ಜೋಗದ ಸಿರಿ ಬೆಳಕಿನಲ್ಲಿ

ಪುಸ್ತಕ ಸಂಗಾತಿ

ಜೋಗದ ಸಿರಿ ಬೆಳಕಿನಲ್ಲಿ

‘ಪುನರ್ವಸು’ ನಿಸ್ಸಂಶಯವಾಗಿ ನಾನು ಓದಿದ ಶ್ರೇಷ್ಠ ಕೃತಿಗಳಲ್ಲಿ ಒಂದು. ಶರಾವತಿ ವಿದ್ಯುತ್ ಯೋಜನೆ – ಜೋಗ್ ಪ್ರಾಜೆಕ್ಟ್ ಕುರಿತಾದ ಈ ಕಾದಂಬರಿ ನಮಗೆ ತಿಳಿದಿರದ ಬಹಳಷ್ಟು ವಿಷಯಗಳನ್ನು ಮನದಟ್ಟು ಮಾಡಿಸುತ್ತದೆ.

ಶರಾವತಿ ವಿದ್ಯುತ್ ಯೋಜನೆ ಅಸಂಖ್ಯಾತ ಜನರಿಗೆ, ಮನೆಗಳಿಗೆ, ಕೈಗಾರಿಕೆಗಳಿಗೆ ಬೆಳಕು ಕೊಟ್ಟಿದೆ. ವಿದ್ಯುತ್ತಿನಿಂದ ಕೈಗಾರಿಕೋದ್ಯಮಗಳು ಹೆಚ್ಚಿ ತನ್ಮೂಲಕ ರಾಜ್ಯ, ದೇಶದ ಅಭಿವೃದ್ಧಿಗೆ ಅಗಣಿತ ಕೊಡುಗೆಯನ್ನು ಜೋಗ ನೀಡಿದೆ. ಇಂಥದ್ದೊಂದು ಬೃಹತ್ ಯೋಜನೆ ಸಾಕಾರಗೊಳ್ಳುತ್ತಿರುವ ಕಾಲದಲ್ಲಿ, ಈ ಕಾಮಗಾರಿ ಅಲ್ಲಿನ ಪ್ರದೇಶದಲ್ಲಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ನೈತಿಕವಾಗಿ ಉಂಟುಮಾಡಿದ ಪರಿಣಾಮಗಳೇನು, ಬದಲಾವಣೆಗಳೇನು ಎಂಬುದರ ನೈಜ ಚಿತ್ರಣ ಕಾದಂಬರಿಯಲ್ಲಿ ಸಿಗುತ್ತದೆ.

ಈ ಸಮಯದಲ್ಲಿ ಜೋಗ, ಹಳ್ಳಿಯಿಂದ ಪಟ್ಟಣವಾಗಿ ಸ್ಥಿತ್ಯಂತರ ಹೊಂದುವ ಪ್ರಕ್ರಿಯೆಯಲ್ಲಿ ನೈತಿಕ, ಸಾಮಾಜಿಕ ಮೌಲ್ಯಗಳು ಪತನಗೊಂಡು, ಜನ ಅನುಭವಿಸಿದ ಭಾವನಾತ್ಮಕ ತಲ್ಲಣಗಳು, ಅಭದ್ರತಾ ಭಾವನೆ, ಎಲ್ಲ ರೀತಿಯಲ್ಲೂ ಒಂದು ಮಹಾಪಲ್ಲಟಕ್ಕೆ ಒಳಗಾಗಿ, ಜನಜೀವನ ಅಸ್ತವ್ಯಸ್ತವಾದ ವಿವರಗಳು ಕಣ್ಣ ಮುಂದೆಯೇ ನಡೆಯುತ್ತಿರುವಷ್ಟು ನೈಜವಾಗಿ ಮೂಡಿಬಂದಿವೆ. ದೊಡ್ಡದಕ್ಕಾಗಿ ಸಣ್ಣದನ್ನು ತ್ಯಾಗ ಮಾಡಬೇಕು ಎಂಬುದು ನಿಜವೇ ಆದರೂ, ಅವರವರ ಮಟ್ಟದಲ್ಲಿ ಅವರ ತ್ಯಾಗ ಬೆಲೆ ಕಟ್ಟಲಾಗದ್ದು.

ಒಂದೆಡೆ ವಿದ್ಯುತ್ ಉತ್ಪಾದನೆಯಾಗಿ ದೇಶದ ಪ್ರಗತಿಯ ಹಾದಿ ತೆರೆದುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಹಲವು ಕುಟುಂಬಗಳ ಬದುಕು ಅನಪೇಕ್ಷಿತ ತಿರುವನ್ನು ಕಾಣುವ ವಿಷಾದ ಈ ಇಬ್ಬಗೆಯ ನಡುವೆ ಕಾದಂಬರಿ ಸಾಗುತ್ತದೆ. ಮುಳುಗಡೆಯಾದ ಜಮೀನಿಗೆ ಸರ್ಕಾರ ಪರಿಹಾರ ವಿತರಿಸಿದರೂ ಕೆಲವರಿಗೆ ಹಲವು ಕಾರಣದಿಂದ ಪರಿಹಾರ ಧನ ಸಿಗದೇ, ದುಡಿಯಲು ಕೆಲಸವೂ ಸಿಗದೇ ಬವಣೆಗೊಳಗಾದ ಚಿತ್ರಣ ಇಲ್ಲಿದೆ.

ಒಂದು ಕುಟುಂಬದ ಕಥೆಯನ್ನೇ ಕೇಂದ್ರವಾಗಿಟ್ಟುಕೊಂಡು ಪ್ರಾರಂಭವಾಗುವ ಕಥಾನಕ, ಮುಂದೆ ಸಾಗುತ್ತ, ಸಾಮಾಜಿಕ, ಆರ್ಥಿಕ, ನೈತಿಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ.

1916ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ಜೋಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಿಂದ ಹಿಡಿದು ಜೋಗ ಪ್ರಾಜೆಕ್ಟ್ ಬಗೆಗಿನ ಪ್ರತಿಯೊಂದು ನಿಖರ ಮಾಹಿತಿಗಳನ್ನು, ಜಲಾಶಯದ ವಿಸ್ತೀರ್ಣ, ನೀರಿನ ಹರಿವು ಮುಂತಾದವುಗಳ ಕುರಿತ ಅಂಕಿ ಅಂಶಗಳನ್ನು ಒಳಗೊಳ್ಳುತ್ತ ಕೃತಿ ಸಾಗುತ್ತದೆ. ಹಾಗಾಗಿ ಇದೊಂದು ಸಮೃದ್ಧ ಮಾಹಿತಿಯುಕ್ತ ಕೃತಿಯೂ ಹೌದು. ಒಂದು ಶತಮಾನದ ಹಿಂದಿನ ಮಲೆನಾಡಿನ ಕೌಟುಂಬಿಕ ಮತ್ತು ಸಾಮಾಜಿಕ ಜೀವನದ ಸ್ಪಷ್ಟ ಚಿತ್ರಣವನ್ನು ಕೊಡುವ ಈ ಕಾದಂಬರಿಯಲ್ಲಿ  ಅಂದಿನ ಜನರ ಮುಗ್ಧತೆ, ಸಂಸ್ಕಾರವಂತ ನಡವಳಿಕೆ, ಅಲ್ಲಿನ ಒಂದು ಸ್ಥಾಪಿತ ಸಂಸ್ಕೃತಿ, ವ್ಯವಸ್ಥಿತ ಸುಸಂಸ್ಕೃತ ಜೀವನ ಎಲ್ಲವನ್ನೂ ಕಾಣಬಹುದು.

ಮುಳುಗಡೆಯಾಗಿ ಊರು ತೊರೆದು ಹೋಗುವ ನೋವು ಮಡುಗಟ್ಟಿದ್ದರೂ ಲೋಕೋದ್ಧಾರಕ್ಕಾಗಿ ನಡೆಯುತ್ತಿರುವ ಇಂತ ಯೋಜನೆಗೆ ಪೂರಕವಾಗಿ ನಿಂತ ಭಾರಂಗಿ ದತ್ತಪ್ಪ ಹೆಗಡೇರಂಥ ವ್ಯಕ್ತಿತ್ವ ಸದಾ ಸ್ಮರಣಿಯವಾದುದು. ಬಹುಕಾಲ ಕಾಡುತ್ತ ಮನಸ್ಸಿನಲ್ಲಿ ಉಳಿಯುವ ಪಾತ್ರವಿದು. ಕಷ್ಟ, ನೋವುಗಳನ್ನು ನುಂಗಿ ನಗುವ, ಮನೋಸ್ಥೈರ್ಯಕ್ಕೆ ಮತ್ತೊಂದು ಹೆಸರಿನಂತಿರುವ ತುಂಗಕ್ಕಯ್ಯನ ಪಾತ್ರ ಕೂಡ ಓದುಗನನ್ನು ಬಹಳ ಪ್ರಭಾವಿಸುತ್ತದೆ.

ಇಲ್ಲಿ ಬರುವ ಅತ್ಯಾಚಾರಕ್ಕೆ ಒಳಗಾಗುವ ಮೂಕ ಮತ್ತು ಕಿವುಡ ಹುಡುಗಿ ‘ಶರಾವತಿ’ಯ ಪಾತ್ರ, ಶರಾವತಿ ನದಿ ಮತ್ತು ಆ ಕಾಲದ ಮುಳುಗಡೆಯಾದ ಪ್ರದೇಶದ ಜನರ ಒಟ್ಟಾರೆ ಜೀವನದ ಪ್ರತೀಕವೋ ಎಂಬಂತೆ ಇದೆ.

ಒಂದೆಡೆ ಅದ್ಭುತ ಮಾಹಿತಿಗಳನ್ನು ನೀಡುತ್ತ ಜ್ಞಾನವನ್ನು ಪೋಷಿಸುತ್ತ, ಇನ್ನೊಂದೆಡೆ ನಮ್ಮನ್ನು ಭಾವುಕರನ್ನಾಗಿಸುತ್ತ ಬುದ್ಧಿ – ಭಾವಗಳನ್ನು ಆವರಿಸುತ್ತದೆ ಕಥಾನಕ.

‘ಕುಲಕ್ಕಾಗಿ ನ್ಯಾಮಯ್ಯನನ್ನು, ಗ್ರಾಮಕ್ಕಾಗಿ ಗಣಪನನ್ನು, ಭಾರತಕ್ಕಾಗಿ ಭಾರಂಗಿಯನ್ನು ತ್ಯಾಗ ಮಾಡಿ ಆತು. ಇನ್ನು ಉಳಿದಿದ್ದು ಕೊನೆ ಪಾದ ‘ಆತ್ಮಾರ್ಥೇ ಪೃಥಿವೀಮ್ ತ್ಯಜೇತ್” ಎಂಬಂಥ ಕಾಡುವ ಸಾಲುಗಳು ಕಾದಂಬರಿಯಲ್ಲಿವೆ.

ಗಜಾನನ ಶರ್ಮರು ಈ ಕೃತಿಯನ್ನು ‘ಮುಳುಗಡೆಯ ಮಹಾವಿಪತ್ತಿಗೆ ಸಿಲುಕಿ ಬಿಕ್ಕುತ್ತ ಊರು ತೊರೆದ ಸಂತ್ರಸ್ಥರಿಗೆ, ಇಂದಿಗೂ ನೋವಿನ ನಡುಗುಡ್ಡೆಗಳಲ್ಲಿ ಮುಳುಗೇಳುತ್ತಿರುವ ಹಿನ್ನೀರಿನ ಹತಭಾಗ್ಯರಿಗೆ’ ಅರ್ಪಿಸಿದ್ದಾರೆ ಮತ್ತು ಈ ಮೂಲಕ ಆ ಎಲ್ಲರೂ ಅಮರವಾಗಿ ಉಳಿಯುತ್ತಾರೆ.

‘ಜೋಗದ ಸಿರಿ ಬೆಳಕ’ನ್ನು ಪಡೆದ ಪ್ರತಿಯೊಬ್ಬನೂ ಓದಬೇಕಾದ ಕೃತಿ ಇದು. ಇಂಥದ್ದೊಂದು ಉತ್ಕೃಷ್ಟ, ಮಾಹಿತಿಪೂರ್ಣ ಮತ್ತು ದೀರ್ಘವಾದ ಕೃತಿಯನ್ನು ನಮಗೆ ಕೊಟ್ಟ ಗಜಾನನ ಶರ್ಮರಿಗೆ ಅನಂತ ಧನ್ಯವಾದಗಳು.

*****************************

ಅಜಿತ್ ಹರೀಶಿ

One thought on “ಜೋಗದ ಸಿರಿ ಬೆಳಕಿನಲ್ಲಿ

Leave a Reply

Back To Top