ಪಾರ್ಟಿ

ಹಾಸ್ಯ ಲೇಖನ

ಪಾರ್ಟಿ

ಜ್ಯೋತಿ ಡಿ.ಬೊಮ್ಮಾ.

Talking In The Quad Stock Photo - Download Image Now - iStock

ಬಹಳ ದಿನಗಳಿಂದ ಮನದಲ್ಲೆ ಅಡಗಿದ್ದ ಕೂತುಹಲದ ವಿಷಯ ಒಂದಕ್ಕೆ ಕಾರ್ಯಗತಗೊಳಿಸಲು ನಾವು ನಾಲ್ವರು ಗೆಳತಿಯರು ನಿರ್ದರಿಸಿದೆವು. ನಾವೂ ಒಮ್ಮೆಯಾದರೂ ಡ್ರೀಂಕ್ಸ (ಮದ್ಯಪಾನ) ಮಾಡಲೇಬೆಕೆಂದು.ಮಕ್ಕಳೆಲ್ಲ ದೊಡ್ಡವರಾಗಿ ಅವರವರ ಉನ್ನತ ವ್ಯಾಸಂಗದಲ್ಲಿ ಮುಂದುವರಿಯುತ್ತಿದ್ದಂತೆ ನಮ್ಮಂತ ಗೃಹಿಣಿ ಯರಿಗೆಲ್ಲ ಸ್ವಲ್ಪ ಬಿಡುವು.ಮತ್ತೆ ಮಕ್ಕಳ ಮದುವೆ ನಂತರ ಇದ್ದದ್ದೇ ,ಸೊಸೆಯರೊಂದಿಗೆ ಹೊಂದಾಣಿಕೆಯ ಪರದಾಟ ,ಮೊಮ್ಮಕ್ಕಳನ್ನು ನೋಡಿಕೊಳ್ಳುವದು ಹೀಗೆ ತಪ್ಪದ ಜವಾಬ್ದಾರಿಗಳು. ನಮ್ಮ ಬಿಡುವಿನ ವೇಳೆಯನ್ನು ಕಿಟಿ ಪಾರ್ಟಿ , ಪಿಕನಿಕ್ , ಶಾಪಿಂಗ್ ಎನ್ನುವಷ್ಟಕ್ಕೆ ಸೀಮಿತವಾಗಿದ್ದ ನಮ್ಮ ಮಿತಿಯೋಳಗೆ ಈ ಡ್ರಿಂಕ್ಸ ಅನ್ನುವ ಕುತೂಹಲ ಹೇಗೆ ಹುಟ್ಟಿತು ಎಂಬುದೆ ಆಶ್ಚರ್ಯ. ಇಷ್ಟು ದಿನ ಗಂಡಂದಿರು ಕುಡಿಯುವದನ್ನೆ ದೊಡ್ಡ ಅಪರಾಧ ಎಂಬಂತೆ ಕಂಡಿದ್ದ ನಮಗೆ , ಯಾವಾಗ ನಾವು ಎಕೆ ಒಮ್ಮೆ ಕುಡಿಯಬಾರದು ಎಂಬ ಕೂತುಹಲ ಮಾಡಿದ್ದೆ ಕುಡಿತ ಒಂದು ಸಾಮಾನ್ಯ ಪ್ರಕ್ರೀಯೆ ಎನಿಸತೊಡಗಿತು. ಸರಿ ತಪ್ಪುಗಳೆಲ್ಲ ನಮ್ಮಲ್ಲೆ ಸ್ಥಾನಪಲ್ಲಟ ಹೊಂದುವಾಗ  ತಪ್ಪು ಗಳೆಲ್ಲ ಸರಿ ಎನಿಸಲು ತೊಡಗುವವು ,ಸರಿಯು ಕೆಲವೊಮ್ಮೆ ತಪ್ಪಾಗೆ ಕಾಣುವದು ,ನಮ್ಮ ಮನಸ್ಥಿತಿ ನಮ್ಮ ಅಡಿಯಾಳಷ್ಟೆ.

ಇಷ್ಟು ದಿನ ಕುಡಿತದ ದುಷ್ಪರಿಣಾಮ ,ಅದರಿಂದ ಸಂಸಾರದಲ್ಲಾಗುವ ಜಗಳಗಳು ಆರೋಗ್ಯ ಹಾನಿ ಮತ್ತು ನಮ್ಮ ರಾಜ್ಯದಲ್ಲೆಕೆ ಮದ್ಯವನ್ನು ಬ್ಯಾನ್ ಮಾಡಬಾರದು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುತಿದ್ದ ನಾವು ,ಯಾವಾಗ ನಾವೂ ಒಮ್ಮೆ ಕುಡಿದು ನೋಡಬೆಕೆಂದು ನಿರ್ಣಯಿಸಿದೆವೋ ..ಸ್ಥಾನಪಲ್ಲಟ ಗೊಳಿಸಿದೆವು.  ಕುಡಿಯುವದು ಕೇವಲ ಗಂಡಸರ ಹಕ್ಕೆ ! ಹೆಣ್ಣು ಮಕ್ಕಳು ಕುಡಿಯುವದು ಒಂದು ಮಹಾಪಾಪ ಎಂದು ಭಾವಿಸುವ ಸಮಾಜದ ಬಗ್ಗೆ ಟೀಕಿಸತೊಡಗಿದೆವು. ಎನಾದರಾದಲಿ ಯಾರು ಎನೆ ಅನ್ನಲಿ ಒಮ್ಮೆ ಕುಡಿದೆ ತೀರಬೆಕೆಂಬ ಹಠ ಗಟ್ಟಿಯಾಯಿತು.

ಕುಡಿಯಲು ಒಂದು ಕಾರಣಬೆಕಲ್ಲ.ಪೀನೆವಾಲೋಂಕೋ ಬಹಾನ ಚಾಯಿಯೇ ಎಂದು ಅಣಕಿಸುತಿದ್ದ ನಾವೇ  ಒಂದು  ಕಾರಣ  ಸೃಷ್ಟಿಸಿದೆವು. ಪಾರ್ಟಿಗೆ ಒಂದು ದಿನಾಂಕ ನಿಗದಿಯಾಯಿತು.ಈ ನಮ್ಮ ಕುಡಿತದ ರಹಸ್ಯ ಕಾರ್ಯಾಚರಣೆ ಗಂಡಂದಿರಿಗೆ ತಿಳಿಸದಿದ್ದರೆ ಹೇಗೆ !  ಅವರು ನಮ್ಮ ಸ್ವಂತ ಕಿವಿಗಳೆ ಅಲ್ವೇ ..ವಿಷಯ ಹೇಗೂ ಹೊರಗೆ ದಾಟದು ಎಂಬ ಭರವಸೆಯಿಂದ ನಮ್ಮ ನಮ್ಮ ಗಂಡದಿರಿಗೆ ಅರುಹಲಾಯಿತು. ಇಷ್ಟು ದಿನ ಅವರು ಪಾರ್ಟಿ ಮಾಡುವುದನ್ನು ವಿರೋಧಿಸುತಿದ್ದ ನಾವು ಈಗ ಅವರ ಪಾರ್ಟಿ ಸೇರುತ್ತಿರುವದು ಇರುಸುಮುರುಸಾಗಿರಬೇಕು ,ಅಥವಾ ತಮ್ಮ ಸರಿ ಸಮಾನರಾಗುತ್ತಿರುವದಕ್ಕೆ ತಮ್ಮ ಪ್ರತಿಷ್ಟೆ ಕಡಿಮೆಯಾಗಬಹುದೆಂದು ಭಾವಿಸಿರಬಹುದು.  ಅಕ್ಕಪಕ್ಕದವರ ಬಾಯಿ ಉದಾರಣೆ ಕೊಟ್ಟು ತಮ್ಮ ಮನೆತನದ ಪ್ರತಿಷಟೆವರೆಗೂ ಹೋಗಿ ನಮ್ಮನ್ನು ತಡೆಯಲು ನೋಡಿದ್ದರು. ಮನೆಯ ಗಂಡಸರೆಲ್ಲ ಕುಡಿಯುವದು ಹೆಮ್ಮೆ.ಮನೆಯ ಹೆಣ್ಣು ಕುಡಿಯುವದು ಅವಮಾನ ಅಲ್ವೇ..? ಅದಾಗಲೆ ನಾವು ನಿರ್ದರಿಸಿಯಾಗಿತ್ತು ಕುಡಿದೇ ತೀರಬೆಕೆಂದು ,ಬೇರೆದಾರಿಗಾಣದೆ ಸಮ್ಮತಿಸಿದರೆನ್ನಿ.ತಮ್ಮ ತಮ್ಮ ಮನೆಯಲ್ಲಿ ಗಂಡ ಹೆಂಡತಿಯರಿಗೆ ಬಿಟ್ಟು ಮತ್ತಾರಿಗೂ ತಿಳಿಯಕೂಡದೆಂದು ಒಪ್ಪಂದ ವೂ ಮಾಡಿಕೊಳ್ಳಲಾಯಿತು. ಸ್ವಲ್ಪ ಮಾತ್ರ ಕುಡಿಯಿರಿ ಎಂದು ದಿನಾ ನಾವು ಅವರಿಗೆ ಹೇಳುವ ಮಂತ್ರ ನಮಗೆ ಪಠಿಸಲು ಮರೆಯಲಿಲ್ಲ.

ಕುಡಿಯುವ ದಿನಾಂಕ ನಿಶ್ಚಯ ಮಾಡಿದ ಮೇಲೆ ನಮ್ಮ ಮಾತುಗಳೆಲ್ಲ ಮದ್ಯ ಮಯವೇ ..ಏನು ಕುಡಿಯಬೇಕು.ಎಷ್ಟು ಕುಡಿಯಬೇಕು ,ಮುಂಜಾನೆ ಕುಡಿಯುವದೋ ,ರಾತ್ರಿ ಕುಡಿಯುವದೋ ಎಂಬ ಚರ್ಚೆ ಶುರುಮಾಡಿದ್ದೆವು. ರಾತ್ರಿ ಮಾತ್ರ ಕುಡಿಯಲು ಪ್ರಶಸ್ ಎಂದು ಭಾವಿಸಿ ಇಂತಹ ದಿನ ರಾತ್ರಿ ಇಷ್ಟು ಸಮಯಕ್ಕೆ ಎಂದು ನಿಗದಿ ಮಾಡಿ , ಕುಡಿಯುವಾಗ ಏನು ತಿನ್ನಬೇಕು ಕುಡಿದ ನಂತರ ಏನು ತಿನ್ನಬೇಕೆಂದು ಪಟ್ಟಿ ಮಾಡಿ ಎಲ್ಲರೋ ಒಂದೊಂದು ಪಟ್ಟಿ ಒಪ್ಪಿಕೊಂಡೆವು ಒಂದು ರೀತಿಯ ಸಂಭ್ರಮದಿಂದ.

ಹೇಗೂ ನಮಗೆ ಬೇಕಾದ ಮದ್ಯದ ಸರಕು ನಮ್ಮ ಪತಿದೇವರು ಒದಗಿಸಲು ಒಪ್ಪಿಕೊಂಡಿದ್ದರು.ಆದರೆ ನನ್ನ ತಲೆಯಲ್ಲಿ ಹೊಸ ಆಲೋಚನೆಯೊಂದು ಹುಟ್ಟಿಕೊಂಡಿತು. ನಾವೇ ಮದ್ಯದಂಗಡಿಗೆ ಹೋಗಿ ನೋಡಿ ನಮಗೆ ಬೇಕಾದದ್ದು ತಂದರಾಯಿತು ಎಂದು.

ಲಾಕ್ಡೌನ್ ಸಂದರ್ಬದಲ್ಲಿ ಕೆಲದಿನ ಮದ್ಯ ನಿಷೇಧದ ನಂತರ ಬಾರ್ ಗಳೆಲ್ಲ ಓಪನ್ ಆದಾಗ  ಅದರ ಮುಂದೆ ಸರತಿಯಲ್ಲಿ ನಿಂತ ಹೆಣ್ಣುಮಕ್ಕಳ ಮುಖಕ್ಕೆ ಕ್ಯಾಮರಾ  ಯೂಮ್ ಮಾಡಿ ವರದಿ ಮಾಡುವ ಮಾದ್ಯಮದವರಿಗೆ ಮುಕ್ಕಾಲು ಭಾಗ ಗಂಡಸರು ಸರತಿಯಲ್ಲಿ ನಿಂತದ್ದು ಕಾಣಿಸಿಲ್ಲ ,ಅಲ್ಲೊಬ್ಬ ಇಲ್ಲೊಬ್ಬರು ನಿಂತ ಮಹಿಳೆಯರೆ ಕೇಂದ್ರ ಬಿಂದುವಾಗಿದ್ದರು ಇವರಿಗೆ.ಹೆಣ್ಣು ಮಕ್ಕಳು ಮದ್ಯದ ಅಗಡಿ ಮುಂದೆ ನಿಂತರೆ ನಮ್ಮ ಸಂಸ್ಕತಿಯತ್ತ ಬೆಟ್ಟು ಮಾಡಿ ನಗುವ ಪುರುಷಮಹಾಮಣಿಗಳಿಗೆ ಗೊತ್ತಿರಬೇಕು ,ಎಷ್ಟೋ ಜನ ಪುರುಷರು ತಮ್ಮ ಹೆಂಡಿರ ದಿನದ ದುಡಿಮೆ ಕಸಿದುಕೊಂಡು ಕುಡಿದು ಹೆಂಡತಿಯ ಮೇಲೆ ದೌರ್ಜನ್ಯ ಎಸಗುವ ರೀತಿ. ಕೇವಲ ಹಾಲು ,ತರಕಾರಿ ,ದಿನಸಿ ಅಂಗಡಿಗಳ ಮುಂದೆ ಮಾತ್ರ ನಮ್ಮನ್ನು ಕಾಣಬಯಸುವ ಸಮಾಜಕ್ಕೆ ತೋರಿಸಲಾದರೂ ನಾವು ಮದ್ಯದಂಗಡಿಗೆ ಹೋಗಲೆಬೆಕೆಂದು ಹಠ ಮೂಡಿತು

ನಾವು ನಾಲ್ವರು ಸೀರೆ ಖರೀದಿಸುವ ಸಲುವಾಗಿ ಹೋಗುವಂತೆ ತಯ್ಯಾರಾಗಿ ಮುಖಕ್ಕೆ ಮಾಸ್ಕ ಹಾಕಿಕೊಂಡು ಒಂದು ದೊಡ್ಡ ಮಾಲ್ ನ ಕೆಳಮಹಡಿಯಲ್ಲಿರುವ ಒಂದು ಮದ್ಯದಂಗಡಿಗ

 ಹೋದೆವು .ಅಂಗಡಿಯ ಹೆಸರೆ ‘ ಟಾನಿಕ್ ‘ . ಟಾನಿಕ್ ಎಂದರೆ ಔಷಧಿ ಎಂದು ತಿಳಿದುಕೊಂಡಿದಗದ ನಮಗೆ ಮದ್ಯವೂ ಒಂದು ಟಾನಿಕಾ ಎಂದು ಜಿಜ್ಞಾಸೆ ಕಾಡಿತು. ಒಳಗೆ ಒಪ್ಪವಾಗಿ ಜೋಡಿಸಿದ ಬಾಟಲ್ಗಳನ್ನು ನೋಡುವದಕ್ಕಿಂತ ಹೊರಗಿನಿಂದ ನಮಗೆ ಯಾರಾದರೂ ಗಮನಿಸುತ್ತಿರುವರೆ ಎಂಬ ಆತಂಕ ಕಾಡತೋಡಗಿತು.  ಇಲ್ಲಿವರೆಗೂ ನಾವು ಚರ್ಚಿಸಿದ ಸ್ತ್ರೀ ಸಮಾನತೆ ವಾದದ ಹುಮ್ಮಸ್ಸು ಮರೆಯಾಗಿ ಬಿಟ್ಟಿತು. ನಿರಲ್ಲಿ ಬಿದ್ದವರಿಗೆ ಚಳಿ ಎನು ! ಮಳೆ ಎನು !. ಹೇಗೋ ಮಾಸ್ಕ ಅಂತೂ ಧರಿಸಿದ್ದೆವೆ , ಯಾರು ಗುರುತಿಸಲಿಕ್ಕಿಲ್ಲ ಎಂಬ ಧೈರ್ಯದಿಂದ  ಅಲ್ಲಿರುವ ವಿವಿಧ ರೀತಿಯ ಬಾಟಲ್ಗಳತ್ತ ಗಮನ ಹರಿಸಿದೆವು. ಅಲ್ಲಿ ಕ್ಯಾಷ್ ಕೌಂಟರ್ ನಲ್ಲಿದ್ದ ಹುಡುಗಿಯೊಬ್ಬಳು ಆತ್ಮೀಯ ನಗೆ ಸೂಸುತ್ತ  ,ಮದ್ಯಗಳಬಗ್ಗೆ  ವರದಿ ನನೀಡತೊಡಗಿದಳು. ಅವುಗಳ ಬ್ರಾಂಡ್ , ರೇಟ್ ,  ಅವುಗಳಲ್ಲಿರುವ ಅಲ್ಕೋಹಾಲ್ ಕಂಟೈನ್ಟ..ಇತ್ಯಾದಿಗಳ ಬಗ್ಗೆ ಕೂತುಹಲದಿಂದ ಕೇಳತೊಡಗಿದೆವು. ಯಾವದು ಕೊಳ್ಳಬೆಕೆಂದು ಗೊಂದಲದಲ್ಲಿದ್ದ ನಮಗೆ ಅವಳೆ ಸಹಾಯಕ್ಕೆ ಬಂದಳು. ಶಾಂಪೆನ್ ನ್ನು ಕೊಳ್ಳಬಹುದೆಂದು ,ಇದರಲ್ಲಿ ಅಲ್ಕೋಹಾಲ್ ಪ್ರಮಾಣ ಅತಿ ಕಡಿಮೆ ಎಂದೂ ತುಂಬಾ ಸೌಮ್ಯ ವಾದ ಮದ್ಯ ಎಂಬ ವರ್ಣನೆಯಿಂದ ಅದನ್ನೆ ಕೊಳ್ಳಲು ನಿರ್ದರಿಸಿದೆವು. ಅದರ ಬೆಲೆ ನೋಡಿ ದಿಗಿಲಾಯಿತು ,ಇಷ್ಟು ಬೆಲೆಯಲ್ಲಿ ನಮ್ಮ ಮನೆಗೆ ತಿಂಗಳಿಗಾಗುವಷ್ಟು ದಿನಸಿ ಬರುವದೆಂದೂ ಅಥವಾ ಒಂದು ಒಳ್ಳೆಯ ಸೀರೆ  ಸಲ್ವಾರ್ ಬರುವದೆಂದು ಹೀಗೆ ನಮಗೆ ತಿಳಿದ ವಸ್ತುಗಳ ಪಟ್ಟಿಯನ್ನು ಶಾಂಪೆನ್ ಬೆಲೆಯೊಂದಿಗೆ ತುಲನೆ ಮಾಡತೊಡಗಿ್ಎವು.  ಇಷ್ಟು ಹಣ ಖರ್ಚು ಮಾಡಿ ದಿನಾ ಕುಡಿಯುವ ಗಂಡಸರನ್ನು ನಿಂದಿಸಲಾಯಿತು .

ಅಷ್ಟರಲ್ಲಿ  ಪ್ರತಿಯೊಂದು ವಸ್ತುವಿಗೂ ಚೌಕಾಸಿ ಮಾಡಿಯೆ ಖರಿದಿಸುವ.  ನನ್ನ ಗೆಳತಿಯೊಬ್ಬಳು  ಶಾಂಪೆನ್ ಬಾಟಲ್ ಬಗ್ಗೆ ಚೌಕಾಸಿಗಿಳಿದಳು. ನಾ ಕೊಡೆ..ನಾ ಬಿಡೆ..ವಾದ ಶುರುವಾಯಿತು ,ಗಲಾಟೆಯಿಂದ ಅಂಗಡಿಯಲ್ಲಿರುವ ಇತರರು ನಮ್ಮ ಬಗ್ಗೆ ಕೂತುಹಲದಿಂದ ನೊಡತೊಡಗಿದಾಗ   ಗೆಳತಿಯನ್ನು ಸುಮ್ಮನಾಗಿಸಿ  ಅಂಗಡಿಯವರು ಹೆಳಿದ  ಬೆಲೆ ತೆತ್ತು  ಅಂಗಡಿಯಿಂದ ಹೊರಬಂದೆವು .ಕೈಯಲ್ಲಿ ಶಾಂಪೆನ್ ಬಾಟಲ್ ಹಿಡಿದು ದಿಗ್ವಿಜಯ ಸಾಧಿಸಿದಂತೆ.

ನಿಗದಿತ ಸಮಯದಂತೆ ರಾತ್ರಿ ಎಲ್ಲರೂ ನಮ್ಮ ಮನೆಯಲ್ಲಿ ಸೇರಿದವು .ಕುಡಿಯಲು ಸ್ಟಿಲ್ ಗ್ಲಾಸ್ ಗಳು ಸೂಕ್ತ ವಲ್ಲವೆಂದು ಜೂಸ್ ಕುಡಿಯುವ ಕಾಜಿನ ಲೋಟಗಳನ್ನು ಆರೆಂಜ ಮಾಡಲಾಯಿತು. ಎಲ್ಲರೂ ಲೋಟಗಳನ್ನು ಮುಂದಿಟ್ಟುಕೊಂಡು ಇನ್ನೆನು ಬಾಟಲ್ ನ ಬಿರುಡೆ ತೆಗೆಯಬೇಕು , ಒಮ್ಮೆಗೆ ಜ್ಞಾನೋದಯ ವಾಯಿತು.ಬಿರುಡೆ ತೆಗೆದರೆ ಒಳಗಿನ ದ್ರವವೆಲ್ಲ ನೊರೆಯಾಗಿ ಮೇಲಕ್ಕೆ  ಚಿಮ್ಮುವದು ಎಂದು  ಸಿನಿಮಾಗಳಲ್ಲಿ ನೋಡಿದ್ದು ನೆನಪಿಗೆ ಬಂತು . ಇಲ್ಲೆ ಓಪನ್ ಮಾಡಿದರೆ ಕೆಳಗೆ ಚೆಲ್ಲಿ  ನೆಲವೆಲ್ಲ ರಾಡಿಯಾಗುತ್ತದೆ.  ಮತ್ತೆ ಅದನ್ನು ಕ್ಲೀನ್  ಮಾಡುವ  ತಾಪತ್ರಯವೆ ಬೇಡವೆಂದು  ಬಾತ್ ರೂಮಲ್ಲಿ ಶಾಂಪೆನ್  ಓಪನ್ ಮಾಡಲು ನಿರ್ದರಿಸಿದೆವು. ಕೆಳಗೆ ಚೆಲ್ಲಿದರೆ ನೀರು ಸುರಿದರಾಯಿತೆಂದು ,ಬಾಟಲ್ ಹಿಡಿದುಕೊಂಡು ಎಲ್ಲರೂ ಬಾತ್ ರೂಮನತ್ತ ಧಾವಿಸಿದೆವು.

ತರಾತುರಿಯಿಂದ ಬಾಟಲಿನ ಬಿರುಡೆ ತಿರುಗಿಸಿದ್ದೆ ತಡ ಅದರಲ್ಲಿರುವ ನೊರೆ  ಒಮ್ಮೆಗೆ ಮೇಲೆ ಚಿಮ್ಮಿ ಕೆಳಗೆ  ಚೆಲ್ಲಿತು , ಅದರೊಂದಿಗೆ ಹೋ..ಎಂಬ ನಮ್ಮೆಲ್ಲರ ಶಬ್ದ  ಬಚ್ಚಲು ಮನೆಯಲ್ಲಿ ಮಾರ್ದನಿಸಿತು.  ಕೆಳಗೆ ಚಲ್ಲಿದ ದ್ರಾವಣದ ಮೇಲೆ ನೀರು ಸುರಿಯಲು ಕೆಳಗೆ ನೋಡಿದರೆ ,   :ಎನಾಶ್ಚರ್ಯ …ದ್ರಾವಣ ಚೆಲ್ಲಿದ ಅಷ್ಟು ಟೈಲ್ಸಗಳು ಫಳ ಫಳ ಹೊಳೆಯುತ್ತಿವೆ .ಎನೋ ಹೊಸ ಆವಿಷ್ಕಾರ ಮಾಡಿದಂತೆ ಹೊಳೆಯುವ ಟೈಲ್ಸ್ ಗಳನ್ನು ನೊಡತೊಡಗಿದೆವು. ನಾನಂತೂ  ಪಾರ್ಟಿ ಕುಡಿತ ಎಲ್ಲವೂ ಮರೆತು ಉಳಿದ ಟೈಲ್ಸ್ ಗಳಿಗೆ ಹೊಳಪು ಬರಿಸಲು ಶಾಂಪೆನನ್ನು ಎಲ್ಲ ಕಡೆ ಇಷ್ಟಿಷ್ಟೆ ಸುರಿಯತೊಡಗಿದೆ .ಅಷ್ಟರಲ್ಲಿ ಗೆಳತಿಯೊಬ್ಬಳು ಎಚ್ಚೆತ್ತು  ‘ ಇರುವಷ್ಟು ಬಾತ್ ರೂಮ್ ಗೆ ಸುರಿದರೆ ಕುಡಿಯುವದೆನು ‘  ಎಂದು ನನ್ನ ಕೈಯಿಂದ ಕಸಿದುಕೊಂಡಳು. ಮನದಲ್ಲೆ ನಿರ್ದರಿಸಿದೆ ಒಂದು ಮದ್ಯದ ಬಾಟಲಿ ಪೂರ್ತಿ ಸುರಿದು ಬಚ್ಚಲನ್ನು ಜಗಮಗಿಸಬೇಕೆಂದು.

 ಬಾಟಲ್ ನೊಂದಿಗೆ ಡ್ರಾಯಿಂಗ್ ರೋಮ್ ಗೆ ಬಂದು ಎಲ್ಲರ ಗ್ಲಾಸ್ ಗೂ ಶಾಂಪೆನ್ ಸುರಿದಾಯಿತು. ಇನ್ನೆನು  ಎಲ್ಲರೂ ತುಟಿಗಿಡಬೇಕು , ಅರೆ , ಚಿಯರ್ಸ.. ಮಾಡುವದೆ ಮರೆತೆವೆಲ್ಲ , ಎಂದುಕೊಂಡು  ಎಲ್ಲರೂ ತಮ್ಮ ತಮ್ಮ ಲೋಟಗಳನ್ನು  ಮತ್ತೊಬ್ಬರ ಲೋಟಕ್ಕೆ ತಗಲಿಸಿ  ಚಿಯರ್ಸ ಹೆಳುವ ಉತ್ಸಾಹದಲ್ಲಿ , ಜೀವನದಲ್ಲಿನ ಮೊದಲ ಕುಡಿತ ಎಂಬ  ಮುದದಿಂದಲೋ..ಅತೀ ಉತ್ಸಾಹದಿಂದಲೋ..ಗಾಜಿನ ಲೋಟಗಳು ಎಂಬುದನ್ನು ಮರೆತೋ..ಒಟ್ಟಿನಲ್ಲಿ ಒಂಥರಾ ಗೊಂದಲದಲ್ಲಿ ಲೋಟಗಳನ್ನು ಸ್ವಲ್ಪ ಜೋರಾಗಿಯೆ ತಗುಲಿಸಿದ್ದೆವೆಂದು ಕಾಣುತ್ತದೆ , ಬೇರೆ ಲೋಟಗಳು ನನ್ನ ಲೋಟಕ್ಕೆ ತಗಲಿದ ರಭಸಕ್ಕೆ  “ಫಳಾರ್” ಎಂಬ ಶಬ್ದದೊಂದಿಗೆ ನನ್ನ ಕೈಯಲ್ಲ ರಕ್ತಮಯ..

ಯಾಕೆ , ಎನಾಯ್ತು ,ಎಂದು ತಿಳಿಯುವಷ್ಟರಲ್ಲಿ ದ್ರಾವಣವೆಲ್ಲ ನೆಲಕ್ಕೆ ಚಲ್ಲಿಯಾಗಿತ್ತು..

ಗವಾಕ್ಷಿಗೆ ಹೋದರು ಶನಿಶ್ವರನ ಕಾಟ ತಪ್ಪಲಿಲ್ಲ ಎಂಬಂತೆ ಚೆಲ್ಲಿದ್ದನ್ನೆಲ್ಲ ಕ್ಲೀನ್ ಮಾಡುವಷ್ಟರಲ್ಲಿ ಕುಡುಯುವ ಹಂಬಲವೆ ಮಾಯವಾಗಿತ್ತು.

ಆದರೂ ಕುಡಿಯಲೆಬೇಕಿತ್ತು..ನಿರ್ದರಿಸಿದಂತೆ ,ಮತ್ತೆ ನನ್ನ ಗ್ಲಾಸ್ ಗೆ ಬಾಟಲ್ ನಲ್ಲಿ ಉಳಿದಿರುವದರಲ್ಲೆ(ಅದರೊಳಗೆ ಉಳಿದದ್ದೆ ಸ್ವಲ್ಪ )  ಸ್ವಲ್ಪ ಸುರಿದುಕೊಂಡು ಕುಳಿತೆವು. ಈ ಸಾರಿ ಚಿಯರ್ಸ ಮಾಡುವ ಗೊಡವೆಗೆ ಹೋಗದೆ ಇನ್ನೆನು ಗ್ಲಾಸ್ ಬಾಯಿಗಿಡಬೇಕು , ಒಮ್ಮೆಗೆ ಕರೆಗಂಟೆ ಸದ್ದಾಗಬೇಕೆ . ಮೊದಲೆ ಎಲ್ಲಾ ಪ್ಲಾನ್ ಮಾಡಿ  ಯಾರು ಬರದ ಸಮಯ ಆರಿಸಿಕೊಂಡರು ಮತ್ತಾರು ಬಂದಿರಬಹುದೆಂದು ದಿಗಿಲಾಯಿತು. ನಮ ನಮ್ಮ ಗಂಡಂದಿರಿಗೆ ಬಿಟ್ಟು ಮತ್ತಾರಿಗೂ ಸುಳುವು ಕೊಡದಂತೆ ಕುಡಿಯಬೆಕೆಂದಿದ್ದ ನಮಗೆ  ಹೊರಗೆ ಬಂದವರಾರೆಂದು ತಿಳಿಯದೆ ದಿಗಿಲಾಯಿತು .ಎಲ್ಲರ ಗ್ಲಾಸ್ ಗಳನ್ನು ಅಡುಗೆ ಮನೆಯಲ್ಲಿ ಮುಚ್ಚಿಟ್ಟು  ಬಂದು ಸುಮ್ಮನೆ ಹರಟೆ ಹೊಡೆಯುವರಂತೆ ಮಾತಾಡುತ್ತ ಕುಳಿತಿರಿ ಎಂದು ಹೇಳಿ  ಬಾಗಿಲು ತೆರೆಯಲು ಹೋದೆ . ಹೊರಗೆ ಹಾಲಿನವ , ದಿನಾಲೂ ಬರುವ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಬಂದಿದ್ದ.. ಅವನು ಈ ಸಮಯದಲ್ಲಿ ಬರಬಹುದೆಂದು ಎಣಿಸದ ನಾನು ಕೋಪದಿಂದ ಕಾರಣ ಕೆಳಿದೆ. ಅವನ ಸಮಜಾಯಿಸಿಗೂ ನಿಲ್ಲದೆ ಧಡಾರನೆ ಬಾಗಿಲು ಹಾಕಿದೆ.

ಇಷ್ಟರಲ್ಲಿ ಎಲ್ಲರಿಗೂ ನಮ್ಮ ಕುಡಿತದ ಬಗೆಗಿರುವ ಕುತೂಹಲ ಪೂರ್ಣವಾಗಿ ನಶಿಸಿತ್ತು.  ಮತ್ತೆ ಕಿಚನ್ ಗೆ ಹೋಗಿ ನಮ್ಮ ನಮ್ಮ ಗ್ಲಾಸ್ ಗಳನ್ನು  ಬಾಯಿಗಿಟ್ಟು ನಿಧಾನವಾಗಿ ಒಂದು ಗುಟುಕು ಹೀರಿದೆವು . ಕಹಿಯಾದ ದ್ರಾವಣ ಬಾಯಿಗೆ ಎಳ್ಳಷ್ಟು ರುಚಿಸಲಿಲ್ಲ. ಅದರ ಬಣ್ಣ ಇಷ್ಟವಾದಷ್ಟು ರುಚಿ ಇಷ್ಟವಾಗಲೇ ಇಲ್ಲ.  ಹೇಗೋ ಗ್ಲಾಸ್ ನಲ್ಲಿರುವಷ್ಟು ಹೀರಿ ಊಟ ಮಾಡಿ ಮುಗಿಸಿದಾಗ ತಡರಾತ್ರಿಯಾಗಿತ್ತು.

ಪಕ್ಕದ ಮನೆಯಲ್ಲಿ ರಾತ್ತಿಯಾಗುತ್ತಲೆ ಶುರುವಾಗುವ ರಂಪಾಟ ಈ ದಿನ ತುಸು ಹೆಚ್ಚಾಗೆ ಕೇಳತೊಡಗಿತು.

ದಿನಾ ಕುಡಿದು ಬಂದು ಹೆಂಡತಿಗೆ ಪಿಡಿಸುವ ಗಂಡ ,ಸಹಿಸಿ ಬೆಸತ್ತು ಅವನೊಂದಿಗೆ ತಾನು ವಾಗ್ವಾದ ಕ್ಕಿಳಿಯುವ ಹೆಂಡತಿ , ಅಸಹಾಯಕ ಮಕ್ಕಳು .

ಸುತ್ತಲೂ ಇಂತಹ ಅನೇಕ ಘಟನೆ ನೋಡುವ ನಮಗೆ  ,ನಾವು ಕುಡಿದು ಸಾಧಿಸಿದ್ದೆನೆಂದು  ತಿಳಿಯಲಿಲ್ಲ.   ಇಂತಹ ಕುತೂಹಲಕ್ಕೆ ತಿಲಾಂಜಲಿ ಇಡಬೇಕೆಂದು ನಿರ್ದರಿಸಿ ಮೌನವಾದೆವು.

********************************

One thought on “ಪಾರ್ಟಿ

  1. ಹ…ಹ…ಹ… ತುಂಬಾ’ ರಸ’ ವತ್ತಾಗಿದೆ ನಿಮ್ಮ ಅನುಭವ.ಅದನ್ನು ಬರೆದು ಪ್ರಾಮಾಣಿಕ ರೀತಿ ಕೂಡ. ಈ ಪುರುಷರ ಜಗತ್ತಿನಲ್ಲಿ ಹೆಣ್ಣಿನ ಪ್ರತಿ ಪುಟ್ಟ ಕುತೂಹಲವೂ ಒಂದು ಸಾಹಸವಾಗಬಲ್ಲದು ಎಂಬ ಮಾರ್ಮಿಕ ವಿಡಂಬನೆ ಚೆನ್ನಾಗಿ ಮೂಡಿಬಂದಿದೆ.

Leave a Reply

Back To Top