ಇವಳಿಗೇಕೆ ಬೇರೆ ಹೆಸರು

ವಿಶೇಷ ಲೇಖನ

ಇವಳಿಗೇಕೆ ಬೇರೆ ಹೆಸರು

ಅಕ್ಷತಾರಾಜ್ ಪೆರ್ಲ

694506 Title Portrait Of A Woman Artistic Drawing - Painting Of Girl With  White Background - 2560x1600 - Download HD Wallpaper - WallpaperTip

ಬಸ್ ಪ್ರಯಾಣ ನನಗೆ ಎಲ್ಲಕ್ಕಿಂತಲೂ ಹಿತವಾದದ್ದು ಎಂದುಕೊಳ್ಳುತ್ತೇನೆ ಅದಕ್ಕೆ ಕಾರಣ ಈ ಬಸ್ಸೆನ್ನುವ ಡಬ್ಬಿ ಹಲವು ಭಾವಗಳನ್ನು ತನ್ನೊಳಗೆ ಹೊತ್ತುಕೊಂಡು ತಿರುಗುವಂತಹದ್ದು. ಇಲ್ಲಿ ಅಡುಗೆಮನೆಯಿಂದ ಹಿಡಿದು ಸದನ ಬಾಗಿಲಿನವರೆಗಿನ ನೂರಾರು ವಿಷಯಗಳು ಚರ್ಚಿಸಲ್ಪಡುತ್ತದೆ. ಹೀಗೆ ಮೊನ್ನೆ ಕಿಟಕಿಪಕ್ಕದ ಸೀಟು ಹಿಡಿದು ಬಸ್ಸಿನಲ್ಲಿ ಕುಳಿತಿದ್ದೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಮಧ್ಯವಯಸ್ಕಳೊಬ್ಬಳು ತನ್ನ ಏಳೆಂಟು ವರ್ಷ ವಯಸ್ಸಿನ ಹೆಣ್ಣುಮಗಳು ಮತ್ತು ಹತ್ತರ ಹರೆಯದ ಮಗನೊಂದಿಗೆ ಬಂದು ನನ್ನ ಪಕ್ಕ ಕುಳಿತಳು. ಆಕೆಯನ್ನು ನೋಡಿ ಮುಗುಳ್ನಕ್ಕೆ, ಒಲ್ಲದ ಮನಸ್ಸಿನಿಂದ ಹುಸಿನಗೆ ನಕ್ಕವಳು ಮಕ್ಕಳ ಜೊತೆ ಮಾತಿಗಿಳಿದಿದ್ದಳು. ಮಕ್ಕಳಿಬ್ಬರ ಕೈಯಲ್ಲೂ ಕುರುಕಲು ತಿಂಡಿ ಪೊಟ್ಟಣವಿತ್ತು. ಹುಡುಗ ತನ್ನ ಪಾಡಿಗೆ ತೆರೆದು ತಿನ್ನಲಾರಂಭಿಸಿದಾಗ ಮಗಳು ಪೊಟ್ಟಣ ತೆರೆದು ಕೊಡುವಂತೆ ಅಮ್ಮನಲ್ಲಿ ಕೇಳಲಾರಂಭಿಸಿದಳು. ಆಕೆ ಮಾತ್ರ ಮಗಳು ಅದೆಷ್ಟೇ ಕೇಳಿದರೂ ತೆರೆದುಕೊಡುವ ಮನಸ್ಸು ಮಾಡದಿದ್ದಾಗ “ನಾನು ತೆರೆದು ಕೊಡ್ಲಾ?” ಹುಡುಗಿಯಲ್ಲಿ ಕೇಳಿದೆ. ಆಕೆ ಅಮ್ಮನ ಮುಖ ನೋಡಿದಾಗ “ಬೇಡ ಮೇಡಮ್” ಉತ್ತರ ಅಮ್ಮನ ಬಾಯಿಯಿಂದ ಬಂತು. “ಪಾಪ ಅಷ್ಟೊಂದು ಕೇಳ್ತಿದ್ದಾಳೆ, ತೆರೆದುಕೊಡಬಹುದಲ್ಲ?’ ನನ್ನ ಮಾತಿಗೆ “ಬೇಡ ಹೆಣ್ಮಕ್ಕಳಿಗೆ ಸದರ ಸಿಗುತ್ತೆ” ಮಾತು ಕೇಳಿ ಸೋಜಿಗವಾಯಿತು. ಹೆಣ್ಮಕ್ಕಳಿಗೆ ಸಿಗುವ ಸದರಕ್ಕೂ ತಿಂಡಿ ಪ್ಯಾಕೆಟ್ಟಿಗೂ ಸಂಬಂಧವೇನೆಂದು ಅರ್ಥವಾಗದೆ ‘ಹಾಗೆಂದರೆ?’ ಪ್ರಶ್ನಿಸಿದೆ. ‘ಗಂಡ್ಮಕ್ಕಳಿಗೇನು ಮೇಡಮ್ ಹೇಗಿದ್ರೂ ನಡೆಯುತ್ತೆ ಆದ್ರೆ ಹೆಣ್ಮಕ್ಳು ಹಾಗಲ್ಲ, ಈಗಲೇ ಶಿಸ್ತು ಕಲಿಸಿದರೆ ಉಳಿಸಿಕೊಳ್ತಾರೆ” ಆಕೆಯ ಮಾತಿಗೆ ಮಕ್ಕಳಿಬ್ಬರನ್ನೂ ನೋಡಿದೆ. ಅಣ್ಣನೋ! ತಂಗಿಗೆ ಆಸೆ ಬರಿಸುತ್ತಾ ತಿಂದರೆ ಪಾಪ ಪುಟ್ಟ ಹುಡುಗಿ ತಿಂಡಿ ಪೊಟ್ಟಣವನ್ನು ಆಸೆಯಿಂದ ನೋಡುವುದು ಕಂಡಾಗ ಹೊಟ್ಟೆಯುರಿದು “ಹಾಗಿದ್ದರೆ ಗಂಡುಮಕ್ಕಳಿಗೆ ಶಿಸ್ತಿನ ಪಾಠ ಬೇಡವೇ? ಹೇಗೆಂದರೆ ಹಾಗೆ ಆತ ಬದುಕಬಹುದೇ? ಸಾಮಾಜಿಕ ಜವಾಬ್ದಾರಿ ಕೇವಲ ಹೆಣ್ಣಿಗಷ್ಟೇ ಇರುವುದೇ?” ಆಕೆಯಲ್ಲಿ ಕೇಳಿದಾಗ “ಮಗ ಸರಿಯಿಲ್ಲದಿದ್ದರೆ ಅಮ್ಮ ಕಲಿಸಿದ ಬುದ್ಧಿಯೆಂದು ಯಾರೂ ಹೇಳುವುದಿಲ್ಲ ಮೇಡಮ್ ಆದರೆ ಹೆಣ್ಮಗಳು ತಪ್ಪಿದರೆ ದೂರು ಮಾತ್ರ ಅವಳಮ್ಮನಿಗೆ” ಆಕೆಯೆಂದ ಈ ಮಾತು ಮಾತ್ರ ನನ್ನ ಮನಸ್ಸನ್ನು ಬಲವಾಗಿ ತಟ್ಟಿದ್ದು ಸುಳ್ಳಲ್ಲ.


ನಾವು ೨೧ನೆಯ ಶತಮಾನದಲ್ಲಿದ್ದೇವೆ ಇಲ್ಲಿ ಎಲ್ಲವೂ ಸರಿಯಾಗಿದೆಯೆಂಬ ಭ್ರಮೆಯಲ್ಲೇ ಬದುಕುತ್ತಿರುವಾಗ ವಾಸ್ತವವನ್ನು ತಿಳಿಸುವುದು ಮಾತ್ರ ಇಂತಹ ಸಣ್ಣಪುಟ್ಟ ಘಟನೆಗಳು. ಆಕೆ ಹೇಳಿದ್ದು ಒಂದರ್ಥದಲ್ಲಿ ಸರಿಯಾದರೂ ಅವಳ ವರ್ತನೆ ಮಾತ್ರ ಪೂರ್ತಿ ತಪ್ಪಾಗಿತ್ತು. ಹೊರಜಗತ್ತಿನಲ್ಲಿ ಹೆಣ್ಣು ಪುರುಷನಿಗೆ ಸರಿಸಮಾನಳೆಂದು ಹೇಳಿಕೊಂಡರೂ ಮೂಲಪಾಠ ಸಿಗಬೇಕಾದೆಡೆ ಇಂದಿಗೂ ತಪ್ಪುಗಳನ್ನೇ ಹೇಳಿಕೊಡುತ್ತಿದ್ದೇವೆಂಬುದು ನಿಜ. ಸಮಾಜದಲ್ಲಿ ಹೀಗೆಯೇ ವರ್ತಿಸಬೇಕು, ಹೆಣ್ಣು ಚೌಕಟ್ಟನ್ನು ಮೀರಿ ನಡೆಯಬಾರದು ಎಂಬಿತ್ಯಾದಿ ಪಾಠಗಳನ್ನು ಅಮ್ಮ ಮಗಳಿಗೆ ಹೇಳುವಂತೆ , ಅಪ್ಪನೂ ಒಂದು ಬಾರಿ ಮಗನಿಗೆ ಹೇಳಿಕೊಡುವ ಮನಸ್ಸು ಮಾಡಿದರೆ ಬಹುಶಃ ಅಂದು ಸಮಾನತೆಯೆಂಬುದಕ್ಕೆ ಒಂದರ್ಥ ಬರಬಹುದೇನೋ ಅಂತೆನ್ನಿಸಿದರೆ ಇನ್ನೂ ಕೆಲವು ಸಲ ಸಿಕ್ಕಿದ ಅಲ್ಪಸ್ವಲ್ಪ ಸಮಾನತೆಯೂ ದಕ್ಕಬೇಕಾದೆಡೆ ದಕ್ಕದೆಯೇ ಅಡ್ಡದಾರಿಯತ್ತ ವಾಲುತ್ತಿರುವುದೂ ಸತ್ಯ. ಖಂಡಿತವಾಗಿಯೂ ಹೆಣ್ಣುಗಂಡಿನ ಮಧ್ಯೆ ಬೇಧ ಬೇಡ, ಅವರಿಬ್ಬರೂ ಸಮಾನರು ಎಂಬ ವಾದದಲ್ಲಿ ನಾವಿರುವಾಗ ಕೆಲವು ವಿಷಯಗಳನ್ನು ‘ಮಹಿಳೆಯರಿಗೆ ಮಾತ್ರ! ಎಂದು ಮೀಸಲಿಡುವ ಅಗತ್ಯವಿದೆಯೇ? ಇಂತಹ ಮೀಸಲಾತಿಗಳ ದುರುಪಯೋಗ ಇಂದು ಕಾನೂನಿನಡಿಯಲ್ಲೇ ನಡೆಯುತ್ತಿದೆಯೆಂಬುದೂ ಬಹುದೊಡ್ಡ ದುರಂತ. ಇದಕ್ಕೊಂದು ಉತ್ತಮ ನಿದರ್ಶನ ಇಲ್ಲಿದೆ.


ಒಂದುದಿನ ಇದ್ದಕ್ಕಿದ್ದಂತೆ ಕಾಲೇಜಿನಲ್ಲಿ ಸುದ್ದಿಯಾಗುತ್ತದೆ ಅಧ್ಯಾಪಿಕೆಯ ಮೇಲೆ ಮುಖ್ಯೋಪಾಧ್ಯಾಯರ ಲೈಂಗಿಕ ದೌರ್ಜನ್ಯವೆಂದು. ಶಿಸ್ತಿನ ಮೂರ್ತಿಯಾಗಿದ್ದ ಪ್ರಾಂಸುಪಾಲರು ಇನ್ನೇನು ನಿವೃತ್ತಿಯ ಅಂಚಿನಲ್ಲಿದ್ದರು, ಈ ಒಂದು ಪ್ರಕರಣ ಆತನ ಸಾಮಾಜಿಕ, ಕೌಟುಂಬಿಕ ಜೀವನವನ್ನೇ ಬುಡಮೇಲು ಮಾಡಿಬುಡುತ್ತದೆ. ವಿಚಾರಣಾಧೀನ ಪ್ರಾಂಶುಪಾಲರನ್ನು ಹುದ್ದೆಯಿಂದ ವಜಾ ಮಾಡಲಾಗುತ್ತದೆ ಮತ್ತು ಅಧ್ಯಾಪಿಕೆಯ ಪರವಾಗಿ ಮಾತುಗಳು ಕೇಳಲಾರಂಭಿಸುತ್ತದೆ. ‘ಆತ ಹಾಗಲ್ಲ’ ಇದು ತಿಳಿದ ಕೆಲವು ಮಂದಿಯೂ ಪುರುಷರೇ ಆಗಿದ್ದುದರಿಂದ ಅವರ ಯಾವ ಮಾತುಗಳೂ ಪ್ರಯೋಜನಕ್ಕೆ ಬಾರದೆಯೇ ನ್ಯಾಯಾಲಯದ ಮುಂದೆ ಮೊಕದ್ದಮೆ ಹೋದಾಗ ಈ ಒಂದು ಕೇಸು ಬರೋಬ್ಬರಿ ಹತ್ತು ವರ್ಷಗಳಿಗಿಂತಲೂ ಹೆಚ್ಚು ಸಮಯ ನಡೆದು ಕೊನೆಗೆ ವಿಚಾರಣೆಯಲ್ಲಿ ತಿಳಿದ ಸತ್ಯ ಎಲ್ಲರನ್ನೂ ಬೆಚ್ಚಿಬೀಳಿಸುತ್ತದೆ. ‘ಅಧ್ಯಾಪಿಕೆ ತಾನು ಹೇಳಿದ ಕೆಲಸ ಪ್ರಾಂಶುಪಾಲರು ನೆರವೇರಿಸದಿದ್ದಾಗ ದ್ವೇಷದಿಂದ ಹೀಗೊಂದು ಸುಳ್ಳುದೂರನ್ನು ದಾಖಲಿಸಿದ್ದಳು. ಆಕೆ ಹೆಣ್ಣೆಂಬ ಕಾರಣಕ್ಕೆ ಪೂರ್ವಾಪರ ವಿಚಾರಿಸದೆಯೇ ದೂರು ದಾಖಲಾಯಿತು ಮತ್ತು ಆತ ಗಂಡೆಂಬ ಕಾರಣಕ್ಕೆ ಆತನ ಸತ್ಯಕ್ಕೆ ನ್ಯಾಯ ಸಿಗಲು ಹತ್ತುವರ್ಷಗಳ ಕಾಲ ಒದ್ದಾಡಬೇಕಾಯಿತು. ಇಲ್ಲಿ ಆತ ಕಳೆದುಕೊಂಡ ಸಾಮಾಜಿಕ ಸ್ಥಾನಮಾನ ಮತ್ತೆ ಸಿಕ್ಕಿತೇ? ಅಥವಾ ಆತನ ಚಾರಿತ್ರ್ಯದಿಂದ ಕಪ್ಪುಚುಕ್ಕಿ ಮಾಸಿ ಆಕೆಗೆ ಶಿಕ್ಷೆಯಾಯಿತೇ ಎಂಬ ಪ್ರಶ್ನೆಗೆ ಸಿಕ್ಕಿದುತ್ತರ ಮಹಿಳೆಯೆಂಬ ಸಹಾನುಭೂತಿಯ ಮೇಲೆ ಅದೆಷ್ಟೋ ಬೆಲೆ ತೆತ್ತು ಆಕೆ ಸುಮ್ಮನಾದಳು ಆದರೆ ಆತನ ಪಾಡು? ಅಷ್ಟೂ ವರ್ಷ ಆತನನುಭವಿಸಿದ ಖಿನ್ನತೆ ಮತ್ತು ನಿವೃತ್ತಿವೇತನದ ಒಟ್ಟುಬೆಲೆ ! ಸುಳ್ಳುದೂರೆಂದು ಆದ ವಜಾ. ಇಷ್ಟೆಯೇ? ಒಂದು ವೇಳೆ ಸ್ತ್ರೀ- ಪುರುಷರಿಬ್ಬರಿಗೂ ಸಮಾನ ಕಾನೂನೆಂಬ ನೀತಿಯಿದ್ದಿದ್ದರೆ ಹೀಗಾಗುತ್ತಿತ್ತೇ? ಆರಂಭಿಕ ಹಂತದಲ್ಲೇ ಬಿದ್ದು ಹೋಗುತ್ತಿತ್ತು ಅಥವಾ ಆಕೆ ಇಂತಹ ಸುಳ್ಳುದೂರು ದ್ವೇಷಸಾಧನೆಗಾಗಿ ದಾಖಲಿಸುತ್ತಲೇ ಇರಲಿಲ್ಲವೇನೋ !
ಇದು ಸ್ತ್ರೀಪರ ಕಾನೂನು ದುರುಪಯೋಗಕ್ಕೆ ಒಂದು ಉದಾಹರಣೆಯಷ್ಟೇ ಆದರೆ ಇಂತಹವುಗಳು ಇಂದು ನಮ್ಮ ನಡುವೆ ಬಹಳಷ್ಟು ನಡೆಯುತ್ತಿದೆ ಹಾಗೂ ನಿಜಸಂತ್ರಸ್ತೆಗೆ ನ್ಯಾಯಕ್ಕಾಗಿ ಹೋರಾಡುವ ಚೈತನ್ಯ ಇರುವುದೇ ಇಲ್ಲ. ಒಂದುವೇಳೆ ಆ ಶಕ್ತಿಯಿದ್ದರೂ ದಾರಿ ಕಾಣದೆಯೇ ಮತ್ತಷ್ಟು ಅನ್ಯಾಯಗಳಿಗೆ ಬಲಿಯಾಗುತ್ತಾಳೆಯೇ ಹೊರತು ಕಾನೂನು ಸಮ್ಮತ ಪರಿಹಾರಗಳಿಂದ ಬಹುದೂರ ಉಳಿದುಬಿಡುತ್ತಾಳೆ. ಹಾಗಿರುವಾಗ ಇಂದು ಹೆಣ್ಣು ಹೋರಾಡಬೇಕಾಗಿರುವುದು ಕೇವಲ ಪುರುಷಪ್ರಧಾನ ಸಮಾಜದ ವಿರುದ್ಧವಷ್ಟೇ ಅಲ್ಲ ಬದಲಾಗಿ ತನ್ನ ಅಸ್ಮಿತೆಯ ಮೇಲೆ ಕರಿಬೊಟ್ಟು ಇಡುತ್ತಿರುವವರ ವಿರುದ್ಧವೂ ಸೆಟೆದುನಿಲ್ಲಬೇಕಾಗಿದೆ.ಅನ್ಯಾಯಗಳಿಗೆ ಬಲಿಯಾದವರಿಗೆ ಹೇಗೆ ಸೂಕ್ತರೀತಿಯ ಪರಿಹಾರ ದೊರಕಬೇಕೋ ಅಂತೆಯೇ ದುರುಪಯೋಗಿಗಳ ವಿರುದ್ಧವೂ ಒಂದು ಕ್ರಮ ಅಗತ್ಯವಾಗಿದೆ. ಅದು ಬಾರದೇ ಹೋದಲ್ಲಿ ಮುಂದೊಂದು ದಿನ ನಿಜ ಸಂತ್ರಸ್ತೆಯೂ ನ್ಯಾಯದ ಬಾಗಿಲನ್ನು ತಟ್ಟಿದಾಗ ಆಕೆಯನ್ನು ಸಂಶಯಿಸುವ ಸ್ಥಿತಿ ಬಂದೊದಗಬಹುದು. ಹಿಂದೆ ಹೆಣ್ಣು ಮೌನವಾಗಿ ದೌರ್ಜನ್ಯಗಳನ್ನು ಸಹಿಸುತ್ತಿದ್ದಳು ಆದರೀಗ ಕೆಲವೆಡೆಗಳಲ್ಲಿ ಸಿಕ್ಕಿದ ಸಮಾನತೆಯೆಂಬ ಸ್ವಾತಂತ್ರ್ಯ ವನ್ನು ಸ್ವೇಚ್ಛೆಯನ್ನಾಗಿಸಿಕೊಂಡು ನಡೆಸುತ್ತಿರುವ ಅತಿರೇಕದ ವರ್ತನೆಗಳು ವಿದ್ಯಾವಂತ ಸಮಾಜದ ಒಂದು ದೊಡ್ಡ ವಿಫಲತೆಯಾಗಿ ಕಾಣಲಾರಂಭಿಸಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮುಂದಿರುವ ಹೆಣ್ಣು ‘ಹೆಣ್ಣೆಂಬ ಘನತೆ’ ಉಳಿಸಿಕೊಳ್ಳಬೇಕಾದರೆ ಪುರುಷಸಮಾಜದ ವಿರುದ್ಧ ಹೋರಾಡುವುದೊಂದೇ ದಾರಿಯನ್ನಾಗಿಸದೆ ಹೆಣ್ಣಿನ ಮೂಲಗುಣಗಳನ್ನು ಅವಹೇಳನ ಮಾಡಲು ಕಾರಣವಾಗುತ್ತಿರುವಂತಹ ತನ್ನದೇ ಸ್ವಲಿಂಗಿಗಳ ವರ್ತನೆಗಳ ವಿರುದ್ಧವೂ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಯಾಕೆಂದರೆ ಕಾರಣವಿಷ್ಟೇ ! ‘ಹೆಣ್ಣಿಗೆ ಹೆಣ್ಣೇ ಶತ್ರು’ ಎಂಬುದು ಸಾರ್ವಕಾಲಿಕ ನಾಣ್ಣುಡಿ. ಎಲ್ಲೋ ಒಬ್ಬಾಕೆ ನಾಶ ಮಾಡುವ ತಪ್ಪು ಇಡೀ ಹೆಣ್ಣುಸಮಾಜಕ್ಕೆ ಕುಂದಾಗದೆಯೇ ಮಹಿಳೆ ಸದಾಕಾಲ ಪೂಜನೀಯಳು ಎಂಬ ಸ್ಥಾನವನ್ನು ಕಾಯ್ದುಕೊಳ್ಳಲು ಇರುವ ಬಹುದೊಡ್ಡ ಸವಾಲು ‘ಕಾನೂನು ದುರುಪಯೋಗ’ದ ಬಗ್ಗೆ ಎಚ್ಚೆತ್ತುಕೊಂಡು ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ.


ಇಂದು ಮಹಿಳೆಗಿರುವ ಸವಾಲುಗಳು ಬಹಳಷ್ಟು. ನಾಲ್ಕುಗೋಡೆಯೊಳಗೆ ಸೀಮಿತವಾಗಿದ್ದ ಕಾಲದಲ್ಲಿ ಹೆಣ್ಣಿಗಿದ್ದ ಸವಾಲುಗಳು ಮನೆಯ ಮಟ್ಟಕ್ಕೆ ಸೀಮಿತವಾಗಿದ್ದರೆ ಇಂದು ಸಾಮಾಜಿಕ ರಂಗದಲ್ಲಿ ಮಿಂಚುತ್ತಿರುವ ಮಹಿಳೆಗಿರುವ ಸವಾಲುಗಳು ಜಾಗತಿಕ ಮಟ್ಟದಲ್ಲಿದೆ. ಮನೆಯೊಳಗೂ ಹೊರಗೂ ದುಡಿಯುತ್ತಿರುವ ಮಹಿಳೆ ಬಾಹ್ಯ ಸಮಸ್ಯೆ ಕಾರಣದಿಂದ ಮಾನಸಿಕ ಒತ್ತಡವನ್ನು ಅನುಭವಿಸುತ್ತಿರುವುದೂ ಹೌದು. ಅವಿಭಕ್ತ ಕುಟುಂಬದಿಂದ ದೂರವಾದ ಪ್ರಸ್ತುತದಲ್ಲಿ ಮನೆಯ ಬಹುಪಾಲು ಜವಾಬ್ದಾರಿಯ ಹೊಣೆ ಗಂಡಿಗಿಂತಲೂ ಹೆಣ್ಣಿಗೆ ಹೆಚ್ಚಾಗಿದ್ದು ‘ಸಿಂಗಲ್ ಪೇರೆಂಟ್’ ಆಗಿರುವ ಮಹಿಳೆಯರು ಮಕ್ಕಳನ್ನೂ ನಿಭಾಯಿಸಿ ಅವರ ಭವಿಷ್ಯವನ್ನು ರೂಪಿಸಬೇಕಾದ ಜವಾಬ್ದಾರಿ ಹೊತ್ತುಕೊಂಡಿರುತ್ತಾರೆ. ಇದೇ ಕಾರಣಕ್ಕೆ ೨೦೨೧ ಅಂತಾರಾಷ್ಟ್ರೀಯ ಮಹಿಳಾ ದಿನದ ಧ್ಯೇಯ “ಸವಾಲುಗಳ ಆಯ್ಕೆ’ ಎಂಬುದಾಗಿದ್ದು ಸವಾಲುಗಳು ಮಹಿಳೆಯನ್ನು ಅರಸಿ ಬರುವುದರ ಮುಂಚಿತವಾಗಿ ಆಕೆಯೇ ಸವಾಲುಗಳನ್ನು ಆಯ್ಕೆ ಮಾಡಿ ಮುನ್ನಡೆಯಬೇಕೆಂಬುದು ಆಶಯ. ಮಹಿಳೆ ಎಲ್ಲಾ ರಂಗದಲ್ಲಿ ಗೆಲುವು ಸಾಧಿಸಿದ್ದರೂ ಮನೆಯೊಳಗೆ ಕೇಳಿ ಬರುವ ‘ನೀನೊಂದು ಹೆಣ್ಣು’ ಎಂಬ ಕುಹಕವನ್ನು ಕೊನೆಗಾಣಿಸಿ ಆಕೆಗೆ ನಾಯಕತ್ವದ ಗುಣವನ್ನು ತುಂಬಿ ‘’ಸಮಾಜಕ್ಕೆ ನನ್ನ ಸನ್ನಡತೆಯ ಅಗತ್ಯವೂ ಇದೆ’ ಎಂಬ ಅರಿವು ಮೂಡಿಸಬೇಕಾಗಿದೆ. ಗೌರವವೆಂಬುದು ಪರಸ್ಪರ ಕೊಟ್ಟು ತೆಗೆದುಕೊಳ್ಳಬೇಕಾಗಿರುವ ಅತ್ಯಮೂಲ್ಯ ಸಂಪತ್ತು ಆಗಿರುವುದರಿಂದ ಜತನವಾಗಿ ಕಾಪಾಡಿ ಆ ಕೊಡುಕೊಳ್ಳುವಿಕೆ ಮನೆಯೊಳಗಿನಿಂದಲೇ ಆರಂಭವಾಗಲಿ. ಶಿಸ್ತು ನಿಯಮ ಇದು ಕೇವಲ ಹೆಣ್ಣಿಗಷ್ಟೇ ಸೀಮಿತವಲ್ಲ. ಗಂಡು-ಹೆಣ್ಣು ಇಬ್ಬರೂ ಸಮಾಜದ ಆಧಾರಸ್ತಂಭಗಳಾಗಿರುವುದರಿಂದ ಖಂಡಿತವಾಗಿ ಬೇರೆಯೆಂಬ ತಾರತಮ್ಯ ಬೇಡ, ಮಹಿಳಾಕಾನೂನು ದುರುಪಯೋಗ ಕಂಡುಬಂದಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಮಹಿಳೆಯೆಂಬ ಕಾರಣಕ್ಕೆ ಆಕೆ ಶಿಕ್ಷೆಯಿಂದ ಬಚಾವಾಗುವ ನಿಯಮದ ಬದಲಾಗಿ ಮಾಡುವ ತಪ್ಪಿಗೆ ಮಾನವ ನೆಲೆಯಲ್ಲಿ ದಂಡವಾಗಲಿ. ಅಮ್ಮ, ಸಹೋದರಿ, ಸ್ನೇಹಿತೆ, ಹೆಂಡತಿ, ಮಗಳು ಹೀಗೆ ಬಹುಪಾತ್ರ ನಿಭಾಯಿಸುವ ಹೆಣ್ಣಿನ ಜೊತೆಗೆ ಒತ್ತಾಸೆಯಾಗಿ ನಿಲ್ಲುವ ಗಂಡಿಗೂ ಸಮಾನ ಗೌರವ ನೀಡಬೇಕಾಗಿದೆ. ತಪ್ಪು-ಸರಿ ಕೇವಲ ಒಂದು ವರ್ಗಕ್ಕೆ ಸೀಮಿತವಲ್ಲ ಆದುದರಿಂದ ಇವಳಿಗೇಕೆ ಬೇರೆ ಹೆಸರು? ಸಮಾಜದಲ್ಲೊಬ್ಬರಾಗಿ ನೋಡಲು ಕಲಿಯೋಣ.
……….

              

      

            

          

***********************************

One thought on “ಇವಳಿಗೇಕೆ ಬೇರೆ ಹೆಸರು

  1. ಕಾಲೋಚಿತ ಲೇಖನ. ಆಕೆ ಹೇಳಿದ್ದು ಒಂದರ್ಥದಲ್ಲಿ ಸರಿಯಾದರೂ ಅವಳ ವರ್ತನೆ ಮಾತ್ರ ಪೂರ್ತಿ ತಪ್ಪಾಗಿತ್ತು. ತುಂಬಾ ಚೆನ್ನಾಗಿರುವ ಸಾಲುಗಳು.

Leave a Reply

Back To Top