ಕೇಂದ್ರ ಕೃಷಿ ಕಾಯ್ದೆ ರೈತರಿಗೆ ಮಾರಕ ಹೇಗೆ?

ವರ್ತಮಾನ

ಕೇಂದ್ರ ಕೃಷಿ ಕಾಯ್ದೆ ರೈತರಿಗೆ  ಮಾರಕ ಹೇಗೆ?

ಗಣೇಶ ಭಟ್ಟ, ಶಿರಸಿ

Worker holds onions for a photograph at the Vashi Agricultural Produce Market Committee wholesale market in Mumbai, India, on Thursday, Oct. 3 2019....

ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೊಳಿಸಲುದ್ದೇಶಿಸಿದ ಇಂತಹುದೇ ಕಾನೂನುಗಳನ್ನು ಯುಪಿಎ ಸರ್ಕಾರವು 2012 ರಲ್ಲಿ ತರಬಯಸಿದಾಗ, ಅಂದಿನ ಬಿಜೆಪಿ ಮುಖಂಡರಾದ  ಶ್ರೀಮತಿ ಸುಷ್ಮಾ ಸ್ವರಾಜ್ ಲೋಕಸಭೆಯಲ್ಲಿ ಹಾಗೂ ಅರುಣ ಜೇಟ್ಲಿಯವರು  ರಾಜ್ಯಸಭೆಯಲ್ಲಿ ಮಾಡಿದ ಭಾಷಣಗಳು ಇಂದಿಗೂ ಯೂಟ್ಯೂಬ್ನಲ್ಲಿ ಲಭ್ಯ. ಕೃಷಿಗೆ ಮುಕ್ತ  ಮಾರುಕಟ್ಟೆ ಕಲ್ಪಿಸುವುದರಿಂದಾಗುವ ಹಾನಿಯ ಕುರಿತು ಹೇಳುವಾಗ  ಪಾಶ್ಚಾತ್ಯ ದೇಶಗಳ ರೈತರ  ಆರ್ಥಿಕ ಸ್ಥಿತಿಯನ್ನು ಜೇಟ್ಲಿಯವರು ವಿವರಿಸಿದ್ದಾರೆ. ಅದರ ಕೆಲವು ಅಂಶಗಳು ಹೀಗಿವೆ.   “ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿ  ಕೃಷಿ ಉತ್ಪನ್ನಗಳಿಗೆ  ಮುಕ್ತ ಮಾರುಕಟ್ಟೆ ವ್ಯವಸ್ಥೆ ಇದೆ. ದೊಡ್ಡ ಮಾರಾಟಗಾರರು ರೈತರಿಂದ ನೇರವಾಗಿ ಖರೀದಿಸುತ್ತಾರೆ. ಈ ವ್ಯವಸ್ಥೆಯಿಂದಲೇ ರೈತರ  ಆರ್ಥಿಕ ಸ್ಥಿತಿ  ಉತ್ತಮವಾಗುವಂತಿದ್ದರೆ  ಆ ದೇಶಗಳ  ರೈತರೆಲ್ಲರೂ ಶ್ರೀಮಂತರಾಗಿರಬೇಕಿತ್ತು. ಆದರೆ, ಅಲ್ಲಿನ  ರೈತರ  ಹೀನಾಯ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ, ರೈತರನ್ನು  ಜೀವಂತವಾಗಿಡುವ ಸಲುವಾಗಿ ಅಲ್ಲಿನ ಸರ್ಕಾರಗಳು ವಾರ್ಷಿಕವಾಗಿ  400 ಬಿಲಿಯನ್  ಡಾಲರ್ ಸಬ್ಸಿಡಿಗಳನ್ನು ನೀಡುತ್ತಿವೆ.  ಅಂದರೆ  ದಿನಂಪ್ರತಿ ಸುಮಾರು ಆರು ಸಾವಿರ ಕೋಟಿಗಳನ್ನು ರೈತರಿಗೆ  ನೀಡಲಾಗುತ್ತಿದೆ.  ಇದು ಭಾರತದಲ್ಲಿ  ಸಾಧ್ಯವೇ?”

    ಎಪಿಎಂಸಿ ವ್ಯವಸ್ಥೆಯಲ್ಲಿ ಹಲವು ಲೋಪದೋಷಗಳಿವೆಯೆಂಬುದು ನಿಜ. ಆದರೆ, ಅವುಗಳ ಪರಿಹಾರಕ್ಕೆ ಮುಕ್ತ ಮಾರುಕಟ್ಟೆ  ಪರಿಹಾರವಲ್ಲ.

   ಎಪಿಎಂಸಿಯಲ್ಲಿ ಮಾರಾಟ ಮಾಡಬಹುದಾದ ಕೃಷಿ- ಉತ್ಪನ್ನಗಳ ಪಟ್ಟಿಯಲ್ಲಿ ಎಲ್ಲಾ ಕೃಷಿ ಉತ್ಪನ್ನಗಳೂ ಇಲ್ಲ. ಉದಾಹರಣೆಗಾಗಿ  ಶಿರಸಿ , ಸಿದ್ದಾಪುರ ತಾಲೂಕುಗಳಲ್ಲಿ  ಸಾಕಷ್ಟು ದೊಡ್ಡ ಪ್ರಮಾಣದ ಉತ್ಪನ್ನವಾಗಿರುವ ಉಪ್ಪಾಗೆ ಈ ಪಟ್ಟಿಯಲ್ಲಿ ಇಲ್ಲ. ಕರಾವಳಿ ತಾಲೂಕುಗಳ  ಪ್ರಮುಖ ಬೆಳೆಯಾದ  ತೆಂಗು ಕೆಲವೇ ವರ್ಷಗಳ  ಹಿಂದೆ ಕುಮಟಾ ಎಪಿಎಂಸಿಯ ಪಟ್ಟಿಗೆ ಸೇರಿದೆ.

   ರೈತರು ತಮ್ಮ ಉತ್ಪನ್ನವನ್ನು ಈಗ ಕೂಡಾ ಕಾನೂನಾತ್ಮಕವಾಗಿ ದೇಶದ ಯಾವುದೇ ಭಾಗದಲ್ಲಿ ಮಾರಲು ಅವಕಾಶವಿದೆ. ಶಿರಸಿಯ ಅನಾನಸ್ಗೆ  ದೆಹಲಿಯೇ ದೊಡ್ಡ ಮಾರುಕಟ್ಟೆ. ಕೆಲವೇ ವರ್ಷಗಳ ಹಿಂದೆ ಪೂಲಿಂಗ್ ವ್ಯವಸ್ಥೆಯಲ್ಲಿ  ಶಿರಸಿ ರೈತರು ಅಡಿಕೆಯನ್ನು ಮುಂಬೈ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಆದರೂ ಎಪಿಎಂಸಿ ವ್ಯವಸ್ಥೆಯಿಂದಾಗಿ ಸ್ಥಳೀಯವಾಗಿ,  ಮಾರಾಟ ಮಾಡುವ  ವ್ಯವಸ್ಥಿತ ಅವಕಾಶ, ತೂಕದಲ್ಲಿ ಮೋಸಕ್ಕೆ ತಡೆ,  ಹಣ ಪಾವತಿಯಲ್ಲಿ  ನಿಶ್ಚಿತತೆ ಮುಂತಾದ  ಅನುಕೂಲವನ್ನು  ರೈತರು ಪಡೆದಿದ್ದಾರೆ.

  ಭಾರತದ ಆರು ರಾಜ್ಯ ಮತ್ತು ಕೇಂದ್ರ ಪ್ರದೇಶಗಳಲ್ಲಿ ಎಪಿಎಂಸಿ ವ್ಯವಸ್ಥೆಯೇ ಇಲ್ಲ. ಬಿಹಾರವು ಎಪಿಎಂಸಿ ವ್ಯವಸ್ಥೆಯನ್ನು 15 ವರ್ಷಗಳ ಹಿಂದೆ ರದ್ದುಪಡಿಸಿತು. ಕೃಷಿ ಉತ್ಪನ್ನಗಳನ್ನು  ಮಾರಾಟ ಮಾಡುವ ಮುಕ್ತ ಅವಕಾಶ ದೊರಕಿದ್ದರಿಂದ  ಅಲ್ಲಿನ ರೈತರ ಸ್ಥಿತಿ ಉತ್ತಮವಾಗಬೇಕಿತ್ತು.  ಆದರೆ ವಾಸ್ತವ  ಇದಕ್ಕೆ ವ್ಯತಿರಿಕ್ತವಾಗಿದೆ. ಬಿಹಾರದ ರೈತರು ತಮ್ಮ ಉತ್ಪನ್ನಗಳನ್ನು  ಹರಿಯಾಣ ಮತ್ತು ಪಂಜಾಬಿನ ಮಂಡಿಗಳಿಗೆ ಒಯ್ದು ಮಾರಾಟ ಮಾಡುತ್ತಿದ್ದಾರೆ. ಯಾಕೆಂದರೆ ಸ್ಥಳೀಯವಾಗಿ ದೊರಕುವುದಕ್ಕಿಂತ ಹೆಚ್ಚಿನ ಬೆಲೆ ಅಲ್ಲಿ ಸಿಗುತ್ತಿದೆ.

    ಭಾರತದ ರೈತರಲ್ಲಿ ಶೇ. 80 ರಷ್ಟು ಜನರು ಸಣ್ಣ ಮತ್ತು ಅತಿಸಣ್ಣ ರೈತರು. ತಮ್ಮ ಸೀಮಿತ ಉತ್ಪನ್ನಗಳನ್ನು ತೆಗೆದುಕೊಂಡು ಎಷ್ಟು ದೂರದ ಮಾರುಕಟ್ಟೆಗೆ ಇವರು ಹೋಗಬಲ್ಲರು? ಮನೆ ಬಾಗಿಲಲ್ಲೇ ಮಾರಾಟ ಮಾಡುವ ಅನಿವಾರ್ಯತೆ  ಉಂಟಾದಾಗ ತೂಕದಲ್ಲಿ, ಬೆಲೆಯಲ್ಲಿ ರೈತರು ಮೋಸ ಅನುಭವಿಸುವುದು ಸಾಮಾನ್ಯವಾಗುತ್ತದೆ.

  ಎಪಿಎಂಸಿ ವ್ಯವಸ್ಥೆಯನ್ನು  ರದ್ದು ಪಡಿಸುವುದಿಲ್ಲವೆಂದು ಹೇಳುವ  ಸರ್ಕಾರ, ಎಪಿಎಂಸಿ ಆವರಣದಲ್ಲಿನ ಮಾರಾಟಕ್ಕೆ  ತೆರಿಗೆ ವಿಧಿಸುತ್ತದೆ. ಆದರೆ ಹೊರಗಡೆಯ ಮಾರಾಟಕ್ಕೆ  ತೆರಿಗೆ ರಹಿತ ವ್ಯವಸ್ಥೆ ಜಾರಿಗೆ  ತಂದಿದೆ.   ಮಧ್ಯವರ್ತಿಗಳಿಂದ ಶೋಷಣೆಗೊಳಗಾಗುತ್ತಿರುವ  ರೈತರ  ರಕ್ಷಣೆಗಾಗಿ  ಈ ಕಾನೂನು ಎಂದು  ಕೇಂದ್ರ ಸರ್ಕಾರ ಹೇಳುತ್ತಿದೆ.  2012 ರಲ್ಲಿ ಸುಷ್ಮಾ ಸ್ವರಾಜ್ರವರು ಲೋಕಸಭೆಯಲ್ಲಿ,”  ರೈತರ  ಸಮಸ್ಯೆಗೆ ಸ್ಪಂದಿಸುವ ಸ್ಥಳೀಯ ಮಧ್ಯವರ್ತಿಗಳನ್ನು ಈ ಕಾನೂನು ನಿವಾರಿಸಬಹುದು.  ಆದರೆ ಹೊಸ ವ್ಯವಸ್ಥೆಯಲ್ಲಿ  ಕೂಡ ದೊಡ್ಡ ಕುಳಗಳ ಪ್ರತಿನಿಧಿಯಾಗಿ ಹಲವು ಹಂತದ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ. ಇವರನ್ನು ತಡೆಗಟ್ಟಲು ಸಾಧ್ಯವೇ?” ಎಂದಿದ್ದು  ಇಂದಿಗೂ ಪ್ರಸ್ತುತ.

     ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ  ಯಾವುದೇ ಮಧ್ಯವರ್ತಿ ಇರುವುದಿಲ್ಲ. ಸರ್ಕಾರದ  ಮಧ್ಯಪ್ರವೇಶದಿಂದಾಗಿ ಕಬ್ಬಿನ ಬೆಲೆಯಲ್ಲಿ  ಆಗಾಗ ಹೆಚ್ಚಳವಾಗಿದೆ. ಇಲ್ಲವಾದರೆ ಸಕ್ಕರೆ ಕಾರ್ಖಾನೆಗಳು ತಾವಾಗಿಯೇ ಕಾಲಕಾಲಕ್ಕೆ ಬೆಲೆ ಏರಿಸುತ್ತಿದ್ದರೇ?

    ಲಾಭದ ದಾಹಕ್ಕೆ ಒಳಗಾಗಿರುವ ಖಾಸಗಿ ರಂಗದಿಂದ ರೈತರ  ಉದ್ಧಾರವಾಗುತ್ತದೆಂದು ನಂಬುವುದೆಂದರೆ ಬಲಶಾಲಿಯಾದ  ತೋಳದಿಂದ  ಕುರಿಯ ರಕ್ಷಣೆ ಸಾಧ್ಯವೆಂದು ಬಿಂಬಿಸುವುದಾಗಿದೆ. ಎಪಿಎಂಸಿ ವ್ಯವಸ್ಥೆಯಿಂದ  ರೈತರಿಗೆ  ತೊಂದರೆಯಾಗುತ್ತದೆಂದು ತಂದಿರುವ  ಕಾನೂನು, ಕಬ್ಬಿನ ತೋಟಕ್ಕೆ  ನರಿಗಳಿಂದಾಗುವ ಹಾನಿಯನ್ನು ತಪ್ಪಿಸಲು ಕಾಡುಹಂದಿಗೆ ಅವಕಾಶ ಮಾಡಿಕೊಡುವ ರೀತಿಯಲ್ಲಿದೆ.

    ಮುಕ್ತ ಕೃಷಿ ಮಾರುಕಟ್ಟೆ ಕಾನೂನನ್ನು ತರಬಯಸಿ, 2012 ರಲ್ಲಿ ಕಾಂಗ್ರೆಸ್ ನೇತಾರರು ನೀಡಿದ ಹೇಳಿಕೆಗಳನ್ನು ಇಂದು ಬಿಜೆಪಿ ನಾಯಕರು ನೀಡುತ್ತಿದ್ದಾರೆ.  ಬಿಜೆಪಿಗರ ಅಂದಿನ ಹೇಳಿಕೆಗಳು ಕಾಂಗ್ರೆಸ್ಸಿಗರ ಪಾಲಿಗೆ ಬಂದಿವೆ.  ಅಧಿಕಾರ ಇದ್ದಾಗ ಹೇಳುವ ವಿಚಾರ, ಅಧಿಕಾರ ಕಳೆದುಕೊಂಡಾಗ ಬದಲಾಗುವದು ಎಲ್ಲಾ ರಾಜಕೀಯ ಪಕ್ಷಗಳ ಗುಣ. ಗದ್ದುಗೆ ಹಿಡಿಯಲು, ಹಣಬಲ ಉಳ್ಳವರ  ಓಲೈಕೆ ಮಾಡಲು ರಾಜಕೀಯ ಪಕ್ಷಗಳು ನಡೆಸುತ್ತಿರುವ  ಕಸರತ್ತಿಗೆ  ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ.

   ಸಣ್ಣ ಮತ್ತು ಅತಿಸಣ್ಣ ರೈತರು ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ  ಸ್ಪರ್ಧಿಸುವ ಸಾಮಥ್ರ್ಯ ಹೊಂದಿಲ್ಲದಿರುವ ಸ್ಥಿತಿ, ಇಲ್ಲಿನ ಮಾರುಕಟ್ಟೆಯ ವಾಸ್ತವಿಕತೆ  ಆಳುವ ಪಕ್ಷಕ್ಕೆ ತಿಳಿದಿಲ್ಲವೆಂದು ನಂಬಲಾಗದು. ಆದರೂ ರೈತ ವಿರೋಧಿ ಕಾನೂನನ್ನು ಜಾರಿಗೊಳಿಸಲು ಕೇಂದ್ರಸರ್ಕಾರ ಪಟ್ಟು ಹಿಡಿದಿರಲು ಕಾರಣವೆಂದರೆ, ಬೆರಳೆಣಿಕೆಯ ದೈತ್ಯ ಉದ್ಯಮಿಗಳನ್ನು ಸಂತುಷ್ಟಪಡಿಸಲು. ಹಲವು ಉದ್ದಿಮೆ ರಂಗಗಳಲ್ಲಿ ಲಾಭ ಗಳಿಸಿದರೂ ಕೃಷಿ ಉದ್ಯಮದಲ್ಲಿ  ಲಾಭ ಕಾಣದೇ ತಿಣುಕಾಡುತ್ತಿದ್ದ ತನ್ನ ದೇಣಿಗೆದಾರರಿಗೆ ಲಾಭ ಮಾಡಿಕೊಡಲು ಆಳುವ  ಪಕ್ಷ ಈ ಕಾನೂನು ತಂದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ದಾಪುಗಾಲಿಡುತ್ತಿರುವ ಜಿಯೋ ಪ್ಲ್ಲಾಟ್ ಫಾರ್ಮ್ ಮತ್ತು ಆಹಾರ ನಿಗಮದಿಂದ ದೀರ್ಘಾವಧಿಯ ಗುತ್ತಿಗೆ ಪಡೆದು ಗೋದಾಮು ನಿರ್ಮಿಸುತ್ತಿರುವ ಅದಾನಿ ಅಗ್ರೋಗಳ ಅನುಕೂಲಕ್ಕಾಗಿಯೇ ಕೃಷಿ ಉತ್ಪನ್ನಗಳ ಮುಕ್ತ ಮಾರಾಟ ಕಾನೂನು ಎನ್ನುವುದಕ್ಕೆ  ಪೂರಕವಾದ ಮತ್ತೊಂದು ಕಾನೂನು ತಂದಿರುವದೇ ಸಾಕ್ಷಿ.

  ಅಗತ್ಯ ವಸ್ತುಗಳನ್ನು  ದಾಸ್ತಾನು ಮಾಡುವ ಮಿತಿಯನ್ನು ವಿಧಿಸಿದ್ದ ಕಾನೂನಿಗೆ ಮಾರ್ಪಾಡು ಮಾಡಿ, ಹಲವು  ಕೃಷಿ ಉತ್ಪನ್ನಗಳನ್ನು ಅಗತ್ಯ ವಸ್ತುಗಳ  ಪಟ್ಟಿಯಿಂದ ಕೈ ಬಿಡಲಾಗಿದೆ.  ಇದು  ಐವತ್ತು ವರ್ಷಗಳ ಹಿಂದಿನ ಪರಿಸ್ಥಿತಿಗೆ ಅನುಗುಣವಾದ ಕಾನೂನು,  ಆದ್ದರಿಂದ ಇಂದು ಅಪ್ರಸ್ತುತ ಎಂಬುದು ಸಮರ್ಥನೆ. ಗ್ರಾಹಕರಿಗೆ  ಲಾಭವಾಗಲಿದೆಯೆಂಬ ಆಮಿಷ ಕೂಡಾ.

   ಇದರ ಪರಿಣಾಮವೆಂದರೆ ದೊಡ್ಡ ಕುಳಗಳು, ರೈತರಿಂದ  ಖರೀದಿಸಿದ ಕಾಳು-ಬೇಳೆಗಳನ್ನು  ದೊಡ್ಡ ಪ್ರಮಾಣದಲ್ಲಿ  ದಾಸ್ತಾನು ಮಾಡಿ ತಮಗೆ ಸರಿಕಂಡ ಬೆಲೆ ಸಿಗುವಂತಾದಾಗ  ಮಾರುಕಟ್ಟೆಗೆ  ಬಿಡುಗಡೆ ಮಾಡುತ್ತಾರೆ.  ಸಣ್ಣ ಪುಟ್ಟ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು  ಸ್ಪರ್ಧೆ ಎದುರಿಸಲಾಗದೇ ಬಾಗಿಲು ಮುಚ್ಚುವದು ಅನಿವಾರ್ಯವಾಗಲಿದೆ. ಹೆಚ್ಚಿನ ಬೆಲೆ ತೆರುವುದು ಗ್ರಾಹಕರ ಲಾಭವಾಗಲಿದೆ!  ಇನ್ನು ಮುಂದೆ ಆಹಾರ ವಸ್ತುಗಳ ಕಳ್ಳ ದಾಸ್ತಾನು, ಅಕ್ರಮ ಶೇಖರಣೆ ಇರುವುದಿಲ್ಲ. ಯಾಕೆಂದರೆ  ಅದನ್ನು ಕಾನೂನು ಬದ್ಧಗೊಳಿಸಲಾಗಿದೆ.

  ಒಪ್ಪಂದ ಕೃಷಿಯ ಕಾನೂನಿನಿಂದ  ರೈತರಿಗೆ  ಲಾಭವಾಗಲಿದೆ.  ನಿಶ್ಚಿತ ಬೆಲೆ  ದೊರೆಯಲಿದೆ ಮುಂತಾಗಿ  ಹೊಗಳಲಾಗುತ್ತಿದೆ. ಒಪ್ಪಂದ  ಕೃಷಿ ಪದ್ಧತಿ ಈ ಕಾನೂನಿಗೂ ಮೊದಲು ನಡೆಯುತ್ತಿದ್ದುದಕ್ಕೆ,  ಅಧಿಕೃತ ಮುದ್ರೆ ಒತ್ತಿ ಒಪ್ಪಂದ ಮಾಡಿಕೊಳ್ಳುವ  ಕಂಪನಿಗಳಿಗೆ ಅನುಕೂಲ ಕಲ್ಪಿಸಲಾಗಿದೆ.

     ಒಪ್ಪಂದ ಕೃಷಿಯನ್ನು ಎರಡು ರೀತಿಯಲ್ಲಿ ನಡೆಸುವ ಅವಕಾಶವಿದೆ. ತಮ್ಮ ಜಮೀನಿನಲ್ಲಿ ಬೆಳೆಯುವ ಫಸಲಿಗೆ  ಮೊದಲೇ ದರ ನಿಗದಿಪಡಿಸಿ,  ಕಂಪನಿ ಹೇಳಿದ  ಗುಣಮಟ್ಟದ ಉತ್ಪನ್ನ ನೀಡುವುದು ಒಂದು ವಿಧ.  ಇಂತಹ ಸಂದರ್ಭಗಳಲ್ಲಿ ಮೊದಲಿನ ಒಂದೆರಡು ವರ್ಷ ಕಂಪನಿಗಳ ನಡೆ ಆಕರ್ಷಕವಾಗಿಯೇ ಇರುತ್ತದೆ. ನಂತರ ಗುಣಮಟ್ಟದ ಕುರಿತು ಅವರ ಕ್ಯಾತೆ  ಪ್ರಾರಂಭವಾಗುತ್ತದೆ.  ಒಪ್ಪಂದದಲ್ಲಿರುವಂತೆ ತೂಕ ಇಲ್ಲ, ಅಳತೆ ಸರಿ ಇಲ್ಲ ಇತ್ಯಾದಿ ಕ್ಯಾತೆ ತೆಗೆದು ಫಸಲನ್ನು  ತಿರಸ್ಕರಿಸಲು  ಪ್ರಾರಂಭಿಸುತ್ತಾರೆ.  ಪಂಜಾಬಿನ ರೈತರು ಕಳೆದ ದಶಕದಲ್ಲಿ ಇದನ್ನು ಅನುಭವಿಸಿದ್ದಾರೆ.

    ಈ ವಿಧದ ಕ್ಯಾತೆಯನ್ನು ಶಿರಸಿಯ ಸುತ್ತಮುತ್ತಲಿನ ಅನಾನಸ್ ಬೆಳೆಗಾರರು ಕಳೆದ ಮೂರು-ನಾಲ್ಕು ದಶಕಗಳಿಂದಲೂ ಅನುಭವಿಸುತ್ತಿದ್ದಾರೆ.  ಒಂದು ಕಿಲೋಗಿಂತ ಕಡಿಮೆ ತೂಗುವ ಅನಾನಸ್ನ ಬೆಲೆ ಅರ್ಧದಷ್ಟು (ಆದರೆ ಇದು ಗ್ರಾಹಕರಿಗೆ ವರ್ಗವಾಗುವುದಿಲ್ಲ) ಪ್ರತಿಯೊಂದು ಅನಾನಸ್ ಕಾಯಿಯನ್ನು ತೂಕ ಮಾಡುವ ಬದಲು, 50 ಕಿ.ಲೋ ತೂಗಿ,  ಅದರಲ್ಲಿರುವ ಕಾಯಿಯನ್ನು ಲೆಕ್ಕ ಮಾಡಲಾಗುತ್ತದೆ. ಅನಾನಸ್ ಸಂಖ್ಯೆ  50 ದಾಟಿದರೆ,  ಎಲ್ಲದಕ್ಕೂ ಅರ್ಧ ಬೆಲೆ.  ದೊಡ್ಡ ಮತ್ತು ಸಣ್ಣ  ಕಾಯಿಗಳನ್ನು  ಮಿಶ್ರ ಮಾಡಿ ತೂಗಿದಾಗ ಇದೇ ರೀತಿ ಆಗುವುದು ಸಹಜ.

   ಒಪ್ಪಂದ ಕೃಷಿಯಲ್ಲಿ  ತಕರಾರು ಉಂಟಾದರೆ,  ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸುವ  ಅವಕಾಶವಿದೆ.  ಆ ಇಲಾಖೆಯ ಅಧಿಕಾರಿಗಳು ಬಡ ರೈತರ ಪರ ಇರುತ್ತಾರೆಂಬ  ನಿರೀಕ್ಷೆಯೇ ಇಂದು ಅವಾಸ್ತವ. ಫಸಲಿನ ಗುಣಮಟ್ಟದಲ್ಲಿ  ಭಿನ್ನಾಭಿಪ್ರಾಯ ಉಂಟಾದರೆ ಅದಕ್ಕೆ ತಕ್ಷಣ ಪರಿಹಾರ ಸಿಗುತ್ತದೆಯೇ?  ಪರಿಹಾರ ಸಿಗುವವವರೆಗೆ  ಹಣ್ಣು, ತರಕಾರಿಗಳನ್ನು  ಕಾಪಿಡಲು ಸಾಧ್ಯವೇ?

   ರೈತರ ಜಮೀನನ್ನು ನಿರ್ದಿಷ್ಟ ಅವಧಿಗೆ ಗುತ್ತಿಗೆಗೆ ಪಡೆದು ಕಂಪನಿಗಳೇ ಬೇಸಾಯ ಮಾಡುವುದು ಒಪ್ಪಂದ ಕೃಷಿಯ ಇನ್ನೊಂದು ವಿಧ. ಸೀಮಿತ ಅವಧಿಯಲ್ಲಿ ಹೆಚ್ಚಿನ ಫಸಲು ತೆಗೆದು ಲಾಭ ಗಳಿಸಬೇಕೆಂಬ ಉದ್ದೇಶದಿಂದ , ಅತಿಯಾದ  ಪ್ರಮಾಣದಲ್ಲಿ  ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ, ಮಿತಿಯಿಲ್ಲದ ನೀರಿನ ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಕೆಲವೇ ವರ್ಷಗಳಲ್ಲಿ  ಭೂಮಿ ಕ್ಷಾರೀಯವಾಗುತ್ತದೆ.  ನೀರು ಬಸಿದು ಹೋಗದೇ  ಮಣ್ಣಿನ  ರಚನೆ ಹಾಳಾಗುತ್ತದೆ. ಅಪಾಯಕಾರಿ ಲವಣಗಳು ಮೇಲ್ಮೈಯಲ್ಲೇ  ಶೇಖರವಾಗುತ್ತವೆ.  ಮೇಲ್ಮೈ ನೀರಾವರಿ ಇಲ್ಲದ ಪ್ರದೇಶಗಳಲ್ಲಿ  ಅಂತರ್ಜಲದ  ದುರ್ಬಳಕೆಯಾಗುವ ಸಾಧ್ಯತೆ ಇರುತ್ತದೆ. ಗುತ್ತಿಗೆ ಅವಧಿ ಮುಗಿದ ನಂತರ  ತನ್ನ ಭೂಮಿಯನ್ನು ವಾಪಸ್  ಪಡೆಯುವಾಗ ರೈತರಿಗೆ ದಕ್ಕುವುದು  ಬಂಜರು ಭೂಮಿ ಮಾತ್ರ.

  ಇಂತಹ ಸಮಸ್ಯೆಗಳ ಪರಿಹಾರಕ್ಕೆ ಹೊಸ ಕಾನೂನು ಸಹಾಯ ಮಾಡಲಾರದು. ಗುತ್ತಿಗೆ ಕೃಷಿ ಮಾಡುವವರು ಫಲವತ್ತಾದ ದೊಡ್ಡ ಹಿಡುವಳಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ  ಹೊರತು ಸಣ್ಣ, ಸಾಮಾನ್ಯ ಹಿಡುವಳಿಗಳನ್ನಲ್ಲ.

   ಎಂಟು ವರ್ಷಗಳ ಹಿಂದೆ ಕಾಂಗ್ರೆಸ್ನ ಇಂತಹುದೇ ಕಾನೂನನ್ನು ವಿರೋಧಿಸುವಾಗ  ಅದನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು. ಲೋಕಸಭೆ, ರಾಜ್ಯಸಭೆಗಳಲ್ಲಿ ಮತದಾನಕ್ಕೆ  ಒಳಪಡಿಸಬೇಕೆಂದು  ಆಗ್ರಹಿಸಿದ್ದ ಬಿಜೆಪಿ, ಸುಗ್ರೀವಾಜ್ಞೆಯ ಮೂಲಕ ಹಿಂಬಾಗಿಲಿನಿಂದ ತಂದು ಧ್ವನಿ ಮತದಿಂದಲೇ ದೃಢೀಕರಿಸಿಕೊಂಡಿದ್ದರ ಹಿನ್ನೆಲೆ ಏನಿರಬಹುದು?  ಕೊವಿಡ್ ತುರ್ತು ಪರಿಸ್ಥಿತಿಯ ನಡುವೆಯೇ ಈ  ಕಾನೂನುಗಳನ್ನು ತರುವದಕ್ಕೂ ಅದಾಗಲೇ ಪ್ರಾರಂಭವಾಗಿದ್ದ ಜಿಯೋ ಪ್ಲಾರ್ಟ್ಫಾರ್ಮ್ ಮತ್ತು ಅದಾನಿ ಆಗ್ರೋಗಳ ಅಗತ್ಯತೆಗಳಿಗೆ ಸಂಬಂಧ ಇರುವುದು ಸುಳ್ಳೇ? ಕೃಷಿ ಉತ್ಪನ್ನಗಳ ಸಾಗಾಟ,  ಶೇಖರಣೆಗಳಿಗಾಗಿ ಕೊವಿಡ್  ಪ್ಯಾಕೇಜಿನಲ್ಲಿ  ನಿಗದಿಪಡಿಸಿರುವ ಒಂದು ಲಕ್ಷ ಕೋಟಿ ರೂಪಾಯಿಗಳ ಫಲಾನುಭವಿಗಳ ಹೆಸರನ್ನು  ಬಹಿರಂಗಪಡಿಸುವ ಧೈರ್ಯ ಬಿಜೆಪಿ ನೇತಾರರಿಗೆ  ಇದೆಯೇ?

   ಭಾರತದ ಕೃಷಿ ರಂಗದ ಸಮಸ್ಯೆಗಳ ಕುರಿತು  ಕಳೆದ ಐವತ್ತು,ಅರವತ್ತು ವರ್ಷಗಳಿಂದಲೂ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಕೃಷಿ ರಂಗದ ಮೇಲೆ ಅತಿಯಾದ ಅವಲಂಬನೆ (ಸುಮಾರು 70%) ಸಣ್ಣ ಮತ್ತು ಅತಿಸಣ್ಣ ಹಿಡುವಳಿಗಳು, ನೀರಾವರಿಯ ಸೌಲಭ್ಯ ಇಲ್ಲದಿರುವುದು, ಹಣಕಾಸಿನ ಅಲಭ್ಯತೆ, ಮುಂತಾದವುಗಳ ಪಟ್ಟಿಗೆ ಹವಾಮಾನ ವೈಪರೀತ್ಯ, ಬೀಜ, ಗೊಬ್ಬರಗಳ ಮೇಲೆ ಕಂಪನಿಗಳ ನಿಯಂತ್ರಣ ಮುಂತಾದವು ಇತ್ತೀಚೆಗೆ ಸೇರ್ಪಡೆಯಾಗಿವೆ.

   ಕೇಂದ್ರ ಸರ್ಕಾರ ತಂದಿರುವ ಕಾನೂನುಗಳು ಇವ್ಯಾವ ಸಮಸ್ಯೆಗಳ ಕುರಿತೂ ಚರ್ಚಿಸುವದಿಲ್ಲ, ಪರಿಹಾರ ನೀಡುವುದಿಲ್ಲ, ಅಂದರೆ  ಶಾಲೆ, ಕಾಲೇಜುಗಳಲ್ಲಿ ಕಲಿಸುವ, ತಜ್ಞರು ಹೇಳುತ್ತಿರುವ ಸಮಸ್ಯೆಗಳು ನಿಜವಲ್ಲವೇ? ಅಥವಾ ರೈತರ ,ಕೃಷಿ ರಂಗದ ಉದ್ಧಾರಕ್ಕೆ ಈ ಕಾನೂನುಗಳು ಎಂದು ಸರ್ಕಾರ ಸುಳ್ಳು ಹೇಳುತ್ತಿದ್ದೆಯೇ?

   ಭಾರತದ ಬಹಳಷ್ಟು  ರಾಜಕೀಯ ಪಕ್ಷಗಳು ಬಂಡವಾಳವಾದಿ ಚಿಂತನೆಯ ಚೌಕಟ್ಟಿಗೆ ಅಂಟಿಕೊಂಡಿವೆ. ಕಮ್ಯುನಿಸ್ಟ್ ಚಿಂತನೆ  ಎಂದರೆ ಪ್ರಭುತ್ವ ಬಂಡವಾಳವಾದ. ತೊಂಬತ್ತರ ದಶಕದಲ್ಲಿ  ಕಾಂಗ್ರೆಸ್ ತಂದಿದ್ದ ಖಾಸಗೀಕರಣ, ಉದಾರೀಕರಣ, ಜಾಗತೀಕರಣಗಳನ್ನು ತೀವ್ರವಾಗಿ ವಿರೋಧಿಸಿದ್ದ ಬಿಜೆಪಿ ಇಂದು ಅವೇ ನೀತಿಗಳನ್ನು  ಅತೀವ ನಿಷ್ಠೆ ಮತ್ತು ವೇಗವಾಗಿ ಜಾರಿಗೊಳಿಸುತ್ತಿದೆ. ಈ ಪಕ್ಷಗಳ ನೀತಿ ಒಂದೇ ಆಗಿದ್ದರೂ ಪರಸ್ಪರ ದೂಷಣೆಯಿಂದ ಜನರನ್ನು ಮೂರ್ಖರನ್ನಾಗಿಸಿ ದ್ವೇಷ ಬೆಳೆಸಲಾಗುತ್ತಿದೆ.

 ಕೃಷಿ ರಂಗದ ಸಮಸ್ಯೆಗಳಿಗೆ  ಪರಿಹಾರವಿರುವುದು ವಿಕೆಂದ್ರೀಕೃತ ಅರ್ಥ ನೀತಿಯಲ್ಲಿ ; ಸಹಕಾರಿ ತತ್ವದಲ್ಲಿ. ಬೇಸಾಯ, ಉತ್ಪಾದನೆ , ಸಂಗ್ರಹಣೆ ಮತ್ತು ಮಾರಾಟ ವ್ಯವಸ್ಥೆಯನ್ನು ಸಹಕಾರಿ ರಂಗದಲ್ಲೇ ಕೈಗೊಳ್ಳುವುದು. ಕೃಷಿ ಪೂರಕ ಮತ್ತು ಕೃಷಿ ಆಧಾರಿತ ಉದ್ದಿಮೆಗಳನ್ನು ಗ್ರಾಮೀಣ ಭಾಗದಲ್ಲಿ  ಪ್ರಾರಂಭಿಸಲು ಪ್ರೋತ್ಸಾಹ ನೀಡುವುದರಿಂದ. ಕೇಂದ್ರೀಕೃತ ಅರ್ಥವ್ಯವಸ್ಥೆಯಾದ ಬಂಡವಾಳವಾದಿ ನೀತಿಯನ್ನು ಕೈಬಿಡದೇ ರೈತರ ಬದುಕನ್ನು ಹಸನಾಗಿಸಲು ಸಾಧ್ಯವಾಗದು.   

************************************************************

Leave a Reply

Back To Top