ಗಜಲ್ ಎಂಬ ಮಾಯಾ ಜಿಂಕೆಯ ಬೆನ್ನುಹತ್ತಿ…..

ಗಜಲ್ ಬಗ್ಗೆ ವಿಶೇಷ ಲೇಖನ

ಗಜಲ್ ಎಂಬ ಮಾಯಾ ಜಿಂಕೆಯ ಬೆನ್ನುಹತ್ತಿ…..

ಡಾ. ಮಲ್ಲಿನಾಥ ಎಸ್. ತಳವಾರ

feather-written love note

ಒಲವು-ಪ್ರೀತಿ ನಮ್ಮ ಬಾಳಿನ ಬಹು ಮುಖ್ಯವಾದ ಒಂದು ಸ್ಥಾಯಿಭಾವ. ಒಲವಿನ ಮುಖಗಳು ಹಲವಾರು. ಕೆಲವರ ಜೀವನದಲ್ಲಿ ಕೆಲವು ಮುಖಗಳ ಆವಿಷ್ಕಾರವಾಗಿರುತ್ತವೆ, ಆದರೆ ಎಲ್ಲ ಮುಖಗಳನ್ನು ಕಂಡವರು ಪ್ರಾಯಶಃ ಯಾರೂ ಇರಲಿಕಿಲ್ಲ. ಈ ಒಲವು-ಪ್ರೀತಿಯನ್ನು ಗಂಡು-ಹೆಣ್ಣಿನ ಹರೆಯದ ಸೆಳೆತಕ್ಕೆ ಮಾತ್ರ ಸೀಮಿತಗೊಳಿಸಿ ಭ್ರಮಿಸಿಕೊಂಡವರೆ ಬಹಳ ಮಂದಿ. ಹಿರಿಯರ ಬಗೆಗಿನ ಪ್ರೀತಿ, ಗೌರವ ಭಕ್ತಿಯಾಗಿ, ಕಿರಿಯರ ಮೇಲಣ ಪ್ರೀತಿ ವಾತ್ಸಲ್ಯವಾಗಿ ಹಾಗೂ ಸಮಾನರಲ್ಲಿಯ ಪರಸ್ಪರ ಪ್ರೀತಿ, ಸ್ನೇಹ.. ಪ್ರೇಮವಾಗಿ ಇಡೀ ಮನುಕುಲವನ್ನೇ ನಿಯಂತ್ರಿಸುತ್ತ ಸಮತೋಲನ ಬದುಕಿಗೆ ಮುನ್ನುಡಿ ಬರಿಯುತ್ತಿದೆ. ಪ್ರೀತಿ ಎನ್ನುವುದು ನಾವು ಕೊಡಬಲ್ಲ, ತೆಗೆದುಕೊಳ್ಳಬಲ್ಲ ಒಂದು ಅನುಪಮ ಉಡುಗೊರೆ. ಅದು ನಾವೆಲ್ಲರೂ ಕೊಡಲೆಬೇಕಾದ, ತೆಗೆದುಕೊಳ್ಳಲೆಬೇಕಾದ ಕಾಣಿಕೆ. ಪ್ರೀತಿಯಿಲ್ಲದೆ ಬದುಕಿದ ಬದುಕು ಪೂರ್ಣವಾಗಿ ಬದುಕಿದ ಬದುಕಲ್ಲ. ಅದು ಮುಕಮ್ಮಲ್ ಆಗದು. ಈ ಎಲ್ಲ ಬಣ್ಣಗಳ ಸುಂದರ ಕಾಮನಬಿಲ್ಲು ಅಂದರೆ ಸಾಹಿತ್ಯ. ಈ ಕಾರಣಕ್ಕಾಗಿಯೇ ರಸಾನುಭವವನ್ನು ಒದಗಿಸುವ ವಾಙ್ಮಯವೇ ಸಾಹಿತ್ಯ ಎನ್ನಲಾಗುತ್ತದೆ. ಭಾಷೆಯ ದೀಪ್ತಿಯೊಂದಿಗೆ ಹೆಜ್ಜೆ ಹಾಕುವ ಸಾಹಿತ್ಯಕ್ಕೆ ಯಾವುದೆ ನಿರ್ದಿಷ್ಟ ಭಾಷೆಯ, ಗಡಿಯ ಹಂಗು‌ ಇರುವುದಿಲ್ಲ. ಕನ್ನಡ ಕಾವ್ಯವು ಸಹಜವಾಗಿಯೇ ಬದಲಾಗುತ್ತ, ಕಾಲಕ್ಕನುಗುಣವಾಗಿ ಹೊಸದನ್ನು ಬರಮಾಡಿಕೊಂಡು ಬೆಳೆದಿದೆ.‌ ಆಯಾ ಕಾಲಕ್ಕೆ ತಕ್ಕಂತೆ ಹಿಂದಿನದರ ಬಗ್ಗೆ ಬೇಸರ ಬಂದಾಗ, ಅದು ತಮ್ಮ ಅಭಿವ್ಯಕ್ತಿಗೆ ಸಾಲದು ಎನಿಸಿದಾಗ, ಕವಿಗಳು ಹೊಸ ರೂಪಗಳನ್ನು ಸೃಷ್ಟಿಸಿಕೊಂಡದ್ದನ್ನು, ತಮ್ಮಲ್ಲಿಯೇ ಇದ್ದು ಮರೆತು ಹೋಗಿದ್ದ ರೂಪಗಳನ್ನು ಪುನರುಜ್ಜೀವನಗೊಳಿಸಿಕೊಂಡು, ತಮ್ಮ ಹೊಸ ಅನುಭವಗಳನ್ನು ಹೊಸ ಸಾಹಿತ್ಯ ರೂಪದಲ್ಲಿ ರೂಪಿಸಿದುದನ್ನೂ ನಾವು ಗಮನಿಸಬಹುದು.‌ ಇದಕ್ಕೊಂದು ಅನನ್ಯ ನಿದರ್ಶನವೆಂದರೆ ‘ಗಜಲ್’ ಎಂಬ ಚೆಲುವಿನ ಪರಿ…!!

          ‘ಗಜಲ್’ ಎನ್ನುವ ಶಬ್ದವು ಕಿವಿಗೆ ಚುಂಬಿಸುತ್ತಲೆ ಹೃದಯದ ಮಿಡಿತ ಪುಳಕಗೊಳ್ಳುತ್ತದೆ. ತಾಜಾ ಬೆಣ್ಣೆಯ ಕೋಮಲತೆ, ಅರಳಿ ನಿಂತ ಪುಷ್ಪ ಲತೆಯ ಪರಿಮಳದ ಅನುಭೂತಿಯನ್ನು ಕರುಣಿಸುತ್ತದೆ. ಹಸಿದ ಒಡಲನ್ನು ತಣಿಸುವ, ಅಂಧಕಾರವನ್ನು ಮರೆಯಾಗಿಸುವ ಹೊಳಪಿನ ಚಿಂಗಾರಿಯಿದು.

ಇದು ಮೂಲತ: ಅರೆಬಿಕ್ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದು ಎಂದೆಲ್ಲ ಹೇಳಲಾಗುತ್ತದೆ. ಗಜಲ್ ಉರ್ದು ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬ್ ನಿಂದ ಅಂಬೆಗಾಲಿಡುತ್ತ, ಪರ್ಷಿಯಾದಲ್ಲಿ ಹೆಮ್ಮರವಾಗಿ ಬೆಳೆದು, ಉರ್ದು ಭಾಷೆಯಲ್ಲಿ ಕ್ಷಿತಿಜವನ್ನು ತಲುಪಿ ಸಾಹಿತ್ಯದ ಒಂದು ಸಶಕ್ತ ಪ್ರಕಾರವಾಗಿ ಕಂಗೊಳಿಸುತ್ತಿದೆ. ೭ನೇ ಶತಮಾನದಿಂದ ೨೧ನೇ ಶತಮಾನದ ಇಂದಿನವರೆಗೂ ಇದು ಹರಡಿಕೊಂಡ ರೀತಿ ಆಶ್ಚರ್ಯವನ್ನು ಮೂಡಿಸುತ್ತದೆ.

         ಗಜಲ್ ಸೊಬಗು ೧೦೦೦ ವಸಂತಗಳ ಭವ್ಯವಾದ ಮತ್ತು ಗೌರವಯುತವಾದ ಆನ್, ಶಾನ್ ಹೊಂದಿದೆ. ಗಜಲ್ ಅರಬ್ಬರ ಕಸೀದಾ ಎಂಬ ಕಾವ್ಯ ಪ್ರಕಾರದ ಪೀಠಿಕಾ ಭಾಗ ತಶಬೀಬ್ ದಿಂದ ಉದಯಿಸಿದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಅದು ಬೆಳೆದದ್ದು ಇರಾನ್‌ನ ‘ಚಾಮ’ ಎಂಬ ಕಾವ್ಯ ಪ್ರಕಾರದಿಂದ ಎಂದೂ ಕೆಲವು ವಿದ್ವಾಂಸರು ಹೇಳುತ್ತಾರೆ. ಆದರೆ ಪಾಕಿಸ್ತಾನದ ಕವಿ, ವಿಮರ್ಶಕ ಡಾ. ವಜೀರ್ ಆಗಾರವರು ” ಗಜಲ್ ಸ್ವಭಾವತಃ ಗೀತದ ಬುನಾದಿಯ‌ ಮೇಲೆ ನಿಂತಿರುವುದರಿಂದ ಗಜಲ್ ಅನ್ನು ಅರಬ್ಬಿ ತಶಬೀಬ್ (ಕಸೀದಾದ ಪೀಠಿಕೆ) ದಿಂದ ಹುಟ್ಟಿತು ಎನ್ನುವುದಕ್ಕೆ ಬದಲಾಗಿ ಅದನ್ನು ಇರಾನ್ ದ ಚಾಮ ಕಾವ್ಯಕ್ಕೆ ಸಂಬಂಧಪಟ್ಟದೆಂದು ಹೇಳುವುದು ಸೂಕ್ತ” ಎನ್ನುತ್ತಾರೆ. ಇದು ಮುಂದೆ ಫಾರ್ಸಿ ಭಾಷೆಯಿಂದ ಉರ್ದು ಭಾಷೆಯಲ್ಲಿ ಬಂದ ಗಜಲ್ ಫಾರ್ಸಿಯ ಅನುಕರಣೆಯಾಗಿರಲಿಲ್ಲ. ಹಿಂದೂಸ್ತಾನಕ್ಕೆ ಬಂದ ಗಜಲ್‌ನಲ್ಲಿ ಈ ದೇಶದ ಲೋಕಗೀತೆ, ರೀತಿ ರಿವಾಜುಗಳು, ಋತು, ನೀರು, ಗಾಳಿ, ಹಸಿರು, ನೆಲ, ಹೂ, ಹಬ್ಬ ಹೀಗೆ ಅನೇಕ ವಿಷಯಗಳನ್ನೊಳಗೊಂಡ ಇದು ಭಾರತೀಯ ಕಾವ್ಯವಾಗಿದೆ. ಇದು ಭಾರತೀಯ, ಫಾರಸಿ ಮತ್ತು ಅರೆಬಿಕ್… ಈ ಮೂರು ಸಂಸ್ಕೃತಿಗಳ ಹದವಾದ ಮಿಶ್ರಣವಾಗಿದೆ.

         ಉರ್ದು ಭಾಷೆಯ ಗಜಲ್‌ನ್ನು ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾದವರಲ್ಲಿ ಶಾಂತರಸರು ಅಗ್ರಗಣ್ಯರು. ಉರ್ದು ಮಾಧ್ಯಮದಲ್ಲಿಯೇ ಅವರು ಅಭ್ಯಾಸ ಮಾಡಿದ್ದರ ಫಲದಿಂದ ಗಜಲ್‌ನ ಪ್ರಕಾರದ ಸಂಪೂರ್ಣ ಆಳ, ವಿಸ್ತಾರಗಳ ಅರಿವು ಅವರಿಗಿತ್ತು. ಹಾಗಾಗಿಯೇ ಆಗಾಗ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಗಜಲ್ ಎಂಬ ಹೆಸರಿನ ಪ್ರೇಮಗೀತೆಗಳನ್ನು ಅವರು ವಿರೋಧಿಸುತ್ತಿದ್ದರು. ಗಜಲ್ ಕೇವಲ ಪ್ರೀತಿ, ಪ್ರೇಮಕ್ಕೆ ಸಂಬಂಧಿಸದೇ ಆಂತರಿಕ ತುಡಿತ, ಜೀವನದ ಅಸ್ಥಿರತೆ, ಸಾಮಾಜಿಕ ವಿಚಾರ, ದೈವಿಕತೆ, ಬ್ರಹ್ಮಜ್ಞಾನ ಹೀಗೆ ಹತ್ತು ಹಲವು ವಿಷಯಗಳನ್ನು ಹೊಂದಿರಹುದು. ಒಂದು ಷೇರ್ ಗಜಲಿನ ಒಂದು ಅಂಗವಾಗಿರುವಂತೆ, ಅದು ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಬೇರೆ ಘಟಕವಾಗಿರುವುದೇ ಅದರ ಮಹತ್ವ ಮತ್ತು ಇತರೆಡೆಗಳಲ್ಲಿ ಕಾಣದ ವೈಶಿಷ್ಟ್ಯ. ಇಂತಹ ಬೇರೆ ಬೇರೆ ಅಶಅರ್ ಕೂಡಿಸಿ ರಚಿತವಾದ ಗಜಲ್‌ನ ಹಿಂದಿರುವ ಶಕ್ತಿ ಯಾವುದು? ಎಂಬ ಪ್ರಶ್ನೆ ಮೂಡುತ್ತದೆ. ಅಂತೆಯೇ ಬೇರೆ ಬೇರೆ ಬಣ್ಣಗಳಿಂದ ಕೂಡಿದ ಹೂಗಳ ಹಾರಕ್ಕೆ ಇದನ್ನು ಹೋಲಿಸಲಾಗುತ್ತದೆ. ಬೇರೆ ಬಣ್ಣದ ಹೂಗಳ ಅಸ್ತಿತ್ವ ಬೇರೆ ಬೇರೆಯಾಗಿದ್ದರೂ ಅವುಗಳನ್ನು ಬಂಧಿಸಿರುವ ದಾರ ಮಾತ್ರ ಒಂದೇ ಆಗಿರುತ್ತದೆ. ಕವಿಯ ಆಂತರಂಗಿಕ ಭಾವಗಳು, ಸಂವೇದನೆಗಳು ಗಜಲಿನ ಅಶಅರ್ ಹೆಣೆದು ಕಟ್ಟಿರುತ್ತದೆ. ಕವಿಯ ಅಂತ:ಶಕ್ತಿಯ ಆಧಾರ ನಮ್ಮ ಕಣ್ಣುಗಳಿಗೆ ಕಾಣುವುದಿಲ್ಲ, ಹೂವಿನ ಹಾರದ ದಾರದಂತೆ. ಸಮರ್ಥ ‘ಗಜಲ್ ಗೋ’ ಮಾತ್ರ ಇಂತಹ ಆಂತರಂಗಿಕ ದಾರವನ್ನು ಸೃಷ್ಟಿಸಬಲ್ಲ. –

        ಈ ಹಿನ್ನೆಲೆಯಲ್ಲಿ ‘ಗಜಲ್’ ಸಾಹಿತ್ಯ ರೂಪದ ಪಯಣ ಹೃದಯವನ್ನು ತಟ್ಟಿಬಿಡುತ್ತದೆ. ಇದು ಅರೇಬಿಕ್, ಪಾರ್ಸಿ, ಉರ್ದುವಿನ ಮುಖಾಂತರ ಕನ್ನಡ ಸಾರಸ್ವತ ಲೋಕದ ಕದ ತಟ್ಟಿದೆ. ಗಜಲ್ ಇದೊಂದು ಸುಂದರ ಪ್ರೇಮಮಯ ಕಾವ್ಯ, ಸಂಗೀತಮಯ ಪ್ರೇಮ. ಹಾಗಂತ ಪ್ರೇಮ ಗೀತೆಗಳೆಲ್ಲವೂ ಗಜಲ್ ಆಗುವುದಿಲ್ಲ. ಗಜಲ್ ತನ್ನದೆಯಾದ ಗೇಯತೆಯುಳ್ಳ ಲಕ್ಷಣಗಳನ್ನು ಹೊಂದಿದೆ.

        ಗಜಲ್ ಗೇಯತೆಯುಳ್ಳ ಕಾವ್ಯ ಪ್ರಕಾರ. ಇದನ್ನು ಭಾವಪೂರ್ಣವಾಗಿ ಹಾಡಬಹುದು. ಗಜಲಿಗೆ ತಲೆಬರಹವಿರುವುದಿಲ್ಲ. ಗಜಲ್‌ನ್ನು ಗಜಲ್ ಎಂದಷ್ಟೆ ಕರೆಯಬೇಕು. ಗಜಲ್‌ನ ಮತ್ತೊಂದು ವೈಶಿಷ್ಟ್ಯವೆಂದರೆ ಮೃದು, ಮಧುರ ಭಾವದ ಶಬ್ದಗಳು ಉರ್ದುವಿನಲ್ಲಿರುವಷ್ಟು ಇತರ ಭಾಷೆಗಳಲ್ಲಿ ದೊರೆಯುವುದಿಲ್ಲ ಎಂಬ ದೂರೂ ಇತ್ತು. ಆದರೆ ಅದನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸಿ, ಕನ್ನಡದಲ್ಲಿಯೂ ಮೃದು, ಮಧುರ ಭಾವದ ಗಜಲ್‌ಗಳನ್ನು ರಚಿಸಿ ತೋರಿಸಿದ ಕೀರ್ತಿ ಶಾಂತರಸರಿಗೆ ಸಲ್ಲುತ್ತದೆ. ಉರ್ದುವಿನಲ್ಲಿ ಗಜಲ್‌ಗೆ ಸಂಬಂಧಿಸಿದಂತೆ ನೂರಾರು ಛಂದಸ್ಸುಗಳಿವೆ. ಅವುಗಳನ್ನೆಲ್ಲ ಕನ್ನಡಕ್ಕೆ ತರಲು ಸಾಧ್ಯವಿಲ್ಲ, ಕನ್ನಡ ಜಾಯಮಾನಕ್ಕೆ ಹೊಂದುವಂತೆ ನಾವು ಮಾತ್ರಾ ಗಣಗಳನ್ನು ಮಾತ್ರ ಬಳಸಿ ಗಜಲ್‌ಗಳನ್ನು ರಚಿಸಬಹುದಾಗಿದೆ ಎಂದು ಶಾಂತರಸರು ತಮ್ಮ “ಗಜಲ್ ಮತ್ತು ಬಿಡಿ ದ್ವಿಪದಿ” ಕೃತಿಯ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಇದರಲ್ಲಿಯೇ ಇನ್ನೂ ಹೊಸ ಹೊಸ ಛಂದಸ್ಸುಗಳಿಗೆ ಅವಕಾಶಗಳಿವೆ. ಪ್ರಯೋಗಗಳು ನಡೆಯಬೇಕಾಗಿವೆಯಷ್ಟೆ. ಉರ್ದು ಸಂಸ್ಕೃತಿಯಿಂದ ಗಜಲ್ ಬಂದಿದೆಯಾದ್ದರಿಂದ, ನಮ್ಮಲ್ಲಿನ ಸಂಸ್ಕೃತಿಗೆ ಅವುಗಳನ್ನು ಒಗ್ಗಿಸಿಕೊಳ್ಳುವಾಗ ಬಳಸಲಾಗುವ ಶಬ್ದಗಳ ಬಗ್ಗೆಯೂ ಇಲ್ಲಿ ಹೇಳಲೇಬೇಕಾಗುತ್ತದೆ. ಉರ್ದು ಸಾಹಿತ್ಯದಲ್ಲಿ ಮಧುಶಾಲೆ, ಸಾಕಿ…. ಪದಗಳು ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಪಡೆದಿವೆ. ಮಧುಶಾಲೆ ಎಂದರೆ ಮದ್ಯ ಮಾರುವ ಅಂಗಡಿ ಎಂಬುದು ಸಾಮಾನ್ಯ ಅರ್ಥ. ಆದರೆ ಇಲ್ಲಿ ಮಧುಶಾಲೆಗೆ ತನ್ನದೆ ಆದ ಶಿಷ್ಟಾಚಾರವಿದೆ. ಕುಡಿದವ ಅಲ್ಲಿ ಮತ್ತನಾಗಿ ಬಡಬಡಿಸಬಾರದು, ಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ಇದು ಕೇವಲ ಮದ್ಯ ಮಾರುವ ಅಂಗಡಿಯಾಗಿರದೆ ಕವಿಗಳು ಮಧುಪಾನ ಮಾಡುತ್ತ ಮಾತನಾಡುತ್ತಿದ್ದರು, ಸಂಭಾಷಿಸುತ್ತಿದ್ದರು. ಅದೊಂದು ಚಿಂತನಕೂಟವಾಗಿತ್ತು. ದರ್ಶನದ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು. ಸಾಕಿ ಎಂದರೆ ಮದ್ಯವನ್ನು ಕವಿಗಳಿಗೆ ಕೊಡುವವ ಎಂದರ್ಥವಿದೆ. ಸಾಕಿ ಗಂಡೂ ಆಗಿರಬಹುದು, ಹೆಣ್ಣೂ ಆಗಿರಬಹುದು. ಗಜಲ್‌ಗಳಲ್ಲಿ ಅನೇಕ ಕಡೆ ಸಾಕಿಯನ್ನು ಪುಲ್ಲಿಂಗವೆಂದೇ ಪ್ರಯೋಗಿಸಲಾಗಿದೆ. ಕೆಲವು ಕವಿಗಳಲ್ಲಿ ಸಾಕಿ ದೇವರ ರೂಪಕವಾಗಿಯೂ ಪ್ರಯೋಗವಾಗಿದೆ. ಮಧುಶಾಲೆ, ಸಾಕಿ ಕಲ್ಪನೆಯಾಗಿರಲೂ ಸಾಧ್ಯವಿದೆ. ಕವಿಗಳು ಮದ್ಯ ಕುಡಿದೇ ಬರೆಯಬೇಕೆಂಬ ನಿಯಮವೇನಿಲ್ಲ. ಇಲ್ಲಿ ಉಜ್ವಲವಾದ ಪ್ರತಿಭೆ, ಲೋಕಾನುಭವ, ಕಲ್ಪನಾಶಕ್ತಿ ಮಾತ್ರ ಕೆಲಸ ಮಾಡುತ್ತದೆ. ಮದ್ಯ ಇಲ್ಲಿ ಅಮಲು ಬರಿಸುವ ಪೇಯ. ಅದು ಪ್ರೇಮರಸವಾಗಿರಬಹುದು ಅಥವಾ ಭಕ್ತಿರಸವಾಗಿರಬಹುದು. ಅಮಲು ಎಂದರೆ ಸೂಫಿಗಳ ಪ್ರಕಾರ ಪರವಶತೆ, ತನ್ನನ್ನು ತಾನು ಮರೆಯುವುದು, ಪ್ರೇಮೋನ್ಮಾದದಲ್ಲಿ ಲೀನವಾಗುವುದು, ಆತ್ಯಂತಿಕ ಸುಖ ಪಡೆಯುವುದು. ಯಾವತ್ತಿಗೂ ಪ್ರೀತಿಯೇ ಜಗತ್ತಿನಲ್ಲಿ ಸ್ಥಾಯಿ ಭಾವವಾಗಿದೆ. ಸಾಮಾಜಿಕ ಕಳಕಳಿ, ಕಾಳಜಿ, ಬಂಡಾಯ, ಪ್ರತಿಭಟನೆ ಎಲ್ಲದರ ಹಿಂದೆಯೂ ಪ್ರೀತಿ ತುಡಿಯುತ್ತಿರುತ್ತದೆ.

        ‘ಭಾಷೆಯೆಂಬ ಜ್ಯೋತಿ ಬೆಳಗದೆ ಇದ್ದರೆ ಇಡೀ ಭೂಮಂಡಲವೇ ಕತ್ತಲಲ್ಲಿ ಮುಳುಗಿರುತಿತ್ತು’ ಎಂದು ಲಾಕ್ಷಣಿಕಕಾರ ದಂಡಿ ಹೇಳುತ್ತಾನೆ. ಗಜಲ್ ಮೃದುವಾದ ಭಾಷೆಯನ್ನು ಅಪೇಕ್ಷಿಸುತ್ತದೆ.‌ ಅನಗತ್ಯವಾಗಿ ಅನ್ಯ ಭಾಷೆಗಳ ಬಳಕೆ ಗಜಲ್ ನ ಭಾವ ಲಹರಿಯನ್ನು ಹಾಳು ಮಾಡುತ್ತದೆ. ಪದಗಳ ರಚನೆಯಲ್ಲಿ ಸಂಧಿ, ವಿಸಂಧಿ, ಶೃತಿಸಹ್ಯ ಸಂಧಿಯನ್ನು ಗಮನಿಸಬೇಕು.

      ಸಾಹಿತ್ಯ ಪ್ರಕಾರದಲ್ಲಿ ಗಜಲ್ ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಹೊಸ ಪ್ರಯೋಗಗಳೂ ನಡೆಯಬೇಕಾಗಿವೆಯಷ್ಟೇ. ಕೇವಲ ಪ್ರೀತಿಯಷ್ಟೇ ಅಲ್ಲದೆ ಸಾಮಾಜಿಕ ಕಳಕಳಿಯುಳ್ಳ ಭಾವವನ್ನೂ ಕೆಲವು ಗಜಲ್‌ಗಳಲ್ಲಿ ಪ್ರಯೋಗಿಸಲಾಗಿದೆ.

ಗಜಲ್‌ನ ರಚನೆ

        ಗಜಲ್ ರಚನೆಯಲ್ಲಿ ಪ್ರಮುಖವಾಗಿ ನಾಲ್ಕು ಅಂಗಗಳಿವೆ. ೧. ಮತ್ಲಾ, ೨. ಕಾಫಿಯಾ, ೩. ರದೀಫ್, ೪ ಮಕ್ತಾ. ಈ ಗಜಲ್ ರಚನೆಗೆ ಗಜಲ್ ಗೋಯಿ ಎನ್ನುವರು. ಗಜಲ್ ರಚನೆಕಾರರಿಗೆ ಗಜಲ್ ಗೋ ಎನ್ನುವರು. ಸಾಮಾನ್ಯವಾಗಿ ಒಂದು ಗಜಲ್ ಐದರಿಂದ ಇಪ್ಪತ್ತೈದರವರೆಗೆ ದ್ವಿಪದಿಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆಯಾದರೂ ೨-೩ ಅಶಅರ್ ನ ಗಜಲ್ ಗಳನ್ನೂ ರಚಿಸಿದ್ದಾರೆ. ಗಜಲ್ ನ ಒಂದು ಚರಣಕ್ಕೆ ಮಿಸ್ರಾಗಳಿಗೆ ಮಿಷರೈನ್ ಎನ್ನುವರು. ಒಂದು ದ್ವಿಪದಿಗೆ ಷೇರ್/ಬೈತ್/ಫರ್ದ್ ಎನ್ನುವರು. ಒಂದಕ್ಕಿಂತ ಹೆಚ್ಚು ಷೇರ್ ಗಳಿಗೆ ಅಶಅರ್ ಎನ್ನುವರು. ಇತ್ತೀಚಿನ ಹೆಚ್ಚಿನ ಗಜಲ್ ಗೋ ಬರೆದಿದ್ದು, ಬರೆಯುತ್ತಿರುವುದು ಐದು ಅಶಅರ್ ಮಾತ್ರ ! ಪ್ರತಿ ಷೇರ್ ನ ಮೊದಲ ಮಿಸ್ರಾಗೆ ಮಿಸ್ರಾ-ಎ-ಸಾನಿ ಎಂದು ಕರೆದರೆ, ಎರಡನೆಯ ಮಿಸ್ರಾಗೆ ಮಿಸ್ರಾ-ಎ-ಸಾನಿ ಎನ್ನುವರು. ಪ್ರೀತಿ ಮಿಷರೈನ್ ಸ್ವತಂತ್ರವಾಗಿ ದ್ದು ಪ್ರತ್ಯೇಕ ಅರ್ಥವನ್ನು ಕೊಡುವಂತಿರಬೇಕು. ಪ್ರತಿ ಷೇರ್ ನ ಎರಡು ಮಿಸರೈನ್ ಒಂದರೊಳಗೊಂದು ಬೆರೆತಿದಬಾರದು. ಅಂತೆಯೇ ಪ್ರತಿ ಅಶಅರ್ ಸಂಪೂರ್ಣ ಕಾವ್ಯ ಎನ್ನಲಾಗುತ್ತದೆ. ಗಜಲ್ ನ ಆರಂಭದ ಷೇರ್ ಅನ್ನು ಮತ್ಲಾ ಎಂದು ಕರೆದರೆ ಗಜಲ್ ನ ಕೊನೆಯ ಷೇರ್ ಅನ್ನು ಮಕ್ತಾ ಎಂದು ಕರೆಯಲಾಗುತ್ತದೆ. ‘ಮತ್ಲಾ’ವು ಇಡೀ ಗಜಲ್ ಗೆ ದಾರಿದೀಪ ಆಗುವಂತಿರಬೇಕು. ಅದಕ್ಕೆ ‘ಮತ್ಲಾ’ ಎಂದರೆ ಉದಯ ಎಂದಾಗುತ್ತದೆ. ‘ಮತ್ಲಾ’ ಇಡೀ ಗಜಲ್ ನ ಆಧಾರಸ್ತಂಭವಾಗಿರಬೇಕು. ಗಜಲ್ ಗೋ ಮತ್ಲಾದಲ್ಲಿಯೇ ಗಜಲ್ ನ ಬೆಹರ್, ವೃತ್ತ, ಮೀಟರ್, ಅರ್ಕಾನ್ ಎಲ್ಲವನ್ನೂ ನಿರ್ಧರಿಸಬೇಕು. ಈ ಮತ್ಲಾವು ಗಜಲ್ ಗೆ ಲಯ ಮತ್ತು ಪ್ರವೇಶಿಕೆಯ ಜೊತೆಗೆ ವಿಷಯವನ್ನು ಒದಗಿಸಿಕೊಡುತ್ತದೆ. ಈ ಮತ್ಲಾದ ಎರಡು ಮಿಸರೈನ್ ನಲ್ಲಿ ಕಾಫಿಯಾ, ರದೀಫ್ ಬರುತ್ತವೆ, ಬರಲೆಬೇಕು. ‘ಮಕ್ತಾ’ ಎಂದರೆ ಅಸ್ತಂಗತ ಎಂಬರ್ಥವಿದೆ. ಇಲ್ಲಿ ಗಜಲ್ ಕಾರರು ತಮ್ಮ ಕಾವ್ಯನಾಮವನ್ನು ಮಕ್ತಾದ ಊಲಾ ಮಿಸ್ರಾದಲ್ಲಾಗಲಿ ಅಥವಾ ಸಾನಿ ಮಿಸ್ರಾದಲ್ಲಾಗಲಿ ಬಳಸಬಹುದು.‌ ಅದನ್ನು ಗಜಲ್ ನ ಪಾರಿಭಾಷಿಕ ಪದಗಳಲ್ಲಿ ‘ತಖಲ್ಲುಸ್ ನಾಮ’ ಎನ್ನುವರು. ಇದು ಕೂಡ ಗಜಲ್ ನಲ್ಲಿ ಪೂರಕವಾಗಿ ಬರಬೇಕೆ ಹೊರತು ಅನಗತ್ಯವಾಗಿ ತುರುಕಿದಂತಾಗಬಾರದು. ಕಾರಣ ಇದು ಗಜಲ್ ಗೆ‌ ಅವಶ್ಯಕವೆ‌‌ ಹೊರತು ಅನಿವಾರ್ಯವಲ್ಲ. ಒಂದು ವೇಳೆ ತಖಲ್ಲುಸನಾಮ ಇಲ್ಲದಿದ್ದರೆ ಅದು ಕೇವಲ ಗಜಲ್ ಒಂದರ ಕೊನೆಯ ಷೇರ್ ಎನಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ತಖಲ್ಲುಸನಾಮದ ಬಳಕೆ ಅವಶ್ಯವೆನಿಸುತ್ತದೆ. ಇನ್ನೂ ಕೆಲವರು ಮತ್ಲಾದಲ್ಲಿಯೂ ತಮ್ಮ ‘ತಖಲ್ಲುಸನಾಮ’ ವನ್ನು ಬಳಸಿದ್ದಾರೆ. ತಖಲ್ಲುಸನಾಮ ಬಳಸಲು ಪ್ರಾರಂಭಿಸಿದವನು ೧೪ ನೆ ಶತಮಾನದ ಶ್ರೇಷ್ಠ ಪರ್ಷಿಯನ್ ಗಜಲ್ ಗೋ ಮಹಮ್ಮದ್ ಹಾಫೀಜ್ ಎನ್ನಲಾಗುತ್ತಿದೆ.‌ 

            ಗಜಲ್ ನ ಅನುಪಮ ಲಕ್ಷಣಗಳೆಂದರೆ ರದೀಫ್ ಮತ್ತು ಕಾಫಿಯಾ.

       ರದೀಫ್ ಗಜಲ್ ನ ಉದ್ದಕ್ಕೂ ಬಳಕೆಯಾಗುವ ಕೊನೆಯ ಪದ. ಇದು ಒಂದು ಪದವಾಗಿರಬಹುದು ಅಥವಾ ಸಂಪೂರ್ಣ ಅರ್ಥ ನೀಡುವ ಕೆಲವು ಪದಗಳ ಗುಚ್ಛವಾಗಿರಲೂ ಬಹುದು. ಈ ರದೀಪ್ ಕಾಫಿಯವನ್ನು ಹೊತ್ತು ಒಯ್ಯುವ ಒಂಟೆಯಂತೆ..! ಇದು ನಾಮಪದವಾಗಿರದೆ ಗಜಲ್ ನ ಒಂದು ಭಾಗವಾಗಿರಬೇಕು. ನಾವು ಬಳಸಿದ ರದೀಪ್ ಕೈ ಬಿಟ್ಟರೆ ಇಡೀ ಗಜಲ್ ನ ಭಾವ ತೀವ್ರತೆ ಬುಡಮೇಲು ಆಗುವಂತಿರಬೇಕು. ಅದು ಕೇವಲ ಅಡುಗೆಯಲ್ಲಿ ಬಳಸುವ ಕರಿಬೇವಿನ ಸೊಪ್ಪಲ್ಲ…! ಅನಾವಶ್ಯಕವಾಗಿ ರದೀಪ್ ಬಳಸಬಾರದು. ರದೀಫ್ ಗಜಲ್ ಗೆ ಅನಿವಾರ್ಯವಲ್ಲ, ಆದರೆ ಇದ್ದರೆ ಮಾತ್ರ ಗಜಲ್ ಗೆ ಒಂದು ಮೆರಗು ಬರುತ್ತದೆ. ಅಂತೆಯೇ ಅನೇಕರು ರದೀಫ್ ಇಲ್ಲದ ಗಜಲ್ ಗಳನ್ನು ಮೆಚ್ಚುವುದಿಲ್ಲ. ಆದರೂ ರದೀಫ್ ಇಲ್ಲದ ಗಜಲ್ ಗಳು ರಚನೆಯಾಗುತ್ತಿವೆ. ಗಜಲ್ ಛಂದಶಾಸ್ತ್ರಜ್ಞರಾದ ಅಲ್ಲಾಮ ಅಖ್ಲಾಕ್ ದೆಹಲವಿ ಯವರು ತಮ್ಮ ‘ಘನ ಶಾಯರಿ’ ಕೃತಿಯಲ್ಲಿ ಗಜಲ್ ಗೆ ರದೀಫ್ ಅನಿವಾರ್ಯವಲ್ಲ ವೆಂದು ಹೇಳಿದ್ದಾರೆ. ಇದೇ ಮಾತನ್ನು ಮಮ್ತಾಜ್ ಉರ್ರಷಿದ್ ರವರು ತಮ್ಮ’ಇಲ್ಮ್ ಕಾಫಿಯಾ’ ಪುಸ್ತಕದಲ್ಲಿ ಹೇಳಿದ್ದಾರೆ.

ರದೀಫ್ ಗಜಲಿಗೆ ಕಾಂತಿಯನ್ನು, ರಮ್ಯತೆಯನ್ನು ತಂದುಕೊಡುವುದಲ್ಲದೆ ಭಾವ ವೈಶಾಲ್ಯತೆಯನ್ನು ವೈವಿಧ್ಯತೆಯನ್ನೂ ನೀಡುತ್ತದೆ. ರದೀಫ್ ಲಾಲಿತ್ಯವಿದ್ದಷ್ಟೂ ಗಜಲ್ ಸಂಗೀತಮಯವಾಗುತ್ತದೆ. ಲಯದ ಚೆಲುವು ಹೆಚ್ಚುತ್ತದೆ. ರದೀಫ್ ನಲ್ಲಿ ಪ್ರಮುಖವಾಗಿ ಮೂರು ಪ್ರಕಾರಗಳಿವೆ. ಒಂದು ಅಕ್ಷರ/ಒಂದು ಹರ್ಫ್/ಶಬ್ಧದ ರದೀಫ್ ಇದ್ದರೆ ಅದಕ್ಕೆ ‘ಚೋಟಿ ರದೀಫ್’ ಎನ್ನುವರು. ಎರಡು/ಮೂರು ಶಬ್ದಗಳ ರದೀಫ್, ಅರ್ಧ ಮಿಸ್ರಾಗಿಂತಲೂ ಚಿಕ್ಕದಾಗಿದ್ದರೆ ಅದಕ್ಕೆ ‘ಮಜಲಿ ರದೀಫ್’ ಎನ್ನುವರು. ಇನ್ನೂ ರದೀಫ್ ಅರ್ಧ ಮಿಸ್ರಾಗಿಂತಲೂ ಅಧಿಕವಾಗಿದ್ದರೆ ಅದಕ್ಕೆ ‘ಲಂಬಿ ರದೀಫ್’ ಎನ್ನುವರು. ರದೀಫ್ ಗಜಲ್ ನಲ್ಲಿ ಸಹಾಯಕ ಪಾತ್ರ, ಪೋಷಕ ಪಾತ್ರದಂತೆ ಮೂಡಿ ಬರುತ್ತಿದೆ. 

         ಇನ್ನೂ ಕಾಫಿಯಾ….. ಗಜಲ್ ನ ಜೀವಾಳ. ಇದು ಅರೆಬಿಕ್ ಪದ ‘ಕಫು’ ದಿಂದ ಬಂದಿದೆ. ‘ಕಫು’ ಎಂದರೆ ಹೋಗಲು ಸಿದ್ಧ ಎಂದಾಗುತ್ತದೆ. ಕಾಫಿಯಾಗಳಿಗೆ ‘ಕವಾಫಿ’ ಎನ್ನುವರು. ಕವಾಫಿ ಇಲ್ಲದ ಗಜಲ್ ಇಲ್ಲ. ಇದು ಗಜಲ್ ನ ಮೂಲಭೂತ ತಾತ್ವಿಕವಾಗಿದೆ. ಮತ್ಲಾದ ಎರಡೂ ಮಿಸರೈನ್ ನಲ್ಲಿ ರದೀಫ್ ಗಿಂತಲೂ ಮುಂಚೆ ಬರುತ್ತದೆ. ನಂತರದಲ್ಲಿ ಪ್ರತಿ ಷೇರ್ ನ ಮಿಸ್ರಾ-ಎ-ಸಾನಿ ಯ ಕೊನೆಯಲ್ಲಿ ಮಾತ್ರ ಬರುತ್ತದೆ. ಇದೊಂದು ಸಾಮಾನ್ಯ ಅಂತ್ಯ ಪದವಾಗಿರದೆ ಬದಲಾವಣೆ ಬಯಸುವ ಒಳಪ್ರಾಸವಾಗಿದೆ. ಇಲ್ಲಿ ಕಾಫಿಯಾ ದ ಕೊನೆಯ ಅಕ್ಷರಕ್ಕೆ ರವಿ ಎನ್ನುತ್ತಾರೆ. ಕಾಫಿಯಾದ ಕೊನೆಯಲ್ಲಿ ಒಂದಕ್ಕಿಂತ ಹೆಚ್ಚು ಅಕ್ಷರಗಳು ಸ್ಥಿರವಾಗಿ ಬಂದರೆ ಅದಕ್ಕೆ ‘ರವೀಶ್’ ಎನ್ನುವರು. ‘ರವಿ/ರವೀಶ್’ ಎಂಬುದು ಕಾಫಿಯಾದ ಜೀವಾಳ. ಆ ರವಿ/ರವೀಶ್ ದ ಪೂರ್ವದ ಅಕ್ಷರಕ್ಕೆ ರೌಫ್ ಎಂತಲೂ, ಅದಕ್ಕಿಂತಲೂ ಮುಂಚಿನ ಅಕ್ಷರಕ್ಕೆ ಕೈದ್ ಎಂತಲು ಕರೆಯುತ್ತಾರೆ. ನಂತರದ ಅಕ್ಷರಕ್ಕೆ ತಶೀಶ್ ಎನ್ನುವರು. ಆ ರೌಫ್ ನಲ್ಲಿಯ ಅಕ್ಷರ ಒಂದೇ ಸ್ವರದೊಂದಿಗೆ ಪುನರ್ ಬಳಕೆಯಾದರೆ ಅದನ್ನು ಏಕ ಅಲಾಮತ್ ಎಂದೂ , ಸ್ವರ ಬದಲಾದರೆ ಅದನ್ನು ಬಹು ಅಲಾಮತ್ ಎಂದು ಕರೆಯಲಾಗುತ್ತದೆ. ಕಾಫಿಯಾದ ಈ ಹರವು ಅದರ ಮಹತ್ವವನ್ನು ಪ್ರತಿನಿಧಿಸುತ್ತದೆ !! ಪ್ರತಿ ಕಾಫಿಯಾದ ಉಚ್ಚಾರಣೆ ಸಮಾನ ಅಕ್ಷರಗಳಿಂದ ಕೂಡಿದ್ದು, ಸ್ವತಂತ್ರ ಅರ್ಥ ಕೊಡುವಂತಿರಬೇಕು. ಕೇವಲ ‘ರವಿ’ ಬಂದರೆ ಅದು ಉತ್ತಮ ಕಾಫಿಯಾ ಆಗಲಾರದು. ಸಾಮಾನ್ಯವಾಗಿ ಕವಾಫಿ ಪುನರಾವರ್ತನೆ ಆಗಬಾರದು. ಒಂದು ವೇಳೆ ಒಂದೇ ಶಬ್ದ ಬೇರೆ ಬೇರೆ ಅರ್ಥದಲ್ಲಿ ಕಾಫಿಯಾದಲ್ಲಿ ಬಳಕೆಯಾದರೆ ಅದಕ್ಕೆ ಬಾಜ್ ಕಾಫಿಯಾ ಎಂದು ಕರೆಯುವರು. ಕಾಫಿಯಾದಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ಕಾಫಿಯಾದ ಕೊನೆಯ ಅಕ್ಷರ/ಅಕ್ಷರಗಳು ಸ್ಥಿರವಾಗಿದ್ದರೆ ಅದಕ್ಕೆ ‘ಹರ್ಫ್ ಮುಸ್ತಕಿಲ್’ ಎಂದೂ, ಕಾಫಿಯಾದ ರವಿ/ರವೀಶ್ ಬಿಟ್ಟು ಅದರ ಹಿಂದಿನ ಅಕ್ಷರ ರೌಫ್ ಬದಲಾದರೆ ಅದಕ್ಕೆ ಹರ್ಫ್ ಮುತ್ ಬದಿಲ್ ಎನ್ನುವರು.

         ಗಜಲಿನ ಮಹತ್ವದ ವಿಷಯ ಮೋಹ, ಅನುರಾಗ. ಒಲುಮೆ ಎನ್ನುವುದು ಲೋಕವನ್ನಾಳುವ ಸತ್ಯ ಎನ್ನುವ ನೆಲೆಯಿಂದಲೇ ಪ್ರೇಮಭಾವ ಮುಖ್ಯವೆನಿಸುತ್ತದೆ. ಸಾಮಾನ್ಯವಾಗಿ ಪ್ರೇಯಸಿಯನ್ನು ಕುರಿತು ಇರುವ ಗಜಲ್‌ಗಳಲ್ಲಿ ಪ್ರೇಯಸಿ ಒಂದು ವ್ಯಕ್ತಿಯಾಗಿ ಕಾಣಿಸದೇ, ಕುರುಹನ್ನಾಗಿ ಬಳಸಲಾಗುತ್ತದೆ. ಲೌಕಿಕ ಪ್ರೇಮದ ಜೊತೆಯೇ ಆಧ್ಯಾತ್ಮಿಕ ಪ್ರೇಮದೆಡೆಗೆ ಕರೆದೊಯ್ಯುವುದು ಗಜಲ್‌ಗಳ ವಿಶೇಷತೆ.

ಗಜಲ್ ಪ್ರಕಾರಗಳು

           ಇಂದು ಗಜಲ್ ವಿಶ್ವಮಾನ್ಯತೆ ಪಡೆದ ಅನುಪಮ ಕಾವ್ಯ ಲಹರಿ. ಮೋಹಬಂಧನದಿಂದ ಮುಕ್ತನಾಗಲು ಮೋಹವನ್ನೆ ಅವಲಂಬಿಸುವ, ಪ್ರೀತಿಯ ಬಂಧನದಿಂದ ಮುಕ್ತನಾಗಲು ಪ್ರೀತಿಯನ್ನೆ ಬಯಸುವ, ಭಾವವನ್ನು ಮೀರಲು ಭಾವವನ್ನೆ ಮೆಟ್ಟಿಲನ್ನಾಗಿಸಿಕೊಳ್ಳುವ ಅನನ್ಯ ಹೃದಯದ ಬಡಿತವೆ ಈ ಗಜಲ್ ನಾದ. ಈ ಗಜಲ್ ನಲ್ಲಿ ಹತ್ತು ಹಲವಾರು ಪ್ರಕಾರಗಳಿವೆ. ಪ್ರಮುಖವಾಗಿ ಗಜಲ್ ನ ಬಾಹ್ಯ ಮತ್ತು ಆಂತರಿಕ ಲಕ್ಷಣಗಳನ್ನು ಅನುಸರಿಸಿ ವಿಂಗಡಿಸಲಾಗಿದೆ. ಬಾಹ್ಯ ಲಕ್ಷಣಗಳು ಅಂದರೆ ಗಜಲ್ ನ ಛಂದಸ್ಸಿನ ಆಧಾರದ ಮೇಲೆ ಹಲವು ಪ್ರಕಾರಗಳಿವೆ. ಅವುಗಳಲ್ಲಿ ಪ್ರಮುಖವೆಂದರೆ..

೦೧. ಮುರದ್ದಫ್ ಗಜಲ್ : ಮುರದ್ಧಫ್ ಅಂದರೆ ರದೀಫ್ ಎಂದರ್ಥ. ಇದು ರದೀಫ್, ಕಾಫಿಯಾ ಒಳಗೊಂಡಿರುತ್ತದೆ. ಇಲ್ಲಿ ಗಜಲ್ ನ ಎಲ್ಲ ನಿಯಮಗಳು ಇರುತ್ತವೆ. ಕನ್ನಡದಲ್ಲಿ ಹೆಚ್ಚು ‌ಪ್ರಚಲಿತವಿರುವ ಗಜಲ್ ಪ್ರಕಾರವಿದು.

೦೨. ಗೈರ್ ಮುರದ್ಧಫ್ ಗಜಲ್ : ಗೈರ್ ಮುರದ್ಧಫ್ ಎಂದರೆ ರದೀಫ್ ಇಲ್ಲದೇ ಕಾಫಿಯಾ ಇರುವ ಗಜಲ್. ಇದಕ್ಕೆ ಕಾಫಿಯಾನ ಗಜಲ್ ಎಂತಲೂ ಕರೆಯಲಾಗುತ್ತದೆ. ಇಲ್ಲಿ ರದೀಫ್ ಇರುವುದಿಲ್ಲ. ಉಳಿದಂತೆ ಗಜಲ್ ನ ಎಲ್ಲ ನಿಯಮಗಳನ್ನು ಇದು ಒಳಗೊಂಡಿರುತ್ತದೆ. ಈ ಗಜಲ್ ಕಾಫಿಯಾದ ಮಹತ್ವವನ್ನು ಅರುಹುತ್ತದೆ.

೦೩. ಜುಲ್ ಕಾಫಿಯ ಗಜಲ್ : ಪ್ರತಿ ಕಾಫಿಯಾ ಜೊತೆಗೆ ಮತ್ತೊಂದು ಕಾಫಿಯಾ ನಿರಂತರವಾಗಿ ಗಜಲ್ ನ ಉದ್ದಕ್ಕೂ ಬಂದರೆ ಅದಕ್ಕೆ ಜುಲ್ ಕಾಫಿಯಾ ಎಂದು ಕರೆಯುವರು.

೦೪. ಹಮ್ ಕಾಫಿಯಾ ಗಜಲ್ : ಗಜಲ್ ರಚನೆಯಲ್ಲಿ ಕಾಫಿಯಾವೆ ಜೀವಾಳ. ಸಾಮಾನ್ಯವಾಗಿ ಗಜಲ್ ಒಂದರಲ್ಲಿ ಒಂದು ಕಾಫಿಯಾ ಬರುತ್ತದೆ. ಆದರೆ ಹಮ್ ಕಾಫಿಯಾದ ವಿಶೇಷವೆಂದರೆ ಇಲ್ಲಿ ಎರಡಕ್ಕಿಂತಲೂ ಹೆಚ್ಚು ಕಾಫಿಯಾಗಳು ಬಳಕೆಯಾಗುತ್ತವೆ. ಇದು ಗಜಲ್ ಕಾರರ ಶಬ್ಧ ಭಂಡಾರವನ್ನು ಅವಲಂಬಿಸಿರುತ್ತದೆ.

೦೫. ಸ್ವರ ಕಾಫಿಯಾ : ಕಾಫಿಯಾಗಳು ವ್ಯಂಜನ ಪ್ರಾಸಗಳಲ್ಲದೆ ಸ್ವರ ಪ್ರಾಸಗಳನ್ನು ಹೊಂದಿರಬಹುದು. ಸ್ವರ ಪ್ರಾಸಗಳೆ ಕಾಫಿಯಾಗಳಾದಾಗ ಅಲ್ಲಿ ವ್ಯಂಜನ ಪ್ರಾಸಗಳಲ್ಲಿರುವಂತೆ ಕೊನೆಯ ಸಾಮಾನ್ಯ ಅಕ್ಷರ ರುವಿ ಇರುವುದಿಲ್ಲ.

೦೬. ಹುಸ್ನ-ಎ-ಮತ್ಲಾ : ಹುಸ್ನ ಎಂದರೆ ಸೌಂದರ್ಯ. ಮತ್ಲಾ ಗಜಲ್ ನ ಸೊಬಗನ್ನು ಹೆಚ್ಚಿಸುತ್ತದೆ. ಆದರೆ ಗಜಲ್ ನ ಆರಂಭದ ಎರಡು ಷೇರ್ ಗಳು ಮತ್ಲಾದಂತೆ ಕಾಫಿಯಾ, ರದೀಫ್ ಗಳಿಂದ ಕಂಗೊಳಿಸುತ್ತಿದ್ದರೆ ಅದಕ್ಕೆ ಹುಸ್ನ-ಎ-ಮತ್ಲಾ ಗಜಲ್ ಎಂತಲೂ, ಮತ್ಲಾ-ಎ-ಸಾನಿ ಗಜಲ್ ಎಂತಲೂ ಕರೆಯುವರು.

೦೭. ಮತ್ಲಾ ಗಜಲ್ : ಇಡೀ ಗಜಲ್ ನ ಎಲ್ಲ ಷೇರ್ ಗಳು ಮತ್ಲಾದಂತೆ ರದೀಫ್, ಕಾಫಿಯಗಳಿಂದ ತುಂಬಿದ್ದರೆ ಅದಕ್ಕೆ ಮತ್ಲಾ ಗಜಲ್/ಸಂಪೂರ್ಣ ಮತ್ಲಾ ಗಜಲ್ ಎನ್ನುವರು. ಈ ಗಜಲ್ ಏಕತಾನತೆಯಿಂದ ಕೂಡಿರುತ್ತದೆ. 

೦೮. ಸೆಹ್ ಗಜಲ್ ; ಸೆಹ್ ಅಂದರೆ ಸೇರಿಸು. ಒಂದು ಗಜಲ್ ಜೊತೆಗೆ ೩/೪ ಗಜಲ್ ಗಳನ್ನು ಸೇರಿಸಿ ಬರೆಯುವುದಕ್ಕೆ ಸೆಹ್ ಗಜಲ್ ಎನ್ನುವರು. ಇಲ್ಲಿ ೫/೭ ಷೇರ್ ಗಳ ನಂತರ ಮತ್ತೊಂದು ಮತ್ಲಾ ಸೇರಿಸುವರು. ಎಷ್ಟು ಮತ್ಲಾಗಳು ಇರುತ್ತವೆಯೊ ಅಷ್ಟೇ ಮಕ್ತಾಗಳು ಇರುತ್ತವೆ. ರದೀಫ್ ಬದಲಾಗುವುದಿಲ್ಲ, ಕಾಫಿಯಾದ ರವಿ ಒಂದೇ ಆಗಿರುತ್ತದೆ.  

೦೯. ಆಜಾದ್ ಗಜಲ್ : ಆಜಾದ್ ಎಂದರೆ ಸ್ವತಂತ್ರ. ಇಲ್ಲಿಯ ಷೇರ್ ಗಳು ಸಮವಾಗಿ ಇರುವುದಿಲ್ಲ. ಈ ಗಜಲ್ ಗಳು ಮೀಟರ್ ಕಡೆಗೆ ಗಮನ ಕೊಡುವುದಿಲ್ಲ. ಇದರ ಹೊರತಾಗಿ ಗಜಲ್ ನ ಎಲ್ಲ ನಿಯಮಗಳು ಇರುತ್ತವೆ. ಇತ್ತೀಚೆಗೆ ಈ ಗಜಲ್ ಬರೆಯುವವರ ಸಂಖ್ಯೆ ಹೆಚ್ಚಾಗುತಿದೆ.

೧೦ : ತರಹಿ ಗಜಲ್ : ತರಹಿ ಎಂದರೆ ಬಿತ್ತುವುದು ಎಂದರ್ಥ. ಬೇರೆಯವರ ಜಮೀನಿನಲ್ಲಿ ಬೆಳೆಯುವುದು. ಪ್ರಸಿದ್ಧ ಗಜಲ್ ಕಾರರ ಮತ್ಲಾದಲ್ಲಿಯ ಒಂದು ಷೇರ್ ಅಥವಾ ಗಜಲ್ ನ ಯಾವುದಾದರೂ ಒಂದು ಸಾನಿ ಮಿಸ್ರಾವನ್ನು ಆಯ್ಕೆ ಮಾಡಿಕೊಂಡು ಆ ಮೂಲ ಗಜಲ್ ನ ಮೀಟರ್, ಭಾವಕ್ಕೆ ಪೂರಕವಾಗುವಂತೆ ಗಜಲ್ ಮುಂದುವರಿಸಿಕೊಂಡು ಹೋಗುವುದಕ್ಕೆ ತರಹಿ ಗಜಲ್ ಎನ್ನುವರು. ಇಲ್ಲಿ ಮೂಲ ಗಜಲ್ ನ ಕಾಫಿಯಾ, ರದೀಫ್ ಮುಂದುವರಿಯುತ್ತದೆ. ಬಳಸಿಕೊಂಡ ಷೇರ್ ತರಹಿ ಗಜಲ್ ನಲ್ಲಿ ಸಾನಿ ಮಿಸ್ರಾವಾಗಿಯೇ ಬರುವುದು ಹೆಚ್ಚು.

           ಗಜಲ್ ಒಳಗೊಂಡಿರುವ ವಿಷಯವಸ್ತುವನ್ನು ಆಧರಿಸಿ ಹಲವು ಪ್ರಕಾರಗಳು ಪ್ರಚಲಿತದಲ್ಲಿವೆ. ಅವುಗಳಲ್ಲಿ ಪ್ರಮುಖವೆಂದರೆ…

೦೧. ಮುಸಲ್ ಸಲ್ ಗಜಲ್ : ಒಂದೇ ವಿಷಯದ ಕುರಿತು ರಚಿಸಿದ ಗಜಲ್ ಗಳಿಗೆ ಮುಸಲ್ ಸಲ್ ಗಜಲ್ ಎನ್ನುವರು. ಕನ್ನಡದಲ್ಲಿ ಮೂಡಿಬಂದಿರುವ ಹೆಚ್ಚಿನ ಗಜಲ್ ಗಳು ಈ ಮಾದರಿಯಲ್ಲಿಯೆ ಇವೆ.

೦೨. ಗೈರ್ ಮುಸಲ್ ಸಲ್ ಗಜಲ್ : ಈ ಗಜಲ್ ನಲ್ಲಿ ಪ್ರತಿ ಷೇರ್ ಗಳು ಬೇರೆ ಬೇರೆ ವಿಷಯಗಳನ್ನು ಒಳಗೊಂಡಿರುತ್ತವೆ. ಭಿನ್ನ ಭಿನ್ನ ಹೂಗಳಿಂದ ಸಿದ್ಧಪಡಿಸಿದ ಒಂದು ಸುಂದರವಾದ ಹೂವಿನ ಮಾಲೆಯಂತೆ ಇದು ಕಂಗೊಳಿಸುತ್ತದೆ. 

೦೩. ಸಿಯಾಸತ್ ಗಜಲ್ : ರಾಜಕೀಯ ವಿಚಾರಧಾರೆಗಳನ್ನು ಒಳಗೊಂಡ ಗಜಲ್ ಗಳಿಗೆ ಸಿಯಾಸತ್ ಗಜಲ್ ಎನ್ನುವರು.

೦೪. ಝೆನ್ ಗಜಲ್ : ಬೌದ್ಧ ಸಿದ್ಧಾಂತ ತತ್ವಗಳನ್ನು ಆಧರಿಸಿ ರಚನೆಯಾದ ಗಜಲ್ ಗಳಿಗೆ ಝೆನ್ ಗಜಲ್ ಎಂದು ಕರೆಯುವರು.

         ಈ ಮೇಲಿನ ಪ್ರಕಾರಗಳಷ್ಟೇ ಅಲ್ಲದೆ ಇನ್ನೂ ಹತ್ತು ಹಲವಾರು ಪ್ರಕರಣಗಳು ಇವೆ. ಗಜಲ್ ನ ಉಸ್ತಾದ್ ರು ಹೆಚ್ಚು ಹೆಚ್ಚು ಪ್ರಯೋಗಶೀಲರಾದಂತೆ ಹೆಚ್ಚು ಹೆಚ್ಚು ಪ್ರಕಾರಗಳು ಬೆಳಕಿಗೆ ಬರುತ್ತವೆ. ಏಕೆಂದರೆ ಕಾವ್ಯದ ಮೂಲದ್ರವ್ಯವೇ ಮಾನವನ ಅಂತಃಕರಣವಾಗಿದೆ. ತನ್ನನ್ನು ತಾನು ತೆರೆದುಕೊಳ್ಳುವುದೆ ಕಾವ್ಯ ಕಲೆಯಾಗಿದೆ. ಅಂತೆಯೇ ಗಜಲ್ ಅನ್ನು ಕಾವ್ಯಗಳ ರಾಣಿ ಎಂದು ಕರೆಯಲಾಗುತ್ತಿದೆ. ಮೀರ್ ತಕೀ ಮೀರ್ ಅವರ ಒಂದು ಷೇರ್ ಇಲ್ಲಿ ದಾಖಲಿಸುವುದು ಔಚಿತ್ಯ ಎನಿಸುತ್ತದೆ.

” ನಾಜೂಕಿ ಉಸಕೆ ಲಬ್ ಕಿ ಕ್ಯಾ ಕಹಿಯೇ

ಪಂಕುಡಿ ಏಕ್ ಗುಲಾಬ್ ಕೀ ಸಿ ಹೈ”

*******************************************************

ಆಕರ ಗ್ರಂಥಗಳು

೦೧. ಗಜಲ್ ಮತ್ತು ಬಿಡಿ ದ್ವಿಪದಿ – ಶಾಂತರಸ

೦೨. ಮುಳ್ಳಿನ ಬಾಯಿಯಲ್ಲಿ ಹೂ ನಾಲಿಗೆ – ಜಂಬಣ್ಣ ಅಮರಚಿಂತ

೦೩. ಗಜಲ್ ಬಂಧ – ಪ್ರೇಮಾ ಹೂಗಾರ

೦೪. ಸಾಚಿ ಗಜಲ್ – ಸಹದೇವ ಯರಗೊಪ್ಪ

೦೫. ಕನ್ನಡ ಗಜಲ್ – ಸಂ- ಚಿದಾನಂದ ಸಾಲಿ

೦೬. ಗಾಲಿಬ್ ನಿನಗೊಂದು ಸಲಾಂ – ಸಂ- ಯು. ಸಿರಾಜ್ ಅಹಮದ್, ಸಾವನ್ ಕೆ. ಸಿಂಧನೂರು, ಚಂದ್ರಶೇಖರ ಪೂಜಾರ, ನೂರ್ ಅಹ್ಮದ್ ನಾಗನೂರ, ಶಿವಕುಮಾರ ಕರನಂದಿ

೦೭. ಭಾವಗಂಧಿ – ಪ್ರಭಾವತಿ ದೇಸಾಯಿ

೦೮. ನನ್ನ ದನಿಗೆ ನಿನ್ನ ದನಿಯು – ಗಿರೀಶ್ ಜಕಾಪುರೆ, ಶ್ರೀದೇವಿ ಕೆರೆಮನೆ

೧೦. ಗಜಲ್ ಕೀ ಬಾಬತ್ -ವೀನಸ್ ಕೇಸರಿ

೧೧. ಗಜಲ್ ಪ್ರಾಥಮಿಕ ಶಿಕ್ಷಾ – ಗಿರಿದರಿ ಸಿಂಗ್ ಗೆಹ್ಲೋಟ್

೧೨. ಉರ್ದು ಮತ್ತು ಫಾರಸಿ ಸಾಹಿತ್ಯ – ರಾಘವೇಂದ್ರ ರಾವ್

೧೩. ಉರ್ದು-ಹಿಂದಿ ಶಬ್ದಕೋಶ -ಮಹಮ್ಮದ್ ಮುಸ್ತಫಾ ಖಾನ್

೧೪. ಅಂತರ್ಜಾಲದ ಮಾಹಿತಿ

************************************************************************

Leave a Reply

Back To Top