ಅಂಕಣ ಬರಹ

ಮುಗಿಲ ಪ್ರೇಮದಿ ಕಳೆಗಟ್ಟಿತು ಇಳೆ

ನನ್ನ ಅರಳಿದ ಬೊಗಸೆಯೊಳಗೆ ಅವಳು ಸುರಿದ ಹಣದಲ್ಲಿ  ಮಡಚಿದ ಹತ್ತು, ಐದು, ಎರಡು, ಒಂದರ ‌ನೋಟುಗಳು. ಅಘ್ರಾಣಿಸಿದರೆ ಅವಳ ಬೆವರು ಹಾಗೂ ಹಸುಗಳ ಉಸಿರನ ಪರಿಮಳ ಬೆರೆತುಬಂದಂತೆ.

ಆ ದಿನ ಬೆಳಗ್ಗೆ ನನ್ನಜ್ಜಿ ನನ್ನನ್ನು ಹತ್ತಿರ ಕರೆದು ಕೂರಿಸಿಕೊಂಡಳು “ಬಾಳೀ, ನಿನ್ನ ಶಾಲೆಯಲ್ಲಿ ಇವತ್ತು ಗಮ್ಮತ್ತು ಅಲ್ವಾ. ನೀನು ಕಲಾವಿದೆ. ತಗೋ 100 ರೂಪಾಯಿ. ಇವತ್ತು ಹೊಸ ದಿರಿಸು ತಗೋ. ನಿನ್ನಿಷ್ಟದ್ದು. ಅದನ್ನು ಹಾಕಿಕೊಂಡು ಹೋಗು. ನೋಡು,ನಿನ್ನ ಖುಷಿ  ಮತ್ತಷ್ಟು ಜಾಸ್ತಿಯಾಗಲಿ.”

ಆಗೆಲ್ಲ ಹೊಸ ವಸ್ತ್ರ ಬರುವುದು ವರ್ಷಕ್ಕೊಮ್ಮೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ. ಈಗ ಸಿಕ್ಕಿದ್ದು ಬೋನಸ್. ಅದು ನನ್ನಜ್ಜಿ ಹಾಲು ಮಾರಿ ಬಂದ ಹಣದಲ್ಲಿ ಉಳಿತಾಯ ಮಾಡಿದ ಕಾಸು. ಅವಳ ಕಣ್ಣಲ್ಲಿ ನನಗಾಗಿ ಬೆಳಗುವ ದೀಪಾವಳಿ.

ಅಮ್ರಪಾಲಿ ನಾಟಕದ ಗುಂಗಿನಲ್ಲಿ ನನ್ನ ಶಾಲಾ ದಿನಗಳು ಚಿಗುರುತ್ತಲೇ ಇದ್ದವು. ಶಾಲೆಯ ಪಕ್ಕದಲ್ಲಿ ಕೆರೆ- ದಡ ಆಟಕ್ಕೆ ಮಕ್ಕಳು ಕೈಕೈ ಬೆಸೆದು ನಿಂತಂತೆ ,ರೈಲಿನ ಬೋಗಿಗಳ ಕೊಂಡಿ ಹೆಣೆದಂತೆ ಒಂದೇ ಬಣ್ಣ ಬಳಿದುಕೊಂಡ ಉದ್ದನೆಯ ಸಾಲು ಸಾಕು ಮನೆಗಳು. ಕೊಂಡಿ ಸಿಕ್ಕಿಸಿದಂತೆ ನಡುನಡುವೆ ಹದಿಹರೆಯದ ಪೇರಳೆ ಗಿಡಗಳು. ಒಂದೊಂದು ಮನೆಯ ಕಿಟಕಿ, ಬಾಗಿಲಿಗೆ ಮನಸ್ಸು ಆನಿಸಿದರೆ‌ ಮೆಲ್ಲಮೆಲ್ಲನೆ ಒಂದೊಂದು ಬಗೆಯ, ರುಚಿಯ ಕಥೆಗಳು ಆಕಳಿಕೆ ಮುರಿದು ತೆರೆದುಕೊಳ್ಳುತ್ತವೆ. ಅಲ್ಲಿ ರಂಗಿನೊಡನೆ ಸ್ಪರ್ಧಿಸುವ ಹೂವುಗಳು,  ಹೂಗಳನ್ನು ನೇವರಿಸುವ ಹುಡುಗಿಯರು.

ಸಂಜೆಯ ಹೊತ್ತು ಮನೆಗಳ ಹಿಂದೆ ಇರುವ ಖಾಲಿ ಜಾಗದಲ್ಲಿ  ಹುಡುಗರು, ಗಂಡಸರು ವಾಲಿಬಾಲ್ ಆಟ ಆಡಿದರೆ ಹುಡುಗಿಯರು ಸೇರಿಕೊಂಡು ಕಾಲೇಜಿನಲ್ಲಿ ನಡೆದ ಪ್ರಸಂಗಗಳು, ಹುಡುಗರ ಕೀಟಲೆ, ತಮ್ಮ ಪ್ರತಿಕ್ರಿಯೆ, ಹೀಗೆ ರಾಶಿ ಮಾತುಗಳನ್ನು ಪೇರಿಸಿ ಕೆನ್ನೆ ಕೆಂಪಾಗಿಸಿ ಮನಸ್ಸಿಗೆ ಯಾವು ಯಾವುದೋ ಹೊಸ ಹೊಸ ಕುಡಿಮೀಸೆಯ ಮುಖಗಳನ್ನು ತೂಗು ಹಾಕುತ್ತಿದ್ದರು. ಒಂದು ವಾರ ಬಿಟ್ಟು ನೋಡಿದರೆ ಆ ಮಾತಿನ ಒಂದಿಷ್ಟೂ ಗುರುತು ಸಿಗದಂತೆ ನವನವೀನ ಪ್ರಸಂಗಗಳು, ಜುಳುಜುಳು ನಗೆ, ಗಲಗಲ ಮಾತು ಹರಿಯುತ್ತಿತ್ತು. 

ಅದೆಷ್ಟು ಹುಡುಗಿಯರು ಮಂಜುಳ, ಕವಿತಾ, ಮೀನಾ,ಸರೋಜ,ಮಲ್ಲಮ್ಮ ಎಲ್ಲರೂ ಆ ಸರಕಾರಿ ವಸತಿಗೃಹಗಳ ಜೀವ ಕುಸುಮಗಳು. ಅವರ ಅಣ್ಣ, ಅಪ್ಪ, ಚಿಕ್ಕಪ್ಪ, ಮಾವ ಹೀಗೆ ಮನೆಯ ಸದಸ್ಯರೊಬ್ಬರು ಸರಕಾರಿ ಹುದ್ದೆಯಲ್ಲಿದ್ದ ಕಾರಣ ಆ ಸರಪಳಿ ಸಿಕ್ಕಿಸಿ ನಿಂತ ಮನೆಗಳಲ್ಲಿ ಇವರಿದ್ದಾರೆ.  ನಮ್ಮೂರು ಅವರಿಗೆ ಸಾಕುತಾಯಿ.  ಅಲ್ಲೇ ಆ ದೊಡ್ಡ ಬೇಲಿಯ ಗಡಿ ದಾಟಿ‌ರಸ್ತೆಗೆ ಬಂದು ನಿಂತರೆ ಆಗಷ್ಟೆ ಸಣ್ಣ ಹಾಡಿಯಂತಿದ್ದ ಜಾಗ ಸಮತಟ್ಟಾಗಿ ಗೆರೆಮೂಡಿಸಿ ಮೂರು ಮನೆಗಳು ತಲೆಎತ್ತಿ ಕೂತಿದೆ. ಅದರಲ್ಲೊಂದು‌ ನಮ್ಮ‌ಮನೆ.

ಹತ್ತರ ಪಬ್ಲಿಕ್ ಪರೀಕ್ಷೆಯ ಗೇಟು ದಾಟಿ ಬಾಲ್ಯದ ಭಾವಗಳನ್ನು ಕಳಚಿ ಪೀಚಲು ಕನಸಿನ ಜೋಳಿಗೆ ಬಗಲಲ್ಲಿಟ್ಟು ಕಿರಿಯ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಕಣ್ಣಿಗೆ ಕಾಣುವ ಬಣ್ಣಗಳಿಗೆ ನೂರೆಂಟು ತಡೆಗೋಡೆಗಳು. ಆದರೂ ಮೂಲೆ ಮೂಲೆಯ ಕಚಗುಳಿ ಮುಚ್ಚಟೆಯಾಗಿ ಎದೆಗಾನಿಸಿ ಸುಳ್ಳುಪೊಳ್ಳು ನಗೆಯಿಂದ ರಂಗೋಲಿ ಅರಳುತ್ತಿತ್ತು. ಚುಕ್ಕಿಚುಕ್ಕಿಗಳ ಸೇರ್ಪಡೆಯಿಂದ ವಿಸ್ತರಿಸುತ್ತಿತ್ತು.

ಈ ಚುಕ್ಕಿಗಳದ್ದೇ ರಾಜ್ಯ ಅಲ್ಲಿ. ಆ ಸಮವಸ್ತ್ರತೊಟ್ಟ ಮನೆಗಳ ಸಾಲಿನಲ್ಲಿತ್ತು. ಅಲ್ಲಿಗೆ ಸಂಜೆಯ ಸಮಯ ಮೆಲ್ಲಡಿಯಿಡುತ್ತ ಹೋಗುವುದು. ಸುಮ್ಮಸುಮ್ಮನೆ ಹೋಗುತ್ತಿರಲಿಲ್ಲ. ಹಾಗೆ ಹೋಗುವುದಕ್ಕೂ ಬಲವಾದ ಕಾರಣ ವೂ ಇತ್ತು.

ಆ ಸಮಯ ನನ್ನಜ್ಜ ಅಜ್ಜಿ ಒಂದಷ್ಟು ದನಗಳನ್ನು ಸಾಕುತ್ತಿದ್ದರು. ಆ ದನಗಳು ನಮ್ಮ‌ಮನೆಯ ಆರ್ಥಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದವು. ಸಂಜೆ ಕಾಲೇಜಿನಿಂದ ಬಂದ‌ ನನಗೆ ಈ ಬೇಲಿಯೊಳಗಿನ ಮನೆಮನೆಗಳಿಗೆ ಹಾಲು ಸರಬರಾಜು ಮಾಡುವ ಕೆಲಸ.

 ಇದು ಎರಡು ಮೂರು ಟ್ರಿಪ್ ಆಗುವುದೂ ಇದೆ.

ಎರಡೂ ಕೈಗಳಲ್ಲಿ ಹಾಲು ತುಂಬಿದ ತಂಬಿಗೆಯ ಬಾಯಿಗೆ ನನ್ನ ಬೆರಳುಗಳ ಮುಚ್ಚಳ ಸೇರಿಸಿ ಹೋಗುತ್ತಿದ್ದೆ. ಮನೆ ಮನೆಯ ಬಾಗಿಲಲ್ಲಿ ನಿಂತು ” ಹಾಲೂ..” ಎಂದು ಮನೆಯವರನ್ನು ಕೂಗುವುದು. ಅಮ್ಮನಂತವರು,ಅಕ್ಕನಂತವರು ಮಾತ್ರವಲ್ಲ ಅಪರೂಪಕ್ಕೆ ಹುಲಿಕಣ್ಣಿನ ಗಂಡುಗಳೂ ಆ ಮನೆಯ ಗುಹೆಗಳಲ್ಲಿ ಕಂಡಿದ್ದೂ ಇದೆ. ಇಲ್ಲಿಯೇ ಬಿಳೀ ಬಣ್ಣದ ದಪ್ಪ ದೇಹದ ನಳಿನಿ ಆಂಟಿ ನನಗೆ ಬದುಕಿನ ಮೊದಲ ವ್ಯಾನಿಟಿ ಬ್ಯಾಗ್ ಕೊಟ್ಟು ನಕ್ಕಿದ್ದರು. ಎಂತಹ ಖುಷಿಯದು. ಗಾಢ ನೀಲಿ ಬಣ್ಣದ ಜಂಭದ ಚೀಲ. ಅದುವರೆಗೆ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಅದನ್ನು ಎದೆಗಾನಿಸಿಕೊಂಡು ಹೋಗುತ್ತಿದ್ದೆ. ಈಗ ಪುಸ್ತಕಗಳಿಗೂ ವಿಶ್ರಾಂತಿಗೆ, ಪಯಣಕ್ಕೊಂದು ಗೂಡು. ಚಲಿಸುವ ಮನೆ ಸಿಕ್ಕಿತು. 

ಈ ಬಾಗಿಲು ತಟ್ಟುವ ಕಾಯಕ  ಮುಗಿಸಿದ ನಂತರ ಸ್ವಲ್ಪ ಹೊತ್ತು ಹೆಣ್ಮಕ್ಕಳ ಮೀಟಿಂಗ್. ನನಗಿಂತ ಒಂದು, ಎರಡು ವರ್ಷ ಕಿರಿಯರು, ಹಿರಿಯರು ಪಾಲ್ಗೊಳ್ಳುವ ಸಭೆಯದು. ಪ್ರತಿಯೊಂದು ಕುಸುಮ ಕುಸುಮಿಸುವ ಪರಿ ಭಿನ್ನ. ಇಳೆ ಒರತೆ ತುಂಬಿಕೊಳ್ಳುವ ಕಾಲ.

ನಮ್ಮ ಶಾಲೆ ಕಾಲೇಜುಗಳೂ ಬೇರೆಬೇರೆ. ನಾವು ಈ ಹುಡುಗರು ವಾಲಿಬಾಲ್ ಆಡುವ ಜಾಗದ ಒಂದು ಮೂಲೆಯಿಂದ ಆಚೀಚೆ ಹೋಗುವ ಪ್ರಸಂಗಗಳೂ ಇದ್ದವು. ಆಗೆಲ್ಲ ಅವ್ಯಕ್ತ ಕಂಪನಕ್ಕೆ ಕಳೆಗಟ್ಟುವ ಎಳೆ ಮನಗಳು ನಮ್ಮವು. ತಲೆಎತ್ತಿ ಅಲ್ಲಿರುವ ಗಂಡುಹುಡುಗರಿಗೆ ದೃಷ್ಟಿ ಕೂಡಿಸುವ ದಾರ್ಷ್ಟ್ಯವು  ಆ ನಾಜೂಕು ಹುಡುಗಿಯರಿಗೆ ಇರಲಿಲ್ಲ. ಆ ಹುಡುಗರೂ ಜೋರಾಗಿ ದೂರು ಕೊಡುವ ಮಟ್ಟದ ಕೀಟಲೆ ಮಾಡಿದ್ದೂ ಇಲ್ಲ. 

ಈ ನಮ್ಮಹುಡುಗಿಯರ ಬೈಠಕ್ ನಲ್ಲಿ ಒಂದು ವಿಶೇಷತೆಯಿತ್ತು. ನಮ್ಮ ಜೊತೆ ಬಿಂದು ಎಂಬ ಒಬ್ಬ ಹುಡುಗನಿದ್ದ.  ರಂಗಕ್ಕೆ ಎಳೆದೊಯ್ದರೆ ಕೃಷ್ಣನ ಪಾತ್ರಕ್ಕೆ ಹೊಂದುವಂತಹ ಮುಖ. ನಸುಗಪ್ಪು ಬಣ್ಣ. ನಗುತುಂಬಿದ ಕಣ್ಣುಗಳು.  ನಮ್ಮೆಲ್ಲರಿಗೂ ಆತ್ಮೀಯ ಸ್ನೇಹಿತ. ನಮ್ಮ ಹೆಚ್ಚಿನ ಮಾತುಗಳಿಗೆ ನಮ್ಮ ಭಾವ ತುಡಿತಗಳೊಂದಿಗೆ ಒಂದಾಗುವ, ಸಲಹೆ ನೀಡುವ ಗೆಳೆಯ. ಬಲು ಚಿಕ್ಕವನಿರುವಾಗ ಪೋಲಿಯೊದಿಂದ ಒಂದು ಕಾಲು ತುಸು ಎಳೆದಂತೆ ನಡೆದಾಡುತ್ತಿದ್ದ. ಹುಡುಗರ ಆಟಕ್ಕೆ ಅವನು ನಿಷೇದಿಸಲ್ಪಟ್ಟಿದ್ದ.   ಆ ಸಮಯದಲ್ಲಿ ನಾನು ಗುಂಪಿನ ಒಳ್ಳೆಯ ಕೇಳುಗಳು. ಜೊತೆಗೆ ಉಳಿದವರಿಗಿಂತ ಚೂರು ಕಮ್ಮಿ ಕಥೆಗಳು ನನ್ನಲ್ಲಿ ಶೇಖರಿಸಲ್ಪಟ್ಡಿದ್ದವು. ಅಲ್ಲದೆ ಕಥೆಯ ಅಂಚಿಗೆ ಬಂದು ಕೂರುವ ಭಾವಗಳೂ ಎದೆಕಡಲಿನಿಂದ ನೆಗೆದು ಹೊರಬರಲು ಹವಣಿಸಿದರೂ ತುಟಿಗಳಿಗೆ ಅದೃಶ್ಯ ಹೊಲಿಗೆ ಹಾಕಿದಂತಾಗಿ ಮೌನದ ನಾದಕ್ಕೆ ಮನ ಜೋಡಿಸಿಕೊಂಡಿದ್ದೆ.

ಭಾವನ ತಮ್ಮನೊಂದಿಗಿನ ಒಲವಿನ ಮಾತು, ಕದ್ದು ಕೊಟ್ಟ ಮುತ್ತು, ಸಿಹಿ ಮಾತನಾಡಿ ಬೇರೆ ಹೆಣ್ಣಿನ ಚಿತ್ರ ತೋರಿಸಿದ ಅತ್ತಿಗೆಯ ತಮ್ಮ,  ಕಾಲೇಜಿಗೆ ಬಂದ ವಿದೇಶಿ ವಿದ್ಯಾರ್ಥಿ ಅವನೊಂದಿಗೆ ಬದಲಾಯಿಸಿಕೊಂಡ ಪುಸ್ತಕ, ಚಾಕಲೇಟು, ಬಸ್ ನಿಲ್ದಾಣದವರೆಗಿನ ಜೊತೆ ಹೆಜ್ಜೆಗಳು ಹೀಗೇ  ಏನೇನೋ ಹಂಚಿಕೆಗಳು ಮಾತಿಗೆ ಕಂಪು ಬೆರೆಸುತ್ತಿದ್ದವು.

 ಮೊದಲ ವರ್ಷದ ಪಿ.ಯು.ಸಿ ಇರುವಾಗ ಮತ್ತೆ ಬಂದಿತು ವಾರ್ಷಿಕೋತ್ಸವ. ಸಂಭ್ರಮವೋ ಸಂಭ್ರಮ. ನಾನೀಗ ಹಿರಿಯ ವಿದ್ಯಾರ್ಥಿನಿಯರ ಪಟ್ಡಿಯಲ್ಲಿದ್ದೆ.  “ಸ್ಕೂಲ್ ಡೇ” ಅಂದರೆ ನಾಟಕವಿದೆ. ನಾಟಕ ಇದ್ದ ಮೇಲೆ ನಾನೂ ಇರಲೇಬೇಕು. ಮನಸ್ಸು ತಕತಕ ಕುಣಿಯುತ್ತಿತ್ತು.  “ಬೌಮಾಸುರ” ಎಂಬ ನಾಟಕ. ಬೌಮಾಸುರ ದ್ವಿತೀಯ ಪಿ.ಯು. ವಿದ್ಯಾರ್ಥಿನಿ. ಎತ್ತರಕ್ಕಿದ್ದಳು. ಅವಳ ಸ್ವರವೇ ತುಸು ಗಡಸು. ನನಗೆ ಪ್ರಥ್ವೀದೇವಿ ಪಾತ್ರ. ಸೌಮ್ಯ ಪಾತ್ರ, ಪುಟ್ಟ ದೇಹದ ನಾನು ಭೂತಾಯಿ. ಬೌಮಾಸುರನ ಮಾತೆ. 

ರಿಹರ್ಸಲ್ ಗಳು ಆರಂಭವಾದವು. ಮೇಘರಾಜನಿಗೆ ಪ್ರಥ್ವೀದೇವಿಯಲ್ಲಿ ಪ್ರೀತಿ ಅಂಕುರಿಸಿ ಜಲಲ ಝಲಲ ಜಲಧಾರೆ. ನೆಲ.ಮುಗಿಲಿನ ಸಂಗಮಕೆ ಜನಿಸಿದ ಅಸುರ ಭೌಮಾಸುರ. ಆಗೆಲ್ಲ ಕಾಲೇಜಿನ ಕಾರಿಡಾರ್ ನಲ್ಲಿ ನಾನು ನಡೆಯುತ್ತಿದ್ದರೆ ನನ್ನ ನಡೆಯ ಶೈಲಿಯೇ ಬದಲಾದಂತೆ ಮನಸ್ಸಿಗೆ ಅನಿಸುತ್ತಿತ್ತು. ನಾನು ಬೇ..ರೆಯೇ, ಇವರೆಲ್ಲರಿಗಿಂತ ಭಿನ್ನ, ನಾನು ಪ್ರಥ್ವೀದೇವಿ. ಕನಸಿನಲ್ಲೇ ನನ್ನ ಇರುವಿಕೆ. ಊಟ, ತಿಂಡಿ, ಓದು ಎಲ್ಲವೂ. ಒಂದು ಸುಂದರ ರಾಗ, ಪಾತ್ರಾನುರಾಗ ನನ್ನ ಜೀವವನ್ನು ತೊನೆದಾಡಿಸುತ್ತಿತ್ತು.

ವಾರ್ಷಿಕೋತ್ಸವದ ದಿನ ನಮಗೆ‌ ಸಂಜೆ ಆರುಗಂಟೆಗೆ ಬರುವಂತೆ ಸೂಚನೆ ನೀಡಲಾಗಿತ್ತು.  ಹಗಲಲ್ಲೂ ಸಣ್ಣ ಹೆದರಿಕೆಯ ಜೊತೆ ಬೆಸೆದುಕೊಂಡ ದೊಡ್ಡ ಸಂತಸದಲ್ಲಿ ಆಡುತ್ತಿದ್ದೆ. ಮನೆಯಲ್ಲಿ ಯಾರಾದರೂ ಕುಡಿಯಲು ನೀರು ತರಲು ಹೇಳಿದರೂ ಹೋದವಳು ಅಲ್ಲಲ್ಲೇ ಸ್ತಬ್ದಳಾಗಿ ಮನಸ್ಸಿನಲ್ಲಿ ಪ್ರಥ್ವಿದೇವಿಯ ಮಾತುಗಳೇ ಕುಣಿದು, ಮುಖ, ಕಣ್ಣಿನಲ್ಲಿ ಅದರ ಪ್ರತಿಫಲನ. ಮನೆಯವರು ಹತ್ತಿರ ಬಂದು ಎಚ್ಚರಿಸಬೇಕು.

 ಈ ಸಂದರ್ಭದಲ್ಲಿಯೇ, ನನ್ನ ಉಡುಪಿಗಾಗಿ, ಅಜ್ಜಿ ಮಡಿಲು ಬಸಿದು ಕೊಟ್ಟದ್ದು ನೂರು ರುಪಾಯಿ.

ಅದುವರೆಗೂ ನಾನು ಅಂಗಡಿಗೆ ಹೋಗಿ ಡ್ರೆಸ್ ತಗೊಂಡವಳಲ್ಲ. ಏನಿದ್ದರೂ ಮನೆಯಲ್ಲಿ ತಂದದ್ದು, ಇಲ್ಲವಾದರೆ ಬಾಬಣ್ಣನ ಅಂಗಡಿಯಲ್ಲಿ ಮಾವನವರ ಹಳೆಯ ಪ್ಯಾಂಟ್ ಕೊಟ್ಟು ಅದರಲ್ಲಿ ಸ್ಕರ್ಟ್ ಅವರ ಷರ್ಟ್ ನಲ್ಲಿ ಬ್ಲೌಸ್ ಹೊಲಿಸುವುದು ವಾಡಿಕೆ.

 ” ಅಮ್ಮಾ ಯಾರು ತಂದು ಕೊಡ್ತಾರೆ..”ಅಂತ ನಾನಂದರೆ,”ನೀನೇ ಪ್ರಭಾವತಿ ಒಟ್ಟಿಗೆ ಹೋಗಿ ತಾ”ಎಂದಳು.

ನಮ್ಮ ಮನೆಯ ಹಿಂದೆ ಗೆಳತಿ ಪ್ರಭಾ ಮನೆ. ಓಡಿದೆ. ಅವಳು ಅವಳಮ್ಮನ ಹತ್ತಿರ ಒಪ್ಪಿಗೆ ಪಡೆದು ಇಬ್ಬರೂ ಸೇರಿ ರೆಡೆಮೇಡ್ ಬಟ್ಟೆ ಅಂಗಡಿಗೆ ಹೋದೆವು. ರಾಶಿ ಹಾಕಿದ ಡ್ರೆಸ್ಸಗಳ ನಡುವೆ ಆರಿಸುವುದು ಹೇಗೆ? ಆಗೆಲ್ಲ ಟ್ರಾಯಲ್ ರೂಮ್ ಗೆ ಹೋಗಿ ದಿರಿಸಿನ ಅಳತೆ ಸರಿಯಾಗಿದೆಯೇ ಎಂದು ಪರೀಕ್ಷೆ ಮಾಡಿ ಕೊಳ್ಳಲು ಸಾಧ್ಯ ಎಂಬುದು ನಮ್ಮ ಅರಿವಿನ ಸರಹದ್ದಿಗಿಂತಲೂ ಬಹಳ ದೂರದ ಮಾತು.  ಒಟ್ಟಾರೆ ಗೊಂದಲ. ಕೊನೆಗೂ ಕಡುಕೆಂಪು ಬಣ್ಣದ ಚೂಡೀದಾರ ಆರಿಸಿ  ಬಹಳ ಸಂಭ್ರಮದಿಂದ ಮನೆಗೆ ಬಂದೆವು. ಮನೆಗೆ ಬಂದು ಹಾಕಿದರೆ ನಾನು, ಪ್ರಭಾವತಿ ಇಬ್ಬರೂ ಅದರ ಬಸಿರಲ್ಲಿ ಆಶ್ರಯ ಪಡೆಯಬಹುದು. ಅಷ್ಟು ಅಗಲದ ಕುರ್ತಾ, ಕೆಳಗೆ ದೊಗಳೆ ಪ್ಯಾಂಟ್. ಬೆರ್ಚಪ್ಪನಿಗೆ ಅಂಗಿ ತೊಡಿಸಿದಂತೆ ಕಾಣುತ್ತಿದ್ದೆ.

ಆದರೇನು ಮಾಡುವುದು ಸಂಜೆಯಾಗಿದೆ. ಒಳಲೋಕದಲ್ಲಿ ಪ್ರಥ್ವೀದೇವಿಯ ಗಲಾಟೆ ನಡೆಯುತ್ತಲೇ ಇದೆ. ಗೆಳತಿಯರಿಗೆಲ್ಲ ಬರಲು ಒತ್ತಾಯಿಸಿ ಆಗಿದೆ. “ಬಿಂದು” ನನ್ನ ಜೊತೆಗೆ ನನ್ನ ನಾಟಕದ ಕೆಲವುಸಾಮಾಗ್ರಿಗಳ ಚೀಲ ಹಿಡಿದು ತಯಾರಾದ. ಅವನಿಗೆ ನನಗಿಂತ ಹೆಚ್ಚಿನ ಉತ್ಸಾಹ, ತಳಮಳ.  ಗಳಿಗೆ ಗಳಿಗೆಗೆ ನೆನಪಿಸುತ್ತಿದ್ದ. ಚೆಂದ ಮಾಡು ಮಾರಾಯ್ತೀ, ಚೆಂದ ಮಾಡು. ಎಲ್ಲರಿಗಿಂತ ನಿನ್ನ ಆಕ್ಟ್‌ ಚೆಂದ ಆಗಬೇಕು. ಅಜ್ಜಿಯ ಕಾಲಿಗೆ ವಂದಿಸಿ ನಾವು ಹೊರಟೆವು.

ಮಂದ ಕತ್ತಲು ಇಳಿಯುತ್ತಿತ್ತು. ಹೊಸ ಚೂಡೀದಾರದ ಪರಿಮಳ ಹೊಸತನದ ನಶೆ ಬೀರುತ್ತಿತ್ತು. “ತಡವಾಯಿತು.. ಬೇಗ ಬಿಂದೂ”ಎಂದು ವೇಗದ ಹೆಜ್ಜೆ ಹಾಕುತ್ತಿದ್ದೆ.  ಮುಖ್ಯರಸ್ತೆಗೆ ಇನ್ನೇನು ತಲುಪಿದೆವು ಅನ್ನುವಾಗ ” ಫಟ್” ಎಂದಿತು. ನಾನು ಥಟ್ಟನೆ ನಿಂತೆ. ಪಾದಗಳು ಒಂದಕ್ಕೊಂದು ಜೋಡಿಸಿದಂತೆ ಇಟ್ಟಿದ್ದೆ. ದೀನಳಾಗಿ ಸ್ನೇಹಿತನ ಮುಖ ನೋಡಿದೆ. ಅವನಿಗೇನೂ ಅರ್ಥವಾಗ ” ಎಂತಾಯ್ತು, ಹೋಗುವ ಮಾರಾಯ್ತಿ” ಎನ್ನುತ್ತಾನೆ.

ಎಲ್ಲಿಗೆ ಹೋಗುವುದು. ಹೆಜ್ಜೆ ಮುಂದಿಡುವುದು ಸಾಧ್ಯವೇ ಇಲ್ಲ. ಚೂಡಿದಾರದ ಪ್ಯಾಂಟಿನ ಲಾಡಿ ಒಳಗೇ ತುಂಡಾಗಿ ಬಿಟ್ಟಿದೆ. ಹಾಗೇ ನಿಲ್ಲುವ ಹಾಗಿಲ್ಲ. ಮುಂದೆ ಹೋಗುವ ಹಾಗೂ ಇಲ್ಲ.ಪ್ಯಾಂಟ್ ಕೆಳಗೆ ಬೀಳುವ ಹೆದರಿಕೆ. ವಿಪರೀತ ಭಯದಲ್ಲಿ ಕಣ್ಣು ತುಂಬಿತ್ತು.

 ” ಬಿಂದೂ..” ಏನು ಹೇಳುವುದು..ಸರಿಯಾಗಿ ಹೇಳಲೂ ಆಗದೇ “ಪ್ಯಾಂಟ್ ತುಂಡಾಯಿತು”  “ಬೇಗ ಬೇಗ ನಡೀ ಕಾಲೇಜಿಗೆ ಎಂದ.

ನನ್ನ ಸಂಕಟ ಹೆಚ್ಚುತ್ತಿತ್ತು. ಹೊಟ್ಟೆ ನೋವಿನಿಂದ ನರಳುವವರ ಹಾಗೆ ಪ್ಯಾಂಟ್ ಬೀಳದಂತೆ ಹೊಟ್ಟೆ ಹಿಡಿದುಕೊಂಡೆ. ಆದರೆ ನಡೆಯುವುದು ಕಷ್ಟ. ಊರೆಲ್ಲ ನನ್ನನ್ನೇ ನೋಡುವುದು ಎಂಬ ಭಾವದಿಂದ ನಾಚಿಕೆ,ಅವಮಾನದ ಸಂಕಟದಿಂದ ಬಿಕ್ಕಳಿಸತೊಡಗಿದೆ.

“ಎಂತಾಯ್ತ..ಎಂತಾಯ್ತಾ” ಕೇಳುತ್ತಿದ್ “ನಡೆಯಲು ಆಗುವುದಿಲ್ಲ” ಎಂದೆ. ಸುತ್ತ ನೋಡಿದ. ಅಲ್ಲಿ ಮೂಲೆಯಲ್ಲಿ ಪಾಳು ಬಿದ್ದ ಚಿಕ್ಕ ಅಂಗಡಿಯಂತಹ ಮನೆಯಿತ್ತು. ಆದರೆ ಅದು ಮುಖ್ಯರಸ್ತೆಯ ಬಳಿಯಲ್ಲೇ.” ಬಾರಾ..ಅಲ್ಲಿ ನಾನು ಅಡ್ಡ ನಿಲ್ತೇನೆ. ನೀನು ಏನಾದರೂ ಸರಿ ಮಾಡು”. ಎಂದ.

ಅರೆ ಜಾರಿದ ಡ್ರೆಸ್ ಕುರ್ತಾದ ಮೇಲಿನಿಂದ ಮುಷ್ಠಿಯಲ್ಲಿ ಹಿಡಿದಂತೆ ಹಿಡಿದು ಕಾಲು ಒಂದೊಂದೇ ಹೆಜ್ಜೆ ನಿಧಾನ ಎಳೆಯುತ್ತಾ ಬದಿಗೆ ಹೋದೆವು.

ಅವನು ರಸ್ತೆಯಲ್ಲಿ ನನಗೆ ಅಡ್ಡವಾಗಿ ನಿಂತಿದ್ದ. ದಡದಡ ನಗಾರಿಯಂತಹ ಎದೆ ಹಿಡಿದು ಕಣ್ಣೀರು ಸುರಿಸುತ್ತ ನಾಚಿಕೆಯಿಂದ ಆ ತುಂಡಾದ ಲಾಡಿ ಹೊರತೆಗೆದು ಗಂಟು ಹಾಕಿ ಗಣಪತಿ, ತನ್ನ ಬಿರಿದ ಹೊಟ್ಟೆಗೆ ಹಾವು ಕಟ್ಟಿದಂತೆ ಹೊಟ್ಟೆಗೆ ಪ್ಯಾಂಟಿನ ಸಮೇತ ಗಂಟು ಹಾಕಿ ತಾತ್ಕಾಲಿಕ ಉಪಶಮನ ದೊರಕಿಸಿ ಒಂದಿಷ್ಟು ನಿರಾಳತೆಯೊಂದಿಗೆ”ಬಿಂದು ಹೋಗುವ” “ನೀನು ಡ್ರೆಸ್ ಹಿಡಕೋ. ಚೀಲ ಎಲ್ಲ ನನ್ನತ್ರ ಇರಲಿ. ಎಂತ ಅಂಗಡಿ ಮಾರಾಯ್ತಿ. ಇಂತಹ ಡ್ರೆಸ್ ಕೊಡೋದ”ಎಂದು ಮಣಮಣಿಸುತ್ತ ನನ್ನ ಜೊತೆಗೆ ಕಾಲೆಳೆಯುತ್ತ ನಡೆಯುತ್ತಿದ್ದ. ನನಗೆ ಪ್ರಥ್ವೀದೇವಿಯ ಚಿಂತೆ. ಕಾಲೇಜಿಗೆ ಬಂದು ಪ್ರಥ್ವೀದೇವಿಯ ಪೋಷಾಕು ಧರಿಸಿ ನನ್ನ ದೊಗಳೆ ಚೂಡೀದಾರದಿಂದ ಮುಕ್ತಿ ಹೊಂದಿದ್ದೆ. ಹೊಸ ಹೊಸ ಬಗೆಯ ಆಭರಣ. ಕೆಂಪು ಬಣ್ಣದ ಝರಿ ಸೀರೆಯ ಪೋಷಾಕು, ತಲೆಗೆ ಇಳಿಬಿಟ್ಟ ಕೃತಕ ಕೂದಲು( ಚೌರಿ). ಮುಖಕ್ಕೆ ಹಚ್ಚಿದ ಅಲಂಕಾರ.

ನಾನೆಂಬ ನರಮಂಡಲ ಕರಗಿ ಪಾತ್ರವೊಂದು ನನ್ನೊಳಗೆ ಪ್ರತಿಷ್ಢಾಪನೆಯಾಗಿತ್ತು. ಕಾಲೇಜುರಂಗದಲ್ಲಿ ಪ್ರಥ್ವಿದೇವಿಯ ಪಾತ್ರ ಆಟವಾಡುತ್ತಿತ್ತು.

ನಾಟಕ ಮುಗಿದು ನೇಪಥ್ಯಕ್ಕೆ ಬಂದರೆ ಇಂಗ್ಲೀಷ್ ನ ಹಿರಿಯ ಉಪನ್ಯಾಸಕರು ನನ್ನ ಹುಡುಕುತ್ತಿದ್ದರು. ಅವರೆಂದರೆ ನನಗೆ ಯಾವಾಗಲೂ ಭಯ. ಹತ್ತಿರ ಹೋದರೆ ವಾತ್ಸಲ್ಯದಿಂದ ಕಣ್ಣಲ್ಲಿ ನಕ್ಕು ತಲೆ ನೇವರಿಸಿದರು. ” ನೀನು ನಿಜವಾದ ಕಲಾವಿದೆ. ನಮ್ಮ ಕಾಲೇಜಿಗೆ ಇವತ್ತು ಮರ್ಯಾದೆ ತರುವ ರೀತಿಯಲ್ಲಿ ಅಭಿನಯಿಸಿದೆ” ಎಂದರು.

ಇದುವರೆಗೆ ನಾನು ಸ್ವೀಕರಿಸಿದ ಅತ್ಯಂತ ದೊಡ್ಡ ಪ್ರಶಸ್ತಿಯದು.

ಅಂದಿನಿಂದ ಕಾಲೇಜು ಮುಗಿಯುವವರೆಗೂ ಉಪನ್ಯಾಸಕರ, ವಿದ್ಯಾರ್ಥಿಗಳ ಬಾಯಲ್ಲಿ ನಾನು ಪ್ರಥ್ವೀದೇವಿಯಾಗಿ ರೂಪಾಂತರಗೊಂಡಿದ್ದೆ.

*********************************************************

ಪೂರ್ಣಿಮಾ ಸುರೇಶ್

ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

2 thoughts on “

Leave a Reply

Back To Top