ದಾರಾವಾಹಿ-

ಅದ್ಯಾಯ-11

ಅದೃಷ್ಟದಿಂದಲೋ, ದೈವಕೃಪೆಯಿಂದಲೋ ಮನುಷ್ಯನಿಗೆ ದೊರಕುವ ಸುಖ ಸಂಪತ್ತು ಕೆಲವೊಮ್ಮೆ ಅವನನ್ನು ಎಂಥ ಕಾರ್ಯಕ್ಕಾದರೂ ಪ್ರೇರೇಪಿಸಬಲ್ಲದು ಎಂಬುದಕ್ಕೆ ಸಂತಾನಪ್ಪ ಕಿಲ್ಲೆಯೇ ಸಾಕ್ಷಿಯಾಗುತ್ತಾನೆ. ಅವನು ತನ್ನ ದಿಢೀರ್ ಶ್ರೀಮಂತಿಕೆಯಿಂದಲೂ, ಗಂಡಸುತನದ ಕೊಬ್ಬಿನಿಂದಲೂ ಮಸಣದ ಗುಡ್ಡೆಯ, ತನಗಿಂತ ಇಪ್ಪತ್ತು ವರ್ಷ ಕಿರಿಯಳಾದ ದ್ಯಾವಮ್ಮ ಎಂಬ ಹುಡುಗಿಯನ್ನು ಒಲಿಸಿ ತನ್ನವಳನ್ನಾಗಿಸಿಕೊಂಡ ವಿಷಯವು ಅವಳ ಪ್ರಿಯಕರ ಪರಮೇಶನಿಗೆ ತಿಳಿದುಬಿಟ್ಟಿತು. ಪರಮೇಶ ದ್ಯಾವಮ್ಮಳನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದವನು ಕಂಗಾಲಾಗಿಬಿಟ್ಟ. ಸಂತಾನಪ್ಪ ತನ್ನ ಹುಡುಗಿಯನ್ನು ಯಾವತ್ತು ಮರುಳು ಮಾಡಿ ಬಗಲಿಗೆಳೆದುಕೊಂಡನೋ ಆವತ್ತಿನಿಂದ ಪರಮೇಶನಿಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿತ್ತು. ಜೊತೆಗೆ ಸಂತಾನಪ್ಪನ ಮೇಲೆ ತೀವ್ರ ದ್ವೇಷವೂ ಬೆಳೆದುಬಿಟ್ಟಿತು. ಆದ್ದರಿಂದ ಅವನು ತಾನು ಸಂತಾನಪ್ಪನಂಥ ನೀಚನ ಮೇಲೆ ಸೇಡು ತೀರಿಸಿಕೊಳ್ಳದಿದ್ದರೆ ತನ್ನ ಪುರುಷತ್ವಕ್ಕೇ ಅವಮಾನ! ಎಂದು ಯೋಚಿಸುತ್ತ ಕುದಿಯತೊಡಗಿದ. ಆದರೆ ಸಂತಾನಪ್ಪನೆದುರು ತಾನು ಉಸಿರೆತ್ತಲಾಗದ ದೈನೇಸಿ ಸ್ಥಿತಿಯಲ್ಲಿದ್ದೇನೆಂಬುದನ್ನೂ ತಿಳಿದಿದ್ದವನು ಅದೇ ಕೊರಗಿನಿಂದ ಮಹಾ ಕುಡುಕನಾಗಿಬಿಟ್ಟಿದ್ದ. ಆದರೂ ಸರಿಯಾದ ಸಮಯಕ್ಕಾಗಿ ಹೊಂಚು ಹಾಕುತ್ತಲೇ ಇದ್ದ. ಹಾಗಾಗಿ ಇಂದು ಅದೇ ಸಂತಾನಪ್ಪ ಈಶ್ವರಪುರದ ಪ್ರತಿಷ್ಠಿತ ಬಿಲ್ಡರ್‍ಗಳಲ್ಲೊಬ್ಬನಾದ ಶಂಕರನ ಮೇಲೆ ಮಚ್ಚು ಹರಿಸಲು ಹವಣಿಸುತ್ತ ತಿರುಗಾಡುತ್ತಿದ್ದ ಸಂಗತಿಯು ಪರಮೇಶನಿಗೆ ತಿಳಿದು ಅವನ ದ್ವೇಷದ ಜ್ವಾಲೆಗೆ ತುಪ್ಪ ಸುರಿದಂತಾಯಿತು. ಅವನು ತನ್ನ ಸೇಡು ತೀರಿಸಿಕೊಳ್ಳುವ ಸಮಯ ಹತ್ತಿರವಾದ ಖುಷಿಯಿಂದ ಸಾರಾಯಿ ಶೀಶೆಯನ್ನು ನೆತ್ತಿಯ ಮೇಲಿಟ್ಟುಕೊಂಡು ಕುಣಿದಾಡಿಬಿಟ್ಟ!

   ಉತ್ತರ ಕರ್ನಾಟಕದ ರುದ್ರೇನಾಹಳ್ಳಿ ಎಂಬ ಕುಗ್ರಾಮವೊಂದರಲ್ಲಿ ಹುಟ್ಟಿ ಬೆಳೆದ ಪರಮೇಶ ಮತ್ತು ದ್ಯಾವಮ್ಮ ನೆರೆಕರೆಯಲ್ಲೇ ವಾಸಿಸುತ್ತಿದ್ದವರು.  ಅವನಿಗೆ ಕುಡಿಮೀಸೆ ಚಿಗುರುತ್ತಲೂ ಇವಳಿಗೆ ಹದಿಹರೆಯ ಇಣುಕುತ್ತಲೂ ಇಬ್ಬರ ನಡುವೆ ದೈಹಿಕಾಕರ್ಷಣೆಯ ಪ್ರೇಮಾಂಕುರವಾಗಿತ್ತು. ಆದರೆ ಆ ಪ್ರೀತಿಯ ಮಧುರ ಸವಿಯನ್ನು ಹೆಚ್ಚು ಕಾಲ ಅನುಭವಿಸಲು ಇಬ್ಬರ ಮನೆಯ ಪರಿಸ್ಥಿತಿಯೂ ಅವಕಾಶ ಕೊಡಲಿಲ್ಲ. ಒಂದೆಡೆ ಅತಿಯಾದ ಬಡತನ, ಇನ್ನೊಂದೆಡೆ ಮಳೆ ಬೆಳೆಯೂ ಚೆನ್ನಾಗಿ ಆಗದೆ ದ್ಯಾವಮ್ಮನ ಅಪ್ಪ ಮಲ್ಲೇಶ ತಾನು ಮಾಡಿದ ಕೃಷಿ ಸಾಲ ತೀರಿಸಲಾಗದೆ ಊರುಬಿಟ್ಟು ಹೋಗುವುದೇ ಸಮಸ್ಯೆಗೆ ಪರಿಹಾರವೆಂದು ನಿರ್ಧರಿಸಿದ. ಅತ್ತ ಪರಮೇಶನ ಕುಟುಂಬವೂ ಅದೇ ಕಾರಣಕ್ಕೆ ಮಲ್ಲೇಶನ ಕುಟುಂಬದೊಂದಿಗೆ ಸೇರಿ ವಲಸೆ ಹೊರಟು ಕಟ್ಟಡ ಕಾಮಗಾರಿ ಬಿಲ್ಡರ್‍ಗಳ ‘ಅಧಿಕ ಸಂಬಳ’ ದ ಆಸೆಗೊಳಗಾಗಿ ಈಶ್ವರಪುರಕ್ಕೆ ಬಂದು ನೆಲೆಸಿತ್ತು.

ದ್ಯಾವಮ್ಮ ಪರಮೇಶನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಆದ್ದರಿಂದ ಪರವೂರಿಗೆ ಬಂದ ನಂತರ ಕೆಲವು ಕಾಲ ಅವನ ಸಾಂಗತ್ಯವನ್ನು ಮತ್ತಷ್ಟು ಬಯಸುತ್ತಿದ್ದಳು. ಪರಮೇಶನಿಗೂ ಅವಳು ಸರ್ವಸ್ವವಾಗಿದ್ದಳು. ಊರಲ್ಲಿದ್ದಾಗಲೂ ಅವನು ಸದಾ ಅವಳ ಹಿಂದೆಯೇ ಸುತ್ತುತ್ತಿದ್ದ. ಇಬ್ಬರೂ ತಂತಮ್ಮ ಹೊಲಗದ್ದೆಗಳ ಕೆಲಸ ಕಾರ್ಯಗಳಲ್ಲೂ ಜೊತೆಯಾಗಿ ದುಡಿಯುತ್ತ ಮಾವು ಮತ್ತು ದಾಳಿಂಬೆ ತೋಪುಗಳ ಮರೆಯಲ್ಲಿ ಕುಳಿತು ಪ್ರೇಮಸಲ್ಲಾಪವಾಡುತ್ತ ಪ್ರಪಂಚವನ್ನೇ ಮರೆಯುತ್ತಿದ್ದರು. ಆದರೆ ಅಂದು ತನ್ನ ಜನುಮದ ಗೆಳೆಯನನ್ನು ಒಂದು ಕ್ಷಣವೂ ಬಿಟ್ಟಿರಲಾಗದೆ ಒಡನಾಡುತ್ತಿದ್ದ ದ್ಯಾವಮ್ಮ ಈಶ್ವರಪುರಕ್ಕೆ ಬಂದ ಕೆಲವೇ ಕಾಲದೊಳಗೆ ಬದಲಾಗಿಬಿಟ್ಟಳು. ಅದಕ್ಕೆ ಕಾರಣವೂ ಇತ್ತು. ಈಶ್ವರಪುರದ ಜನರ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಅವರ ಶಿಸ್ತುಬದ್ಧ ಜೀವನಶೈಲಿ, ಸುಸಂಸ್ಕೃತ ನಡೆ ನುಡಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿನ ತನ್ನ ಓರಗೆಯ ಹೆಣ್ಣು ಮಕ್ಕಳ ಸ್ನಿಗ್ಧ ಚೊಕ್ಕ ಸೌಂದರ್ಯ ಹಾಗೂ ಅದಕ್ಕೊಪ್ಪುವಂಥ ಆಧುನಿಕ ಶೈಲಿಯ ವೇಷ ಭೂಷಣಗಳನ್ನು ಅವರೆಲ್ಲ ತೊಡುತ್ತ ವನಪು ವಯ್ಯಾರದಿಂದ ಮಿಂಚುತ್ತಿದ್ದುದನ್ನು ಕಾಣುತ್ತ ಬಂದ ಬಯಲುಸೀಮೆಯ ಹಳ್ಳಿಯ ಹುಡುಗಿ ದ್ಯಾವಮ್ಮನಿಗೆ ತನ್ನೂರಿನ ಜೀವನವೇಕೋ ಶುಷ್ಕ ನೀರಸವಾಗಿ ಕಾಣತೊಡಗಿತು. ಹಾಗಾಗಿ ತಾನೂ ಇಲ್ಲಿನವರಂತೆ ಸುಂದರವಾಗಿ ಬದುಕಬೇಕು ಎಂದು ಅವಳು ಇಚ್ಛಿಸಿದಳು. ಅಪ್ಪನೊಂದಿಗೆ ಕೂಲಿಗೆ ಹೋಗಿ ದುಡಿಮೆಯಾರಂಭಿಸಿದ ಮೇಲೆ ಕೆಲವೇ ಕಾಲದೊಳಗೆ ಲಂಗ ದಾವಣಿ ಮತ್ತು ಅರ್ಧ ಸೀರೆಯಂಥ ಹಳ್ಳಿಯ ಉಡುಗೆ ತೊಡುಗೆಗಳನ್ನು ಕಿತ್ತೊಗೆದು ಚೂಡಿದಾರ್, ಸ್ಕರ್ಟ್‍ಗಳನ್ನು ತೊಟ್ಟುಕೊಂಡು ವಿಹರಿಸಲಾರಂಭಿಸಿದಳು. ಬರಬರುತ್ತ ಅದರಿಂದಲೂ ತೃಪ್ತಳಾಗದೆ ಜೀನ್ಸ್ ಪ್ಯಾಂಟ್, ಟೀಶರ್ಟ್ ಧರಿಸುವವರೆಗೂ ಮುಂದುವರೆದು ಹದಿನೆಂಟರ ಹರೆಯ ತನ್ನ ಕೋಮಲ ಸೌಂದರ್ಯವನ್ನು ಮಾಟವಾಗಿ ಪ್ರದರ್ಶಿಸುತ್ತ ಖುಷಿಪಡಲಾರಂಭಿಸಿದಳು. ಆದ್ದರಿಂದ ದಿನವಿಡೀ ಎಲೆಯಡಿಕೆ, ಮಾವಾ ಮತ್ತು ಪಾನ್‍ಪರಾಗ್‍ನಂಥ ಮಾದಕವಸ್ತುಗಳನ್ನು ಜಗಿಯುತ್ತ ಅದರದೇ ನಶೆಯಲ್ಲಿದ್ದು ಅಡ್ಡ ವಾಸನೆ ಹೊಡೆಯುತ್ತಿದ್ದ ಪರಮೇಶನ ಒಣಕಲು ಮೂತಿಯೂ, ಬಡಕಲು ದೇಹವೂ ಅವಳಿಗೆ ಸಹಜವಾಗಿಯೇ ಅಸಹ್ಯವೆನಿಸತೊಡಗಿತು. ಅದರಿಂದ ನಿಧಾನಕ್ಕೆ ಅವನ ಮೇಲಿನ ಪ್ರೀತಿಯೂ ಅವಳಲ್ಲಿ ಆರಿಹೋಯಿತು.

   ಮೂರುಕಾಸಿಗೆ ಬೆಲೆಯಿಲ್ಲದಂಥ ಈ ಪ್ರೀತಿ ಪ್ರೇಮಕ್ಕೆಲ್ಲ ತಾನಿನ್ನು ಮರುಳಾಗುವ ಅವಿವೇಕಿಯಾಬಾರದು. ಪರಮೇಶನನ್ನು ಮದುವೆಯಾದೆನೆಂದರೆ ಸಾಯುವತನಕವೂ ತಾನು ಕೂಲಿನಾಲಿ ಮಾಡುತ್ತ ಗುಡಿಸಲಲ್ಲೇ ಬದುಕಿ ಸಾಯಬೇಕಾದೀತು! ಹಾಗೆ ಬದುಕಲು ತನ್ನಿಂದಿನ್ನು ಸಾಧ್ಯವೇ ಇಲ್ಲ. ಈ ಬಡತನದಿಂದ ಆದಷ್ಟು ಬೇಗ ಹೊರಗೆ ಬಂದು ಇಲ್ಲಿನ ಜನರಂತೆ ತಾನೂ ಸ್ಥಿತಿವಂತಳಾಗುವ ದಾರಿಯನ್ನು ಕಂಡುಕೊಳ್ಳಬೇಕು ಎಂದೆಲ್ಲ ಯೋಚಿಸುತ್ತಿದ್ದ ದ್ಯಾವಮ್ಮ ತನ್ನಿಚ್ಛೆ ನೆರವೇರಿಸುವಂಥ ಗಂಡೊಬ್ಬನ ಅನ್ವೇಷಣೆಗಿಳಿದಳು. ಅದೇ ಸಮಯದಲ್ಲಿ ದಿಢೀರ್ ಶ್ರೀಮಂತನೂ, ಶಂಕರನಂಥ ಸ್ಥಳೀಯ ಶ್ರೀಮಂತರ ಸಂಘ ಬೆಳೆಸಿ ಇಲ್ಲಿನವನಾಗಿಯೇ ರಾಜಾರೋಷದಿಂದ ಬದುಕುತ್ತಿದ್ದ ಸಂತಾನಪ್ಪ ಕಿಲ್ಲೆಯ ಕಟ್ಟಡವೊಂದಕ್ಕೆ ಅವನ ಮೇಸ್ತ್ರಿಯೊಡನೆ ಕೂಲಿಯಾಳಾಗಿ ಹೋದಳು. ಆವತ್ತು ಸಂತಾನಪ್ಪನೂ ತನ್ನ ಕಟ್ಟಡದ ಕೆಲಸಕಾರ್ಯಗಳನ್ನು ಗಮನಿಸಲು ಬಂದಿದ್ದ. ಆಹೊತ್ತು ಆಕಸ್ಮತ್ತಾಗಿ ಅವನ ವಕ್ರದೃಷ್ಟಿಯು ದ್ಯಾವಮ್ಮನ ಮೇಲೆ ಬಿದ್ದುಬಿಟ್ಟಿತು. ಅವಳ ತೆಳ್ಳನೆ ನಸುಗೆಂಪಿನ, ಬಾಗಿ ಬಳುಕುವಂಥ ದೇಹಸಿರಿಯನ್ನು ಕಂಡವನು ಆಕ್ಷಣವೇ ಅವಳನ್ನು ಮೋಹಿಸಿಬಿಟ್ಟ.

   ದ್ಯಾವಮ್ಮಳೂ ಸಂತಾನಪ್ಪನನ್ನು ಕೆಲವು ಕ್ಷಣ ಅಡಿಗಣ್ಣಿನಿಂದ ದಿಟ್ಟಿಸಿ ನೋಡಿದಳು. ಮೂವತ್ತೈದರ ಯುವಕನಂತೆ ಕಾಣುತ್ತಿದ್ದ ಅವನ ಕಟ್ಟುಮಸ್ತುತನಕ್ಕಿಂತಲೂ ತನ್ನಪ್ಪನಿಂದಲೇ ಅವನ ಸಿರಿವಂತಿಕೆಯ ಕಥೆಯನ್ನು ಕೇಳಿದ್ದವಳು ಅಂದೇ ಅವನಿಗೆ ಆರ್ಕಷಿತಳಾಗಿ ತನ್ನಾಸೆಯನ್ನು ಪೂರೈಸಿಕೊಳ್ಳಬೇಕೆಂಬ ಕನಸು ಕಾಣತೊಡಗಿದಳು. ಹೀಗಿದ್ದವಳನ್ನು ಆವತ್ತೊಂದು ದಿನ ಮೇಸ್ತ್ರಿಯು ಸಂತಾನಪ್ಪನ ಆಜ್ಞೆಯ ಮೇರೆಗೆ ಅವನ ಕೋಣೆಗೆ ಕಳುಹಿಸಿಕೊಟ್ಟ. ದ್ಯಾವಮ್ಮನಿಗೂ ಅದೇ ಬೇಕಿತ್ತು. ಆದರೆ ಸ್ತ್ರೀ ಸಹಜ ನಾಚಿಕೆ ಅಳುಕು ಅವಳನ್ನು ಕಾಡುತ್ತಿತ್ತು. ಮೇಸ್ತ್ರಿ ಮತ್ತು ಜೊತೆ ಕೆಲಸಗಾರರಿಂದ ಸಂತಾನಪ್ಪನ ಗುಣಗಾನವನ್ನೂ, ಅವನ ಉದಾರತೆಯನ್ನೂ ಕೇಳುತ್ತಿದ್ದವಳಿಗೆ ಅವನು ತಮ್ಮೂರಿನ ಕಡೆಯವನೇ ಎಂಬ ಧೈರ್ಯವೂ ಅವಳನ್ನು ಅವನ ಕೋಣೆ ಹೆಜ್ಜೆಯಿಡುವಂತೆ ಪ್ರೇರೇಪಿಸಿತು. ಕೋಣೆ ಹೊಕ್ಕವಳು ಒಂದು ಮೂಲೆಗೆ ಸರಿದು, ಸಿಮೆಂಟು ಮೆತ್ತಿದ್ದ ತನ್ನ ಪಾದಗಳನ್ನು ಮುಜುಗರದಿಂದ ಮರೆಮಾಚುತ್ತ, ಹೆಬ್ಬೆರಳುಗಳಿಂದ ಅಲ್ಲಲ್ಲೇ ಅದನ್ನು ತೊಡೆದು ಹಾಕುತ್ತ ನಿಂತಳು. ಅವಳ ನಾಚಿಕೆಯನ್ನು ಕಂಡ ಸಂತಾನಪ್ಪ ರೋಮಾಂಚಿತನಾಗಿ ಮಾತಾಡಿಸಿದ. ಅವಳೂ ವಯ್ಯಾರದಿಂದ ನುಲಿಯುತ್ತ ಒಂದಿಷ್ಟು ಮಾತಾಡಿದಳು. ಮಾತಿನ ಮಧ್ಯೆ ಅವಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಂತಾನಪ್ಪನ ಮನಸ್ಸು ಈ ಪುಟ್ಟ ರಾಜಕುಮಾರಿ ತನ್ನವಳಾಗಲೇಬೇಕೆಂದು ಹಠ ಹಿಡಿದುಬಿಟ್ಟಿತು. ಆದ್ದರಿಂದ ಅವನು ಮತ್ತೆ ತಡಮಾಡಲಿಲ್ಲ.

‘ಹೇ, ಹುಡಿಗಿ, ಬ್ಯಾಸರ ಮಾಡ್ಕೊಳ್ಳೊದಿಲ್ಲ ಅಂದ್ರ ಒಂದ್ ಮಾತ್ ಕೇಳೇನು…?’ ಎಂದ ಮೃದುವಾಗಿ.‘ಹ್ಞೂಂ ಹೇಳಿ, ಏನಾ…?’ ಎಂದಳು ಅವಳು ತಲೆತಗ್ಗನನ್ನ ಮದಿವಿ ಆಗ್ತಿ ಏನಾ…?’ ಎಂದು ಸಂತಾನಪ್ಪ ತುಟಿಯಂಚಿನಲ್ಲಿ ನಗುತ್ತ ಕೇಳಿದ. ದ್ಯಾವಮ್ಮ ಬೆಚ್ಚಿ ಬಿದ್ದವಳಂತೆ ನಟಿಸಿದಳು. ನಂತರ ಲಜ್ಜೆಯಿಂದ, ‘ಅಯ್ಯಯ್ಯಾ…ಅದೆಲ್ಲ ನಂಗೊತ್ತಿಲ್ಲಪ್ಪಾ! ಅಪ್ಪಯ್ಯನ್ ಕೇಳಿ. ಅಂವ ಹ್ಞೂಂ ಅಂದ್ರಾ ನಾನೂ ಹ್ಞೂಂ…!’ ಎಂದವಳು ಒಂದೇ ಉಸಿರಿಗೆ ಹೊರಗ್ಹೋಡಿ ಬಂದಳು.

   ಅಷ್ಟು ಸಣ್ಣ ಪ್ರಾಯದ ಹುಡುಗಿಯೊಬ್ಬಳು ಪ್ರಥಮ ನೋಟದಲ್ಲೇ ಮತ್ತು ಮೊದಲ ಮಾತುಕತೆಯಲ್ಲೇ ತನ್ನನ್ನು ಮೆಚ್ಚಿದ್ದು ಸಂತಾನಪ್ಪನಲ್ಲಿ ಮೊದಲಿಗೆ ವಿಸ್ಮಯವನ್ನೂ ಅನುಮಾನವನ್ನೂ ಮೂಡಿಸಿತಾದರೂ ಅದನ್ನು ಬದಿಗೊತ್ತಿದವನು, ತಾನು ಈ ವಯಸ್ಸಿನಲ್ಲೂ ಸಣ್ಣ ಹುಡುಗಿಯರು ಇಷ್ಟಪಡುವಂತೆ ಇದ್ದೇನೆಯೇ? ಎಂದು ಯೋಚಿಸಿ ಪುಳಕಿತನಾದ. ಏಕೆಂದರೆ ಅವನು ತನ್ನ ಮೊದಲ ಮಡದಿ ಮುನಿಯಮ್ಮನ ಜೊತೆಗಿನ ಸಂಸಾರದಲ್ಲಿ ಬಹಳವೇ ನೀರಸಗೊಂಡಿದ್ದ. ಹಾಗಾಗಿ ಈಗಿನ ಶ್ರೀಮಂತ ಬದುಕಿಗೆ ಹೊಸದೊಂದು ಸಂಗಾತಿಯ ಬಯಕೆಯು ಅವನನ್ನು ಸದಾ ಕಾಡುತ್ತಿತ್ತು. ಆದ್ದರಿಂದ ಮರುದಿನವೇ ದ್ವಾವಮ್ಮಳ ಅಪ್ಪ ಮಲ್ಲೇಶಪ್ಪನನ್ನು ಕಟ್ಟಡಕ್ಕೆ ಕರೆದು ಕುಳ್ಳಿರಿಸಿಕೊಂಡು ಮಾತುಕತೆಗಿಳಿದ. ಮಲ್ಲೇಶಪ್ಪನಿಗೆ ಸಂತಾನಪ್ಪನ ಕಥೆಯೆಲ್ಲ ಗೊತ್ತಿತ್ತು. ಆದರೂ ತಾನವನ ಅಡಿಯಾಳಾಗಿ ದುಡಿಯುವವನೆಂಬ ಗೌರವಕ್ಕೆ ಮಣಿದು ಅವನೆದುರು ವಿನಮ್ರವಾಗಿ ಕುಳಿತುಕೊಂಡ. ‘ಮಲ್ಲೇಶಪ್ಪಾ ನಾನು ಸುತ್ತಿ ಬಳಸಿ ಮಾತಾಡೋನಲ್ಲ. ನಂಗ್ ಈಗಾಗಲೇ ಸಂಸಾರ ಐತಿ ಅಂತ ನಿಂಗೂ ಗೊತ್ತೈತಿ. ಆದರೆ ನನ್ನಾಕಿ ವಿದ್ಯಾಬುದ್ಧಿ ಕಲ್ತವಳಲ್ಲ. ಮಕ್ಕಳಿನ್ನೂ ಸಣ್ಣವು. ನಂಗಿರುವ ದೊಡ್ಡ ಆಸ್ತಿಯನ್ನು ಸಂಭಾಳಿಸಲು ಅವ್ರಿಂದ ಸಾಧ್ಯ ಆಗಕಿಲ್ಲ. ನಿನ್ ಮಗ್ಳು ಶಾಲೆ ಓದಿರೋಳು. ಭಾಳ ಶಾಣೆಯೂ ಅದಾಳ. ಹಂಗಾಗಿ ನಂಗೆ ಆಕಿ ಹಿಡಿಸಿಯಾಳ. ಆಕಿಗೂ ನಾ ಒಪ್ಪಿಗೆಯಾಗಿವುನಿ. ಆಕಿ ನಿನ್ನ ಒಪ್ಪಿಗಿ ಕೇಳು ಅಂದಾಳ. ನೀನು ಆಕೀನ ನಂಗಾ ಕೊಟ್ಟು ಮದಿವಿ ಮಾಡಿದಿಯಂದ್ರಾ ಆಕೀನ ರಾಣಿ ಹಂಗೆ ನೋಡ್ಕೊಂತೀನಿ ಮಾತ್ರವಲ್ಲ, ನಿನ್ನೆಲ್ಲ ಉದ್ರೀನ (ಸಾಲ) ತೀರ್ಸಿ, ನನ್ ಹಿರಿಯನಂಗೆ ಜೋಪಾನ ಮಾಡ್ತೀನಿ, ಏನಂತೀ…?’ ಎಂದು ಗಂಭೀರವಾಗಿ ಕೇಳಿದ.

   ಸ್ತ್ರೀಯರ ವಿಷಯದಲ್ಲಿ ಸಂತಾನಪ್ಪ ಸ್ವಲ್ಪ ದುರ್ಬಲ ಬುದ್ಧಿಯವನು ಹೌದಾದರೂ ಇತರ ವಿಷಯಗಳಲ್ಲಿ ಅವನು ಯಾರಿಗೂ ಮೋಸ, ಕೇಡು ಬಗೆದ ಮನುಷ್ಯನಲ್ಲ. ತಮ್ಮೂರಿನ ಜನರಿಗೆ ಅವನು ಬಹಳ ಕರುಣೆ ಅನುಕಂಪ ತೋರಿಸುತ್ತ ಉಪಕಾರ ಮಾಡುತ್ತ ಬರುತ್ತಿರುವವನು ಎಂಬುದನ್ನೆಲ್ಲ ಮಲ್ಲೇಶಪ್ಪನೂ ಗಮನಿಸುತ್ತ ಬಂದಿದ್ದ. ಹೀಗಿರುವಾಗ ಈಗ ತನ್ನ ಒಪ್ಪಿಗೆಯಿಂದ ಮಗಳ ಬಾಳು ಹಸನಾಗುವುದಲ್ಲದೇ ತನ್ನ ತಲೆಯ ಮೇಲಿರುವ ದೊಡ್ಡ ಮೊತ್ತದ ಉದಾರಿಯೂ ಕಳಚಿಕೊಳ್ಳುತ್ತದೆ ಎಂದೂ ಯೋಚಿಸಿದ. ಹಾಗಾಗಿ ಈ ಸನ್ನಿವೇಶವು ಅವನಿಗೆ ದಿಢೀರ್ರನೇ ದೇವರು ಪ್ರತ್ಯಕ್ಷನಾಗಿ, ‘ಭಕ್ತಾ, ನಿನಗೇನು ವರ ಬೇಕೋ ಕೇಳುವಂತವನಾಗು…?’ ಎಂಬಂತಾಯಿತು. ಮುಂದೇನೂ ಯೋಚಿಸದೆ ಮಗಳನ್ನು ಅವನಿಗೆ ಧಾರೆಯೆರೆದುಬಿಟ್ಟ. ಅಂದಿನಿಂದ ದ್ಯಾವಮ್ಮ ಸಂತಾನಪ್ಪನ ಎರಡನೆಯ ಹೆಂಡತಿಯಾಗಿ ತಾನು ಅಂದುಕೊಂಡಂತೆಯೇ ತಗಟು ಶೀಟಿನ ಜೋಪಡಿಯನ್ನು ತೊರೆದು ಮಸಣದಗುಡ್ಡೆಯ ರಾಮತೀರ್ಥ ಕಾಮತರ ಬಾಡಿಗೆಯ ತಾರಸಿ ಮನೆಯ ಸಿರಿವಂತ ಬದುಕಿಗೆ ಪಾದಾರ್ಪಣೆ ಮಾಡಿದಳು.

  ಆದರೆ ಆವತ್ತು ಮಧುಚಂದ್ರದ ರಾತ್ರಿ ಗಂಡನ ಕೋಣೆ ಪ್ರವೇಶಿಸಿದ ದ್ಯಾವಮ್ಮನಿಗೆ ತನ್ನ ಹಳೆಯ ಪ್ರೇಮಿ ಪರಮೇಶನ ನೆನಪು ಇನ್ನಿಲ್ಲದಂತೆ ಕಾಡಿತು. ಅವನ ಮುಗ್ಧ, ನಿಶ್ಕಲ್ಮಶ ಪ್ರೀತಿಯನ್ನು ನೆನೆದವಳ ಕರುಳು ಹಿಂಡಿದಂತಾಗಿ ಕಣ್ಣೀರುಕ್ಕಿ ಬಂತು. ಆ ಅಮಾಯಕನಿಗೆ ದ್ರೋಹ ಮಾಡಿಬಿಟ್ಟೆನೇನೋ…? ಎಂಬ ಪಾಪಪ್ರಜ್ಞೆ ಹುಟ್ಟಿತು. ಸುಮಾರು ಹೊತ್ತು ಅಳುತ್ತ ಕುಳಿತಳು. ಅದೇ ಹೊತ್ತಿಗೆ ಸುಗಂಧದ್ರವ್ಯದ ಪರಿಮಳವೂ ಮಲ್ಲಿಗೆ ಹೂವಿನ ಕಂಪೂ ಅವಳ ಕೋಣೆಯತ್ತ ಇಂಪಾಗಿ ಹರಿದು ಬಂತು. ಆಗ ಅಳು ನಿಲ್ಲಿಸಿ ಅತ್ತ ಗಮನ ಹರಿಸಿದಳು. ಸಂತಾನಪ್ಪ ಬಾಗಿಲು ತಳ್ಳಿಕೊಂಡು ಒಳಗಡಿಯಿಟ್ಟ. ಅವನು ತನ್ನ ಭುಜ, ಕತ್ತು ಮತ್ತು ಕೈಗಳಿಗೆ ಮಲ್ಲೆಹೂವಿನ ದಂಡೆಯನ್ನು ಸುತ್ತಿಕೊಂಡು ದ್ಯಾವಮ್ಮಳತ್ತ ತುಂಟ ನಗುತ್ತ ಬೀರುತ್ತ ಬಂದ. ದ್ವಾವಮ್ಮ ಅವನಿಗೆ ತಿಳಿಯದಂತೆ ಕಣ್ಣೊರೆಸಿಕೊಂಡಳು. ಭಯದಿಂದ ಅವಳೆದೆ ಜೋರಾಗಿ ಬಡಿದುಕೊಂಡಿತು. ವಿಪರೀತ ಲಜ್ಜೆಯೂ ಮೂಡಿ ಎದ್ದು ತಲೆತಗ್ಗಿಸಿ ನಿಂತಳು. ಸಂತಾನಪ್ಪ ಡೇಸಾರ ಅಪಾರ ಸಂಪತ್ತಿನ ಒಡೆತನಕ್ಕೆ ಇವಳಿಂದಲೂ ಸಮರ್ಥ ಪುತ್ರನೊಬ್ಬನನ್ನು ಪಡೆಯುವ ಇಚ್ಛೆಯಿಂದ ಸಮೀಪಿಸಿದ. ದ್ಯಾವಮ್ಮ ಅವನನ್ನು ಎದುರುಗೊಂಡಳು. ತುಸುಹೊತ್ತಲ್ಲಿ ಶ್ರೀಮಂತ ಗಂಡನ ತೋಳತೆಕ್ಕೆಯಲ್ಲಿ ಮೃದುವಾಗಿ ನಲುಗುತ್ತ ತೃಪ್ತಿಯ ಪರಾಕಷ್ಠೆ ತಲುಪಿದ ಮರುಕ್ಷಣ ಅವಳು ತನ್ನ ಕೊರಳನ್ನು ವಿನಾಕಾರಣ ನೋಯಿಸುತ್ತಿದ್ದ ಮುತ್ತಿನ ಹಾರವನ್ನು ಸರ್ರನೆ ಕಿತ್ತೆಸೆಯುವಂತೆ ಪರಮೇಶನ ಪ್ರೀತಿಯ ನೆನಪುಗಳನ್ನೂ ಮನಸ್ಸಿನಿಂದ ಹರಿದು ಚೆಲ್ಲಿಬಿಟ್ಟಳು.

                                                         ***

ಅತ್ತ ದ್ಯಾವಮ್ಮಳ ಮೊದಲ ರಾತ್ರಿಯ ಹೊತ್ತು ಪರಮೇಶ ತೀರಾ ವಿಚಲಿತನಾಗಿದ್ದ. ಅವಳ ಅಗಲಿಕೆಯ ನೋವನ್ನು ತಾಳಲಾಗದೆ ಮೂಗಿನ ಮಟ್ಟ ಕುಡಿದು ಮಸಣದ ಗುಡ್ಡೆಯ ಪಕ್ಕದ ಮೈದಾನದಲ್ಲಿ ಅಂಗಾತ ಬಿದ್ದುಕೊಂಡು ದಟ್ಟ ಕತ್ತಲಾಗಸವನ್ನು ದಿಟ್ಟಿಸುತ್ತ ರೋಧಿಸುತ್ತಿದ್ದ. ತನ್ನ ಸಂಗಾತಿಯಾಗಿ ತನ್ನ ವಂಶದ ಕುಡಿಗಳನ್ನು ಹೆತ್ತು ಹೊತ್ತು ಜೀವನ ಹಸನಾಗಿಸಲೆಂದೇ ಹುಟ್ಟಿ ಬಂದವಳು ತನ್ನ ದ್ಯಾವಮ್ಮಾ ಎಂದೇ ತಾನು ನಂಬಿದ್ದೆ. ಆದರೆ ಅದೇ ಹುಡುಗಿ ಇವತ್ತು ಸಿರಿವಂತಿಕೆಯ ದುರಾಸೆಗೆ ಬಿದ್ದು ತಂದೆಯ ವಯಸ್ಸಿನವನೊಡನೆ ಬಾಳಲು ಹೊರಟಿದ್ದಾಳೆಂದರೆ ಈ ಜಗತ್ತಿನಲ್ಲಿ ಪ್ರಾಮಾಣಿಕ ಪ್ರೀತಿಗೆ, ಅಂಥ ಸಂಬಂಧಕ್ಕೆ ಅರ್ಥವಿದೆಯೇ…? ಇಲ್ಲ, ಇಲ್ಲ. ಎಲ್ಲಾ ಸುಳ್ಳು. ಎಲ್ಲಾ ಭ್ರಮೆ, ಮೋಸ…!’ ಎಂದು ಗಂಟಲು ಹರಿಯುವಂತೆ ಬೊಬ್ಬೆ ಹಾಕಿದ. ದುಃಖ ಒತ್ತರಿಸಿ ಬಂತು. ಧೂಳು ತುಂಬಿದ ನೆಲದ ಮೇಲೆ ಹುಚ್ಚನಂತೆ ಹೊರಳಾಡುತ್ತ ಅತ್ತ. ಮತ್ತೆ ಅವಳ ನೆನಪು ದಾಳಿಯಿಟ್ಟಿತು.

   ಊರಲ್ಲಿದ್ದಾಗ ಆ ನನ್ನ ಚೆಲುವೆ ಮೂರು ಹೊತ್ತೂ ನನ್ನ ಹಿಂದೆಯೇ ಸುತ್ತುತ್ತ ಅದೆಂಥ ಪ್ರೀತಿ ತೋರಿಸುತ್ತಿದ್ದಳು. ಆದರೆ ಈ ಹಾಳಾದ ಊರಿಗೆ ಬಂದ ಮೇಲೆ ಎಲ್ಲವನ್ನೂ ಮರೆತುಬಿಟ್ಟಳು! ಅವಳು ಅಷ್ಟೊಂದು ನಿಷ್ಕರುಣೆಯಿಂದ ಇನ್ನೊಬ್ಬನೊಡನೆ ಹೊರಟು ಹೋಗಬೇಕಾದರೆ ನನ್ನ ಪ್ರೀತಿಯಲ್ಲಿದ್ದ ಕೊರತೆಯಾದರೂ ಏನು? ಅಂದರೆ, ಹೆಂಗಸರಿಗೆ ಪರಿಸ್ಥಿತಿಗೆ ತಕ್ಕಂತೆ ತಮ್ಮ ಸುಖ ಸಂತೋಷಕ್ಕಾಗಿ ಯಾವ ಸಂಬಂಧವನ್ನಾದರೂ ಕಡಿದುಕೊಳ್ಳುವಂಥ ಕಠಿಣ ಹೃದಯ ಇರುತ್ತದೆಯೇ…? ಅಯ್ಯೋ, ದೇವರೇ…! ಮೋಸ ಮಾಡಿಬಿಟ್ಟೆಯಲ್ಲೇ ವಂಚಕೀ…? ನಿನಗಾಗಿ ಎಷ್ಟೊಂದು ಕನಸುಗಳನ್ನು ಕಟ್ಟಿಕೊಂಡಿದ್ದನಲ್ಲೇ…! ಎಲ್ಲವನ್ನೂ ಮಣ್ಣು  ಮಾಡಿಬಿಟ್ಟೆಯಲ್ಲೇ…!’ ಎಂದು ಹತಾಶೆಯಿಂದ ನರಳಿದ. ಆದರೆ ಕೆಲವು ಕ್ಷಣದಲ್ಲಿ ತಟ್ಟನೆ ಮತ್ತಿಳಿದವನಂತೆ ಎದ್ದು ಸೆಟೆದು ಕುಳಿತ. ಜೀವಕ್ಕಿಂತಲೂ ಮಿಗಿಲಾಗಿ ಪ್ರೇಮಿಸಿದ ನನ್ನನ್ನು ವಂಚಿಸಿದ ನಿನ್ನನ್ನು ಮತ್ತು ಶ್ರೀಮಂತಿಕೆಯ ಮದದಿಂದ ನನ್ನಿಂದ ನಿನ್ನನ್ನು ಕಿತ್ತುಕೊಂಡ ಆ ಸಂತಾನಪ್ಪನನ್ನು ಎಂದೂ ಸುಖವಾಗಿರಲು ಬಿಡುವುದಿಲ್ಲವೇ…!’ ಎಂದು ಕಟಕಟನೇ ಹಲ್ಲು ಕಡಿದು ಎದ್ದು ಓಲಾಡುತ್ತ ಗುಡಿಸಲಿನೆಡೆಗೆ ಹೆಜ್ಜೆ ಹಾಕಿದ. ಆವತ್ತಿನಿಂದ ಪರಮೇಶ ಅಂಥದ್ದೊಂದು ಸಂದರ್ಭವನ್ನು ಕಾಯುತ್ತ ದಿನ ಕಳೆಯತೊಡಗಿದ. ಅದೇ ಸಮಯಕ್ಕೆ ಸರಿಯಾಗಿ ಸಂತಾನಪ್ಪ, ಶಂಕರನನ್ನು ಮುಗಿಸಲು ಮಚ್ಚು ಹಿಡಿದುಕೊಂಡು ಹುಡುಕಾಡುವುದನ್ನೂ ಕಂಡವನು, ‘ನಂಜನ್ನು ನಂಜಿಂದಲೇ ಕೀಳಬೇಕಲೇ ಮಂಗ್ಯಾ!’ ಎಂದು ತನ್ನೂರಿನ ವಿಷವೈದ್ಯ ಮುನಿಸ್ವಾಮಿ ಹಿಂದೊಮ್ಮೆ ಯಾವುದೋ ಮಾತಿನ ಮಧ್ಯೆ ತಮಾಷೆಯಾಗಿ ಹೇಳಿದ್ದ ಮಾತು ಈಗ ಅವನಿಗೆ ನೆನಪಾಯಿತು.

   ತನ್ನ ಬದುಕಿನಲ್ಲೂ ನಂಜಾಗಿ ಪರಿಣಮಿಸಿದವನನ್ನು ಸದೆಬಡಿಯಲು ಇದೇ ಸುಸಂದರ್ಭ ಎಂದು ಪರಮೇಶ ನಿರ್ಧರಿಸಿದ. ಕೂಡಲೇ ಶಂಕರನಲ್ಲಿಗೆ ಧಾವಿಸಿ ಹೋಗಿ ಸಂತಾನಪ್ಪನ ಸುದ್ದಿಯನ್ನು ಕೃತಕ ಆಪ್ತತೆಯಿಂದ ಅವನಿಗೆ ಮುಟ್ಟಿಸಿದ. ವಿಷಯ ತಿಳಿದ ಶಂಕರ ಆಘಾತಗೊಂಡ. ಆದರೆ ಪರಮೇಶನೆದುರು ತೋರಿಸಿಕೊಳ್ಳದೆ, ಅವನ ಉಪಕಾರಕ್ಕೆ ಪ್ರತಿಯಾಗಿ ಒಂದು ಬಾಟಲಿ ಅಗ್ಗದ ಮದ್ಯವನ್ನು ಅವನಿಗೆ ಉಡುಗೊರೆಯಾಗಿ ಕೊಟ್ಟು ಸಂತೈಸಿದ. ಗುಂಪು ತಪ್ಪಿದ ಸಲಗವೊಂದು ಒಂಟಿಯಾಗಿ ಅಲೆದಾಡುತ್ತಿದೆ. ಬೇಟೆಯಾಡುವುದಿದ್ದರೆ ಇದೇ ಸರಿಯಾದ ಸಮಯ! ಎಂಬ ಮಾಹಿತಿಯನ್ನು ಸಿಂಹಕ್ಕೆ ನೀಡಿ ತನಗೆ ಸಿಗಬಹುದಾದ ಚೂರುಪಾರು ಪಾಲಿಗೆ ಹಾತೊರೆಯುವ ಗುಳ್ಳೆನರಿಯಂತಾಗಿದ್ದ ಪರಮೇಶನಿಗೆ ಅದಕ್ಕಿಂತ ಮೊದಲು ಮನಸ್ಸಿನ ಧಣಿವಾರಿಸಿಕೊಳ್ಳಲು ಸಾರಾಯಿ ಸಿಕ್ಕಿದ್ದು ಪರಮಾನಂದವಾಗಿತ್ತು. ಶಂಕರನಿಗೆ ಬಾಗಿ ನಮಸ್ಕರಿಸಿ ಗೆಲುವಿನಿಂದ ತನ್ನ ಜೋಪಡಿಗೆ ಹಿಂದಿರುಗಿದ. ಗುಡಿಸಲೊಳಗೆ ಕುಳಿತು ಖಾರಾ ಸೇವಿನೊಂದಿಗೆ ಸಾರಾಯಿ ಹೀರತೊಡಗಿದ. ಸ್ವಲ್ಪಹೊತ್ತಿನಲ್ಲಿ ಗಾಢ ನಶೆಗೆ ಜಾರಿದವನು ಸಂತಾನಪ್ಪನ ದುರ್ದೆಸೆಯನ್ನು ನೆನೆದು ಕ್ರೋಧ ತುಂಬಿದ ವ್ಯಂಗ್ಯ ನಗುವನ್ನು ಹರಿಸಿದ.

*********************************************

(ಮುಂದುವರೆಯುವುದು)

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

4 thoughts on “

  1. ಸಂತಾನಪ್ಪನ ಬದುಕಿನಲ್ಲಿ ಕಷ್ಟದ ದಿನಗಳು ಕಳೆದು ಏಕಾಏಕಿ ಸಿರಿವಂತಿಕೆಯನ್ನು ಪಡೆದವನು ತನ್ನ ಜೀವನಶೈಲಿಯನ್ನೂ ಬದಲಾಯಿಸಿದ ರೀತಿ ಈ ಅಧ್ಯಾಯದಲ್ಲಿ ಕಾಣಸಿಗುತ್ತದೆ. ತಾನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ ಪರಮೇಶ್ವರನನ್ನು ದ್ಯಾವಮ್ಮ ದೂರೀಕರಿಸುವುದು ಕೂಡ ಈ ಸಿರಿವಂತಿಕೆಯ ಜೀವನದ ವ್ಯಾಮೋಹದಿಂದಲೇ. ಸಂಪತ್ತು ಅನೇಕ ಸಂಬಂಧಗಳನ್ನು ಕೂಡ ಹಾಳುಗೆಡವಬಲ್ಲದು ಎಂಬುದನ್ನು ಕಾದಂಬರಿಕಾರರು ಈ ಅಧ್ಯಾಯದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ. ಅಭಿನಂದನೆಗಳು

  2. ಆಸೆ ಎಂಬುದು ಮಾಯಾಮೃಗ ವಿದ್ದಂತೆ. ನಿಯಂತ್ರಣ ವಿಲ್ಲದಿದ್ದಲಿ ಹಾನಿ ಅಪಾರ.

Leave a Reply

Back To Top