ಕವಿತೆ
‘ ರೂಮಿ ನಿನ್ನ ಸೆರಗಿನಲ್ಲಿ…. ‘
ನಾಗರಾಜ್ ಹರಪನಹಳ್ಳಿ
ನನ್ನ ನಿನ್ನ ಬಗ್ಗೆ ಜಗತ್ತು ;
ನಮ್ಮ ಸುತ್ತಲಿನ ಸಾಮಾನ್ಯ ಜಗತ್ತಿನ
ಸಾಮಾನ್ಯ ಮನುಷ್ಯರು ಆಡಿಕೊಳ್ಳುತ್ತಾರೆಂದರೆ ;
ನಾವು ಪ್ರೇಮಿಗಳೆಂದು ಅವರು ಒಪ್ಪಿಕೊಂಡಂತಾಯಿತು
ನಾವು ಎಷ್ಟು ಹತ್ತಿರವೆಂದು,
ಏನು ಮಾತಾಡಿಕೊಳ್ಳಬಹುದೆಂದು,
ಎಲ್ಲೆಲ್ಲಿ ಸಿಕ್ಕು ಮಾತಾಡಿ ಮುದ್ದಾಡಿರಬಹುದೆಂದು ಆಡಿಕೊಳ್ಳುತ್ತಾರೆಂಬ ಸುದ್ದಿ ನನಗೂ ಮುಟ್ಟಿದೆ
ನಾವು ಆಗಲ ಬೇಕೆಂದು ಅವರು ಕನಸು ಕಂಡದ್ದು, ಅದಕ್ಕಾಗಿ ಸತತ ಪಿತೂರಿ ಮಾಡಿದ್ದು
ಸ್ಪಷ್ಟವಾಗಿ ನೆನಪಿದೆ;
ಅವರ ಕಸರತ್ತು ,ಅಸೂಯೆ, ಹೊಟ್ಟೆಕಿಚ್ಚು , ರೂಮರ್ಸಗಳನ್ನು ನಾವು
ಹುಸಿ ಮಾಡುತ್ತಲೇ ಬಂದಿದ್ದೆವು ;
ಕಾರಣ
ನಮಗೆ ದುರುದ್ದೇಶವೇ ಇರಲಿಲ್ಲ
…… ಮೂರ್ಖ ಮನುಷ್ಯರಿಗೆ ಪ್ರೀತಿ ಅರ್ಥವಾಗುವುದಿಲ್ಲ;
ರೂಮಿ ನಿನ್ನ ಸೆರಗಿನಲ್ಲಿ
ನನ್ನ ತುಟಿಯಲ್ಲಿ ಇದ್ದುದು ಅವರಿಗೆ ಕಾಣಿಸುತ್ತಿರಲಿಲ್ಲ
ಪ್ರೇಮಿಗಳು ಕ್ಷಿತಿಜದಂತೆ
ಅವರೆಂದು ಭೇಟಿಯಾಗುವುದಿಲ್ಲ ಹಾಗೂ ಅವರು ಒಬ್ಬರೊಳಗೊಬ್ಬರು ಬೆರೆತೇ ಇರುತ್ತಾರೆಂಬುದು
ನಿನ್ನ ಗೆಳತಿಯರಿಗೆ ಅರ್ಥವಾದಾಗ ಅವರು ಮುದುಕಿಯರಾಗಿರುತ್ತಾರೆ;
ನಾವು ಚಿರ ಯೌವ್ವನಿಗರಂತೆ ದಂಡೆಯಲ್ಲಿ ಕೈ ಕೈ ಹಿಡಿದು ಬೆಳುದಿಂಗಳ ಸವಿಯುತ್ತಿರುತ್ತೇವೆ; ಹಾಗೂ
ಆಡಿಕೊಂಡವರ ಪಾಲಿಗೆ ಕತೆಯಾಗಿರುತ್ತೇವೆ
ಸರಿ ತಪ್ಪುಗಳಾಚೆ ಬಯಲಲಿ ಆಕಾಶಕ್ಕೆ ದೃಷ್ಟಿಯಿಟ್ಟು ಜೋಡಿ ಹಕ್ಕಿಗಳಾಗಿ ಹಾರುತ್ತಿರುತ್ತೇವೆ
ನಮ್ಮನ್ನು ಕೊಲ್ಲುವಷ್ಟು ಕೋಪಗೊಂಡಿದ್ದವ ಸಹ
ಮೂಗಿನ ಮೇಲೆ ಬೆರಳಿಡದಿದ್ದರೆ ನನ್ನಾಣೆಯಿದೆ ; ನೋಡು…
ಹಾಗೂ ನಮ್ಮ ಮಕ್ಕಳು
ಚಿರಯೌವ್ವನಕ್ಕೆ ಬಂದು ; ಅವರ ಪ್ರೇಯಸಿಯರ ತೋಳ ತೆಕ್ಕೆಯಲಿ ಪಿಸುಮಾತು ಆಡುತ್ತಿರುತ್ತಾರೆ ; ಅದ ಕಂಡು ನಾವಿಬ್ಬರೂ ಒಬ್ಬರ ಮುಖವ ಒಬ್ಬರು ನೋಡಿಕೊಂಡು ಒಳಗೊಳಗೆ ಒಲವಿನ ನಗೆಯಾಡುವುದು ಎಷ್ಟು ಚೆಂದ ಕ್ಷಣ !!!!
ಆಡಿಕೊಳ್ಳುವವರು ಆಡಿಕೊಳ್ಳಲಿ ಬಿಡು;
ನಾವು ಸುಮ್ಮನೆ ನಂನಮ್ಮ ಊರುಗಳಲ್ಲಿದ್ದು ; ಮಾತಾಡಿಕೊಳ್ಳೋಣ ಮೌನವಾಗಿ
ಆಡಿಕೊಂಡವರ ಬಾಯಿಗೆ ಸಕ್ಕರೆಯಾಗೋಣ
*************************************
Wah…superb
ಸಾವಧಾನದ ಪ್ರೀತಿ ಪದ್ಯ