ಕವಿತೆ
ಮುಖವಾಡದ ಬದುಕು
ರೇಷ್ಮಾ ಕಂದಕೂರು

ಎಲ್ಲೆಲ್ಲೂ ಮುಖವಾಡದ ರಾರಾಜಿಸುವಿಕೆ
ಎತ್ತ ನೋಡಿದರತ್ತ ಆಸೆ ಆಮಿಷ ದ ಸುಳಿ
ಹೊರಬರಲು ಹೆಣಗುವ ಜೇಡನಂತೆ
ಕರುಬುವರೂ ತಟಸ್ಥವಾಗಿಹರು
ನಾನು ಮೊದಲಿನಂತಿಲ್ಲ
ಗೊಂದಲದ ಗೂಡಿನಡಿ ನನ್ನ ಸೂರು
ಅನಿವಾರ್ಯತೆ ಬದುಕಿಗೆ
ಸುಖ ಮಾತ್ರ ಬೇಕೆಂಬ ಅಹವಾಲು
ಹಿಯಾಳಿಸುವ ಕೊಂಕು ನುಡಿ
ಬೆನ್ನಿಗೆ ಇರಿಯಲು ಸರತಿ ಸಿಲು
ತೃಪ್ತಿಯಂತೂ ಹೊಸ್ತಿಲು ಆಚೆ
ಕೃತಕತೆಯ ನಗುಮಾತ್ರ ಎದ್ದು ನಿಂತಿದೆ
ತುಳಿಯುದಕೂ ದುಂಬಾಲು ಬಿದ್ದಿಹರು
ನೇಸರು ಉಗುಳುವ ಒಮ್ಮೊಮ್ಮೆ ಬೆಂಕಿಯುಂಡೆ
ತಣ್ಣನೆಯ ಗಾಳಿಗೂ ಸಂಚಕಾರ ಹೂಡಿ
ಕಟು ಮನದ ಇರಿತದಿ ಬಳಲಿ ಬೆಂಡಾಗಿಹೆ
ನಾನಷ್ಟೇ ಎಂಬ ಗಿರಿಗಿಟ್ಟಲೆ ತಿರುಗಿ
ಬಂದ ಕೆಲಸ ಮರೆತ ಹಾಗಿದೆ
ಸವೆಯುವ ದಿನಗಳ ಆಸ್ವಾದನೆಯ
ಹೊರಡುವ ಗಳಿಗೆಯಲಿ ಅಲ್ಲೋಲ ಕಲ್ಲೋಲ
ನಗುವಿನ ಅಲೆಗೂ ಉಗ್ರ ಪ್ರಲಾಪ
ಮಗುವಿನ ಮನಸು ವಿಶ ಪ್ರಾಶಾನ
ಸೋಗಿಗೆ ಮಹತ್ವ ನೀಡಿ
ಆಂತರ್ಯದ ಸಂತೋಷ ಮರೆಮಾಚಿದೆ
ಮುಖವಾಡದ ಬದುಕಿದು
ಮೂರ್ಖರ ಮಾತಿಗೆ ಮಣೆ ಹಾಕುತ
ಧೂರ್ತರ ಹಿಡಿತದಿ ಸಾಗಿ
ಸುಮೂಹೂರ್ತವು ಕಾಣದಾಗಿದೆ.
ಸಾವಿರಾರು ಗಾಯಗಳು ಎದೆಯ ಗೂಡಿನಡಿ
ಕುಡಿ ನೋಟದಲಿ ಬಾಹ್ಯಾಡಂಬರ
ಮುಡಿಗೆ ಮಲ್ಲಿಗೆ ಹಾರ
ಮಡಿಲಲಿ ಹಗೆಯ ಬುತ್ತಿಯ ಹೊತ್ತಿದೆ.
***************************************