ಮರೆಯಲಾಗದ ಗಂಗಜ್ಜಿ

ನೆನಪಿನ ದೋಣಿಯಲ್ಲಿ

ಮರೆಯಲಾಗದ ಗಂಗಜ್ಜಿ

ಎಂ. ಆರ್. ಅನಸೂಯ

      ಇದು ಸುಮಾರು ಮೂವತ್ತೈದು ವರ್ಷಗಳ ಹಿಂದಿನ  ಮಾತು.  ಆಗ ನಮ್ಮದು ಒಟ್ಟು ಕುಟುಂಬ. ಆ ದಿನಗಳಲ್ಲಿ

ನಮ್ಮ ಮನೆಗೆ ಗಂಗಮ್ಮ ಎಂಬ ದಲಿತರ ಹೆಣ್ಣುಮಗಳು

ವಾರಕ್ಕೆ ಎರಡು ಮೂರು ಬಾರಿ ಬಂದು ನಾವು ಹೇಳಿದ

ಹೊರಗಡೆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಕೊಟ್ಟಷ್ಟು ದುಡ್ಡು, ಊಟ ಹಾಗೂ ಹಳೆಯ ಬಟ್ಟೆಗಳನ್ನು  ಪಡೆದು

ಹೋಗುತ್ತಿದ್ದಳು. ನನಗೆ ತಿಳಿದಂತೆ ಅವಳೆಂದಿಗೂ ಇಷ್ಟೇ

ದುಡ್ಡು ಕೊಡಬೇಕೆಂದು ಕೇಳಿದ ನೆನಪಿಲ್ಲ. ಗಂಗಮ್ಮಳನ್ನು  ನಮ್ಮ ಆಜ್ಜಿಯವರು ಗಂಗೀ ಎಂದೇ  ಕರೆಯುತ್ತಿದ್ದರು ನಾವು ಗಂಗವ್ವ ಎಂದರೆ ನಮ್ಮ ಮನೆಯ ಮಕ್ಕಳಿಗೆಲ್ಲಾ ಗಂಗಜ್ಜಿ ಆಗಿದ್ದಳು. ಮನೆಯ ಯಜಮಾನಿಯಾದ ಅಜ್ಜಿ ಹಾಗು ಗಂಗವ್ಲನ ಮಧ್ಯೆ ಯಜಮಾನ ಹಾಗು ಸೇವಕಿಯ ನಡುವಿನ ಲಕ್ಷ್ಮಣ ರೇಖೆಯನ್ನು ಮೀರದ ಒಂದು ಎಚ್ಚರ ಇರುತ್ತಿತ್ತು. ಅಜ್ಜಿಯ ಬಾಡಿಗೆ ಮನೆಗಳ  ಚರಂಡಿ ಹಾಗೂ ಆವರಣಗಳ ಸ್ಟಚ್ಛತೆಯ ಹೊಣೆ ಗಂಗವ್ವನದೇ ಆಗಿತ್ತು  ಕೆಲವು ಬಾಡಿಗೆದಾರರ ಕುಂದುಕೊರತೆಗಳನ್ನು ಅಜ್ಜಿಯ ಗಮನಕ್ಕೆ ತಂದಿಟ್ಟು ಅವುಗಳನ್ನು ನಿವಾರಣೆ ಮಾಡುವ ಮೂಲಕ ಬಾಡಿಗೆದಾರರಲ್ಲಿ ಒಂದು ರೀತಿ ಹವಾ ಸೃಷ್ಟಿ ಸ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಅಂತಹ ವೇಳೆ ನಡೆವ ಸಂಭಾಷಣೆಗಳು ಹಾಸ್ಯಲಹರಿಯಿಂದ ಕೂಡಿದ್ದು  ರಸಭರಿತವಾಗಿ ಆಪ್ತವಾಗಿರುತ್ತಿದ್ದವು. ನಮ್ಮ ಅಜ್ಜಿಯ ಒಡೆತನದಲ್ಲಿದ್ದ ಕಲ್ಯಾಣ ಮಂಟಪದ ಸ್ಟಚ್ಛತ ಕಾರ್ಯದ  ಪಾರುಪತ್ಯವೆಲ್ಲ ನಮ್ಮ ಗಂಗವ್ವನದೇ ಆಗಿದ್ದರಿಂದ ಅಲ್ಲಿ ನಡೆಯುವ ಲೋಪದೋಷಗಳನ್ನು ತಿಳಿಸುವಂಥ ಏಕೈಕ ನಂಬಲರ್ಹ ಮೂಲವಾಗಿದ್ದಳು. ಎಲೆ ಅಡಿಕೆ ಹಾಕುವ ಚಟವಿದ್ದ ಅವಳು ಅದಕ್ಕಾಗಿ ಅಜ್ಜಿಯ ಬಳಿ ದುಡ್ಡನ್ನು ಕೇಳುವುದು ಮಾಮೂಲಿಯಾಗಿತ್ತು. ಆಗೆಲ್ಲಾ ಅಜ್ಜಿಯ  ಹುಸಿ ಕೋಪದ  ಬೈಗುಳಗಳನ್ನು ಮುಸಿ ಮುಸಿ ನಗುತ್ತಲೆ  ಸ್ವೀಕರಿಸುತ್ತಿದ್ದಳು ಜೊತೆಗೆ ಎಲೆಯಡಿಕೆ ಭತ್ಯೆಯನ್ನೂ. ನಮ್ಮ ಅಜ್ಜಿ ಹಿತ್ತಲಿನ ಮೆಟ್ಟಲ ಮೇಲೆ  ಕುಳಿತು ಹುಣಸೆ ಹಣ್ಣು ಕುಟ್ಟಿ ಬೀಜ ತೆಗೆದು ಹಸನು ಮಾಡುತ್ತಿದ್ದರೆ  ಅಲ್ಲೇ ಗಂಗವ್ವ ಕೆಳಗೆ ಕೂತಿರುತ್ತಿದ್ದ  ಚಿತ್ರ  ಸ್ಮೃತಿ ಪಟಲದಲ್ಲಿನ್ನು 

ಅಚ್ಚೊತ್ತಿದ ಹಾಗೆ ಉಳಿದಿದೆ .ಆಗ ನಡೆಯುತ್ತಿದ್ದ ಮಾತು ಕತೆಗಳಲ್ಲಿ ಅಜ್ಜಿಯ  ಗತ್ತು  ಹಾಗು ಬಿಗುಮಾನಗಳಿದ್ದರೂ  ಸಹಾ ಆಪ್ತತೆಯ ಎಳೆಯಿತ್ತು ಅವಳು ಮನೆಗೆ ಬಂದಾಗ  ತಾನಾಗಿಯೇ  ಕೆಲಸವನ್ನು ಹುಡುಕಿ ಮಾಡುವುದಲ್ಲದೆ. ನಾವು ಹೇಳಿದ ಕೆಲಸವನ್ನೆಲ್ಲ ಮುಗಿಸಿ ಕೊಟ್ಟ ದುಡ್ಡನ್ನು ಪಡೆದು ಊಟವನ್ನು ಮಾಡಿ ನಂತರ ಹೊರಡುತ್ತಿದ್ದಳು. ನಮ್ಮ ಅಕ್ಕ ಸೀತಮ್ಮ ಕೊಡುವ ಊಟವನ್ನುಂಡ ನಂತರ  ತೃಪ್ತಿಯ ಮೆಚ್ಚುಗೆಯ ಮಾತು. ಇಷ್ಟೇ  ಆಗಿದ್ದರೆ  ಅವಳು  ನಮ್ಮ ನೆನಪಿನಂಗಳದಲ್ಲಿ ಉಳಿಯುತ್ತಿರಲಿಲ್ಲವೇನೋ

ಕಪ್ಪುಬಣ್ಣ ದ ಅವಳು ಮೋಟಾದ ಗುಂಗುರು ಕೂದಲು

ಹೊಂದಿದ್ದಳು. ಅವಳೆಂದು ಹೊಸ ಬಟ್ಟೆಗಳನ್ನು ಹಾಕಿದ್ದು

ನೋಡಿಲ್ಲ. ಅವಳ ಬದುಕೇ  ಒಂದು ದುರಂತ. ಅವಳು

ಮದುವೆಗೆ ಮುಂಚೆ ಮೋಸಗಾರನೊಬ್ಬನಿಗೆ ಮರುಳಾಗಿ

ಜೀವನವನ್ನು ಹಾಳು ಮಾಡಿಕೊಂಡಿದ್ದಳು.  ಅವಳು ತನ್ನ

ತಂಗಿಯ ಮನೆಯಲ್ಲಿದ್ದಳು. ಅವಳು ಅವಿವಾಹಿತಳಾಗಿ

ತನ್ನ ಜೀವನವನ್ನು ಸವೆಸಿದ್ದಳು. ಅವಳಿಗೆ  ತನ್ನದೇ ಆದ

ಸಂಸಾರವೂ ಇಲ್ಲ ಮಕ್ಕಳೂ ಇಲ್ಲ. ಅವಳೆಂದು ನೀಟಾಗಿ

ಎಣ್ಣೆ ಹಚ್ಚಿ ತಲೆ ಬಾಚಿದ್ದಿಲ್ಲ. ಯಾವುದೋ ಹಳೆಯ ಸೀರೆ

ಅಳತೆ ಸರಿಯಿಲ್ಲದ  ಅಳ್ಳಕವಾದ  ಹಳೆಯ ಬ್ಲೌಸ್ ಗಳೇ

ಅವಳು ಉಡುಗು ತೊಡುಗೆ.  ಹೆಚ್ಚು ಮಾತುಗಳನ್ನಾಡದೆ

ಮೌನವಾಗಿ ಕೆಲಸ ಮಾಡುತ್ತಿದ್ದಳು. ವಾದ ಜಗಳಗಳು

ಅವಳಿಂದ ಮಾರು ದೂರ.  ಅತ್ಯಂತ  ಕಡುಬಡತನದ

ಅವಳು  ದೈನ್ಯತೆಯೆ  ಮೂರ್ತಿವೆತ್ತಂತಿದ್ದಳು. ಅವಳು

ತಂಗಿಯ ಸಾವಿನ ನಂತರ  ಅವಳ ಮಕ್ಕಳನ್ನು ತನ್ನೊಡನೆ

ಇಟ್ಟುಕೊಂಡು ಸಾಕುತ್ತಿದ್ದಳು. ಆಗೆಲ್ಲಾ ಅನ್ನ ಭಾಗ್ಯದಂಥ

ಯೋಜನೆಗಳಿದ್ದಿದ್ದರೆ  ಹೊಟ್ಟೆ ತುಂಬ ಊಟವಾದರೂ

ಲಭ್ಯವಾಗುತ್ತಿತ್ತೇನೊ ! ಕಡು ಶೋಷಣೆಗೀಡಾಗಿದ್ದ ಇಂಥ ದುರ್ದೈವಿ  ಗಂಗವ್ವ ಯಾವುದೋ ದೌರ್ಬಲ್ಯಕ್ಕೊಳಗಾಗಿ ಕುಡಿತದ ಚಟಕ್ಕೆ  ಬಲಿಯಾಗಿದ್ದಳು. ಆದರೆ ನಾವ್ಯಾರು ಅವಳನ್ನು ಕೆಟ್ಟ ರೀತಿಯಲ್ಲಿ ತೆಗಳುತ್ತಿರಲಿಲ್ಲ. ತವರಿಗೆ

ಬಂದ ಹೆಣ್ಣು ಮಕ್ಕಳು ಅವಳು ಕೇಳದೇ ಇದ್ದರೂ ಇನಾಂ

ರೂಪದಲ್ಲಿ ಹಣ ಕೊಡುತ್ತಿದ್ದರು. ತನ್ನ ಕಷ್ಟ ನಷ್ಟಗಳೇ

ಹಾಸಿ ಹೊದ್ದು ಕೊಳ್ಳುವಷ್ಟಿರುವಾಗ ತೀರಿಕೊಂಡ ತನ್ನ ತಂಗಿ ಮಕ್ಕಳನ್ನು ಸಾಕುವ ಅವಳ ಹೃದಯವಂತಿಕೆಯ ಸಿರಿಯ ಅಳವನ್ನು ಅಳೆಯಲಾದೀತೆ ! ಆ ಬಗ್ಗೆ ಎಲ್ಲರ ಮನದಲ್ಲಿ ಅನುಕಂಪದ ಅಲೆಯಿತ್ತು. ಎಣ್ಣೆ ಕಾಣದಂಥ ಕೆದರಿದ ತಲೆಯ,ಹರಕು ಬಟ್ಟೆ  ಬೆನ್ನಿಗತ್ತಿದ  ಹೊಟ್ಟೆಯ ಆ  ಎಳೆ ಮಕ್ಕಳು ಅವಳ ಹಿಂದೆ ಮುಂದೆ ಓಡಾಡುತ್ತಿದ್ದ  ದೃಶ್ಯ  ಕಣ್ಣಿಗೆ ಕಟ್ಟಿದಂತಿದೆ. ನಮ್ಮ ಮನೆಯ ಮಕ್ಕಳು  ಆ ಮಕ್ಕಳೊಡನೆ ಮಾತುಕತೆಯಾಡುತ್ತ ಆಟ ಆಡುವುದನ್ನು ಕೇಳಿಸಿಕೊಂಡು ನಗುತ್ತಾ ನಿಂತಿರುತ್ತಿದ್ದಳು.  ಅವಳಲ್ಲಿದ್ದ ತಾಯ್ತನದ ಮಮತೆ ಒಡ್ಡೊಡೆದು  ಮೇರೆ ಮೀರಿ  ಹೊರ ಬಂದು ಆ ಮಕ್ಕಳಲ್ಲಿ ಮಡುಗಟ್ಟಿ ನಿಂತಿತ್ತು.  ಆ ಕುಡಿತದ ಚಟವು ಅವಳಾಗ ಅನುಭವಿಸುತ್ತಿದ್ದ  ಸಂಕಟ .ವೇದನೆ ಹಾಗೂ ಒಂಟಿತನ ಇವುಗಳನ್ನು ಮರೆಯಲು ಅವಳೇ ಕಂಡುಕೊಂಡ ಒಂದು ದಾರಿಯಾಗಿರ ಬಹುದೆ !  ತನ್ನ ಬದುಕಿನ ಅಂತಿಮ ಕಾಲದ ದಾರುಣ  ದಿನಗಳನ್ನು ಆಕೆ  ಪುರಸಭೆಯ  ಸನಿಹದಲ್ಲಿಯೆ ಮುಗಿಸಿದಳು. ಇಲ್ಲಿ ತನ್ನ ಪಯಣ  ಮುಗಿಸಿದರೆ  ತನ್ನ ಅನಾಥ ದೇಹಕ್ಕೊಂದು ಗತಿ ಸಿಗಬಹುದು ಎಂಬ ಯೋಚನೆಯು ಅವಳಲ್ಲಿ ಬಂದಿತ್ತ ! ಅವಳ ಬದುಕು ಈ ನಾಡಿನಲ್ಲಿ  ದಿಕ್ಕಿಲ್ಲದ  ಕಟ್ಟ ಕಡೆಯ   ಬಡಜನರ ದುರ್ಗತಿಗೆ ಸಾಕ್ಷಿಯಾಗಿದೆ. ತನ್ನ ಮೈಯಲ್ಲಿ ಕಸುವಿರುವ ತನಕ ದುಡಿದು  ಅಲ್ಪತೃಪ್ತಳಾಗಿ ಬದುಕಲ್ಲಿ ಸುಖವನ್ನೆ ಕಾಣದ ಅವಳಿಗೆ ಮರಣವೇ ಮಹಾನವಮಿ !

ನಿಸ್ವಾರ್ಥ ಬದುಕು ಬದುಕಿದ ಗಂಗಜ್ಜಿಯನ್ನು ನೆನೆದಂಥ ಮನೆ ಮಕ್ಕಳು ಅವಳ ಬಗ್ಗೆ ಹೃದಯವಂತಿಕೆಯ ಮಾತು ಗಳನ್ನಾಡುತ್ತ ಸ್ಮರಿಸಿದ್ದು ವನಸುಮದಂತೆ ಬಾಳಿಬದುಕಿದ  ಅವಳ ಬದುಕಿನ ಘನತೆಯನ್ನು ಎತ್ತಿಹಿಡಿದಂತಿತ್ತು.ಹಾಗೆ ಅವಳಿಗೆ ಸಲ್ಲಿಸುವ ಮರಣೋತ್ತರ ಪ್ರಶಸ್ತಿಯಂತಾದ ಈ ನುಡಿನಮನವನ್ನು ಅರ್ಪಿಸುವ  ಸಮಯದಲ್ಲಿ ಮನಸ್ಸು ಭಾರವಾಗಿ ಕಣ್ಣಾಲಿಗಳು ತುಂಬಿ ಬಂದು ಅಶ್ರು ತರ್ಪಣ ಸಲ್ಲಿಸಿದ್ದು ಸುಳ್ಳಲ್ಲ .

*****************************************

One thought on “ಮರೆಯಲಾಗದ ಗಂಗಜ್ಜಿ

  1. ಶೀರ್ಷಿಕೆಯನ್ನ ನೋಡಿದೋಡನೆಯೇ ಕತೆ ಓದುವ ಮನಸ್ಸಾಯ್ತು ಕತೆ ಕಣ್ಣಮುಂದೆ ಕಟ್ಟಿದಂತೆ ಓದಿಸಿಕೊಂಡು ಹೋಗುತ್ತದೆ ಚಂದವಾಗಿ ಬರೆದಿದ್ದೀರಿ mam

Leave a Reply

Back To Top