ವಿಶೇಷ ಲೇಖನ
ಲಂಕೇಶರ ಹುಳಿ ಮಾವಿನಮರ”
ಆಶಾ ಸಿದ್ದಲಿಂಗಯ್ಯ
ಹುಳಿಮಾವಿನ ಮರ’ ಕನ್ನಡದ ಶ್ರೇಷ್ಟ ಲೇಖಕ ಹಾಗೂ ಪತ್ರಕರ್ತ ಪಿ.ಲಂಕೇಶ್ ಅವರ ಆತ್ಮಕಥನ. ಲಂಕೇಶ್ ಲೇಖಕರಾಗಿ ಮತ್ತು ಪತ್ರಕರ್ತರಾಗಿ ಕನ್ನಡಿಗರಿಗೆ ಚಿರಪರಿಚಿತರು. ಶಿವಮೊಗ್ಗ ಜಿಲ್ಲೆಯ ಸಣ್ಣ ಹಳ್ಳಿಯೊಂದರ ರೈತಕುಟುಂಬದಲ್ಲಿ ಜನಿಸಿ ತನ್ನೊಳಗಿನ ಪ್ರತಿಭೆ ಮತ್ತು ಪ್ರಯತ್ನದಿಂದ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಬಹುದೊಡ್ಡ ಹೆಸರು ಮಾಡಿದ ಪ್ರತಿಭೆ ಈ ಲಂಕೇಶ್.
ಲಂಕೇಶರ ಆಸಕ್ತಿಯ ಕ್ಷೇತ್ರದ ಹರವು ಬಹುದೊಡ್ಡದು. ಬರವಣಿಗೆ, ಪತ್ರಿಕೋದ್ಯಮ, ನಾಟಕ, ಅಧ್ಯಾಪನ, ಕೃಷಿ, ಚಳವಳಿ,ಫೋಟೋಗ್ರಾಫಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅಲೆದಾಡಿ ಕೊನೆಗೆ ತನ್ನ ಛಾಪನ್ನು ಮೂಡಿಸಿದ್ದು ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ. ಹತ್ತೊಂಬತ್ತು ವರ್ಷಗಳ ಕಾಲ ಅಧ್ಯಾಪಕರಾಗಿ ದುಡಿದು ವೃತ್ತಿಯ ಏಕತಾನತೆ ಬೇಸರ ಮೂಡಿಸಿದಾಗ ಮುಲಾಜಿಲ್ಲದೆ ರಾಜಿನಾಮೆಯಿತ್ತು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ವ್ಯಕ್ತಿತ್ವ ಪಿ.ಲಂಕೇಶ್ ಅವರದು. 1978 ರಿಂದ 1980ರ ವರೆಗೆ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿಯೂ ಕನ್ನಡ ಚಿತ್ರೋದ್ಯಮದ ಪಟ್ಟುಗಳು ಅರ್ಥವಾಗದೇ ಹೋದಾಗ ಲಂಕೇಶರ ಆಸಕ್ತಿ ಪತ್ರಿಕೋದ್ಯಮದತ್ತ ಹೊರಳುತ್ತದೆ.
1980 ರಲ್ಲಿ ‘ಲಂಕೇಶ್ ಪತ್ರಿಕೆ’ಯನ್ನು ಆರಂಭಿಸುವುದರೊಂದಿಗೆ ಲಂಕೇಶ್ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯದ ಬಹುದೊಡ್ಡ ಪಲ್ಲಟಕ್ಕೆ ಕಾರಣರಾಗುತ್ತಾರೆ. ಪತ್ರಿಕೋದ್ಯಮ ಎನ್ನುವುದು ರಾಜಕಾರಣಿಗಳ ಮತ್ತು ಧನಿಕರ ಸೊತ್ತು ಎಂದು ಅದುವರೆಗೂ ತಿಳಿದುಕೊಂಡಿದ್ದ ಜನಸಾಮಾನ್ಯರಿಗೆ ಲಂಕೇಶ್ ತಮ್ಮ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಜನರ ಧ್ವನಿ ಎಂದು ಅರ್ಥಮಾಡಿಸುತ್ತಾರೆ. ಲಂಕೇಶ್ ಸಾಹಿತ್ಯ ಮತ್ತು ಸಿನಿಮಾಕ್ಕಿಂತ ಪತ್ರಿಕೆಯ ಮೂಲಕವೇ ಜನರಿಗೆ ಹೆಚ್ಚು ಹತ್ತಿರವಾದರು.
ಬದುಕಿನ ಕೊನೆಯ ದಿನದವರೆಗೂ ಪತ್ರಿಕೋದ್ಯಮಕ್ಕೆ ನಿಷ್ಟರಾಗುಳಿದ ಲಂಕೇಶ್ ತಮ್ಮ ಪತ್ರಿಕೆಯನ್ನು ಕನ್ನಡದ ಜಾಣ-ಜಾಣೆಯರ ಪತ್ರಿಕೆಯಾಗಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾದರು. ಪತ್ರಿಕಾ ಬರವಣಿಗೆಯಾಚೆಯೂ ಲಂಕೇಶ್ ಕಥೆ, ನಾಟಕ, ಕಾದಂಬರಿ, ಕವಿತೆ, ಗದ್ಯ, ಅನುವಾದದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಕನ್ನಡದ ಅನನ್ಯ ಬರಹಗಾರ.
ಓದಿದ್ದು ಇಂಗ್ಲಿಷ್ ಸಾಹಿತ್ಯ, ಹತ್ತೊಂಬತ್ತು ವರ್ಷಗಳ ಕಾಲ ಪಾಠ ಮಾಡಿದ್ದು ಕೂಡ ಇಂಗ್ಲಿಷ್ ಸಾಹಿತ್ಯವನ್ನೇ ಆದರೆ ಬರೆದದ್ದು ಮಾತ್ರ ಕನ್ನಡದಲ್ಲಿ. ಲಂಕೇಶ್ ಅವರಂತೆ ಅನಂತಮೂರ್ತಿ, ಭೈರಪ್ಪ, ತೇಜಸ್ವಿ, ಚಂಪಾ, ಚಿತ್ತಾಲ ಇವರುಗಳೆಲ್ಲ ತಮ್ಮ ಅಧ್ಯಯನದ ವಿಷಯದಾಚೆಯೂ ಕನ್ನಡದಲ್ಲಿ ಶ್ರೇಷ್ಟ ಕೃತಿಗಳನ್ನು ಬರೆದು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಲಂಕೇಶರ ಸಮಕಾಲೀನ ಬರಹಗಾರರು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡು ಬಂದ ಈ ಪ್ರವೃತ್ತಿ ಕನ್ನಡದ ಬರಹಗಾರರ ವಿಶಿಷ್ಟ ಗುಣದ ದ್ಯೋತಕವಾಗಿದೆ ಮತ್ತು ಅವರಲ್ಲಿನ ಈ ಗುಣ ಕನ್ನಡ ಸಾಹಿತ್ಯವನ್ನು ಸಾಕಷ್ಟು ಸಮೃದ್ಧಗೊಳಿಸಿತು.
ವಾಟೆ, ಸಸಿ, ಗಿಡ ಮತ್ತು ಮರ
ಪಿ. ಲಂಕೇಶ್ ಅವರ ಸಮಗ್ರ ಬದುಕಿನ ಕಥನ ಪುಸ್ತಕದಲ್ಲಿ ವಾಟೆ, ಸಸಿ, ಗಿಡ ಮತ್ತು ಮರ ಎನ್ನುವ ಅಧ್ಯಾಯಗಳಲ್ಲಿ ಹರಡಿಕೊಂಡಿದೆ. ಶಿವಮೊಗ್ಗೆಗೆ ಒಂಬತ್ತು ಮೈಲಿ ದೂರದ ಕೊನಗವಳ್ಳಿ ಎಂಬ ಸಣ್ಣ ಊರಿನ ರೈತ ಕುಟುಂಬದಲ್ಲಿ ಅಪ್ಪ ಅಮ್ಮನಿಗೆ ಐದನೆ ಮಗುವಾಗಿ ಜನಿಸುವುದರೊಂದಿಗೆ ಲಂಕೇಶರ ಬದುಕಿನ ಪುಟಗಳು ತೆರೆದುಕೊಳ್ಳುತ್ತವೆ.
ಲಂಕೇಶ್ ಮೇಲೆ ಅಪ್ಪನಿಗಿಂತ ಹೆಚ್ಚು ಪ್ರಭಾವ ಬೀರಿದ್ದು ಜಗಳಗಂಟಿ ಹೆಂಗಸೆಂದೇ ಖ್ಯಾತಳಾದ ಅವ್ವ. ಗಂಡಸಿಗೆ ಸಮನಾಗಿ ಹೊಲದಲ್ಲಿ ದುಡಿಯುತ್ತ ಸಂಸಾರದ ಎಲ್ಲ ಹೊಣೆಯನ್ನು ಹೊತ್ತುಕೊಂಡ ಅವ್ವನ ಪಾತ್ರ ಅಚ್ಚಳಿಯದೆ ನೆನಪಿನಲ್ಲುಳಿದು ಮುಂದೆ ‘ಅವ್ವ’ ಕವಿತೆಗೂ ಮತ್ತು ‘ಅಕ್ಕ’ ಕಾದಂಬರಿಗೂ ಪ್ರೇರಣೆಯಾಯಿತು. ತಮ್ಮ ಆತ್ಮಕಥನದ ಪ್ರಾರಂಭದ ಪುಟಗಳಲ್ಲಿ ಲಂಕೇಶ್ ಮಲೆನಾಡಿನ ಬದುಕಿನ ಚಿತ್ರಣವನ್ನು ಅತ್ಯಂತ ಸೊಗಸಾಗಿ ಕಟ್ಟಿಕೊಡುತ್ತಾರೆ. ಅಲ್ಲಿನ ಬೇಸಾಯ, ಜಾತ್ರೆ, ಸಾಮಾಜಿಕ ಬದುಕು, ಟೆಂಟ್‍ನಲ್ಲಿ ನೋಡಿದ ಸಿನಿಮಾ ಅನುಭವ,ಶಾಲೆಯ ವಾತಾವರಣ ಹೀಗೆ ತಾವು ಬಾಲ್ಯದಲ್ಲಿ ಕಂಡು ಅನುಭವಿಸಿದ್ದನ್ನು ಲಂಕೇಶ್ ಇಲ್ಲಿ ಅಕ್ಷರಗಳಲ್ಲಿ ಕಟ್ಟಿಕೊಟ್ಟಿರುವರು.
ಶಿವಮೊಗ್ಗೆಯಲ್ಲಿ ಓದುತ್ತಿರುವಾಗಲೆ ಸಾಹಿತಿಗಳ ಸಂಪರ್ಕಕ್ಕೆ ಬಂದು ಲಂಕೇಶರ ಬದುಕು ಮಹತ್ವದ ತಿರುವು ಪಡೆದುಕೊಳ್ಳುತ್ತದೆ. ಅನಕೃ, ಶಿವರಾಮ ಕಾರಂತ, ಕೋ.ಚೆನ್ನಬಸ್ಸಪ್ಪ, ಜಿ.ಎಸ್.ಶಿವರುದ್ರಪ್ಪ, ನಿರಂಜನ, ದ.ರಾ.ಬೇಂದ್ರೆ ಇವರುಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಸಾಹಿತ್ಯ ಸಂಘದ ಕಾರ್ಯದರ್ಶಿಯಾಗಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೇರವಾಗಿ ನೋಡುವ ಅವಕಾಶ ಒದಗಿಬರುತ್ತದೆ.
ಡಾಕ್ಟರಾಗಬೇಕೆಂದು ಬಯಸಿದ್ದ ಲಂಕೇಶ್ ಮೆಡಿಕಲ್ ಸೀಟು ಸಿಗದೆ ನಿರಾಶರಾದಾಗ ಶಿವರುದ್ರಪ್ಪನವರ ಸಲಹೆ ಮೇರೆಗೆ ಇಂಗ್ಲಿಷ್ ಆನರ್ಸ್‍ಗೆ ಸೇರಿಕೊಳ್ಳುತ್ತಾರೆ. ‘ಕನ್ನಡದಲ್ಲಿ ವಿಮರ್ಶಕರು ಕಮ್ಮಿ. ಇಂಗ್ಲಿಷ್ ಆನರ್ಸ್‍ಗೆ ಸೇರಿದರೆ ಸಾಹಿತ್ಯದ ಜೊತೆಗೆ ವಿಮರ್ಶೆಯ ಮರ್ಮ ತಿಳಿಯುತ್ತದೆ’ ಎಂದ ಜಿಎಸ್ಸೆಸ್ ಅವರ ಮಾತುಗಳೇ ಪ್ರೇರಣೆಯಾಗಿ ಲಂಕೇಶ್ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಆನರ್ಸನ್ನು ಆಯ್ದುಕೊಳ್ಳುತ್ತಾರೆ.
ಇಂಗ್ಲಿಷ್ ಸಾಹಿತ್ಯದಿಂದ ಎಲಿಯಟ್ಸ್,ಕಿಟ್ಸ್,ಬೋದಿಲೇರ್,ಲೋರ್ಕಾ,ನೆರೂಡ್,ಫಾಸ್ಟರ್ ನಾಕ್, ಹೆಮಿಂಗ್ವೆ ಇವರುಗಳನ್ನೆಲ್ಲ ಕನ್ನಡದ ಓದುಗರಿಗೆ ಪರಿಚಯಿಸುತ್ತಾರೆ.ಈ ವಿಷಯದಲ್ಲಿ ಕನ್ನಡದ ಓದುಗರು ಜಿಎಸ್ಸೆಸ್ ಅವರಿಗೆ ನಿಜಕ್ಕೂ ಋಣಿಗಳಾಗಿರಬೇಕು.ವೈದ್ಯರಾಗಿ ಎಲ್ಲೋ ಕಳೆದು ಹೋಗುತ್ತಿದ್ದ ಲಂಕೇಶ್ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ಪಾಶ್ಚಿಮಾತ್ಯ ಸಾಹಿತ್ಯದ ಓದಿನ ಅನುಭವದಿಂದ ಕನ್ನಡಕ್ಕೆ ಅತ್ಯುತ್ತಮ ಕೃತಿಗಳನ್ನು ಕೊಡುಗೆಯಾಗಿ ನೀಡಿದರು.
ಇಂಗ್ಲಿಷ್ ಸಾಹಿತ್ಯದ ಉಪನ್ಯಾಸಕರಾಗಿ ಲಂಕೇಶ್ ಅವರದು ಅಧ್ಯಾಪನ ಕ್ಷೇತ್ರದಲ್ಲಿ 19 ವರ್ಷಗಳ ಕೃಷಿ. ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜು,ಬೆಂಗಳೂರಿನ ಸೆಂಟ್ರಲ್ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಾರೆ. ಅಧ್ಯಾಪಕ ವೃತ್ತಿಯಲ್ಲಿ ತಾನು ಯಶಸ್ಸು ಸಾಧಿಸಲಿಲ್ಲ ಎನ್ನುವ ಅವರೊಳಗಿನ ಪ್ರಾಮಾಣಿಕ ತೊಳಲಾಟ ವೃತ್ತಿ ಬದುಕಿನುದ್ದಕ್ಕೂ ಲಂಕೇಶರನ್ನು ಕಾಡುತ್ತದೆ. ಕ್ಲಾಸಿಗೆ ಹೋಗಿ ಪಾಠ ಮಾಡುವುದೇ ಕಷ್ಟವೆನಿಸುತ್ತಿತ್ತು, ಪಾಠ ಮಾಡುವುದಕ್ಕೆ ವಿಚಿತ್ರ ರೀತಿಯಲ್ಲಿ ಕಂಪಿಸುತ್ತಿದ್ದೆ, ನಾನು ಒಳ್ಳೆಯ ಅಧ್ಯಾಪಕನಾಗಬೇಕೆಂದು ಭ್ರಮೆ ಪಡೆದಷ್ಟೂ ಅನೇಕ ವಿದ್ಯಾರ್ಥಿಗಳು ನನ್ನನ್ನು ಇಷ್ಟಪಡದಿರುವುದು ನನಗೆ ಗೊತ್ತಿತ್ತು.ಈ ವಾಕ್ಯಗಳು ಲಂಕೇಶರ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಪುರಾವೆ ಒದಗಿಸುತ್ತವೆ.
ಒಂದೆಡೆ ಸಹ್ಯಾದ್ರಿ ಮತ್ತು ಸೆಂಟ್ರಲ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂಘರ್ಷ ಇನ್ನೊಂದೆಡೆ ಅಧ್ಯಾಪಕ ವೃತ್ತಿ ಇಕ್ಕಟ್ಟಾದ ಓಣಿಯಂತೆ ವ್ಯಕ್ತಿತ್ವವನ್ನೇ ನಾಶಪಡಿಸಬಲ್ಲ ಮಾತಿನ ಕಸುಬಿನಂತೆ ಕಾಣಿಸುತ್ತದೆ ಎನ್ನುವ ಪ್ರಕ್ಷುಬ್ಧತೆ. ಒಟ್ಟಿನಲ್ಲಿ ದಿಗಿಲು, ಕಿಳರಿಮೆ, ಒತ್ತಡ, ಭ್ರಮೆ, ಹತಾಶೆ, ಹುಂಬುತನದಲ್ಲೇ ಅಧ್ಯಾಪನ ವೃತ್ತಿಯ ದಿನಗಳು ಕಳೆದುಹೋಗುತ್ತವೆ. ಲಂಕೇಶ್ ನಾಡಿನ ಅಸಂಖ್ಯಾತ ಕನ್ನಡಿಗರಿಗೆ ‘ಮೇಷ್ಟ್ರು’ ಎಂದೇ ಪರಿಚಿತರಾದರೂ ತಮ್ಮ ಉಪನ್ಯಾಸಕ ವೃತ್ತಿಯಲ್ಲಿ ಅವರು ಯಶಸ್ಸು ಮತ್ತು ಜನಪ್ರಿಯತೆ ಕಾಣದಿರುವುದು ಮಾತ್ರ ವಿಪರ್ಯಾಸದ ಸಂಗತಿ.
ಲಂಕೇಶ್ ತಮ್ಮ ಸಹ ಅಧ್ಯಾಪಕರುಗಳ ಕನಸು, ಭ್ರಮೆ, ಕಾಮ, ಆಕರ್ಷಣೆಯನ್ನು ತೆರೆದಿಡುವುದು ಪುಸ್ತಕದೊಳಗಿನ ಕೌತುಕದ ಸಂಗತಿಗಳಲ್ಲೊಂದು.ಅಧ್ಯಾಪಕರು ಹುಡುಗರಿಗಿಂತಲೂ ಹೆಚ್ಚಾಗಿ ತಮ್ಮ ವಿದ್ಯಾರ್ಥಿನಿಯರ ಕನಸು ಕಾಣುತ್ತಾರೆ ಎಂದು ಹೇಳುವ ಲಂಕೇಶ್ ಅದಕ್ಕೆ ಉದಾಹರಣೆಗಳನ್ನೂ ಕೊಡುತ್ತಾರೆ. ಜೊತೆಗೆ ಅಧ್ಯಾಪಕನಾಗಿ ತಾನು ಸಹ ಅಂಥದ್ದೊಂದು ಭ್ರಮೆ, ಕಾಮ ಮತ್ತು ಆಕರ್ಷಣೆಗೆ ಒಳಗಾಗಿದ್ದನ್ನು ಹೇಳಲು ಅವರು ಹಿಂಜರಿಯುವುದಿಲ್ಲ.ಲೇಖಕನ ಇಂಥದ್ದೊಂದು ಪ್ರಾಮಾಣಿಕ ಗುಣದಿಂದಲೇ ಪುಸ್ತಕದ ಓದು ನಮಗೆ ಹೆಚ್ಚು ಆಪ್ತವಾಗುತ್ತದೆ. ಬೇರೆಯವರ ಗುಣಾವಗುಣಗಳನ್ನು ಪಟ್ಟಿ ಮಾಡುವಷ್ಟೇ ನಮ್ಮೊಳಗಿನ ಗುಣಾವಗುಣಗಳನ್ನು ತೆರೆದಿಡುವ ಎದೆಗಾರಿಕೆ ಲೇಖಕನಿಗಿರಬೇಕು ಎನ್ನುವುದನ್ನು ಲಂಕೇಶ್ ತಮ್ಮ ಆತ್ಮಕಥೆಯ ಬರವಣಿಗೆಯಲ್ಲಿ ತೋರಿಸಿಕೊಟ್ಟಿರುವರು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿದ್ದ ಘಳಿಗೆ ಲಂಕೇಶ್,ಕುಮಾರಿ ಎನ್ನುವ ವಿದ್ಯಾರ್ಥಿನಿಯನ್ನು ಬಹುವಾಗಿ ಹಚ್ಚಿಕೊಳ್ಳುತ್ತಾರೆ. ತಮ್ಮ ಪತ್ನಿಯಲ್ಲಿನ ವೈಚಾರಿಕತೆಯ ಕೊರತೆಯನ್ನು ಈ ಕುಮಾರಿಯಲ್ಲಿ ತುಂಬಿಕೊಳ್ಳುತ್ತಿರುವ ಭ್ರಮೆ ಅವರದು. ಕುಮಾರಿಯನ್ನು ಉತ್ಕಟವಾಗಿ ಪ್ರೀತಿಸಲು ಪ್ರಾರಂಭಿಸಿದ ಹೊತ್ತು ಆಕೆಗೊಬ್ಬ ಗೆಳೆಯನಿರುವ ವಿಷಯ ತಿಳಿದು ಒಂದು ರೀತಿಯ ಸೋಲು, ಏನೂ ಮಾಡಲಾಗದಂಥ ಅಸಹಾಯಕತೆ ಅವರನ್ನು ಕಾಡುತ್ತದೆ. ಕೊನೆಗೆ ಅದು ಪ್ರೇಮವೂ ಅಲ್ಲ ಹಾಗೂ ವ್ಯಭಿಚಾರವೂ ಆಗಿರದೆ ಅದೊಂದು ಬಗೆಯ ಆತ್ಮಘಾತಕ ದುಗುಡದಂತೆ ಇತ್ತು ಎಂದು ವಿವರಿಸುತ್ತಾರೆ.
ಈ ನಡುವೆ ಸಿನಿಮಾ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಲಂಕೇಶ್ ಅವರಿಗೆ ಒಂದು ಹಂತದಲ್ಲಿ ಉಪನ್ಯಾಸಕ ವೃತ್ತಿಗೆ ತಮ್ಮಿಂದ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ನೋವು ಕಾಡಲಾರಂಭಿಸುತ್ತದೆ. ಕೊನೆಗೆ 1978 ರಲ್ಲಿ ತಾವು ಹತ್ತೊಂಬತ್ತು ವರ್ಷಗಳ ಕಾಲ ನಿರ್ವಹಿಸಿಕೊಂಡು ಬಂದ ವೃತ್ತಿಗೆ ರಾಜಿನಾಮೆ ನೀಡುವುದರೊಂದಿಗೆ ತಮ್ಮನ್ನು ಕಾಡುತ್ತಿದ್ದ ನೋವಿನಿಂದ ಹೊರಬರುತ್ತಾರೆ.
******************************************