ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ-10

ಆತ್ಮಾನುಸಂಧಾನ

ಬನವಾಸಿಯಲ್ಲಿ ನೋವಿನ

ನೆನಪುಗಳು

Madhukeshwara Temple Banavasi, History, Timings, Importance

ಬಾಲ್ಯದ ನಾಲ್ಕು ವರ್ಷಗಳನ್ನು ಬನವಾಸಿಯಲ್ಲಿ ಕಳೆಯುವ ಅವಕಾಶ ದೊರೆತದ್ದು ನನ್ನ ಬದುಕಿನಲ್ಲಿ ಒದಗಿ ಬಂದ ಭಾಗ್ಯವೆಂದೇ ನಾನು ಭಾವಿಸಿದ್ದೇನೆ. ಅತ್ಯಂತ ಆಪ್ತ ಸ್ನೇಹಿತರಾಗಿ ದೊರೆತ ಮುಖೇಶ್ ಕುಚಿನಾಡ, ಸೊಮಶೇಖರ ಒಡಿಯರ್, ಅಶೋಕ ಪಾಳಾ, ಸೆಂಟ್ರಲ್ ಕೆಫೆಯ ಸದಾನಂದ ಶೆಟ್ಟಿ, ಕಿರಾಣಿ ಅಂಗಡಿಯ ಸಚ್ಚಿದಾನಂದ ಮೂಡ್ಲಗಿರಿ ಶೆಟ್ಟಿ ಮುಂತಾದ ಗೆಳೆಯರ ಒಡನಾಟದಲ್ಲಿ ಅತ್ಯಂತ ಮಧುರವಾದ ಅನುಭವಗಳು ನನಗೆ ದಕ್ಕಿವೆ. ಈ ಗೆಳೆಯರೆಲ್ಲ ಆಟ ಪಾಠ ವಿನೋದಗಳಲ್ಲಿ ಜೊತೆ ಸೇರುವಾಗ ಜಾತಿಗೀತಿಯ ಯಾವ ಕೀಳರಿಮೆಯೂ ಕಾಡದಂತೆ ನಮ್ಮನ್ನು ನೋಡಿಕೊಂಡರು. ನೋವಿನ ಸಂಗತಿಯೆಂದರೆ ಈ ಯಾವ ಗೆಳೆಯರೂ ಈಗ ನನ್ನ ಸಂಪರ್ಕದಲ್ಲಿ ಇಲ್ಲ. ಅವರೆಲ್ಲ ಹೇಗಿದ್ದಾರೆ? ಎಲ್ಲಿದ್ದಾರೆ? ಎಂಬ ಯಾವ ಸುಳಿವೂ ನನಗಿಲ್ಲ. ಆದರೆ ಅವರೆಲ್ಲ ನನಗಿಂತ ಉತ್ತಮ ಸ್ಥಿತಿವಂತರಾಗಿಯೇ ಇದ್ದಿರಬೇಕು ಎಂದು ನಾನು ಭಾವಿಸಿದ್ದೇನೆ.

            ಬನವಾಸಿಯ ಬಾಲ್ಯದ ಸಂತಸದ ದಿನಗಳಲ್ಲಿಯೂ ನನ್ನನ್ನು ನೋವಿನ ನೆನಪಾಗಿ ಕಾಡುವ ಒಂದೆರಡು ಸಂದರ್ಭಗಳು ಮತ್ತೆ ಮತ್ತೆ ನನ್ನನ್ನು ಕಾಡುತ್ತಲೇ ಇರುತ್ತದೆ…..

            ಬನವಾಸಿಯ ವಾಸ್ತವ್ಯದ ಸಂದರ್ಭದಲ್ಲಿ ಹುಟ್ಟಿದವನು ಎಂಬ ಕಾರಣದಿಂದ ಬಹುಶಃ ನನ್ನ ಎರಡನೆಯ ಸಹೋದರನಿಗೆ ಮಧುಕೇಶ್ವರ ಎಂದು ಹೆಸರನ್ನಿಟ್ಟಿರಬೇಕು. ಆಗ ತಾನೆ ಎದ್ದು ನಿಂತು ಹೆಜ್ಜೆಯಿಕ್ಕಲು ಕಲಿಯುತ್ತಿದ್ದ. ಹೆಚ್ಚೂ ಕಡಿಮೆ ಅವನನ್ನು ಎತ್ತಿಕೊಂಡು ಆಡಿಸುವುದೂ, ನಡೆಸುವುದೂ ಮಾಡುತ್ತಿದ್ದೆನಾದ್ದರಿಂದ ನನ್ನೊಡನೆ ವಿಶೇಷ ಸಲುಗೆಯಿಂದ ಇರುತ್ತಿದ್ದ. ನಾನು ಆಟವಾಡಲು ಹೊರಟಾಗ ಹಠಮಾಡಿ ಬೆನ್ನಹಿಂದೆ ಬರುತ್ತಿದ್ದ.

            ಒಮ್ಮೆ ಅವ್ವ ಒಂದಿಷ್ಟು ರೇಶನ್ ಸಾಮಾಗ್ರಿಗಾಗಿ ನನ್ನನ್ನು ಅಂಗಡಿಗೆ ಕಳುಹಿಸಿದ್ದಳು. ಅಪ್ಪನ ಸೈಕಲ್ ಮನೆಯಲ್ಲಿತ್ತು. ಅದನ್ನು ಹತ್ತಿ ಕೂರಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಒಳ ಪೆಡಲ್ ಮೇಲೆ ಕಾಲಿಟ್ಟು ಹೊಡೆಯುವ ರೂಢಿಮಾಡಿಕೊಂಡಿದ್ದೆ. ನನಗೋ ಇಂಥ ಅವಕಾಶ ಸಿಕ್ಕಾಗ ತುಂಬಾ ಖುಷಿಯಾಗುತ್ತಿತ್ತು. ಅವಸರದಲ್ಲಿ ಸೈಕಲ್ ಏರಿ ಹೊರಟೆ. ಮಧು ನನ್ನ ಬೆನ್ನ ಹಿಂದೆ ಬರುತ್ತಿದ್ದಾನೆ. ಎಂಬುದನ್ನು ಗಮನಿಸಲೇ ಇಲ್ಲ. ಓಣಿಯ ತಿರುವಿನಲ್ಲಿ ನಾನು ಮರೆಯಾಗುವವರೆಗೆ ನನ್ನ ಹಿಂದೆಯೇ ಓಡಿ ಬರುತ್ತಿದ್ದ ಮಧು, ನಾನು ಮರೆಯಾಗುತ್ತಲೇ ಹಿಂದಿರುಗಿದವನು ಬೇರೆ ದಾರಿ ಹಿಡಿದು ಮುಂದೆ ಸಾಗಿದ್ದಾನೆ. ಆಗ ತಾನೆ ಓಡಾಡಲು ಕಲಿತ ಹುಡುಗ ದಾರಿ ತಪ್ಪಿ ಅಳುತ್ತ ಓಡುವಾಗ ಅವರಿವರು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದಷ್ಟು ಅವರಿಂದ ತಪ್ಪಿಸಿಕೊಂಡು ಅಳುತ್ತ ಒಂದು ದಿಕ್ಕು ಹಿಡಿದು ಓಡುತ್ತಲೇ ಇದ್ದಾನೆ. ದಾರಿಯಲ್ಲಿ ನಮಗೆ ಪರಿಚಯವಿದ್ದ ಹೆಂಗಸೊಬ್ಬಳು ಅವನನ್ನು ಗುರುತು ಹಿಡಿದವಳು ಶತಾಯ ಗತಾಯ ತಡೆದು ನಿಲ್ಲಿಸಲು ಪ್ರಯತ್ನಿಸಿದ್ದಾಳೆ. ಆದರೆ ಅವಳು ಮೂಕಿ. ಮಾತು ಸ್ಪಷ್ಟವಿಲ್ಲ. ತನ್ನ ಮೂಕ ಭಾಷೆಯಲ್ಲಿ ವಿಕಾರವಾಗಿ ಅರಚುತ್ತ ಮಧುವನ್ನು ತಡೆಯುವ ಪ್ರಯತ್ನ ಮಾಡಿದ್ದಾಳೆ. ಆದರೆ ಆತ ಇನ್ನಷ್ಟು ಗಾಬರಿಗೊಂಡು ಚೀರುತ್ತ ಓಡಿದ್ದಾನೆ.

            ಇತ್ತ ಮನೆಯಲ್ಲಿ ಮಧುವನ್ನು ನಾನೇ ಕರೆದೊಯ್ದಿರಬೇಕೆಂದು ನಿರುಮ್ಮಳವಾಗಿದ್ದ ತಾಯಿ, ತಂಗಿಯರೆಲ್ಲ ನಾನೊಬ್ಬನೇ ಮರಳಿ ಬಂದಾಗ ಹೌಹಾರಿ ಹೋದರು. ಮನೆಯಲ್ಲಿ, ನೆರೆಮನೆಗಳಲ್ಲಿ, ಬೀದಿಗಳಲ್ಲಿ ಮಧುವನ್ನು ಅರಸಿ ಕಾಣದೆ ಕಂಗಾಲಾದೆವು.

            ತಾಸರ್ಧ ತಾಸು ವಾತಾವರಣವೇ ಪ್ರಕ್ಷುಬ್ಧವಾಗಿ ಹೋಯಿತು. ಎಲ್ಲರೂ ನನ್ನ ನಿರ್ಲಕ್ಷ್ಯ ವೇ  ಇದಕ್ಕೆ ಕಾರಣವೆಂದು ಆಡಿಕೊಳ್ಳುವಾಗ ನಾನು ಕುಸಿದು ಹೋಗಿದ್ದೆ. ಸುದೈವವೆಂದರೆ ಮಧುವನ್ನು ಗುರುತಿಸಿ ತಡೆದು ನಿಲ್ಲಿಸಲು ಪ್ರಯತ್ನಿಸಿ ವಿಫಲಳಾದ ಮೂಕಜ್ಜಿ ಅಷ್ಟಕ್ಕೆ ನಿಲ್ಲದೆ ನಮ್ಮ ಮನೆಯವರೆಗೆ ಓಡೋಡಿ ಬಂದು ಸಂಗತಿಯನ್ನು ತಿಳಿಸಿ ಉಪಕಾರ ಮಾಡಿದಳು. ಅಪ್ಪ ಅವ್ವ ಪೇಟೆಯಲ್ಲಿ ಸಿಕ್ಕುಬಿದ್ದ ಮಧುವನ್ನು ಹುಡುಕಿ ಕರೆತರುವ ಹೊತ್ತಿಗೆ ಸರಿರಾತ್ರಿಯಾಗಿತ್ತು. ಆದರೆ ಈ ಘಟನೆ ನನ್ನ ನಿರ್ಲಕ್ಷ್ಯ ಕ್ಕೆ ಉದಾಹರಣೆಯಾಗಿ ಈಗಲೂ ನನ್ನನ್ನು ಕಾಡುತ್ತಲೇ ಇದೆ. ಆದರೆ ಅಂದು ಮರಳಿ ಮನೆ ಸೇರಿದ ಮಧು ಇಂದು ಈ ನೆನಪುಗಳನ್ನು ಬರೆಯುವ ಹೊತ್ತಿಗೆ ನಮ್ಮೊಡನಿಲ್ಲ. ವೃತ್ತಿಯಿಂದ ಕಂಡಕ್ಟರನಾದ. ಮದುವೆಯಾಗಿ ಒಂದು ಗಂಡು ಒಂದು ಹೆಣ್ಣು ಮಗುವಿನ ತಂದೆಯಾದ. ತನ್ನ ೫೪ ನೇ ವಯಸ್ಸಿನಲ್ಲಿ ೨೦೧೭ ರ ಮೇ ತಿಂಗಳ ಒಂದು ದಿನ ತೀವೃವಾದ ನಿಮೋನಿಯಾ ಕಾಯಿಲೆಯಿಂದ ಬಳಲಿ ನಮ್ಮನ್ನೆಲ್ಲ ಬಿಟ್ಟು ಹೊರಟು ಹೋದ.

            ಬನವಾಸಿಯ ನೆನಪುಗಳಲ್ಲಿ ನನ್ನನ್ನು ಈಗಲೂ ಕೀಳರಿಮೆಯಿಂದ ಕಾಡುವ ಇನ್ನೊಂದು ಘಟನೆ ಬಂಕಸಾಣ ಜಾತ್ರೆ. ಅಪ್ಪ ಏಳನೆಯ ತರಗತಿಯ ವಿದ್ಯಾರ್ಥಿಗಳನ್ನು ಬಂಕಸಾಣ ಜಾತ್ರೆಯ ಪ್ರವಾಸಕ್ಕೆ ಕರೆದೊಯ್ದಿದ್ದರು. ಜಾತ್ರೆಯಾದ್ದರಿಂದ ನನ್ನನ್ನು, ನನ್ನ ತಮ್ಮ ನಾಗೇಶನನ್ನು ಜೊತೆಯಲ್ಲಿ ಕರೆದೊಯ್ದರು. ನಮಗಂತೂ ಬಹಳ ಸಂಭ್ರಮವಾಗಿತ್ತು. ಜಾತ್ರೆಯ ಮೋಜು ಮಜಾ ಎಲ್ಲವನ್ನು ಅನುಭವಿಸಿ ತಿರುಗಿ ಹೊರಡುವಾಗ ಅಪ್ಪನ ಕೆಲವು ವಿದ್ಯಾರ್ಥಿಗಳು ಮತ್ತಷ್ಟು ಖರೀದಿಯ ನೆಪದಲ್ಲಿ ಸಂತೆ ಅಂಗಡಿಗಳಲ್ಲಿ ಹೊಕ್ಕು ಚೌಕಾಶಿ ಮಾಡುತ್ತಿದ್ದರು. ಯಾವುದೋ ಹುಡುಗ ಕಾಲಿನ ಸ್ಲಿಪರ್ ಕೊಳ್ಳಲು ಚೌಕಾಶಿ ಮಾಡುತ್ತಿದ್ದಾಗ ಅಪ್ಪ ಮಧ್ಯ ಪ್ರವೇಶಿಸಿ ಒಂದು ರೇಟಿಗೆ ಹೊಂದಿಸಿ ಹುಡುಗನಿಗೆ ಸ್ಲಿಪರ್ ಕೊಡಿಸಿದರು.

            ಅವರಿಗೆ ಏನನ್ನಿಸಿತೋ… ನನ್ನ ತಮ್ಮ ನಾಗೇಶನಿಗೂ ಒಂದು ಜೊತೆ ಹವಾಯಿ ಚಪ್ಪಲಿ ಕೊಡಿಸಿದರು. ಅಂಗಡಿಯಿಂದ ಹೊರ ಬಂದ ಬಳಿಕ ನಾನು ನಡೆದುಕೊಂಡ ರೀತಿಯನ್ನು ನೆನಪಿಸಿಕೊಂಡರೆ ನನಗೆ ಈಗಲೂ ಸಹಿಸಲಾಗದಷ್ಟು ನಾಚಿಕೆ ಮತ್ತು ಅಸಹ್ಯವುಂಟಾಗುತ್ತದೆ. ತಮ್ಮ ತೊಟ್ಟ ಚಪ್ಪಲಿಗಳನ್ನು ನೋಡಿ ನನ್ನ ಕಾಲುಗಳು ಭಾರವಾದವು ಕಣ್ಣುಗಳಲ್ಲಿ ಕಂಬನಿ ತುಂಬಿ ಬಂತು. ಮುಖ ಊದಿಕೊಂಡಿತು. ಹೆಜ್ಜೆ ಮುಂದಿಡಲಾಗದೆ ತಡವರಿಸುತ್ತಿದ್ದೆ.

            ಇದನ್ನು ಗಮನಿಸಿದ ಅಪ್ಪ ತುಂಬಾ ನೊಂದುಕೊಂಡರು. ನನಗೂ ಒಂದು ಜೊತೆ ಚಪ್ಪಲಿ ಕೊಡಿಸುವ ಆಸೆ ಅವರಿಗೂ ಇತ್ತಾದರೂ ಅಷ್ಟೊತ್ತಿಗಾಗಲೇ ಅವರ ಕಿಸೆ ಖಾಲಿಯಾಗಿತ್ತು. ಅಸಹಾಯಕತೆಯಿಂದ ಅವರು ಚಡಪಡಿಸುತ್ತಿದ್ದರೆ ಅದನ್ನು ಗ್ರಹಿಸಲಾಗದ ದಡ್ಡತನ ನನ್ನದಾಗಿತ್ತು. ಬೇರೆ ದಾರಿ ಕಾಣದೆ ವಿದ್ಯಾರ್ಥಿಯೊಬ್ಬನಿಂದ ಒಂದಿಷ್ಟು ಹಣವನ್ನು ಸಾಲವಾಗಿ ಪಡೆದ ಅಪ್ಪ ನನಗೆ ಚಪ್ಪಲಿ ಕೊಡಿಸಿದ ಬಳಿಕವಷ್ಟೇ ನನ್ನ ಕಾಲುಗಳು ಮುಂದುವರಿದವು.

            ಆದರೆ ಬನವಾಸಿಗೆ ಬಂದ ಮರುದಿನವೇ ಮಧುಕೇಶ್ವರ ದೇವಾಲಯದ ಆವರಣದಲ್ಲಿ ಆಟವಾಡಲು ಹೊರಡುತ್ತ ದೇವಸ್ಥಾನದ ಮೆಟ್ಟಿಲ ಮೇಲೆ ಕಳೆದಿಟ್ಟು ಹೋದ ಇಬ್ಬರ ಚಪ್ಪಲಿಗಳನ್ನು ಯಾರೋ ಅಪಹರಿಸಿ ಬಿಟ್ಟಿದ್ದರು….

            ಅಪ್ಪನ ದೊಡ್ಡತನಕ್ಕೆ ನನ್ನ ಸಣ್ಣತನಕ್ಕೆ ಈ ಘಟನೆ ಉದಾಹರಣೆಯಾಗಿ ನನ್ನನ್ನು ಈಗಲೂ ಕಾಡುತ್ತಿದೆ.

            ಬನವಾಸಿಯ ಬದುಕಿನ ಅವಧಿಯಲ್ಲಿ ಒಂದು ಅಚ್ಚಳಿಯದ ನೆನಪು ಮಳ್ಳು ಸುಕ್ರಣ್ಣನದು. ಸುಕ್ರಣ್ಣ ಮೊದಲಿಂದ ಮಳ್ಳನೇನಲ್ಲ. ಬನವಾಸಿಯ ವಿದ್ಯಾರ್ಥಿ ನಿಲಯದಲ್ಲಿ ಅವನು ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಬಹಳ ದೂರದ ಊರಿನಲ್ಲಿ ನಮಗೆ ಸ್ವಜಾತಿಯ ಬಂಧು ಎಂದರೆ ಈತನೊಬ್ಬನೇ ಮೂಲತಃ ನಮ್ಮ ನೆರೆಯ ಅಂಕೋಲಾ ತಾಲೂಕಿನ ಮೊಗಟಾ ಎಂಬ ಊರಿನವನು. ಮದುವೆಯಾಗಿದ್ದ. ಮಕ್ಕಳಾಗಿರಲಿಲ್ಲ. ಹೆಂಡತಿ ಶಿವಮ್ಮನೊಡನೆ ವಿದ್ಯಾರ್ಥಿ ನಿಲಯದ ಪಕ್ಕದಲ್ಲಿ ಒಂದು ಚಿಕ್ಕ ಬಾಡಿಗೆ ಮನೆಯಲ್ಲಿ ಉಳಿದಕೊಂಡಿದ್ದರು. ಹಬ್ಬ ಹುಣ್ಣಿಮೆಯಂಥ ಅಪರೂಪದ ಸಂದರ್ಭದಲ್ಲಿ ನಮ್ಮ ಮನೆಗೂ ಬಂದು ಹೋಗುತ್ತಿದ್ದರಿಂದ ಸಹಜವಾಗಿಯೇ ನಾವೆಲ್ಲ ಅವರನ್ನು ಹಚ್ಚಿಕೊಂಡಿದ್ದೆವು.

            ನಮಗೆಲ್ಲ ಒಂದು ಹಂತದವರೆಗೆ ಆಪ್ತನಾಗಿಯೇ ಇದ್ದ. ಸುಕ್ರಣ್ಣ ಇದ್ದಕ್ಕಿದ್ದಂತೆ ಕೂಗಾಡುವುದು, ಯಾರ ಯಾರನ್ನೋ ಬಯ್ಯುವುದು, ಹೆಂಡತಿಯೊಡನೆ ಜಗಳವಾಡುತ್ತ ಸಿಕ್ಕ ಸಿಕ್ಕ ವಸ್ತುಗಳಿಂದ ಹೊಡೆಯುವುದು ಮಾಡ ಹತ್ತಿದ. ವಸತಿ ನಿಲಯದಲ್ಲಿ ಆಗ ಏಳನೆಯ ತರಗತಿಯ ವಿದ್ಯಾರ್ಥಿಗಳಲ್ಲಿ ಚಿಗುರು ಮೀಸೆಯ ಹೊಂತಕಾರಿಗಳೂ ಇದ್ದರು. ಅವರಲ್ಲಿ ಯಾರೇ ಆದರೂ ತನ್ನ ಪತ್ನಿಯೆಡೆಗೆ ನೋಡಿದರೆ ಮಾತಾಡಿದರೆ ಅನುಮಾನಗೊಂಡು ಜಗಳ ಕಾಯುತ್ತಿದ್ದನಂತೆ. ಕೆಲವು ಅವಿವಾಹಿತ ಶಿಕ್ಷಕರೂ ಸುಕ್ರಣ್ಣನ ಅನುಮಾನದ ಕಣ್ಣಿಗೆ ಗುರಿಯಾಗಿ ಬೈಸಿಕೊಂಡದ್ದನ್ನೂ, ಅಪ್ಪನೇ ಮುಂದೆ ಹೋಗಿ ಅವನಿಗೆ ಬುದ್ದಿ ಹೇಳಿ ಸಂತೈಸಿದ್ದನ್ನು ಅಪ್ಪ ಮನೆಗೆ ಬಂದಾಗ ಅವ್ವನೊಡನೆ ವಿವರಿಸುವಾಗ ನಾವು ಕೇಳುತ್ತಿದ್ದೆವಾದರೂ ಚಿಕ್ಕವರಾದ ನಮಗೆ ಸಮಸ್ಯೆಯ ಅರಿವಾಗುತ್ತಿರಲಿಲ್ಲ. ಆದರೆ ಮಾತಿನ ಕೊನೆಯಲ್ಲಿ “ಮಳ್ಳ ಸುಕ್ರು … ಜಾತಿ ಮರ್ಯಾದೆನೆಲ್ಲಾ ಕಳೀತಾನೆ…” ಎಂದು ಮುಗಿಸುವುದನ್ನು ಕೇಳುತ್ತಾ ಸುಕ್ರಣ್ಣನಿಗೆ ಮಳ್ಳು ಹಿಡಿದಿದೆ ಎಂದೇ ನಾವು ನಂಬ ತೊಡಗಿದ್ದೆವು

.

            ಸುಕ್ರಣ್ಣನ ಸಂಸಾರದ ನಡುವೆ ಬಿರುಕು ಬೆಳೆಯುತ್ತಾ ಸಾಗಿತು. ಶಿಕ್ಷಕರು, ವಿದ್ಯಾರ್ಥಿಗಳ ಮೇಲೆಲ್ಲಾ ಅನುಮಾನ ಪಡುತ್ತಾ ಶಾಲೆಯ ಆವರಣವನ್ನು ಪ್ರವೇಶಿಸಿ ಅವರನ್ನು ಬಯ್ಯ ತೊಡಗಿದಾಗ ಎಲ್ಲರಿಗೂ ಇವನ ಉಪದ್ರವ ಅಧಿಕವಾಯಿತೆಂದೇ ಅಸಹ್ಯಪಡುತ್ತಿದ್ದರು. ಕೆಲವೊಮ್ಮೆ ಯಾರನ್ನೂ ನೇರವಾಗಿ ಗುರಿಯಾಗಿಸದೇ ಎಲ್ಲರನ್ನೂ ದಿನವಿಡೀ ಬಯ್ಯುತ್ತ ಹುಚ್ಚರಂತೆಯೇ ವರ್ತಿಸತೊಡಗಿದ್ದ. ಕೊನೆ ಕೊನೆಗೆ ಸಾರ್ವಜನಿಕರೂ ಅವನನ್ನು ಮಳ್ಳನೆಂದೇ ಗುರುತಿಸುವ ಹಂತವನ್ನೂ ತಲುಪಿದ.

            ೧೯೬೨-೬೩ ರ ಅವಧಿ ಎಂದು ನೆನಪು. ಎಲ್ಲೆಡೆ ಭಯಂಕರ ಮಳೆ. ವರದಾ ನದಿ ಉಕ್ಕಿ ಹರಿಯುತ್ತಾ ರಥ ಬೀದಿಯವರೆಗೂ ಪ್ರವಾಹ ಹರಿದು ಬಂದಿತ್ತು. ಶಾಲೆಗಳಿಗೆ ರಜೆ ಘೋಷಣೆಯಾಗಿತ್ತು. ಚಿಕ್ಕವರಾದ ನಾವುಗಳೆಲ್ಲ ಮನೆಯಿಂದ ಹೊರಗೆ ಹೋಗಲೂ ಸಾಧ್ಯವಿಲ್ಲದೆ ಗ್ರಹ ಬಂಧನಕ್ಕೊಳಗಾಗಿದ್ದೆವು.

            ಅಂಥ ಭಯಾನಕ ಮಳೆಯ ಒಂದು ರಾತ್ರಿ ಸುಕ್ರಣ್ಣ ಇದ್ದಕ್ಕಿದ್ದಂತೆ ನಾಪತ್ತೆಯಾದ. ನಂತರದ ಎರಡು ದಿನ ಶಾಲಾ ಸಿಬ್ಬಂದಿಗಳೂ, ಊರಿನ ಕೆಲವು ಜನರೂ ಸೇರಿ ಊರೆಲ್ಲಾ ಹುಡುಕಾಡಿದರು. ಎಲ್ಲಿಯೂ ಅವನ ಸುಳಿವು ದೊರೆಯಲಿಲ್ಲ. ಭಯಂಕರವಾದ ಬಿರುಗಾಳಿ ಮಳೆಯ ಒಂದು ರಾತ್ರಿ ಮನುಷ್ಯ ಮಾತ್ರರು ಹೊರಬರಲಾಗದ ಕಗ್ಗತ್ತಲೆಯಲ್ಲಿ ಯಾರೋ “ಬೋಲೋ ಭಾರತ್ ಮಾತಾಕೀ….ಜೈ” ಎಂದು ಕೂಗುತ್ತಾ ಹೋದುದನ್ನು ಕೇಳಿದ್ದೇವೆ ಎಂದು ರಸ್ತೆಯಂಚಿನ ಮನೆಗಳ ಕೆಲವರು ಮಾತಾಡಿಕೊಂಡರು. ಅದು ಸುಕ್ರಣ್ಣನೇ ಇರಬಹುದೆಂದೂ ಬಹುತೇಕ ಜನ ಭಾವಿಸಿದರು. ನಾವು ಹಾಗೆಯೇ ಅನುಮಾನ ಪಟ್ಟುಕೊಂಡೆವು.

            ಮೂರನೆಯ ದಿನ ಶಾಲೆಯ ಶಿಕ್ಷಕರೂ ವಿದ್ಯಾರ್ಥಿ ಗುಂಪಿನೊಡನೆ ಸುಕ್ರಣ್ಣನನ್ನು ಅರಸಲು ಹೋದ ಅಪ್ಪ ನಿರಾಶೆಯಿಂದಲೇ ರಾತ್ರಿ ತಡವಾಗಿ ಮನೆಗೆ ಬಂದರು. ಅಪ್ಪ ಒಳಗೆ ಬಂದದ್ದೇ ನನ್ನ ತಮ್ಮ ನಾಗೇಶ ತುಂಬ ಮುಗ್ಧತೆಯಿಂದ “ಅಪ್ಪ ಸುಕ್ರಣ್ಣ ಸತ್ತೋದ್ನಂತೆ….” ಎಂದು ಹೇಳಿದ. ಅಪ್ಪ ಇದುವರೆಗೆ ತನ್ನ ದುಗುಡವನ್ನು ಹೊಟ್ಟೆಯೊಳಗೇ ತಡೆದಿಟ್ಟುಕೊಂಡಿದ್ದನೆನೋ.. ಒಮ್ಮೆಲೆ ಬಿಕ್ಕಿ ಬಿಕ್ಕಿ ಅಳತೊಡಗಿದ. ಅವ್ವ ಮತ್ತು ನಾವೆಲ್ಲ ಅಪ್ಪನನ್ನು ಸಂತೈಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ.

******************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

8 thoughts on “

  1. ಸರ್, ನಿಮ್ಮ ಬಾಲ್ಯದ ಆ ಕಹಿ ನೆನಪುಗಳನ್ನು ಓದುವಾಗ ತುಂಬಾ ಬೇಸರವಾಯಿತು.ಮಾರ್ಮಿಕ ಘಟನೆಗಳು. ಆತ್ಮ ಕತೆಯು ಇತರ ರೋಚಕ ಸಂಗತಿಗಳಿಂದ ಮುಂದೇನಿದೆಯೆಂದು ಕುತೂಹಲ ಕೆರಳಿಸುತ್ತಿದೆ.ಮುಂದಿನ ಕತೆಗಾಗಿ ನಿರೀಕ್ಷೆ……!

  2. ಸರ್ ನೋವಿನ ಕತೆ ಓದಿ ನೋವುತುಂಬಿತು..ಮಧುಕೇಶ್ವರ ರ ಅಗಲಿಕೆ ಸಾಂತ್ವನ ನೀಡಲಿ. ಸುಕ್ರಜ್ಜನ ಊರು ಮೊಗಟಾ ನನಗೂ ಅಜ್ಜಿಯ ಮನೆ.

  3. ಜೀವತುಂಬಿ ಬಂದ ಬಾಲ್ಯದ ನೆನಪುಗಳು ಮನದುಂಬಿದವು ಧನ್ಯವಾದಗಳು

  4. ನೆನಪಿನಾಳದಿಂದ ಹೊರಬಂದ ಪ್ರತಿಯೊಂದು ಅಂಕಣವೂ ಜೀವಂತಿಕೆ ಪಡೆದುಕೊಳ್ಳುವುದು ಗಮನಾರ್ಹ. ಧನ್ಯವಾದಗಳು ಗುಂದಿಯವರೆ.

Leave a Reply

Back To Top