ಕವಿತೆ
ಮಾಯಾಮೃಗ
ಡಾ.ಕಾತ್ಯಾಯಿನಿ ಕುಂಜಿಬೆಟ್ಟು
ಸುಡು ಬಿಸಿಲಲ್ಲಿ ಅಲೆದಾಡಿದ
ಧೂಳು ಮೈಯ ಗಾಳಿಗೆ ಜ್ವರವೇರಿ
ಇಳಿದಿದೆ ಹರಿವ ನೀರಿನಲೆಗೆ
ಗಾಳಿ ಮೈಕೊಡವಿದಲ್ಲಿ
ಉದುರಿದ ಬಕುಳ ಹೂವಿಗೆ ವಿರಹ ಬೆಂಕಿ
ಹಾ! ಹಾ! ಎನುತ ತುಂಬಿಯ ಚುಂಬನದ ನೆನಪಲ್ಲಿ ಮೈನೆನೆದು
ಅಲೆಗಳಿಗೆ ಮೈಯೊಡ್ಡಿ ತೇಲಿ ಹೋಗಿದೆ.
ಮರಗಿಡ ಬಳ್ಳಿಗಳ ಮೈತುಂಬ
ಮದನಶರ ನಾಟಿ ನೇಸರಗೆ ಬಸಿರಾಗಿ
ಮೊಗ್ಗುಗಳ ಹೆತ್ತು ತೊಟ್ಟುಗಳ ತೊಟ್ಟಿಲಲಿ ತೂಗಿ
ಕೆಂಪು ಚಿಗುರು ಬೆರಳುಗಳ
ಹಸಿಮೈ ಬಾಣಂತಿ
ಕೇಶಗಳ ಬಿಚ್ಚಿ ಮಳೆನೀರ ಕಾದಿದೆ
ಚಿತ್ರಗಳು ತಮ್ಮನ್ನು ತಾವೆ
ಬರೆದುಕೊಂಡಂತೆ
ಹಕ್ಕಿಗಳು ರೆಕ್ಕೆ ಬಿಡಿಸಿ ಚಿಮ್ಮಿ
ಬಾಂದಳವ ಬಿಳಿ ಹಾಳೆ ಮಾಡಿವೆ
ಅವನು ಬಿಡಿಸಿದ ಚಿತ್ರದಂಥ
ಪ್ರಕೃತಿಗೆ ಜೀವ ಬಂದು
ಬಿಟ್ಟ ಕಣ್ಣಲಿ ಆಗಸದ ಕನ್ನಡಿಯಲಿ
ತನ್ನ ಬಿಂಬ ಹುಡುಕಿದೆ
ಸೀತೆಯ ಮನವು
ಜಿಂಕೆಯ ಹಿಂದೆ ಜಿಗಿಜಿಗಿದು ಚಿಮ್ಮಿದಂತೆ
ನನ್ನ ಹೃದಯವಿಂದು ನಿನ್ನ ಹಿಂದೆಯೇ ಅಲೆದು
ಮಾಯವಾಗಿದೆ
ಮಾಯಾಮೃಗ
ಸಿಕ್ಕರೆ ಮೂಗುದಾರ
ಹಾಕಬೇಕು
***************************