ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ

ಲೇಖನ

ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ

ಅಂಜಲಿ ರಾಮಣ್ಣ

ಅವತ್ತು ನನಗೆ 18 ತುಂಬಿದ ಮಾರನೆಯ ದಿನವೇ ಮತದಾರ ಗುರುತಿನ ಚೀಟಿ ಮಾಡಿಸಿಕೊಟ್ಟರು ನನ್ನ ತಂದೆ. ಇದೊಂದೇ  ಗುರುತಿಗಾಗಿ 18 ಆಗುವುದನ್ನೇ ಕಾಯುತ್ತಿದ್ದೆ. ಆಗ ತಿಳಿದೇ ಇರಲಿಲ್ಲ ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಎಂದು ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಎಂದು. ಕೈಯಲ್ಲಿ ವೋಟರ್ಸ್ ಐಡಿ ಇತ್ತು, ಮತ ಹಾಕಲೇ ಬೇಕು ಎನ್ನುವ ಹಠವೂ ಜೊತೆಯಾಗಿತ್ತು. ಆದರೇನು ಮಾಡುವುದು ಆಗ ಮೈಸೂರಿನಲ್ಲಿ ಕಾರ್ಪೊರೇಷನ್ ಚುನಾವಣೆಯೂ ಇರಲಿಲ್ಲ. ಅಂದು ಈಗಿನಷ್ಟು ಸರಾಗವಾಗಿ ಸರ್ಕಾರ ಬೀಳುವ ಭಯವಾಗಲೀ, ಪದ್ದತಿಯಾಗಲೀ ಇರಲಿಲ್ಲ. ಹಾಗಾಗಿ ಮತ್ತೆರಡು ವರ್ಷ ಕಾದೆ ಬೆರಳು ಮಸಿ ಮಾಡಿಕೊಳ್ಳಲು.



ನಂತರದ ಒಂದು ಅವಕಾಶವನ್ನೂ ಬಿಡದೆಯೇ ಮತ ಚಲಾಯಿಸಿದ್ದೇನೆ ಎನ್ನುವ ಹೆಮ್ಮೆಯೊಂದಿಗೇ ವಯಸ್ಸು ರಾಜಕೀಯ ನಿಲುವುಗಳಷ್ಟೇ ಅತಂತ್ರದಿಂದ ಓಡುತ್ತಿದೆ. ಮೊನ್ನೆಮೊನ್ನೆಯವರೆಗೂ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಓಡಿ ಬರುತ್ತಿದ್ದೆ ಮೈಸೂರಿಗೆ, ನನ್ನೂರಿಗೆ ಅವಳಾತ್ಮದ ಒಂದು  ತುಣುಕೇ ಆದ ನಾನು ಮತಹಾಕಲು. ಈಗ ಬದುಕು ಕಲಿಸಿದೆ ತವರು ನೆಲದಲ್ಲೋ, ಅನ್ನ ಕೊಡುತ್ತಿರುವ ಭೂಮಿಯಲ್ಲೋ ರಾಜಕಾರಣಿಗಳೆಲ್ಲಾ ಒಂದೇ ಎಂದು ಹಾಗಾಗಿ ಮತಗುರುತಿನ ಚೀಟಿಯನ್ನು ಈ ಊರಿನ ವಿಳಾಸಕ್ಕೆ ಬದಲಾಯಿಸಿಕೊಂಡಿದ್ದೇನೆ ಆದರೆ ತಪ್ಪದ ಮತ ಹಾಕುವ ನನ್ನ ಚಾಳಿಯನ್ನಲ್ಲ.

How Lok Sabha will look if people vote as they did in assembly polls



ಅನುಸರಿಸಿಕೊಂಡು ಬಂದ ಪದ್ದತಿಯನ್ನು ಮೊದಲ ಬಾರಿಗೆ ಮುರಿದು ಈ ಬಾರಿ  11 ಗಂಟೆಗೆ ಮತ ಚಲಾವಣೆಗೆ ಹೊರಟೆ. ಚಾಲೀಸಾ ಪಠಣೆ ಮುಗಿದರೂ ಹನುಮಂತ ಪ್ರತ್ಯಕ್ಷ ಆದರೂ ಮುಗಿಯದಷ್ಟು ಬಾಲದಷ್ಟುದ್ದದ ಸಾಲಿತ್ತು. ಬರೋಬರಿ 1 ಗಂಟೆ ನಲವತ್ತು ನಿಮಿಷದ ನಂತರ ಮತಹಾಕುವ ಕೋಣೆಯ  ಎದುರು ಸಾಲಿನಲ್ಲಿ ನಿಂತಿದ್ದೆ .
ಪೊಲೀಸಪ್ಪನೊಬ್ಬ ಸರಬರ ಬಂದು ಬಾಗಿಲಲ್ಲಿ ನಿಂತ . ಐದು ನಿಮಿಷಕ್ಕೆ ತಂದೆಯೊಬ್ಬ ಮಗಳನ್ನು ಕರೆದುಕೊಂಡು ಬಂದು ಅದೇ ಪೊಲೀಸ್ಗೆ “ನೋಡಿ ತಪ್ಪು ಸಾಲಲ್ಲಿ ನಿಂತಿದ್ದ್ವಿ ಈಗ ಗೊತ್ತಾಯ್ತು ಇದು ನಮ್ಮ ಸಾಲು ಅಂತ” ಎಂದು ಹೇಳುತ್ತಾ ನಡುವೆ ಮಗಳನ್ನು ತೂರಿಸಲು ಪ್ರಯತ್ನ ಪಡುತ್ತಿದ್ದನ್ನು ಕಂಡು ತುಂಬಾ ಮೇಲು ದನಿಯಲ್ಲಿ ಆ ಹುಡುಗಿಗೆ ಸರತಿಯಲ್ಲಿಯೇ ಬರಲು ಹೇಳಿದೆ. ಅವರಿಗೆ ಅಲ್ಲಿದ್ದ ಪೊಲೀಸಪ್ಪನೇ ನೆಂಟನಾದ್ದರಿಂದ ಅವರುಗಳನ್ನು ಒಳ ತೂರಿಸಲು ಆತನೂ ತನ್ನ ಕೈಲಾದ ಸೇವೆ ಸಲ್ಲಿಸುತ್ತಿದ್ದ. ನನ್ನ ಕೋರಿಕೆಗೆ ಅವರುಗಳ ಮಾತು , ಹುಡುಗಿಯ ದಡ್ಡ ಮೌನ ಎಲ್ಲವೂ ಸೇರಿತ್ತು. ಆತ “ಆಯ್ತು ಬಿಡಿ ನೀವೇ ವೋಟ್ ಆಕೋಳಿ ನನಗೆ ವೋಟ್ ಆಕದಿದ್ದರೆ ಪ್ರಾಣ ಓಗಲ್ಲ” ಎಂದ. “ಅಪ್ಪ ತಂದೆ ವೋಟ್ ಹಾಕದಿದ್ದರೆ ನಿನ್ನ ಪ್ರಾಣ ಹೋಗಲ್ಲ ಆದರೆ ನನ್ನದು  ಹೋಗತ್ತಪ್ಪಾ” ಎಂದು ಹೇಳಿ ಅಂತೂ ಸರತಿ ಸಾಲಿನ ಕೊನೆ ಸೇರಿಸಿದೆ ಆ ಅಪ್ಪ ಮಗಳನ್ನು.



ಇದು ಹೆಚ್ಚುಗಾರಿಕೆಯಲ್ಲ . ಆದರೆ ನಾ ವಿರೋಧ ವ್ಯಕ್ತ ಪಡಿಸಿ ಗೆದ್ದ ಮೇಲೆ ಅಲ್ಲಿದ್ದ ಒಂದಷ್ಟು ಹೆಂಗಸರು Thank you  ಎಂದದ್ದು ಒಂದು ಪಾಠ. ದನಿ ಎತ್ತಬೇಕು ಎನ್ನುವ ಮೆದುಳಿದ್ದರೂ “ಶ್ ಸೈಲೆನ್ಸ್” ಎನ್ನುವ ಗುಡುಗಿಗೆ ಬಲಿಯಾಗುವ ಹೆಂಗಸರ ಪರವಾಗಿ ಮಾತಾಗಲಾದರೂ ಮತ ಹಾಕಬೇಕು.


ಬಾಲ್ಯ ಕಳೆಯುತ್ತಿದ್ದ ಕಾಲದಲ್ಲಿ ನನ್ನ ಅಜ್ಜಿ ತಾತನ ತಲೆ ಮಾರಿನವರು ನಮ್ಮ ಹಾಗೆ ಕೈಕೈ ಹಿಡಿದುಕೊಂಡು ಮುಸಿಮುಸಿ ನಗುತ್ತಾ, ಕಣ್ಣಲ್ಲೇ ಕಾಮಿಸುತ್ತಾ, ಮಾತುಗಳಲ್ಲಿ ಪ್ರೇಮಿಸುತ್ತಿದ್ದವರಲ್ಲ. ಯಾರು ಗಂಡ ಆತನ ಹೆಂಡತಿ ಯಾರು ಎನ್ನುವುದು ಕೇವಲ ಹೆಸರುಗಳ ಮೂಲಕವೇ ಕಂಡುಕೊಳ್ಳ ಬೇಕಿತ್ತು. ಆದರೆ ಅಂತಹ ಮಡಿವಂತರುಗಳು ಜೋಡಿಯಾಗಿ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದದ್ದು ಚುನಾವಣೆಯ ದಿನ, ಮತಗಟ್ಟೆಗಳ ಮುಂದಿನ ಸಾಲುಗಳಲ್ಲಿ ಮಾತ್ರ. ಗಂಡನ ಇತರೆ ಸಂಬಂಧಗಳು, ಹೆಂಡತಿಯ ಮೂದಲಿಕೆ, ಮನೆ ಭರ್ತಿ ಮಕ್ಕಳು, ನೆಂಟರು ಇಷ್ಟರುಗಳ ಕದಲಿಕೆ, ಹಣ-ಕಾಸಿನ ಅಗಲಿಕೆ ಯಾವುದಕ್ಕೂ ಆ ದಿನ ಮಾತ್ರ ಜಗ್ಗದೆಯೇ ಬಂದು ಮತ ಚಲಾಯಿಸುತ್ತಿದ್ದರು ವೃದ್ಧ ದಂಪತಿಗಳು ಅದು ಒಂದೇ ಕಾರಣಕ್ಕೆ ಸೊಗಸಾಗಿ ಕಾಣಿಸುತ್ತಿದ್ದರು ಕೂಡ.



ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರರ, ವಿದ್ಯಾವಂತ ಕುಟುಂಬ ನಮ್ಮದು. ಊಟವನ್ನಾದರೂ ಬಿಟ್ಟೇವು ಪ್ರತಿಷ್ಠೆ, ನಿಷ್ಠೆಯಿಂದ ಕದಲೆವು ಎನ್ನುವ ಪಾಠವನ್ನು ಮನೆಯ ಪ್ರತಿ ಅಮ್ಮನೂ ಮಕ್ಕಳಿಗೆ ತುತ್ತಿಡುವಾಗಲೇ ಜೀರ್ಣಿಸಿಕೊಡುತ್ತಿದ್ದ ಮನೆತನ. ಅಂದಮೇಲೆ ಚುನಾವಣೆ ದಿನ ದಸರೆಯ ದಿನಗಳ ಸಂಭ್ರಮಕ್ಕಿಂತ ಭಿನ್ನ ಎನಿಸುತ್ತಿರಲಿಲ್ಲ. ಕೂಡು ಕುಟುಂಬದ ಪ್ರತೀ ಗಂಡಸರು ಹೆಂಗಸರು ವಯಸ್ಕ ಮಕ್ಕಳು ತಮ್ಮ ನಿತ್ಯ ಕೆಲಸಗಳನ್ನು ಮುಗಿಸಿ ಬೆಳಿಗ್ಗೆ 7.30 ಗಂಟೆಗೆ ಮತಗಟ್ಟೆಯ ಮುಂದೆ ನಿಂತಿರಬೇಕು ಎನ್ನುವ ಅಲಿಖಿತ ನಿಯಮ. ಮತಗಟ್ಟೆಯ ಸಿಬ್ಬಂದಿಗಳು ಇನ್ನೂ ಬೆಳಗಿನ ಕಾಫಿ ಕುಡಿದು ಮುಗಿಸುವುದರ ಮೊದಲೇ ಕೆ.ರಾಮಣ್ಣ (ನನ್ನ ತಂದ) ಇವರ ಕುಟುಂಬದವರು ಹನುಮಂತನ ಬಾಲದಂತೆ ಮತಗಟ್ಟೇಯ ಮುಂದೆ ನಿಂತಿರುತ್ತಿದ್ದರು. ಆ ದಿನಗಳಲ್ಲಿ ದೇಶ ಭಕ್ತಿ ಮತ್ತು ಕರ್ತವ್ಯ ಎನ್ನುವ ಪರಿಕಲ್ಪನೆಗಳ ವ್ಯಾಖ್ಯಾನವನ್ನು ಸುಪ್ರೀಮ್ ಕೋರ್ಟ್ ಕೊಟ್ಟೀರಲಿಲ್ಲ ಬದಲಿಗೆ ದೇಹದಲ್ಲಿರುವ ಪ್ರತೀ ಜೀವಕೋಶಗಳು ಉತ್ಪಾದನೆ ಮಾಡುತ್ತಿದ್ದವು ಅದಕ್ಕೇ ವಯಸ್ಸು, ಅಂತಸ್ತುಗಳ ವ್ಯತ್ಯಾಸವಿಲ್ಲದೆ ಮತಗಳು ನೊಂದಾಯಿತವಾಗುತ್ತಿತ್ತು.



ಈ ಬಾರಿಯೂ ನಾನು ಮತ್ತು ಹಾಕಿದ್ದು ಅಭ್ಯರ್ಥಿಯ ಬಗ್ಗೆ ನನಗಿರುವ ವಿಶ್ವಾಸಕ್ಕಾಗಲೀ, ರಾಜಕೀಯದಲ್ಲಿ ಉಳಿದುಕೊಂಡಿರುವ ಅಲ್ಪ ಆಸಕ್ತಿಯಿಂದಾಗಲೀ ಅಲ್ಲ. ನನ್ನ ಮನೆತನದ ಹೆಮ್ಮೆಯ ಧ್ಯೋತಕವಾಗಿ. ನನ್ನ ಪಪ್ಪ-ಅಮ್ಮ ನಮ್ಮೆಲ್ಲರನ್ನು ಬೆಳಿಸಿದ ಪರಿಗೆ ಸಲ್ಲಿಸುವ ಗೌರವಕ್ಕಾಗಿ. ಈ ನೆಲಕ್ಕೆ ಸ್ವಾತಂತ್ರ್ಯದ ಗಾಳಿಯನ್ನು ಸರಾಗವಾಗಿಸಿಕೊಟ್ಟ ನನ್ನ ಪಪ್ಪನಂತಹ ಹೋರಾಟಗಾರರಿಗೆ ಧನ್ಯವಾದ ಹೇಳುವುದಕ್ಕಾಗಿ. ಮೈ ಮನ ಮಸಿಯಾಗಿಸದೆಯೇ ಬೆರಳನ್ನು ಮಾತ್ರ ಕರೆ ಮಾಡಿಕೊಳ್ಳುವ ಸೋಜಿಗದ ಪ್ರತೀಕದಂತೆ ಕಾಣುತ್ತದೆ ನನಗೆ ಮತ ಚಲಾವಣೆ.


ಒಂದು ಕಪ್ಪು ಕಲೆ ವಿಕಾರ ರೂಪದಲ್ಲಿ ಹುಟ್ಟಿ ದಿನಗಳೆದಂತೆ ಗಾಢವಾಗುತ್ತಾ, ಆಕಾರ ಪಡೆಯುತ್ತಾ, ಕ್ರೋಢಿಕರಣಗೊಂಡು, ಉಗುರ ತುದಿಯಲ್ಲಿ ಸಾಂಧ್ರವಾಗಿ, ಮತ್ತೆ ಬರುತ್ತೇನೆ ಎಂದು ಹೇಳುತ್ತಾ ದೂರಾಗುವ ಪರಿಯನ್ನು ನೋಡುವುದು ಮತ್ತು ಅದರಿಂದ ಕಲಿಯುವುದು, ಈ ರೊಮ್ಯಾಂಟಿಕ್ ಪ್ರಕ್ರಿಯೆಯಲ್ಲಿ ದೇಶ ಎನ್ನುವ ಚಿರಯೌವ್ವನೆ ಅರಳುವುದ ಕಾಣಲು ಮತ ಹಾಕಿದ್ದೇನೆ.



ಹಾಂ ಹಿಂದಿರುಗಿ ಬರುವ ದಾರಿಯಲ್ಲಿ ಮೆಡಿಕಲ್ ಶಾಪ್ ತೆಗೆದಿತ್ತು . ಹೊಸ ಮುಖ ಚಿಗುರು ಮೀಸೆ ಹೊತ್ತು ಗಿರಾಕಿಗಳ ಕೈಯಿಂದ ಚೀಟಿ ತೊಗೊಂಡು ಚುರುಕಾಗಿ ಔಷಧಿ ಬಟವಾಡೆ ಮಾಡುತ್ತಿತ್ತು. ಬೆರಳು ನೋಡಿದೆ ಮಸಿ ಇಲ್ಲ. ‘ ವೋಟ್ ಮಾಡಲಿಲ್ಲವಾ ಮಗಾ’ ಎಂದೆ . ‘ಇಲ್ಲಾ ಮೇಡಂ ಊರಿಗೆ ಹೋಗಿ ವೋಟ್ ಹಾಕಕ್ಕೆ ಓನರ್ ರಜಾ ಕೊಡಲಿಲ್ಲ ‘ ಎಂದ. ಓನರ್ಗೆ ಫೋನ್ ಮಾಡಿದೆ. ಆತ ಕುಟುಂಬ ಸಮೇತ ಮತಗಟ್ಟೆಯ ಸಾಲಿನಲ್ಲಿ ನಿಂತಿದ್ರು. ನನ್ನ ಮಾತುಗಳನ್ನೆಲ್ಲಾ ಕೇಳಿಸಿಕೊಂಡು ಸಾರೀಮೇಡಮ್ ಎಂದರಷ್ಟೇ. ಆ ಕೊನೆಘಳಿಗೆಯಲ್ಲಿ ನಾ ಏನೂ ಮಾಡಲಾಗಲಿಲ್ಲ. ಆದರೆ ಮುಂದಿನ ಚುನಾವಣೆಗೆ ಹುಡುಗ ರಜೆ ಪಡೆದು ವೋಟ್ ಹಾಕುತ್ತೇನೆ ಎನ್ನುವಷ್ಟು ಸಬಲನಾದರೆ ಚಲಾವಣೆಯಾದ ನನ್ನ ಮತಕ್ಕೂ ಹೆಮ್ಮೆ.



ನನ್ನ ಮೈಸೂರಿನ ದಿನಗಳಲ್ಲಿ ’ಅಮ್ಮ ಎಲ್ಲಿ?’ ಎನ್ನುವ ಯಾರದ್ದೇ ಪ್ರಶ್ನೆಗೂ ಉತ್ತರ ಇರುತ್ತಿದ್ದದ್ದು ಅಡುಗೆ ಮನೆಯಲ್ಲಿ, ಪೂಜಾ ಕೋಣೆಯಲ್ಲಿ, ಬಟ್ಟೆ ಒಣಗುವಲ್ಲಿ, ಪಾತ್ರೆ ತೊಳೆಸಿಕೊಳ್ಳುವ ಹಿತ್ತಲಲ್ಲಿ, ದಾಸವಾಳಕ್ಕೆ ನೀರು ಹಾಕುವ ಕಾಂಪೌಂಡ್‍ನಲ್ಲಿ, ಗಂಡನ ಕೇಳಿ ಬರುವ ದೂರವಾಣಿ ಕರೆಗಳಿಗೆ ನೀಡುತ್ತಿದ್ದ ಮಾಹಿತಿಗಳಲ್ಲಿ, ನೆಂಟರಲ್ಲಿ-ನೆರೆಹೊರಯವರಲ್ಲಿ, ಪುಸ್ತಕದ ಓದಿನಲ್ಲಿ, ವೀಣೆ ನುಡಿಸುವುದರಲ್ಲಿ, ಯೋಗಾಭ್ಯಾಸ ಮಾಡುವಲ್ಲಿ, ಲೇಖನಗಳನ್ನು ಬರೆಯುವಲ್ಲಿ ಎಂದಾಗಿತ್ತು. ಇಷ್ಟೆಲ್ಲವೂ ಆಗಿಹೋಗಿದ್ದ ನನ್ನಮ್ಮ ಚುನಾವಣೆ ದಿನದಲ್ಲಿ ಕೇವಲ ಮತದಾರಮಾತ್ರ ಆಗಿರುತ್ತಿದ್ದಳು.



ಸ್ವತಂತ್ರ್ಯ ಭಾರತಕ್ಕೆ ಎರಡೇ ವರ್ಷ ಚಿಕ್ಕವಳು ಅವಳು. ಈಗಲೂ ಬದಲಾವಣೆ ಆಗದ ಅವಳ ಒಂದೇ ಸ್ವಭಾವ ಎಂದರೆ ಮತ ಹಾಕುವುದು. ಒಮ್ಮೆ ಮೈಸೂರಿನ ಸ್ಥಳೀಯ ಚುನಾವಣೆಯ ಸಮಯ. ಕಾಲು ಫ್ರ್ಯಾಕ್ಚರ್ ಆಗಿ ಇವಳು ಬೆಂಗಳೂರಿನ ಆಸ್ಪತ್ರೆ ವಾಸಿ. “ಇನ್ನು ಎರಡು ವಾರ ರೆಸ್ಟ್ ನಲ್ಲಿ  ಇರಬೇಕು” ಡಾಕ್ಟರ್ ಹೇಳಿಯಾಗಿತ್ತು. ಬಿಡುವಳೇ ಇವಳು, ’ಸಾಧ್ಯವೇ ಇಲ್ಲ ಮತ ಹಾಕಲೇ ಬೇಕು” ಎಂದು ಶೂರ್ಪಣಕಿಯ ಹಠದಲ್ಲಿ ಮೈಸೂರಿಗೆ ನೇರವಾಗಿ ಮತಗಟ್ಟೆಗೇ ಬಂದವಳು. ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲೂ ಮತ ಹಾಕಲು ತಪ್ಪಿಸಿಕೊಳ್ಳದವಳು. ಯಾವ ಚುನಾವಣೆಯ ದಿನದ ಹಿಂದಿನ ರಾತ್ರಿಯೇ ಫೋನ್ ಮಾಡಿ ಬೆಳಗ್ಗೆ ಬೇಗ ಹೋಗಿ ಮತ ಹಾಕಿಬಿಡು ಎಂದು ಎಚ್ಚರಿಸಿ ಮಲಗುವವಳು ಅಷ್ಟೇ ಅಲ್ಲ ,  ಮತ ಹಾಕಿ ಬರುವವರೆಗೂ ಪ್ರಾಣ ತಿನ್ನುವ ನನ್ನ ಅಮ್ಮ ನಿಜಕ್ಕೂ ಆಯ್ಕೆ ಸ್ವಾತಂತ್ರ್ಯದ ಸದ್ಬಳಕೆ ಕಲಿಸಿಕೊಟ್ಟವಳು. ನಾ ಮತ ಹಾಕುವುದು ಅವಳೆಡೆಗೆ ನನ್ನ ಒಂದು ಮುಷ್ಟಿ ಋಣ ಸಂದಾಯದಂತೆ.



ಪಪ್ಪ ಇರುವವರೆಗೂ ಅವರೊಂದಿಗೇ ಹೋಗಿ ಮತ ಹಾಕಿ ಬರುತ್ತಿದ್ದ ಅಮ್ಮನ ಕಾಲುಗಳು ಈಗ ಊರುಗೋಲಿನ ಸಾಂಗತ್ಯಕ್ಕೆ ಜೋತು ಬಿದ್ದಿವೆ. ಚಾಮುಂಡಿ ತಾಯಿ ನೀಡುತ್ತಿರುವ ಬೇಸಿಗೆ ತಡೆದುಕೊಳ್ಳುವ ಶಕ್ತಿ ಇಲ್ಲವಾಗಿದೆ. ಹೊಸಿಲು ದಾಟಲು ಯಾರದ್ದಾದರೂ ಕೈ ಹಿಡಿದುಕೊಳ್ಳಲೇ ಬೇಕು ಎನ್ನುವ ಸ್ಥಿತಿ ಆದರೂ ಚುನಾವಣಾ ದಿನಕ್ಕೆ ಉಡಬೇಕಾದ ಸೀರೆ ರವಿಕೆಗೆ ಇಸ್ತ್ರಿ ಮಾಡಿರಿಸಿಕೊಂಡಿದ್ದಳು. ಈಗಂತೂ ಮತ ಚಲಾವಣೆ ಅವಳ ಪಾತಿರ್ವ್ರತ್ಯದ ಒಂದು ಭಾಗವಾಗಿದೆ. ಅದನ್ನು ಅವಳು ತನ್ನ ಗಂಡನಿಗೆ ತೋರುವ ಪ್ರೀತಿ, ಕಾಳಜಿ ನಿಷ್ಠೆ ಎಂದುಕೊಂಡಿರುವಂತಿದೆ.

Outlook India Photo Gallery - Elections: Voting



“ಅಮ್ಮ ನೀ ಕಳೆದ ಬಾರಿ ಮತ ಹಾಕಿದವರು ಗೆಲ್ಲಲಿಲ್ಲ, ಸುಮ್ಮನೆ ಯಾಕೆ ಶ್ರಮ ಪಡ್ತೀಯ, ಮನೇಲಿರು” ಎನ್ನುವ ಮಗಳ ಉಪದೇಶದ ಒಂದು ವಾಕ್ಯಕ್ಕೆ , ಪ್ಯಾರಾಗ್ರಾಫ್‍ನಲ್ಲಿ ಸಿಟ್ಟಾಗುತ್ತಾಳೆ. “ಹೌದು ಈ ಬಾರಿಯೂ ನನ್ನ ಅಭ್ಯರ್ಥಿ ಗೆಲ್ಲುವ ಸಂಭವ ಕಡಿಮೆ , ಆದರ ನಾನು ಅವನಿಗೇ ವೋಟ್ ಹಾಕೋದು” ಎನ್ನುತ್ತಾಳೆ. “ಇಷ್ಟೆಲ್ಲಾ ಮೈಕೈ ನೋಯಿಸಕೊಂಡು ಹೋಗ್ತಿದ್ದೀಯ ಗೆಲ್ಲುವ ಅಭ್ಯರ್ಥಿಗೇ ಹಾಕು ನಿನ್ನ ಮತ ಉಪಯೋಗಕ್ಕೆ ಬರಲಿ” ಎನ್ನುವ ನನ್ನೆಡೆಗೆ ಅನುಮಾನದ ನೋಟ ತೂರುತ್ತಾ ಹೇಳುತ್ತಾಳೆ  “ನಿನ್ನ ಪಪ್ಪ ಇದ್ದಿದ್ದರೆ ಅವರು ನೀ ಹೇಳುವ ಅಭ್ಯರ್ಥಿಗೆ ವೋಟ್ ಹಾಕ್ತಿದ್ದ್ರಾ? ಇದು ನನ್ನ ಮತ ಅಲ್ಲ ನನ್ನ ಗಂಡನ ವೋಟ್ ನಾನು ಹಾಕುತ್ತಿದ್ದೇನೆ” ಬೇಗ ಹೋಗಲು ಉಸಿರು ಸಾಲದೆ ನಡು ಮಧ್ಯಾಹ್ನದಲ್ಲಿಯಾದರೂ ಮತ ಹಾಕಿದ್ದು ಅವಳ ಪಾಲಿಗೆ ಜೀವದ್ರವದಂತೆ.



ಆ ತಲೆಮಾರಿಗೆ ನಿಷ್ಠೆ ಕಲಿಸಿಕೊಟ್ಟ ಚುನಾವಣೆಗಳು ನನ್ನ ತಲೆಮಾರಿಗೆ ಬದಲಾವಣೆಯನ್ನು “ಬಯಸು, ಆರಿಸು, ಒಪ್ಪಿಕೊ”  ಎನ್ನುವುದನ್ನು ಕಲಿಸಿಕೊಟ್ಟಿದೆ. ಆದರೆ ಈ ದೇಶ ನನ್ನದು ಎನ್ನುವ ಸ್ವಾರ್ಥವನ್ನು ಮಾತ್ರ ಕಡಿಮೆ ಮಾಡಿಲ್ಲ ರಾಜಕೀಯ. ಅದಕ್ಕಾಗಿಯಾದರೂ ಮತ ಹಾಕಲು ತಪ್ಪಿಸುವುದಿಲ್ಲ.  ಹೌದು, ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಥೇಟ್ ಅಮ್ಮನ ವಾತ್ಸಲ್ಯ ಮತ್ತು ಅಪ್ಪನ ಅಭಯದಂತೆ. ಇದೇ ಆಸ್ಥೆಯೊಂದಿಗೆ ಈ ಬಾರಿಯೂ ಮತ ಹಾಕಿ ಬಂದೆ.

*********************************

(ಲೇಖನ ಕೃಪೆ: ಆಂದೋಲನ ಪತ್ರಿಕೆ ಮೈಸೂರು-ಏಪ್ರಿಲ್-2019)

ಮತ್ತು ಅಸ್ಥಿತ್ವ ಲೀಗಲ್ ಬ್ಲಾಗಸ್ಪಾಟ್.ಕಾಮ್

3 thoughts on “ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ

  1. ಮತ ಚಲಾವಣೆ ನಮ್ಮ ಹಕ್ಕು. ಲೇಖನ ಚೆನ್ನಾಗಿದೆ.

Leave a Reply

Back To Top