ಧರ್ಮದ ಲಿಬಾಸು ತೊಟ್ಟ ನಾಲಿಗೆ

ಕವಿತೆ

ಧರ್ಮದ ಲಿಬಾಸು ತೊಟ್ಟ ನಾಲಿಗೆ

ನೂರುಲ್ಲಾ ತ್ಯಾಮಗೊಂಡ್ಲು

ಧರ್ಮದ ಲಿಬಾಸು ತೊಟ್ಟ ನಾಲಿಗೆ
ಸಿಂಹಾಸನವೇರಿದೆ
ಅದರ ಅಮಲಿಗೆ ಶರಣಾದ ಜನಗಣ
ಕುರ್ಚಿ ಮುರಿವ ಸದ್ದು ಕೇಳಿಸಿಕೊಳ್ಳಲು ಆಗಿಲ್ಲ ಇನ್ನು
ನಾಲಿಗೆಗೆ ಈಗ ಚಾಪಲ್ಯದ ನೂರು ಕಣ್ಣುಗಳು
ಜನರು ನಾಲಿಗೆ ತುದಿಯಲಿ ಜಿನುಗುವ
ಜೊಲ್ಲಿಗಾಗಿ ಬಾಯಿ ತೆರೆದು ಹಪಾಹಪಿಸುತಿದ್ದಾರೆ

ನೂರು ಕಣ್ಣ ನೂರು ನಾಲಿಗೆ
ತಾನು ತನ್ನದೆಂದು ದಾಹ ಸ್ಖಲನದಲಿ ಬೆತ್ತಲಾಗಿದೆ
ಮತಗಳೆಂಬ ಮೂಗುದಾರ ಕಟ್ಟಿಕೊಂಡ ಸಿಂಹಾಸನ
ಧರ್ಮ ಶಾಸನ ಬರೆಯುವ ಜಿದ್ದಿನಲಿ
ಪ್ರೀತಿ ಕಾರುಣ್ಯವನ್ನು ಗೋರಿಯಾಗಿಸಿದೆ

ಜೀವ ಚೈತನ್ಯದ ಉಸಿರು
ದೊಗರೆದ್ದ ನೆಲದಲಿ ಬಿಕ್ಕಳಿಸುತಿದೆ
ಸುಟ್ಟ ಪಾದಗಳ ಊರುಗೋಲಿನ ಮುದುಕ
ನೆಮ್ಮದಿಯ ಕನಸು ಕೈಯಲ್ಲಿ ಹಿಡಿದು ಸೊರಗುತಿದ್ದಾನೆ
ಹಿಡಿ ಅಕ್ಕಿ ಕಾಳೂ
ಕನಸಿನ ಬೆಂಕಿಯಲಿ ಸುಟ್ಟುಹೋಗುತ್ತಿದೆ
ಸಿಲಿಂಡರಿನ ದುಬಾರಿ ಬೆಲೆ
ತೇವ ಕಾಯ್ದ ಪಾತ್ರೆ
ಮುಗಿಲಿಗೇರಿದ ದಿನಸಿ ಮುಗ್ಗಟ್ಟು
ಜೋಪಡಿಯಲಿ ಜಂತೆಯಲಿ ನೇತು ಬಿದ್ದು ಬೊಬ್ಬೆ ಹಾಕುತ್ತಿದೆ
ಮತ್ತೂ ಮತ್ತೂ
ಅಂತಃಪುರದ ಅತ್ಯಾಚಾರ
ಅಂತರ್ಜಾಲದಲಿ ಪಡ್ಡೆ ಹುಡುಗರು ಪುಕ್ಕಟೆ ರಂಜನೆ
ಬಿಕರಿಯಾದ ಭ್ರಷ್ಟ ಬಾಯಿಗಳಿಂದ
ನಾಲಿಗೆ ಭೋಗಿಸುವ ವೈಭವದ ಬಣ್ಣನೆ
ಎಷ್ಟಾದರೇನು ಸಿಂಹಾಸನವೇರಿರುವುದು
ಧರ್ಮದ ಅಮಲಿನ ನಾಲಿಗೆಯಲ್ಲವೇ ?

*****************************

One thought on “ಧರ್ಮದ ಲಿಬಾಸು ತೊಟ್ಟ ನಾಲಿಗೆ

  1. ಇದು ಕವಿತೆಯೇ?
    ವಾಚ್ಯವಾದ ಬೈಗಳಿನ ಸಾಲುಗಳು ಕವಿತೆ ಅನಿಸುವುದು ಹೇಗೆ?.
    ಸಂಗಾತಿ ಪತ್ರಿಕೆ ಇಷ್ಟೂ ಕೀಳು ಮಟ್ಟಕ್ಕೆ ಇಳಿಯಿತೇ?

Leave a Reply

Back To Top