ಆವರ್ತನ

ದಾರಾವಾಹಿ-

ಅದ್ಯಾಯ-01

ಓದುವ ಮೊದಲು…………………….

ಇದು ಗುರುರಾಜ್ ಸನಿಲ್ ಅವರ ‘ಆವರ್ತನ’ ಎಂಬ ಸಾಮಾಜಿಕ ಕಾದಂಬರಿ. ಪ್ರಸ್ತುತ ಕಾಲಘಟ್ಟದ ಸಮಾಜದಲ್ಲಿ ನಮ್ಮ ಕೆಲವು ನಂಬಿಕೆ, ಆಚರಣೆಗಳು ಯಾವ ಯಾವ ರೀತಿಗಳಲ್ಲಿ ಜನಜೀವನ ಶೋಷಣೆಗೂ, ಹಸಿರು ಪರಿಸರ ಮತ್ತು ವನ್ಯಜೀವರಾಶಿಗಳ ಮಾರಣಹೋಮಕ್ಕೂ ಕಾರಣವಾಗುತ್ತಿವೆ ಎಂಬುದನ್ನು ಬಹಳ ಸಮೀಪದಿಂದ ಕಾಣುತ್ತ ಬಂದವರು ಇವರು.. ಹಾಗಾಗಿ ಅದೇ ಕಥಾವಸ್ತುವನ್ನು ಕಾದಂಬರಿ ಪ್ರಕಾರದಲ್ಲೂ ಆಯ್ದುಕೊಂಡು ಜನಜಾಗ್ರತಿ ಮೂಡಿಸುವುದು ಅಗತ್ಯ ಎಂದು ತೋರಿ ಈ ಕೃತಿಯನ್ನು ರಚಿಸಿದ್ದಾರೆ. ಇದು ಪುಸ್ತಕರೂಪದಲ್ಲಿ ಪ್ರಕಟವಾಗುವ ಮುನ್ನ ಸಂಗಾತಿಯ ಓದುಗರನ್ನು ತಲುಪಲೆಂದು ಪ್ರತಿ ಬಾನುವಾರ ಇದನ್ನು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ದಾರಾವಾಹಿ ಕ್ಷೇತ್ರದಲ್ಲಿ ಇದು ಸಂಗಾತಿಯ ಮೊದಲ ಪ್ರಯತ್ನ ಓದುಗರು ತಮ್ಮ ಅನಿಸಿಕೆ ತಿಳಿಸಬೇಕೆಂದು ಕೋರುತ್ತೇವೆ

gray wire lot

      ಆರು ಅಡಿ ಚಚ್ಚೌಕದ ಸಣ್ಣಸಣ್ಣ ಮೂರು ಕೋಣೆಗಳಿದ್ದ ಗುಡಿಸಲಿನೊಳಗಿನ ಪಡಸಾಲೆಯ ಮೂಲೆಯ ಮಣ್ಣಿನ ಗೋಡೆಗೊರಗಿ ರಾಧಾ ಹತಾಶೆಯಿಂದ ಕುಳಿತಿದ್ದಳು. ಹೊರಗಡೆ ಧೋ…! ಎಂದು ಮಳೆ ಸುರಿಯುತ್ತಿತ್ತು. ಅದರ ಸದ್ದಿಗಿಂತಲೂ ತನ್ನೊಳಗೆ ಬೇಯುತ್ತಿದ್ದ ಅತೀವ ಚಿಂತೆ, ಅವಮಾನಗಳು ಅವಳನ್ನು ಹಿಂಸಿಸುತ್ತಿದ್ದವು. ಎಷ್ಟು ಅತ್ತರೂ ದುಃಖ ಹತೋಟಿಗೆ ಬರುತ್ತಿಲ್ಲ. ಬಾಡಿಗೆ ಮನೆಯ ಮಾಲಿಕ ಮುತ್ತಯ್ಯ ಇಂದು l ನಡೆದುಕೊಂಡ ರೀತಿ ಪದೇಪದೇ ಅವಳ ಮುನ್ನೆಲೆಗೆ ಬಂದು ನೋಯಿಸುತ್ತಿತ್ತು. ಈ ಶೀಂಬ್ರಗುಡ್ಡೆಯ ಮುತ್ತಯ್ಯನ ಮನೆಗೆ ಯಾಕಾಗಿ ಬಂದೆವೋ…? ಎಂದು ಅವಳು ತನ್ನ ದುಸ್ಥಿತಿಗೆ ಮರುಗುತ್ತಿದ್ದಳು. ಅವಳ ಎದುರುಗಡೆ ಸಣ್ಣ ಸಾರಾಯಿ ಬಾಟಲಿಯ ಮುಚ್ಚಳಕ್ಕೆ ತೂತು ಕೊರೆದು, ಹಳೆಯ ನೈಲಾನ್ ಸೀರೆಯ ಸಪೂರ ಎಳೆಯೊಂದನ್ನು ತೂರಿಸಿ ಬತ್ತಿಯಂತೆ ಚುರುಟಿದ್ದ ಸೀಮೆಎಣ್ಣೆಯ ಚಿಮಿಣಿ ದೀಪವು ಕತ್ತಲನ್ನು ಸೀಳಿ ಉರಿಯುತ್ತಿತ್ತು. ಅದು ಆಗಾಗ ಹೊರಗಿನಿಂದ ಬೀಸುವ ಮಳೆಗಾಳಿಗೆ ತಲ್ಲಣಿಸುತ್ತ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗುತ್ತಿತ್ತು. ಆದರೂ ಹಿಡಿದ ಪಟ್ಟು ಬಿಡದೆ ತೂರಿ ಬರುತ್ತಿದ್ದ ಕುಳಿರ್ಗಾಳಿಯು ಮಿಣುಕು ದೀಪವನ್ನು ನಂದಿಸುವ ಛಲವನ್ನು ಸಾಧಿಸುತ್ತಲೇ ಇತ್ತು. ‘ಯಾವ ಕ್ಷಣದಲ್ಲಾದರೂ ಕತ್ತಲ ವಶವಾಗಬಹುದು’ ಎನ್ನುವಂತೆ ಓಲಾಡುತ್ತಿದ್ದ ಬೆಳಕನ್ನೇ ದಿಟ್ಟಿಸುತ್ತಿದ್ದ ರಾಧಾಳಿಗೆ, ತನ್ನ ಅವಸ್ಥೆಯೂ ಈ ದೀಪದಂತೆಯೇ ಆಯಿತಲ್ಲಾ…! ಎಂದೆನಿಸಿ ದುಃಖ ತೀವ್ರವಾಗುತ್ತಿತ್ತು.

   ರಾಧಾಳ ಮಕ್ಕಳಿಬ್ಬರು ಚಿಮಿಣಿಯ ಸಮೀಪದಲ್ಲಿ ಕುಳಿತು ದೀಪದ ಸುತ್ತ ಗಿರಗಿರನೆ ಸುತ್ತುತ್ತಿದ್ದ ಚಿಕ್ಕಪುಟ್ಟ ಕೀಟಗಳನ್ನು ನೋಡುತ್ತ ಆಟವಾಡುತ್ತಿದ್ದರು. ಆದರೆ ಹೊರಗೆ ಧಾರಾಕಾರವಾಗಿ  ಸುರಿಯುತ್ತಿದ್ದ ಮಳೆಯನ್ನು ಕಂಡು ಆ ಮಕ್ಕಳಲ್ಲಿ ಉತ್ಸಾಹ ಪುಟಿಯಿತು. ಇಬ್ಬರೂ ಎದ್ದು ಮನೆಯ ಬಾಗಿಲಿನೆಡೆಗೆ ಓಡಿದರು. ತಮ್ಮ ಮುದ್ದಾದ ಕೈಬೆರಳುಗಳನ್ನು ಜೋಡಿಸಿದ ಪುಟ್ಟ ಬೊಗಸೆಗಳಿಂದ ಸೋಗೆಯ ಇಳಿ ಮಾಡಿನಿಂದ ಸುರಿಯುತ್ತಿದ್ದ ನೀರನ್ನು ಶೇಖರಿಸಿಕೊಂಡು ಮೇಲೆ ಕೆಳಗೆ ಚಿಮ್ಮಿಸುತ್ತ, ಕಿಲಕಿಲ ನಗುವಿನೊಂದಿಗೆ ತಂತಮ್ಮ ಮುಖಗಳ ಮೇಲೆಲ್ಲ ಎರಚಾಡುತ್ತ, ನಾಲಗೆ ಚಾಚಿ ಆ ನೀರಿನ ರುಚಿಯನ್ನು ಆಸ್ವಾದಿಸುತ್ತ ಚೆಲ್ಲಾಟವಾಡುತ್ತಿದ್ದರು. ‘ಮಳೆಯಲ್ಲಿ ನೆನೆದರೆ ಜ್ವರ ಬರುತ್ತದೆ ಮಕ್ಕಳೇ ಒಳಗೆ ಬನ್ನೀ…!’ ಎಂದು ಹಿಂದೆಲ್ಲ ಗದರಿಸುತ್ತಿದ್ದ ರಾಧಾ ಇಂದು ಯಾವುದನ್ನೂ ಗಮನಿಸುವ ಸ್ಥಿತಿಯಲ್ಲಿರಲಿಲ್ಲ.

  ಸುಮಾರು ಹೊತ್ತು ಅಳುತ್ತಲೇ ಇದ್ದ ರಾಧಾಳ ನಸುಗೆಂಪಿನ, ದುಂಡಗಿನ ಮುಖವು ಮೆಲ್ಲನೆ ಕಠೋರವಾಗತೊಡಗಿತು. ‘ಇಷ್ಟಕ್ಕೆಲ್ಲ ಇವರೇ ಕಾರಣ!’ ಎಂದು ಅವುಡುಗಚ್ಚಿದಳು.  ಯಾವುದಕ್ಕೂ ಆ ಮನುಷ್ಯ ಮನೆಗೆ ಬಂದುಕೊಳ್ಳಲಿ… ಏನೆಂದುಕೊಂಡಿದ್ದಾರೆ ನನ್ನನ್ನು? ಇವರ ಗುಲಾಮಳೇ ನಾನು…? ಎಷ್ಟು ವರ್ಷಗಳಿಂದ ಏಗುತ್ತಿದ್ದೇನೆ ಇವರೊಂದಿಗೆ…! ಇನ್ನು ಯಾವ ಕಾಲಕ್ಕೆ ನೆಮ್ಮದಿ ಕಾಣುವುದು…? ಎಂದು ಅವಳು ರೊಚ್ಚಿಗೆದ್ದ ಹೊತ್ತಿನಲ್ಲೇ ಹೊರಗೆ ಗೋಪಾಲನ ಸೈಕಲ್ ಬೆಲ್ಲು ಹೊಡೆಯಿತು. ಆಗ ಮತ್ತಷ್ಟು ಅಶಾಂತಳಾದಳು. ಅಪ್ಪನನ್ನು ಕಂಡ ಮಕ್ಕಳಿಬ್ಬರೂ ಮಳೆಯಿಂದಾಗಿ ಹೊರಗೆ ಹೋಗಲಾಗದೆ ನಿಂತಲ್ಲಿಯೇ ತಕತಕ ಕುಣಿಯುತ್ತ ಎದುರುಗೊಂಡರು. ತಣ್ಣಗೆ ಸುರಿಯುತ್ತಿದ್ದ ಮಳೆಗೆ ಗೋಪಾಲ ಒದ್ದೆಮುದ್ದೆಯಾಗಿ ನಡುಗುತ್ತ ಇಳಿ ಮಾಡಿನೊಳಗೆ ಬಂದ. ‘ರಾಧಾ, ಎಲ್ಲಿದ್ದಿ ಮಾರಾಯ್ತಿ…? ಬೈರಾಸು ಕೊಡೇ, ಪೂರಾ ಚಂಡಿಪುಂಡಿ! ಈ ದರಿದ್ರದ ಮಳೆ ಯಾವಾಗ ಹಿಡಿಯುತ್ತೋ, ಯಾವಾಗ ಬಿಡುತ್ತೋ ದೇವರಿಗೇ ಗೊತ್ತು!’ ಎಂದು ಗೊಣಗಿಕೊಂಡ. 

   ಗಂಡನ ಸ್ವರ ಕೇಳಿ ರಾಧಾಳ ಅಸಹನೆ ಎಲ್ಲೆ ಮೀರಿತು. ‘ಹೇ, ಅಶ್ವಿನೀ… ನಿನ್ನಪ್ಪನಿಗೆ ಬೈರಾಸು ಕೊಡು ಮಾರಾಯ್ತೀ…!’ ಎಂದು ಮಗಳಿಗೆ ಒರಟಾಗಿ ಸೂಚಿಸಿದಳು. ಅಶ್ವಿನಿ ಬೆಚ್ಚಿಬಿದ್ದು ಒಳಗೆ ಓಡಿ ಹೋಗಿ, ಮಾಡಿನ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಉದ್ದಕ್ಕೆ ಕಟ್ಟಿದ್ದ ಹುರಿಹಗ್ಗಕ್ಕೆ ನೇತು ಹಾಕಿದ್ದ ಬೈರಾಸನ್ನು ಸರ್ರನೆ ಎಳೆದುಕೊಂಡು ಹೋಗಿ ಅಪ್ಪನಿಗೆ ಕೊಟ್ಟಳು. ಒಳಗಡಿಯಿಡುತ್ತಲೇ ಹೆಂಡತಿಯ ಸಿಡುಕಿಗೆ ಗೋಪಾಲ ಕುಗ್ಗಿಹೋದ. ಇವತ್ತು ಹೊಸದೇನೋ ಗ್ರಹಾಚಾರ ಕಾದಿದೆ! ಎಂದುಕೊಂಡವನು, ಒದ್ದೆ ಬಟ್ಟೆಬರೆಗಳನ್ನು ಕಳಚಿಟ್ಟು, ಮೈ ಒರೆಸಿಕೊಂಡು ಒಳಗೆ ಬಂದು ರಾಧಾಳಿಗೆ ಎದುರಾಗಿ ಗೋಡೆಗೊರಗಿ ಕುಳಿತು ನಗುತ್ತ ಅವಳನ್ನು ದಿಟ್ಟಿಸಿದ. ಆದರೆ ಅವಳು ಇವನತ್ತ ಮುಖವೆತ್ತಿ ನೋಡಲಿಲ್ಲ. ಇವನಿಗೆ ಪಿಚ್ಚೆನಿಸಿತು.

   ‘ಏನಾಯ್ತು ಮಾರಾಯ್ತೀ, ಯಾಕೆ ಭೂತ ಹಿಡಿದವಳ ಹಾಗೆ ಕುಳಿತಿದ್ದಿ…?’ ಎಂದು ಮಾತಿಗೆಳೆದ. ಅಷ್ಟಕ್ಕೆ ಅವಳ ತಾಳ್ಮೆಯ ಕಟ್ಟೆಯೊಡೆಯಿತು. ‘ಹೌದೌದು, ನನಗೆ ಭೂತ ಹಿಡಿದಿದೆ. ನನ್ನನ್ನೂ ಮಕ್ಕಳನ್ನೂ ನೀವು ಸುಖದ ಸುಪ್ಪತ್ತಿಗೆಯಲ್ಲಿ ಮೆರೆಸುತ್ತಿದ್ದೀರಿ ನೋಡೀ, ಆ ಅಹಂಕಾರದ ಭೂತ ಹಿಡಿದಿದೆ ನಂಗೆ!’ ಎಂದು ಗುಡುಗಿದವಳು, ‘ನಿಮ್ಮಲ್ಲೊಂದು ಮಾತು ಕೇಳುತ್ತೇನೆ. ಉತ್ತರ ಕೊಡುತ್ತೀರಾ?’ ಎಂದು ಅವನನ್ನು ತೀಕ್ಷ್ಣವಾಗಿ ದಿಟ್ಟಿಸುತ್ತ ಕೇಳಿದಳು. ಗೋಪಾಲ ಅಳುಕಿದ. ‘ಅರೆರೇ, ಇದ್ದಕ್ಕಿದ್ದ ಹಾಗೆ ಇವಳಿಗೇನಾಯಿತಪ್ಪಾ…!’ ಎಂದುಕೊಂಡವನು, ‘ಆಯ್ತು ಮಾರಾಯ್ತಿ ಅದೇನು ಕೇಳು…!’ ಎಂದ ಮಂಕಾಗಿ.  

   ‘ಅಲ್ಲಾ, ನೀವು ನನ್ನನ್ನೊಂದು ಸೂಳೆ ಮಾಡಬೇಕೆಂದುಕೊಂಡಿದ್ದೀರಾ ಹೇಗೇ…?’ ಎಂದು ಅವನ ಮುಖಕ್ಕಪ್ಪಳಿಸಿದಂತೆ ಪ್ರಶ್ನಿಸಿದಳು. ಗೋಪಾಲ ಅವಕ್ಕಾದ. ಮರುಕ್ಷಣ ಅವನಿಗೂ ಸಿಟ್ಟು ಬಂತು. ‘ಛೇ!, ಎಂಥ ಮಾತಾಡ್ತೀ ಮಾರಾಯ್ತೀ…? ಮಂಡೆ ಹಾಳಾಗಿದಾ ನಿಂಗೇ?’ ಎನ್ನುತ್ತ ರಪ್ಪನೆದ್ದು ಅವಳ ಕೆನ್ನೆಗೆ ಬಾರಿಸುವ ಭಂಗಿಯಲ್ಲಿ ಕೈಯೆತ್ತಿ ಹಿಡಿದು, ‘ಮುಸುಡಿಯ ಮೇಲೆ ಒಂದು ಕೊಟ್ಟೆನೆಂದರೆ ಹಲ್ಲು ಉದುರಬೇಕು ನಾಯೀ…!’ ಎಂದ ಕಂಪಿಸುತ್ತ. 

ಅಪ್ಪ ಒಳಗಡಿಯಿಡುತ್ತಲೇ ಅಮ್ಮನಲ್ಲಾದ ಬದಲಾವಣೆಯನ್ನೂ ಅವರ ನಡುವೆ ಎದ್ದ ಮನಸ್ತಾಪವನ್ನೂ ಗಮನಿಸುತ್ತಿದ್ದ ಅಶ್ವಿನಿಯು ತಮ್ಮ ಪ್ರಥ್ವೀಶನನ್ನು ಮೆಲ್ಲನೇ ತನ್ನತ್ತ ಎಳೆದುಕೊಂಡು ಭಯದಿಂದ ಮೂಲೆ ಸೇರಿ ಕುಳಿತಿದ್ದಳು. ಆದರೆ ಅಪ್ಪ, ಅಮ್ಮನನ್ನು ಹೊಡೆಯಲು ಮುಂದಾದದ್ದನ್ನು ಕಂಡು, ‘ಅಯ್ಯೋ, ಬೇಡಪ್ಪಾ…!’ ಎಂದು ಚೀರಿದಳು. ಆಗ ಗೋಪಾಲ ಸ್ಥಿಮಿತಕ್ಕೆ ಬಂದ. ಆದರೆ ಅವನ ವರ್ತನೆಯಿಂದ ರಾಧಾ ಮತ್ತಷ್ಟು ಕೆರಳಿದಳು. ಅವಳಿಗೆ ಅಳು ಉಕ್ಕಿ ಬಂತು. ‘ಹೊಡೆಯಿರಿ ಮಾರಾಯ್ರೇ, ಯಾಕೆ ನಿಲ್ಲಿಸಿದಿರಿ…? ಅದನ್ನು ಬಿಟ್ಟು ಬೇರೇನು ಗೊತ್ತು ನಿಮಗೆ! ಹೆಂಡತಿ ಮಕ್ಕಳಿಗೆ ಸ್ವಂತದೊಂದು ಗುಡಿಸಲು ಮಾಡಿ ಕೊಡುವುದರ ಬಗ್ಗೆ ಚೂರಾದರೂ ಚಿಂತೆ ಉಂಟಾ? ಇದ್ದಿದ್ದರೆ ಇವತ್ತು ನನ್ನ ಅವಸ್ಥೆ ಹೀಗಾಗುತ್ತಿತ್ತಾ…? ಅದೆಲ್ಲ ನಿಮಗೆ ಹ್ಯಾಗೆ ಅರ್ಥವಾಗಬೇಕು ಬಿಡಿ! ಬನ್ನೀ, ನನ್ನೊಂದಿಗೆ ಈ ಮಕ್ಕಳನ್ನೂ ಹೊಡೆದು ಸಾಯಿಸಿ. ಆಮೇಲೆ ನೀವೊಬ್ಬರೇ ಆರಾಮವಾಗಿರಬಹುದು. ಆಗಲಾದರೂ ನನ್ನ ಮಾನ ಮರ್ಯಾದೆ ಉಳಿದೀತು!’ ಎಂದು ಚೀರಿದಳು.

ಆಗ ಗೋಪಾಲನಿಗೆ ತನ್ನ ದುಡುಕಿನರಿವಾಗಿ ಸಂಭಾಳಿಸಿಕೊಂಡು ಕುಳಿತ. ತನ್ನವಳು ಹಿಂದೆಂದೂ ಇಷ್ಟೊಂದು ಕಠೋರವಾಗಿ ವರ್ತಿಸಿದೆ ತಾಳ್ಮೆಯ ಮೂರ್ತಿಯಂತಿದ್ದಳಿಗೆ ಇವತ್ತೇನಾಯಿತು? ನಡೆಯಬಾರದ್ದೇನೋ ನಡೆದಿರಬೇಕು. ಅದಕ್ಕೇ ಸಿಟ್ಟಾಗಿದ್ದಾಳೆ ಎಂದುಕೊಂಡ. ಮೆಲ್ಲನೆದ್ದು ಹತ್ತಿರ ಹೋಗಿ ಕುಳಿತು ಅವಳನ್ನು ತನ್ನತ್ತ ಎಳೆದುಕೊಂಡ. ಅವಳ ತಲೆಯನ್ನು ಮೃದುವಾಗಿ ನೇವರಿಸಿದ. ಕಣ್ಣೀರಿನಿಂದ ತೊಯ್ದ ಮುಂಗುರುಳನ್ನು ನಯವಾಗಿ ಹಿಂದೆ ಸರಿಸಿ ಕಣ್ಣೀರೊರೆಸುತ್ತ, ‘ತಪ್ಪಾಯ್ತು ಮಾರಾಯ್ತೀ, ಅಂಥದ್ದೇನಾಯ್ತು ಅಂತ ಹೇಳಬೇಕಲ್ವಾ ನೀನು?’ ಎಂದು ಪ್ರೀತಿಯಿಂದ ಆಕ್ಷೇಪಿಸಿದ. ಅಷ್ಟೊತ್ತಿಗೆ ಮೂಲೆಯಲ್ಲಿ ಮುದುಡಿದ್ದ ಮಕ್ಕಳ ಮುಖದಲ್ಲಿ ಗೆಲುವು ಕಾಣಿಸಿತು. ಇಬ್ಬರೂ ಅಪ್ಪ, ಅಮ್ಮನ ಹತ್ತಿರ ಬಂದು ಅವರಿಗೆ ಒತ್ತಿ ಕುಳಿತರು. ಗಂಡನ ಸ್ವರ್ಶ ಮತ್ತು ಮಕ್ಕಳ ಸಾಮಿಪ್ಯದಿಂದ ರಾಧಾಳಿಗೆ ಸ್ವಲ್ಪ ಸಮಾಧಾನವೆನಿಸಿತು. ಆದರೆ ಮುತ್ತಯ್ಯನ ಲಂಪಟತನವನ್ನು ಗಂಡನೊಡನೆ ಹೇಳಲು ಹಿಂಜರಿಕೆಯಾಯಿತು. ಗಂಡನ ಮನಸ್ಸು ಕೆಟ್ಟು, ಕೋಪದ ಭರದಲ್ಲಿ ಏನಾದರೂ ಅನಾಹುತ ಮಾಡಿಬಿಟ್ಟರೇ…? ಎಂಬ ಅಳುಕು ಅವಳಿಂದ ಸತ್ಯವನ್ನು ಮರೆಮಾಚಿಸಿತು. ‘ಸದ್ಯ ಈಗ ಏನೂ ಹೇಳುವುದು ಬೇಡ. ಇನ್ನು ಮುಂದೆಯೂ ಅವನು ಕಾಟ ಕೊಟ್ಟನೆಂದರೆ ಸರಿಯಾಗಿ ಬುದ್ಧಿ ಕಲಿಸಿದರಾಯ್ತು’ ಎಂದುಕೊಂಡಳು. 

‘ಅಂಥದ್ದೇನೂ ಆಗಿಲ್ಲ ಮಾರಾಯ್ರೇ. ಆದರೂ ನಿಮಗೆ ಇವತ್ತೊಂದು ಮಾತು ಹೇಳುತ್ತೇನೆ. ನಿಜವಾಗಿಯೂ ನನ್ನ ಮತ್ತು ಮಕ್ಕಳ ಮೇಲೆ ನಿಮಗೆ ಚೂರಾದರೂ ಪ್ರೀತಿ ಇದ್ದರೆ ಕಾಡುಗುಡ್ಡವಾದರೂ ತೊಂದರೆಯಿಲ್ಲ, ಕೊನೆಗೆ  ಸುಡುಗಾಡಾದರೂ ಪರ್ವಾಗಿಲ್ಲ. ಎಲ್ಲಾದರೂ ಒಂದೆರಡು ಸೆಂಟ್ಸ್ ಸ್ವಂತ ಜಾಗವನ್ನು ದಯವಿಟ್ಟು ಮಾಡಿಕೊಡಿ. ಈ ಬಾಡಿಗೆ ಮನೆಗಳ ಸಾಹುಕಾರರೊಂದಿಗೆ ಇಷ್ಟು ವರ್ಷಗಳ ಕಾಲ ಏಗಿ ಏಗಿ ನನಗಂತೂ ಸಾಕಾಗಿ ಹೋಯಿತು. ಈ ಹತ್ತು ವರ್ಷಗಳಿಂದ ನೀವು ನಮ್ಮನ್ನು ಎಷ್ಟೊಂದು ಊರುಕೇರಿಗಳಿಗೆ ಹೊತ್ತುಕೊಂಡು ಸುತ್ತಾಡಿದ್ದೀರಿ, ಯಾರ್ಯಾರ ಹಂಗಿನ ಮನೆಗಳಲ್ಲಿ ಕೂರಿಸಿ ಹಿಂಸಿಸಿದ್ದೀರಿ ಅಂತ ಒಮ್ಮೆಯಾದರೂ ಯೋಚಿಸಿದ್ದೀರಾ? ಇಷ್ಟು ವರ್ಷಗಳಾದ ಮೇಲಾದರೂ ನಿಮ್ಮ ಸಂಸಾರಕ್ಕೊಂದು ಸ್ವಂತ ನೆಲೆ ಮಾಡಲು ಆಗಲಿಲ್ಲವೆಂದರೆ ಏನರ್ಥ ಮಾರಾಯ್ರೇ…?’ ಎನ್ನುತ್ತ ಸೆರಗಿನಿಂದ ಕಣ್ಣೀರೊರೆಸಿಕೊಂಡಳು. ‘ಎಲ್ಲಾದರೊಂದು ಸರಕಾರಿ ಜಾಗವನ್ನಾದರೂ ಹುಡುಕಿ ನೋಡಿ ಅಂದರೆ ಅದನ್ನೂ ಮಾಡುತ್ತಿಲ್ಲ ನೀವು! ಹೀಗೆಯೇ ಕಾಲಾಹರಣ ಮಾಡುತ್ತಿದ್ದರೆ ನಾನೊಂದು ದಿನ ಮಕ್ಕಳನ್ನು ಕಟ್ಟಿಕೊಂಡು ತಾಯಿ ಮನೆಗೆ ಹೊರಟು ಹೋಗುವುದು ಖಂಡಿತಾ ನೋಡಿ! ಆಮೇಲೆ ನೀವೊಬ್ಬರೇ ಎಲ್ಲಾದರೂ, ಯಾರ ಹಂಗಿನಲ್ಲಾದರೂ ಬಿದ್ದು ಹಾಳಾಗಿ ಹೋಗಿ!’ ಎಂದು ನೊಂದು ನುಡಿದಳು. 

    ‘ಓಹೋ, ಇದಾ ವಿಷ್ಯ…? ಇದಕ್ಕೇನಾ ಇವಳು ಇಷ್ಟೆಲ್ಲ ಹಾರಾಡಿದ್ದು! ಇದು ಇವಳ ನಿತ್ಯದ ಕಥೆಯಲ್ಲವಾ?’ ಎಂದುಕೊಂಡ ಗೋಪಾಲ ಸ್ವಲ್ಪ ಹಗುರವಾದ. ‘ಎಂಥ ಮಾರಾಯ್ತಿ ನೀನು ಮಾತಾಡುತ್ತಿರುವುದು…? ನಾನೇನು ಕೈಕಟ್ಟಿ ಕುಳಿತಿದ್ದೇನೆ ಅಂದುಕೊಂಡಿಯಾ? ಸ್ವಂತ ಜಾಗ ಕೊಳ್ಳುವುದೆಂದರೆ ಅದೇನು ನೂರಿನ್ನೂರು ರೂಪಾಯಿಗೆ ಸಿಗುವಂಥದ್ದಾ…? ಲಕ್ಷಗಟ್ಟಲೆ ಬೇಕು! ಅಷ್ಟೊಂದು ದುಡ್ಡು ನಮ್ಮ ಹತ್ತಿರ ಎಲ್ಲುಂಟು? ಒಂದು ದರ್ಖಾಸು ಜಾಗವನ್ನಾದರೂ ಹುಡುಕುವ ಅಂತಲೇ ಕೆಲವು ತಿಂಗಳಿನಿಂದ ಈಶ್ವರಪುರದ ಹರಕನಕಟ್ಟೆ, ಪರೀಕಾ, ಸಂತೋಷ ನಗರ, ಹನುಮಂತನಗರ ಅಂತೆಲ್ಲ ಸುತ್ತಾಡುತ್ತಿದ್ದೇನೆ. ನಿಟ್ಟೂರಿನಿಂದ ಇಂದ್ರನಗರದವರೆಗಿನ ಗುರುತು ಪರಿಚಯದವರನ್ನೆಲ್ಲ ಬೆನ್ನುಹತ್ತಿ ಮೂರು ಸೆಂಟ್ಸ್, ಐದು ಸೆಂಟ್ಸ್ ಜಾಗ ಎಲ್ಲಾದರೂ ಸಿಗಬಹುದಾ ಅಂತ ಕೇಳಿ ಕೇಳಿ ನನಗಂತೂ ಸಾಕಾಗಿ ಹೋಗಿದೆ. ಆದರೆ ಅಂಥ ಜಾಗ ಕಾಣಿಸುತ್ತಿಲ್ಲ. ಇಲ್ಲಾಂತಲ್ಲ, ಇದೆ. ಆದರೆ ಹ್ಯಾಗಿದೆ ಗೊತ್ತಾ, ಕೆಲವರು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕುಳಿತು ಆರೇಳು ಸೆಂಟ್ಸುಗಳಿಗೆ ಬೇಲಿ ಹಾಕಿಕೊಂಡು ಅದರ ಸಕ್ರಮಕ್ಕೆ ಅರ್ಜಿ ಕೊಟ್ಟು ಸ್ವಂತ ಮಾಡಿಸಿಕೊಂಡು ಮನೆ ಕಟ್ಟುತ್ತಾರೆ. ಆ ಮನೆಯಲ್ಲಿ ಒಂದಷ್ಟು ಕಾಲ ವಾಸಮಾಡುತ್ತಾರೆ. ಆಮೇಲೆ ಯಾವ್ಯಾವುದೋ ಕಾರಣಕ್ಕೆ ಆ ಮನೆಯನ್ನು ಮಾರಲು ಹೊರಡುತ್ತಾರೆ. ಆದರೆ ಅಂಥವರು ತಮಗೆ ಧರ್ಮಕ್ಕೆ ಸಿಕ್ಕಿದ ಜಾಗಕ್ಕೂ ಸೆಂಟ್ಸಿಗೆ ಎರಡು, ಮೂರು ಲಕ್ಷ ಸೇರಿಸಿ ಮನೆಯ ರೇಟು ಹೇಳುತ್ತಾರೆ. ಅದೂ ಕೆಲವು ಕೊಳಚೆಗೇರಿಗಳ ಅವಸ್ಥೆಯೇ, ಅಲ್ಲಿರುವುದುಕ್ಕಿಂತ ನೀನು ಹೇಳಿದಂತೆ ಎಲ್ಲಾದರೂ ಮಸಣದಲ್ಲೇ ಬದುಕುವುದು ಮೇಲು ಅಂತನ್ನಿಸುತ್ತದೆ. ಅಂಥ ಪರಿಸ್ಥಿತಿಯಿದೆ ಕೆಲವು ಕಡೆಗಳಲ್ಲಿ. ಅಲ್ಲಿ ಮಳೆಗಾಲದಲ್ಲೇ ವಾರಕ್ಕೆರಡು ಬಾರಿ ನೀರಂತೆ! ಬೇಸಿಗೆಯಲ್ಲಿ ಹತ್ತು ಹದಿನೈದು ದಿನಕ್ಕೊಮ್ಮೆ ಬಂದರೆ ಬಂತು, ಇಲ್ಲದಿದ್ದರಿಲ್ಲ! ಅಂಥ ಜಾಗಕ್ಕೂ ಮೂರು, ನಾಲ್ಕು ಕೋಣೆಗಳ ಹಂಚಿನ ಮನೆಗೂ ರೇಟು ಎಷ್ಟಿದೆ ಗೊತ್ತುಂಟಾ, ಹದಿನೈದರಿಂದ ಇಪ್ಪತ್ತು ಲಕ್ಷ!’ ಎಂದು ಗೋಪಾಲ ರಾಧಾಳನ್ನು ಹತಾಶೆಯಿಂದ ದಿಟ್ಟಿಸುತ್ತ ಹೇಳಿ, ಕೆಲವುಕ್ಷಣ ಮೌನವಾದ. ಬಳಿಕ, ‘ನನ್ನ ಸ್ನೇಹಿತ ನಾಗೇಶ ಇದ್ದಾನಲ್ಲ, ಅವನೊಂದಿಗೆ ಮೊನ್ನೆ ಕೋಟ್ನಬೆಟ್ಟಿಗೆ ಹೋಗಿದ್ದೆ. ಅಲ್ಲಿ ಒಂದು ಕಡೆ ಕುರುಚಲು ಹಾಡಿಗಳ ಮಧ್ಯೆ ಒಂದಷ್ಟು ಸರಕಾರಿ ನಿವೇಶನಗಳಿದ್ದವು. ಅದರ ನಡುವೆ ಏಳು ಸೆಂಟ್ಸ್ ಸರ್ಕಾರಿ ಜಾಗವೊಂದು ಖಾಲಿಯಿತ್ತು. ಆದರೆ ಅಲ್ಲಿಯ ಅವಸ್ಥೆಯನ್ನು ನೋಡಿದರೆ ನೀನು ಅಲ್ಲಿಂದಲೇ ಊರು ಬಿಡುತ್ತಿಯೇನೋ ಅಂತ ಭಯವಾಯಿತು. ಹಿಂದಿರುಗಿ ಬಂದುಬಿಟ್ಟೆ!’ ಎಂದ ಬೇಸರದಿಂದ. ಅದರಿಂದ  ರಾಧಾಳ ದುಗುಡ ಸ್ವಲ್ಪ ಕಡಿಮೆಯಾಯಿತು.

   ಗಂಡನ ಮಾತನ್ನು ಆಸ್ಥೆಯಿಂದ ಕೇಳುತ್ತಿದ್ದವಳು, ‘ಅಂಥದ್ದೇನಿದೆ ಅಲ್ಲಿ? ಅದೇನಿದ್ದರೂ ಪರ್ವಾಗಿಲ್ಲ. ಅದೇ ಜಾಗ ಮಾಡಿಕೊಡಿ. ಹೇಗಾದರೂ ಸುಧಾರಿಸಿಕೊಂಡು ಹೋಗುತ್ತೇನೆ’ ಎಂದಳು ಛಲದಿಂದ.

‘ಎಂಥ ಸುಧಾರಿಸಿಕೊಂಡು ಹೋಗುವುದು ಕರ್ಮ? ಆ ಜಾಗವಿರುವುದು ಒಂದು ಪಾಳು ಗುಡ್ಡೆಯ ನಡುವೆ. ಅದರ ಸುತ್ತಮುತ್ತ ಬರೇ ಬಂಡೆನೇ ತುಂಬಿಕೊಂಡಿದೆ. ಅಂಥ ಜಾಗದಲ್ಲೂ ಮೂರು ಮನೆಗಳಿವೆ. ಆದರೆ ಆ ಮನೆಮಂದಿ ವಾರಕ್ಕೊಮ್ಮೆ ರಜೆಯ ದಿನ ಮಾತ್ರ ಬಂದು ಅಲ್ಲಿರುವುದಂತೆ!’ ಎಂದ ಬೇಸರದಿಂದ. 

ರಾಧಾಳಿಕೆ ಕುತೂಹಲವಾಯಿತು, ‘ಹೌದಾ! ಹಾಗೆ ಯಾಕೆ?’ 

‘ಅಲ್ಲೂ ನೀರಿಲ್ಲ, ಅದರ ಆಸುಪಾಸಿನಲ್ಲೂ ಇಲ್ಲ. ದಿನಸಿ ಮತ್ತಿತರ ಸಾಮಾನು ಬೇಕಿದ್ದರೆ ನಾಲ್ಕು ಕಿಲೋ ಮೀಟರ್ ದೂರದ ಮಣಿಪುರ ಪೇಟೆಗೆ ಹೋಗಬೇಕು. ಪುಗಸಟ್ಟೆ ಸಿಕ್ಕಿದ ಒಂದಷ್ಟು ಜಾಗಕ್ಕೆ ಬೇಲಿ ಹಾಕಿ ಮನೆ ಕಟ್ಟಿಕೊಂಡು, ಇವತ್ತಲ್ಲ ನಾಳೆ ಡಿನೋಟೀಸು ಮತ್ತು ಸರಕಾರದ ಸವಲತ್ತು ಸಿಗಬಹುದೆಂದು ಆ ಮನೆಯವರು ದಿನ ದೂಡುತ್ತಿದ್ದಾರೆ. ಅಲ್ಲಿನವನೊಬ್ಬ ಪಂಚಾಯತ್ ಮೆಂಬರ್ರೇ ಆ ಜಾಗವನ್ನು ಅವರಿಗೆ ತೋರಿಸಿ ಕುಳಿತುಕೊಳ್ಳಿಸಿದ್ದಂತೆ. ಅವನು ಒಬ್ಬೊಬ್ಬರಿಂದ ಮೂರ್ಮೂರು ಸಾವಿರ ಪಡೆದು, ‘ನಿಮಗೆ ಬೇಕಾದಷ್ಟು ಸೆಂಟ್ಸಿಗೆ ಬೇಲಿ ಹಾಕಿಕೊಳ್ಳಿ. ಸದ್ಯದಲ್ಲೇ ಈ ಗ್ರಾಮ ಇಂಪ್ರೂಮೆಂಟ್ ಆಗುತ್ತದೆ. ಜಾಗಕ್ಕೆ ರೆಕಾರ್ಡೂ ಸಿಗುತ್ತದೆ. ನಂತರ ಇಲ್ಲೂ ಸೆಂಟ್ಸಿಗೆ ಎರಡು ಮೂರು ಲಕ್ಷ ಬರುವುದು ಗ್ಯಾರಂಟಿ!’ ಎಂದಿದ್ದನಂತೆ. 

‘ನೀರಿಲ್ಲ ಅಂತೀರಿ, ಮನೆಗಳನ್ನು ಹೇಗೆ ಕಟ್ಟಿಕೊಂಡರು?’ 

‘ಅವರು ಮನೆ ಕಟ್ಟಲು ಶುರು ಮಾಡಿದು ಮಳೆಗಾಲದಲ್ಲಂತೆ. ಒಂದೊಂದು ಮಳೆಗಾಲಕ್ಕೂ ಸ್ವಲ್ಪಸ್ವಲ್ಪವೇ ಕಟ್ಟುತ್ತ ಪೂರ್ತಿಯಾಗಲು ಕೆಲವು ಮಳೆಗಾಲಗಳು ಬೇಕಾದುವಂತೆ. ಅಷ್ಟಲ್ಲದೇ ಆ ಮನೆಮಂದಿಯಲ್ಲಿ ಕೆಲವರು ಮನೆಕಟ್ಟುವ ಮೇಸ್ತ್ರಿಗಳೇ ಆಗಿದ್ದವರು. ಹಾಗಾಗಿ ನಾಲ್ಕೈದು ಮೈಲು ದೂರದಿಂದ ಕಲ್ಲು, ಮಣ್ಣು, ಸಿಮೆಂಟು, ನೀರು ಹೊತ್ತು ತಂದು ಕಟ್ಟಿದ್ದರಂತೆ. ಈ ನಾಗೇಶನ ದೋಸ್ತಿಯೊಬ್ಬ ಅದೇ ಊರಿನವನು. ಬಾರಿ ಚಾಲಾಕಿನ ಮನುಷ್ಯ. ಅವನೇನು ಮಾಡುತ್ತಿದ್ದಾನೆ ಗೊತ್ತುಂಟಾ? ಅಲ್ಲಿ ಖಾಲಿ ಉಳಿದಿರುವ ಜಾಗಕ್ಕೆ ಐದಾರು ಸೆಂಟ್ಸುಗಳಂತೆ ಬೇಲಿ ಹಾಕಿ ಹದಿನೈದು ಇಪ್ಪತ್ತು ಸಾವಿರಕ್ಕೆ ಮಾರುತ್ತಿದ್ದಾನೆ. ಅವನನ್ನೂ ವಿಚಾರಿಸಿದೆ. ಅದಕ್ಕಾತ, ‘ಪಂಚಾಯತ್ ಅಧ್ಯಕ್ಷರು ನನ್ನ ಪರಿಚಯದವರು. ನಾನೂ ಒಂದು ಜಾಗ ಮಾಡಿಟ್ಟಿದ್ದೇನೆ. ಅದರ ಪಕ್ಕದ್ದು ಬೇರೊಬ್ಬರದ್ದು. ಅವರು ಆವತ್ತು ಬೇಲಿ ಹಾಕಿ ಹೋದವರು, ಈಗ ಬೇಡ ಅಂತಿದ್ದಾರೆ. ಅದರಲ್ಲಿ ಸುಮಾರು ಏಳು ಸೆಂಟ್ಸ್ ಇರಬಹುದು. ಮೂವತ್ತು ಸಾವಿರ ಅಂತಾರೆ. ನಿಮಗೆ ಬೇಕಿದ್ದರೆ ಇಪ್ಪತ್ತೈದಕ್ಕೆ ಕೊಡಿಸುತ್ತೇನೆ ಅಂದ. ‘ಡಿನೋಟೀಸ್ ಇಲ್ಲದ ಜಾಗವನ್ನು ಯಾವ ಆಧಾರದ ಮೇಲೆ ತೆಗೆದುಕೊಳ್ಳುವುದು?’ ಎಂದು ನಾನು ಕೇಳಿದ್ದಕ್ಕೆ, ‘ಇನ್ನು ಹತ್ತು, ಹದಿನೈದು ಮನೆಗಳಾಗುತ್ತಲೇ ಡಿನೋಟೀಸ್ ಸಿಗುತ್ತದೆ’ ಎಂದು ಅವನೂ ಹೇಳುತ್ತಾನೆ. ಆದರೆ ಯಾರೇನು ಕೊಟ್ಟರೂ ಬಂಡೆಯ ಮೇಲೆ ಕುಳಿತುಕೊಂಡು ಬಾಯಾರಿದರೆ ಕುಡಿಯುವುದಾದರೂ ಏನನ್ನು?’ ಎಂದು ಗೋಪಾಲ ಜಿಗುಪ್ಸೆಯಿಂದ ನುಡಿದು ದಢಕ್ಕನ್ನೆದ್ದು ಹೊರಗೆ ಹೊರಟು ಹೋದ. ಗಂಡನೂ ಜಾಗದ ಹುಡುಕಾಟದಲ್ಲಿದ್ದಾನೆಂದು ತಿಳಿದ ಮೇಲೆ ರಾಧಾಳಿಗೆ ನೆಮ್ಮದಿಯಾಯಿತು. ಕುಳಿತಲ್ಲೇ ತೂಕಡಿಸುತ್ತಿದ್ದ ಮಕ್ಕಳನ್ನೆಬ್ಬಿಸಿ ಕೈಕಾಲು ತೊಳೆಯಲು ಕಳುಹಿಸಿಕೊಟ್ಟು ಊಟ ಬಡಿಸಲು ಒಳಗೆ ನಡೆದಳು


(ಮುಂದುವರಿಯುವುದು)

*************************************************

ಗುರುರಾಜ್ ಸನಿಲ್

ಪರಿಚಯ:

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

9 thoughts on “ಆವರ್ತನ

  1. ಕಥೆಯ ಪ್ರಾರಂಭ ಗಟ್ಟಿತನವನ್ನು ಹೊಂದಿದೆ. ಭಾವನೆಗಳು ದಟ್ಟವಾಗಿದೆ. ನೈಜತೆಯಿಂದ ಕೂಡಿದೆ. ಮುಂದಿನ ಸಂಚಿಕೆಗೆ ಕಾತುರದಿಂದ ಕಾಯುವಂತೆ ಮಾಡಿದೆ. ಲೇಖಕರು ಮೊದಲ ಕಾದಂಬರಿ ಎಂದು ನಂಬಲಾಗುತ್ತಿಲ್ಲ.

    1. ತಮ್ಮ ಸಾಹಿತ್ಯ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದ ಸರ್…

  2. ಸಾಹಿತ್ಯ ಕ್ಷೇತ್ರದಲ್ಲಿ ಕಾದಂಬರಿಕಾರರಾಗಿ ಇಟ್ಟ ಮೊದಲ ಹೆಜ್ಜೆಗೆ ಹೃದಯಾಂತರಾಳದ ಅಭಿನಂದನೆಗಳು ಗುರುರಾಜ್ ಅವರೇ. ತಾವು ಬರೆದಿರುವ ಆವರ್ತನ ಕಾದಂಬರಿಗೆ ಸಂಗಾತಿ ಬಳಗ ವೇದಿಕೆ ಕಲ್ಪಿಸಿಕೊಟ್ಟಿರುವುದು ಅಭಿಮಾನದ ಸಂಗತಿ. ಕಾದಂಬರಿಯ ಮೊದಲ ಭಾಗವೇ ಕುತೂಹಲವನ್ನು ಕಾಯ್ದಿರಿಸಿಕೊಂಡು ಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ತಮ್ಮಿಂದ ಇನ್ನಷ್ಟು ವಿಭಿನ್ನವಾದ ಕಾದಂಬರಿಗಳು ಮೂಡಿ ಬರಲೆಂದು ಹಾರೈಸುವೆನು. ಶುಭವಾಗಲಿ.

  3. ಆವರ್ತನ ಕಾದಂಬರಿಯ ಮೊದಲ ಅಧ್ಯಾಯ ಚೆನ್ನಾಗಿ ಮೂಡಿಬಂದಿದ್ದು,ಕುತೂಹಲ ದಿಂದ ಓದಿಸಿಕೊಂಡು ಹೋಯಿತು.ಮುಂದಿನ ಭಾಗದ ಓದಿಗಾಗಿ ಕಾಯುವಂತಾಗಿದೆ.ತಮ್ಮ ಸಾಹಿತ್ಯ ಕೃಷಿ ಉತ್ತುಂಗಕ್ಕೇರಲಿ ಎಂಬುದು ಮನದಾಳದ ಅಭಿಲಾಷೆ.ಅಭಿನಂದನೆಗಳು ಸರ್.

  4. ಸರಳ ಹಾಗೂ ಕುತೂಹಲ ಮೂಡಿಸುವ ಕಥೆ… ಜೊತೆಗೆ ಸಮಾಜದ ನಿಜ ಸ್ವರೂಪಕ್ಕೆ ಹಿಡಿದ ಕನ್ನಡಿ .. ನೈಜತೆ ತುಂಬಿದ ಸಂಭಾಷಣೆಗಳು…
    ಲೇಖಕರಿಗೆ ಅಭಿನಂದನೆಗಳು…

  5. ಆವರ್ತನದ ಮೊದಲ ಕಂತು ಈಗಷ್ಟೇ ಓದಿದೆ. ಸೊಗಸಾಗಿ ಓದಿಸಿಕೊಂಡು ಹೋಯಿತು. ‌ಕಾದಂಬರಿಯ ಲೋಕಕ್ಕೆ ಇರಿಸಿದ ನಿಮ್ಮ ಮೊದಲ ಹೆಜ್ಜೆ ದೃಢವಾಗಿದೆ. ಎಲ್ಲರಿಗೂ ಅರ್ಥವಾಗುವಂತೆ ಸರಳವಾದ ಸೊಗಸಾದ ಕನ್ನಡ ಭಾಷೆ ಬಳಸಿದ್ದು ಡಾ.ಶಿವರಾಮ ಕಾರಂತರನ್ನು ನೆನಪಿಸಿದ್ದು ಸುಳ್ಳಲ್ಲ. ನಿಮಗೆ ಒಳ್ಳೆಯದಾಗಲಿ..

Leave a Reply

Back To Top