ ಆ ಕಪ್ಪೆ ಮೇಲೆ ಜಿಗಿಯಲು ಪ್ರಯತ್ನಿಸುವುದು, ಪ್ರತೀ ಬಾರಿ ಉಳಿದ ಕಪ್ಪೆಗಳು ಅದರ ಕಾಲೆಳೆದು ಕೆಳಗೆ ಬೀಳಿಸುವುದು…ಕೊನೆಗೂ ಆ ಕಪ್ಪೆಗೆ ಬಾವಿಯಿಂದ ಹೊರಬರಲಾಗದೆ ಅದು ಕೊನೆಯವರೆಗೂ ಕೂಪ ಮಂಡೂಕವೇ ಆಗಿ ಜೀವನ ಸವೆಸಬೇಕಾಯಿತಂತೆ…

       ಇದು ಈ ಕಥೆಯ ಹಳೆಯ ವರ್ಷನ್ ..ಹೊಸ ವರ್ಷನ್ ನಲ್ಲಿ ಆ ಕಪ್ಪೆ  ತನ್ನ ಕಾಲೆಳೆವ ಇತರ ಕಪ್ಪೆಗಳ  ಕೈಗಳ ಮೇಲೆ ಬೆನ್ನ ಮೇಲೆ ಜಿಗಿ ಜಿಗಿದು ಆ ಬಾವಿಯಿಂದ ಹೊರಜಿಗಿದು ವಿಶಾಲ ಜಗತ್ತಿಗೆ ಬಂದಿತಂತೆ..

              ಕಾಲೆಳೆಯುವುದೂ ,ಕಾಲೆಳೆಸಿಕೊಳ್ಳುವುದೂ ಬರೀ ಮನುಷ್ಯವರ್ಗಕ್ಕಷ್ಟೇ ಸೀಮಿತವಾಗಿಲ್ಲ ಎನ್ನುವುದನ್ನ ಹೇಳುವ ಈ ಕಥೆ ಕಾಲೆವ ಕೈಗಳ ಬಗ್ಗೆ ಎಚ್ಚರಿಕೆಯನ್ನೂ ಕೊಡುತ್ತದೆ. ಏನಾದರೂ ಹೊಸತನ್ನು ಆಲೋಚಿಸುವ , ಮಾಡ ಬಯಸುವ ವ್ಯಕ್ತಿಗೆ ಸುತ್ತಮುತ್ತಲ ಜನರಿಂದ ಪ್ರೋತ್ಸಾಹ ಎಷ್ಟು ಸಿಗುತ್ತದೋ ಅದರ ಎರಡರಷ್ಟು ಕುಹಕ, ಕೊಂಕುಗಳೂ ,ಅಡ್ಡಿ ಆತಂಕಗಳೂ ಎದುರಾಗುತ್ತವೆ. ಮಾತೆ ಸಾವಿತ್ರಿ ಬಾಯಿ ಫುಲೆಯವರು ಅಕ್ಷರ ಕಲಿತು ಇನ್ನಿತರ ಮಹಿಳೆಯರಿಗೆ ಅಕ್ಷರ ಕಲಿಸಲು ಹೋದಾಗ ಅವರದೇ ಸುತ್ತಮುತ್ತಲಿದ್ದ ಜನರು ಹೇಗೆಲ್ಲಾ ಅವರ ಹಾದಿಯಲ್ಲಿ ತಡೆಯಾದರು .ಹೇಗೆ ಆ ಮಾತೆ ಎಲ್ಲವನ್ನೂ ಎದುರಿಸಿ ತನ್ನ ಗುರಿ ತಲುಪಿದರು ಎನ್ನುವುದು ಜಗತ್ತಿಗೆ ಗೊತ್ತಿರುವ ಸಂಗತಿ.

          ನಾವು ಕೆಲಸ ಮಾಡುವ ಸ್ಥಳವನ್ನೇ ತೆಗೆದುಕೊಳ್ಳೋಣ . ನಮಗೊಪ್ಪಿಸಿದ ಕೆಲಸವನ್ನು ಹೊಸರೀತಿಯಲ್ಲಿ ಮಾಡಲು ಹೋದಾಗ ಓ.ಇವರೇನು ಮಹಾ ಮಾಡುವುದು ನಾವು ಮಾಡದ್ದನ್ನ ಎನ್ನುತ್ತಲೇ   ನಿಮಗಿಲ್ಲಿನ ಸಂಗತಿ ಗೊತ್ತಿಲ್ಲ ಬಿಡಿ ..ನಾವು ನಿಮಗಿಂತ ಹಳಬರು ಇದೆಲ್ಲಾ ಮಾಡಿ ಕೈ ಬಿಟ್ಟಾಯಿತು..ಸುಮ್ಮನೇ ಯಾಕೆ ಕಷ್ಟಪಡುತ್ತೀರಿ..ನಮ್ಮಂತಿರಿ ಎನ್ನುವ  ಉಚಿತ ಉಪದೇಶದ ಜೊತೆಗೇ ತಮ್ಮಲ್ಲಿನ ಅಸಹನೆ , ಅಸಡ್ಡೆಗಳಿಂದ ಕಾಲೆಳೆಯತೊಡಗುವುದು ತೀರಾ ಸಹಜವಾಗಿಬಿಟ್ಟಿದೆ.

           ಹೆಣ್ಣು ಬಹುಶಃ ಮೊದಲ ಬಾರಿ ಮನೆಯಿಂದ ಹೊರ ಹೆಜ್ಜೆ ಇಟ್ಟಾಗಲೂ ಅದೆಷ್ಟೋ ಕೈಗಳು ಆಕೆಯ ಕಾಲೆಳೆಯಲು ಅಷ್ಟೇ ಏಕೆ ಕಾಲು ಮುರಿಯಲೂ ಪ್ರಯತ್ನಿಸಿರಲಿಕ್ಕಿಲ್ಲ ! ಅಕ್ಕ, ಭಕ್ತೆ ಮೀರಾ ಇವರೆಲ್ಲಾ ಕಾಲೆಳೆವವರ ನಿರ್ಲಕ್ಷಿಸಿ ಹೊರಟಾಗಲೇ ತಮ್ಮ ಗಮ್ಯ ಸೇರಲಾಗಿದ್ದು.

              ಕಾಲೆಳೆವ ಕೈಗಳಿಗೆ ಶರಣಾದರೆ ಅಲ್ಲಿಗೆ ನಮ್ಮ ಪಯಣ ಮುಗಿದಂತೆಯೇ ಸರಿ. ಸಾಗುವ ಹಾದಿ ಸರಿಯಿದೆ ,ಅದರಿಂದ ಯಾರಿಗೂ ತೊಂದರೆ ಆಗಲಾರದ ದೃಢ ವಿಶ್ವಾಸವಿದ್ದಲ್ಲಿ ಯಾವ ಕೈಗಳಿಗೂ ಅದನ್ನು ತಡೆಯಲು ಸಾಧ್ಯವಿಲ್ಲ.

    ಮುನ್ನಡೆವವರ ಕಾಲೆಳೆವುದರಲ್ಲಿ , ಬೀಳಿಸಿ ಬಿದ್ದಾಗ ನೋಡಿ ನಗುವುದರಲ್ಲಿ ಹೆಚ್ಚುಗಾರಿಕೆಯೇನಿಲ್ಲ. ಆದರೆ ಮುನ್ನಡೆವವನಿಗೆ ಈ ಕೈಗಳು ಬಂಧನವಾಗಬಾರದು. ಬದಲಿಗೆ ಪ್ರೇರಣೆಯಾಗಬೇಕು. ಮುನ್ನುಗ್ಗುವ ಛಲ ಮೂಡಿಸಬೇಕು.ಕಾಲೆವ ಕೈಗಳಿಗೆ ,ಮನಸುಗಳಿಗೆ ಆಯಾಸವಾಗಿ ಹಾಗೇ ಪಕ್ಕಕ್ಕೆ ಒರಗುವಂತಾಗಬೇಕು..

 ಹಾಗಾಗಿಯೇ…

       ಅವರಿವರ ಕಾಲೆಳೆದು ಮೇಲೇರುವುದ

ತಡೆದು ಬೀಗುವುದು ತರವಲ್ಲವಯ್ಯ

ಕಾಲೆಳೆವಕೈಯನೇ ಮೆಟ್ಟಿಲಾಗಿಸಿ ಮೇಲೇರುವರಿಹರು

ಕಾಲೆಳೆದವನೀನುಕೂಪದಲೆಕೊಳೆವೆ ನೋಡಯ್ಯ

                ಎನ್ನುವಂತೆ ಕಾಲೆಳೆವ ಕೈಗಳನ್ನೇ ಮೇಲೇರುವ ಮೆಟ್ಟಿಲಾಗಿಸಿಕೊಳ್ಳುವ ಚಾಕಚಕ್ಯತೆ ನಮಗಿರಬೇಕು.  

    Obstacles are stepping stones , not stopping stones.

              ಕೂಪಮಂಡೂಕಗಳಿಗೆ ಆ ಕೂಪವೇ ಜಗತ್ತು.ತಾವು ಅದರಿಂದಾಚೆಗೆ ಹೋಗಲು ಪ್ರಯತ್ನಿಸುವುದಿಲ್ಲ ಇತರರನ್ನೂ ಹೋಗಲು ಬಿಡುವುದಿಲ್ಲ.  ಹೀನ ಸಂಪ್ರದಾಯಗಳು  ,ಮೂಢನಂಬಿಕೆ , ಅರ್ಥವಿಲ್ಲದ ಕಟ್ಟುಪಾಡುಗಳು ಈ ಸಮಾಜದಲ್ಲಿ ಸದಾ ಇದನ್ನೆಲ್ಲ ಮೀರಿ ಹೋಗುವವರ ಸಹಿಸಲಾಗದೆ ಮತ್ತೆ ಮತ್ತೆ ಕೆಳಗೆಳೆಯುತ್ತಲೇ ಇರುತ್ತವೆ. ಅಸಹನೆ, ಅಸಹನೆ, ಕುಹಕ ,ಮತ್ಸರ, ವಿಕೃತಮನೋಭಾವಗಳೆಂಬ ಕಾಲೆಳೆವ ಕೈಗಳಿಗೆ ಬಲಿಯಾದರೆ ಅಲ್ಲಿಗೆ ಕಥೆ ಮುಗಿದಂತೆಯೇ..

       ಅದರಲ್ಲಿಯೂ ಹೆಣ್ಣುಮಕ್ಕಳೇ ಹೆಚ್ಚಾಗಿ ಈ ಕಾಲೆಳೆಯುವಿಕೆಗೆ ಬಲಿಯಾಗುವುದು.ಆದಿ ಕಾಲದಿಂದಲೂ ಅವಳನ್ನು ಸಂಕೋಲೆಗಳಲ್ಲಿ ಕಟ್ಟಿ ಹಾಕಿದ್ದಾಗಿದೆ.ಈಗ ಈ ಆಧುನಿಕ ಜಗತ್ತಿನಲ್ಲಿ ಹೆಣ್ಣುಗಳು ತಮ್ಮ ಬುದ್ಧಿಶಕ್ತಿ , ಚಾಕಚಕ್ಯತೆಗಳನ್ನುಪಯೋಗಿಸಿ

ಕೊಂಡು ಎಲ್ಲಾ ಅಡೆತಡೆಗಳನ್ನೂ ಮೀರಿ  ಎಲ್ಲಾ ರಂಗಗಳಲ್ಲಿಯೂ ತಮ್ಮ ಹೆಜ್ಜೆಯೂರುತ್ತಿರುವಂತಹಾ ಸಂದರ್ಭದಲ್ಲಿಯೂ ಸಹಾ ಅವರನ್ನು ಪ್ರೋತ್ಸಾಹಿಸುವವರಂತೆಯೇ  ಹೀಯಾಳಿಸುವ ,ಆತ್ಮ ಸ್ಥೈರ್ಯ ಕುಗ್ಗಿಸುವ ಮನೋಭಾವವನ್ನು ತಮ್ಮ ಮಾತು ಮತ್ತು ಕೃತಿಗಳಲ್ಲಿ ತೋರಿಸುತ್ತಾ ಕಾಲೆಳೆವವರೂ ಇದ್ದಾರೆ.

         ಆನೆಯೋ ಸಿಂಹವೋ ತನ್ನ ಹಾದಿಯಲ್ಲಿ ತಾನು ನಡೆಯುತ್ತಿದ್ದರೆ ಅವನ್ನು ತಡೆದು ನಿಲ್ಲಿಸಲು ಸಾಧ್ಯವಿದೆಯೆ? ನಮ್ಮ ನಿಲುವೂ ಅದೇ ಆಗಿದ್ದರೆ ಖಂಡಿತಾ ಕಾಲೆಳೆವ ಕೈಗಳು ಸೋಲುತ್ತವೆ ಮತ್ತು ಸೋಲಲೇ ಬೇಕು.

                 ನಮ್ಮ ಹಾದಿಯಲ್ಲಿ ನಾವು ಆತ್ಮವಿಶ್ವಾಸದಿಂದ ಸಾಗೋಣ. ಕಾಲೆಳೆವ ಕೈಗಳ ಸೋಲಿಸೋಣ. ಗೆಲುವಿನ ಹಾದಿಯಲಿ  ಹೆಜ್ಜೆಯಿರಿಸುತ್ತ  ದೃಢತೆಯೆಂಬ ಹಣತೆಯ ಬೆಳಕನ್ನು ಹರಡೋಣ

***********************************

                                   ಶುಭಾ ಎ.ಆರ್  (ದೇವಯಾನಿ)  –

ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ    

3 thoughts on “

  1. ಕಾಲದೊಂದಿಗೆ ಬದಲಾವಣೆ ಸಾಧ್ಯವಾಗುತ್ತಿದೆ.ಆದರೆ ತೀವ್ರ ಸ್ಪರ್ಧೆ ಕೂಡ ಕಾಲೆಳೆಯುವವರ ಸಂಖ್ಯೆಯನ್ನು ಹೆಚ್ಚಿಸುತ್ತಲಿದೆ….
    ಅದಿರಲಿ.
    ಮನೋಸ್ಥೈರ್ಯ ಉಳಿಸಿಕೊಂಡು ಸಾಗುವುದೊಂದೇ ದಾರಿ ಎಂಬ ನಿಮ್ಮ ಸೂಚನೆಯೇ ಇದಕ್ಕೆ ಒಂದು ಮಹತ್ವದ ಪರಿಹಾರ.
    ಒಳ್ಳೆಯ ಲೇಖನ. ಅಭಿನಂದನೆ.

  2. ಬರಹದ ಪ್ರಾಮಾಣಿಕತೆಯೇ ಅದರ ಆಕರ್ಷಣೆ. ಸಣ್ಣದು,ಹಳೆಯದು ಎಂಬ ಮಾತು ಇಂತಹ ಪಡೆನುಡಿಗಳಿಗೆ ಅನ್ವಯವಾಗುವುದಿಲ್ಲ.ಬಾವಿಯ ಕಪ್ಪೆಯ ಅರ್ಥ,ಆಶಯಗಳು ಕಾಲಾತೀತ.ಎಂದಿಗೂ ಪ್ರಸ್ತುತ.
    ಅನ್ವಯಿಸಿಕೊಳ್ಳುವ ಮಹತ್ವ ತಿಳಿಸಿದ ರೀತಿ ಸಹಜವಾಗಿದೆ……

    1. ನಿಮ್ಮ ಈ ಪ್ರತಿಕ್ರಿಯೆಗಳು ನಿಜವಾಗಲೂ ಪ್ರೋತ್ಸಾಹಿಸುತ್ತಿವೆ ಸರ್…ಎಂತವರುಗಾದರೂ ಬೆನ್ನು ತಟ್ಟುವ ಒಂದು ಕೈ ,ಸಾಂತ್ವನ ಹೇಳುವ ಒಂದು ಮನಸ್ಸು ಬೇಕಿರುತ್ತದೆ

Leave a Reply

Back To Top