ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ-11

ಆತ್ಮಾನುಸಂಧಾನ

ಕೇರಿ — ಕೊಪ್ಪಗಳ ನಡುವೆ….

ಬನವಾಸಿಯಿಂದ ಅಪ್ಪನಿಗೆ ಅಂಕೋಲಾ ತಾಲೂಕಿನ ಮಂಜಗುಣಿ ಎಂಬ ಊರಿನ ಶಾಲೆಗೆ ವರ್ಗವಾಯಿತು. ನಮ್ಮ ಪರಿವಾರ ನಾಡುಮಾಸ್ಕೇರಿಯಲ್ಲಿ ಮತ್ತೆ ನೆಲೆಸುವ ಅವಕಾಶ ಪಡೆಯಿತು. ಅಪ್ಪ ದಿನವೂ ಗಂಗಾವಳಿ ನದಿ ದಾಟಿ ಮಂಜಗುಣೆಯ ಶಾಲೆಗೆ ಹೋಗಿ ಬರುತ್ತಿದ್ದರೆ ನಾನು ಸಮೀಪದ ಜೋಗಣೆ ಗುಡ್ಡ’ ಎಂಬ ಭಾಗದಲ್ಲಿರುವ ಪೂರ್ಣ ಪ್ರಾಥಮಿಕ ಶಾಲೆಗೆ ಏಳನೆಯ ತರಗತಿಯ ಪ್ರವೇಶ ಪಡೆದುಕೊಂಡಿದ್ದೆ. ತಮ್ಮ, ತಂಗಿಯರು ಮನೆಯ ಸಮೀಪವೇ ಇರುವ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿಕೊಂಡರು.

            ನಾಡುಮಾಸ್ಕೇರಿಯ ವಾಸ್ತವ್ಯದ ಈ ಕಾಲಾವಧಿ ನನಗೆ ಕಲಿಸಿದ ಪಾಠ, ನೀಡಿದ ಅನುಭವ ಬಹಳ ಅಮೂಲ್ಯವಾದದ್ದು. ಇಲ್ಲಿ ಬಾಲ್ಯದ ಎಲ್ಲ ಸಂತಸದ ಅನುಭವಗಳೊಡನೆಯೇ ಅನೇಕ ಕಹಿ ಸಂದರ್ಭಗಳಿಗೂ ಮುಖಾಮುಖಿಯಾಗುವ ಅವಕಾಶ ಒದಗಿ ಬಂತು. ಜೀವ ವಿಕಾಸದ ಅನೇಕ ನಿಗೂಢತೆಗಳಿಗೆ ಮನಸ್ಸು ತೆರೆದುಕೊಂಡದ್ದೂ ಈ ಮಾಸ್ಕೇರಿಯಲ್ಲಿಯೇ.

            ೬೨-೬೩ ರ ನೆರೆ ಹಾವಳಿ ನಮ್ಮ ಊರಿನಲ್ಲೂ ಅನೇಕ ಅವಾಂತರಗಳನ್ನು ಸೃಷ್ಠಿಸಿತ್ತು. ನಮ್ಮ ಜಾತಿಯ ಹಲವಾರು ಕುಟುಂಬಗಳು ತಮ್ಮ ಸ್ವಂತದ್ದಲ್ಲದ ಒಡೆಯರ ತುಂಡು ಭೂಮಿಯಲ್ಲಿ ಅಲ್ಲಿ ಇಲ್ಲಿ ಗುಡಿಸಲು ಹಾಕಿಕೊಂಡು ಬಾಳುವೆ ನಡೆಸುತ್ತಿದ್ದರು. ಅವುಗಳೆಲ್ಲಾ ನೆರೆಹಾವಳಿಯಲ್ಲಿ ನಾಶವಾಗಿ ನೆಲೆ ಕಳೆದುಕೊಂಡಿದ್ದರು. ಪರಿಸ್ಥಿತಿಯನ್ನು ಅರಿತ ನಮ್ಮ ತಂದೆಯವರು ಓದು ಬರಹ ಬಲ್ಲವರಾದ್ದರಿಂದ ಬನವಾಸಿಯಲ್ಲಿ ಇರುವಾಗಲೇ ನಮ್ಮವರ ಕಷ್ಟಗಳು ಸರಕಾರಕ್ಕೆ ಮನವರಿಕೆಯಾಗುವಂತೆ ಅರ್ಜಿ ಬರೆದು ಎಲ್ಲರಿಗೂ ಜಮೀನು ಮತ್ತು ಮನೆ ಮಂಜೂರಿಯಾಗುವಂತೆ ಮಾಡಿದ್ದರು. ನಾವು ಮರಳಿ ನಾಡುಮಾಸ್ಕೇರಿಗೆ ಬಂದು ನೆಲೆಸುವ ಹೊತ್ತಿಗೆ ಎಲ್ಲ ನಿರಾಶ್ರಿತ ಕುಟುಂಬಗಳಿಗೆ ತಲಾ ಐದು ಗುಂಟೆ ಭೂಮಿ ಮತ್ತು ಜನತಾ ಮನೆಗಳು ಮಂಜೂರಿಯಾಗಿ ಮನೆ ಕಟ್ಟುವ ಕೆಲಸ ಆರಂಭವಾಗಿತ್ತು.

            ನಾಡು ಮಾಸ್ಕೇರಿಯ ನಾಡವರ ಕೊಪ್ಪದಿಂದ ಹಾರು ಮಾಸ್ಕೇರಿಯ ಬ್ರಾಹ್ಮಣರ ಮನೆಯವರೆಗೆ ವಿಶಾಲವಾದ ಬಯಲು ಪ್ರದೇಶವಿತ್ತು. ದನ-ಕರು ಸಾಕಿಕೊಂಡವರಿಗೆಲ್ಲ ಅದು ಗೋಮಾಳ’ದಂತೆ ದನ ಮೇಯಿಸುವ ಸ್ಥಳವಾಗಿತ್ತು. ಅದರ ಒಂದು ಭಾಗದಲ್ಲಿ ಆಗೇರರಿಗೆಲ್ಲಾ ಜಮೀನು ಹಂಚಿಕೆಯಾಗಿತ್ತು. ಉಳಿದ ಭಾಗವನ್ನು ಗೋಮಾಳವೆಂದೂ, ಆಟದ ಬಯಲು ಎಂದೂ ಬಿಟ್ಟಿದ್ದರು. ಹೀಗೆ ಊರಿನಲ್ಲಿ ಅಲ್ಲಿ ಇಲ್ಲಿ ಅನ್ಯರ ನೆಲದಲ್ಲಿ ಆಶ್ರಯ ಪಡೆದ ಆಗೇರರು ಒಂದು ನಿರ್ದಿಷ್ಟ ಸ್ಥಳದಲ್ಲಿ ಜನತಾ ಮನೆಗಳನ್ನು ಕಟ್ಟಿಕೊಂಡು ನೆಲೆಸುತ್ತಾ ಆಗೇರಕೇರಿ’ಯೊಂದು ನಿರ್ಮಾಣವಾಯಿತು.

            ಗೋಮಾಳದ ಬಯಲು ದಾಟಿದ ಬಳಿಕ ಒತ್ತಾಗಿ ಇರುವ ನಾಡವರ ಮನೆಗಳು ಮತ್ತು ಮನೆಯ ಸುತ್ತ ಸೊಂಪಾಗಿ ಬೆಳೆದು ನಿಂತ ತೆಂಗು, ಅಡಿಕೆ, ಬಾಳೆ ಮತ್ತಿತರ ಗಿಡಮರಗಳ ಕಾರಣದಿಂದ ಬಹುಶಃ ನಾಡವರ ಕೇರಿಯನ್ನು ಕೇರಿ’ ಎನ್ನದೆ ನಾಡವರ ಕೊಪ್ಪ’ ಎಂದು ಕರೆಯುತ್ತಿರಬೇಕು. ಕೇರಿಯ ಬಹುತೇಕ ಎಲ್ಲರೂ ಕೊಪ್ಪದ ಹಂಗಿನಲ್ಲೇ ಬಾಳಬೇಕಾದ ಅನಿವಾರ್ಯತೆ ಇದ್ದವರು. ನಾಡವರ ಕೃಷಿ ಭೂಮಿಯ ಕೆಲಸಗಳು, ಮನೆಯ ಕಸ ಮುಸುರೆ ಇತ್ಯಾದಿ ಕಾಯಕದಿಂದ ಆಗೇರರ ಬಹಳಷ್ಟು ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಹಾಗಾಗಿ ಕೇರಿ-ಕೊಪ್ಪಗಳ ನಡುವೆ ಸಹಜವಾಗಿಯೇ ವ್ಯವಹಾರಿಕ ಸಂಬಂಧ ಬೆಸೆದುಕೊಂಡಿತ್ತು. ನಮ್ಮ ಕೇರಿಯ ಬಹಳಷ್ಟು ಜನ ತಮ್ಮ ಮದುವೆಗಾಗಿ ಜಮೀನ್ದಾರರಾಗಿದ್ದ ನಾಡವರಿಂದ ಸಾಲಪಡೆದು ಗಂಡ ಹೆಂಡತಿ ಇಬ್ಬರೂ ಜೀತದ ಆಳುಗಳಾಗಿ ದುಡಿಯುತ್ತಿದ್ದರು. ಮುಂದೆ ಈ ದಂಪತಿಗಳಿಗೆ ಹುಟ್ಟಿದ ಮಕ್ಕಳು ಕೂಡಾ ಇದೇ ಒಡೆಯನ ಮನೆಯ ಆಳಾಗಿ ದುಡಿಯುತ್ತ ಅಗತ್ಯವಾದರೆ ತಮ್ಮ ಮದುವೆಗೂ ಒಡೆಯನಿಂದ ಸಾಲ ಪಡೆಯುತ್ತ ಜೀತ ಪರಂಪರೆಯನ್ನು ಬಹುತೇಕ ಮುಂದುವರಿಸುತ್ತಿದ್ದರು. ಸಾಲ ಪಡೆಯದೆ ಜೀತದಿಂದ ಹೊರಗಿದ್ದವರೂ ಕೂಡ ದೈನಂದಿನ ಅನ್ನ ಸಂಪಾದನೆಗಾಗಿ ಇದೇ ಒಡೆಯರ ಮನೆಗಳಲ್ಲಿ, ಹೊಲಗಳಲ್ಲಿ ಚಾಕರಿ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿದ್ದರು. ನಾಡವರ ಮನೆಗಳ ಕಸ-ಮುಸುರೆ, ತೋಟದ ಕೆಲಸ, ಬೆಸಾಯದ ಭೂಮಿಯಲ್ಲಿ ದುಡಿಮೆ ಇತ್ಯಾದಿಗಳನ್ನು ಮಾಡುತ್ತ ಕೇರಿಯ ಜನ ಕೊಪ್ಪದ ಯಜಮಾನರುಗಳೊಂದಿಗೆ ಅನ್ಯೋನ್ಯವಾಗಿಯೇ ಹೊಂದಿಕೊಂಡಿದ್ದರು. ಹಬ್ಬ-ಹುಣ್ಣಿಮೆ, ಯಜಮಾನರ ಮನೆಯ ಮದುವೆ, ಹರಿದಿನ ಮೊದಲಾದ ಸಮಾರಂಭಗಳಲ್ಲಿ ನಮ್ಮ ಕೇರಿಯ ಜನ ಪಾತ್ರೆಗಳನ್ನೊಯ್ದು ಒಡೆಯರ ಮನೆಗಳಿಂದ ಅನ್ನ, ಪಾಯಸ ಇತ್ಯಾದಿಗಳನ್ನು ಬಡಸಿಕೊಂಡು’ ಬಂದು ಮನೆ ಮಂದಿಯೆಲ್ಲ ಹಂಚಿಕೊಂಡು ಉಣ್ಣುತ್ತಿದ್ದರು. ದೀಪಾವಳಿ, ಯುಗಾದಿ, ಚೌತಿ, ತುಳಸಿ ಹಬ್ಬ ಮುಂತಾದ ವಿಶೇಷ ಹಬ್ಬಗಳ ದಿನ ಸಂಜೆಯ ಹೊತ್ತು ಕೇರಿಯ ಹೆಂಗಸರು ಮಕ್ಕಳೆಲ್ಲ ಒಂದೊಂದು ಹಚ್ಚಿಗೆ’ (ಬಿದಿರಿನ ಬುಟ್ಟಿ) ಅಥವಾ ಕೈಚೀಲ ಹಿಡಿದು ಕೊಪ್ಪದ ಮನೆಮನೆಯ ಮುಂದೆ ನಿಂತು ರೊಟ್ಟಿ ಬೇಡುವ’ ಅನಿಷ್ಟ ಪದ್ಧತಿಯೂ ಆಗ ಚಾಲ್ತಿಯಲ್ಲಿತ್ತು. ಇದು ಅತ್ಯಂತ ದೈನೇಸಿ ಕ್ರಮವೆಂಬ ಅರಿವಿಲ್ಲದೆ, ನನ್ನ ವಯಸ್ಸಿನ ಹುಡುಗರೂ ನಾಡವರ ಮನೆಗಳಿಂದ ಬೇಡಿ ತರುತ್ತಿದ್ದ ಬಿಳಿ ಬಿಳಿಯಾದ ರೊಟ್ಟಿಯ ಹೋಳುಗಳಿಗೆ ಆಸೆಪಟ್ಟು ನಾನೂ ಒಮ್ಮೆ ನಮ್ಮ ಗೆಳೆಯರ ತಂಡದಲ್ಲಿ ಸೇರಿಕೊಂಡು ರೊಟ್ಟಿ ಬೇಡಲು ಹೋಗಿ ಬಂದಿದ್ದೆ. ಕೆಲವು ಮನೆಗಳವರು ನನ್ನನ್ನು ಇಂಥವರ ಮಗ’ ಎಂದು ಗುರುತಿಸಿ ನನ್ನ ಕೈಚೀಲಕ್ಕೆ ಸ್ವಲ್ಪ ಹೆಚ್ಚಿನ ರೊಟ್ಟಿ ಹೋಳುಗಳನ್ನೇ ಅನುಗ್ರಹಿಸಿದ್ದರು! ನನಗೆ ಖುಷಿಯಾಗಿತ್ತು. ಆದರೆ ಮನೆಯಲ್ಲಿ ವಿಷಯ ತಿಳಿದಾಗ ದೊಡ್ಡ ರಂಪವೇ ಆಯಿತು. ಹೇಳಿ ಕೇಳಿ ನಾನೊಬ್ಬ ಸರಕಾರಿ ಸಂಬಳ ಪಡೆಯುವ ಮಾಸ್ತರನ ಮಗ. ನನ್ನಂಥವನು ಬೇಡಲು ನಿಂತದ್ದು ನನಗೂ, ನನ್ನ ತಾಯಿ, ತಂದೆಯರಿಗೂ ಅವಮಾನಕರ ಸಂಗತಿಯೇ. ಅಷ್ಟೆಲ್ಲಾ ಗಂಭೀರವಾಗಿ ಯೋಚಿಸುವ ತಿಳುವಳಿಕೆಯಾದರೂ ಎಲ್ಲಿತ್ತು? ಬರಿಯ ಬಾಯಿ ಚಪಲ ಮತ್ತು ಬೇಡುವುದೂ ಒಂದು ಆಟವೆಂಬಂತೆ ಗೆಳೆಯರೊಡನೆ ಹೊರಟುಬಿಟ್ಟಿದ್ದೆ. ಮನೆಯ ಮಾನ ಕಳೆದನೆಂದು ಅವ್ವ ಅಟ್ಟಾಡಿಸಿ ಹೊಡೆದಳು, ಅಪ್ಪ ಚೆನ್ನಾಗಿ ಬೈದಿದ್ದು, ಅಜ್ಜ ಕಣ್ಣೀರು ಹಾಕಿದ್ದ.

            ಆದರೆ ಅಂದು ನಮ್ಮ ಕೇರಿಯ ಜನಕ್ಕೆ ಬೇಡಿಕೆ’ ಎಂಬುದು ಹಸಿವಿನ ಅನಿವಾರ್ಯತೆಯಾಗಿತ್ತು. ಸರಿಯಾಗಿ ಅಕ್ಕಿಯ ಗಂಜಿ ಬೇಯಿಸಿ ತಿಂದರೆ ಅದೇ ಮೃಷ್ಟಾನ್ನ! ಬಹುತೇಕ ಅಕ್ಕಿಯ ನುಚ್ಚಿನ ಗಂಜಿ ಇಲ್ಲವೆ ಅಂಬಲಿ ಕುದಿಸಿ ಕುಡಿದು ದಿನಕಳೆಯುವ ಕೇರಿಯ ಜನಕ್ಕೆ ಮನೆಯಲ್ಲಿ ಒಂದು ದೋಸೆ ಮಾಡಿ ತಿನ್ನುವುದಕ್ಕೂ ಹಬ್ಬದ ದಿನಕ್ಕಾಗಿಯೇ ಕಾಯಬೇಕಿತ್ತು. ಅಂಥವರಿಗೆ ತಾವೇ ದುಡಿಯುತ್ತಿರುವ ಒಡೆಯರ ಮನೆಗಳಲ್ಲಿ ಬೇಡಿ ತಿನ್ನಲು ಯಾವ ಸಂಕೋಚವೂ ಆಗದಿರುವುದು ಸಹಜವೇ ಆಗಿತ್ತು. ಅಲ್ಲದೆ ಊರಿನ ಗ್ರಾಮದೇವತೆ ಮತ್ತು ಮನೆದೇವತೆಗಳ ಪೂಜಾ ದಿನಗಳಲ್ಲಿ ಆಗೇರರು ತಮ್ಮಲ್ಲಿರುವ ಹಲಗೆ ವಾದ್ಯ, ಪಂಚವಾದ್ಯಗಳನ್ನು ಬಾರಿಸುವ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೆ ದೇವರ ಪ್ರಸಾದವಲ್ಲದೆ ಬೇರೆ ಸಂಭಾವನೆ ನೀಡುತ್ತಿರಲಿಲ್ಲ. ಬಹುಶಃ ಇದೇ ಕಾರಣದಿಂದ ಸಂಕ್ರಾಂತಿ, ಯುಗಾದಿ, ಸುಗ್ಗಿ ಹಬ್ಬದ ದಿನಗಳಲ್ಲಿ ಆಗೇರರು ಬೇರೆ ಬೇರೆ ತಂಡಗಳಲ್ಲಿ ಪಂಚವಾದ್ಯ, ಹಲಗೆವಾದ್ಯಗಳನ್ನು ಮನೆ ಮನೆಯ ಮುಂದೆ ಬಾರಿಸಿ ದುಡ್ಡು, ಭತ್ತ ಅಥವಾ ಅಕ್ಕಿಯನ್ನೇ ಬೇಡಿ ಪಡೆದು ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಇದನ್ನು ಬೇಡಿಕೆ’ ಎಂದು ಕರೆದು ಸಾಂಪ್ರದಾಯಿಕ ಆಚರಣೆಯಂತೆಯೇ ನಡೆಸುತ್ತಿದ್ದರು. ಇದಕ್ಕೆ ಸಾಮಾಜಿಕವಾಗಿ ಗೌರವವೂ ಇತ್ತು ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ಕಾಲಮಾನದ ತೀವೃ ಬದಲಾವಣೆಗೆ ನನ್ನ ಕೇರಿಯೂ ಹೊರತಾಗಲಿಲ್ಲ. ಅಲ್ಲಿ ಶಿಕ್ಷಣ, ರಾಜಕೀಯ, ಸಾಮಾಜಿಕ ಜೀವನ ಕ್ರಮ ಎಲ್ಲದರಲ್ಲಿಯೂ ಬದಲಾವಣೆಗಳಾಗಿವೆ. ಆದರೆ ಕೇರಿಯ ಹಲಗೆವಾದ್ಯ’, ಪಂಚವಾದ್ಯ’ ತಂಡಗಳು ತಮ್ಮ ಅಂದಿನ ಬೇಡಿಕೆ’ಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡೇ ನಡೆದಿವೆ.

*************************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

12 thoughts on “

  1. ಒಂದು ಕ್ಷಣ ಕಣ್ಣು ಹನಿಗೂಡಿತು ….
    ಮತ್ತೇನೂ ಬರೆಯಲಾಗುತ್ತಿಲ್ಲ…

  2. ಬೆತ್ತಲಾಗಿಸಿದ ಅಂದಿನ ಆಗೇರರ ಜೀವನಚಿತ್ರಣ ಮನ ಮಿಡಿಯುವಂತಿತ್ತು.

  3. ಸರ್, ಈ ಜಾತೀಪದ್ದತಿ ಎಂಬ ಪೆಡಂಭೂತದ ಭೀಕರತೆ, ಜನಾಂಗದ ಜೀತ, ಬೇಡಿಕೆ ಎಲ್ಲ ಓದಿದಾಗ ಕಣ್ಣು ತೇವವಾಯಿತು. ಅಲ್ಲದೇ ಇವು ಇನ್ನಾದರೂ ಸಂಪೂರ್ಣ ಅಂತ್ಯ ಕಾಣಬೇಕು. ಜನರ ಮನಸ್ಥಿತಿ, ಸ್ವಾರ್ಥ ಬದಲಾಗಬೇಕು.

  4. ಚೆನ್ನಾಗಿ ಬಲಿತ ಬರಹ ಸರ್, ನಮ್ಮ ಊರಲ್ಲೂ ಪಂಚ ವಾದ್ಯ ಇದೆ.ಆಗೇರ ವಾದ್ಯ ಎಂದೇ ಹೆಸರಾಗಿತ್ತು.

  5. ನೋವಿನ ಬದುಕಿನ ಸಂಕೀರ್ಣ ಲಕ್ಷಣಗಳ ಸ್ವರೂಪವನ್ನು ಚಿತ್ರೀಕರಿಸಿದ ಅನುಭವವಾಯಿತು.

  6. Sir, the slavery which we see in Bollywood movies and condemn, that is taking place in my neighborhood only ?
    Why nobody is talking about it…

Leave a Reply

Back To Top