ದಾರಾವಾಹಿ-

ಅದ್ಯಾಯ-12

Woman's body in hosp morgue handed over to another family in Gujarat's  Ahmedabad- The New Indian Express

ತನ್ನ ಕುತಂತ್ರಕ್ಕೆ ಬಲಿಯಾಗಿ ಬೀದಿ ಬಿಕಾರಿಯಾದ ಸಂತಾನಪ್ಪ, ಇಂದಲ್ಲ ನಾಳೆ ರಾತ್ರೋರಾತ್ರಿ ಊರು ಬಿಟ್ಟೇ ಓಡಿ ಹೋಗುತ್ತಾನೆ ಅಥವಾ ಮುಂಚಿನಂತೆಯೇ ಬಾಲ ಮುದುರಿ ಕೂಲಿನಾಲಿ ಮಾಡಿಕೊಂಡು ಬದುಕುತ್ತಾನೆ ಎಂದು ಭಾವಿಸಿದ್ದ ಶಂಕರನ ಯೋಚನೆಯು ಪರಮೇಶನ ಬಿಸಿಬಿಸಿ ಸುದ್ದಿಯಿಂದ ಪೂರ್ತಿ ತಲೆಕೆಳಗಾಗಿಬಿಟ್ಟಿತು. ಬಯಲುಸೀಮೆಯ ಒಣಹವೆಯನ್ನೂ ಖಡಕ್ ಜೋಳದ ರೊಟ್ಟಿಯೊಂದಿಗೆ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯಂಥ ವ್ಯಂಜನವನ್ನು ಜಜ್ಜಿ ಜಗಿದುಣ್ಣುತ್ತ ಒರಟು ಮಂದಿಯ ನಡುವೆ ಹುಟ್ಟಿ ಬೆಳೆದ, ಆರಡಿ ಎತ್ತರದ ಆಜಾನುಬಾಹು ಸಂತಾನಪ್ಪ ಬಡತನದ ಬೇಗೆಯಿಂದ ಮುಗ್ಧ ಪ್ರಾಣಿಯಂತೆ ವಿನಯದ ಮುಖವಾಡ ತೊಟ್ಟು ಬದುಕುತ್ತಿದ್ದನೇ ಹೊರತು ಅಸಾಮಾನ್ಯ ಧೈರ್ಯ ಕ್ರೌರ್ಯಗಳು ಅವನ ರಕ್ತದಲ್ಲೇ ಮಡುಗಟ್ಟಿದ್ದವು ಎಂಬ ಸಂಗತಿಯನ್ನು ತಿಳಿಯುವ ಚಾತುರ್ಯ ಶಂಕರನಲ್ಲಿರಲಿಲ್ಲ. ಒಬ್ಬಿಬ್ಬರು ಗಟ್ಟಿಯಾಳುಗಳಿಂದ ಸದೆಬಡಿಯಲಾಗದಷ್ಟು ಬಲಿಷ್ಠ ಆಸಾಮಿಯಾಗಿದ್ದ ಸಂತಾನಪ್ಪನಿಗೆ ತನ್ನ ಶಕ್ತಿ ಸಾಮಥ್ರ್ಯದ ಮೇಲೆ ಸಂಪೂರ್ಣ ವಿಶ್ವಾಸವಿತ್ತು. ಹಾಗಾಗಿಯೇ ಇಂದು ಒಬ್ಬಂಟಿಯಾಗಿ ಶಂಕರನ ಹುಟ್ಟಡಗಿಸಲು ಹೊರಟಿದ್ದ. ಅದಕ್ಕೆ ಸರಿಯಾಗಿ ಅಂದು ರಾತ್ರಿ ಹತ್ತು ಗಂಟೆಯ ಹೊತ್ತಿಗೆ ತನ್ನಿಬ್ಬರು ಆಳುಗಳಿಂದ, ‘ಶಂಕರಣ್ಣ, ಅವನ ಒಬ್ಬ ಸ್ನೇಹಿತನೊಂದಿಗೆ ಸಿಟಿ ಬಸ್ಸು ನಿಲ್ದಾಣ ಸಮೀಪದ ಪಾಳು ಬಿಲ್ಡಿಂಗ್‍ನ ಅಡ್ಡಾವೊಂದರಲ್ಲಿ ಕುಳಿತು ಸಾರಾಯಿ ಕುಡಿಯುತ್ತಿದ್ದಾನೆ!’ ಎಂಬ ಸಿಹಿ ಸುದ್ದಿಯೂ ಸಿಕ್ಕಿದ್ದರಿಂದ ಅವನು ತಟ್ಟನೆ ಚುರುಕಾದ.

‘ಅವ್ನೊಂದಿಗೆ ಒಟ್ಟು ಎಷ್ಟು ಮಂದಿ ಅದಾರಾ ಅಂತ ಸರಿಯಾಗಿ ನೋಡಿದ್ರಲಾ…?’ ಎಂದು ಆಳುಗಳನ್ನು ಗದರಿಸಿಯೇ ವಿಚಾರಿಸಿದ.

‘ಹೌದು ಧಣೇರಾ, ಅವ್ನ್ ಕೋಣೆಯಾಗ ಅವ್ನ್ ಕೂಡಿ ನಮಗಾ ಇಬ್ರೇ ಕಂಡವ್ರೀ…!’ ಎಂದರು ಅವರು.

ಸಂತಾನಪ್ಪ ಮತ್ತೆ ತಡಮಾಡಲಿಲ್ಲ. ಕೂಡಲೇ ಶಂಕರನ ಅಡ್ಡಾಕ್ಕೆ ಧಾವಿಸಿದ. ಆ ಹೊತ್ತು ಬಸ್ಸು ನಿಲ್ದಾಣದಲ್ಲಿ ಒಂದೆರಡು ಸಿಟಿ ಬಸ್ಸುಗಳು ಕೊನೆಯ ಟ್ರಿಪ್ಪಿನ ಪ್ರಯಾಣಿಕರನ್ನು ಕಾಯುತ್ತ ನಿಂತಿದ್ದವು. ವಿದ್ಯುತ್ ಕಂಬಗಳ ಅಡಿಯಲ್ಲಿ ಅಲ್ಲೊಂದು ಇಲ್ಲೊಂದು ಗೂಡಂಗಡಿಗಳು ಆಮ್ಲೇಟ್, ಬ್ರೆಡ್ ಮಸಾಲೆಗಳಂಥ ತಿಂಡಿ ತಿನಿಸುಗಳನ್ನು ತಯಾರಿಸಲು ಮೊಟ್ಟೆ ಕಲಕುವ ಮತ್ತು ಬಾಣಲಿಯ ಠಣಠಣ ಸದ್ದು, ಗದ್ದಲಗಳು ಹಗಲಿಡೀ ಕರ್ಕಶ ಶಬ್ದ ಮಾಲಿನ್ಯದಿಂದಲೂ, ವಾಯು ಮಾಲಿನ್ಯದಿಂದಲೂ ಬೆಂದು ಬಸವಳಿದು ಈಗಷ್ಟೇ ವಿರಮಿಸಲು ಹವಣಿಸುತ್ತಿದ್ದ ಆ ಇಡೀ ಪ್ರದೇಶದ ನೀರವ ಮೌನವನ್ನು ಕದಡುತ್ತಿದ್ದವು. ಸಂತಾನಪ್ಪ ಬಸ್ಸು ನಿಲ್ದಾಣದ ಮೇಲೆ ಎಡಭಾಗದಲ್ಲಿರುವ ಪ್ರೇಮ ಬೇಕರಿಯ ಎದುರು ಬಂದು ಕಾರು ನಿಲ್ಲಿಸಿದ. ಥಳಥಳ ಹೊಳೆಯುವ ಅಗಲವಾದ ಮಚ್ಚನ್ನು ಪೇಪರಿನಿಂದ ಸುತ್ತಿ ಬೆನ್ನ ಹಿಂದೆ ಪ್ಯಾಂಟಿನೊಳಗೆ ತುರುಕಿಸಿ ಮರೆಮಾಚಿದ. ಶಂಕರನ ರಹಸ್ಯ ತಾಣಕ್ಕೆ ತಾನು ಸಾಕಷ್ಟು ಬಾರಿ ಬಂದು ಕೆಲಸಕಾರ್ಯಗಳ ಬಗ್ಗೆ ಚರ್ಚಿಸುತ್ತ ಪೆಗ್ಗು ಹೀರುತ್ತ ಕುಳಿತಿರುತ್ತಿದ್ದವನಿಗೆ ಆ ಜಾಗವು ಚಿರಪರಿಚಿತವಿತ್ತು

.

ಹಾಗಾಗಿ ಧೈರ್ಯದಿಂದ ಅಡ್ಡಾದ ಹತ್ತಿರ ಹೋದ. ಶಂಕರನ ಕೋಣೆಯ ಬಾಗಿಲು ಮುಚ್ಚಿತ್ತು. ನಿಶ್ಶಬ್ದವಾಗಿ ನಿಂತು ಒಳಗಿನ ಶಬ್ದವನ್ನು ಆಲಿಸಿದ. ಯಾರದೋ ಗುಸುಗುಸು ಮೆಲುಧ್ವನಿ ಅಸ್ಪಷ್ಟವಾಗಿ ಕೇಳುತ್ತಿತ್ತು. ಹೌದು, ತನ್ನ ಕಡೆಯವರು ಹೇಳಿದ್ದು ನಿಜ. ಒಳಗೆ ಇಬ್ಬರೇ ಇರುವುದು ಎಂದುಕೊಂಡು ಬಾಗಿಲು ತಟ್ಟಿದ. ಕೆಲಕ್ಷಣದಲ್ಲಿ ಚಿಲಕ ತೆಗೆದ ಸದ್ದಾಯಿತು. ಶಂಕರನೇ ಬಾಗಿಲು ತೆರೆದ. ಆದರೆ ಸಂತಾನಪ್ಪ ಅವಕ್ಕಾದ. ಏಕೆಂದರೆ ಶಂಕರ ಇನ್ನೂ ಮತ್ತನಾಗಿರಲಿಲ್ಲ ಮಾತ್ರವಲ್ಲದೇ ಒಳಗೆ ಇನ್ನಿಬ್ಬರು ವಿಲಕ್ಷಣ ಗಡ್ಡಾಧಾರಿಗಳೂ ಇದ್ದುದು ಅವನಿಗೆ ಕಾಣಿಸಿತು. ಕೋಣೆಯ ಮಂದ ಬೆಳಕಿನಲ್ಲಿ ಆ ಆಗಂತುಕರು ತನ್ನನ್ನು ಕ್ರೂರವಾಗಿ ದಿಟ್ಟಿಸುತ್ತಿರುವಂತೆ ಅವನಿಗೆ ಭಾಸವಾಯಿತು. ಕೆಲವುಕ್ಷಣ ಏನೂ ತೋಚದೆ ನಿಂತುಬಿಟ್ಟ. ಆದರೆ ಶಂಕರ ಏನೂ ನಡೆದಿಲ್ಲವೆಂಬಂತೆ ನಗುತ್ತ, ‘ಓಹೋ…ಏನೋ ಸಂತಾನಪ್ಪ ಇಷ್ಟೊತ್ನಲ್ಲಿ…?’ ಎನ್ನುತ್ತ ಸ್ನೇಹದಿಂದ ಆಹ್ವಾನಿಸಿದ. ಅಷ್ಟೊತ್ತಿಗೆ ಸಂತಾನಪ್ಪನೂ ಹತೋಟಿಗೆ ಬಂದಿದ್ದವನು ಶಂಕರನ ಕುಟಿಲ ಆತ್ಮೀಯತೆಯನ್ನು ಕಂಡು ಕೋಪದಿಂದ ಕುದಿದ.

‘ನೋಡ್ ಶಂಕರಣ್ಣ, ನನ್ನ ಜೊತೆ ಹುಡುಗಾಟ ಆಡ್ ಬ್ಯಾಡ. ನೀನೆಣಿಸಿದಷ್ಟು ಛಲೋ ಮನ್ಷ ನಾನಲ್ಲ ತಿಳ್ಕೋ!’ ಎಂದ ಒರಟಾಗಿ.

‘ಅದು ನನಗೂ ಗೊತ್ತಿದೆ ಮಾರಾಯಾ. ಅದಿರಲಿ ನೀನೀಗ ಇಷ್ಟೊಂದು ಸಿಟ್ಟಾಗುವಂಥದ್ದು ಏನಾಯ್ತು ಅಂತ ಹೇಳಬೇಕಲ್ವಾ…?’ ಎಂದು ಶಂಕರ ವ್ಯಂಗ್ಯವಾಗಿ ನಗುತ್ತ ಪ್ರಶ್ನಿಸಿದ.

ಸಂತಾನಪ್ಪನಿಗೆ ಉರಿದು ಹೋಯಿತು. ‘ಏನಲೇ ಹೈವಾನ್! ಮೊನ್ನೆ ನನ್ನಿಂದ ಹೆಬ್ಬೆಟ್ ಒತ್ತುಸ್ಕೊಂಡು ಓಡ್ ಬಂದಿಯಲ್ಲ ಆ ಪತ್ರಗಳು ಎಲ್ಲದಾವಂತ ತೋರ್ಸಲೇ…?’ ಎಂದು ಗುಡುಗಿದ.

‘ಯಾಕೆ ಮಾರಾಯಾ, ಅದರಿಂದೇನಾಯ್ತು? ಅಚ್ಚಡಪಾಡಿಯಲ್ಲಿ ಖರೀದಿಸಿದ ಜಮೀನಿನ ಪತ್ರಗಳೆಂದು ಹೇಳಿದ್ದೆನಲ್ಲಾ!’ ಎಂದ ಶಂಕರ ಅಸಡ್ಡೆಯಿಂದ. ಆದರೀಗ ಸಂತಾನಪ್ಪ ಅದನ್ನು ನಂಬುವಷ್ಟು ಮೂರ್ಖನಾಗಲಿಲ್ಲ. ‘ಓಹೋ, ಹೌದಾ? ಸರಿ ಹಂಗಾದ್ರೆ ನಾನೂ ಅದ್ನ ನೋಡಬೇಕಲೇ?’ 

‘ಅರೇ, ಅದೀಗ ಇಲ್ಲೆಲ್ಲಿದೆ ಮಾರಾಯಾ! ಕನ್ವರ್ಶನ್‍ಗೆ ಕೊಟ್ಟಾಯಿತು. ಬೇಕಿದ್ದರೆ ನಾಳೆ ಬೆಳಿಗ್ಗೆ ಫ್ಲಾಟ್‍ಗೆ ಬಾ ಝೆರಾಕ್ಸ್ ಕಾಪಿಗಳಿವೆ, ತೋರಿಸುತ್ತೇನೆ’ ಎಂದ ಶಂಕರ ಉಡಾಫೆಯಿಂದ.

   ಆಗ ಸಂತಾನಪ್ಪನಿಗೆ ಚಿಂತೆಗಿಟ್ಟುಕೊಂಡಿತು. ಆ ಸಂಪತ್ತು ತಾನು ಬೆವರು ಸುರಿಸಿ ಸಂಪಾದಿಸಿದ್ದಲ್ಲವಾದರೂ ತನ್ನ ಅದೃಷ್ಟದಿಂದಲೇ ತನಗೆ ದಕ್ಕಿದ್ದು. ತನ್ನ ಎರಡು ಸಂಸಾರಗಳೂ ಅದನ್ನೇ ನಂಬಿಕೊಂಡಿವೆ ಮತ್ತು ಅದರಿಂದಾಗಿಯೇ ತನ್ನ ಊರಲ್ಲೂ ತಾನು ಭಾರಿದೊಡ್ಡ ಕುಳವೆಂಬ ಹೆಗ್ಗಳಿಕೆಗೆ ಪಾತ್ರನಾಗಿರುವುದು. ಹೀಗಿರುವಾಗ ಅಂಥ ಆಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಎಂಥ ಎಡವಟ್ಟು ಮಾಡಿಕೊಂಡೆನಲ್ಲ! ಈ ಹಾದರಕ್ ಹುಟ್ಟಿದ ನನ್ಮಗ ಖಂಡಿತವಾಗಿಯೂ ಅವೇ ಪತ್ರಗಳಿಗೆ ತನ್ನಿಂದ ರುಜು ಹಾಕಿಸಿಕೊಂಡು ಮಸಲತ್ತು ಮಾಡ್ತಿದ್ದಾನೆ ಎಂದು ಯೋಚಿಸಿದವನ ಆತಂಕ ಇಮ್ಮಡಿಯಾಯಿತು.

‘ನಾಳೆಯವರೆಗೆ ಕಾಯಲು ಸಾಧ್ಯವಿಲ್ಲ ಶಂಕರಣ್ಣಾ. ನಡೆ, ಈಗಲೇ ಫ್ಲಾಟಿಗೆ ಹೋಗೋಣ!’ ಎಂದ ಸಿಡುಕಿನಿಂದ.

ಅದಕ್ಕೆ ಶಂಕರ ವ್ಯಂಗ್ಯವಾಗಿ ನಗುತ್ತ ತನ್ನ ಗೆಳೆಯರತ್ತ ದಿಟ್ಟಿಸಿದವನು ಅವರಿಗೇನೋ ಕಣ್ಸನ್ನೆ ಮಾಡಿದ. ಆ ಮುಖಗಳು ಕೂಡಲೇ ಕಠೋರವಾದವು.

‘ಆಯ್ತು ಮಾರಾಯಾ ನಡೆ. ಯಾರೋ ದರವೇಶಿಗಳು ನನ್ನ ಬಗ್ಗೆ ನಿನ್ನಲ್ಲಿ ಸಂಶಯ ಹುಟ್ಟಿಸಿದ್ದಾರೆಂದು ಕಾಣುತ್ತದೆ. ಪರ್ವಾಗಿಲ್ಲ ನಿನ್ನ ಅನುಮಾನ ನಿವಾರಿಸುವ!’ ಎಂದು ಅದೇ ವ್ಯಂಗ್ಯ ನಗುವಿನೊಂದಿಗೆ ಹೇಳಿದವನು ಗೆಳೆಯರತ್ತ ತಿರುಗಿ, ‘ಇವರು ನನ್ನ ಸ್ನೇಹಿತರು. ಅಪರೂಪಕ್ಕೆ ಬಂದಿದ್ದಾರೆ ಮಾರಾಯಾ. ಅವರೊಂದಿಗೆ ಸ್ವಲ್ಪ ಡ್ರಿಂಕ್ಸ್ ಮಾಡುತ್ತ ಮಾತಾಡುವುದಿದೆ. ಬೇಕಿದ್ದರೆ ನಮ್ಮೊಂದಿಗೆ ನೀನೂ ಸೇರಿಕೋ. ನಂತರ ಹೊರಡುವ’ ಎಂದ ಶಂಕರ ನಯವಾಗಿ. ಸಂತಾನಪ್ಪನಿಗೆ ಅವನ ಮಾತು ನಂಬಬೇಕೋ ಬಿಡಬೇಕೋ ಎಂದು ಗೊಂದಲವಾಯಿತು. ಹಾಗಾಗಿ ಶಂಕರ ತೋರಿಸಿದ ಕುರ್ಚಿಯಲ್ಲಿ ಕುಳಿತುಕೊಂಡ. ಶಂಕರನೂ ಗಂಭೀರವಾಗಿ ಸಾರಾಯಿ ಸುರಿದು ಸ್ನೇಹಿತರೊಂದಿಗೆ ಇವನಿಗೂ ಕೊಟ್ಟ. ಸಂತಾನಪ್ಪ ಒಲ್ಲದ ಮನಸ್ಸಿನಿಂದ ಕುಡಿಯತೊಡಗಿದ. ಎರಡು ಪೆಗ್ಗು ಹೊಟ್ಟೆಗಿಳಿಯುವ ಹೊತ್ತಿಗೆ ಅವನ ದೇಹ, ಮನಸ್ಸುಗಳೆರಡೂ ಹುಗುರವಾಗಿ ಬಿಗುಮಾನ ಮಾಯವಾಯಿತು. ಆದರೂ ಯಾರೊಡನೆಯೂ ಮಾತಾಡದೆ ಮೌನವಾಗಿ ಸಾರಾಯಿ ಹೀರತೊಡಗಿದ. ಶಂಕರ ಮಾತ್ರ ಬೇಕೆಂದೇ ಇವನ ಇರುವನ್ನು ಕಡೆಗಣಿಸಿ ಇವನಿಗೆ ಅರ್ಥವಾಗದ ವಿಷಯಗಳನ್ನೆತ್ತಿ ಸ್ನೇಹಿತರೊಂದಿಗೆ ಚರ್ಚಿಸುತ್ತ, ಸೂರು ಕಿತ್ತು ಹೋಗುವಂತೆ ನಗುತ್ತ ಬಾಟಲಿ ಖಾಲಿ ಮಾಡುತ್ತಿದ್ದ. ಇತ್ತ ಸ್ವಲ್ಪಹೊತ್ತಿನಲ್ಲಿ ಐದನೆಯ ಪೆಗ್ಗು ಸಂತಾನಪ್ಪನ ಹೊಟ್ಟೆ ಸೇರುತ್ತಲೇ ಶಂಕರನ ಮೇಲಿನ ಶಂಕೆ ಮತ್ತೆ ಅವನಲ್ಲಿ ಹೆಡೆಯೆತ್ತಿತು. ಜೊತೆಗೆ ತಾನು ಮೊನ್ನೆಯೂ ಇವನ ಇಂಥ ಮೋಡಿಯ ಮಾತುಗಳಿಗೆ ಮೋಸ ಹೋಗಿ ಅನಾಹುತ ಮಾಡಿಕೊಂಡಿದ್ದು ಎಂದನ್ನಿಸುತ್ತಲೇ ಮರಳಿ ಅವನ ತಾಳ್ಮೆ ಕುಸಿಯಿತು.

‘ನಡೆ ಶಂಕರಣ್ಣ ಹೋಗೋಣ. ನನಗೀಗಲೇ ಆ ಪತ್ರಗಳನ್ನು ನೋಡಬೇಕು!’ ಎಂದು ಎದ್ದು ನಿಂತ.

ಶಂಕರ ಆಗಲೂ ಅವನ್ನು ಕುಳ್ಳಿರಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಆಗ ಮಾತ್ರ ಸಂತಾನಪ್ಪನ ಕೋಪ ನೆತ್ತಿಗೇರಿತು. ‘ಲೇ, ಹಡಿ ಸೂಳೀಮಗನಾ…ನಿನ್ ದಗಲ್ಬಾಜಿನೆಲ್ಲ ನನ್ ಹತ್ರ ಬಿಚ್ಬೇಡಲೇ…! ಪತ್ರಗಳ್ನ ಈಗ್ಲೇ ತಂದೊಪ್ಪಿಸಿದ್ದಿಯೋ ಬಚಾವಾದಿ ಮಗನಾ! ಇಲ್ಲಾ, ನಿನ್ನನ್ ಕಂಬಿ ಎಣಿಸುವಂತೆ ಮಾಡದೆ ಬಿಡಕ್ಕಿಲ್ವೋ ಹೈವಾನ್!’ ಎಂದು ಗುಡುಗಿದ. ಆದರೆ ಆಗ ಶಂಕರನೂ ಹದವಾದ ಮತ್ತಿನಲ್ಲಿದ್ದ. ಅವನ ಮುಖದಲ್ಲೂ ತೀಕ್ಷ್ಣ ಕೋಪ ವಿಜೃಂಭಿಸಿತು.

‘ಓಹೋ ಹೌದಾ ಮಗನೇ…! ಪರ್ವಾಗಿಲ್ಲವಾ ನೀನೂ ಭಾರೀ ಅರ್ಜೆಂಟಿನಲ್ಲಿದ್ದಿ. ಹಾಗಾಗಿ ಇನ್ನು ಟೈಮ್‍ವೇಸ್ಟ್ ಮಾಡುವುದು ನನಗೂ ಸರಿ ಕಾಣುವುದಿಲ್ಲ. ಆಯ್ತು ಹೋಗುವ!’ ಎಂದು ದಢಕ್ಕನೆದ್ದವನು ಗೆಳೆಯರತ್ತ ತಿರುಗಿ ಮತ್ತೇನೋ ಸಂಜ್ಞೆ ಮಾಡಿ ಧುರಧುರನೇ ಹೊರಗೆ ನಡೆದ. ಸಂತಾನಪ್ಪನೂ ಬಿರುಸಿನಿಂದ ಅವನನ್ನು ಹಿಂಬಾಲಿಸಿದ. ಆದರೆ ತನ್ನ ಸೊಂಟದಲ್ಲಿದ್ದ ಕತ್ತಿಯನ್ನೊಮ್ಮೆ ಮೆಲ್ಲನೆ ಸ್ಪರ್ಶಿಸಿ ನೋಡಿ ಸೆಟೆದುಕೊಂಡು ಮುನ್ನಡೆದ. ಶಂಕರ, ಸಂತಾನಪ್ಪನಿಗೆ ಏನೂ ಹೇಳದೆ ಮೂತ್ರ ವಿಸರ್ಜಿಸಲೆಂಬಂತೆ ಸಮೀಪದ ಸಾರ್ವಜನಿಕ ಶೌಚಾಲಯದತ್ತ ಹೊರಟ. ಸಂತಾನಪ್ಪನಿಗೆ ಅನುಮಾನವಾಯಿತು. ‘ಆ ಕಡೆ ಎಲ್ಲಿಗೇ…?’ ಎಂದ ಜೋರಿನಿಂದ.  

‘ಮೂತ್ರ ಹುಯ್ಯಬೇಕು ಮಾರಾಯಾ…!’  ಎಂದ ಶಂಕರ ನಗುತ್ತ. 

‘ನಾನೂ ಬರುತ್ತೇನೆ!’ ಎಂದ ಸಂತಾನಪ್ಪ ಅವನ ಬೆನ್ನು ಹತ್ತಿದ. ಶಂಕರನೂ ಅದನ್ನೇ ನಿರೀಕ್ಷಿಸಿದ್ದವನು ಸಂತಾನಪ್ಪನ ಹುಂಬತನವನ್ನು ನೆನೆದು ಕತ್ತಲಲ್ಲಿ ಭುಜ ಕುಣಿಸಿ ನಗುತ್ತ ನಡೆದ. ಆದರೆ ಶೌಚಾಲಯಕ್ಕೆ ಹೋಗದೆ ಕಟ್ಟಡದ ಹಿಂದೆ ಕುರುಚಲು ಪೊದೆಗಳು ತುಂಬಿದ್ದ ಪಾಳು ಜಾಗವೊಂದಕ್ಕೆ ಹೋದ. ಸಂತಾನಪ್ಪ ಅಲ್ಲಿಗೂ ಹಿಂಬಾಲಿಸಿದ. ಆ ಪ್ರದೇಶದಲ್ಲಿ ದಟ್ಟ ಕತ್ತಲೆ ಗೌವ್ವ್ ಗುಡುತ್ತಿತ್ತು. ಸಂತಾನಪ್ಪನ ಹಿಂದುಗಡೆ ಮತ್ತೆರಡು ಆಕೃತಿಗಳು ಮೆತ್ತಗೆ ಬಂದು ನಿಂತಿದ್ದನ್ನು ಅವನ ಸಾರಾಯಿ ಪ್ರಜ್ಞೆಯು ಗ್ರಹಿಸಲಿಲ್ಲ. ಅತ್ತ ಶಂಕರ ಮೂತ್ರ ಹುಯ್ಯಲು ನಿಂತಂತೆ ನಟಿಸಿದ. ಅಷ್ಟರಲ್ಲಿ ಸಂತಾನಪ್ಪನ ಹಿಂದಿದ್ದವನೊಬ್ಬ ಅವನ ಕೊರಳಿಗೆ ಬಲವಾಗಿ ಹೊಡೆದ. ಸಂತಾನಪ್ಪ, ‘ಯಾವ್ವಾ…!’ ಎಂದು ಚೀರಿ ಧೊಪ್ಪನೆ ಕುಸಿದ.

‘ಏನಲೇ ಬೇವರ್ಸಿ… ನಮ್ಮೂರಿಗೆ ಕೂಲಿಗೆ ಬಂದಂಥ ನಾಯಿ ನೀನು! ನಮ್ಮವರ ಆಸ್ತಿಯನ್ನೇ ಲಪಟಾಯಿಸಿ ಮಜಾ ಉಡಾಯಿಸಬೇಕೆಂದಿದ್ದಿಯೇನೋ…? ಅದನ್ನು ನೋಡಿಯೂ ನನ್ನಂಥವನು ಸುಮ್ಮನಿರುತ್ತಾನೆಂದು ಅದ್ಹೇಗೆ ಭಾವಿಸಿದೆಯೋ? ಮರ್ಯಾದೆಯಿಂದ ನಾಳೆ ಬೆಳಗಾಗುವುದರೊಳಗೆ ನಿನ್ನ ಎರಡು ಸಂಸಾರಗಳನ್ನು ಕಟ್ಟಿಕೊಂಡು ಇಲ್ಲಿಂದ ಜಾಗ ಖಾಲಿ ಮಾಡಿದೆಯೋ ಬಚಾವಾದೆ. ಇಲ್ಲಾ, ನಿನ್ನ ಹೆಣ ಮಸಣದ ಗುಡ್ಡೆಯಲ್ಲೇ ಸುಟ್ಟು ಬೂದಿಯಾಗುವುದು ಗ್ಯಾರಂಟಿ ಬೋಳಿಮಗನೇ!’ ಎಂದು ಕೋಪದಿಂದ ಗುಡುಗಿದ ಶಂಕರ, ಸಂತಾನಪ್ಪನಿಗೆ ಬೀಸಿ ಬೀಸಿ ಒದೆಯತೊಡಗಿದ. ಆದರೆ ಒಂದೆರಡು ಒದೆತಗಳು ಬೀಳುತ್ತಿದ್ದಂತೆಯೇ ಸಂತಾನಪ್ಪನೂ ಗೂಳಿಯಂತೆ ಉಸಿರುದಬ್ಬುತ್ತ ಎದ್ದು ನಿಂತ.

   ಅವನ ಬಲಗೈ ರಪ್ಪನೆ ಬೆನ್ನ ಹಿಂದೆ ಸರಿದು ಮಚ್ಚನ್ನು ಎಳೆದುಕೊಂಡಿತು. ಸಂತಾನಪ್ಪನ ರೌದ್ರಾವತಾರವನ್ನೂ ಮತ್ತು ಆ ಕತ್ತಲನ್ನೂ ಮೀರಿ ಮಿರಮಿರನೇ ಮಿಂಚುತ್ತಿದ್ದ ಮಚ್ಚನ್ನೂ ಕಂಡ ಶಂಕರ ದಿಗ್ಭ್ರಾಂತನಾದ. ಅದೇ ಹೊತ್ತಿಗೆ ಸಂತಾನಪ್ಪ ಶಂಕರನ ಕೊರಳಿಗೆ ಗುರಿಯಿಟ್ಟು ಮಚ್ಚು ಬೀಸಿದ. ಆದರೆ ಶಂಕರ ನೂಲಿನೆಳೆಯಷ್ಟು ಅಂತರದಲ್ಲಿ ತಪ್ಪಿಸಿಕೊಂಡ. ಅದರ ಬೆನ್ನಿಗೆ ಸಂತಾನಪ್ಪ ಅವನ ಕಿಬ್ಬೊಟ್ಟೆಗೆ ಜಾಡಿಸಿ ಒದ್ದ. ಶಂಕರ, ‘ಅಯ್ಯಮ್ಮಾ…!’ ಎಂದು ಕಿರುಚುತ್ತ ಅಷ್ಟು ದೂರಕ್ಕೆ ಎಗರಿ ಬಿದ್ದ. ಮರುಕ್ಷಣ ಸಂತಾನಪ್ಪ ಮಿಂಚಿನವೇಗದಲ್ಲಿ ಅತ್ತ ನೆಗೆದವನು ಶಂಕರನ ಕೊರಳನ್ನು ಕಡಿದೇ ಹಾಕುತ್ತಾನೆ ಎಂಬಷ್ಟರಲ್ಲಿ ಶಂಕರನ ಬಾಡಿಗೆ ಗೂಂಡಾಗಳು ಕ್ಷಣದಲ್ಲಿ ಮುನ್ನುಗ್ಗಿ ಸಂತಾನಪ್ಪನನ್ನು ಮಿಸುಕಾಡದಂತೆ ಬಲವಾಗಿ ಹಿಡಿದುಕೊಂಡರು. ಶಂಕರ ತನ್ನ ಜೀವವಮಾನದಲ್ಲಿ ಅಂಥದ್ದೊಂದು ಒದೆತವನ್ನು ಯಾರಿಂದಲೂ ತಿಂದವನಲ್ಲ. ಆದರೆ ಇಂದು ತನ್ನ ಕೂಲಿಯಾಳಿನಿಂದಲೇ ಅಂಥ ದುರ್ದುಸೆ ತನಗೆ ಬಂದುದನ್ನು ನೆನೆದವನಿಗೆ ಅವಮಾನದಿಂದ ಸತ್ತಂತಾಯಿತು. ಎದ್ದು ನಿಲ್ಲಲಾಗದಷ್ಟು ನೋವಿದ್ದರೂ ಕಷ್ಟಪಟ್ಟು ಎದ್ದು ನಿಂತ. ಅವನ ರಕ್ತದ ಕಣಕಣದಲ್ಲೂ ಕ್ರೋಧವು ಪ್ರಜ್ವಲಿಸಿತು. ಸಂತಾನಪ್ಪನ ಕತ್ತಿನ ಪಟ್ಟಿಯನ್ನು ಒರಟಾಗಿ ಎಳೆದು ಹಿಡಿದವನು, ‘ಹಲ್ಕಟ್ ನನ್ಮಗನೇ… ನನ್ನ ಮೇಲೆಯೇ ಕೈಮಾಡುವಷ್ಟು ಸೊಕ್ಕಾ ನಿಂಗೆ…!?’ ಎಂದು ಕ್ಯಾಕರಿಸಿ ಅವನ ಮುಖಕ್ಕೆ ಉಗಿದವನು, ಕಾಲ ಮೊಣಗಂಟಿನಿಂದ ಅವನ ಮರ್ಮಾಂಗಕ್ಕೆ ಬೀಸಿ ಬೀಸಿ ನಾಲ್ಕೈದೇಟು ಜಾಡಿಸಿ ಒದ್ದುಬಿಟ್ಟ.

‘ಯಾವ್ವಾ ಸತ್ತೆನವ್ವಾ…!’ ಎಂದು ಉಸಿರುಗಟ್ಟಿ ಅರಚಿದ ಸಂತಾನಪ್ಪ ಕಡಿದ ಬಾಳೆಯಂತೆ ನೆಲಕ್ಕುರುಳಿದ. ಅವನ ಕೈಯಿಂದ ಮಚ್ಚು ತನ್ನಿಂದ ತಾನೇ ಕಳಚಿಬಿತ್ತು.

                                                      ***

ಮರುದಿನ ಮುಂಜಾನೆ, ‘ಈಶ್ವರಪುರದ ಸಾರ್ವಜನಿಕ ಶೌಚಾಲಯದಲ್ಲಿ ಉತ್ತರ ಕರ್ನಾಟಕದ ಕಾರ್ಮಿಕನೊಬ್ಬನ ಶವ ಪತ್ತೆ. ಕೊಲೆ ಶಂಕೆ!’ ಎಂಬ ಸುದ್ದಿ ಅಪರಾಧ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸಿತು. ಬೆಳಿಗ್ಗೆ ಕೆಲಸದವಳು ತಂದುಕೊಟ್ಟ ಚಹಾ ಹೀರುತ್ತ ಕುಳಿತಿದ್ದ ಶಂಕರ ಪತ್ರಿಕೆಯನ್ನು ಕೈಗೆತ್ತಿಕೊಂಡ. ಆದರೆ ಆ ಸುದ್ದಿ ಕಣ್ಣಿಗೆ ಬೀಳುತ್ತಲೇ ಅವನೆದೆ ತೀವ್ರವಾಗಿ ಬಡಿದುಕೊಳ್ಳತೊಡಗಿತು. ಸಂಭಾಳಿಸಿಕೊಂಡು ಮುಂದೆ ಓದಿದವನ ಜಂಘಾಬಲವೇ ಕುಸಿಯಿತು. ಸ್ವಲ್ಪಹೊತ್ತು ಏನೂ ತೋಚದೆ ಮರಗಟ್ಟಿದ. ನಂತರ ಯೋಚಿಸಿದ. ತಕ್ಷಣದ ಸ್ಥಿತಿಯಲ್ಲಿ ತಲೆಮರೆಸಿಕೊಳ್ಳುವುದೊಂದೇ ಸರಿಯಾದ ದಾರಿ ಎಂದೆನ್ನಿಸಿತು.

 ‘ವಿನೋದಾ…!’ ಎಂದು ಹೆಂಡತಿಯನ್ನು ಜೋರಾಗಿ ಕೂಗಿದ. ಅವಳು ಬೆಳ್ಳಂಬೆಳ್ಳಗೆ ರೂಮಿನಲ್ಲಿ ಕುಳಿತು ಯಾವುದೋ ಸೀರಿಯಲ್ ನೋಡುತ್ತಿದ್ದವಳು ಗಂಡನ ಬೊಬ್ಬೆಗೆ ಬೆಚ್ಚಿಬಿದ್ದಳು. ‘ಇವನಿಗೆಂಥ ಭೂತ ಬಡಿಯಿತಪ್ಪಾ…?’ ಎಂದು ಗೊಣಗುತ್ತ ಹೊರಗೆ ಬಂದವಳು, ‘ಏನೂ…?’ ಎಂದು ಒರಟಾಗಿ ಕೇಳಿದಳು. ಬೇರೆ ಸಮಯದಲ್ಲಿ ಅವಳು ಹಾಗೆ ವರ್ತಿಸುತ್ತಿದ್ದರೆ ಶಂಕರ ಮುಖಮೂತಿ ನೋಡದೆ ಅವಳನ್ನು ಹೊಡೆಯುತ್ತಿದ್ದ. ಆದರೆ ಇಂದು ಅವಳ ಮೇಲಿನ ಕೋಪಕ್ಕಿಂತಲೂ ಮಿಗಿಲಾದ ಭಯವು ಅವನನ್ನು ಕಾಡುತ್ತಿತ್ತು. ಆದ್ದರಿಂದ ತಾಳ್ಮೆ ತಂದುಕೊಂಡವನು, ‘ಏನಿಲ್ಲ ಮಾರಾಯ್ತೀ…ನಾನೊಂದು ನಾಲ್ಕು ದಿವಸ ಊರಲ್ಲಿರುವುದಿಲ್ಲ. ಮನೆಯ ಕಡೆ ಜೋಪಾನ ಆಯ್ತಾ…!’ ಎಂದು ಮೃದುವಾಗಿ ಹೇಳಿದ. ಅದಕ್ಕವಳು, ‘ಆಯ್ತು!’ ಎಂದು ಸಿಡುಕಿನಿಂದಲೇ ಉತ್ತರಿಸಿ ಒಳಗೆ ಹೊರಟು ಹೋದಳು. ಅವಳ ವರ್ತನೆಯಿಂದ ಅಂದು ಮೊದಲ ಬಾರಿಗೆ ಶಂಕರನನ್ನು ಅನಾಥಭಾವವೊಂದು ತೀವ್ರವಾಗಿ ಕಾಡಿತು. ನಿರಾಶೆಯಿಂದ ಎದ್ದು ಕೆಲವು ಬಟ್ಟೆಬರೆಗಳನ್ನು ಹೊಂದಿಸಿಕೊಂಡು ಮನೆಯಿಂದ ಹೊರಗೆ ಬಿದ್ದವನು ಶಿವಮೊಗ್ಗಕ್ಕೆ ಹೋಗಿ ಗೆಳೆಯರ ಗುಪ್ತ ಸ್ಥಳವೊಂದರಲ್ಲಿ ತಲೆಮರೆಸಿಕೊಂಡ.

   ಸಂತಾನಪ್ಪನ ಸಾವಿನ ಸುದ್ದಿ ತಿಳಿದ ಅವನ ಹೆಂಡತಿ ಮುನಿಯಮ್ಮ ಎದೆ ಬಡಿದುಕೊಂಡು ಅಳುತ್ತ ಪೊಲೀಸ್ ಠಾಣೆಗೆ ಧಾವಿಸಿದಳು. ಅಷ್ಟರಲ್ಲಿ ಸಂತಾನಪ್ಪನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಸರಕಾರಿ ನಿಯಮಗಳೆಲ್ಲ ಮುಗಿದ ಬಳಿಕ ಪೊಲೀಸರು ಹೆಣವನ್ನು ಅವಳಿಗೊಪ್ಪಿಸಿದರು. ತನ್ನ ಜನರ ಸಹಾಯದಿಂದ ಅವಳು ಗಂಡನ ಹೆಣವನ್ನು ಮನೆಗೆ ತಂದು ಸಾವಿನ ವಿಧಿವಿಧಾನಗಳನ್ನು ನೆರವೇರಿಸಿ ಮಸಣದಗುಡ್ಡೆಯ ಶವಾಗಾರದಲ್ಲಿ ದಹನ ಮಾಡಿಸಿದಳು. ಗಂಡನ ಕೊಲೆಯನ್ನು ಶಂಕರನೇ ಮಾಡಿರುವುದು ಮತ್ತು ತಮ್ಮ ಹೆಸರಿನಲ್ಲಿರುವ ಡೇಸಾರ ಆಸ್ತಿಗಾಗಿಯೇ ಈ ಕೃತ್ಯ ನಡೆದಿರುವುದು ಎಂದು ಪೊಲೀಸರಿಂದ ಮುನಿಯಮ್ಮಳಿಗೆ ತಿಳಿದ ಮೇಲೆ ಅವಳಲ್ಲೂ ಸಾವಿನ ಭೀತಿ ಹುಟ್ಟಿಕೊಂಡಿತು. ಆದ್ದರಿಂದ ಈಗ ತಲೆಮರೆಸಿಕೊಂಡಿರುವ ಕೊಲೆಗಡುಕ ಶಂಕರ ನಾಳೆ ತನ್ನನ್ನೂ, ತನ್ನ ಮಕ್ಕಳನ್ನೂ ಕೊಲ್ಲದೆ ಬಿಡಲಿಕ್ಕಿಲ್ಲ! ಎಂದು ತೀವ್ರ ಕಳವಳಪಟ್ಟವಳು ಅದೇ ಆತಂಕದ ಬುದ್ಧಿಯಿಂದ ಏನೋ ನಿರ್ಧರಿಸಿದಳು. ಮರುಕ್ಷಣ ಜೀವರಕ್ಷಣೆಗೆ ಅದೊಂದೇ ದಾರಿ ಎಂದು ಅವಳಿಗನ್ನಿಸಿತು. ಕೂಡಲೇ, ಡೇಸಾ ದಂಪತಿಯಿಂದ ತಮಗೆ ಬಂದಿದ್ದ ಒಂದಷ್ಟು ಚಿನ್ನಾಭರಣವನ್ನೂ, ಬಂಗಲೆಯ ತಿಜೋರಿಯಲ್ಲಿದ್ದ ನೋಟಿನ ಹಲವು ಕಟ್ಟುಗಳನ್ನೂ ಗೋಣಿ ಚೀಲವೊಂದರಲ್ಲಿ ರಪರಪನೇ ತುಂಬಿಸಿದಳು. ಅಗತ್ಯದ ಸಾಮಾನು ಸಂರಂಜಾಮುಗಳನ್ನು ಗಂಟುಮೂಟೆ ಕಟ್ಟಿದಳು. ಆವತ್ತೊಂದು ರಾತ್ರಿ ಮಕ್ಕಳೊಂದಿಗೆ ಬಂಗಲೆಯನ್ನು ತೊರೆದು ತನ್ನೂರಿನ ಸರಕಾರಿ ಬಸ್ಸು ಹತ್ತಿ ಕುಳಿತು ನಿರಾಳ ಉಸಿರುಬಿಟ್ಟಳು.

                                                      ***

ಇತ್ತ ದ್ಯಾವಮ್ಮಳೂ ಅಧೀರಳಾಗಿದ್ದಳು. ಗಂಡನ ಸಾವಿನ ಸಂಪ್ರದಾಯದಲ್ಲಿ ಇದ್ದು ಇಲ್ಲದವಂತೆ ದೂರದಲ್ಲೇ ನಿಂತು ಕುಳಿತು ಅಲ್ಲೇ ತನ್ನ ಮುತ್ತೈದೆತನವನ್ನೂ ಕಳಚಿಕೊಂಡು ಹತಾಶೆಯಿಂದ ಮನೆಗೆ ಹಿಂದಿರುಗಿದಳು. ಮಗಳ ಸ್ಥಿತಿಯ ಬಗ್ಗೆ ಅರಿವಿದ್ದ ಮಲ್ಲೇಶಪ್ಪ ಗುಡಿಸಲಿಗೆ ಬೀಗ ಹಾಕಿ ಬಂದು ಮಗಳೊಂದಿಗೆ ಇರತೊಡಗಿದ. ಸಂತಾನಪ್ಪನ ಹಣದಾಸೆಗೆ ಬಲಿಯಾಗಿ ಮಗಳ ಭವಿಷ್ಯವನ್ನೇ ಹಾಳು ಮಾಡಿಬಿಟ್ಟೆ! ಇಷ್ಟಕ್ಕೆಲ್ಲ ನಾನೇ ಕಾರಣ ಎಂದು ಪಶ್ಚಾತ್ತಾಪಪಡುವ ಸ್ಥಿತಿ ಅವನದ್ದಾಗಿತ್ತು. ಆದರೆ ಮಗಳೆದುರು ಕೊರಗು ತೋರಿಸಿಕೊಳ್ಳದೆ ಅವಳು ಅಳುವಾಗ ಪ್ರೀತಿಯಿಂದ ತಲೆ ನೇವರಿಸುತ್ತ ಕೊನೆಯಲ್ಲಿ ತಾನೂ ಅತ್ತು ಅವಳನ್ನು ಸಮಾಧಾನಿಸಲು ಪ್ರಯತ್ನಿಸುತ್ತಿದ್ದ. ಬರಬರುತ್ತ ಇಬ್ಬರಿಗೂ ಮುಂದೇನು…? ಎಂಬ ಪ್ರಶ್ನೆ ಕಾಡತೊಡಗಿತು. ತಾನು ಕಂಡ ಕನಸುಗಳೆಲ್ಲ ಇಷ್ಟು ಬೇಗನೇ ನುಚ್ಚುನೂರಾಗುತ್ತವೆ ಎಂಬ ಕಲ್ಪನೆಯೇ ಇಲ್ಲದ ದ್ಯಾವಮ್ಮಳಿಗೆ ಗಂಡನ ಸಾವು ಸಹಿಸಲಾಗದ ಹೊಡೆತವಾಗಿತ್ತು. ಆ ನೋವು ನಿರಾಶೆಗಳು ಅವಳಲ್ಲಿ ಆತ್ಮಹತ್ಯೆಯ ಆಲೋಚನೆಯನ್ನೂ ಮೂಡಿಸುತ್ತಿದ್ದವು. ಆದರೆ ತನ್ನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದ ಮುದಿ ತಂದೆಯನ್ನು ನೆನೆಯುತ್ತಲೇ ಆ ಯೋಚನೆ ದೂರವಾಗುತ್ತಿತ್ತು.

ಗಂಡ ಕೋಣೆಯ ತಿಜೋರಿಯಲ್ಲಿ ಬಿಟ್ಟು ಹೋಗಿದ್ದ ಕೆಲವು ಸಾವಿರ ರೂಪಾಯಿಗಳು ಮತ್ತು ಅವನೇ ಪ್ರೀತಿಯಿಂದ ಮಾಡಿಸಿ ಹಾಕಿದ್ದ ಚಿನ್ನಾಭರಣಗಳು ಅವಳ ಮುಂದಿನ ಕೆಲವು ಕಾಲದ ಹೊಟ್ಟೆಬಟ್ಟೆಗೂ ರಾಮತೀರ್ಥ ಕಾಮತರ ಒಂದು ವರ್ಷದ ಬಾಡಿಗೆಗೂ ಸರಿಹೋಯಿತು. ಅವೆಲ್ಲವೂ ಕರಗುತ್ತ ಬಂದಂತೆ ಕಾಮತರೂ ತಮ್ಮ ಮನೆಗೆ ಹೊಸ ಬಾಡಿಗೆದಾರರನ್ನು ಹುಡುಕತೊಡಗಿದರು. ಆ ಸುದ್ದಿ ತಿಳಿದ ದ್ಯಾವಮ್ಮ ಮುಂದೇನೂ ತೋಚದೆ ಅಪ್ಪನೊಂದಿಗೆ ಮರಳಿ ಮಸಣದಗುಡ್ಡೆಯ ಗುಡಿಸಲಿಗೆ ಬಂದು ಸೇರಿದಳು. ಆದರೆ ಎಷ್ಟು ಕಾಲವೆಂದು ದುಃಖ ನೋವುಗಳನ್ನೇ ಹಾಸಿ ಹೊದ್ದು ಬದುಕಲು ಸಾಧ್ಯ? ಕಾಡ್ಗಿಚ್ಚಿಗೆ ತುತ್ತಾಗಿ ಬರಡಾಗುವ ದಟ್ಟಾರಣ್ಯವೂ ಕಾಲಾನುಕ್ರಮದಲ್ಲಿ ಮರಳಿ ಹಸಿರಾಗಿ ನಳನಳಿಸುವುದಿಲ್ಲವೇ! ಅಂತೆಯೇ ದ್ಯಾವಮ್ಮನ ಬದುಕೂ ಬದಲಾಗತೊಡಗಿತು. ನಾಲ್ಕೈದು ತಿಂಗಳು ಗುಡಿಸಲಿನಿಂದ ಹೊರಗೆ ಬಾರದೆ ಅರೆಕತ್ತಲಿನಲ್ಲಿಯೇ ಬದುಕು ಸಾಗಿಸಿದವಳು ನಂತರ ಅಪ್ಪನೊಂದಿಗೆ ದುಡಿಮೆಗೂ ಹೊರಟಳು.

   ಇತ್ತ ಸಂತಾನಪ್ಪನ ಸಾವು ದ್ಯಾವಮ್ಮನ ಮೊದಲ ಪ್ರೇಮಿ ಪರಮೇಶನಿಗೆ ಪರಮಾನಂದವನ್ನುಂಟು ಮಾಡಿದ್ದರೊಂದಿಗೆ  ದ್ಯಾವಮ್ಮನ ಬದುಕು ಬೀದಿಗೆ ಬಿದ್ದುದೂ ಅಷ್ಟೇ ಸಂತಸವನ್ನು ತಂದಿತ್ತು. ಆದರೆ ಅವಳು ಬರಬರುತ್ತ ಮೊದಲಿನ ದ್ಯಾವಮ್ಮಳಾಗಿ ಬದಲಾಗುತ್ತಿದ್ದುದು ಮತ್ತು ದಿನಾ ಮುಂಜಾನೆ ಬುತ್ತಿ ಹೊತ್ತುಕೊಂಡು ಅಪ್ಪನೊಂದಿಗೆ ದುಡಿಯಲು ಹೋಗಿ ಸಂಜೆ ಒಣ ಉರುವಲು ಹೊರೆಯನ್ನು ನೆತ್ತಿಯ ಮೇಲೆ ಹೊತ್ತುಕೊಂಡು ಅಪ್ಪನ ಹಿಂದೆಯೇ ಹೆಜ್ಜೆ ಹಾಕುತ್ತ ಮನೆಗೆ ಹಿಂದಿರುಗುತ್ತಿದ್ದುದೆಲ್ಲವನ್ನೂ ಕದ್ದುಮುಚ್ಚಿ ಗಮನಿಸುತ್ತಿದ್ದವನ ಮನಸ್ಸು ನಿಧಾನವಾಗಿ ಮೃದುವಾಗತೊಡಗಿತು. ಅದಕ್ಕೆ ತಕ್ಕಂತೆ ತನ್ನ ವಠಾರ ಮತ್ತು ಹಾದಿಬೀದಿಯಲ್ಲಿ ತನ್ನ ಪ್ರೇಮಿ ಪರಮೇಶನು ಆಗಾಗ ಎದುರಿಗೆ ಸಿಕ್ಕಾಗ ದ್ಯಾವಮ್ಮಳ ಹೃದಯವೂ ತಾಳ ತಪ್ಪುತ್ತಿದ್ದುದನ್ನು ಮತ್ತು ಆಗೆಲ್ಲ ಅವಳ ಪಶ್ಚಾತ್ತಾಪ ಹಾಗೂ ದೈನ್ಯತೆಯ ಮೃದುಭಾವಗಳು ತನ್ನ ಮೇಲೆ ಹರಿಯುತ್ತಿದ್ದುದನ್ನೂ ಬಿಗುಮಾನದಿಂದಲೇ ಅರಿಯುತ್ತಿದ್ದ ಅವನು ಮೆಲ್ಲನೆ ಅವಳತ್ತ ವಾಲತೊಡಗಿದ. ಅದರಿಂದ ಅವಳ ಮೇಲಿನ ಅನುರಾಗದ ಸವಿ ನೆನಪುಗಳು ಮರಳಿ ಅವನನ್ನು ಆವರಿಸಿಕೊಂಡವು.

   ಆವತ್ತೊಂದು ದಿನ ಸಂಜೆಯ ಹೊತ್ತು ಪರಮೇಶ ಅಳುಕುತ್ತಲೇ ಮಲ್ಲೇಶಪ್ಪನ ಗುಡಿಸಲಿನತ್ತ ಹೋದ. ದ್ಯಾವಮ್ಮಳೂ ಮಲ್ಲೇಶಪ್ಪನೂ ಆಗಷ್ಟೇ ಮನೆಗೆ ಬಂದಿದ್ದರು. ಮಲ್ಲೇಶಪ್ಪ ಗುಡಿಸಲಿನೊಳಗೆ ಮೈಚೆಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ದ್ಯಾವಮ್ಮ ಹೊರಗೆ ಅಂಗಳದಲ್ಲಿ ಒಲೆಯ ಮುಂದೆ ಕುಳಿತು ರೊಟ್ಟಿ ಸುಡುತ್ತಿದ್ದಳು. ಪರಮೇಶ ಅಳುಕುತ್ತ ಬಂದು ಅವಳೆದುರು ನಿಂತುಕೊಂಡ. ಒಲೆಯ ದಟ್ಟ ಹೊಗೆಯಿಂದಾಗಿ ಪಕ್ಕನೆ ಅವಳಿಗೆ ಅವನ ಮುಖ ಕಾಣಲಿಲ್ಲ. ಕುಳಿತಲ್ಲಿಂದಲೇ ತಲೆಯೆತ್ತಿ ನಿರುಕಿಸಿ ತನ್ನ ಪ್ರೇಮಿಯನ್ನು ಕಂಡವಳು ಅವಕ್ಕಾದಳು. ಆಗ ಪರಮೇಶನಲ್ಲಿ ಪರಿಶುದ್ಧ ನಗೆ ಮೂಡಿತು. ಆದರೆ ಅವಳು ಅದಕ್ಕೆ ಪ್ರತಿಯಾಗಿ ನಗಲಾರದೆ ಚಡಪಡಿಸುತ್ತ ಅವನನ್ನೇ ದಿಟ್ಟಿಸುತ್ತ ಕುಳಿತಳು. ಅರ್ಥವಾಗದ ಭಯ ನಾಚಿಕೆ ಮತ್ತು ಅವಮಾನಗಳು ಅವಳನ್ನು ಮುತ್ತಿದ್ದವು. ಆದರೂ ಹತ್ತಿಕ್ಕಿಕೊಂಡು, ‘ಓಹೋ, ಪರಮೇಶಿಯಾ ಬಾ, ಬಾ…ಒಳಗ್ ಬಾ, ಹೇಗಿದ್ದೀಯಾ…? ಅಪ್ಪ ಮಲಗ್ಯಾರ ಎಬ್ಬಿಸ್ತೀನಿ…!’ ಎಂದೆನ್ನುತ್ತ ತಾಳತಪ್ಪಿದ ತನ್ನ ಹೃದಯವನ್ನು ಹತೋಟಿಗೆ ತಂದುಕೊಳ್ಳುತ್ತ ಎದ್ದಳು. ಪರಮೇಶನಿಗೆ ಅವಳ ಸ್ಥಿತಿ ಕಂಡು ಕರುಳು ಹಿಂಡಿತು. ರಪ್ಪನೆ ಹತ್ತಿರ ಸರಿದು ಪ್ರೀತಿಯಿಂದ ಅವಳ ಕೈ ಹಿಡಿದು ಮೃದುವಾಗಿ ಅದುಮಿದ. ದ್ಯಾವಮ್ಮ ಮೊದಲಿಗೆ ಬೆಚ್ಚಿದಳು. ಆದರೆ ಅವನ ಕಣ್ಣುಗಳಲ್ಲಿ ನಿರ್ಮಲ ಒಲುಮೆಯ ಭಾವವು ಕುಣಿಯುತ್ತಿದ್ದುದನ್ನು ಕಂಡವಳ ಕಣ್ಣುಗಳು ನಿರಾಳತೆಯಿಂದ ತೇವಗೊಂಡವು.

                                                                 ***

ಸಂತಾನಪ್ಪನ ಕೊಲೆಗೆ ಶಂಕರನೇ ಕಾರಣ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರಿಗೆ ಹೆಚ್ಚುಕಾಲ ಹಿಡಿಯಲಿಲ್ಲ. ಆವತ್ತು ಶಂಕರ ಅವಿತಿದ್ದ ರಹಸ್ಯ ಸ್ಥಳವನ್ನು ಭೇದಿಸಿದ ಪೊಲೀಸರು ಅವನನ್ನು ದಸ್ತಗಿರಿ ಮಾಡಿ ತಂದರು. ಕೊಲೆಯಲ್ಲಿ ಅವನೊಡನೆ ಸಹಕರಿಸಿದ ಇನ್ನಿಬ್ಬರು ರೌಡಿಗಳನ್ನೂ ಬಂಧಿಸಿ ಎಫ್. ಐ. ಆರ್. ದಾಖಲಿಸಿ ಕೋರ್ಟಿಗೆ ಹಾಜರು ಪಡಿಸಿದರು. ಶಂಕರನೂ ಅವನ ಸಹಚರರೂ ಒಂದು ವರ್ಷಕಾಲ ಕೈದಿಗಳಾಗಿದ್ದು ಪೊಲೀಸರ ಸಮಕ್ಷಮದಲ್ಲಿ ಕೋರ್ಟು ಕಛೇರಿಗಳಿಗೆ ಹಾಜರಾಗುತ್ತ ಒಂದು ದಿನ ಮೂವರೂ ಜಾಮೀನಿನ ಮೇಲೆ ಬಿಡುಗಡೆಯಾದರು. ಹೊರಗೆ ಬಂದ ಶಂಕರ ಕೂಡಲೇ ತನ್ನ ಹೆಸರಿಗೆ ವರ್ಗಾವಣೆಯಾಗಿದ್ದ ಫೆಲಿಕ್ಸ್ ಡೇಸಾರ ಬಂಗಲೆಯನ್ನು ತುರಂತಾಗಿ ಮಾರಿದವನು ವಕೀಲರಿಗೂ ಮುಖ್ಯ ಪೊಲೀಸ್ ಅಧಿಕಾರಿಗಳಿಗೂ ಕಂತೆ ಕಂತೆ ನೋಟುಗಳನ್ನು ಹಂಚುತ್ತ ಸಾಗಿದ. ಆದ್ದರಿಂದ ಸಂತಾನಪ್ಪನ ಕೊಲೆಗೆ ಶಂಕರನೇ ಕಾರಣ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ದೊರಕದೆ ಅವನ ಮೇಲಿನ ಕೇಸು ಮುಂದಿನ ವರ್ಷದಲ್ಲಿ ಬಿದ್ದು ಹೋಯಿತು.

   ಈ ಘಟನೆ ನಡೆದ ಬಳಿಕ ಶಂಕರನ ವರ್ಚಸ್ಸು ಮತ್ತು ಅಹಂಕಾರಗಳು ಇನ್ನೊಂದು ಮೆಟ್ಟಲು ಎತ್ತರಕ್ಕೇರಿದವು. ಅವನ ಸುತ್ತಮುತ್ತಲಿನ ಜನರಿಗೂ, ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರಿಗೂ ಅಂದಿನಿಂದ ಅವನು ಭಯಂಕರ ರೌಡಿಯಾಗಿ ಕಾಣತೊಡಗಿದ. ಅವರೆಲ್ಲ ಅವನನ್ನು ಭಯ ಮಿಶ್ರಿತ ಗೌರವಾದರಗಳಿಂದ ಕಾಣತೊಡಗಿದರು. ಅದನ್ನೆಲ್ಲ ಗಮನಿಸುತ್ತ ಬಂದನಿಗೆ ಇನ್ನೊಂದು ಬಗೆಯ ಕೋಡು ಮೂಡಿಬಿಟ್ಟಿತು. ಮರಳಿ ಭರಮ್ಮಿನಿಂದ ಬದುಕತೊಡಗಿದ. ಸ್ವಲ್ಪ ಕಾಲ ಸ್ಥಗಿತಗೊಂಡಿದ್ದ ದಂಧೆಯನ್ನು ಮತ್ತೆ ಆರಂಭಿಸಿದ. ಆದರೆ ಇಂಥ ಶಂಕರನೊಳಗೂ ಒಂದು ವಿಚಿತ್ರ ಬಲಹೀನತೆಯಿತ್ತು. ಅದೇ ದೌರ್ಬಲ್ಯವು ಅವನಲ್ಲಿ ಅವ್ಯಕ್ತ ಭಯವನ್ನೂ ಹುಟ್ಟಿಸಿದ್ದರಿಂದಲೇ ಇಂದು ಅವನು ತನ್ನ ಬಾಲ್ಯದ ಗೆಳೆಯ ಏಕನಾಥ ಗುರೂಜಿಯವರಿಗೆ ಕರೆ ಮಾಡಿದ್ದ.

(ಮುಂದುವರೆಯುವುದು)

*********************************************

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

4 thoughts on “

  1. ಸನಿಲ್ ನಿಮ್ಮ ಬರವಣಿಗೆಯ ಶೈಲಿ ಮೆಚ್ಚುವಂತಹದ್ದು.
    ಬಹಳ interestingಆಗಿದೆ.
    Congratulations

  2. Congratulations Sanil.
    ನಿಮ್ಮ ಬರವಣಿಗೆಯ ಶೈಲಿ ಬಹಳ ಚೆನ್ನಾಗಿದೆ.

  3. ಸಂತಾನಪ್ಪನ ಕೊಲೆಯ ಸುತ್ತ ಹೆಣೆದುಕೊಂಡಿರುವ ಕಥಾನಕವನ್ನು ಕಾದಂಬರಿಕಾರರು ರೋಚಕವಾಗಿ ಚಿತ್ರಿಸಿದ್ದಾರೆ. ದಿಢೀರನೆ ಸಿರಿವಂತರಾದವರ ಬದುಕು ಕಣ್ಣು ಮುಚ್ಚಿ ತೆರೆಯುವುದರ ಒಳಗೆ ಬೇರೆ ಬೇರೆ ದಿಕ್ಕಿನಲ್ಲಿ ಸಾಗುವ ಚಿತ್ರಣ ಈ ಅಧ್ಯಾಯದಲ್ಲಿ ಮಾರ್ಮಿಕವಾಗಿ ಮೂಡಿ ಬಂದಿದೆ.

Leave a Reply

Back To Top