ಪುಸ್ತಕ ಸಂಗಾತಿ
ಒಳಿತಿನ ಉಣಿಸಿನ ಕಥೆಗಳು…
“ಚಮತ್ಕಾರಿ ಚಾಕಲೇಟ”
“ಚಮತ್ಕಾರಿ ಚಾಕಲೇಟ” ಮಕ್ಕಳ ಕಥಾಸಂಲನ.
ಲೇಖಕರು: ಸೋಮು ಕುದರಿಹಾಳ.
ಬೆಲೆ:100ರೂ.
ಪ್ರಕಟಣೆ:2020.
ಪ್ರಕಾಶಕರು: ತುಂಗಾ ಪ್ರಕಾಶನ ಚಂದಾಪುರ. ಗಂಗಾವತಿ.9035981798
ಸೋಮು ಕುದರಿಹಾಳ ಮಕ್ಕಳ ಪ್ರೀತಿಯ ಶಿಕ್ಷಕರಾಗಿ ನಮಗೆಲ್ಲಾ ಪರಿಚಿತರು. ಅವರನ್ನು ನಾನಿನ್ನೂ ಮುಖತಹ ಭೆಟ್ಟ ಆಗಿಲ್ಲವಾದರೂ ಅವರ ಬರಹ, ಅವರು ಶಾಲೆಯಲ್ಲಿ ನಡೆಸುತ್ತಿರುವ ಪ್ರಯೋಗಗಳು. ಒಂದು ಪುಟ್ಟ ಸರಕಾರಿ ಶಾಲೆಯನ್ನು ಮಕ್ಕಳ ಎಲ್ಲ ಒಳಿತಿನ ಕಡೆಗೆ ಅಣಿಗೊಳಿಸುತ್ತಿರುವ ರೀತಿ ಎಲ್ಲ ಗಮನಿಸುತ್ತ ಅವರ ಸ್ನೇಹದ ವರ್ತುಲದಲ್ಲಿ ನಾನೂ ಸೇರಿ ಹೋಗಿದ್ದೇನೆ. ಅವರು ಈಗ ಮಕ್ಕಳ ಕಥಾ ಸಂಕಲನ ತರುವ ಮೂಲಕ ತಮ್ಮ ಸ್ನೇಹದ ವರ್ತುಲ ಇನ್ನೂ ವಿಸ್ತರಿಸಿಕೊಂಡಿದ್ದಾರೆ. ಇರಲಿ.
ನಾನು ಶಿಕ್ಷಕನಾಗಿ ಬಹಳ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಆಗಿದ್ದರೂ ನನ್ನ ಆಲೋಚನೆಗಳೆಲ್ಲ ಮಕ್ಕಳ ಸುತ್ತಲೇ ಅರಳಿಕೊಳ್ಳುತ್ತಿರುತ್ತವೆ. ಅದು ಯಾವುದೋ ಮಗುವಿನ ತುಂಟಾಟವನ್ನೋ, ಪ್ರತಿಭೆಯನ್ನೋ, ಮಕ್ಕಳ ಸುತ್ತಲೂ ನಾವು ನಿರ್ಮಿಸಬೇಕಾದ ಪರಿಸರವನ್ನೋ, ಅವರ ಖುಷಿ ಹೆಚ್ಚಿಸುವ ಹಂಬಲವನ್ನೋ, ಮಕ್ಕಳು ಅನುಭವಿಸುವ ನೋವನ್ನೋ ಧ್ಯಾನಿಸುತ್ತಿರುತ್ತದೆ. ಹೌದು ಶಿಕ್ಷಕರಾಗಿದ್ದವರಿಗೆ ಹಾಗೂ ಮಕ್ಕಳ ಒಳಿತನ್ನು ಅಪಾರವಾಗಿ ಪ್ರೀತಿಸುವವರಿಗೆಲ್ಲ ಹಾಗೇ ಅನಿಸುತ್ತದೆ. ಇದೆಲ್ಲಾ ಏಕೆ ಹೇಳುತ್ತಿದ್ದೇನೆ ಅಂದರೆ ಸೋಮು ಕುದರೀಹಾಳ ಅವರ ‘ಚಮತ್ಕಾರಿ ಚಾಕಲೇಟ’ ಕಥಾಸಂಕಲನ ಮಕ್ಕಳ ಸುತ್ತಲೇ ಹರಡಿಕೊಳ್ಳುತ್ತ ಒಂದಿಷ್ಟು ಮಕ್ಕಳಿಗೆ ಒಳಿತಿನ ಉಣಿಸನ್ನು ಉಣಿಸಬೇಕು ಎಂಬ ಚೌಕಟ್ಟನ್ನು ಹಾಕಿಕೊಳ್ಳುತ್ತ ಅರಳಿದ ಕಥೆಗಳು ಎಂದು ನನಗೆ ಅನಿಸುತ್ತದೆ.
ಸೋಮು ಅವರು ಇಲ್ಲಿ ಮಕ್ಕಳ ಸುತ್ತಲಿನ ಹಲವಾರು ಸಂಗತಿಗಳನ್ನು ಕಥೆಯಾಗಿಸಿದ್ದಾರೆ. ಇಲ್ಲಿ ಕೆಲವು ಜಾನಪದ ಮಾದರಿಗಳಿವೆ ಹಾಗೂ ಅವನ್ನು ಇಂದಿನ ತುರ್ತಿಗೆ ಅಗತ್ಯವಾದ ಕುಲಾವಿ ಆಗಿಸುವ ಪ್ರಯತ್ನವೂ ಇದೆ. ಬಹು ಪ್ರಚಲಿತವಾದ ಕಾಗಕ್ಕ ಗುಬ್ಬಕ್ಜಕನ ಕಥೆಯನ್ನೇ ಮಕ್ಕಳು ಇಂದು ಉಪಯೋಗಿಸುವ ಮೊಬೈಲ ಬಳಕೆಗೆ ಬೇಕಾಗುವ ಡಾಟಾ ಕದಿಯುವ ಕಾಗೆಯನ್ನಾಗಿಸಿ ಗುಬ್ಬಿಗೆ ಮೋಸ ಮಾಡುವಂತೆÀ ಕಥೆಯನ್ನು ಹೆಣೆದಿದ್ದಾರೆ. ಡಾಟಾ… ಪಾಸವರ್ಡ… ಅದರ ಸಾಫಲ್ಯತೆ ಗೆಲ್ಲಾ ಮಕ್ಕಳು ವಿಸ್ತರಿಸಿ ತಿಳುವಳಿಕೆ ಮೂಡಲಿ ಎಂಬ ಹಂಬಲದೊಂದಿಗೆ ಮೋಸ ಸರಿಯಲ್ಲ ಎನ್ನುವ ತಿಳುವಳಿಕೆಯನ್ನೂ ಕಥೆ ಇಡಲಿ ಎಂಬ ಹಂಬಲವಿದೆ.
ಯಾರು ಹೆಚ್ಚು ಕಥೆಯಲ್ಲಿ ಪೆನ್ನು, ಪೆನ್ಸಿಲ್, ಕ್ರೆಯಾನ್ಸ, ರಬ್ಬರ ಮುಂತಾದ ಮಕ್ಕಳ ಬ್ಯಾಗಿನಲ್ಲಿ ಯಾವಾಗಲೂ ಇರುವ ಅವರಿಗೆ ಆಪ್ತವಾದ ವಸ್ತುಗಳ ಸಂಗತಿ ಇದೆ. ಇವೆಲ್ಲ ತಾನು ಹೆಚ್ಚು ತಾನು ಹೆಚ್ಚು ಎಂದು ಕಿತ್ತಾಡಿ ಚಲ್ಲಾಪಿಲ್ಲಿ ಆಗುವುದು ಇದರಿಂದಾಗಿ ಅವು ಕಸದ ಬುಟ್ಟಿ ಸೇರುವುದು ಇದೆ. ಎಲ್ಲರೂ ಒಂದಾಗಿರಬೇಕು, ಜಗಳವಾಡಬಾರದು ಎಂದು ಹೇಳುವ ಈ ಕಥೆ ಮಕ್ಕಳನ್ನು ಸೆಳೆಯುತ್ತದೆ.
ಶಾಲೆಯಲ್ಲಿ ನಡೆಯುವ ವಾಸ್ತವ ಸಂಗತಿಯ ಎಳೆಯೊಂದನ್ನು ಹಿಡಿದು ಬರೆದಿರುವ ‘ತಿಮ್ಮನ ಸಾಲ’ ಕಥೆಯಲ್ಲಿ ತಿಮ್ಮ ಹಿರಿಯರೊಬ್ಬರಿಗೆ ಸಹಾಯ ಮಾಡುವುದಕ್ಕಾಗಿ ಕೌಜುಗ ಹಕ್ಕಿಯನ್ನು ಹಣಕ್ಕೆ ಪಡೆದು ಸಾಲಗಾರನಾಗುತ್ತಾನೆ. ಇದರಿಂದ ಮಕ್ಕಳೆಲ್ಲ ಅವನನ್ನು ಸಾಲಗಾರನೆಂದು ಹೀಯಾಳಿಸುತ್ತಾರೆ. ಆದರೆ ತಿಮ್ಮನ ನಿಜವಾದ ಉದ್ಧೇಶ ತಿಳಿದ ಶಿಕ್ಷಕರು ಅವನ ಕುರಿತಾದ ತಪ್ಪು ಅಭಿಪ್ರಾಯ ಹೋಗಲಾಡಿಸುತ್ತಾರೆ. ಹೀಗೆ ವಾಸ್ತವಕ್ಕೆ ಹತ್ತಿರವಾದ ಇಂತಹ ಕಥೆಗಳು ಮಕ್ಕಳನ್ನು ಹೆಚ್ಚುಬೇಗ ಆವರಿಸಿಕೊಳ್ಳುತ್ತವೆ ಎಂದು ನನಗೆ ಅನಿಸುತ್ತದೆ.
ಅಜ್ಜ ಹೇಳುವ ಚಾಕಲೇಟ ತಿನ್ನುತ್ತ ಚೆನ್ನ ಎನ್ನುವ ಬಾಲಕ ಎಡಬಿಡದ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಗೆಲುವು ಕಾಣುವುದನ್ನು ‘ಚಮತ್ಕಾರಿ ಚಾಕಲೇಟ’ ಕಥೆÀ ಹೇಳುತ್ತದೆ. ಆತ್ಮವಿಶ್ವಾಸ ಮತ್ತು ಪ್ರಯತ್ನಗಳು ಮುಖ್ಯ ಎಂಬ ಸಂದೇಶ ನೀಡುತ್ತದೆ ಈ ಕಥೆ. ವಿಚಿತ್ರ ಸುದ್ದಿ ಹೇಳದಿದ್ದರೆ ಸಾಹುಕಾರ ಕೆಲಸದಿಂದ ತೆಗೆದುಹಾಕುತ್ತಿದ್ದ. ವಿಚಿತ್ರ ಸುದ್ದಿಯ ಮೂಲಕವೇ ಸಾಹುಕಾರ ರಾತ್ರಿ ಪೂರಾ ಸೈಕಲ್ ಹೊಡೆಯುವಂತೆ ಮಾಡಿ ಅವನಿಗೆ ಬುದ್ಧಿ ಕಲಿಸುವುದು ಒಂದು ಕಥೆಯಾದರೆ… ಅಜ್ಜ ಕೊಡುವ ಹಣದಿಂದ ಏನಾದರೂ ಖರೀದಿಸುವ ರೋಸಿ ಎನ್ನುವ ಬಾಲಕಿ ಅಂಗಡಿಯವನೊಬ್ಬನ ಮೋಸದಿಂದ ತೊಂದರೆಗೆ ಒಳಗಾಗುತ್ತಾಳೆ. ಆದರೆ ತನ್ನ ಜಾಣತನದಿಂದ ತಾನು ಕಳೆದುಕೊಂಡ ಹಣ ಪುನಹ ದೊರಕಿಸಿಕೊಳ್ಳುವ ಕಥೆ ಇನ್ನೊಂದು.
‘ಮನಸ್ಸಿನಂತೆ ಫಲ’, ‘ಕೆಟ್ಟ ಮೇಲೆ ಬುದ್ಧಿ ಬಂತು’ ಮುಂತಾದ ಕಥೆಗಳ ತಲೆಬರಹಗಳೇ ಉದ್ಧೇಶಗಳನ್ನು ಹೇಳಿಬಿಡುತ್ತವೆಯಾದರೂ ಒಳ್ಳೆಯ ಮನಸ್ಸು, ಹಿರಿಯರ ಜಾಣ್ಮೆ ಎಲ್ಲ ನಮ್ಮ ಮುಂದೆ ಇಡುತ್ತ ಗೆಲುವು ಪಡೆಯುತ್ತವೆ. ಸೋಮು ಕುದರಿಹಾಳ ಅವರು ಮಕ್ಕಳ ಒಳಿತಿನ ವಿಸ್ತಾರಕ್ಕೆ ಯತ್ನಿಸುತ್ತ ಅವರಿಗೆ ಆಪ್ತವಾಗುವ ಕಥೆಗಳ ಮೂಲಕವೇ ಪಠ್ಯಗಳಿಗಿಂತಲೂ ವಿಸ್ತಾರದ ಉಣಿಸನ್ನು ನೀಡಲು ಪ್ರಯತ್ನಿಸಿದ್ದಾರೆ. ಇದು ಅವರ ಮೊದಲ ಪ್ರಯತ್ನ. ದೊಡ್ಡವರಿಗಾಗಿಯೂ ಬರೆಯುತ್ತ, ಒಳ್ಳೊಳ್ಳೆಯ ಕವಿತೆಗಳನ್ನು ನೀಡುತ್ತ ನಮ್ಮ ಮುಂದಿರುವ ಸೋಮು ಅವರು ಮಕ್ಕಳ ಪ್ರೀತಿಯನ್ನು ಈ ಸಂಕಲನದ ಮೂಲಕ ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ. ಈ ಪ್ರೀತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾತ್ಮಕವಾಗಿ ಅರಳುವ ಎಲ್ಲ ಸಾಧ್ಯತೆಗಳಿಗೆ ಅವರು ತೆರೆದುಕೊಳ್ಳಿಲಿ ಎಂದು ಹೇಳುತ್ತ ಒಂದು ಒಳ್ಳೆಯ ಪ್ರಯತ್ನದೊಂದಿಗೆ ನಮ್ಮೊಂದಿಗಿರುವ ಅವರಿಗೆ ಕೃತಜ್ಞತೆ ಸಲ್ಲಿಸುತ್ತ… ತಾವೆಲ್ಲರೂ ಅವರ ಕಥಾ ಸಂಕಲನ ಓದಿ ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ.
*****************************************************
ತಮ್ಮಣ್ಣ ಬೀಗಾರ.