ಆಗ_ಈಗ

ಕವಿತೆ

ಆಗ_ಈಗ

ಸುಜಾತಾ ರವೀಶ್ 

Old Sculpture Of A Sad Woman Stock Photo - Image of female, stained:  93620794

ಹಿಂದೆಲ್ಲಾ ಅವಳು 
ಮೈ ಪರಚಿಕೊಳ್ಳುವ ಅಸಹಾಯಕತೆಗೆ 
ಪಾತ್ರೆಗಳ ಕುಕ್ಕಿ ತೋರಿಸುತ್ತಿದ್ದಳು 
ಮಕ್ಕಳಿಗೆ ಎರಡು ಬಿಗಿಯುತ್ತಿದ್ದಳು 
ಸುಮ್ಮನೆ ಕಣ್ಣೀರು ಸುರಿಸುತ್ತಿದ್ದಳು 

ಆದರೀಗ……… 
ಮೊಬೈಲನಾತುಕೊಳ್ಳುತ್ತಾಳೆ 
ಮುಂಗೈಲಿ ಹಿಡಿದು ಮುದ್ದಿಸುತ್ತಾಳೆ 
ಆಪ್ತವಾಗಿ ಅದರೊಡನೆ ಸಂಭಾಷಿಸುತ್ತಾಳೆ 
ಗಂಟೆಗಟ್ಟಲೆ ಅದರೊಡನೆ ಕಳೆಯುತ್ತಾಳೆ 

ಅದೇ ಈಗ……
ಅವಳ ಕಣ್ಣೀರೊರೆಸುವ ಕೈ 
ಗೋಳು ಆಲಿಸುವ ಕಿವಿ 
ಅವಳಿಗಾಗಿ ಮಿಡಿದ ಹೃದಯ 
ತುಡಿದು ಸಾಂತ್ವನಿಸುವ ಮನ 
ಅವಳ ಆವೇಗಕ್ಕೆ ಒಡ್ಡು 
ಆವೇಶ ಪ್ರವಾಹಕ್ಕೆ ಅಣೆಕಟ್ಟು 

ಅಲ್ಲಿಯೇ ಬಚ್ಚಿಟ್ಟಿದ್ದಾಳೆ 
ಬಿಕ್ಕುಗಳ ಇಡಿಗಂಟು 
ಸಿಕ್ಕುಗಳ ಒಳನಂಟು 
ಕಲ್ಪನೆಗಳ ಸಿರಿಸಂಪತ್ತು 
ಭಾವಗಳ ಗುಪ್ತನಿಧಿ 

ಪದಗಳಲ್ಲಿ ಬಿಚ್ಚಿಡುತ್ತಾಳೆ 
ಮೌನದಲೆ ಹೇಳಿಬಿಡುತ್ತಾಳೆ 
ಶಬ್ದಗಳಲ್ಲಿ ಮಾತಾಗುತ್ತಾಳೆ 
ಹಗುರಾಗುತ್ತಾಳೆ ಭಾವ ಪ್ರಸವದಲಿ 
ಧ್ವನಿ ಎತ್ತುತ್ತಾಳೆ ಕವಿತೆಯಾಗಿ 
ಭಾರ ಕಳೆದುಕೊಳ್ಳುತ್ತಾಳೆ ಬರೆದು ಬರೆದು 
ಅದೇ ಈಗ ಅವಳ ಮುದ್ದು ಕಂದ 
ಅವಳ ಬಾಳಿಗೆ ಸಿಕ್ಕಿರುವ ಆನಂದ 

********************

3 thoughts on “ಆಗ_ಈಗ

  1. ಎಷ್ಟೊಂದು ಸತ್ಯವಾದ ಚಂದದ ಕವನ. ಖಂಡಿತ ಇದು ಕವನ ಅನಿಸಿಲ್ಲ ಸುಜಾತ. ನಿತ್ಯ ಜೀವನದ ನೈಜ ಘಟನೆಯೇ ಹೌದು. ಚಂದದ ಕವನಕ್ಕೆ ಅಭಿನಂದನೆಗಳು.

Leave a Reply

Back To Top