ಕವಿತೆ
ಹೇಗಾಯಿತು ಹೊಸ ವರುಷ
ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ

ಚುಕ್ಕಿಗಳು ಕರ್ರಗಾದವೆ?
ಹಕ್ಕಿಗಳು ಬೆರಗಾದವೆ?
ಕತ್ತಲೆ ಥಳಥಳ ಹೊಳೆಯಿತೆ?
ಬೆಳಕು ಉಮ್ಮಳದಿ ಅದುರಿತೆ?
ಮೂಡಿತೇಗೆ ಹೊಸ ವರುಷ?
ನೆತ್ತರು ಬಿಳಿಯಾಯಿತೆ?
ಸತ್ತವರೆದ್ದು ಕುಳಿತರೆ?
ಎಲೆ ಉದುರಿ ತಲೆ ಸವರಿತೆ?
ಕೋಗಿಲೆ ನೇಗಿಲು ಹೂಡಿತೆ?
ಬದುಕುಗಳು ಭವಣೆಗೆ ಮಿಕ್ಕವೆ?
ಕೆದಕುಗಳು ಎಣಿಕೆಗೆ ಸಿಕ್ಕವೆ?
ಕಳೆದ ಘಳಿಗೆ ಎದೆ ಹೊಕ್ಕಿತ್ತೆ?
ಜಗದ ನಗು ಮುಗಿಲ ನೆಕ್ಕಿತೆ?
ಮೂಡಿತೇಗೆ ಹೊಸ ವರುಷ?
ಬೈಬಲ್ ಕಥೆ ಹೊನ್ನಾಯಿತೆ?
ಕುರಾನ ನುಡಿ ಭಿನ್ನವಾಯಿತೆ?
ಭಗವದ್ಗೀತೆ ಕಣ್ಣಾಯಿತೆ?
ಮೂಡಿತೇಗೆ ಹೊಸ ವರುಷ?
ಬಡವರ ಕೊರಗು,ಹೂವಾಯಿತೆ?
ಹಸಿದ ಕೂಸು ನಕ್ಕಾಡಿತೆ?
ನದಿಯ ಹರಿವು,ಕುದಿತವಾಯಿತೆ?
ಗಾಳಿಯ ತುದಿ ಕಣ್ಣಿಗೆ ಕಂಡಿತಾ?
ಮೂಡಿತೇಗೆ ಹೊಸ ವರುಷ?
ಜಾತಿಧರ್ಮ,ಪ್ರೇಮ ಕಲಿಸಿದವೆ?
ಉಸಿರು-ಬಸಿರು ಒಲುಮೆಯಾದವೆ?
ಕಾಮಕ್ರೋದ ಭುವಿ ತೊರೆದವೆ?
ದೀನರ ಬಾದೆ ಬದಿ ಸರಿಯಿತೆ?
ಮೂಡಿತೇಗೆ ಹೊಸ ವರುಷ?
ಕ್ಯಾಲೆಂಡರ್ ತಿರುವಿದೆವಷ್ಟೆ
ಬೆಡಗು ಬಿನ್ನಾಣ ತೊರೆದು ಬದುಕಬೇಕಷ್ಟೆ.
*****************************